Friday, April 4, 2014

article no.150- Air pollution




  ವಾಹನಗಳಿಂದ ವಾಯುಮಾಲಿನ್ಯ: ಆರೋಗಕ್ಕೆ ಅಪಾಯ !

ಭಾರತದ ಜನಸಂಖ್ಯೆಯು ೧೨೦ ಕೋಟಿಯ ಗಡಿಯನ್ನು ದಾಟಿದ್ದು, ಪ್ರಪಂಚದಲ್ಲೇ ಅತಿ ಹೆಚ್ಚು ಜನಸಂಖ್ಯೆ ಇರುವ ಚೀನಾ ದೇಶವನ್ನು ಹಿಂದಿಕ್ಕುವತ್ತ ದಾಪುಗಾಲು ಹಾಕುತ್ತಿದೆ. ದೇಶದ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುತ್ತಲೇ ಇರುವ ವಾಹನಗಳ ಸಂಖ್ಯೆಯು, ಬಹುತೇಕ ನಗರ- ಪಟ್ಟಣಗಳಲ್ಲಿ ವಾಯುಮಾಲಿನ್ಯದ ಸಮಸ್ಯೆಗೆ ಕಾರಣವೆನಿಸುತ್ತಿದೆ. 

ಕೇಂದ್ರ ಸರಕಾರದ ಅಂಕಿ ಅಂಶಗಳಂತೆ ಗಣನೀಯ ಪ್ರಮಾಣದ ಭಾರತೀಯರು ಬಡತನದ ರೇಖೆಗಿಂತ ಕೆಳಗಿದ್ದಾರೆ. ಆದರೆ ತಮ್ಮ ಅನುಕೂಲ ಮತ್ತು ಆದಾಯಗಳಿಗೆ ಅನುಗುಣವಾದ ದ್ವಿಚಕ್ರ ಅಥವಾ ಚತುಶ್ಚಕ್ರ ವಾಹನವನ್ನು ಹೊಂದಿರುವುದು ದೇಶದ ತಜೆಗಳಿಗೆ ಪ್ರತಿಷ್ಠೆಯ ಸಂಕೇತವೆನಿಸಿದೆ. ಸಮರ್ಪಕವಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅಭಾವವು ಇದಕ್ಕೊಂದು ಕಾರಣವಾಗಿದ್ದರೂ, ಕಳೆದ ಒಂದೆರಡು ದಶಕಗಳಿಂದ ದುಬಾರಿ ಬೆಲೆಯ ಅತ್ಯಾಧುನಿಕ ವಾಹನಗಳನ್ನು ಖರೀದಿಸುವ ವ್ಯಾಮೋಹವು ಭಾರತೀಯರಲ್ಲಿ ಹೆಚ್ಚುತ್ತಿದೆ. ಹಾಗೂ ಇದೇ ಕಾರಣದಿಂದಾಗಿ ದೇಶದ ಪ್ರತಿಯೊಂದು ನಗರ- ಪಟ್ಟಣಗಳಲ್ಲಿ ಅನಿಯಂತ್ರಿತವಾಗಿ ವೃದ್ಧಿಸುತ್ತಿರುವ ವಾಯುಮಾಲಿನ್ಯದಿಂದಾಗಿ, ಜನಸಾಮಾನ್ಯರ ಆರೋಗ್ಯದ ಸಮಸ್ಯೆಗಳ ಪ್ರಮಾಣವೂ ಅನಿಯಂತ್ರಿತವಾಗಿ ಹೆಚ್ಚುತ್ತಿದೆ. 

ಈ ರೀತಿಯ ಆರೋಗ್ಯದ ಸಮಸ್ಯೆಗಳಲ್ಲಿ ಶೇ.೬೦ ರಷ್ಟು ಕಾಯಿಲೆಗಳಿಗೆ ವಾಹನಗಳಿಂದ ಸಂಭವಿಸುವ ವಾಯುಮಾಲಿನ್ಯವೇ ಕಾರಣವೆನಿಸಿದೆ. ನಮ್ಮ ಮುಂದಿನ ಸಂತತಿಯನ್ನು ಶಾಪದೋಪಾದಿಯಲ್ಲಿ ಪೀಡಿಸಬಲ್ಲ ಈ ಗಂಭೀರ ಸಮಸ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ಕೇಂದ್ರ ಸರಕಾರವು ದಿಟ್ಟ ಹೆಜ್ಜೆಯನ್ನಿಡಲು ಹಿಂಜರಿಯುತ್ತಿದೆ. ಅದೇ ರೀತಿಯಲ್ಲಿ ನೂತನ ವಾಹನಗಳನ್ನು ಖರೀದಿಸಿ, ಅನಾವಶ್ಯಕ ಹಾಗೂ ಅತಿಯಾಗಿ ಬಳಸುವ ಭಾರತೀಯರ ಕೆಟ್ಟ ಹವ್ಯಾಸಕ್ಕೆ ಕಡಿವಾಣವನ್ನು ತೊಡಿಸುವವರೇ ಇಲ್ಲದಂತಾಗಿದೆ!. 

ಅಸಾಮಾನ್ಯ ಆರೋಗ್ಯದ ಸಮಸ್ಯೆಗಳು 

ಪ್ರಸ್ತುತ ಭಾರತದ ಬಹುತೇಕ ನಗರ-ಪಟ್ಟಣಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಅನೇಕ ವಿಧದ ಅಸಾಮಾನ್ಯ ಆರೋಗ್ಯದ ಸಮಸ್ಯೆಗಳಿಗೆ ವಾಹನಗಳಿಂದ ಸಂಭವಿಸುತ್ತಿರುವ ವಾಯುಮಾಲಿನ್ಯವೇ ಕಾರಣವೆಂದು ಸಾಬೀತಾಗಿದೆ. ಇವುಗಳಲ್ಲಿ ಪುಟ್ಟ ಮಕ್ಕಳನ್ನು ಅತಿಯಾಗಿ ಕಾಡುವ ಶೀತ- ನೆಗಡಿ, ಸದಾ ಮೂಗಿನಿಂದ ಸಿಂಬಳ ಸುರಿಯುತ್ತಿರುವುದು, ಅಲರ್ಜಿಯಿಂದ ತಲೆದೋರುವ ಕಣ್ಣಿನ ಉರಿಯೂತ, ಕೆಲವಿಧದ ಚರ್ಮರೋಗಗಳು,ಆಸ್ತಮಾ, ಕಿವಿ ಮತ್ತು ಗಂಟಲಿನ ಸೋಂಕುಗಳು, ನ್ಯುಮೋನಿಯ ಮತ್ತು ಶ್ವಾಸಕೋಶಗಳ ಉರಿಯೂತಗಳಂತಹ ಸಮಸ್ಯೆಗಳು ವಾಯುಮಾಲಿನ್ಯದಿಂದಾಗಿಯೇ ಉದ್ಭವಿಸುತ್ತಿರುವುದಾಗಿ ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಿದೆ. ಕಳೆದ ಒಂದು ದಶಕದಲ್ಲಿ ಇಂತಹ ಸಮಸ್ಯೆಗಳ ಪ್ರಮಾಣವು ಶೇ. ೧೦ ರಿಂದ ೧೫ ರಷ್ಟು ಹೆಚ್ಚಿದೆ. ವಿಶೇಷವಾಗಿ ಎಳೆಯ ಮಕ್ಕಳನ್ನು ಪೀಡಿಸುವ ಇಂತಹ ಸಮಸ್ಯೆಗಳು, ಇಳಿ ವಯಸ್ಸಿನವರನ್ನೂ ಬಾಧಿಸದೇ ಬಿಡುವುದಿಲ್ಲ. ಸಾಮಾನ್ಯವಾಗಿ ಐದು ವರ್ಷ ವಯಸ್ಸಿಗಿಂತ ಕೆಳಗಿನ ಮಕ್ಕಳು ವಾಯುಮಾಲಿನ್ಯದ ಸಮಸ್ಯೆಗೆ ಸುಲಭದಲ್ಲೇ ಈಡಾಗುವುದರೊಂದಿಗೆ, ಪುಟ್ಟ ಕಂದಮ್ಮಗಳ ಅಕಾಲಿಕ ಮರಣಕ್ಕೂ ಕಾರಣವೆನಿಸುತ್ತಿದೆ. ಇದಲ್ಲದೆ ವಾಯುಮಾಲಿನ್ಯದ ದುಷ್ಪರಿಣಾಮಗಳು ಚಿಕ್ಕ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗಳ ಮೇಲೂ ಪ್ರಭಾವ ಬೀರುತ್ತವೆ. 

ಅನೇಕ ಗರ್ಭಿಣಿಯರಲ್ಲಿ ಅವಧಿಗಿಂತ ಮುನ್ನ ಹೆರಿಗೆಯಾಗುವುದು, ನವಜಾತ ಶಿಶುಗಳಲ್ಲಿ ವಂಶವಾಹಿನಿಗಳು ಮತ್ತು ವರ್ಣತಂತುಗಳ ಅಸಾಮಾನ್ಯತೆಗಳು ತಲೆದೋರಲು, ವಾಹನಗಳಿಂದ ಸಂಭವಿಸುವ ವಾಯುಮಾಲಿನ್ಯವೂ ಕಾರಣವೆನಿಸಬಲ್ಲದೆಂದು ತಿಳಿದುಬಂದಿದೆ. 

ಇಷ್ಟು ಮಾತ್ರವಲ್ಲ, ಇತ್ತೀಚಿನ ಕೆಲವರ್ಷಗಳಿಂದ ಯೌವ್ವನಸ್ಥರು ಹಾಗೂ ಮಧ್ಯವಯಸ್ಸಿನವರಲ್ಲಿ ಪತ್ತೆಯಾಗುತ್ತಿರುವ ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಕ್ಯಾನ್ಸರ್ ಗಳಂತಹ ಗಂಭೀರ ಮತ್ತು ಮಾರಕ ವ್ಯಾಧಿಗಳ ಸಂಭಾವ್ಯತೆ ಹೆಚ್ಚುತ್ತಿರಲು ವಾಯುಮಾಲಿನ್ಯವೇ ಕಾರಣ ವೆನಿಸುತ್ತಿದೆ. 

ಉದಾಹರಣೆಗೆ ದೇಶದ ರಾಜಧಾನಿಯಾಗಿರುವ ದೆಹಲಿಯಲ್ಲಿ ಪ್ರತಿವರ್ಷ ೧೩ ಸಾವಿರಕ್ಕೂ ಅಧಿಕ ವಿವಿಧ ರೀತಿಯ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಇವುಗಳಲ್ಲಿ ಶೇ.೧೦ ರಷ್ಟು ಶ್ವಾಸಕೋಶಗಳ ಕ್ಯಾನ್ಸರ್ ಪ್ರಕರಣಗಳೇ ಆಗಿವೆ. ಅನುಭವೀ ಕ್ಯಾನ್ಸರ್ ತಜ್ಞರೊಬ್ಬರ ಅಭಿಪ್ರಾಯದಂತೆ ಶ್ವಾಸಕೋಶಗಳ ಕ್ಯಾನ್ಸರ್ ಪೀಡಿತರಲ್ಲಿ ಶೇ.೯೦ ರಷ್ಟು ಧೂಮಪಾನಿಗಳೇ ಆಗಿರುತ್ತಾರೆ. ಆದರೆ ಇತ್ತೀಚೆಗೆ ಸುಮಾರು ೬೦೦ ಮಂದಿ ಶ್ವಾಸಕೋಶಗಳ ಕ್ಯಾನ್ಸರ್ ಪೀಡಿತರ ಬಗ್ಗೆ ನಡೆಸಿದ್ದ ಅಧ್ಯಯನದ ಪರಿಣಾಮವಾಗಿ ತಿಳಿದುಬಂದಂತೆ, ಇವರಲ್ಲಿ ಶೇ. ೩೦ ಮಂದಿ ರೋಗಿಗಳು ತಮ್ಮ ಜೀವಿತಾವಧಿಯಲ್ಲಿ ಧೂಮಪಾನವನ್ನೇ ಮಾಡುತ್ತಿರಲಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿತ್ತು!. ಅಂತೆಯೇ ಈ ಮಾರಕ ಕಾಯಿಲೆಗೆ ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವೇ ಕಾರಣವೆಂದು ಸಾಬೀತಾಗಿತ್ತು. 

ಕೆಲವೊಂದು ವೈದ್ಯಕೀಯ ಅಧ್ಯಯನಗಳ ವರದಿಗಳು ಹೊರಗೆಡವಿದಂತೆ, ವಾಹನಗಳಿಂದ ಸಂಭವಿಸುವ ವಾಯುಮಾಲಿನ್ಯದಿಂದಾಗಿ ಸ್ತನ, ಗರ್ಭಕೋಶದ ಕೊರಳು ಮತ್ತು ಪ್ಲೀಹದ ಕ್ಯಾನ್ಸರ್ ಪ್ರಕರಣಗಳು ಆಂಶಿಕವಾಗಿ ಹೆಚ್ಚುತ್ತಿರಲು, ವಾಯುಮಾಲಿನ್ಯವೇ ಮೂಲ ಕಾರಣವೆಂದು ಪತ್ತೆಯಾಗಿದೆ. ಅದರಲ್ಲೂ ಮಹಾನಗರಗಳಲ್ಲಿ ಹೆಚ್ಚುತ್ತಿರುವ ವಾಹನಗಳ ದಟ್ಟಣೆ ಮತ್ತು ತತ್ಪರಿಣಾಮವಾಗಿ ದಿನನಿತ್ಯ ಸಂಭವಿಸುವ ಸಂಚಾರ ಸಮಸ್ಯೆಗಳು ಮತ್ತು ಟ್ರಾಫಿಕ್ ಜಾಮ್ ಗಳಿಂದಾಗಿ, ವಾಹನಗಳು ಉಗುಳುವ ಹೊಗೆಯ ಪ್ರಮಾಣವು ಇನ್ನಷ್ಟು ಹೆಚ್ಚಾಗುತ್ತದೆ. ಹಾಗೂ ಇದೇ ಕಾರಣದಿಂದಾಗಿ ಮಹಾನಗರಗಳ ನಿವಾಸಿಗಳಲ್ಲಿ ಅಸಾಮಾನ್ಯ ಹಾಗೂ ಗಂಭೀರ ಮತ್ತು ಮಾರಕ ಕಾಯಿಲೆಗಳ ಸಂಭಾವ್ಯತೆಯ ಪ್ರಮಾಣಗಳು ನಿಧಾನವಾಗಿ ಆದರೆ ನಿಶ್ಚಿತವಾಗಿ ಹೆಚ್ಚುತ್ತಲೇ ಇವೆ. 

ಈ ಸಮಸ್ಯೆಗೆ ಸುಲಭದಲ್ಲೇ ಈಡಾಗಬಲ್ಲ ವ್ಯಕ್ತಿಗಳಲ್ಲಿ ಪಾದಚಾರಿಗಳು, ಬೀದಿಬದಿ ವ್ಯಾಪಾರಿಗಳು, ಸಂಚಾರ ವಿಭಾಗದ ಆರಕ್ಷಕರು, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸವಾರರು, ರಸ್ತೆಯ ಅಂಚಿನಲ್ಲಿರುವ ವಸತಿ ಹಾಗೂ ವಾಣಿಜ್ಯ ಕಟ್ಟಡಗಳ ನಿವಾಸಿಗಳು ಹಾಗೂ ಗ್ರಾಹಕರು ಮತ್ತು  ಭಿಕ್ಷುಕರು ಸೇರಿದಂತೆ, ದಿನನಿತ್ಯ ಹಲವಾರು ಗಂಟೆಗಳ ಕಾಲ ಬೀದಿ ಅಥವಾ ಬೀದಿಬದಿಗಳಲ್ಲಿ ಇರುವ ಮತ್ತು ಅಡ್ಡಾಡುವ ಅಸಂಖ್ಯ ಜನರು ಸೇರಿದ್ದಾರೆ. "ಕೆಟ್ಟು ಪಟ್ಟಣ ಸೇರು" ಎನ್ನುವ ಆಡುಮಾತಿಗೆ ವ್ಯತಿರಿಕ್ತವಾಗಿ ಮಹಾನಗರಗಳ ವ್ಯಾಮೋಹದಿಂದ ವಲಸೆ ಹೋಗುವ ಜನಸಾಮಾನ್ಯರು, ಪಟ್ಟಣವನ್ನು ಸೇರಿ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ!. 

ವಾಯುಮಾಲಿನ್ಯದಿಂದ ಹೃದಯಾಘಾತ?

ವಾಯುಮಾಲಿನ್ಯದಿಂದಾಗಿ ಹೃದಯಾಘಾತಗಳು ಸಂಭವಿಸುವ ವಿಚಾರವನ್ನು ಪತ್ತೆಹಚ್ಚಿರುವ ವೈದ್ಯಕೀಯ ಅಧ್ಯಯನದ ವರದಿಯೊಂದು "ಲ್ಯಾನ್ಸೆಟ್ ಜರ್ನಲ್" ನಲ್ಲಿ ಇತ್ತೀಚಿಗೆ ಪ್ರಕಟಗೊಂಡಿತ್ತು. ಈ ವೈದ್ಯರ ತಂಡವು ಇದಕ್ಕೆ ಸಂಬಂಧಿಸಿದ ಇತರ ೩೬ ಅಧ್ಯನಯಗಳ ವರದಿಗಳನ್ನೂ ಪರಿಗಣಿಸಿ, ಕೂಲಂಕುಶವಾಗಿ ಪರಿಶೀಲಿಸಿದ ಬಳಿಕ ಹೃದಯಾಘಾತಕ್ಕೆ ಕಾರಣವೆನಿಸಬಲ್ಲ ಅಪಾಯಕಾರಿ ಅಂಶಗಳನ್ನು ಗುರುತಿಸಿತ್ತು. ಬಂದೂಕಿನ "ಕುದುರೆ" ಯನ್ನು ಒತ್ತಿದೊಡನೆ ಗುಂಡು ಸಿಡಿಯುವಂತೆಯೇ, ಹೃದಯಾಘಾತಕ್ಕೆ ಕಾರಣವೆನಿಸಬಲ್ಲ ಪ್ರಮುಖ ಅಂಶಗಳ ಪಟ್ಟಿಯಲ್ಲಿ, ತೀವ್ರವಾದ ಸಿಟ್ಟು (ಮುಂಗೋಪ), ಕೊಕೇನ್ ನಂತಹ ಅಪಾಯಕಾರಿ ಮಾದಕ ದ್ರವ್ಯಗಳ ಸೇವನೆ, ಧೂಮಪಾನ, ಶ್ವಾಸಕೋಶಗಳ ಸೋಂಕು, ಅತಿಯಾದ ಶಾರೀರಿಕ ಶ್ರಮ, ರತಿಕ್ರೀಡೆ, ಮದ್ಯಪಾನಗಳಂತಹ ಅಂಶಗಳೊಂದಿಗೆ, ವಾಯುಮಾಲಿನ್ಯಕ್ಕೂ ಪ್ರಮುಖ ಸ್ಥಾನ ದೊರೆತಿತ್ತು!.

ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ವಾಯುಮಾಲಿನ್ಯವು ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಅಂಶವೆನಿಸಿದೆ. ಹಾಗೂ ಇದರಿಂದಾಗಿ ಪ್ರಪಂಚದಾದ್ಯಂತ ಸುಮಾರು ೨ ದಶಲಕ್ಷ ಜನರು ಅಕಾಲಿಕ ಮರಣಕ್ಕೆ ಈಡಾಗುತ್ತಿದ್ದಾರೆ. ಇದೇ ಕಾರಣದಿಂದಾಗಿ ಅತ್ಯಧಿಕ ವಾಹನಗಳ ನಿಬಿಡತೆ ಇರುವ ರಸ್ತೆಗಳ ೫೦೦ ಮೀಟರ್ ವ್ಯಾಪ್ತಿಯಲ್ಲಿ ದುಡಿಯುವ ಅಥವಾ ವಾಸ್ತವ್ಯವಿರುವ ಲಕ್ಷಾಂತರ ಜನರು, ಅನೇಕ ವಿಧದ ಗಂಭೀರ ಹಾಗೂ ಮಾರಕ ವ್ಯಾಧಿಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಘೋಷಿಸಿದೆ. 

ಗತವರ್ಷದಲ್ಲಿ ಪ್ರಕಟವಾಗಿದ್ದ ಅಧ್ಯಯನದ ವರದಿಯೊಂದರಂತೆ ಏಷ್ಯಾ ಖಂಡದ ಬಹುತೇಕ ನಗರಗಳಲ್ಲಿನ ಗಾಳಿಯ ಶುದ್ಧಾಶುದ್ಧತೆಯ ಮಟ್ಟವು, ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಸಿರುವ ಮಾನದಂಡಗಳಿಗೆ ಅನುಗುಣವಾಗಿಲ್ಲ. ಈ ನಗರಗಳಲ್ಲಿನ ಗಾಳಿಯಲ್ಲಿರುವ ಅಪಾಯಕಾರಿ ಹಾಗೂ ವಿಷಕಾರಕ ಪ್ರದೂಷಕಗಳಿಂದಾಗಿ ಸುಮಾರು ೫.೩೦ ಲಕ್ಷ ಅಮಾಯಕರು ಮರಣಕ್ಕೆ ಈಡಾಗುತ್ತಿದ್ದಾರೆ. 

ಅದೇನೇ ಇರಲಿ, ಈ ಗಂಭೀರ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಮರೋಪಾದಿಯಲ್ಲಿ ಕಾರ್ಯತತ್ಪರವಾಗಬೇಕಿದೆ.ಜೊತೆಗೆ ಈ ನಿಟ್ಟಿನಲ್ಲಿ ಸರಕಾರವು ತಲೆಯಲಿರುವ ನಿರ್ಧಾರವನ್ನು ಯಶಸ್ವಿಗೊಳಿಸಲು, ದೇಶದ ಪ್ರಜೆಗಳ ಮನಸ್ಪೂರ್ವಕ ಸಹಕಾರದ ಅವಶ್ಯಕತೆಯಿದೆ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು.

ಉದಯವಾಣಿ ಪತ್ರಿಕೆಯ ದಿ. ೧೪-೧೦-೨೦೧೧ ರ ಸಂಚಿಕೆಯ ಪುರುಷ ಸಂಪದದಲ್ಲಿ ಪ್ರಕಟಿತ ಲೇಖನ.



No comments:

Post a Comment