Wednesday, April 16, 2014

KUDIYALU NEERILLADA OORIGE.........





   ಕುಡಿಯಲು ನೀರಿಲ್ಲದ ಊರಿಗೆ, ಕಡಿಯಲು ಕಸಾಯಿಖಾನೆ ಏಕೆ ?

ಮುನ್ನುಡಿ 

ಕರಾವಳಿ ಕರ್ನಾಟಕದ ಆಯ್ದ ಹತ್ತು ನಗರ- ಪಟ್ಟಣಗಳ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಗತದಶಕದಲ್ಲಿ ರಾಜ್ಯ ಸರ್ಕಾರವು ಎ. ಡಿ. ಬಿ ಸಾಲ ಆಧಾರಿತ ಕುಡ್ಸೆಂಪ್ ಯೋಜನೆಯನ್ನು ಅನುಷ್ಠಾನಗೊಳಿಸಿತ್ತು. ಸಹಸ್ರಾರು ಕೋಟಿ ರೂಪಾಯಿಗಳ ಈ ಯೋಜನೆಯ ಸಾಧಕ- ಬಾಧಕಗಳು ಮತ್ತು ಸಾಲದ ಮೊತ್ತದ ಮೇಲೆ ವಿಧಿಸುವ ದುಬಾರಿ ಬಡ್ಡಿಗಳ ಬಗ್ಗೆ ಬಸ್ರೂರು ಬಳಕೆದಾರರ ವೇದಿಕೆಯ ಡಾ. ರವೀಂದ್ರನಾಥ ಶಾನುಭಾಗರು ಪುತ್ತೂರಿನ ನಾಗರಿಕರಿಗೆ ಮಾಹಿತಿಯನ್ನು ನೀಡಿದ್ದರು. ಇದೇ ಕಾರಣದಿಂದಾಗಿ ಈ ಯೋಜನೆಯ ಬಗ್ಗೆ ಆಸಕ್ತನಾಗಿ, ಪುತ್ತೂರಿನ ಕುಡ್ಸೆಂಪ್ ಯೋಜನೆಗಳ ಪ್ರತಿಯೊಂದು ಉಪಯೋಜನೆಗಳ ವಿಶದವಾದ ಮಾಹಿತಿಗಳನ್ನು ಸಂಗ್ರಹಿಸಿ ಬರೆದಿದ್ದ ನೂರಾರು ಲೇಖನಗಳನ್ನು ಉದಯವಾಣಿ ಪತ್ರಿಕೆ ಪ್ರಕಟಿಸಿತ್ತು. ಕುಡ್ಸೆಂಪ್ ಯೋಜನೆಯ ಸಾಧಕ- ಬಾಧಕಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಸಲುವಾಗಿ, ಮಂಗಳೂರಿನ ಏನ್.ಜಿ.ಓ ಟಾಸ್ಕ್ ಫೋರ್ಸ್ ಎನ್ನುವ ಸ್ವಯಂ ಸೇವಾ ಸಂಘಟನೆಯು ರಾಜ್ಯ ಮಟ್ಟದ ಸ್ಪರ್ದೆಯೊಂದನ್ನು ಘೋಷಿಸಿ, ಎ. ಡಿ, ಬಿ ಸಾಲ ಆಧಾರಿತ ಕುಡ್ಸೆಂಪ್ ಯೋಜನೆಗಳ ಬಗ್ಗೆ ಪತ್ರಕರ್ತರು ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಇದರಲ್ಲಿ ಭಾಗವಹಿಸುವಂತೆ ವಿನಂತಿಸಿತ್ತು. ಅದಾಗಲೇ ಪುತ್ತೂರಿನ ಕುಡ್ಸೆಂಪ್ ಯೋಜನೆಗಳ ಬಗ್ಗೆ ೫೦ ಕ್ಕೂ ಅಧಿಕ ಲೇಖನಗಳನ್ನು ಪ್ರಕಟಿಸಿದ್ದ ನನ್ನನ್ನು ಸಂಪರ್ಕಿಸಿ, ಮಂಗಳೂರಿನ ಕುಡ್ಸೆಂಪ್ ಯೋಜನೆಯ ಬಗ್ಗೆ ವಿಶೇಷ ಲೇಖನವೊಂದನ್ನು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿಸುವಂತೆ ಆಗ್ರಹಿಸಿತ್ತು. ಸಂಸ್ಥೆಯ ಕಾರ್ಯಕರ್ತರ ಮನವಿಗೆ ಸ್ಪಂದಿಸಿ ನಾನು ಬರೆದಿದ್ದ ಈ ಲೇಖನವು ಸಾಕಷ್ಟು ಜನ ಮನ್ನಣೆ ಗಳಿಸಲು ಯಶಸ್ವಿಯಾಗಿತ್ತು. 

ಏನ್.ಜಿ.ಓ ಟಾಸ್ಕ್ ಫೋರ್ಸ್ ಕುಡ್ಸೆಂಪ್ ಯೋಜನೆಗಳ ಬಗ್ಗೆ ಆಯೋಜಿಸಿದ್ದ " ತನಿಖಾ ವರದಿಗಳ ಸ್ಪರ್ದೆ" ಯಲ್ಲಿ ಹವ್ಯಾಸಿ ಪತ್ರಕರ್ತನಾಗಿದ್ದ ನನಗೆ ಮೊದಲ ಸ್ಥಾನ ದೊರೆತಿತ್ತು. ಅನೇಕ ವೃತ್ತಿಪರ ಪತ್ರಕರ್ತರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರೂ, ನಾನು ಬರೆದ ಲೇಖನಗಳ ಸಂಖ್ಯೆ, ಯೋಜನೆಗಳ ವಿಸ್ತೃತ ಮಾಹಿತಿಗಳು, ಕಾಮಗಾರಿಗಳ ಅನುಷ್ಠಾನದಲ್ಲಿ ಸಂಭವಿಸುತ್ತಿರುವ ಲೋಪದೋಷಗಳೇ ಮುಂತಾದ ತನಿಖಾ ವರದಿ ಮತ್ತು ಇತರ ಮಾಹಿತಿಗಳನ್ನು ಪರಿಗಣಿಸಿ, ನನಗೆ ಮೊದಲ ಬಹುಮಾನವನ್ನು ನೀಡಲಾಗಿತ್ತು. ಈ ಲೇಖನಗಳನ್ನು ಬರೆಯಲು ನನ್ನನ್ನು ಪ್ರೋತ್ಸಾಹಿಸಿದ್ದ ಡಾ. ರವೀಂದ್ರನಾಥ ಶಾನುಭಾಗರಿಗೆ ಮತ್ತು ಪ್ರಕಟಿಸಿದ್ದ ಉದಯವಾಣಿ ಪತ್ರಿಕೆಯ ಬಳಗಕ್ಕೆ ನನ್ನ ಹೃತ್ಪೂರ್ವಕ ವಂದನೆಗಳು. ಅಂತೆಯೇ ಏನ್.ಜಿ.ಓ ಟಾಸ್ಕ್ ಫೋರ್ಸ್ ನ ಕಾರ್ಯಕರ್ತರು ಮತ್ತು ನನ್ನ ಲೇಖನಗಳನ್ನು ಮೆಚ್ಚಿ ಪ್ರೋತ್ಸಾಹಿಸಿದ್ದ ಓದುಗರಿಗೂ ವಂದನೆಗಳು. 

ಡಾ. ಸಿ. ನಿತ್ಯಾನಂದ ಪೈ 
-------------              -------------                 --------------           ----------------               -------------------

ಸುಮಾರು ೧೭೦ ಕೋಟಿ ರೂಪಾಯಿಗಳನ್ನು ವ್ಯಯಿಸಿ ಮಂಗಳೂರಿನ ಜನತೆಗೆ ಅತ್ಯವಶ್ಯಕವೆನಿಸಿದ್ದ ಕುಡಿಯುವ ನೀರಿನ ಯೋಜನೆಯನ್ನು ಕುಡ್ಸೆಂಪ್ ಅನುಷ್ಠಾನಿಸಿದೆ. ಆದರೆ ಈ ಯೋಜನೆ ಇದೀಗ ಸಫಲವಾಗಲು ಅನಿವಾರ್ಯವೆನಿಸಿರುವ ನೂತನ ಕಿಂಡಿ ಅಣೆಕಟ್ಟಿನ ನಿರ್ಮಾಣ ಅಸಾಧ್ಯವೆಂದು ಚಂಡಿ ಹಿಡಿದಿರುವ ಕುಡ್ಸೆಂಪ್ ಸಂಸ್ಥೆಯ ಈ ಧೋರಣೆಗೆ ಕಾರಣವೇನು?. ಈ ಬಗ್ಗೆ ನೀವು ತಿಳಿದಿರಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ. 

---------------              ---------------              ----------------               --------------------            ---------------

ಮನುಷ್ಯನು ಬದುಕಿರಲು ಅತ್ಯವಶ್ಯಕವೆನಿಸುವ ಶುದ್ಧ ಗಾಳಿಯ ನಂತರದ ಸ್ಥಾನವು ಶುದ್ಧವಾದ ಕುಡಿಯುವ ನೀರಿಗೆ ಸಲ್ಲುತ್ತದೆ. ಆಹಾರವಿಲ್ಲದೇ ಹಲವಾರು ವಾರಗಳ ಕಾಲ ಬದುಕಿರಬಲ್ಲ ಮಾನವರು, ಕುಡಿಯುವ ನೀರಿಲ್ಲದೇ ಕೆಲವೇ ದಿನಗಳ ಕಾಲ ಬದುಕುವುದು ಅಸಾಧ್ಯವೆನಿಸುವುದು. ಇದೇ ಕಾರಣದಿಂದಾಗಿ ನಮ್ಮ ದೈನಂದಿನ ಬದುಕಿಗೆ ಅನಿವಾರ್ಯ ಎನಿಸುವ ನೀರು, ನಮ್ಮ ಮೂಲಭೂತ ಅವಶ್ಯಕತೆಗಳಲ್ಲಿ ಪ್ರಮುಖವಾಗಿದೆ. 

ಮಂಗಳೂರಿನಲ್ಲಿ ನೀರಿನ ಕೊರತೆಗೆ ಕಾರಣವೇನು?

ಅನೇಕ ವರ್ಷಗಳಿಂದ ಬೇಸಗೆಯ ದಿನಗಳಲ್ಲಿ ತೀವ್ರವಾದ ನೀರಿನ ಕೊರತೆಯಿಂದ ಬಳಲುತ್ತಿದ್ದ ಮಂಗಳೂರಿನ ನಿವಾಸಿಗಳ ಸಂಕಷ್ಟವನ್ನು ಪರಿಹರಿಸಲು, ೧೯೯೨ ರಲ್ಲಿ ತುಂಬೆಯಲ್ಲಿ ನೇತ್ರಾವತಿ ನದಿಗೆ ಅಡ್ಡವಾಗಿ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿತ್ತು. ಆದರೆ ಕಳಪೆ ಕಾಮಗಾರಿಗಳ ಫಲವಾಗಿ ಕೇವಲ ೧೦ ವರ್ಷಗಳಲ್ಲೇ ಸೋರಲು ಆರಂಭಿಸಿದ್ದ ಈ ಅಣೆಕಟ್ಟಿನಿಂದ ಹಾಗೂ ನೀರು ಸರಬರಾಜು ಮಾಡುವ ಕೊಳವೆಗಳ ಜಾಲದಲ್ಲಿನ ಸಮಸ್ಯೆಗಳಿಂದಾಗಿ, ಮಂಗಳೂರಿಗೆ ಸರಬರಾಜಾಗುತ್ತಿದ್ದ ನೀರಿನ ಶೇ.೬೦ ರಷ್ಟು ಪಾಲು ಸೋರಿಹೊಗುತ್ತಿತ್ತು!. 

ಇದರೊಂದಿಗೆ ಬೇಸಗೆಯ ದಿನಗಳಲ್ಲಿ ನೇತ್ರಾವತಿ ನದಿಯಲ್ಲಿ ಸ್ವಾಭಾವಿಕವಾಗಿ ನೀರಿನ ಒಳಹರಿವು ಕಡಿಮೆಯಾಗುತ್ತಿದ್ದುದರಿಂದ, ಈ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣವೂ ಸಹಜವಾಗಿಯೇ ಕಡಿಮೆಯಾಗುತ್ತಿತ್ತು. ಫೆಬ್ರವರಿ ತಿಂಗಳ ಮಧ್ಯಭಾಗದಲ್ಲಿ ಉದ್ಭವಿಸುತ್ತಿದ್ದ ಈ ಸಮಸ್ಯೆಯು, ಮಾರ್ಚ್ ತಿಂಗಳಿನ ಮಧ್ಯಭಾಗದ ಬಳಿಕ ಉಲ್ಬಣಿಸಲು , ನೀರಿನ ಒಳಹರಿವು ಸಂಪೂರ್ಣವಾಗಿ ನಿಂತುಹೋಗುತ್ತಿದ್ದುದೇ ಕಾರಣವೆನಿಸಿತ್ತು. ಈ ಸಂದರ್ಭದಲ್ಲಿ ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ ನೀರು ಮುಂಗಾರು ಮಳೆ ಆರಂಭವಾಗುವ ತನಕ ಮಂಗಳೂರಿನ ಜನತೆಗೆ ದಿನನಿತ್ಯ ಪೂರೈಸಲು ಸಾಕಾಗುವುದಿಲ್ಲ. ಇದೇ ಕಾರಣದಿಂದಾಗಿ ಇಂತಹ ಪರಿಸ್ಥಿತಿಯಲ್ಲಿ ಮಂಗಳೂರಿನ ನಿವಾಸಿಗಳಿಗೆ ನಾಲ್ಕು ದಿನಗಳಿಗೊಂದು ಬಾರಿ ನೀರನ್ನು ಸರಬರಾಜು ಮಾಡುವಂತಹ ಕಠಿಣ ನಿರ್ಧಾರವನ್ನು ನಗರ ಪಾಲಿಕೆಯು ಅನಿವಾರ್ಯವಾಗಿ ಕೈಗೊಳ್ಳಬೇಕಾಗುತ್ತಿತ್ತು. 

ಮಂಗಳೂರಿನ ಜನತೆಯನ್ನು ಶಾಪದೋಪಾದಿಯಲ್ಲಿ ಕಾಡುತ್ತಿರುವ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು, ಕುಡ್ಸೆಂಪ್ ಯೋಜನೆಯಲ್ಲಿ ಪರಿಹಾರವನ್ನು ರೂಪಿಸಲಾಗಿತ್ತು. ವಿಶೇಷವೆಂದರೆ ಈ ಅಸಮರ್ಪಕ ಪರಿಹಾರವೇ ಇನ್ನಷ್ಟು ಸಮಸ್ಯೆಗಳಿಗೆ ಕಾರಣವೆನಿಸಿತ್ತು!. 

ಕುಡಿಯುವ ನೀರಿನ ಯೋಜನೆ 

ಪ್ರಸ್ತುತ ಮಂಗಳೂರಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಕುಡಿಯುವ ನೀರಿನ ಯೋಜನೆಗೆ ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ ನಿಂದ ಪಡೆದಿರುವ ಸಾಲವನ್ನು ಬಳಸಲಾಗಿದೆ. ಈ ಯೋಜನೆಯ ಬಗ್ಗೆ ಅಧ್ಯಯನವನ್ನು ನಡೆಸಿದ್ದ "ನೆಡೆಕೊ" ಸಂಸ್ಥೆಯು, ಕುಡಿಯುವ ನೀರಿನ ಯೋಜನೆಗಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಆಯೋಜಿಸಿದ್ದ ದೆಹಲಿಯ "ಕನ್ಸಲ್ಟಿಂಗ್ ಎಂಜಿನಿಯರಿಂಗ್ ಸರ್ವಿಸಸ್" ಸಂಸ್ಥೆ ೧೯೯೮ ರಲ್ಲಿ ಸಿದ್ಧಪಡಿಸಿದ್ದ ವರದಿಯನ್ನು ಆಧಾರವಾಗಿ ಪರಿಗಣಿಸಿತ್ತು. ಸತ್ಯಕ್ಕೆ ದೂರವಾದ ಹಾಗೂ ಅಸಮರ್ಪಕ ಅಂಕಿ- ಅಂಶಗಳಿಂದ ಕೂಡಿರುವ ಈ ವರದಿಯ ಆಧಾರದ ಮೇಲೆ ಇದೀಗ ಅನುಷ್ಠಾನಗೊಂಡಿರುವ ಕುಡಿಯುವ ನೀರಿನ ಯೋಜನೆಯು, ಇದೇ ಕಾರಣದಿಂದಾಗಿ ನಿಷ್ಪ್ರಯೋಜಕವೆನಿಸಲಿದೆ!. 

೧೯೯೮ ರ ಈ ವರದಿಯಂತೆ ಈಗಿನ ಕಿಂಡಿ ಆಣೆಕಟ್ಟು ೯.೫೬ ಮಿಲಿಯನ್ ಕ್ಯುಬಿಕ್ ಮೀಟರ್ (ಮಿ.ಕ್ಯು.ಮೀ)ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. ಮಂಗಳೂರು ನಗರಕ್ಕೆ ವರ್ಷವಿಡೀ ನೀರನ್ನು ಸರಬರಾಜು ಮಾಡಲು ಇದು ಸಾಕಾಗುತ್ತದೆ. ಮಾತ್ರವಲ್ಲ, ವೃದ್ಧಿಸುತ್ತಿರುವ ಜನಸಂಖ್ಯೆಯನ್ನು ಪರಿಗಣಿಸಿದರೂ, ಈ ವ್ಯವಸ್ಥೆಯು ೨೦೨೬ ನೇ ಇಸವಿಯ ತನಕ ಧಾರಾಳವಾಗಿ ಸಾಕಾಗುತ್ತದೆ. ಆದುದರಿಂದ ನೂತನ ಕಿಂಡಿ ಅಣೆಕಟ್ಟಿನ ನಿರ್ಮಾಣ ಅನಾವಶ್ಯಕ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಂಸ್ಥೆಯ ಅಭಿಪ್ರಾಯವನ್ನು ಮನ್ನಿಸಿದ ಕುಡ್ಸೆಂಪ್, ನೂತನ ಕಿಂಡಿ ಅಣೆಕಟ್ಟಿನ ನಿರ್ಮಾಣವನ್ನು ಈ ಯೋಜನೆಯಿಂದ ಕೈಬಿಟ್ಟಿತ್ತು!. 

ಆದರೆ ೨೦೦೩ ನೇ ಇಸವಿಯ ಬೇಸಗೆಯಲ್ಲಿ ತಲೆದೋರಿದ "ಜಲಾಕ್ಷಾಮ" ದಿಂದ ಧೃತಿಗೆಟ್ಟಿದ್ದ ಕುಡ್ಸೆಂಪ್, ಬೆಂಗಳೂರಿನ ಟೋರ್ ಸ್ಟೀಲ್ ರಿಸರ್ಚ್ ಫೌಂಡೆಶನ್ ಸಂಸ್ಥೆಗೆ ಈಗಿನ ಕಿಂಡಿ ಅಣೆಕಟ್ಟಿನ ಸಾಮರ್ಥ್ಯ ಹಾಗೂ ದುರಸ್ತಿಯ ಬಗ್ಗೆ ಮತ್ತು ಅವಶ್ಯಕವೆನಿಸಿದಲ್ಲಿ ನೂತನ ಕಿಂಡಿ ಅಣೆಕಟ್ಟಿನ ನಿರ್ಮಾಣದ ಬಗ್ಗೆ ಅಧ್ಯಯನವನ್ನು ನಡೆಸಿ, ಇದರ ವಿನ್ಯಾಸವನ್ನು ಸಿದ್ಧಪಡಿಸಿ ವರದಿಯನ್ನು ಸಲ್ಲಿಸುವಂತೆ ಆದೇಶಿಸಿತ್ತು. 

ಈ ಸಂಸ್ಥೆಯು ೨೦೦೪ ರಲ್ಲಿ ಸಲ್ಲಿಸಿದ ವರದಿಯು ನಿಜಕ್ಕೂ ದಿಗ್ಭ್ರಮೆ ಹುಟ್ಟಿಸುವಂತಿತ್ತು. ಏಕೆಂದರೆ ಈ ವರದಿಯಂತೆ ಸೋರುತ್ತಿರುವ ಹಳೆಯ ಅಣೆಕಟ್ಟಿನ ದುರಸ್ತಿಗೆ ಕನಿಷ್ಠ ೨ ಕೋಟಿ ರೂಪಾಯಿ ವೆಚ್ಚದೊಂದಿಗೆ, ೧ ರಿಂದ ೨ ವರ್ಷಗಳ ಕಾಲಾವಕಾಶ ಬೇಕಾಗುತ್ತದೆ. ಆದರೆ ದುರಸ್ತಿ ಪಡಿಸಿದ ಬಳಿಕವೂ ಈ ಅಣೆಕಟ್ಟಿನ ನೀರಿನ ಸಂಗ್ರಹಣಾ ಸಾಮರ್ಥ್ಯವು ಕೇವಲ ೪.೬೫ ಮಿ.ಕ್ಯು.ಮೀ. ಆಗಿರುತ್ತದೆ. ಮಂಗಳೂರಿನ ನಿವಾಸಿಗಳ ಇಂದಿನ ಬೇಡಿಕೆಯನ್ನು ಪೂರೈಸಲೂ ಇದು ಸಾಕಾಗುವುದಿಲ್ಲ. ಇದರೊಂದಿಗೆ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ೨೦೨೬ ರಲ್ಲಿ ಮಂಗಳೂರಿನ ನೀರಿನ ಬೇಡಿಕೆಯ ಪ್ರಮಾಣವು ೧೨.೧೧೭ ಮಿ.ಕ್ಯು.ಮೀ. ಆಗಲಿರುವುದು. 

ತಜ್ಞರ ಅಭಿಪ್ರಾಯದಂತೆ ಫೆಬ್ರವರಿ ಮಧ್ಯಭಾಗದ ಬಳಿಕ ಅಣೆಕಟ್ಟಿಗೆ ಹರಿದು ಬರಲಿರುವ ನೀರಿನ ಒಳಹರಿವು ಸ್ವಾಭಾವಿಕವಾಗಿಯೇ ಕಡಿಮೆಯಾಗುವುದು. ತದನಂತರ ಮಾರ್ಚ್ ಮಧ್ಯಭಾಗದ ಬಳಿಕ ನದಿಯ ನೀರಿನ ಒಳಹರಿವು ಸಂಪೂರ್ಣವಾಗಿ ನಿಂತು ಹೋಗುವುದರಿಂದ, ಈಗಿನ ಅಣೆಕಟ್ಟಿನಲ್ಲಿ ಸಂಗ್ರಹಿತ ನೀರು ಮಂಗಳೂರಿನ ಜನತೆಗೆ ಕೇವಲ ೨೫ ದಿನಗಳಿಗಷ್ಟೇ ಸಾಕಾಗುವುದು. ತದನಂತರ ಸುಮಾರು ೭೫ ದಿನಗಳ ಕಾಲ ನೀರಿನ ಒಳಹರಿವಿಲ್ಲದ ಕಾರಣದಿಂದಾಗಿ, ಮಂಗಳೂರು ನಗರಕ್ಕೆ ನಾಲ್ಕು ದಿನಗಳಿಗೊಮ್ಮೆ ನೀರು ಬಿಡಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ. ಇದಲ್ಲದೇ ಧರ್ಮಸ್ಥಳ ಹಾಗೂ ಸರಪಾಡಿಯಲ್ಲಿನ ಮತ್ತು ಇದೀಗ ಪುತ್ತೂರಿನ ಬಳಿ ನಿರ್ಮಾಣಗೊಳ್ಳುತ್ತಿರುವ ನೂತನ ಕಿಂಡಿ ಆಣೆಕಟ್ಟುಗಳಿಂದಾಗಿ,ತುಂಬೆ ಅಣೆಕಟ್ಟಿಗೆ ನೀರಿನ ಹರಿವು ಇನ್ನಷ್ಟು ಕಡಿಮೆಯಾಗಲಿದೆ. ಇದರೊಂದಿಗೆ ನೂತನ ಯೋಜನೆಯಲ್ಲಿ ಈಗಾಗಲೇ ಸೇರ್ಪಡೆಗೊಂಡಿರುವ ಉಳ್ಳಾಲ  ಮತ್ತು ಮೂಲ್ಕಿ ಪರಿಸರದ ನಿವಾಸಿಗಳಿಗೂ ನೀರಿಲ್ಲದೆ ಸೊರಗಿರುವ ಈಗಿನ ಅಣೆಕಟ್ಟಿನಿಂದಲೇ ನೀರನ್ನು ಪೂರೈಸಬೇಕಾಗುತ್ತದೆ. ಇವೆಲ್ಲಾ ಕಾರಣಗಳಿಂದಾಗಿ ಮಂಗಳೂರು ನಗರಕ್ಕೆ ವರ್ಷವಿಡೀ ನಿರಂತರವಾಗಿ ನೀರನ್ನು ಪೂರೈಸಲು, ನೂತನ ಕಿಂಡಿ ಅಣೆಕಟ್ಟನ್ನು ನಿರ್ಮಾಣ ಮಾಡಲೇಬೇಕು. ಈಗಿನ ಅಣೆಕಟ್ಟಿಗಿಂತ ಅಧಿಕ ಎತ್ತರದ (ಸುಮಾರು ೮ ಮೀಟರ್ ಎತ್ತರದ) ನೂತನ ಅಣೆಕಟ್ಟನ್ನು, ಈಗಿನ ಅಣೆಕಟ್ಟಿಗಿಂತಲೂ ೫೦ ರಿಂದ ೧೦೦ ಮೀಟರ್ ಕೆಳಗೆ ನಿರ್ಮಿಸಿದಲ್ಲಿ, ೧೪.೪೮೩ ಮಿ.ಕ್ಯು.ಮೀ. ನೀರನ್ನು ಇದರಲ್ಲಿ ಸಂಗ್ರಹಿಸುವುದು ಸುಲಭಸಾಧ್ಯವೆಂದು ಈ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದರಿಂದಾಗಿ ಬೇಸಗೆಯ ದಿನಗಳಲ್ಲೂ ಮಂಗಳೂರಿಗೆ ಕುಡಿಯುವ ನೀರನ್ನು ನಿರಂತರವಾಗಿ ಸರಬರಾಜು ಮಾಡಲು ಅನುಕೂಲವಾಗಲಿರುವುದು. 

ಆದರೆ ಕೆ.ಯು.ಐ.ಡಿ.ಎಫ್.ಸಿ ಯ ಆಡಳಿತ ನಿರ್ದೇಶಕರು ಈ ವರದಿಯನ್ನು ಉಲ್ಲೇಖಿಸಿ ಮಹಾನಗರ ಪಾಲಿಕೆಯ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ ಮಾತ್ರ ಅಚ್ಚರಿಯನ್ನು ಉಂಟುಮಾಡುತ್ತದೆ. ಈ ಅಧಿಕಾರಿ ಬರೆದಿರುವಂತೆ ನೂತನ ಕಿಂಡಿ ಆಣೆಕಟ್ಟು ಅವಶ್ಯಕವಾದರೂ, ಇದೀಗ ಕುಡ್ಸೆಂಪ್ ಯೋಜನೆಗಳ ಅನುಷ್ಠಾನಕ್ಕೆ ನೀಡಿರುವ ಕಾಲಾವಧಿ ಮುಗಿದಿದೆ. ಇದಲ್ಲದೇ ಈಗಿನ ಅಣೆಕಟ್ಟಿನ ದುರಸ್ತಿ ಅಥವಾ ನೂತನ ಅಣೆಕಟ್ಟಿನ ನಿರ್ಮಾಣಕ್ಕೆ ಈ ಯೋಜನೆಯಿಂದ ಹಣವನ್ನು ಒದಗಿಸುವುದು ಅಸಾಧ್ಯ. ಆದುದರಿಂದ ಈಗಿನ ಅಣೆಕಟ್ಟನ್ನು ಮಹಾನಗರ ಪಾಲಿಕೆಯ ವತಿಯಿಂದ ದುರಸ್ತಿಪಡಿಸಿಕೊಳ್ಳುವಂತೆ ಅಥವಾ ನೂತನ ಅಣೆಕಟ್ಟಿನ ನಿರ್ಮಾಣಕ್ಕಾಗಿ ಸುಮಾರು ೨೦ ಕೋಟಿ ರೂಪಾಯಿಗಳನ್ನು ಹೊಂದಿಸಿಕೊಂಡು ಪಾಲಿಕೆಯ ವತಿಯಿಂದ ನಿರ್ಮಿಸುವಂತೆ ಉದಾರ ಸಲಹೆಯನ್ನು ನೀಡಿದ್ದಾರೆ!. 

ಆದರೆ ಮಂಗಳೂರು ಮಹಾನಗರ ಪಾಲಿಕೆಯು ಸದನದಲ್ಲಿ ನೂತನ ಕಿಂಡಿ ಅಣೆಕಟ್ಟಿನ ನಿರ್ಮಾಣದ ನಿರ್ಧಾರವನ್ನು ಅನುಮೋದಿಸಿದೆ. ಅದೇ ರೀತಿಯಲ್ಲಿ ಎ.ಡಿ. ಬಿ ಸಾಲದ ಯೋಜನೆಗಳ ಮೇಲುಸ್ತುವಾರಿಯನ್ನು ವಹಿಸಿರುವ "ಎಂಪವರ್ಡ್ ಕಮಿಟಿ" ಯು ಇಂತಹದ್ದೇ ನಿರ್ಣಯವನ್ನು ಅಂಗೀಕರಿಸಿದ್ದರೂ, ನೂತನ ಅಣೆಕಟ್ಟಿನ ನಿರ್ಮಾಣಕ್ಕೆ ಆರ್ಥಿಕ ಅಡಚಣೆಗಳು ಇರುವುದರಿಂದ, ಈಗಿನ ಅಣೆಕಟ್ಟನ್ನೇ ದುರಸ್ತಿಪಡಿಸಿ ಮುಂದಿನ ೫ ವರ್ಷಗಳ ಕಾಲ ಉಪಯೋಗಿಸುವಂತೆ ಸೂಚಿಸಿದೆ. ಆದರೆ ಈ ಸೂಚನೆಯನ್ನು ಜಾರಿಗೊಳಿಸಿದಲ್ಲಿ ೫ ವರ್ಷಗಳ ಬಳಿಕ ನೂತನ ಅಣೆಕಟ್ಟಿನ ನಿರ್ಮಾಣಕ್ಕೆ ಬೇಕಾಗುವ ೪ ವರ್ಷಗಳ ಅವಧಿಯಲ್ಲಿ ಮಂಗಳೂರಿನ ಜನತೆಗೆ ಬೇಕಾಗುವ ನೀರನ್ನು ಎಲ್ಲಿಂದ ಮತ್ತು ಹೇಗೆ ಪೂರೈಸುವುದೆಂದು ಈ ಸಮಿತಿಯು ತಿಳಿಸಿಲ್ಲ!. 

ಕಸಾಯಿಖಾನೆಗೆ ಹಣವಿಹುದೇ?

ನೂತನ ಅಣೆಕಟ್ಟಿನ ನಿರ್ಮಾಣಕ್ಕೆ ಅಥವಾ ಈಗಿನ ಅಣೆಕಟ್ಟಿನ ದುರಸ್ತಿಗೆ ತನ್ನ ಬಳಿ ಹಣವಿಲ್ಲ ಎನ್ನುವ ಕುಡ್ಸೆಂಪ್, ಈ ಯೋಜನೆಗಳ ಪ್ರಾರಂಭಿಕ ಹಂತದಲ್ಲಿ ನೂತನ ಕಸಾಯಿಖಾನೆಯ ನಿರ್ಮಾಣಕ್ಕಾಗಿ ಮೀಸಲಿಟ್ಟಿದ್ದ ೧ ಕೋಟಿ ರೂಪಾಯಿಗಳನ್ನು ಇದೀಗ ೧೪ ಕೋಟಿಗೆ ಹೆಚ್ಚಿಸಲು ಹಣದ ಕೊರತೆ ಬಾಧಿಸಲಿಲ್ಲವೇಕೆ?. ಅದೇ ರೀತಿಯಲ್ಲಿ ಮಹಾನಗರ ಪಾಲಿಕೆ ಅಪೇಕ್ಷಿಸಿದಂತೆ ಮಂಗಳೂರಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಹಾಗೂ ಕಸಾಯಿಖಾನೆಯ ನಿರ್ಮಾಣಕ್ಕಾಗಿ ಮೀಸಲಿಟ್ಟ ಹಣವನ್ನು ನೂತನ ಕಿಂಡಿ ಅಣೆಕಟ್ಟಿನ ನಿರ್ಮಾಣಕ್ಕೆ ಬಳಸಲು ಕುಡ್ಸೆಂಪ್ ಸಮ್ಮತಿಸುತ್ತಿಲ್ಲವೇಕೆ?. ಕುಡಿಯಲು ನೀರಿಲ್ಲದ ಊರಿಗೆ, ಪ್ರಾಣಿಗಳನ್ನು ಕಡಿಯಲು ಕಸಾಯಿಖಾನೆ ಏಕೆ?. ಇವೆಲ್ಲ ಪ್ರಶ್ನೆಗಳಿಗೆ ಇದೀಗ ಕುಡ್ಸೆಂಪ್ ಉತ್ತರವನ್ನು ನೀಡಬೇಕಾಗಿದೆ. 

ಈ ಯೋಜನೆಗೆ ಸಾಲವನ್ನು ನೀಡಿರುವ ಎ.ಡಿ.ಬಿ ಯ ನಿಯಮಗಳಂತೆ, ಯೋಜನೆಯ ಫಲಾನುಭವಿಯಾಗಿರುವ ಸ್ಥಳೀಯ ಸಂಸ್ಥೆಗಳು ತಮಗೆ ಅವಶ್ಯಕವೆನಿಸುವ ಯೋಜನೆಗಳಿಗೆ ಈ ಹಣವನ್ನು ಬಳಸಬಹುದಾಗಿದೆ. ಆದರೆ "ದೇವರು ಕೊಟ್ಟರೂ, ಪೂಜಾರಿ ಬಿಡ" ಎನ್ನುವಂತೆ, ಕುಡ್ಸೆಂಪ್ ಮಾತ್ರ ಇದಕ್ಕೆ ತಡೆಯೊಡ್ಡಿದೆ!. 

ಇವೆಲ್ಲಕ್ಕಿಂತಲೂ ಮಿಗಿಲಾಗಿ ೧೦೭ ಕೋಟಿ ರೂಪಾಯಿಗಳನ್ನು ವ್ಯಯಿಸಿ, ಮಂಗಳೂರಿನಾದ್ಯಂತ ನೀರು ಸರಬರಾಜು ವ್ಯವಸ್ಥೆಯನ್ನೇ ದ್ವಿಗುಣಗೊಳಿಸಿರುವ ಈ ಯೋಜನೆಯು ಸಫಲವಾಗಲು ಕೇವಲ ೨೦ ಕೋಟಿ ರೂ.ವೆಚ್ಚವಾಗಲಿರುವ ನೂತನ ಕಿಂಡಿ ಅಣೆಕಟ್ಟನ್ನು ನಿರ್ಮಿಸದಿರುವುದು, ನಿಜಕ್ಕೂ ಕುಡ್ಸೆಂಪ್ ನ ಮೂರ್ಖತನದ ಪರಮಾವಧಿ ಎನ್ನಬೇಕಷ್ಟೇ!. 

ಪರಿಹಾರವೇನು?

ಮಂಗಳೂರಿನ ಜನತೆಗೆ ಅತ್ಯವಶ್ಯಕವಾಗಿರುವ ನೂತನ ಕಿಂಡಿ ಅಣೆಕಟ್ಟಿನ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ಮಂಜೂರಾತಿಯನ್ನು ನೀಡಲೇಬೇಕು. ಹಣದ ಅಡಚಣೆ ಇದ್ದಲ್ಲಿ ಮಹಾನಗರ ಪಾಲಿಕೆಯ ಅಪೇಕ್ಷೆಯಂತೆ ಇತರ ಯೋಜನೆಗಳನ್ನು ರದ್ದುಪಡಿಸಿ, ಇದಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಅಣೆಕಟ್ಟಿನ ನಿರ್ಮಾಣಕ್ಕೆ ಬಳಸಬೇಕು. ಅನಿವಾರ್ಯ ಎನಿಸಿದಲ್ಲಿ ರಾಜ್ಯ ಮುಂಗಡಪತ್ರದಲ್ಲಿ ಈ ಯೋಜನೆಗಾಗಿ ಹಣವನ್ನು ನೀಡಬೇಕು. 

ನೂತನ ಅಣೆಕಟ್ಟಿನ ನಿರ್ಮಾಣಕ್ಕಾಗಿ ಜನಸಾಮಾನ್ಯರು ಜನಪ್ರತಿನಿಧಿಗಳ ಮೇಲೆ ಹಾಗೂ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಇದಕ್ಕಾಗಿ ಒತ್ತಡವನ್ನು ಹೇರಬೇಕು. ಪಕ್ಷಭೇದವನ್ನು ಮರೆತು ರಾಜಕೀಯ ನೇತಾರರು ಮತ್ತು ಜನಸಾಮಾನ್ಯರು ಒಂದಾಗಿ, ಈ ಯೋಜನೆಯ ಅನುಷ್ಠಾನಕ್ಕಾಗಿ ಅಹಿಂಸಾತ್ಮಕ ಚಳವಳಿಯನ್ನು ಆರಂಭಿಸಬೇಕು. ಪತ್ರಿಕೆಗಳು ಮತ್ತು ಇತರ ಮಾಧ್ಯಮಗಳು ಈ ಚಳವಳಿಗೆ ಬೆಂಬಲ ಮತ್ತು ಪ್ರಚಾರಗಳನ್ನು ನೀಡಬೇಕು. ಇವೆಲ್ಲ ಉಪಕ್ರಮಗಳು ಯಶಸ್ವಿಯಾದಲ್ಲಿ ಮಾತ್ರ ಮಂಗಳೂರಿನ ಜನತೆಯ ಕುಡಿಯುವ ನೀರಿನ ಕೊರತೆಯನ್ನು ನೀಗಿಸಬಲ್ಲ ಹೊಸದೊಂದು ಕಿಂಡಿ ಅಣೆಕಟ್ಟಿನ ನಿರ್ಮಾಣ ಅತ್ಯವಶ್ಯ ಕವೆಂದು ಸರ್ಕಾರಕ್ಕೆ ಮನವರಿಕೆಯಾಗುವುದರಲ್ಲಿ ಸಂದೇಹವಿಲ್ಲ.

ಡಾ.ಸಿ.ನಿತ್ಯಾನಂದ ಪೈ 
ಬಳಕೆದಾರರ ಹಿತರಕ್ಷಣಾ ವೇದಿಕೆ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೦-೦೩-೨೦೦೫ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 






No comments:

Post a Comment