Friday, April 18, 2014

POOJYA DEVALADA MUNDE TYAAJYAGALA SAAMRAAJYA !




 ಪೂಜ್ಯ ದೇವಳದ ಮುಂದೆ ತ್ಯಾಜ್ಯಗಳ ಸಾಮ್ರಾಜ್ಯ !

ಮುತ್ತು ಬೆಳೆಯುತ್ತಿದ್ದ ಊರೆಂದೇ ಖ್ಯಾತಿವೆತ್ತ ಪುತ್ತೂರಿನ ಮತ್ತು ಸುತ್ತಮುತ್ತಲ ಹತ್ತಾರು ಊರುಗಳ ಆರಾಧ್ಯದೈವ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯು ಬಹಳ ಸಂಭ್ರಮ- ಸಡಗರಗಳಿಂದ ಜರಗುತ್ತದೆ. ಗತವರ್ಷದಲ್ಲಿ ನೆರವೇರಿದ್ದ ಬ್ರಹ್ಮಕಲಶ ಕಾರ್ಯಕ್ರಮದಿಂದಾಗಿ ಮೇ ತಿಂಗಳಿನಲ್ಲಿ ಜರಗಿದ್ದುದನ್ನು ಹೊರತುಪಡಿಸಿದಲ್ಲಿ, ಶ್ರೀ ದೇವರ ಜಾತ್ರೆಯು ಅನಾದಿಕಾಲದಿಂದಲೂ ಎಪ್ರಿಲ್ ತಿಂಗಳಿನ ೧೭ ರಂದೇ  ಜರಗುತ್ತದೆ. ಇತ್ತೀಚಿನ ಕೆಲವರ್ಷಗಳಿಂದ ಸುಮಾರು ಒಂದು ಲಕ್ಷಕ್ಕೂ ಅಧಿಕ ಭಗವದ್ಭಕ್ತರು ಪಾಲ್ಗೊಳ್ಳುವ ಈ ವರ್ಷಾವಧಿ ಜಾತ್ರೆಯಂದು, ರಥೋತ್ಸವ ನಡೆಯುವ ಬಾಕಿಮಾರು ಗದ್ದೆಯು ಜನರಿಂದ ಕಿಕ್ಕಿರಿದು ತುಂಬಿರುತ್ತದೆ. ಅಂತೆಯೇ ಮರುದಿನ ಬಾಕಿಮಾರು ಗದ್ದೆಯ ಉದ್ದಗಲಕ್ಕೂ ಅಗಾಧ ಪ್ರಮಾಣದ ತ್ಯಾಜಗಳು ಅಲ್ಲಲ್ಲಿ  ರಾಶಿಯಾಗಿ ಅಥವಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. 

ಪುತ್ತೂರು ಮತ್ತು ಸುತ್ತುಮುತ್ತಲ ಹತ್ತಾರು ಊರುಗಳ ಜನರು ಶ್ರದ್ಧಾಭಕ್ತಿಪೂರ್ವಕವಾಗಿ ಆರಾಧಿಸುವ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯನ್ನು ಪ್ರವೇಶಿಸುವಾಗ, ಮಡಿ ಮೈಲಿಗೆಗಳತ್ತ ಗಮನಹರಿಸಿ ಸ್ನಾನವನ್ನು ಮಾಡಿ ಶುಚಿರ್ಭೂತರಾಗಿ ಬರುವ ಭಕ್ತರು, ರಥೋತ್ಸವ ನಡೆಯುವ ಗದ್ದೆಯನ್ನು ಪ್ರವೇಶಿಸಿದೊಡನೆ ಇವೆಲ್ಲವನ್ನೂ ಮರೆತುಬಿಡುತ್ತಾರೆ. ಪ್ರಾಯಶಃ ಇದೇ ಕಾರಣದಿಂದಾಗಿ ಜಾತ್ರೆಯ ಮರುದಿನ ಬಾಕಿಮಾರು ಗದ್ದೆಯಾದ್ಯಂತ ಅಗಾಧಪ್ರಮಾಣದ ವೈವಿಧ್ಯಮಯ ತ್ಯಾಜ್ಯಗಳ ಸಾಮ್ರಾಜ್ಯವು ಕಣ್ಣುಹಾಯಿಸಿದಲ್ಲೆಲ್ಲಾ ಕಾಣಸಿಗುತ್ತದೆ. ಆದರೆ ಇದಕ್ಕೊಂದು ನಿರ್ದಿಷ್ಟ ಕಾರಣವೂ ಇದೆ. 

ಖಾದ್ಯಪೇಯಗಳಿಂದ ತ್ಯಾಜ್ಯ 

ಜಾತ್ರೆಯ ಸಂದರ್ಭದಲ್ಲಿ ಶ್ರೀ ದೇವಳದ ಮುಂಭಾಗದಲ್ಲಿನ ಗದ್ದೆಯಲ್ಲಿ ಹಲವಾರು ವಿಧದ ಮಳಿಗೆಗಳು ತಲೆಯೆತ್ತುತ್ತವೆ. ಇವುಗಳಲ್ಲಿ ದೇವಳಕ್ಕೆ ಭೇಟಿ ನೀಡುವ ಭಕ್ತಾದಿಗಳ ಹಸಿವು ನೀರಡಿಕೆಗಳನ್ನು ನೀಗಿಸುವ ಖಾದ್ಯ-ಪೇಯಗಳ ಮಳಿಗೆಗಳ ಸಂಖ್ಯೆ ಸ್ವಾಭಾವಿಕವಾಗಿಯೇ ಹೆಚ್ಚಾಗಿರುತ್ತದೆ. ಈ ಮಳಿಗೆಗಳಲ್ಲಿ ದೇವಿ ಹಲಸು,ಗೆಣಸು ಹಾಗೂ ಮೆಣಸುಗಳ ಪೋಡಿ, ಗೋಬಿ ಮಂಚೂರಿಯನ್, ಚುರುಮುರಿ ಮಸಾಲೆ, ತಂಪು ಪಾನೀಯಗಳು, ಐಸ್ ಕ್ರೀಮ್,  ಹಾಲು ಮತ್ತು ಇತರ ಹಣ್ಣಿನ ರಸಗಳು ಮತ್ತು ಕುರುಕಲು ತಿಂಡಿಗಳ ಮಾರಾಟದ ಭರಾಟೆ ಜೋರಾಗಿಯೇ ನಡೆಯುತ್ತದೆ. ಇಂತಹ ಮಳಿಗೆಗಳಲ್ಲಿ ಗ್ರಾಹಕರಿಗೆ  ಖಾದ್ಯ-ಪೇಯಗಳನ್ನು ನೀಡುವಾಗ ಪ್ಲಾಸ್ಟಿಕ್ ನಿರ್ಮಿತ ತಟ್ಟೆ,ಲೋಟ ಮತ್ತು  ಚಮಚಗಳನ್ನು ಬಳಸಲಾಗುತ್ತದೆ. ಇದರೊಂದಿಗೆ ಭಕ್ತಾದಿಗಳು ತಮ್ಮ ಮನೆಯಿಂದ ತಂದಿರಬಹುದಾದ ಖಾದ್ಯ-ಪೇಯಗಳನ್ನು ಮುಗಿಸಿದ ಬಳಿಕ, ಇವುಗಳನ್ನು ತುಂಬಿಸಿ ತಂದಿದ್ದ ಪ್ಲಾಸ್ಟಿಕ್ ಬಾಟಲಿಗಳು, ತಟ್ಟೆ-ಲೋಟಗಳು ಮತ್ತು ಬಳಸಿ ಎಸೆಯುವ ಕಾಗದ- ವೃತ್ತ ಪತ್ರಿಕೆಗಳು, ಗದ್ದೆಯಲ್ಲಿನ  ತ್ಯಾಜ್ಯಗಳ ಪ್ರಮಾಣ ಇನ್ನಷ್ಟು ಹೆಚ್ಚಲು ಕಾರಣವೆನಿಸುತ್ತದೆ. 

ಈ ಬಾರಿ ಸ್ಥಳೀಯ ಜೇಸೀಸ್ ಸಂಘಟನೆಯು ಗದ್ದೆಯ ಉದ್ದಗಲಕ್ಕೂ ಅನೇಕ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು " ಕಸದ ತೊಟ್ಟಿ" ಗಳನ್ನು ಇರಿಸುವುದರೊಂದಿಗೆ, ತ್ಯಾಜ್ಯಗಳ ದುಷ್ಪರಿಣಾಮಗಳ ಬಗ್ಗೆ ಅರಿವನ್ನುಂಟುಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಆದರೆ ಬ್ರಹ್ಮರಥೋತ್ಸವದಂದು ಆಗಮಿಸಿದ್ದ ಅಸಂಖ್ಯ ಜನರಿಂದಾಗಿ ಕ್ಷಣಮಾತ್ರದಲ್ಲಿ ತುಂಬುತ್ತಿದ್ದ ಈ ಕಸದ ತೊಟ್ಟಿಗಳಲ್ಲಿ ತುಂಬಿರುವ ತ್ಯಾಜ್ಯಗಳನ್ನು ಸಂಗ್ರಹಿಸಿ ಕೊಂಡೊಯ್ಯಲು ಅವಶ್ಯಕವೆನಿಸುವ ಪುರಸಭೆಯ ವಾಹನಗಳು, ಕಿಕ್ಕಿರಿದ ಜನಸ್ತೋಮದ ನಡುವೆ ಸಂಚರಿಸಲು ಅಸಾಧ್ಯವೆನಿಸಿದ್ದುದರಿಂದಾಗಿ ಹಾಗೂ ಕಸದ ತೊಟ್ಟಿಗಳು ಖಾಲಿಯಾಗಿದ್ದರೂ ಇವುಗಳಲ್ಲಿ ತ್ಯಾಜ್ಯಗಳನ್ನು ಹಾಕದೇ ಅಲ್ಲಲ್ಲಿ ಎಸೆದಿದ್ದ ಜನರಿಂದಾಗಿ, ಜಾತ್ರೆಯ ಗದ್ದೆಯಾದ್ಯಂತ ತ್ಯಾಜ್ಯಗಳ ಸಾಮ್ರಾಜ್ಯವೇ ನೋಡುಗರಿಗೆ ಗೋಚರಿಸುತ್ತಿತ್ತು. ಅದೇನೇ ಇರಲಿ, ಜೇಸೀಸ್ ಸಂಘಟನೆಯ ಪ್ರಯತ್ನವು ನಿಜಕ್ಕೂ ಅನುಕರಣೀಯ ಎನ್ನುವುದರಲ್ಲಿ ಸಂದೇಹವಿಲ್ಲ. 

ಮುಂದಿನ ವರ್ಷ ಜಾತ್ರೆಯ ಗದ್ದೆಯಲ್ಲಿ ಇರಿಸುವ ಕಸದ ತೊಟ್ಟಿಗಳ ಸಂಖ್ಯೆಯನ್ನು ಹೆಚ್ಚಿಸುವುದರೊಂದಿಗೆ, ಇವುಗಳು ತುಂಬಿದೊಡನೆ ಸಂಗ್ರಹಿಸಿ ಸಾಗಿಸಲು ಸಣ್ಣ ವಾಹನಗಳ(ತ್ರಿಚಕ್ರ ಅಥವಾ ಚತುಷ್ಚಕ್ರ) ವ್ಯವಸ್ಥೆಯನ್ನು ಮಾಡಿದಲ್ಲಿ ಗದ್ದೆಯಲ್ಲಿ ಕಾಣಸಿಗುವ ತ್ಯಾಜ್ಯಗಳ ಪ್ರಮಾಣ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ. ಜೊತೆಗೆ ಪುತ್ತೂರು ಪುರಸಭೆಯು ಪ್ಲಾಸ್ಟಿಕ್ ತಟ್ಟೆ, ಲೋಟ, ಚಮಚ ಮತ್ತು ಕೈಚೀಲಗಳನ್ನು ಜಾತ್ರೆಯ ಗದ್ದೆಯಲ್ಲಿ ಬಳಸದಂತೆ ಕೇವಲ ಎಚ್ಚರಿಕೆಯನ್ನು ನೀಡುವ ಪದ್ದತಿಯನ್ನು ಕೈಬಿಟ್ಟು, ಇವುಗಳನ್ನು ಬಳಸುವ ಮಳಿಗೆಗಳಿಗೆ ದಂಡವನ್ನು ವಿಧಿಸುವ ಎದೆಗಾರಿಕೆಯನ್ನು ತೋರಬೇಕಾಗಿದೆ. ಜೊತೆಗೆ ತ್ಯಾಜ್ಯಗಳನ್ನು ಉತ್ಪಾದಿಸುವ ಮಳಿಗೆಗಳಿಂದ ತ್ಯಾಜ್ಯ ಸಂಗ್ರಹ ಮತ್ತು ವಿಲೆವಾರಿಗಳಿಗಾಗಿ ಶುಲ್ಕವನ್ನು ವಿಧಿಸಬೇಕಿದೆ. ಪ್ರಾಯಶಃ ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಲ್ಲಿ ಪೂಜ್ಯ ದೇವಳದ ಮುಂದಿನ ಗದ್ದೆಯಲ್ಲಿ ಜಾತ್ರೆಯ ಸಂದರ್ಭದಲ್ಲಿ ಕಾಣಸಿಗುವ " ತ್ಯಾಜ್ಯಗಳ ಸಾಮ್ರಾಜ್ಯ" ವು ನಿಶ್ಚಿತವಾಗಿಯೂ ಕಣ್ಮರೆಯಾಗಲಿದೆ. 

ಕೊನೆಯ ಮಾತು 

ಜಾತ್ರೆಯ ದಿನಗಳಲ್ಲಿ ಪುತ್ತೂರು ಪುರಸಭೆಯ ಪೌರ ಕಾರ್ಮಿಕರ ದಂಡು ಮುಂಜಾನೆಯಿಂದ ಮುಸ್ಸಂಜೆಯ ತನಕ ಶ್ರಮಿಸಿದರೂ, ಗದ್ದೆಯಲ್ಲಿ ತುಂಬಿದ ತ್ಯಾಜ್ಯಗಳನ್ನು ಸಂಗ್ರಹಿಸಿ ಸಾಗಿಸಲು ಹಲವಾರು ದಿನಗಳೇ ಬೇಕಾಗುತ್ತವೆ. ಕೆಲವೊಮ್ಮೆ ಸ್ವಯಂಸೇವಾ ಸಂಘಟನೆಗಳ ಕಾರ್ಯಕರ್ತರು ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ಕೈಜೋಡಿಸುವ ಮೂಲಕ ಪೌರ ಕಾರ್ಮಿಕರ ಕೆಲಸದ ಹೊರೆಯನ್ನು ತುಸು ಕಡಿಮೆ ಮಾಡಿದರೂ, ಬಾಕಿಮಾರು ಗದ್ದೆಯನ್ನು ಪೂರ್ವಸ್ಥಿತಿಗೆ ಸರಿಯಾಗಿ ಸ್ವಚ್ಚಗೊಳಿಸಲು ಅನೇಕ ದಿನಗಳೇ ತಗಲುತ್ತವೆ. ಆದರೆ ಭಕ್ತಾಭಿಮಾನಿಗಳು ಜಾತ್ರೆಯ ಗದ್ದೆಯ ಸ್ವಚ್ಚತೆಯ ಬಗ್ಗೆ ಒಂದಿಷ್ಟು ಕಾಳಜಿಯನ್ನು ತೋರಿದಲ್ಲಿ ಈ ಸಮಸ್ಯೆಯನ್ನು ಸುಲಭದಲ್ಲೇ ಬಗೆಹರಿಸಬಹುದಾಗಿದೆ.

ಡಾ. ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ಸುದಿನ ಸಂಚಿಕೆಯಲ್ಲಿ ದಿ. ೧೯-೦೪-೨೦೧೪ ರಂದು ಪ್ರಕಟಿತ ಲೇಖನ. 



1 comment: