Saturday, April 19, 2014

MISUSE OF REDCROSS LOGO





  "ರೆಡ್ ಕ್ರಾಸ್" ಲಾಂಛನದ ಅನಧಿಕೃತ ಬಳಕೆ ದಂಡನಾರ್ಹ !

ಹಳ್ಳಿಯಿಂದ ಆರಂಭಿಸಿ ದಿಲ್ಲಿಯ ತನಕ, ಪ್ರತಿಯೊಂದು ಕಡೆಯಲ್ಲೂ ನೀವು ದಿನನಿತ್ಯ ಕಾಣಬಹುದಾದ "ರೆಡ್ ಕ್ರಾಸ್" ಚಿಹ್ನೆಯು ವೈದ್ಯರು, ಆಸ್ಪತ್ರೆಗಳು ಅಥವಾ ಔಷದ ಅಂಗಡಿಗಳನ್ನು ಜ್ಞಾಪಿಸುವುದು ಸ್ವಾಭಾವಿಕ. ಇದಲ್ಲದೇ ಅಸಂಖ್ಯ ವೈದ್ಯರ ಸ್ವಂತ ವಾಹನಗಳು ಮತ್ತು ಚಿಕಿತ್ಸಾಲಯಗಳಲ್ಲಿ ರಾರಾಜಿಸುವ ಈ ಚಿಹ್ನೆಯು, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದೆ ಎಂದು ಅನೇಕರು ಭಾವಿಸಿದ್ದಾರೆ. ಆದರೆ ನಿಜ ಹೇಳಬೇಕಿದ್ದಲ್ಲಿ ಅಂತರ ರಾಷ್ಟ್ರೀಯ ರೆಡ್ ಕ್ರಾಸ್ ಸೊಸೈಟಿಯನ್ನು ಹೊರತುಪಡಿಸಿ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳು ಅಥವಾ ಸಂಸ್ಥೆಗಳು ಇದನ್ನು ಅನಧಿಕೃತವಾಗಿ ಬಳಸುವುದು ಕಾನೂನುಬಾಹಿರ ಎಂದಲ್ಲಿ ನೀವೂ ನಂಬಲಾರಿರಿ!. 

ಅಧಿಕೃತ ಲಾಂಛನ 

ಅಂತರ ರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಅಧಿಕೃತ ಲಾಂಚನವಾಗಿರುವ ರೆಡ್ ಕ್ರಾಸ್ ಚಿಹ್ನೆಯು ಸೇವೆ ಮತ್ತು ರಕ್ಷಣೆಗಳ ಸೂಚಕವೂ ಹೌದು. ೧೯೬೦ ರಲ್ಲಿ ಜರಗಿದ್ದ ಜಿನೀವಾ ಸಮ್ಮೇಳನದ ನಾಲ್ಕನೆಯ ಪರಿಚ್ಛೇದದಲ್ಲಿ ರಕ್ಷಣೆಯ ದ್ಯೋತಕವಾದ "ರೆಡ್ ಕ್ರಾಸ್' ಚಿಹ್ನೆಯನ್ನು ಅಂತರ ರಾಷ್ಟ್ರೀಯ ಮಾನವೀಯತಾ ಕಾನೂನಿನಂತೆ " ಅಂತರ ರಾಷ್ಟ್ರೀಯ ರೆಡ್ ಕ್ರಾಸ್ ಸೊಸೈಟಿ" ಗೆ ಪ್ರದಾನ ಮಾಡಲಾಗಿತ್ತು. ಇದೇ ಸಮ್ಮೇಳನದಲ್ಲಿ ಅಂಗೀಕರಿಸಿದ್ದ ೩೮ ನೆಯ ಮತ್ತು ೪೪ ನೆಯ ನಿರ್ಣಯಗಳಂತೆ, ಈ ಚಿಹ್ನೆಯನ್ನು ಯುದ್ಧಕಾಲದಲ್ಲಿ ಮಿಲಿಟರಿ ವೈದ್ಯಕೀಯ ಸೇವೆಗಳನ್ನು ನೀಡುವವರು ಬಳಸಬಹುದಾಗಿದೆ. ಅದೇ ರೀತಿಯಲ್ಲಿ ಶಾಂತಿ ಸಮಯದಲ್ಲಿ ಈ ಚಿಹ್ನೆಯು ರೆಡ್ ಕ್ರಾಸ್ ಅಭಿಯಾನವನ್ನು ಸೂಚಿಸುತ್ತದೆ. 

ಅನಧಿಕೃತ ಬಳಕೆ 

ನೀವು ಪ್ರತಿನಿತ್ಯ ಕಾಣುವ ಅಸಂಖ್ಯ ವೈದ್ಯರ ವಾಹನಗಳು, ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಎಂಬುಲೆನ್ಸ್, ಔಷದ ಅಂಗಡಿಗಳು, ವೈದ್ಯಕೀಯ ಪರೀಕ್ಷಾ ಕೇಂದ್ರಗಳು, ವೈದ್ಯಕೀಯ ಸಂಸ್ಥೆ- ಸಂಘಟನೆಗಳು ಮತ್ತು ಜುಜುಬಿ ತಲೆನೋವಿನ ಮಾತ್ರೆಗಳ ಹೊರಕವಚಗಳ ಮೇಲೂ ' ರೆಡ್ ಕ್ರಾಸ್' ಚಿಹ್ನೆ ರಾರಾಜಿಸುತ್ತಿರುವುದನ್ನು ನೀವೂ ಗಮನಿಸಿರಲೇಬೇಕು.ಆದರೆ ರೆಡ್ ಕ್ರಾಸ್ ಚಿಹ್ನೆಯ ದುರ್ಬಳಕೆಯೂ ದಂಡನಾರ್ಹ ಅಪರಾಧವೆಂದು, ಈ ಚಿಹ್ನೆಯನ್ನು ಬಳಸುತ್ತಿರುವ ಬಹುತೇಕ ಜನರಿಗೆ ತಿಳಿದಿಲ್ಲ!. 

ರೆಡ್ ಕ್ರಾಸ್ ಚಿಹ್ನೆಯ ದುರುಪಯೋಗದ ಪರಿಣಾಮವಾಗಿ ಇಂದು ಜನಸಾಮಾನ್ಯರು ಇದನ್ನು ಪ್ರಥಮ ಚಿಕಿತ್ಸೆ ಅಥವಾ ವೈದ್ಯಕೀಯ ಚಿಕಿತ್ಸೆಯ ಸಂಕೇತವೆಂದೇ  ತಪ್ಪಾಗಿ ಅರ್ಥೈಸಿಕೊಂಡಿರುವುದರಲ್ಲಿ ಆಶ್ಚರ್ಯವೇನಿಲ್ಲ. ಏಕೆಂದರೆ ನೀವು ದಿನನಿತ್ಯ ಪಯಣಿಸುವ ಆಟೋರಿಕ್ಷಾ ಅಥವಾ ಬಸ್ಸುಗಳಲ್ಲಿ ಕಡ್ಡಾಯವಾಗಿ ಇರಿಸಲೇ ಬೇಕಾದ " ಪ್ರಥಮ ಚಿಕಿತ್ಸೆ" ಯ ಪೆಟ್ಟಿಗೆಯ ಮೇಲೂ ರೆಡ್ ಕ್ರಾಸ್ ಚಿಹ್ನೆಯನ್ನು ಮುದ್ರಿಸಲಾಗುತ್ತಿದೆ. ಇವೆಲ್ಲ ಕಾರಣಗಳಿಂದಾಗಿ ಇದೀಗ ಅಂತರ ರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯು ತನ್ನ ಲಾಂಛನದ ಅನಧಿಕೃತ ಬಳಕೆಯ ವಿರುದ್ಧ ವೈದ್ಯಕೀಯ ಕ್ಷೇತ್ರ ಹಾಗೂ ಸಾರ್ವಜನಿಕರಿಗೆ ಸಮರ್ಪಕವಾದ ಮಾಹಿತಿಯನ್ನು ನೀಡಿ, ಅವರಲ್ಲಿರಬಹುದಾದ ತಪ್ಪುಕಲ್ಪ್ಪನೆಗಳನ್ನು ನಿವಾರಿಸುವತ್ತ ಗಂಭೀರ ಪ್ರಯತ್ನಗಳನ್ನು ನಡೆಸುತ್ತಿದೆ.

ವಿಶೇಷ ಅಭಿಯಾನ  

ಈ ಬಗ್ಗೆ ವಿಶೇಷ ಅಭಿಯಾನವನ್ನು ಕೈಗೊಂಡಿರುವ ರೆಡ್ ಕ್ರಾಸ್ ಸಂಸ್ಥೆಯು ಇದೀಗ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನುಕ್ರಮಗಳನ್ನು ಕೈಗೊಳ್ಳಲು ಸಮರ್ಥನೀಯ ಕಾರಣಗಳಿವೆ ಎಂದು ಸಂಸ್ಥೆಯ ಪ್ರತಿನಿಧಿಯೊಬ್ಬರು ಸ್ಪಷ್ಟೀಕರಿಸಿದ್ದಾರೆ. ಅವರ ವಾದದಂತೆ "ರೆಡ್ ಕ್ರಾಸ್" ಲಾಂಛನವನ್ನು ಪ್ರದರ್ಶಿಸುವ ತಮ್ಮ ಸಂಸ್ಥೆಯ ಅಧಿಕೃತ ವಾಹನ ಹಾಗೂ ಅನಧಿಕೃತವಾಗಿ ಈ ಲಾಂಛನವನ್ನು ಬಳಸುವ ಇತರ ವಾಹನಗಳ ನಡುವಿನ ವ್ಯತ್ಯಾಸವನ್ನು ಅರಿಯದ ಜನಸಾಮಾನ್ಯರಿಗೆ ಮತ್ತು ತಮ್ಮ ಸಂಸ್ಥೆಗೂ, ಕೆಲ ಸಂದರ್ಭಗಳಲ್ಲಿ ಗಂಭೀರ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಇದರಿಂದಾಗಿ ರೆಡ್ ಕ್ರಾಸ್ ಸಂಸ್ಥೆಯು ಅವಶ್ಯಕತೆ ಇರುವವರಿಗೆ ತಮ್ಮ ಸೇವೆಯನ್ನು ನೀಡಲು ತೊಡಕಾಗುವ ಸಾಧ್ಯತೆಗಳೂ ಇವೆ. ಜೊತೆಗೆ ಕಳೆದ ನಾಲ್ಕು ವರ್ಷಗಳಿಂದ ತಮ್ಮ ಲಾಂಛನದ ದುರ್ಬಳಕೆಯನ್ನು ತಡೆಗಟ್ಟಲು ಪ್ರಾಮಾಣಿಕ ಪ್ರಯತ್ನವನ್ನು ನಡೆಸಿದರೂ, ಅಪೇಕ್ಷಿತ ಪರಿಣಾಮ ದೊರೆಯದೆ ಇರುವುದು ಕೂಡಾ ಇದೀಗ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಲು ಪ್ರಮುಖ ಕಾರಣವೆನಿಸಿದೆ. ಅಂತೆಯೇ ಈ ಲಾಂಛನವನ್ನು ಭಯೋತ್ಪಾದನೆಗಾಗಿ ದುರುಪಯೋಗಪಡಿಸಿರುವ ಅನೇಕ ಪ್ರಕರಣಗಳನ್ನೂ ದಾಖಲಿಸಲಾಗಿದೆ. 

ವೈದ್ಯರು, ಆಸ್ಪತ್ರೆಗಳು, ಔಷದ ಅಂಗಡಿಗಳು, ಎಂಬುಲೆನ್ಸ್ ಮತ್ತಿತರ ವೈದ್ಯಕೀಯ ಸೇವೆಗಳನ್ನು ಒದಗಿಸುವವರಿಗೆ ರೆಡ್ ಕ್ರಾಸ್ ಚಿಹ್ನೆಯನ್ನು ಬಳಸದಂತೆ ಈಗಾಗಲೇ ಸೂಚನೆಯನ್ನು ನೀಡಲಾಗಿದೆ. ಅಂತೆಯೇ ಈ ಚಿಹ್ನೆಯನ್ನು ಬಳಸುತ್ತಿದ್ದವರಿಗೆ ನೂತನ ಹಾಗೂ ವಿಭಿನ್ನ ಚಿಹ್ನೆಗಳನ್ನು ನೀಡಿದ್ದು, ಇವುಗಳನ್ನೇ ಕಡ್ಡಾಯವಾಗಿ ಬಳಸುವಂತೆ ಆಗ್ರಹಿಸಲಾಗಿದೆ. ಇವೆಲ್ಲಾ ಕ್ರಮಗಳನ್ನು ಕೈಗೊಂಡ ಬಳಿಕವೂ ತನ್ನ ಅಧಿಕೃತ ಲಾಂಛನದ ದುರುಪಯೋಗ ಮುಂದುವರೆದಲ್ಲಿ. ಮುಂದಿನ ದಿನಗಳಲ್ಲಿ ರೆಡ್ ಕ್ರಾಸ್ ಸಂಸ್ಥೆಯು ತನ್ನ ಅಭಿಯಾನವನ್ನು ಇನ್ನಷ್ಟು ತೀವ್ರಗೊಳಿಸಲಿದೆ. 

ರೆಡ್ ಕ್ರಾಸ್ ಚಿಹ್ನೆಯನ್ನು ತಮ್ಮ ವಾಹನ ಅಥವಾ ವೃತ್ತಿ- ವಾಣಿಜ್ಯ ಕೇಂದ್ರಗಳಲ್ಲಿ ಬಳಸುವ ಖಾಸಗಿ ವೈದ್ಯರು, ವಾಹನಗಳು ಅಥವಾ ಔಷದ ಅಂಗಡಿಗಳಲ್ಲಿ ಇರಬಹುದಾದ ಸಮಸ್ತ ವಸ್ತುಗಳನ್ನು ಮುಟ್ಟುಗೋಲು ಹಾಕುವುದರೊಂದಿಗೆ, ಕನಿಷ್ಠ ೩,೫೦೦ ರೂ. ದಂಡವನ್ನು ವಿಧಿಸಲು ಕಾನೂನಿನಂತೆ ಅವಕಾಶವಿದೆ. ಪ್ರಸ್ತುತ ಈ ದಂಡದ ಮೊತ್ತವನ್ನು ಇನ್ನಷ್ಟು ಹೆಚ್ಚಿಸುವಂತೆ ಸಂಸ್ಥೆಯು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. 

ವೈದ್ಯಕೀಯ ಕ್ಷೇತ್ರಕ್ಕೆ ಅವಶ್ಯಕವೆನಿಸುವ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿರುವ ಎಲ್ಲರಿಗೂ ಈ ಬಗ್ಗೆ ಮಾಹಿತಿಯನ್ನು ನೀಡಲು ಕಳೆದ ತಿಂಗಳು ಬೆಂಗಳೂರಿನಲ್ಲಿ  ವಿಚಾರಸಂಕಿರಣವೊಂದನ್ನು ರೆಡ್ ಕ್ರಾಸ್ ಸಂಸ್ಥೆಯು ಏರ್ಪಡಿಸಿತ್ತು.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೨-೦೯- ೨೦೦೪ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ. 



No comments:

Post a Comment