Wednesday, April 9, 2014

High blood pressure




 ಅಧಿಕ ರಕ್ತದ ಒತ್ತಡ: ನಿರ್ಲಕ್ಷ್ಯ ಬೇಡ!
 ಬಹುತೇಕ ಜನರಲ್ಲಿ ಗುಪ್ತಗಾಮಿನಿಯಂತಿದ್ದು ತನ್ನ ಇರುವಿಕೆಯ ಬಗ್ಗೆ ಸುಳಿವನ್ನೇ ನೀಡದಿರುವ ಕಾರಣದಿಂದಾಗಿ, ಅಧಿಕ ರಕ್ತದ ಒತ್ತಡವು ಪತ್ತೆಯಾಗಿರುವುದೇ ಇಲ್ಲ. ತತ್ಸಂಬಂಧಿತ ಸಮಸ್ಯೆಗಳು ತಲೆದೋರಿದಾಗ ಅಥವಾ ಇತರ ಸಮಸ್ಯೆಗಳಿಗಾಗಿ ವೈದ್ಯರು ನಿಮ್ಮನ್ನು ತಪಾಸಣೆ ಮಾಡಿದಾಗ ಪತ್ತೆಯಾಗುವ ಈ ವ್ಯಾಧಿಯನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಇದುವರೆಗೆ ಕಂಡುಹಿಡಿದಿಲ್ಲ. 

ತಾರಕ್ಕನ ತಲೆನೋವು 

ಬೀಡಿ  ಕಾರ್ಮಿಕಳಾಗಿದ್ದ ತಾರಕ್ಕನು ಪ್ರತಿಬಾರಿ ತನ್ನ ಮಕ್ಕಳ ಚಿಕಿತ್ಸೆಗಾಗಿ ವೈದ್ಯರಲ್ಲಿ ಹೋದಾಗ ಒಂದಿಷ್ಟು ತಲೆನೋವಿನ ಮಾತ್ರೆಗಳನ್ನು ಕೇಳಿ ಪಡೆದುಕೊಳ್ಳುವುದು ವಾಡಿಕೆಯಾಗಿತ್ತು. ಸುಮಾರು ಎರಡು ವರ್ಷಗಳ ಕಾಲ ಗುಳಿಗೆಗಳನ್ನು ನುಂಗಿದರೂ, ತನ್ನ ತಲೆನೋವು ವಾಸಿಯಾಗದೇ ಇದ್ದ ಕಾರಣದಿಂದಾಗಿ ಅದೊಂದು ದಿನ ಆಕೆಯು ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಳು. ತಾರಕ್ಕ ತಲೆನೋವಿನ ಮಾತ್ರೆಗಳನ್ನು ಕೇಳಿ ಪಡೆಯುತ್ತಿದ್ದಾಳೆ ವಿನಃ, ವೈದ್ಯರ ಬಳಿ ತನ್ನ ಸಮಸ್ಯೆಯ ಬಗ್ಗೆ ಅಥವಾ ಇದರ ಚಿಕಿತ್ಸೆಯ ಬಗ್ಗೆ ಯಾವುದೇ ಸಂದರ್ಭದಲ್ಲೂ ಹೇಳಿಕೊಂದಿರಲೇ ಇಲ್ಲ. ಅಂತೆಯೇ ತನ್ನನ್ನು ಪರೀಕ್ಷಿಸಿ ಔಷದಗಳನ್ನು ನೀಡುವಂತೆ ಹೇಳಿರಲಿಲ್ಲ.

ಆದರೆ ಇದೀಗ ಮೊದಲ ಬಾರಿಗೆ ಆಕೆಯ ದೂರನ್ನು ಆಲಿಸಿದ ವೈದ್ಯರು, ಆಕೆಯನ್ನು ಕೂಲಂಕುಶವಾಗಿ ಪರೀಕ್ಷಿಸಿದಾಗ, ಆಕೆಗೆ ಅಧಿಕ ರಕ್ತದ ಒತ್ತಡವಿರುವುದು ಪತ್ತೆಯಾಗಿತ್ತು. ವೈದ್ಯರ ಸಲಹೆಯಂತೆ ಔಷದಗಳನ್ನು ಸೇವಿಸಲು ಆರಂಭಿಸಿದೊಡನೆ ಆಕೆಯ ತಲೆನೋವು ಮಾಯವಾಗಿತ್ತು. ವೈದ್ಯರ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೆ  ಪರಿಪಾಲಿಸುತ್ತಿದ್ದ ಆಕೆಯ ಆರೋಗ್ಯವೂ ಇದೀಗ ಸುಧಾರಿಸಿತ್ತು. 

ಈ ಸಂದರ್ಭದಲ್ಲಿ ಬಿ.ಪಿ ಯ ಮಾತ್ರೆಗಳನ್ನು ದಿನನಿತ್ಯ ಸೇವಿಸುವುದರಿಂದ ಪಕ್ಷವಾತ ಬಾಧಿಸುವ ಸಾಧ್ಯತೆಗಳಿವೆ ಎಂದು ಪರಿಚಿತರಿಂದ ಕೇಳಿದ ತಾರಕ್ಕನಿಗೆ ಗಾಬರಿಯಾಗಿತ್ತು. ಮರುದಿನದಿಂದಲೇ ಬಿ.ಪಿ ಯ ಮಾತ್ರೆಗಳ ಸೇವನೆಯನ್ನು ನಿಲ್ಲಿಸಿದ ತಾರಕ್ಕನ ತಲೆನೋವು, "ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ" ಎನ್ನುವಂತೆ ಮತ್ತೆ ಮರುಕಳಿಸಿತ್ತು. ಮರುದಿನ ವೈದ್ಯರಲ್ಲಿ ಧಾವಿಸಿದ ತಾರಕ್ಕನಿಗೆ, ಬಿ.ಪಿ ಯಾ ಮಾತ್ರೆಗಳನ್ನು ಸೇವಿಸದೇ ಇದ್ದಲ್ಲಿ ಪಕ್ಷವಾತ ಬಾಧಿಸುವ ಸಾಧ್ಯತೆಗಳು ಹೆಚ್ಚುತ್ತವೆ ಎಂದು ಮನವರಿಕೆ ಮಾಡುವಷ್ಟರಲ್ಲಿ ವೈದ್ಯರ ರಕ್ತದ ಒತ್ತಡವು ಒಂದಿಷ್ಟು ಹೆಚ್ಚಾಗಿತ್ತು!. 

ರಕ್ತದ ಒತ್ತಡ ಎಂದರೇನು?

ಆರೋಗ್ಯವಂತ ವ್ಯಕ್ತಿಯ ರಕ್ತದ ಒತ್ತಡವು ಸಾಮಾನ್ಯವಾಗಿ ತಾರುಣ್ಯದಲ್ಲಿ ೧೨೦/೮೦ ಇರುವುದು. ಇದರಲ್ಲಿ ೧೨೦ ಸಂಖ್ಯೆಯು ಸಿಸ್ಟಾಲಿಕ್ ಹಾಗೂ ೮೦ ಸಂಖ್ಯೆಯು ಡಯಾಸ್ಟಾಲಿಕ್ ಒತ್ತಡವಾಗಿರುತ್ತದೆ. ಅರ್ಥಾತ್ ನಿಮ್ಮ ಹೃದಯವು ಶರೀರಕ್ಕೆ ರಕ್ತವನ್ನು ಪೂರೈಸುವ ಸಂದರ್ಭದಲ್ಲಿ ಸಂಕುಚಿತಗೊಳ್ಳುವ ಸ್ಥಿತಿಯಲ್ಲಿನ ಒತ್ತಡವನ್ನು ಸಿಸ್ಟಾಲಿಕ್ ಒತ್ತಡ. ೮೦ ಎಂದು ನಮೂದಿಸಿದ ಸಂಖ್ಯೆಯು ಎರಡು ಬಡಿತಗಳ ನಡುವೆ ಹೃದಯವು ವಿರಮಿಸುತ್ತಿರುವ ಸ್ಥಿತಿಯಲ್ಲಿನ ಒತ್ತಡವಾಗಿದೆ. ಮನುಷ್ಯನಿಗೆ ವಯಸ್ಸಾದಂತೆಯೇ ರಕ್ತದ ಒತ್ತಡವೂ ಹೆಚ್ಚುತ್ತಾ ಹೋಗುವ ಸಾಧ್ಯತೆಗಳಿವೆ.

ನಿಮ್ಮ ರಕ್ತದ ಒತ್ತಡವನ್ನು ಪರೀಕ್ಷಿಸುವ ಕನಿಷ್ಠ ೩೦ ನಿಮಿಷಗಳ ಮೊದಲು ಧೂಮಪಾನ, ಕೆಲವೊಂದು ಔಷದಗಳು ಹಾಗೂ ಕಾಫಿಯಂತಹ ಉತ್ತೇಜಕ ಪೇಯಗಳನ್ನು ಸೇವಿಸಿರಬಾರದು. ಜೊತೆಗೆ ವೈದ್ಯರು ನಿಮ್ಮನ್ನು ತಪಾಸಣೆ ಮಾಡುವ ಮೊದಲು ಕನಿಷ್ಠ ೧೦ ನಿಮಿಷಗಳ ಕಾಲ ವಿರಮಿಸುವುದು ಅಪೇಕ್ಷಣೀಯ. 

ಸಾಮಾನ್ಯವಾಗಿ ಸಿಟ್ಟಿಗೆದ್ದಾಗ, ಹೆದರಿದಾಗ,ಮಾನಸಿಕ ಒತ್ತಡ ಹೆಚ್ಚಿದಾಗ,ರತಿಕ್ರೀಡೆಯ ಉತ್ತುಂಗ ಸ್ಥಿತಿಯಲ್ಲಿ,ಹವಾಮಾನದಲ್ಲಿ ತೀವ್ರ ಏರುಪೇರುಗಳು ಸಂಭವಿಸಿದಾಗ ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಂದರ್ಭದಲ್ಲಿ ೨೦ ರಿಂದ ೩೦ ವರುಷದ ಹರೆಯದವರಲ್ಲೂ, ರಕ್ತದ ಒತ್ತಡವು ೨೩೦/ ೧೩೦ ತಲುಪಿದ ದಾಖಲೆಗಳಿವೆ. ಅಂತೆಯೇ ಗಾಢ ನಿದ್ರೆಯಲ್ಲಿರುವಾಗ ೯೦/೫೦ ಕ್ಕೆ ಇಳಿದ ದಾಖಲೆಗಳೂ ಇವೆ. 

ಅಧಿಕ ರಕ್ತದ ಒತ್ತಡ 

ಕನಿಷ್ಠ ಒಂದು ವಾರದ ಅಂತರದಲ್ಲಿ ಮೂರು ಬಾರಿ ಪರೀಕ್ಷಿಸಿದಾಗ ನಿಮ್ಮ ರಕ್ತದ ಒತ್ತಡವು ೧೪೦/೯೦ ಕ್ಕೂ ಹೆಚ್ಚಿದ್ದಲ್ಲಿ ನಿಮಗೆ ಅಧಿಕ ರಕ್ತದ ಒತ್ತಡವಿದೆ ಎಂದು ತಿಳಿಯಿರಿ. ವೈದ್ಯಕೀಯ ತಜ್ಞರ ಅಭಿಪ್ರಾಯದಂತೆ ೧೮ ಮತ್ತು ಅದಕ್ಕೂ ಅಧಿಕ ವಯಸ್ಸಾದವರ ರಕ್ತದ ಒತ್ತಡವು ೧೨೦/೮೦ ಇರುವುದು ಹಿತಕರ. ಪ್ರಸ್ತುತ ೧೩೦/ ೮೦ ರಿಂದ ೧೩೯/ ೮೯ ವರೆಗಿನ ಸ್ಥಿತಿಯನ್ನು ಅಧಿಕ ರಕ್ತದ ಒತ್ತಡದ ಪೂರ್ವಸ್ಥಿತಿ ಎಂದು ಪರಿಗಣಿಸುತ್ತಾರೆ. ೧೪೦/೯೦ ರಿಂದ ೧೫೯/೯೯ ನ್ನು ಪ್ರಾಥಮಿಕ ಹಂತವೆಂದೂ, ೧೬೦/೧೦೦ ಕ್ಕೂ ಅಧಿಕವಿರುವ ಸ್ಥಿತಿಯನ್ನು ದ್ವಿತೀಯ ಹಂತವೆಂದು ವಿಂಗಡಿಸಿದ್ದಾರೆ. 

ಜಗತ್ತಿನ ಒಂದು ಶತಕೋಟಿಗೂ ಅಧಿಕಜನರನ್ನು ಬಾಧಿಸುತ್ತಿರುವ ಈ ವ್ಯಾಧಿಯು, ಅಮೇರಿಕದಂತಹ ಅಭಿವೃದ್ಧಿ ಹೊಂದಿರುವ ದೇಶದ ೫೦ ಮಿಲಿಯನ್ ಜನರನ್ನು ಬಾಧಿಸುತ್ತಿರುವುದು ವಾಸ್ತವ. ನಿಮ್ಮ ವಯಸ್ಸು ಹೆಚ್ಚಿದಂತೆಯೇ ಅಧಿಕ ರಕ್ತದ ಒತ್ತಡವು ನಿಮ್ಮನ್ನು ಬಾಧಿಸುವ ಸಾಧ್ಯತೆಗಳು ಹೆಚ್ಚುತ್ತಲೇ ಹೋಗುತ್ತವೆ. ೫೫ ವರ್ಷ ವಯಸ್ಸಿನ ಹಾಗೂ ರಕ್ತದ ಒತ್ತಡವು ಸಾಮಾನ್ಯ ಸ್ಥಿತಿಯಲ್ಲಿ ಇರುವ ವ್ಯಕ್ತಿಗೂ, ಆತನ ಜೀವಿತಾವಧಿಯಲ್ಲಿ ಅಧಿಕ ರಕ್ತದ ಒತ್ತಡವು ಬಾಧಿಸುವ ಸಾಧ್ಯತೆಗಳು ಶೇ.೯೦ ರಷ್ಟಿವೆ!. 

ಅಧಿಕರಕ್ತದ ಒತ್ತಡ ಹಾಗೂ ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳ ನಡುವೆ ಹಾಗೂ ಇದರಿಂದ ಉದ್ಭವಿಸಬಲ್ಲ ಅಪಾಯಗಳ  ನಡುವೆ ಅವಿನಾಭಾವ ಸಂಬಂಧವಿದೆ.ಒಬ್ಬ ವ್ಯಕ್ತಿಯ ರಕ್ತದ ಒತ್ತಡ ಹೆಚ್ಚಿದ್ದಷ್ಟು ಆತನನ್ನು ಬಾಧಿಸಬಲ್ಲ ಹೃದಯಾಘಾತ, ಹೃದಯ ವೈಫಲ್ಯ, ಪಕ್ಷವಾತ ಮತ್ತು ಮೂತ್ರಪಿಂಡಗಳ ಕಾಯಿಲೆಗಳು ಉದ್ಭವಿಸುವ- ಬಾಧಿಸುವ ಸಾಧ್ಯತೆಗಳೂ ಹೆಚ್ಚುತ್ತಾ ಹೋಗುತ್ತವೆ. ೪೦ ರಿಂದ ೭೦ ವರ್ಷದವರಿಗೆ ಸಿಸ್ಟಾಲಿಕ್ ಒತ್ತಡದಲ್ಲಿ ೨೦ ಹಾಗೂ ಡಯಾಸ್ಟಾಲಿಕ್ ಒತ್ತಡದಲ್ಲಿ ೧೦ ಅಂಕೆಗಳು ಏರಿದಂತೆಯೇ, ಮೇಲೆ ನಮೂದಿಸಿದ ಕಾಯಿಲೆಗಳ ಅಪಾಯವು ದ್ವಿಗುಣಿಸುತ್ತಾ ಹೋಗುತ್ತದೆ. 

ಆದರೆ ಸೂಕ್ತ ಸಮಯದಲ್ಲಿ ಇದನ್ನು ಪತ್ತೆಹಚ್ಚಿ ಸಮರ್ಪಕ ಚಿಕಿತ್ಸೆ ಪಡೆದುಕೊಳ್ಳುವುದರೊಂದಿಗೆ ಜೀವನಶೈಲಿಯಲ್ಲಿ ಅವಶ್ಯಕ ಬದಲಾವಣೆಗಳನ್ನು ಮಾಡಿಕೊಂಡಲ್ಲಿ, ಇಂತಹ ರೋಗಿಗಳಲ್ಲಿ ಪಕ್ಷವಾತ ಸಂಭವಿಸುವ ಸಾಧ್ಯತೆ ಶೇ.೩೦ ರಿಂದ ೪೦, ಹೃದಯಾಘಾತ- ಶೇ. ೨೦ ರಿಂದ ೨೫ ಮತ್ತು ಹೃದಯ ವೈಫಲ್ಯ- ಶೇ. ೫೦ ರಷ್ಟು ಕಡಿಮೆಯಾಗುವುದು ಅ ಧ್ಯಯನಗಳಿಂದ ತಿಳಿದುಬಂದಿದೆ. 

ಅಧಿಕ ರಕ್ತದ ಒತ್ತಡವಿರುವ ಶೇ. ೩೦ ಜನರಲ್ಲಿ ಇದು ಪತ್ತೆಯಾಗಿರುವುದೇ ಇಲ್ಲ. ಇದರೊಂದಿಗೆ ರೋಗಿಗಳಿಗೆ ಎರಡು ಅಥವಾ ಅದಕ್ಕೂ ಹೆಚ್ಚುವಿಧದ ಔಷದಗಳ ಅವಶ್ಯಕತೆ ಇದ್ದೂ, ವೈದ್ಯರು ಇವುಗಳನ್ನು ನೀಡದೇ ಇರುವುದರಿಂದ, ಜೀವನಶೈಲಿಯ ಬದಲಾವಣೆಯ ಬಗ್ಗೆ ವೈದ್ಯರು ಸೂಚಿಸದೇ ಇರುವುದರಿಂದ ಅಥವಾ ರೋಗಿಯು ಸರಿಯಾಗಿ ಔಷದ ಸೇವನೆ ಮಾಡದೇ ಇರುವುದರಿಂದ, ಈ ವ್ಯಾಧಿಯನ್ನು ನಿಯಂತ್ರಣದಲ್ಲಿ ಇರಿಸುವುದು ಕಷ್ಟಸಾಧ್ಯವೆನಿಸಿದೆ. 

ಕಾರಣಗಳೇನು?

ಶೇಕಡಾ ೯೫ ರಷ್ಟು ಜನರಲ್ಲಿ ರಕ್ತದೊತ್ತಡ ಹೆಚ್ಚಲು ನಿರ್ದಿಷ್ಟ ಕಾರಣಗಳೇ ಇರುವುದಿಲ್ಲ. Essential hypertension ಎಂದು ಕರೆಯಲ್ಪಡುವ  ಈ ಸಮಸ್ಯಾಪೀಡಿತ ಶೇ.೭೦ ರಷ್ಟು ರೋಗಿಗಳ ಸಮೀಪದ ರಕ್ತಸಂಬಂಧಿಗಳಲ್ಲೂ ಇದು ಕಂಡುಬರುವುದು ಅನುವಂಶಿಕತೆಯ ಪರಿಣಾಮವೆಂದು ಹೇಳಬಹುದು. ಇನ್ನುಳಿದ ಶೇ.೫ ರಷ್ಟು ರೋಗಿಗಳಲ್ಲಿ ಮೂತ್ರಾಂಗ- ಮೂತ್ರಪಿಂಡ ಸಂಬಂಧಿ ಕಾಯಿಲೆಗಳು, ಕೆಲವೊಂದು ಗ್ರಂಥಿ- ಹಾರ್ಮೋನ್ ಗಳ ವ್ಯತ್ಯಯ, ಕೆಲವಿಧದ ಔಷದಗಳ ಸೇವನೆ (ಉದಾ- ಸ್ಟೆರಾಯ್ಡ್- ಗರ್ಭಧಾರಣೆಯನ್ನು ತಡೆಗಟ್ಟುವ ಮಾತ್ರೆಗಳು) ಮತ್ತಿತರ ಕಾರಣಗಳಿಂದ ಉದ್ಭವಿಸುವ ಹಾಗೂ ಗರ್ಭಧಾರಣೆಯ ಸಂದರ್ಭದಲ್ಲೂ ಪ್ರತ್ಯಕ್ಷವಾಗಬಲ್ಲ ಅಧಿಕ ರಕ್ತದ ಒತ್ತಡವನ್ನು ಸೆಕೆಂಡರಿ ಹೈಪರ್ ಟೆನ್ಶನ್ ಎನ್ನುತ್ತಾರೆ. 

ನಿಮ್ಮ ಶರೀರವೆಂಬ ಬ್ಯಾಂಕಿನ ರಕ್ತನಾಳಗಳೆನ್ನುವ ಖಾತೆಯಲ್ಲಿ ನೀವು ಸೇವಿಸಿದ ಸಮೃದ್ಧ ಆಹಾರದಲ್ಲಿರುವ " ಕೊಲೆಸ್ಟರಾಲ್" ಸಂಗ್ರಹವಾಗುತ್ತಲೇ ಇರುತ್ತದೆ. ಇದನ್ನು "ವ್ಯಾಯಾಮ" ಎನ್ನುವ ಚೆಕ್ ನೀಡಿ ಕರಗಿಸದೆ ಇದ್ದಲ್ಲಿ, ಇದು ಚಕ್ರಬಡ್ಡಿಯೊಂದಿಗೆ ಬೆಳೆಯುತ್ತಾ ಬೃಹತ್ ಮೊತ್ತವನ್ನು ತಲುಪುವುದು. ತತ್ಪರಿಣಾಮವಾಗಿ ನಿಮ್ಮ ರಕ್ತನಾಳಗಳಲ್ಲಿ ಅಥೆರೋಸ್ಕ್ಲೆರೋಸಿಸ್ ಹಾಗೂ ಆರ್ಟೀರಿಯೋ ಸ್ಕ್ಲೆರೋಸಿಸ್ ಗಳಂತಹ ಅಸಾಮಾನ್ಯ ಬದಲಾವಣೆಗಳು ಉಂಟಾಗಿ ನಿಮ್ಮ ರಕ್ತದ ಒತ್ತಡವು ಹೆಚ್ಚುವುದು. ಇದಲ್ಲದೆ ಅತಿಯಾಗಿ ಉಪ್ಪು,  ಕೆಫೀನ್ ಹಾಗೂ ಮದ್ಯ ಸೇವನೆ, ಧೂಮಪಾನ, ನಿಷ್ಕ್ರಿಯತೆ, ತೀವ್ರ ಮಾನಸಿಕ ಒತ್ತಡ, ಮಧುಮೇಹ, ಅಧಿಕತೂಕ- ಅತಿಬೊಜ್ಜು, ಅನುವಂಶಿಕತೆಗಳೊಂದಿಗೆ, ವ್ಯಕ್ತಿಯ ವಯಸ್ಸು, ಲಿಂಗ ಮತ್ತು ಜನಾಂಗವೂ ಈ ಸಮಸ್ಯೆಗೆ ಕಾರಣವೆನಿಸಬಹುದು. 

ರೋಗಲಕ್ಷಣಗಳು 

ಜನಸಾಮಾನ್ಯರು ಉಷ್ಣ, ಪಿತ್ತ, ವಾಯು ಮತ್ತು ಗ್ಯಾಸ್  ಟ್ರಬಲ್ ಎಂದು ಭಾವಿಸಬಹುದಾದ ತಲೆನೋವು, ತಲೆ ತಿರುಗಿದಂತಾಗುವುದು, ಎದೆನೋವು, ಕಣ್ಣಿನ ದೃಷ್ಟಿ ಮಸುಕಾಗುವುದು, ಆಯಾಸ, ಎದೆ ಢವಗುಟ್ಟಿದಂತಾಗುವುದು, ಕೈಕಾಲುಗಳಲ್ಲಿ ನಡುಕ ಹಾಗೂ ಬೆವರುವುದು ಅಧಿಕ ರಕ್ತದ ಒತ್ತಡದ ಸಾಮಾನ್ಯ ಲಕ್ಷಣಗಳು. 

ಅನೇಕರಲ್ಲಿ ಪತ್ತೆಯಾಗದೇ ಇರುವ ಅಧಿಕರಕ್ತದ ಒತ್ತಡವು ತೀವ್ರವಾಗಿ ಹೆಚ್ಚಿದಾಗ, ಮೆದುಳಿನ ರಕ್ತನಾಳಗಳಲ್ಲಿ ಅಡಚಣೆ ಉಂಟಾದಾಗ ಅಥವಾ ರಕ್ತಸ್ರಾವ ಸಂಭವಿಸಿದಾಗ ಅಸ್ಪಷ್ಟ ಮತ್ತು ತೊದಲು ಮಾತು, ಪಕ್ಷವಾತ, ದೃಷ್ಟಿದೋಷ ಅಥವಾ ನಾಶ, ಕೈಕಾಲು - ಅಂಗಾಂಗಗಳಲ್ಲಿ ಸ್ಪರ್ಶಜ್ಞಾನದ ಕೊರತೆ-ಅಭಾವ, ಮಾನಸಿಕ ಗೊಂದಲ,ಅಪಸ್ಮಾರ ಹಾಗೂ ಪ್ರಜ್ಞಾಹೀನತೆಯಂತಹ ಲಕ್ಷಣಗಳು ಕಂಡುಬರುವುದು.  ಕೆಲವೊಂದು ರೋಗಿಗಳಲ್ಲಿ ಕೆಮ್ಮಿದಾಗ, ಮೂತ್ರ ವಿಸರ್ಜಿಸುವಾಗ ಮತ್ತು ಮೂಗಿನಿಂದ ರಕ್ತಸ್ರಾವ ಹಾಗೂ ರಕ್ತ ವಾಂತಿಯಂತಹ ಲಕ್ಷಣಗಳು ಕಂಡುಬರುತ್ತವೆ. 



ಪಾರ್ವತಿಯ ಪಕ್ಷವಾತ 

ಬಡತನದ ಬೇಗೆಯಲ್ಲ್ಲಿ ಬೇಯುತ್ತಿರುವ ಪಾರ್ವತಿಯು ಮೂರು ಮಕ್ಕಳ ತನ್ನ ಸಂಸಾರಕ್ಕೆ ಮೂರು ಹೊತ್ತಿನ ಅನ್ನಕ್ಕಾಗಿ ಒಂದೆರಡು ಶ್ರೀಮಂತರ ಮನೆಗೆಲಸ ಮಾಡುವುದು ಅನಿವಾರ್ಯವಾಗಿತ್ತು. ಗಂಡನೆಂಬ ಪ್ರಾಣಿ ಹೆಂಡತಿ ಮಕ್ಕಳ ಹೊಟ್ಟೆಗೆ ಹಿಟ್ಟನ್ನು ತರದಿದ್ದರೂ, ಕಂಠ ಮಟ್ಟ ಕುಡಿದುಬಂದು ಹೆಂಡತಿ ಮಕ್ಕಳನ್ನು ಬಡಿಯುವುದರಲ್ಲೇನೂ ಕಡಿಮೆ ಮಾಡುತ್ತಿರಲಿಲ್ಲ. ಪಾರ್ವತಿಗೆ ೪೦ ವರ್ಷ ವಯಸ್ಸಿನಲ್ಲೇ ಆರಂಭವಾಗಿದ್ದ ಅಧಿಕ ರಕ್ತದ ಒತ್ತಡದಿಂದಾಗಿ, ಪ್ರತಿ ತಿಂಗಳಿನಲ್ಲೂ ಔಷದಗಳನ್ನು ಖರೀದಿಸಲು ಒಂದಿಷ್ಟು ಹಣದ ಅಗತ್ಯವಿದ್ದಿತು. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ, ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತೆ,  ತನ್ನ ಹಾಗೂ ಮಕ್ಕಳ ಸಂಸಾರದ ಖರ್ಚು ವೆಚ್ಚಗಳನ್ನು ಸರಿದೂಗಿಸಿದ ಬಳಿಕ, ಕೈಯ್ಯಲ್ಲಿರುವ ಹಣವನ್ನು ಹೊಂದಿಕೊಂಡು ಬಿ.ಪಿ ಯ ಮಾತ್ರೆಗಳನ್ನು ಖರೀದಿಸುವುದು ವಾಡಿಕೆಯಾಗಿತ್ತು. 

ಯುಗಾದಿಯಂದು ಬೆಳಗಿನಜಾವದಲ್ಲೇ ಎಚ್ಚರವಾಗಿದ್ದ ಪಾರ್ವತಿಗೆ ಸಣ್ಣ ತಲೆನೋವಿನೊಂದಿಗೆ ಶರೀರವಿಡೀ ಭಾರವಾದಂತಹ ಸಂವೇದನೆ ಬಾಧಿಸಿತ್ತು. ಚಾಪೆಯಿಂದ ಏಳಲು ಪ್ರಯತ್ನಿಸಿದ ಪಾರ್ವತಿಗೆ, ತನ್ನ ಶರೀರದ ಬಲಭಾಗ ಸ್ವಾಧೀನದಲ್ಲಿ ಇಲ್ಲವೆಂದು ಅರಿಯಿತು. ಜೋರಾಗಿ ಮಕ್ಕಳನ್ನು ಕರೆಯಲು ಪ್ರಯತ್ನಿಸಿದಾಗ ನಾಲಗೆಯೂ ತೊದಲುತ್ತಿರುವುದನ್ನು ಅರಿತು, ಅಸಹಾಯಕಳಾಗಿ ಕಣ್ಣೀರು ಸುರಿಸುತ್ತ ಮಲಗಿದ ಪಾರ್ವತಿಯನ್ನು ಬೆಳಕು ಹರಿದ ಬಳಿಕ ಕಂಡ ಮಕ್ಕಳು, ತಾಯಿಯ ಸ್ಥಿತಿಯನ್ನು ಕಂಡು ಗಾಬರಿಯಾಗಿ ನೆರೆಕರೆಯವರನ್ನು ಕರೆದಿದ್ದರು. ತಕ್ಷಣ ಆಸತ್ರೆಗೆ ಆಕೆಯನ್ನು ಕರೆದೊಯ್ದು ತುರ್ತು ಚಿಕಿತ್ಸೆ ನೀಡಿದ ಮೂರೇ ದಿನಗಳಲ್ಲಿ ಪಾರ್ವತಿಯು ಸಂಪೂರ್ಣವಾಗಿ ಗುಣಮುಖಳಾಗಿದ್ದಳು. ಟಿ.ಐ.ಎ ಎಂದು ಕರೆಯಲ್ಪಡುವ, ರೋಗಿಯನ್ನು ಅಲ್ಪಕಾಲ ಬಾಧಿಸುವ ಈ ಪಕ್ಷವಾತವು ಸಮರ್ಪಕ ಚಿಕಿತ್ಸೆಯ ಫಲವಾಗಿ ಕ್ಷಿಪ್ರವಾಗಿ ಮಾಯವಾಗಿತ್ತು. 

ತನ್ನ ನಿರ್ಲಕ್ಷ್ಯದಿಂದಾಗಿ ಅಯಾಚಿತ ಸಮಸ್ಯೆಗೆ ಗುರಿಯಾಗಿದ್ದ ಪಾರ್ವತಿಯು, ತದನಂತರ ಹೊಟ್ಟೆ ಬಟ್ಟೆ ಕಟ್ಟಿಯಾದರೂ ಪ್ರತಿದಿನ ಬಿ.ಪಿ ಯ ಮಾತ್ರೆಯನ್ನು ನುಂಗಲು ಮರೆಯುತ್ತಿರಲಿಲ್ಲ!. 

ದುಷ್ಪರಿಣಾಮಗಳು 

ಅಧಿಕ ರಕ್ತದ ಒತ್ತಡದ ದುಷ್ಪರಿಣಾಮಗಳಲ್ಲಿ ಪಾರ್ವತಿಯನ್ನು ಬಾಧಿಸಿದ್ದ ಟ್ರಾನ್ಸಿಯೆಂಟ್ ಇಸ್ಕೀಮಿಕ್ ಎಟಾಕ್ ಅಲ್ಲದೇ ದೀರ್ಘಕಾಲ ಅಥವಾ ಶಾಶ್ವತವಾಗಿ ರೋಗಿಯನ್ನು ಬಾಧಿಸಬಲ್ಲ ಪಕ್ಷವಾತ, ತೀವ್ರ ಎದೆನೋವು ಹಾಗೂ ಹೃದಯಾಘಾತ, ಹೃದಯದ ವೈಫಲ್ಯ, ರಕ್ತನಾಳಗಳ ಕಾಯಿಲೆಗಳು, ಮೂತ್ರಪಿಂಡಗಳ ಕಾಯಿಲೆಗಳು- ವೈಫಲ್ಯ, ಕಣ್ಣಿನ ದೃಷ್ಠಿಮಾಂದ್ಯ- ದೃಷ್ಠಿ ನಾಶ,ಅಪಸ್ಮಾರ,ಕೊಮಾ ಮತ್ತಿತರ ಗಂಭೀರ ಸಮಸ್ಯೆಗಳು ಆಕಸ್ಮಿಕವಾಗಿ ಅಥವಾ ನಿಧಾನವಾಗಿ ಕಾಡಬಹುದು. ಇದಲ್ಲದೇ ವಿಭಿನ್ನ ಕಾರಣಗಳಿಂದ ಬರಬಲ್ಲ ಅಧಿಕ ರಕ್ತದ ಒತ್ತಡವು ಅಪರೂಪದಲ್ಲಿ " ಮಾರಕ ರೋಗಕಾರಕ ಹಂತ" ಕ್ಕೆ ಬದಲಾಗುವ ಸಾಧ್ಯತೆಗಳೂ ಇವೆ. ಇದರೊಂದಿಗೆ ರೋಗ ಪತ್ತೆಯಾಗಿರದ ಕಾರಣದಿಂದಾಗಿ, ಸಮರ್ಪಕ ಚಿಕಿತ್ಸೆ ಪಡೆಯದೇ ಇರುವುದರಿಂದಾಗಿ ಮತ್ತು ರೋಗಿಯ ಅಥವಾ ವೈದ್ಯರ ನಿರ್ಲಕ್ಷ್ಯದಿಂದ ಹಾಗೂ ಇನ್ನಿತರ ಕಾರಣಗಳಿಂದಲೂ ಅನೇಕ ಗಂಭೀರ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. 

ಚಿಕಿತ್ಸಾ ಸೂತ್ರಗಳು 

ಅಧಿಕ ರಕ್ತದ ಒತ್ತಡವಿರುವ ರೋಗಿಗಳಿಗೆ ಚಿಕಿತ್ಸೆ ಆರಂಭಿಸುವ ಮುನ್ನ ಅವರ ಜೀವನ ಶೈಲಿಯ ವಿವರಗಳು, ರೋಗಿಯ ಹೃದಯ,ನರಮಂಡಲ,ಮೂತ್ರಾಂಗಗಳು- ಮೂತ್ರಪಿಂಡಗಳಿಗೆ ಸಂಭವಿಸಬಹುದಾದ ಅಪಾಯಗಳ ಸಾಧ್ಯತೆಯನ್ನು ತಿಳಿದುಕೊಳ್ಳುವುದು ಅವಶ್ಯಕ. ಇದರೊಂದಿಗೆ ರೋಗಿಯ ವೈದ್ಯಕೀಯ- ಕೌಟುಂಬಿಕ ಇತಿಹಾಸ, ಶಾರೀರಿಕ ತಪಾಸಣೆ, ಲ್ಯಾಬೋರೇಟರಿ ಪರೀಕ್ಷೆಗಳು, ಹೃದಯದ ಇ.ಸಿ. ಜಿ ಮತ್ತಿತರ ಪರೀಕ್ಷೆಗಳನ್ನು ನಡೆಸುವುದು ಹಿತಕರ. 

ಅಧಿಕ ತೂಕ - ಅತಿ ಬೊಜ್ಜಿನ ಸಮಸ್ಯೆ ಇರುವವರು ತಮ್ಮ ತೂಕ ಮತ್ತು ಬೊಜ್ಜನ್ನು ಇಳಿಸಲು ಅವಶ್ಯಕವೆನಿಸುವ ವ್ಯಾಯಾಮದೊಂದಿಗೆ, ಸೂಕ್ತ ಔಷದಗಳನ್ನು ಸೇವಿಸಬೇಕಾಗುವುದು ಅನಿವಾರ್ಯ. ಸುಖಲೋಲುಪತೆಯಿಂದಾಗಿ ಬಂದಿರುವ ನಿಷ್ಕ್ರಿಯ ಜೀವನಶೈಲಿಯನ್ನು ಅನುಸರಿಸುವವರು ಸಾಕಷ್ಟು ಚಟುವಟಿಕೆ ಮತ್ತು ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ರಕ್ತದ ಒತ್ತಡವನ್ನು ಹಿಡಿತದಲ್ಲಿ ಇರಿಸುವುದು ಸುಲಭಸಾಧ್ಯ. ತೀವ್ರ ಮಾನಸಿಕ ಒತ್ತಡವಿರುವವರು ಕ್ರೀಡೆ, ಧ್ಯಾನ, ಯೋಗ ಮತ್ತು ಸಂಗೀತಗಳಂತಹ ಚಟುವಟಿಕೆಗಳಲ್ಲಿ ತೊಡಗುವುದು ಅಪೇಕ್ಷಣೀಯ. 

ಆಹಾರಸೇವನೆಯಲ್ಲಿ ಎಣ್ಣೆ,ಬೆಣ್ಣೆ, ತುಪ್ಪ, ಮಾಂಸಾಹಾರ, ಮೊಟ್ಟೆ ಮತ್ತು ಸಿಹಿತಿಂಡಿಗಳನ್ನು ಸೇವಿಸದಿರುವ ಮೂಲಕ ರೋಗಿಯ ಶರೀರದಲ್ಲಿ ಕೊಲೆಸ್ಟರಾಲ್ ಮತ್ತು ಬೊಜ್ಜಿನ ಸಂಗ್ರಹವನ್ನು ನಿಯಂತ್ರಿಸುವುದರೊಂದಿಗೆ, ಶರೀರದ ತೂಕ ಹೆಚ್ಚದಂತೆ ಕಾಪಾಡಿಕೊಳ್ಳಲು ಉಪಯುಕ್ತವೆನಿಸುವುದು. ದಿನದಲ್ಲಿ ಮೂರುಬಾರಿ ಹಿತವಾಗಿ- ಮಿತವಾಗಿ ಸೇವಿಸಬೇಕಾದ ಆಹಾರದಲ್ಲಿ ಹಣ್ಣು-ತರಕಾರಿಗಳ ಪ್ರಮಾಣ ಹೆಚ್ಚಿರುವುದು ಆರೋಗ್ಯಕರ. 

ಅಂತಿಮವಾಗಿ ನಿಮ್ಮ ವೈದ್ಯರು ಸೂಚಿಸಿದ ಔಷದಗಳನ್ನು ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಪ್ರತಿನಿತ್ಯ ತಪ್ಪದೆ ಸೇವಿಸುವುದರೊಂದಿಗೆ, ನಿಮ್ಮ ರಕ್ತದ ಒತ್ತಡವನ್ನು ಕನಿಷ್ಠ ಎರಡು ತಿಂಗಳಿಗೊಮ್ಮೆ ಪರೀಕ್ಷಿಸಿಕೊಳ್ಳುವುದು ಅತ್ಯವಶ್ಯಕವೂ ಹೌದು ಎನ್ನುವುದನ್ನು ಮರೆಯದಿರಿ. 

ಒಂದೆರಡು ಕಿವಿಮಾತುಗಳು 

ಅಧಿಕರಕ್ತದ ಒತ್ತಡವನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಯಾವುದೇ ಪದ್ದತಿಯ ಔಷದಗಳನ್ನು ಇದುವರೆಗೆ ಯಾರೊಬ್ಬರೂ ಸಂಶೋಧಿಸಿಲ್ಲ. ಆದುದರಿಂದ ಜೀವನಪರ್ಯಂತ ಔಷದ ಸೇವನೆ ಅನಿವಾರ್ಯ ಎಂದು ತಿಳಿದಿರಿ. ಬಂಧುಮಿತ್ರರು ಅಥವಾ ನಕಲಿವೈದ್ಯರ ಸಲಹೆಯಂತೆ ಔಷದಗಳ ಪ್ರಮಾಣ ಹಾಗೂ ಸೇವನಾ ಕ್ರಮದಲ್ಲಿ ಬದಲಾವಣೆ ಅಥವಾ ಔಷದ ಸೇವನೆಯನ್ನೇ ನಿಲ್ಲಿಸುವ ಪ್ರಯೋಗ ನಿಮ್ಮ ಪ್ರಾಣಕ್ಕೆ ಸಂಚಕಾರ ತರಬಲ್ಲದು. 

ನಿಮ್ಮ ವೈದ್ಯರ ಸಲಹೆ ಸೂಚನೆಗಳನ್ನು ಪರಿಪಾಲಿಸಬಲ್ಲ ಶಾರೀರಿಕ ಬಲ ಮತ್ತು ಮಾನಸಿಕ ಛಲ ನಿಮ್ಮಲ್ಲಿ ಇದ್ದಲ್ಲಿ, ಈ ಸಮಸ್ಯೆಯನ್ನು ಹತೋಟಿಯಲ್ಲಿ ಇರಿಸುವುದು ಸುಲಭಸಾಧ್ಯ. 

ಅಧಿಕರಕ್ತದ ಒತ್ತಡವನ್ನು ನಿಯಂತ್ರಿಸುವ ಸಲುವಾಗಿ ನೀಡುವ ಕೆಲ ಔಷದಗಳನ್ನು ಸುದೀರ್ಘಕಾಲ ಸೇವಿಸುವುದರಿಂದ, ಕೆಲ ರೋಗಿಗಳಲ್ಲಿ ಕಾಮಾಸಕ್ತಿಯ ಕೊರತೆ ಹಾಗೂ ನಿಮಿರು ದೌರ್ಬಲ್ಯ ಕಂಡುಬರಬಹುದು. ಇಂತಹ ಸಂದರ್ಭಗಳಲ್ಲಿ ವೈದ್ಯರ ಸಲಹೆ ಪಡೆಯದೇ ವಯಾಗ್ರದಂತಹ ಮಾತ್ರೆಗಳನ್ನು ಸೇವಿಸುವುದು ಇನ್ನಷ್ಟು ಸಮಸ್ಯೆಗಳಿಗೆ ಕಾರಣವೆನಿಸಬಲ್ಲದು. 

ಪತಿ- ಪತ್ನಿಯರಿಬ್ಬರಿಗೂ ಅಧಿಕ ರಕ್ತದ ಒತ್ತಡವಿದ್ದಲ್ಲಿ, ಇವರ ಮಕ್ಕಳು ತಮ್ಮ ದೈನಂದಿನ ಆಹಾರ, ವ್ಯಾಯಾಮ ಹಾಗೂ ಮಾನಸಿಕ ಒತ್ತಡಗಳ ವಿಚಾರಗಳಲ್ಲಿ ತುಸು ಮುಂಜಾಗ್ರತೆ ವಹಿಸುವುದು ಕ್ಷೇಮಕರ. ಕೊನೆಯದಾಗಿ ಈ ವ್ಯಾಧಿಗೆ ಕಾರಣವೆನಿಸಿರಬಹುದಾದ ದುಶ್ಚಟಗಳನ್ನು ತ್ಯಜಿಸುವುದು ಔಷದ ಸೇವನೆಯಷ್ಟೇ ಮಹತ್ವಪೂರ್ಣ ಎನ್ನುವುದನ್ನು ಮರೆಯದಿರಿ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೫-೦೯- ೨೦೦೩ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 




No comments:

Post a Comment