Monday, April 14, 2014

Smoke in your kitchen



  ಅಡುಗೆಮನೆಯ ಧೂಮಪಾನಿಗಳು !

ಹಲವಾರು ದಶಕಗಳ ಹಿಂದೆ ಬಹುತೇಕ ಭಾರತೀಯರು ತಮ್ಮ ಅಡುಗೆಮನೆಯಲ್ಲಿ ಸೌದೆ, ಬೆರಣಿ, ತೆಂಗಿನ ಸೋಗೆ,ಗೆರಟೆ, ಮರದ ಹುಡಿ, ಒಣಗಿದ ಗಿಡಗಂಟಿಗಳು, ಇದ್ದಿಲು ಇತ್ಯಾದಿಗಳನ್ನು ಉರುವಲಿನ ರೂಪದಲ್ಲಿ ಬಳಸುತ್ತಿದ್ದರು. ಏಕೆಂದರೆ ಅಂದಿನ ದಿನಗಳಲ್ಲಿ ವಿದ್ಯುತ್, ಸೌರ ಒಲೆಗಳು ಮತ್ತು ಅಡುಗೆ ಅನಿಲಗಳಂತಹ ಸ್ವಚ್ಚ ಶಕ್ತಿಮೂಲಗಳು ಮತ್ತು ಇಂಧನಗಳು ಬಡವರ ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತಿರಲಿಲ್ಲ. 

ಆದರೆ ಇಂದು ಪರ್ಯಾಯ ಶಕ್ತಿಮೂಲಗಳು- ಇಂಧನಗಳು ಲಭ್ಯವಿದ್ದರೂ, ಕಾರಣಾಂತರಗಳಿಂದ ಭಾರತವೂ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳ ಶೇ. ೫೦ ಕ್ಕೂ ಅಧಿಕ ಪ್ರಜೆಗಳು ಇಂದಿಗೂ ಸಾಂಪ್ರದಾಯಿಕ ಉರುವಲುಗಳನ್ನೇ ಬಳಸುತ್ತಿದ್ದಾರೆ. ಇದರೊಂದಿಗೆ ಬಳಸಿ ಎಸೆಯುವ ಪ್ಲಾಸ್ಟಿಕ್ ಚೀಲಗಳು, ಕಾಗದಗಳು, ರಟ್ಟು ಮತ್ತಿತರ ತ್ಯಾಜ್ಯವಸ್ತುಗಳನ್ನು ಉರುವಲಿನ ರೂಪದಲ್ಲಿ ಬಳಸುವವರ ಸಂಖ್ಯೆಯೂ ಕಡಿಮೆಯೇನಿಲ್ಲ. 

ಈ ಉರುವಲುಗಳನ್ನು ಮನೆಯಲ್ಲಿ ಅಡುಗೆಗಾಗಿ ಉಪಯೋಗಿಸುವಾಗ ಉತ್ಪನ್ನವಾಗುವ ಹೊಗೆಯಲ್ಲಿ ಕಾರ್ಬನ್ ಮೊನೊಕ್ಸೈಡ್ ಮತ್ತಿತರ ಅನೇಕ ಅಪಾಯಕಾರಿ ಅನಿಲ ಇತ್ಯಾದಿಗಳಿದ್ದು, ಮನೆಮಂದಿ ಉಸಿರಾಡುವ ಗಾಳಿಯನ್ನು ಕಲುಷಿತಗೊಳಿಸುತ್ತದೆ. ಜನಸಾಮಾನ್ಯರ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಎನಿಸುವ ಹತ್ತು ಪ್ರಮುಖ ಕಾರಣಗಳಲ್ಲಿ, ಈ ಒಳಾಂಗಣ ಧೂಮವೂ ಒಂದಾಗಿದ್ದು, ವರ್ಷಂಪ್ರತಿ ಲಕ್ಷಾಂತರ ಅಮಾಯಕರ ಮರಣಕ್ಕೆ ಕಾರಣವೆನಿಸುತ್ತಿದೆ. 

ಪರಿಸರ ಪ್ರದೂಷಣೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಎನಿಸಿರುವ ಕಲುಷಿತ ನೀರು ದ್ವಿತೀಯ ಸ್ಥಾನದಲ್ಲಿದ್ದು, ಅಗ್ರಸ್ಥಾನದಲ್ಲಿ ಮನೆಯೊಳಗಿನ ಹಾಗೂ ಹೊರಗಿನ ಗಾಳಿಯನ್ನು ಕಲುಷಿತಗೊಳಿಸುವ " ಧೂಮ" ಕ್ಕೆ ಸಲ್ಲುತ್ತದೆ. ಈ ವಿಷಕಾರಕ ಹೊಗೆಯ ಹಾವಳಿಗೆ ವರ್ಷಂಪ್ರತಿ ಜಗತ್ತಿನಾದ್ಯಂತ ಎರಡು ಲಕ್ಷ ಜನರು ಬಲಿಯಾಗುತ್ತಿದ್ದು, ಒಳಾಂಗಣ ವಾಯುಮಾಲಿನ್ಯದಿಂದಾಗಿ ಸಂಭವಿಸುವ ಆರೋಗ್ಯದ ಸಮಸ್ಯೆಗಳೇ ಇದಕ್ಕೆ ಕಾರಣವೆನಿಸಿವೆ. 

ವಿಷಕಾರಕ "ಧೂಮಕೇತು"!

ಸಮರ್ಪಕವಾದ ವಾತಾಯನ ವ್ಯವಸ್ಥೆ ಇಲ್ಲದಿರುವ ಬಡವರ ಗುಡಿಸಲುಗಳು ಅಥವಾ ಪುಟ್ಟ ಮನೆಗಳಲ್ಲಿ ಸಾಂಪ್ರದಾಯಿಕ ಉರುವಲುಗಳು ಹೊರಸೂಸುವ ಹೊಗೆಯಿಂದಾಗಿ, ಮನೆಯಲ್ಲಿರುವ ಹೆಂಗಸರು, ಮಕ್ಕಳು ಮತ್ತು ವಯೋವೃದ್ಧರ ಆರೋಗ್ಯವು ಸುಲಭದಲ್ಲೇ ಹದಗೆಡುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಹೇಳುವುದಾದಲ್ಲಿ, ಮನುಷ್ಯನ ಪಂಚೇಂದ್ರಿಯಗಳಿಗೆ ಸಂಬಂಧಿಸಿದ ಅನೇಕ ಆರೋಗ್ಯದ ಸಮಸ್ಯೆಗಳೊಂದಿಗೆ ಹೃದ್ರೋಗಗಳು, ನ್ಯುಮೋನಿಯ ಮತ್ತು ಶ್ವಾಸಕೋಶಗಳ ದೀರ್ಘಕಾಲೀನ ಅಡಚಣೆಯ ವ್ಯಾಧಿಗಳಂತಹ ಗಂಭೀರ ಸಮಸ್ಯೆಗಳು ಬಾಧಿಸುತ್ತವೆ. 

ಸಾಂಪ್ರದಾಯಿಕ ಉರುವಲುಗಳನ್ನು ಅಸಮರ್ಪಕವಾಗಿ ಉರಿಸುವುದರಿಂದ ಉತ್ಪನ್ನವಾಗುವ ಹೊಗೆಯಲ್ಲಿ ಕಾರ್ಬನ್ ಮೊನೊಕ್ಸೈಡ್, ನೈಟ್ರೋಜನ್ ಆಕ್ಸೈಡ್, ಪೊಲಿ ಆರೋಮ್ಯಾಟಿಕ್ ಹೈಡ್ರೋ ಕಾರ್ಬನ್ಸ್, ಬೆನ್ಜೀನ್ ಮತ್ತಿತರ ವಿಷಕಾರಕ ದ್ರವ್ಯಗಳು ಇರುತ್ತವೆ. ಇಂತಹ ಉರುವಲುಗಳನ್ನೇ ಅತಿಯಾಗಿ ಬಳಸುವ ಬಡವರ ಮನೆಗಳಲ್ಲಿ ತುಂಬಿಕೊಳ್ಳುವ ಧೂಮದಿಂದಾಗಿ, ಮನೆಮಂದಿ ಉಸಿರಾಡುವಾಗ ಈ ಹೊಗೆಯು ಶ್ವಾಸಾಂಗಗಳನ್ನು ಸುಲಭದಲ್ಲೇ ಪ್ರವೇಶಿಸುತ್ತದೆ. ಸಾಮಾನ್ಯವಾಗಿ ಅಡುಗೆ ಕೆಲಸವನ್ನು ನಿರ್ವಹಿಸುವ ಹೆಂಗಸರು ಹಲವಾರು ಗಂಟೆಗಳ ಕಾಲ ಅಡುಗೆ ಮನೆಯಲ್ಲಿ ಇರಬೇಕಾಗುವುದರಿಂದ, ಇವರು ತಮ್ಮ ಉಸಿರಿನೊಂದಿಗೆ ಸೇವಿಸುವ ಹೊಗೆಯ ಪ್ರಮಾಣವು ಎರಡು ಪ್ಯಾಕೆಟ್ ಸಿಗರೇಟಿನ ಹೊಗೆಗೆ ಸಮಾನವಾಗಿರುತ್ತದೆ. ಈ ಧೂಮದಿಂದಾಗಿ ಉದ್ಭವಿಸುವ ನ್ಯುಮೋನಿಯ ಮತ್ತಿತರ ಆರೋಗ್ಯದ ಸಮಸ್ಯೆಗಳು ಮನೆಯಲ್ಲಿರುವ ಹೆಂಗಸರು ಮತ್ತು ಪುಟ್ಟ ಮಕ್ಕಳನ್ನೇ ಹೆಚ್ಚಾಗಿ ಬಾಧಿಸುತ್ತದೆ. ಏಕೆಂದರೆ ಮನೆಯ ಯಜಮಾನರಾಗಿರುವ ಗಂಡಸರು ಹಗಲಿಡೀ ದುಡಿಯುವ ಸಲುವಾಗಿ ಮನೆಯಿಂದ ಹೊರಗಿರುವುದೇ ಇದಕ್ಕೆ ಕಾರಣವೆನಿಸಿದೆ. 

ಸುಮಾರು ೨೧ ದೇಶಗಳಲ್ಲಿ ಈ ಬಗ್ಗೆ ನಡೆಸಿದ್ದ ಅಧ್ಯಯನಗಳಿಂದ ತಿಳಿದುಬಂದಂತೆ, ಒಳಾಂಗಣ ವಾಯುಮಾಲಿನ್ಯವು ಶೇ.೫ ರಷ್ಟು ಮರಣಗಳಿಗೆ ಹಾಗೂ ಗಂಭೀರ ಕಾಯಿಲೆಗಳಿಗೆ ನೇರವಾಗಿ ಕಾರಣವೆನಿಸುತ್ತಿದೆ. 

ಸಾಂಪ್ರದಾಯಿಕ ಉರುವಲಿನ ಬಳಕೆಯಿಂದಾಗಿ ಭಾರತದಲ್ಲಿ ಪ್ರತಿವರ್ಷ ೪ ರಿಂದ ೬ ಲಕ್ಷ ಜನರು ಸಾವಿಗೀಡಾಗುತ್ತಿದ್ದು, ನೆರೆಯ ಚೀನಾ ದೇಶದಲ್ಲಿ ಈ ಪ್ರಮಾಣವು ೪ ಲಕ್ಷಕ್ಕಿಂತಲೂ ಕಡಿಮೆಯಿದೆ. ವಿಶೇಷವೆಂದರೆ ಈ ರೀತಿಯಲ್ಲಿ ಮೃತಪಡುತ್ತಿರುವ ಭಾರತೀಯರಲ್ಲಿ, ಅಧಿಕತಮ ಜನರು ಶ್ವಾಸಾಂಗಗಳ ಸೋಂಕಿನಿಂದ ಮತ್ತು ಅಲ್ಪಪ್ರಮಾಣದ ಜನರು ಕ್ಯಾನ್ಸರ್ ನಂತಹ ಕಾಯಿಲೆಗಳಿಂದಲೇ ಮೃತಪಡುತ್ತಿದ್ದಾರೆ. 

ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜನಸಾಮಾನ್ಯರ ಅಜ್ಞಾನ ಮತ್ತು ಬಡತನಗಳಿಂದಾಗಿ ಸಂಭವಿಸುತ್ತಿರುವ ಇಂತಹ ಅಕಾಲಿಕ ಮರಣಗಳನ್ನು ತಡೆಗಟ್ಟಲು, ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಗಮನವನ್ನು ಹರಿಸಿದೆ. ಅಮೇರಿಕದ ನ್ಯಾಶನಲ್ ಇನ್ಸ್ ಟಿಟ್ಯೂಟ್ ಆಫ್ ಹೆಲ್ತ್ ಸಂಸ್ಥೆಯ ನಿರ್ದೇಶಕರು ಹೇಳುವಂತೆ, ಮನೆಮಂದಿಯ ಆರೋಗ್ಯಕ್ಕೆ ಮಾರಕವೆನಿಸುತ್ತಿರುವ ಈ ಧೂಮದ ಹಾವಳಿಯನ್ನು ನಿವಾರಿಸುವ - ನಿಯಂತ್ರಿಸುವ ಪ್ರಯತ್ನಗಳು ಇತ್ತೀಚಿಗೆ ಆರಂಭಗೊಂಡಿವೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಆರಂಭಗೊಂಡಿರುವ ಈ ಅಭಿಯಾನದ ಫಲವಾಗಿ ಸಾಕಷ್ಟು ಅಧ್ಯಯನ ಮತ್ತು ಸಂಶೋಧನೆಗಳು ನಡೆಯುತ್ತಿವೆ. ತತ್ಪರಿಣಾಮವಾಗಿ ಹೊಗೆಯನ್ನು ಉಗುಳದ ಆಧುನಿಕ ಒಲೆಗಳನ್ನು ಈಗಾಗಲೇ ಆವಿಷ್ಕರಿಸಲಾಗಿದೆ. ಇಂತಹ ಒಲೆಗಳನ್ನು ಗ್ರಾಮೀಣ ಪ್ರದೇಶಗಳ ನಿವಾಸಿಗಳು ಮತ್ತು ಬಡ ಕುಟುಂಬಗಳು ಬಳಸಲು ಆರಂಭಿಸಿದಲ್ಲಿ, ಇವರ ಆರೋಗ್ಯದ ಮಟ್ಟವು ಸುಧಾರಿಸುವುದರೊಂದಿಗೆ ಅಕಾಲಿಕ ಮರಣದ ಪ್ರಮಾಣವೂ ಕಡಿಮೆಯಾಗಲಿದೆ. 

ಕೇಂದ್ರ ಸರ್ಕಾರವು ದೇಶದ ಬಡಜನರನ್ನು ಕಾಡುತ್ತಿರುವ ವೈವಿಧ್ಯಮಯ ಕಾಯಿಲೆಗಳನ್ನು ನಿರ್ಮೂಲನ ಮಾಡಲು ವರ್ಷಂಪ್ರತಿ ಸಹಸ್ರಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ. ಇದರ ಒಂದು ಅಂಶವನ್ನು ಬಡ ಜನರಿಗೆ ಅಡುಗೆ ಅನಿಲದ ಸಂಪರ್ಕವನ್ನು ಒದಗಿಸಲು ಬಳಸಿದಲ್ಲಿ, ಲಕ್ಷಾಂತರ ಬಡಜನರ ಆರೋಗ್ಯದ ಮಟ್ಟವನ್ನು ಸುಧಾರಿಸಲು ನಿಶ್ಚಿತವಾಗಿಯೂ ಉಪಯುಕ್ತವೆನಿಸಲಿದೆ!. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೫-೧೧- ೨೦೧೧ ರ ಮಹಿಳಾ ಸಂಪದದಲ್ಲಿ ಪ್ರಕಟಿತ ಲೇಖನ. 


No comments:

Post a Comment