Thursday, May 1, 2014

A TRAIN TO HIMALAYA ?




  ಹಿಮಾಲಯ ಪರ್ವತವನ್ನು ಏರಲು ಪುಟ್ಟ ಸುರಂಗ ರೈಲು ?

ಲೇಖನದ ಶಿರೋನಾಮೆಯನ್ನು ಕಂಡು ನಿಮಗೆ ಅಚ್ಚರಿಯಾಗಿರುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ೮೮೫೦ ಮೀಟರ್ ಎತ್ತರದ ಎವರೆಸ್ಟ್ ಶಿಖರವನ್ನು ರೈಲಿನ ಮೂಲಕ ತಲುಪಬಹುದೆನ್ನುವ ಕಲ್ಪನೆಯೇ ಊಹಾತೀತ ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಆದರೆ ನಮ್ಮ ರಾಜ್ಯದ ಕೆಲ ಶಾಸಕರ ಅನಿಸಿಕೆಯಂತೆ, ಹಿಮಾಲಯ ಪರ್ವತ ಶ್ರೇಣಿಯಲ್ಲಿ ಸುರಂಗ ಮಾರ್ಗವೊಂದನ್ನು ಸಿದ್ಧಪಡಿಸಿ ಪುಟ್ಟ ರೈಲೊಂದನ್ನು ಓಡಿಸಲು ಆರಂಭಿಸಿದಲ್ಲಿ, ನಮ್ಮ ದೇಶಕ್ಕೆ ವಿದೇಶೀ ಪ್ರವಾಸಿಗರನ್ನು ಆಕರ್ಷಿಸುವುದು ಸುಲಭಸಾಧ್ಯ. ಬಿ.ಜೆ.ಪಿ ಸರ್ಕಾರದ ಆಡಳಿತಾವಧಿಯಲ್ಲಿ ಕರ್ನಾಟಕ ವಿಧಾನ ಸಭೆಯ ಭರವಸೆಗಳ ಸಮಿತಿಯ ಸದಸ್ಯರಾಗಿದ್ದ ಎಂಟು ಶಾಸಕರು ವಿದೇಶ ಪ್ರವಾಸದಿಂದ ಮರಳಿದ ಬಳಿಕ ಸಲ್ಲಿಸಿದ್ದ  ಅಧ್ಯಯನದ ವರದಿಯಲ್ಲಿ ಈ ಅದ್ಭುತ ಪ್ರಸ್ತಾವನೆಯನ್ನು ನಮೂದಿಸಲಾಗಿದೆ. ಅಂತೆಯೇ ಇದಕ್ಕೊಂದು ಸಮರ್ಥನೀಯ  ಕಾರಣವೂ ಇದೆ. 

ಸದನ ಸಮಿತಿಗಳು 

ಕರ್ನಾಟಕ ವಿಧಾನಸಭೆಯಲ್ಲಿ ಒಂದು ಡಜನ್ ಗಿಂತಲೂ ಅಧಿಕ ಸದನ ಸಮಿತಿಗಳಿದ್ದು, ವಿಧಾನ ಸಭೆ ಮತ್ತು ಪರಿಷತ್ತುಗಳ ಶಾಸಕರು ಇವುಗಳ ಸದಸ್ಯರಾಗಿರುತ್ತಾರೆ. ಆಡಳಿತ ಮತ್ತು ವಿರೋಧ ಪಕ್ಷಗಳ ಈ ಸದಸ್ಯರಿಗೆ ಸರಕಾರದ ವತಿಯಿಂದ ಅನೇಕ " ಉಚಿತ ಸೌಲಭ್ಯಗಳು" ದೊರೆಯುತ್ತವೆ. ಇವುಗಳಲ್ಲಿ ವಿಧಾನ ಸಭೆಯ ಐದು ವರ್ಷಗಳ ಅವಧಿಯಲ್ಲಿ ಇಂತಹ ಸದನ ಸಮಿತಿಗಳ ಸದಸ್ಯರಿಗೆ ಮೂರು  ಬಾರಿ ಸ್ವದೇಶ ಪ್ರವಾಸ ಮತ್ತು ಒಂದು ಬಾರಿ ವಿದೇಶ ಪ್ರವಾಸದ ಭಾಗ್ಯ ಪುಕ್ಕಟೆಯಾಗಿ ಲಭಿಸುತ್ತದೆ. ಶಾಸಕರ ವಿದೇಶ ಪ್ರವಾಸಗಳ ಬಗ್ಗೆ ಬಹಿರಂಗಗೊಂಡಿದ್ದ ಕೆಲ ವರದಿಗಳ ಪರಿಣಾಮವಾಗಿ, ಸಾರ್ವಜನಿಕರಿಂದ ಈ ಬಗ್ಗೆ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು. ಆದರೆ ಶಾಸಕರಿಗೆ ನೀಡಿರುವ ಈ ವಿಶೇಷ ಸವಲತ್ತನ್ನು ರದ್ದುಪಡಿಸಲು ಹಿಂಜರಿದ ಸರ್ಕಾರವು, ಇದನ್ನು ಅಧ್ಯಯನ ಪ್ರವಾಸ ಎಂದು ಸಮಜಾಯಿಷಿ ನೀಡಿ ಕೈತೊಳೆದುಕೊಂಡಿತ್ತು!. ಹಾಗೂ ವಿದೇಶ ಪ್ರವಾಸದಿಂದ ಮರಳಿದ ಸದನ ಸಮಿತಿಗಳ ಸದಸ್ಯರು, ತಾವು ನಡೆಸಿದ್ದ " ಅಧ್ಯಯನದ ವರದಿ" ಯನ್ನು ಸಭಾಧ್ಯಕ್ಷರಿಗೆ ಸಲ್ಲಿಸಬೇಕು ಎಂದು ಆದೇಶಿಸಿತ್ತು. 

ಬಿ.ಜೆ.ಪಿ ಸರ್ಕಾರದ ಆಡಳಿತಾವಧಿಯಲ್ಲಿ ಸರ್ಕಾರಿ ಭರವಸೆಗಳ ಸಮಿತಿಯು ೨೮-೦೮- ೨೦೦೯ ರಿಂದ ೦೯-೦೯-೨೦೦೯ ರ ವರೆಗೆ ಯುನೈಟೆಡ್ ಕಿಂಗ್ ಡಂ, ಫ್ರಾನ್ಸ್, ಬೆಲ್ಜಿಯಂ, ನೆದರ್ಲ್ಯಾಂಡ್, ಜರ್ಮನಿ,ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ, ಇಟಲಿ ಮತ್ತು ದುಬೈ ದೇಶಗಳಲ್ಲಿ ಕೈಗೊಂಡಿದ್ದ ವಿದೇಶ ಪ್ರವಾಸದಲ್ಲಿ ಶಾಸಕರಾದ ಗೋಪಾಲಕೃಷ್ಣ ಬೇಳೂರು ( ಸಮಿತಿಯ ಅಧ್ಯಕ್ಷರು), ನೆಹರು ಚನ್ನಬಸಪ್ಪ ಒಲೆಕಾರ್, ವೀರಭದ್ರಪ್ಪ ಹಾಲಹರವಿ, ಕೆ.ಎಂ. ವಿರೂಪಾಕ್ಷಪ್ಪ, ಕೆ.ವೆಂಕಟೇಶ್, ಕೆ.ಬಿ.ಚಂದ್ರಶೇಖರ್, ಸಿ.ಪುಟ್ಟರಂಗ ಶೆಟ್ಟಿ, ಜೆ.ಡಿ.ನಾಯ್ಕ್ ಮತ್ತು ಸಿ.ಬಿ.ಸುರೇಶ ಬಾಬು ಪಾಲ್ಗೊಂಡಿದ್ದರು. ಈ ಸಮಿತಿಯ ಸದಸ್ಯರು ಸಲ್ಲಿಸಿದ್ದ ಅಧ್ಯಯನದ ವರದಿಯಲ್ಲಿ ತಾವು ವಿವಿಧ ದೇಶಗಳಲ್ಲಿ ಕಂಡಿದ್ದ ಅನೇಕ ವ್ಯವಸ್ಥೆಗಳು ಮತ್ತು ವಿಶೇಷ ಸೌಲಭ್ಯಗಳನ್ನು ನಮ್ಮ ರಾಜ್ಯದಲ್ಲಿ ಮತ್ತು ನಮ್ಮ ದೇಶದಲ್ಲಿ ಅನುಷ್ಠಾನಗೊಳಿಸಬೇಕು ಎನ್ನುವ ಸಲಹೆಯನ್ನು ನೀಡಿದ್ದಾರೆ. ವಿಶೇಷವೆಂದರೆ ಇತರ ಸದನ ಸಮಿತಿಗಳೂ ಇದೇ ರೀತಿಯ ಅನೇಕ ಸಲಹೆಗಳನ್ನು ತಮ್ಮ ವರದಿಗಳಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಸರ್ಕಾರಿ ಭರವಸೆಗಳ ಸಮಿತಿಯು ಹಿಮಾಲಯ ಪರ್ವತ ಶ್ರೇಣಿಯಲ್ಲಿ ಸುರಂಗ ರೈಲು ಮಾರ್ಗವನ್ನು ನಿರ್ಮಿಸಬೇಕೆನ್ನುವ ಸಲಹೆಗೆ ಇತರ ಯಾವುದೇ ಸಲಹೆ ಸಾಟಿಯಲ್ಲ.

ಯುಂಗ್ ಫ್ರಾವ್ ಯೋಕ್ (JUNGFRAUJOCH)

ಸರ್ಕಾರಿ ಭರವಸೆಗಳ ಸಮಿತಿಯು ಸ್ವಿಟ್ಜರ್ಲೆಂಡ್ ದೇಶಕ್ಕೆ ಭೇಟಿಯನ್ನು ನೀಡಿದ್ದ ಸಂದರ್ಭದಲ್ಲಿ, ಅಲ್ಲಿನ ಸುಪ್ರಸಿದ್ಧ ಪ್ರವಾಸಿ ತಾಣವೆನಿಸಿರುವ ಯುಂಗ್ ಫ್ರಾವ್ ಯೋಕ್ ಎನ್ನುವ ಸುಮಾರು ೩೬೭೧ ಮೀಟರ್ ಎತ್ತರದ ಪರ್ವತದ ಶಿಖರಕ್ಕೆ ಭೇಟಿ ನೀಡಿತ್ತು. ಈ ಹಿಮಾಚ್ಛಾದಿತ ಶಿಖರವನ್ನು ಸುಲಭವಾಗಿ ಏರಲು ಅದ್ಭುತವಾದ ಸುರಂಗಗಳಿರುವ ರೈಲುಮಾರ್ಗವೊಂದನ್ನು ನಿರ್ಮಿಸಲಾಗಿದೆ. ೧೮೯೬ ರಲ್ಲಿ ಆರಂಭಗೊಂಡಿದ್ದ ಈ ರೈಲುಮಾರ್ಗದ ಕಾಮಗಾರಿಗಳು ಪರಿಪೂರ್ಣಗೊಳ್ಳಲು ೧೬ ವರ್ಷಗಳೇ ತಗಲಿದ್ದವು. ಈ ರೈಲುಮಾರ್ಗದಲ್ಲಿ ನಾಲ್ಕು ಭೋಗಿಗಳು ಇರುವ ಪುಟ್ಟ ರೈಲೊಂದರ ಮೂಲಕ ಪ್ರವಾಸಿಗಳು ಪರ್ವತದ ಶಿಖರವನ್ನು ಕೇವಲ ೫೦ ನಿಮಿಷಗಳಲ್ಲಿ ತಲುಪಬಹುದಾಗಿದೆ. ಸುಮಾರು ೯ ಕಿ.ಮೀ ಉದ್ದದ ಈ ರೈಲುಮಾರ್ಗದಲ್ಲಿ ಹಲವಾರು ಸುರಂಗಗಳಿವೆ. ಪರ್ವತದ ಬುಡದಿಂದ ಈ ಪುಟ್ಟ ರೈಲಿನ ಮೂಲಕ ಮೇಲೇರುವಾಗ, ಸುಮಾರು ೯೪೦೦ ಅಡಿ ಎತ್ತರದಲ್ಲಿಣ " ವೀಕ್ಷಣಾ ಕೇಂದ್ರ" ದ ಬಳಿ ರೈಲನ್ನು ನಿಲ್ಲಿಸಲಾಗುತ್ತದೆ. ಬಳಿಕ ೧೦೩೬೮ ಅಡಿ ಎತ್ತರದಲ್ಲಿ ಮತ್ತೊಮ್ಮೆ ರೈಲನ್ನು ನಿಲ್ಲಿಸಿ, ಸುತ್ತಮುತ್ತಲ ಸುಂದರ ಪರ್ವತ ಶ್ರೇಣಿಗಳನ್ನು ವೀಕ್ಷಿಸಲು ಅವಕಾಶವಿರುತ್ತದೆ. ತದನಂತರ ಶಿಖರದ ತುತ್ತತುದಿಯನ್ನು ತಲುಪಿದಾಗ ಜರ್ಮನಿ ಮತ್ತು ಫ್ರಾನ್ಸ್ ದೇಶಗಳು ಗೋಚರಿಸುತ್ತವೆ. ಜೊತೆಗೆ ಅಲ್ಲಿರುವ ಐಸ್ ಪ್ಯಾಲೇಸ್ ಮತ್ತು ಮ್ಯೂಸಿಯಂಗಳಲ್ಲಿ ಅನೇಕ ಆಕರ್ಷಕ ಕಲಾಕೃತಿಗಳನ್ನು ವೀಕ್ಷಿಸಬಹುದಾಗಿದೆ. 

ಈ ಪರ್ವತ ಶಿಖರವನ್ನು ಏರಲು ಬೆಟ್ಟವನ್ನು ಕೊರೆದು ನಿರ್ಮಿಸಿರುವ ಅದ್ಭುತ ರೈಲುಮಾರ್ಗವನ್ನು ಮತ್ತು ಪುಟ್ಟ ರೈಲನ್ನು ಕಂಡು ಆಶ್ಚರ್ಯಚಕಿತರಾಗಿದ್ದ ನಮ್ಮ ಶಾಸಕರು, ತಮ್ಮ ಅಧ್ಯಯನದ ವರದಿಯಲ್ಲಿ ಇದನ್ನು ದಾಖಲಿಸಿದ್ದಾರೆ. ಜೊತೆಗೆ " ನಮ್ಮ ರಾಷ್ಟ್ರದಲ್ಲಿನ ಹಿಮಾಲಯ ಪ್ರದೇಶಗಳಲ್ಲಿ ಅನೇಕ ಪರ್ವತ ಶಿಖರಗಳಿದ್ದು, ಇದೆ ರೀತಿಯಾದ ಸೌಲಭ್ಯವನ್ನು ಅಲ್ಲಿಯೂ ಸಹ ಕಲ್ಪಿಸಿಕೊಟ್ಟರೆ ಹೆಚ್ಚುಹೆಚ್ಚು ಪ್ರವಾಸಿಗಳನ್ನು ಆಕರ್ಷಣೆ ಮಾಡುವುದಕ್ಕೆ ಸಾಧ್ಯವಾಗುತ್ತದೆಂದು ಅಭಿಪ್ರಾಯ ವ್ಯಕ್ತಪಡಿಸಿತು" ಎಂದು ಉಲ್ಲೇಖಿಸಿದ್ದಾರೆ!. 

ನಿಜ ಹೇಳಬೇಕಿದ್ದಲ್ಲಿ ನಮ್ಮ ಶಾಸಕರಿಗೆ ಹಿಮಾಲಯ ಪರ್ವತಶಿಖರ ಪ್ರದೇಶವು " ಪರಿಸರ ಸೂಕ್ಷ್ಮ ಪ್ರದೇಶ" ಎನ್ನುವುದೇ ತಿಳಿದಿಲ್ಲ. ಅಂತೆಯೇ ಇಂತಹ ಪ್ರದೇಶಗಳಲ್ಲಿ ಯಾವುದೇ ರೀತಿಯ ನಿರ್ಮಾಣ ಕಾಮಗಾರಿಗಳನ್ನು ನಡೆಸುವಂತಿಲ್ಲ. ಈಗಾಗಲೇ ಹೆಚ್ಚುತ್ತಿರುವ ಜಾಗತಿಕ ತಾಪಮಾನದ ಪರಿಣಾಮವಾಗಿ ಹಿಮಾಲಯ ಪರ್ವತ ಶಿಖರದಲ್ಲಿನ ಹಿಮರಾಶಿ ಕರಗುತ್ತಿರುವ ವೇಗ ಹೆಚ್ಚುತ್ತಿರುವ ಬಗ್ಗೆ ಪರಿಸರ ತಜ್ಞರು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಇಂತಹ ಮಹತ್ವಪೂರ್ಣ  ವಿಚಾರಗಳ ಅರಿವಿಲ್ಲದ ನಮ್ಮ ಶಾಸಕರು, ಕಾಟಾಚಾರಕ್ಕಾಗಿ ತಾವು ಸಲ್ಲಿಸುವ ವಿದೇಶ ಅಧ್ಯಯನ ಪ್ರವಾಸದ ವರದಿಯಲ್ಲಿ ಇಂತಹ ಶಿಫಾರಸುಗಳನ್ನು ಮಾಡಿರುವುದು ನಿಜಕ್ಕೂ ಹಾಸ್ಯಾಸ್ಪದ ಎನ್ನದೇ ವಿಧಿಯಿಲ್ಲ!. 


ಬಿ. ಜೆ. ಪಿ ಸರ್ಕಾರದ ಐದು ವರ್ಷಗಳ ಅಧಿಕಾರದ ಅವಧಿಯಲ್ಲಿ ವಿವಿಧ ಸದನ ಸಮಿತಿಗಳು ಕೈಗೊಂಡಿದ್ದ ವಿದೇಶ ಪ್ರವಾಸದ ವರದಿಗಳನ್ನು ಮಾಹಿತಿಹಕ್ಕು ಕಾಯಿದೆಯನ್ವಯ ಪಡೆದುಕೊಳ್ಳಲು ಸುಮಾರು ಸುಮಾರು ಒಂದು ಸಾವಿರ ರೂಪಾಯಿ ವೆಚ್ಚವಾಗಿತ್ತು. ಆದರೆ ಇದರಿಂದಾಗಿ ನಮ್ಮ ಶಾಸಕರು ಅಧ್ಯಯನದ ನೆಪದಲ್ಲಿ ವಿದೇಶ ಪ್ರವಾಸ ಕೈಗೊಳ್ಳುವುದು ಮೋಜು- ಮಸ್ತಿ ಮಾಡಲೆಂದೇ ವಿನಃ , ಯಾವುದೇ ಅನ್ಯಕಾರಣಕ್ಕಾಗಿ  ಅಲ್ಲ ಎನ್ನುವುದು ಅಧಿಕೃತವಾಗಿ ಸಾಬೀತಾಗಿದೆ.  ಏಕೆಂದರೆ ವಿವಿಧ ಸಮಿತಿಗಳು ಸಂದರ್ಶಿಸಿದ್ದ ದೇಶಗಳ ಬಗ್ಗೆ ಸಲ್ಲಿಸಿದ್ದ ವರದಿಗಳಲ್ಲಿ ಸಾಕಷ್ಟು ಸಾಮ್ಯತೆಗಳಿವೆ!. 

ಕೊನೆಯ ಮಾತು 

೧೯೫೩ ರಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನು ಮೊಟ್ಟಮೊದಲಬಾರಿಗೆ ಏರಿದ್ದ ಎಡ್ಮಂಡ್ ಹಿಲರಿ ಮತ್ತು ತೇನ್ಸಿಂಗ್ ನಾರ್ಗೆ, ಅಕ್ಷರಶಃ ಹರಸಾಹಸವನ್ನೇ  ನಡೆಸಿದ್ದರು. ಪ್ರಸ್ತುತ ನಮ್ಮ ರಾಜ್ಯದ ಸನ್ಮಾನ್ಯ ಶಾಸಕರ ಶಿಫಾರಸನ್ನು ಅನುಷ್ಠಾನಗೊಳಿಸಿದಲ್ಲಿ, ನೀವು ಕೂಡಾ ಹಿಮಾಲಯ ಪರ್ವತವನ್ನು ಕಿಂಚಿತ್ ಶ್ರಮವಿಲ್ಲದೇ ಆರಾಮವಾಗಿ ರೈಲಿನಲ್ಲಿ ಕುಳಿತು ತಲುಪಬಹುದಾಗಿದೆ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 


No comments:

Post a Comment