Thursday, April 10, 2014

Dead batteries are DANGEROUS




  ತ್ಯಾಜ್ಯ ಬ್ಯಾಟರಿ: ಆರೋಗ್ಯಕ್ಕೆ ಅಪಾಯಕಾರಿ!

ನಾವೆಲ್ಲರೂ ಪ್ರತಿನಿತ್ಯ ಉಪಯೋಗಿಸುವ ಅನೇಕ ಉಪಕರಣಗಳಲ್ಲಿ ಬಳಸುವ ಹಾಗೂ ಬಳಿಕ ನಿರುಪಯುಕ್ತವೆನಿಸಿದಾಗ ಎನಿಸಿದಾಗ ಎಲ್ಲೆಂದರಲ್ಲಿ ಎಸೆಯುವ "ಬ್ಯಾಟರಿ" ಗಳು, ನಮ್ಮ ನಿಮ್ಮೆಲ್ಲರ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತವೆ ಎನ್ನುವ ವಿಚಾರ ನಿಮಗೂ ತಿಳಿದಿರಲಾರದು. ತ್ಯಾಜ್ಯ ರೂಪದಲ್ಲಿ ಎಸೆದ ಬ್ಯಾಟರಿಗಳು ನಮ್ಮ ಪರಿಸರಕ್ಕೆ ಹಾನಿಕರ ಎನಿಸುವುದರೊಂದಿಗೆ, ಮನುಷ್ಯನ ಆರೋಗ್ಯಕ್ಕೆ ಮಾರಕವೆನಿಸುವ ಸಾಧ್ಯತೆಗಳೂ ಇವೆ. 

ಸರ್ವಾಂತರ್ಯಾಮಿ 

ನಾವು ಬಳಸುವ ಟಾರ್ಚ್ ಲೈಟ್ ನಿಂದ ಆರಂಭಿಸಿ, ಟ್ರಾನ್ಸಿಸ್ಟರ್, ರೇಡಿಯೋ,ಟೇಪ್ ರೆಕಾರ್ಡರ್, ಸೆಲ್ ಫೋನ್, ಕ್ಯಾಮರ,ಗಡಿಯಾರ, ವಿದ್ಯುತ್ ಚಾಲಿತ ಉಪಕರಣಗಳ ರಿಮೋಟ್ ಇತ್ಯಾದಿ ಹತ್ತು ಹಲವು ಉಪಕರಣಗಳಲ್ಲಿ ವಿವಿಧ ರೀತಿಯ ಹಾಗೂ ವಿವಿಧ ಗಾತ್ರಗಳ ಬ್ಯಾಟರಿಗಳನ್ನು ಬಳಸಲಾಗುತ್ತದೆ. ಇಂತಹ ಶುಷ್ಕ (ಡ್ರೈ ಸೆಲ್) ಬ್ಯಾಟರಿಗಳಲ್ಲಿ ಒಂದುಬಾರಿ ಬಳಸಿ ಎಸೆಯುವ ಮತ್ತು ರಿ ಚಾರ್ಜ್ ಮಾಡಿ ಸುದೀರ್ಘಕಾಲ ಬಳಸಬಹುದಾದ ಎನ್ನುವ ಎರಡು ವಿಧದ ಬ್ಯಾಟರಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಒಂದುಬಾರಿ ಬಳಸಿ ಎಸೆಯುವ ಬ್ಯಾಟರಿಗಳನ್ನು ನೀವು ಉಪಯೋಗಿಸಲು ಆರಂಭಿಸಿದಂತೆಯೇ, ಇವುಗಳ "ಶಕ್ತಿ" ಕುಂದುತ್ತಾ ಹೋಗಿ, ಅಂತಿಮವಾಗಿ ಇವು ಸಂಪೂರ್ಣವಾಗಿ ನಿಷ್ಕ್ರಿಯವಾಗುತ್ತವೆ. ಆದರೆ ರಿ ಚಾರ್ಜ್ ಮಾಡಬಹುದಾದ ಬ್ಯಾಟರಿಗಳನ್ನು ಕ್ರಮಬದ್ಧವಾಗಿ ಉಪಯೋಗಿಸಿದಲ್ಲಿ, ಇವು ಸುದೀರ್ಘಕಾಲ ಬಾಳ್ವಿಕೆ ಬರುತ್ತವೆ. ಆದರೂ ನಿರ್ದಿಷ್ಟ ಅವಧಿಯ ಬಳಿಕ ಹಾಗೂ ನೀವು ಉಪಯೋಗಿಸುವ ವಿಧಾನದ ಪರಿಣಾಮವಾಗಿ, ಇವುಗಳು ನಿಷ್ಕ್ರಿಯಗೊಳ್ಳುತ್ತವೆ. ಈ ರೀತಿಯಲ್ಲಿ ಸಂಪೂರ್ಣವಾಗಿ ನಿಷ್ಕ್ರಿಯಗೊಂಡ ಹಾಗೂ ನಿರುಪಯುಕ್ತವೆನಿಸುವ ಬ್ಯಾಟರಿಗಳನ್ನು ಜನಸಾಮಾನ್ಯರು ಇತರ ತ್ಯಾಜ್ಯಗಳಂತೆಯೇ, ಎಲ್ಲೆಂದರಲ್ಲಿ ಎಸೆದುಬಿಡುತ್ತಾರೆ. 

ಈಗಾಗಲೇ ಸಾಕಷ್ಟು ಪ್ರದೂಷಿತಗೊಂಡಿರುವ ನಮ್ಮ ಪರಿಸರವನ್ನು ಇನ್ನಷ್ಟು ಕಲುಷಿತಗೊಳಿಸುವ ಮತ್ತು ನಮ್ಮ ಆರೋಗ್ಯಕ್ಕೂ ಅಪಾಯಕರವೆನಿಸುವ ತ್ಯಾಜ್ಯ ಬ್ಯಾಟರಿಗಳನ್ನು, ಸುರಕ್ಷಿತ ಹಾಗೂ ಪರಿಸರ ಸ್ನೇಹಿ ವಿಧಾನದಿಂದ ವಿಲೇವಾರಿ ಮಾಡುವ ಬಗ್ಗೆ ಜಗತ್ತಿನ ಬಹುತೇಕ ರಾಷ್ಟ್ರಗಳ " ತ್ಯಾಜ್ಯ ವಿಲೇವಾರಿ ಸಂಸ್ಥೆ" ಗಳು ತಲೆಕೆಡಿಸಿಕೊಳ್ಳುತ್ತಿವೆ.

ವಿಶ್ವದ ವಿವಿಧ ರಾಷ್ಟ್ರಗಳಲ್ಲಿನ ಅಸಂಖ್ಯ ನಗರ- ಮಹಾನಗರಗಳಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿನ " ಲ್ಯಾಂಡ್ ಫಿಲ್ ಸೈಟ್" ಗಳಲ್ಲಿ, ದಿನನಿತ್ಯ ಲಕ್ಷಾಂತರ ನಿರುಪಯುಕ್ತ ಬ್ಯಾಟರಿಗಳ "ಅಂತಿಮ ಯಾತ್ರೆ" ಕೊನೆಗೊಳ್ಳುತ್ತದೆ. ಆದರೆ ಈ ವ್ಯವಸ್ಥೆ ಇಲ್ಲದ ಊರುಗಳಲ್ಲಿ ಮತ್ತು ತ್ಯಾಜ್ಯ ಬ್ಯಾಟರಿಗಳ ದುಷ್ಪರಿಣಾಮಗಳ ಅರಿವಿಲ್ಲದ ಜನಸಾಮಾನ್ಯರು, ನಿರುಪಯುಕ್ತ ಬ್ಯಾಟರಿಗಳನ್ನು ಕಂಡಲ್ಲಿ ಎಸೆಯುವುದು ಪರಿಪಾಠವಾಗಿದೆ. ಈ ರೀತಿಯಲ್ಲಿ ಎಸೆಯಲ್ಪಟ್ಟ ಬ್ಯಾಟರಿಗಳ ಹೊರಕವಚವು ಕಾಲಕ್ರಮೇಣ ಶಿಥಿಲಗೊಳ್ಳುತ್ತದೆ. ತದನಂತರ ಇವುಗಳಿಂದ ಹೊರಸೂಸುವ ಸೀಸ, ಕ್ಯಾಡ್ಮಿಯಂ ಮತ್ತು ಪಾದರಸಗಳ ಅಂಶಗಳು ಅತ್ಯಂತ ಅಪಾಯಕಾರಿ ಹಾಗೂ ವಿಷಕಾರಕಗಳಾಗಿದ್ದು, ಮಣ್ಣು, ಭೂಮಿ ಮತ್ತು ಅಂತರ್ಜಲಗಳನ್ನು ಕಲುಷಿತಗೊಳಿಸುತ್ತದೆ. ತತ್ಪರಿಣಾಮವಾಗಿ ಮನುಷ್ಯನ ಶರೀರದ ಪ್ರಮುಖ ಅಂಗಾಂಗಗಳಿಗೆ ಮತ್ತು ತಾಯಿಯ ಗರ್ಭದಲ್ಲಿರುವ ಭ್ರೂಣಕ್ಕೂ ಹಾನಿಕರವೆನಿಸುತ್ತದೆ. 

ಈ ಸಮಸ್ಯೆಗೆ ಪರಿಹಾರವೇನು?

ನಮ್ಮ ದೇಶದಲ್ಲಿ ಬಳಸಿ ಎಸೆಯುವ ಬ್ಯಾಟರಿಗಳಿಂದ ಸಂಭವಿಸಬಲ್ಲ ಪರಿಸರ ಪ್ರದೂಷಣೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನ್ಯ ದೇಶಗಳಂತೆ ಕಟ್ಟುನಿಟ್ಟಾದ ನಿಯಮಗಳನ್ನು ರೂಪಿಸಿಲ್ಲ. ಉದಾಹರಣೆಗೆ ಅಮೇರಿಕದಲ್ಲಿ " ದಿ ಯುನೈಟೆಡ್ ಸ್ಟೇಟ್ಸ್ ಎನ್ವಯರಾನ್ಮೆಂಟ್ ಪ್ರೊಟೆಕ್ಷನ್ ಏಜೆನ್ಸಿ" (ಇ. ಪಿ. ಎ) ಸಂಸ್ಥೆಯು " ಪಾದರಸವಿರುವ ರಿ ಚಾರ್ಜ್ ಮಾಡಬಹುದಾದ ಬ್ಯಾಟರಿಗಳ ನಿರ್ವಹಣಾ ಅಧಿನಿಯಮ" ವನ್ನು ಜಾರಿಗೆ ತಂದಿದೆ. ಈ ನಿಯಮದಂತೆ ನಿಕ್ಕೆಲ್- ಕ್ಯಾಡ್ಮಿಯಂ ಮತ್ತು ಇತರ ರಿ ಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಪುನರ್ಬಳಕೆಗೆ ಅವಕಾಶ ಮಾಡಿಕೊಡುವ ಮೂಲಕ, ಬ್ಯಾಟರಿಗಳಲ್ಲಿ ಪಾದರಸವನ್ನು ಬಳಸುವುದನ್ನು ಕ್ರಮೇಣ ಕೈಬಿಡಲಿದೆ. ಏಕೆಂದರೆ ವರ್ಷಂಪ್ರತಿ ಅಮೇರಿಕದ ಪ್ರಜೆಗಳು ಖರೀದಿಸಿ ಬಳಸುತ್ತಿರುವ ಸುಮಾರು ೩೫೦ ಮಿಲಿಯನ್ ರಿ ಚಾರ್ಜೇಬಲ್ ಬ್ಯಾಟರಿಗಳು ನಿರುಪಯುಕ್ತ ಎನಿಸಿದ ಬಳಿಕ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದೇ ಒಂದು ಬೃಹತ್ ಸಮಸ್ಯೆಯಾಗಿ ಪರಿಣಮಿಸಿದೆ. 

ಈ ಸಮಸ್ಯೆಯನ್ನು ನಿಯಂತ್ರಿಸಲು ಹಲವಾರು ದೇಶಗಳಲ್ಲಿ ನಿರುಪಯುಕ್ತ ಬ್ಯಾಟರಿಗಳನ್ನು ಅವುಗಳ ಮಾರಾಟಗಾರರ ಮೂಲಕವೇ ಮತ್ತೆ ಸಂಗ್ರಹಿಸುವ ವ್ಯವಸ್ಥೆ ಜಾರಿಯಲ್ಲಿದೆ. ಕೆಲ ದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳೇ ತ್ಯಾಜ್ಯ ಬ್ಯಾಟರಿಗಳನ್ನು ಸಂಗ್ರಹಿಸುವ ಕೇಂದ್ರಗಳನ್ನು ಪ್ರಾರಂಭಿಸಿರುವುದರಿಂದ, ತ್ಯಾಜ್ಯ ಬ್ಯಾಟರಿಗಳು ಚರಂಡಿ, ಕಸದ ರಾಶಿಗಳು ಹಾಗೂ ಮನೆಯ ತ್ಯಾಜ್ಯಗಳೊಂದಿಗೆ ಕಂಡಲ್ಲಿ ವಿಲೇವಾರಿಯಾಗುವುದನ್ನು ತಡೆಗಟ್ಟಲಾಗುತ್ತಿದೆ. 

ಅಮೆರಿಕದಂತೆಯೇ ಜರ್ಮನಿಯಲ್ಲೂ ೧೯೯೮ ರಲ್ಲಿ ಜಾರಿಗೊಂಡಿರುವ ಕಾನೂನಿನಂತೆ ಬ್ಯಾಟರಿಗಳ ತಯಾರಕರೇ ಇವುಗಳನ್ನು ಮರಳಿ ಸಂಗ್ರಹಿಸಿ, ನಿರ್ದಿಷ್ಟ ರೀತಿಯಲ್ಲಿ ಸುರಕ್ಷಿತವಾಗಿ ವಿಲೇವಾರಿ ಮಾಡಬೇಕಾದ ಹೊಣೆಗಾರಿಕೆಯನ್ನು ನಿರ್ವಹಿಸಬೇಕಾಗಿದೆ. ಈ ರೀತಿಯಲ್ಲಿ ಸುಮಾರು ೯೦೦ ಮಿಲಿಯನ್ ಬ್ಯಾಟರಿಗಳನ್ನು ಮರಳಿ  ಪಡೆದು, ವೈಜ್ಞಾನಿಕ ರೀತಿಯಲ್ಲಿ ಪುನರ್ಬಳಕೆ ಮಾಡುವ ಯೋಜನೆಯನ್ನು ಜರ್ಮನಿಯ ಸರ್ಕಾರ ಜಾರಿಗೊಳಿಸಿದೆ. 

ಆದರೆ ಭಾರತದಲ್ಲಿ ಇಂತಹ ವ್ಯವಸ್ಥೆ ಇಂದಿಗೂ ಜಾರಿಗೆ ಬಂದಿರದೇ ಇರುವ ಕಾರಣದಿಂದಾಗಿ, ಜನಸಾಮಾನ್ಯರು ನಿರುಪಯುಕ್ತ ಬ್ಯಾಟರಿಗಳನ್ನು ಅನ್ಯ ತ್ಯಾಜ್ಯಗಳೊಂದಿಗೆ ಕಸದ ರಾಶಿಯಲ್ಲಿ ಎಸೆಯುವುದು ಅವ್ಯಾಹತವಾಗಿ ನಡೆಯುತ್ತಿದೆ. ತನ್ಮೂಲಕ ತಮ್ಮದೇ ಆರೋಗ್ಯಕ್ಕೆ ಅಪಾಯವನ್ನು ಆಹ್ವಾನಿಸಿಕೊಳ್ಳುವುದು ಭಾರತೀಯರ ವಿಶೇಷತೆಗಳಲ್ಲಿ ಒಂದಾಗಿದೆ!. 

ಕೊನೆಯ ಮಾತು 

ಭಾರತ ದೇಶದಲ್ಲಿ ಬ್ಯಾಟರಿಗಳನ್ನು ಮರಳಿ ಪಡೆದು ಪುನರ್ಬಳಕೆ ಮಾಡುವ ಅಥವಾ ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡುವ ವ್ಯವಸ್ಥೆ ಆರಂಭಗೊಳ್ಳುವ ತನಕ, ನೀವು ಬಳಸಿ ನಿರುಪಯುಕ್ತವೆನಿಸಿದ ಬ್ಯಾಟರಿಗಳನ್ನು ಪೆಟ್ಟಿಗೆಯೊಂದರಲ್ಲಿ ಸಂಗ್ರಹಿಸಿ, ಜೋಪಾನವಾಗಿ ತೆಗೆದಿರಿಸಿದಲ್ಲಿ ಇವುಗಳಿಂದ ಸಂಭವಿಸಬಹುದಾದ ಅಪಾಯಕಾರಿ ಮತ್ತು ಅನಾರೋಗ್ಯಕರ ದುಷ್ಪರಿಣಾಮಗಳನ್ನು ನಿಯಂತ್ರಿಸುವುದು ಸುಲಭಸಾಧ್ಯ ಎನಿಸೀತು. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೭-೦೪- ೨೦೦೮ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ. 



No comments:

Post a Comment