Thursday, April 24, 2014

sweat it out.....





  ಸಾಕಷ್ಟು ಶ್ರಮಿಸಿ ಬೆವರಿಳಿಸಿ - ತೂಕ ಇಳಿಸಿಕೊಳ್ಳಿ 

ಬಹುತೇಕ ಭಾರತೀಯ ನಾರಿಯರು ವಿವಾಹಕ್ಕೆ ಮುನ್ನ ತಮ್ಮ ಶರೀರದ ತೂಕ, ಆಕಾರ ಮತ್ತು ಸೌಂದರ್ಯಗಳ ಬಗ್ಗೆ ಸಾಕಷ್ಟು ಕಾಳಜಿಯನ್ನು ತೋರುತ್ತಾರೆ. ಆದರೆ ವಿವಾಹವಾಗಿ ಒಂದೆರಡು ಮಕ್ಕಳನ್ನು ಹಡೆದ ಬಳಿಕ ಇವೆಲ್ಲವನ್ನೂ ನಿರ್ಲಕ್ಷಿಸುತ್ತಾರೆ. ತತ್ಪರಿಣಾಮವಾಗಿ ಮುಂದಿನ ಕೆಲವೇ ವರ್ಷಗಳಲ್ಲಿ ಅಧಿಕ ತೂಕ-ಅತಿಬೊಜ್ಜಿನ ಪೀಡೆಯಿಂದಾಗಿ, ಧಡೂತಿ ದೇಹವನ್ನು ಗಳಿಸಿಕೊಳ್ಳುತ್ತಾರೆ!. 

ಅತಿಬೊಜ್ಜು-ಅಧಿಕ ತೂಕ 

ಜಗತ್ತಿನ ಬಹುತೇಕ ಶ್ರೀಮಂತ ರಾಷ್ಟ್ರಗಳ ಪ್ರಜೆಗಳನ್ನು ಪೀಡಿಸುತ್ತಿರುವ ಅತಿಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಗೆ ಭಾರತೀಯರು, ಅದರಲ್ಲೂ ವಿಶೇಷವಾಗಿ ಭಾರತೀಯ ನಾರಿಯರು ಅಪವಾದವೆನಿಸಿಲ್ಲ. ಕಳೆದ ಒಂದೆರಡು ದಶಕಗಳಿಂದ ಪಾಶ್ಚಾತ್ಯರ ಜೀವನಶೈಲಿಯನ್ನು ಅನುಸರಿಸುತ್ತಿರುವ ಭಾರತೀಯರು, ಈ ವಿಶಿಷ್ಟ ಹಾಗೂ ಗಂಭೀರ ಸಮಸ್ಯೆಗೆ ಸುಲಭದಲ್ಲೇ ಈಡಾಗುತ್ತಿದ್ದಾರೆ. ಅನಿಯಂತ್ರಿತವಾಗಿ ವೃದ್ಧಿಸುತ್ತಿರುವ ಈ ಸಮಸ್ಯೆಯು ಇತ್ತೀಚಿನ ಕೆಲವರ್ಷಗಳಿಂದ ಎಳೆಯ ವಯಸ್ಸಿನವರಲ್ಲೂ ವಾಪಕವಾಗಿ ಕಂಡುಬರುತ್ತಿದೆ. 

ಅಂಕಿ ಅಂಶಗಳೇ ಹೇಳುವಂತೆ ೧೯೯೮- ೨೦೦೫ ರ ನಡುವಿನ ಅವಧಿಯಲ್ಲಿ ಭಾರತದಲ್ಲಿ ಅಧಿಕ ತೂಕದ ಸಮಸ್ಯೆಯು ಶೇ. ೨೦ ರಷ್ಟು ಹೆಚ್ಚಾಗಿತ್ತು. ಪ್ರಸ್ತುತ ಪ್ರತಿ ಆರು ಭಾರತೀಯ ಮಹಿಳೆಯರಲ್ಲಿ ಒಬ್ಬರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯು ನಗರ ಪ್ರದೇಶಗಳಲ್ಲಿ ಶೇ.೪೦ ರಷ್ಟಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಕಡಿಮೆ ಇದೆ.

ನಿಷ್ಪ್ರಯೋಜಕ ಆಹಾರಗಳ (junk food) ಅತಿ ಸೇವನೆ, ನಿಷ್ಕ್ರಿಯತೆ, ಆರಾಮದಾಯಕ ಜೀವನಶೈಲಿಯೊಂದಿಗೆ, ಅನುವಂಶಿಕತೆಯೂ ಇದಕ್ಕೆ ಕಾರಣವೆನಿಸುತ್ತಿದೆ. ಜೊತೆಗೆ ಜೀವನಪರ್ಯಂತ ಬಾಧಿಸಬಲ್ಲ ಹಾಗೂ ಶಾಶ್ವತ ಪರಿಹಾರವೇ ಇಲ್ಲದಂತಹ ಮಧುಮೇಹ, ಅಧಿಕ ರಕ್ತದ ಒತ್ತಡ, ಹೃದಯ ಮತ್ತು ರಕ್ತನಾಳಗಳ ಮತ್ತು ಇನ್ನಿತರ ಅನೇಕ ವಿಧದ ಗಂಭೀರ ಕಾಯಿಲೆಗಳಿಗೆ ಅತಿಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಯೇ ಕಾರಣವೆನಿಸುತ್ತಿದೆ. ಅನಿಯಂತ್ರಿತವಾಗಿ ವೃಧ್ಧಿಸುತ್ತಿರುವ ಈ ಅಪಾಯಕಾರಿ ಪಿಡುಗನ್ನು ಶಿಸ್ತುಬದ್ಧ ಜೀವನಶೈಲಿಯನ್ನು ಅನುಸರಿಸುವ ಮೂಲಕ ತಡೆಗಟ್ಟುವುದೇ ಇದಕ್ಕೊಂದು ಸರಳ ಮತ್ತು ಪರಿಣಾಮಕಾರಿ ಪರಿಹಾರವಾಗಿದೆ. ಅರ್ಥಾತ್, " ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ" ಎನ್ನುವಂತೆಯೇ, ನಿಮ್ಮ ಶರೀರದ ತೂಕ ಮತ್ತು ಗಾತ್ರಗಳನ್ನು ಆರೋಗ್ಯಕರ ಮಟ್ಟದಲ್ಲಿ ಕಾಪಾಡಿಕೊಳ್ಳುವುದೇ ಇದಕ್ಕೊಂದು ನಿಶ್ಚಿತ ಪರಿಹಾರವಾಗಿದೆ.

ಆದರೆ ಅತಿಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಯು ಮಿತಿಮೀರಿದ ಬಳಿಕ ಬಂದುಮಿತ್ರರ ವ್ಯಂಗೋಕ್ತಿಗಳಿಂದ ನೊಂದ ಮಹಿಳೆಯರು, ಅನಿವಾರ್ಯವಾಗಿ ತಮ್ಮ ಶರೀರದ ತೂಕವನ್ನು ಇಳಿಸಿಕೊಳ್ಳಲು ಹರಸಾಹಸವನ್ನೇ ನಡೆಸುತ್ತಾರೆ. ಈ ಸಂದರ್ಭದಲ್ಲಿ ಒಂದೆರಡು ದಶಕಗಳಿಂದ ಗಳಿಸಿಕೊಂಡಿದ್ದ ತಮ್ಮ ಧಡೂತಿ ದೇಹವನ್ನು, ಒಂದೆರಡು ತಿಂಗಳುಗಳಲ್ಲೇ ಕರಗಿಸಿಕೊಳ್ಳಲು ಶಾರೀರಿಕ ಶ್ರಮದ ಅವಶ್ಯಕತೆಯೇ ಇಲ್ಲದ ದುಬಾರಿ ಚಿಕಿತ್ಸೆಗಳನ್ನು ಪ್ರಯೋಗಿಸುತ್ತಾರೆ!. 

ತೂಕ ಇಳಿಸುವ ಔಷದಗಳು 

ನೀವು ಪ್ರತಿದಿನ ತಪ್ಪದೆ ವೀಕ್ಷಿಸುವ ಟಿ.ವಿ ವಾಹಿನಿಗಳಲ್ಲಿ ಪ್ರಸಾರವಾಗುವ ಅಸಂಖ್ಯ ಜಾಹೀರಾತುಗಳಲ್ಲಿ, ಕೊಬ್ಬಿನಿಂದ ಉಬ್ಬಿರುವ ನಿಮ್ಮ ಉದರವನ್ನು ಔಷದಯುಕ್ತ ತೈಲವನ್ನು ಹಚ್ಚುವ ಮೂಲಕ ಅಥವಾ ಪೇಯಗಳ ರೂಪದಲ್ಲಿ ಸೇವಿಸಿ ಕುಗ್ಗಿಸಬಹುದಾದ  ಆಕರ್ಷಕ ಜಾಹೀರಾತುಗಳನ್ನು ಕಂಡಿರಲೇಬೇಕು.ನಿಜ ಹೇಳಬೇಕಿದ್ದಲ್ಲಿ ಇಂತಹ ತೈಲಗಳನ್ನು ನೂರಾರು ಬಾರಿ ಹಚ್ಚಿ ಮಾಲಿಶ್ ಮಾಡಿದರೂ ಹಾಗೂ ತಿಂಗಳುಗಟ್ಟಲೆ ಇಂತಹ ದುಬಾರಿ ಪೇಯಗಳನ್ನು ಕುಡಿದರೂ, ಉಬ್ಬಿರುವ ನಿಮ್ಮ ಉದರ ಮತ್ತು ಕೊಬ್ಬಿದ ಶರೀರವು ಕಿಂಚಿತ್ ಕೂಡಾ ಕುಗ್ಗುವ ಸಾಧ್ಯತೆಗಳೇ ಇಲ್ಲ. ಆದರೆ ಪ್ರತಿನಿತ್ಯ ಈ ತೈಲವನ್ನು ಮಾಲಿಶ್ ಮಾಡಲು ವಿನಿಯೋಗಿಸುವಷ್ಟೇ ಸಮಯವನ್ನು ಶಾರೀರಿಕ ವ್ಯಾಯಾಮಕ್ಕಾಗಿ ವಿನಿಯೋಗಿಸಿದಲ್ಲಿ, ನಿಮ್ಮ ಶರೀರದಲ್ಲಿ ಸಂಗ್ರಹವಾಗಿರುವ ಕೊಬ್ಬಿನ ಅಂಶವು ಒಂದಿಷ್ಟು ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ!. 

ಕೆಲವೊಂದು ಜಾಹೀರಾತುಗಳಲ್ಲಿ ನೀವು ೩೦ ವರ್ಷಗಳಲ್ಲಿ ಗಳಿಸಿಕೊಂಡಿರುವ ಅಧಿಕತೂಕವನ್ನು ಕೇವಲ ೩ ತಿಂಗಳುಗಳಲ್ಲೇ ಇಳಿಸುವ ಆಶ್ವಾಸನೆಯನ್ನು ನೀಡಿದರೂ, ಈ ದುಬಾರಿ ವೆಚ್ಚದ ತೂಕ ಇಳಿಸುವ ವಿಧಾನವು ಅನಪೇಕ್ಷಿತ ಮತ್ತು ಅಡ್ಡಪರಿಣಾಮಗಳಿಗೆ ಕಾರಣವೆನಿಸುವುದು ಅಪರೂಪವೇನಲ್ಲ.ಅನೇಕ ಖ್ಯಾತನಾಮ ಸಂಸ್ಥೆಗಳು ತಮ್ಮ "ತೂಕ ಇಳಿಸುವ ಕಾರ್ಯಕ್ರಮ" ದ ಸಲುವಾಗಿ, ನೀವು ಕಳೆದುಕೊಳ್ಳಲಿರುವ ಪ್ರತಿಯೊಂದು ಕಿಲೋಗ್ರಾಮ್ ಗೆ ಇಂತಿಷ್ಟು ಸಾವಿರ ರೂಪಾಯಿ ಶುಲ್ಕವನ್ನು ನಿ ಗದಿಸಿರುತ್ತಾರೆ.ಹಾಗೂ ಈ ಮೊತ್ತವನ್ನು ಮುಂಗಡವಾಗಿಯೇ ಪಡೆದುಕೊಳ್ಳುತ್ತಾರೆ!. 

ಅನೇಕ ಮುಂದುವರೆದ ರಾಷ್ಟ್ರಗಳಲ್ಲಿ ತಜ್ಞವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಮಹಾಕಾಯರ ಶರೀರದ ನಿರ್ದಿಷ್ಟ ಭಾಗಗಳಲ್ಲಿ ಶೇಖರವಾಗಿರುವ ಕೊಬ್ಬನ್ನು ತೆಗೆಯುವ ಮೂಲಕ ಧಡೂತಿ ದೇಹದ ಗಾತ್ರವನ್ನು ಕುಗ್ಗಿಸುತ್ತಾರೆ. ಆದರೆ ಈ ಚಿಕಿತ್ಸೆಯು ಅತ್ಯಂತ ದುಬಾರಿಯಾಗಿರುವುದರಿಂದ, ಸಾಮಾನ್ಯ ಜನರು ಇದರ ಗೊಡವೆಗೆ ಹೋಗುವುದೇ ಇಲ್ಲ. ಅದೇ ರೀತಿಯಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ನಿಮ್ಮ ಜಠರದ ಮೇಲ್ಭಾಗದಲ್ಲಿ ಹಿಗ್ಗಬಲ್ಲ ಸಿಲಿಕಾನ್ ಬಳೆಯೊಂದನ್ನು ಅಳವಡಿಸುವ ಮೂಲಕ ಜಠರದ ಗಾತ್ರವನ್ನು ಕುಗ್ಗಿಸುವ ವಿಧಾನವು ವಿದೇಶಗಳಲ್ಲಿ ಮಾತ್ರವಲ್ಲ, ಭಾರತದಲ್ಲೂ ವ್ಯಾಪಕವಾಗಿ ಬಳಸಲ್ಪಡುತ್ತಿದೆ. ಈ ರೀತಿಯಲ್ಲಿ ಕುಗ್ಗಿಸಿದ ಜಠರವು ಅಲ್ಪ ಪ್ರಮಾಣದ ಆಹಾರವನ್ನು ಸೇವಿಸಿದೊಡನೆ ತುಂಬುವುದರಿಂದಾಗಿ, ನೀವು ಸೇವಿಸುವ ಆಹಾರದ ಪ್ರಮಾಣವು ಸ್ವಾಭಾವಿಕವಾಗಿಯೇ ಕಡಿಮೆಯಾಗುತ್ತದೆ. ಆದರೆ ಈ ಶಸ್ತ್ರಚಿಕಿತ್ಸಾ ವಿಧಾನದ ದೀರ್ಘಕಾಲೀನ ಅಡ್ಡ ಪರಿಣಾಮ- ದುಷ್ಪರಿಣಾಮಗಳ ಮಾಹಿತಿಗಳು ಲಭಿಸಲು ಹಲವಾರು ವರ್ಷಗಳೇ ಬೇಕಾಗುತ್ತವೆ. 

ಅಪಾಯಕಾರಿ ಔಷದಗಳಿಗೆ ನಿಷೇಧ 

ಮೇಲೆ ವಿವರಿಸಿದ ತೂಕ ಇಳಿಸುವ ವಿಧಾನಗಳಿಗಿಂತಲೂ ಅತ್ಯಂತ ವ್ಯಾಪಕವಾಗಿ ಬಳಸಲ್ಪಡುತ್ತಿದ್ದ ಮತ್ತು ತಜ್ಞ ವೈದ್ಯರೇ ಶಿಫಾರಸು ಮಾಡುತ್ತಿದ್ದ " ಔಷದ ಚಿಕಿತ್ಸೆ" ಯು ಇನ್ನು ಮುಂದೆ ಭಾರತೀಯರಿಗೆ ಅಲಭ್ಯವೆನಿಸಲಿದೆ. ಏಕೆಂದರೆ ಅತಿಬೊಜ್ಜು - ಅಧಿಕ ತೂಕದ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಬಳಸಲ್ಪಡುತ್ತಿದ್ದ ಇಂತಹ ಔಷದಗಳನ್ನು ನಿಷೇಧಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಅವಶ್ಯಕ ಕ್ರಮಗಳನ್ನು ಕೈಗೊಂಡಿದೆ. ತತ್ಪರಿಣಾಮವಾಗಿ ಇಂತಹ ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸದಂತೆ, ವಿದೇಶಗಳಿಂದ ಆಮದು ಮಾಡದಂತೆ ಮತ್ತು ಭಾರತದಲ್ಲಿ ಮಾರಾಟ ಮಾಡದಂತೆ ಅಧಿಕೃತ ಕಾನೂನನ್ನು ಜಾರಿಗೆ ತರಲಿದೆ. 

ಈ ಔಷದವನ್ನು ಸೇವಿಸುವುದರಿಂದ ನಿಮ್ಮ ಹಸಿವು ಕಡಿಮೆಯಾಗುವುದರಿಂದಾಗಿ, ನೀವು ಸೇವಿಸುವ ಆಹಾರದ ಪ್ರಮಾಣವು ಸ್ವಾಭಾವಿಕವಾಗಿಯೇ ಕಡಿಮೆಯಾಗುತ್ತದೆ. ಇದರಿಂದಾಗಿ ಕಾಲಕ್ರಮೇಣ ನಿಮ್ಮ ಶರೀರದ ತೂಕವು ನಿಶ್ಚಿತವಾಗಿಯೂ ಕಡಿಮೆಯಾಗುತ್ತದೆ. ಆದರೆ ಈ ಔಷದಗಳ ಸೇವನೆಯನ್ನು ನಿಲ್ಲಿಸಿದೊಡನೆ ಅತಿಬೊಜ್ಜು- ಅಧಿಕ ತೂಕದ ಸಮಸ್ಯೆಯು ಮತ್ತೆ ಮರುಕಳಿಸುತ್ತದೆ. ಇಷ್ಟು ಮಾತ್ರವಲ್ಲ, ಇಂತಃ ಔಷದಗಳ ಸೇವನೆಯಿಂದ ಹೃದಯಕ್ಕೆ ಹಾನಿ ಸಂಭವಿಸುವ, ರಕ್ತದ ಒತ್ತಡ ಹೆಚ್ಚುವ, ಪಕ್ಷವಾತ ಮತ್ತು ಹೃದಯಾಘಾತಗಳಂತಹ ಗಂಭೀರ ದುಷ್ಪರಿಣಾಮಗಳು ತಲೆದೋರುವ ಸಾಧ್ಯತೆಗಳೂ ಇವೆ. ಆದರೆ ಶಾರೀರಿಕ ಶ್ರಮದ ಅವಶ್ಯಕತೆ ಇಲ್ಲದೆ ಶರೀರದ ತೂಕವನ್ನು ಇಳಿಸಿಕೊಳ್ಳಲು ಬಯಸುತ್ತಿದ್ದ ಆಲಸಿಗಳಿಂದಾಗಿ, ಈ ಔಷದಗಳಿಗೆ ಸಾಕಷ್ಟು ಬೇಡಿಕೆ ಇದ್ದಿತು. ವಿಶೇಷವೆಂದರೆ ಇಂತಹ ಔಷದಗಳ ದೀರ್ಘಕಾಲೀನ ಸೇವನೆಯಿಂದ ಉದ್ಭವಿಸುತ್ತಿರುವ ದುಷ್ಪರಿಣಾಮ ಮತ್ತು ಅಡ್ಡ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಆರೋಗ್ಯ ಸಚಿವಾಲಯವು, ಇವುಗಳನ್ನು ನಿಷೇಧಿಸಲು ಅವಶ್ಯಕ ಕ್ರಮ ಕೈಗೊಂಡಿದೆ. ಹಾಗೂ ಇದೇ ಕಾರಣದಿಂದಾಗಿ ಅತಿಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿರುವವರು, ಇನ್ನು ಮುಂದೆ ಪ್ರತಿನಿತ್ಯ ವ್ಯಾಯಾಮ ಹಾಗೂ ಸಮತೋಲಿತ ಆಹಾರ ಸೇವನೆಮತ್ತು ತಮ್ಮ ಜೀವನಶೈಲಿಯಲ್ಲಿ ಅವಶ್ಯಕ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ. 

ಅಂತಿಮವಾಗಿ ಹೇಳುವುದಾದಲ್ಲಿ ನಿಮ್ಮ ಶರೀರದ ತೂಕವು ಅತಿಯಾಗಿ ಹೆಚ್ಚುತ್ತಿರುವ ಲಕ್ಷಣಗಳು ಕಂಡುಬರುವ ಮುನ್ನವೇ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವ ಮತ್ತು ಇದನ್ನು ತಡೆಗಟ್ಟುವ ಮಾರ್ಗೋಪಾಯಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ನಿಶ್ಚಿತವಾಗಿಯೂ ಹಿತಕರವೆನಿಸುವುದು.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ದಿ.೨೧-೦೧-೨೦೧೧ ರ ಸಂಚಿಕೆಯ ಮಹಿಳಾ ಸಂಪದದಲ್ಲಿ ಪ್ರಕಟಿತ ಲೇಖನ.



No comments:

Post a Comment