Thursday, May 29, 2014

CONSTRUCTION WASTE DUMPED NEAR HIGHWAYS !




 ಹೆದ್ದಾರಿಯ ಬದಿಯಲ್ಲಿ ರಾಶಿ ಬಿದ್ದಿರುವ ನಿರ್ಮಾಣ ತ್ಯಾಜ್ಯಗಳು 

ನಮ್ಮ ದೇಶದ ಪ್ರತಿಯೊಂದು ರಾಜ್ಯದ ಪ್ರತಿಯೊಂದು ಮಹಾನಗರ, ನಗರ ಮತ್ತು ಪಟ್ಟಣಗಳಲ್ಲಿ, ವರ್ಷದ ೩೬೫ ದಿನಗಳಲ್ಲೂ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಜಮೀನು ಮತ್ತು ಕಟ್ಟಡಗಳ ಬೇಡಿಕೆಯ ಪ್ರಮಾಣಗಳು ದಿನೇದಿನೇ ಹೆಚ್ಚುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವೆನಿಸಿದೆ. ಇದರೊಂದಿಗೆ ಗಗನಕ್ಕೇರುತ್ತಿರುವ ಜಮೀನಿನ ಬೆಲೆಯಿಂದಾಗಿ ಹಾಗೂ ಖಾಲಿ ಜಮೀನಿನ ಕೊರತೆಯಿಂದಾಗಿ, ಬಹುತೇಕ ಜನರು ಹಳೆಯ ವಸತಿ ಮತ್ತು ವಾಣಿಜ್ಯ ಕಟ್ಟಡಗಳನ್ನು ಖರೀದಿಸಿದ ಬಳಿಕ ಇವುಗಳನ್ನು ಕೆಡವಿ ನೂತನ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುತ್ತಾರೆ. ಈ ಸಂದರ್ಭದಲ್ಲಿ ಉತ್ಪನ್ನವಾಗುವ ನಿರ್ಮಾಣ ತ್ಯಾಜ್ಯಗಳನ್ನು, ಕತ್ತಲಾದ ಬಳಿಕ ನಗರದ ಹೊರವಲಯದಲ್ಲಿನ ಖಾಲಿ ಜಾಗಗಳು, ನಿರ್ಜನ ಪ್ರದೇಶಗಳು ಅಥವಾ ಹೆದ್ದಾರಿಗಳ ಬದಿಗಳಲ್ಲಿ ಸುರಿದು ಪಲಾಯನ ಮಾಡುತ್ತಾರೆ. 

ಪ್ರತಿಯೊಂದು ಮಹಾನಗರ, ನಗರ ಮತ್ತು ಪಟ್ಟಣಗಳಲ್ಲಿ ಕಾಣಸಿಗುವ ಇಂತಹ ನಿರ್ಮಾಣ ತ್ಯಾಜ್ಯಗಳೊಂದಿಗೆ, ಇತರ ಅನೇಕ ವಿಧದ ತ್ಯಾಜ್ಯಗಳನ್ನೂ ಇದೇ ರೀತಿಯಲ್ಲಿ ಕದ್ದುಮುಚ್ಚಿ ವಿಲೇವಾರಿ ಮಾಡುವುದರಿಂದಾಗಿ, ಇಂತಹ ರಸ್ತೆಗಳು ಮತ್ತು ಪ್ರದೇಶಗಳು ತ್ಯಾಜ್ಯ ವಿಲೇವಾರಿ ಘಟಕಗಳಂತೆ ಗೋಚರಿಸುತ್ತವೆ. ಇದನ್ನು ಕಂಡ ಜನಸಾಮಾನ್ಯರು ಸ್ಥಳೀಯ ಸಂಸ್ಥೆಯ ಅಥವಾ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ದೂಷಿಸುತ್ತಾರೆ. ಆದರೆ ಇರುಳಿನಲ್ಲಿ ನಡೆಯುವ ಈ ಅನೈತಿಕ ತ್ಯಾಜ್ಯ ವಿಲೇವಾರಿಯನ್ನು ತಡೆಗಟ್ಟುವುದು ಹೇಳಿದಷ್ಟು ಸುಲಭವೇನಲ್ಲ. ಏಕೆಂದರೆ ರಾತ್ರಿ ಪಾಳಿಯ ಪೊಲೀಸರಂತೆ ನಗರದ ನಿರ್ಜನ ಪ್ರದೇಶಗಳು ಮತ್ತು ಹೆದ್ದಾರಿಗಳಲ್ಲಿ ಈ ಅಧಿಕಾರಿಗಳು ಗಸ್ತು ತಿರುಗುವುದು ಅಸಾಧ್ಯವೂ ಹೌದು. ಹಗಲಿನಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾದ ಈ ಅಧಿಕಾರಿಗಳು, ಇರುಳಿನಲ್ಲಿ ನಿದ್ದೆಗೆಟ್ಟು ಇಂತಹ ಹೊಣೆಗಾರಿಕೆಯನ್ನು ನಿಭಾಯಿಸುವುದು ನಿಶ್ಚಿತವಾಗಿಯೂ ಉಚಿತವಲ್ಲ. 

ರಸ್ತೆಗಳ ಬದಿಗಳಲ್ಲಿ ಇಂತಹ ತ್ಯಾಜ್ಯಗಳನ್ನು ಸುರಿಯುವುದರಿಂದ, ರಸ್ತೆಯ ಮೇಲೆ ಬಿದ್ದ ಮಳೆಯ ನೀರು ಸರಾಗವಾಗಿ ಹರಿದು ಚರಂಡಿಗಳನ್ನು ಸೇರಲು ಅಡಚಣೆ ಸಂಭವಿಸುತ್ತದೆ. ಇದರಿಂದಾಗಿ ಮಳೆನೀರು ರಸ್ತೆಯ ಬದಿಯಲ್ಲೇ ಸಂಗ್ರಹವಾಗುವುದರಿಂದ, ಪುಟ್ಟಕೆರೆಗಳಂತೆ ತೋರುತ್ತವೆ. ಜೊತೆಗೆ ಈ ರೀತಿಯಲ್ಲಿ ನೀರು ನಿಂತ ರಸ್ತೆಯ ಭಾಗವು ಘನ ವಾಹನಗಳ ಸಂಚಾರದ ಸಂದರ್ಭದಲ್ಲಿ ಕುಸಿಯುವುದರಿಂದ, ರಸ್ತೆಗಳು ತೀವ್ರವಾಗಿ ಹಾನಿಗೆ ಒಳಗಾಗುತ್ತವೆ. ಇಂತಹ ಸಮಸ್ಯೆಗಳು ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿದಲ್ಲಿ, ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಗಳು ಬಾಧಿಸುವುದರೊಂದಿಗೆ, ರಸ್ತೆ ಅಪಘಾತಗಳಿಗೂ ಕಾರಣವೆನಿಸುತ್ತವೆ. ಅನೇಕ ಸಂದರ್ಭಗಳಲ್ಲಿ ಅಮಾಯಕರ ಪ್ರಾಣಹಾನಿಗೂ ಕಾರಣವೆನಿಸಬಲ್ಲ ಈ ಸಮಸ್ಯೆಗೆ, ಇಂತಹ ನಿರ್ಮಾಣ ತ್ಯಾಜ್ಯಗಳನ್ನು ರಸ್ತೆಗಳ ಬದಿಗಳಲ್ಲಿ ಸುರಿದವರೇ ಕಾರಣಕರ್ತರೆನಿಸುತ್ತಾರೆ. ಆದರೆ ಕದ್ದುಮುಚ್ಚಿ ರಾತ್ರಿಯ ವೇಳೆಯಲ್ಲಿ ತ್ಯಾಜ್ಯಗಳನ್ನು ಸುರಿಯುವ ಮಂದಿ, ತಮ್ಮ ನಿರ್ಲಕ್ಷ್ಯದಿಂದ ಉದ್ಭವಿಸಬಲ್ಲ ಸಮಸ್ಯೆಗಳ ಬಗ್ಗೆ ಯಾವತ್ತೂ ಚಿಂತಿಸುವುದೇ ಇಲ್ಲ. 

ವಿಶೇಷವೆಂದರೆ ಕೆಲ ಸಂದರ್ಭಗಳಲ್ಲಿ ನಿರ್ಮಾಣ ಅಥವಾ ಇತರ ತ್ಯಾಜ್ಯಗಳನ್ನು ತಂದು ಸುರಿಯುವುದನ್ನು ಕಣ್ಣಾರೆ ಕಂಡರೂ ಸಂಬಂಧಿತ ಅಧಿಕಾರಿಗಳಿಗೆ ಅಥವಾ ಇಲಾಖೆಗಳಿಗೆ ದೂರನ್ನು ನೀಡಲು ಹಿಂಜರಿವ ಜನರು, ಅಧಿಕಾರಿಗಳನ್ನು ದೂಷಿಸಲು ಎಂದಿಗೂ ಹಿಂಜರಿಯುವುದೇ ಇಲ್ಲ!. ಕನಿಷ್ಠಪಕ್ಷ ಈ ರೀತಿಯಲ್ಲಿ ತ್ಯಾಜ್ಯಗಳನ್ನು ತಂದು ಸುರಿಯುವ ವಾಹನಗಳ ನೋಂದಣಿ ಸಂಖ್ಯೆಯನ್ನು ದಾಖಲಿಸಿಕೊಂಡು, ಸಂಬಂಧಿತ ಇಲಾಖೆಗಳಿಗೆ ದೂರವಾಣಿಯ ಮೂಲಕ ಈ ಮಾಹಿತಿಯನ್ನು ನೀಡುವ ಮೂಲಕ  ತಪ್ಪಿತಸ್ತರನ್ನು ಶಿಕ್ಷಿಸಲು ನೆರವಾಗುವುದು " ನಾಗರಿಕ ಪ್ರಜ್ಞೆ" ಯ ಅವಿಭಾಜ್ಯ ಅಂಗವಾಗಿದ್ದು, ಈ ಸಮಸ್ಯೆಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸುವಲ್ಲಿ ಇದು ಉಪಯುಕ್ತವೆನಿಸಬಲ್ಲದು.  

ತಡೆಗಟ್ಟುವುದೆಂತು ?

ದೇಶದಲ್ಲಿ ದಿನನಿತ್ಯ ಉತ್ಪನ್ನವಾಗುವ ಅಗಾಧ ಪ್ರಮಾಣದ ನಿರ್ಮಾಣ ತ್ಯಾಜ್ಯಗಳನ್ನು ಸಮರ್ಪಕವಾಗಿ ಮರುಬಳಕೆ ಮಾಡಲು, ಪುನರ್ ಆವರ್ತನಗೊಳಿಸಲು ಅಥವಾ ಸುರಕ್ಷಿತವಾಗಿ ವಿಲೇವಾರಿ ಮಾಡಲು ಹಲವಾರು ವಿಧಾನಗಳಿವೆ. ಇವುಗಳನ್ನು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಸಂದರ್ಭೋಚಿತವಾಗಿ ಅಳವಡಿಸಿಕೊಳ್ಳ ಬೇಕಿದೆ. ಈ ವಿಧಾನಗಳಲ್ಲಿ ತಗ್ಗು ಪ್ರದೇಶವನ್ನು ಮಣ್ಣು ತುಂಬಿಸಿ ಎತ್ತರಿಸುವ ಸ್ಥಳಗಳ ತಳಭಾಗದಲ್ಲಿ ಈ ನಿರ್ಮಾಣ ತ್ಯಾಜ್ಯಗಳನ್ನು ಹರಡಿದ ಬಳಿಕ, ಮೇಲಿನ ಭಾಗಕ್ಕೆ ಮಣ್ಣು ತುಂಬಿಸಿದಲ್ಲಿ ಗಣನೀಯ ಪ್ರಮಾಣದ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಿದಂತಾಗುವುದು. ಅಂತೆಯೇ ಕಲ್ಲು, ಸಿಮೆಂಟ್, ಕಾಂಕ್ರೀಟ್ ಮತ್ತಿತರ ತ್ಯಾಜ್ಯಗಳನ್ನು ರಸ್ತೆಗಳ ನಿರ್ಮಾಣದ ಸಂದರ್ಭದಲ್ಲಿ ಬಳಸುವ ವಿಧಾನವು ಈಗಾಗಲೇ ಅನೇಕ ದೇಶಗಳಲ್ಲಿ ಬಳಸಲ್ಪಡುತ್ತಿದೆ. ಅದೇ ರೀತಿಯಲ್ಲಿ ಸಿಮೆಂಟ್ ಹಾಗೂ ಕಾಂಕ್ರೀಟ್ ತ್ಯಾಜ್ಯಗಳನ್ನು ಹುಡಿಮಾಡಿ, ಸಿಮೆಂಟ್ ಬ್ಲಾಕ್ ಗಳನ್ನು ತಯಾರಿಸುವ ಘಟಕಗಳಲ್ಲಿ ಮರುಬಳಕೆ ಮಾಡಬಹುದಾಗಿದೆ. ಇಂತಹ ವಿಧಾನಗಳನ್ನು ನಾವು ಅಳವಡಿಸಿಕೊಳ್ಳದೇ ಇದ್ದಲ್ಲಿ, ನಮ್ಮ ದೇಶದ ಪ್ರತಿಯೊಂದು ಮಹಾನಗರ, ನಗರ ಮತ್ತು ಪಟ್ಟಣಗಳ ಮೂಲೆಮೂಲೆಗಳಲ್ಲಿ ನಿರ್ಮಾಣ ತ್ಯಾಜ್ಯಗಳ ರಾಶಿಗಳು ರಾರಾಜಿಸಲಿವೆ!. 

ಕೊನೆಯ ಮಾತು 

ಅಧಿಕಾರ ಸ್ವೀಕಾರದ ಬಳಿಕ ದೇಶದ ನೂತನ ಪ್ರಧಾನಿಯಾದ ನರೇಂದ್ರ ಮೋದಿಯವರು " ಸ್ವಚ್ಚ ಭಾರತ " ಎನ್ನುವ ಆಂದೋಲನವನ್ನು ಆರಂಭಿಸುವ ಬಗ್ಗೆ ಸೂಚನೆಯನ್ನು ನೀಡಿದ್ದಾರೆ. ಪ್ರಧಾನ ಮಂತ್ರಿ ಹುದ್ದೆಗೆ ಮೋದಿಯವರನ್ನು ಬೆಂಬಲಿಸಿದಂತೆಯೇ, ಈ ವಿಶಿಷ್ಟ ಯೋಜನೆಯನ್ನು ನಾವುನೀವೆಲ್ಲರೂ ಬೆಂಬಲಿಸಿದಲ್ಲಿ, ಈ ಯೋಜನೆಯು ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ಅದೇ ರೀತಿಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ಸಹಕಾರ ದೊರೆಯದೆ ಇದ್ದಲ್ಲಿ, ಇದು ದಯನೀಯವಾಗಿ ವಿಫಲವಾಗುವುದರಲ್ಲೂ ಸಂದೇಹವಿಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು   



No comments:

Post a Comment