Saturday, May 3, 2014

ASTITERIGEYANNE SANGRAHISADA STHALEEYASAMSTHEGALU !






 ಆಸ್ತಿತೆರಿಗೆಯನ್ನು ಸಂಗ್ರಹಿಸದ ಸ್ಥಳೀಯ ಸಂಸ್ಥೆಗಳು !

ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ಸ್ವಂತ ಆದಾಯದ ಮೂಲಗಳಲ್ಲಿ ಸ್ವಯಂಘೋಷಿತ ಆಸ್ತಿತೆರಿಗೆಯು ಅಗ್ರಸ್ಥಾನದಲ್ಲಿದೆ.ಆದರೆ ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದ ಸೊರಗಿರುವ ಸ್ಥಳೀಯಸಂಸ್ಥೆಗಳು, ಶೇ.೩೧ ರಷ್ಟು ಆಸ್ತಿಗಳ ತೆರಿಗೆಯನ್ನೇ ಸಂಗ್ರಹಿಸುತ್ತಿಲ್ಲ ಎಂದಲ್ಲಿ ನೀವೂ ನಂಬಲಾರಿರಿ.ಈ ವಿಲಕ್ಷಣ ಸಮಸ್ಯೆಗೆ ಸ್ಥಳೀಯಸಂಸ್ಥೆಗಳ ಸಿಬಂದಿಗಳ ನಿರ್ಲಕ್ಷ್ಯ, ಭ್ರಷ್ಟಾಚಾರ ಮತ್ತು ರಾಜಕಾರಣಿಗಳ ಹಸ್ತಕ್ಷೇಪಗಳೇ ಕಾರಣವೆನಿಸಿವೆ. ಈ ಸಮಸ್ಯೆಗೆ ಬುದ್ಧಿವಂತರ ಜಿಲ್ಲೆಯೆನಿಸಿರುವ ದಕ್ಷಿಣ ಕನ್ನಡವೂ ಅಪವಾದವೆನಿಸಿಲ್ಲ. ಗತವರ್ಷದ ಮಧ್ಯಭಾಗದಲ್ಲಿ ಲಭಿಸಿದ್ದ ಈ ಮಾಹಿತಿಯು ಜನಸಾಮಾನ್ಯರ ಮನದಲ್ಲಿ ಅನೇಕ ಸಂದೇಹಗಳು ಮೂಡಲು ಕಾರಣ ವೆನಿಸಲಿದೆ.

ಆಸ್ತಿಗಳ ಮಾಹಿತಿ ಸಂಗ್ರಹ 

ಸ್ಥಳೀಯಸಂಸ್ಥೆಗಳಲ್ಲಿ ಇ- ಆಡಳಿತವನ್ನು ಅನುಷ್ಠಾನಿಸುವ ನಿಟ್ಟಿನಲ್ಲಿ ಕರ್ನಾಟಕ ಅರ್ಬನ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಎಂಡ್ ಫೈನಾನ್ಸ್ ಕಾರ್ಪೋರೇಶನ್ (ಕೆ.ಯು.ಐ.ಡಿ.ಎಫ್. ಸಿ ) ಸಂಸ್ಥೆಯು, ರಾಜ್ಯದ ೨೧೩ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಪ್ರತಿಯೊಂದು ಜಮೀನು, ಕಟ್ಟಡಗಳು ಮತ್ತು ಖಾಲಿ ನಿವೇಶನಗಳನ್ನು ಗುರುತಿಸಿ, ಪ್ರತಿಯೊಂದು ಆಸ್ತಿಗೂ ವಿಶಿಷ್ಠ ಗುರುತು ಸಂಖ್ಯೆಯನ್ನು ನೀಡಿತ್ತು. ಆದರೆ ಈ ಯೋಜನೆಯ ವ್ಯಾಪ್ತಿಯಿಂದ ಬೆಂಗಳೂರು ಮಹಾನಗರವನ್ನು ಹೊರಗಿರಿಸಲಾಗಿತ್ತು. 

ಸ್ಥಳೀಯಸಂಸ್ಥೆಗಳ ವ್ಯಾಪ್ತಿಯಲ್ಲಿನ ಆಸ್ತಿಗಳ ವಿವರಗಳು ಮತ್ತು ಮೌಲ್ಯಗಳನ್ನು ನಿಷ್ಕರ್ಷಿಸುವ ಕಾರ್ಯವನ್ನು ಎರಡು ಹಂತಗಳಲ್ಲಿ ನಡೆಸಲಾಗಿತ್ತು. ೨೦೦೫ ರಿಂದ ೨೦೧೦ ರ ಅವಧಿಯಲ್ಲಿ ನಿರ್ಮಲ ನಗರ ಯೋಜನೆಯನ್ವಯ ೪೯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಆಸ್ತಿಗಳ ಸಮೀಕ್ಷೆಯನ್ನು ನಡೆಸಲಾಗಿತ್ತು. ಏಶಿಯನ್ ಅಭಿವೃದ್ಧಿ ಬ್ಯಾಂಕಿನ ಆರ್ಥಿಕ ನೆರವಿನಿಂದ ನಡೆಸಿದ್ದ ಈ ಸಮೀಕ್ಷೆಯಲ್ಲಿ ಮೆನೇಜ್ಮೆಂಟ್ ಇನ್ಫಾರ್ಮೇಶನ್ ಸಿಸ್ಟಂ(ಎಂ.ಐ. ಎಸ್) ಮತ್ತು ಗ್ಲೋಬಲ್ ಇನ್ಫಾರ್ಮೇಶನ್ ಸಿಸ್ಟಮ್(ಜಿ. ಐ.ಎಸ್) ಗಳನ್ನು ಬಳಸಿ, ೨೨,೮೬, ೩೧೨ ಆಸ್ತಿಗಳ ನಕ್ಷೆಗಳನ್ನು ಸಿದ್ಧಪಡಿಸಲಾಗಿತ್ತು. ಆಶ್ಚರ್ಯವೆಂದರೆ ಇವುಗಳಲ್ಲಿ ೮,೦೬,೭೪೧ ಆಸ್ತಿಗಳು ತೆರಿಗೆಯ ವ್ಯಾಪ್ತಿಗೆ ಒಳಪಟ್ಟಿರಲಿಲ್ಲ !.  

೨೦೦೯ ರಿಂದ ೨೦೧೧ ರ ಅವಧಿಯಲ್ಲಿ ನಡೆಸಿದ್ದ ದ್ವಿತೀಯ ಹಂತದ ಸಮೀಕ್ಷೆಯನ್ನು ಕರ್ನಾಟಕ ಪೌರಾಡಳಿತ ಸುಧಾರಣಾ ಯೋಜನೆಯನ್ವಯ ೧೬೪ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಡೆಸಿದ್ದು, ಈ ಯೋಜನೆಗೆ ವಿಶ್ವ ಬ್ಯಾಂಕ್ ಆರ್ಥಿಕ ನೆರವನ್ನು ನೀಡಿತ್ತು. ಇದರಲ್ಲಿ ೧೫,೨೨, ೨೯೦ ಆಸ್ತಿಗಳ ಸಮೀಕ್ಷೆಯನ್ನು ನಡೆಸಿದ್ದು, ಇವುಗಳಲ್ಲಿ ೪,೦೦,೯೯೮ ಆಸ್ತಿಗಳು ತೆರಿಗೆಯನ್ನೇ ಪಾವತಿಸದಿರುವುದು ಪತ್ತೆಯಾಗಿತ್ತು. ಇವೆರಡೂ ಸಮೀಕ್ಷೆಗಳ ಪರಿಣಾಮವಾಗಿ ರಾಜ್ಯದ ೧.೨ ದಶಲಕ್ಷ ಅರ್ಥಾತ್, ಶೇ.೩೧ ರಷ್ಟು ಆಸ್ತಿಗಳ ಸ್ವಯಂಘೋಷಿತ ಆಸ್ತಿತೆರಿಗೆಯನ್ನು ನಿಷ್ಕರ್ಷೆ ಮಾಡದಿರುವುದು ಅಥವಾ ಪಾವತಿಸದಿರುವುದು ತಿಳಿದುಬಂದಿತ್ತು !. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮೀಕ್ಷೆಗೆ ಮುನ್ನ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಪಾವತಿಸುತ್ತಿದ್ದ ಆಸ್ತಿಗಳ ಸಂಖ್ಯೆಯು ೧,೮೪,೧೬೫ ಆಗಿದ್ದು, ಸಮೀಕ್ಷೆಯ ಬಳಿಕ ಈ ಸಂಖ್ಯೆಯು ೨,೯೬,೬೫೯ ಆಗಿತ್ತು!.

ರಾಜ್ಯಾದ್ಯಂತ ಸಮೀಕ್ಷೆಯನ್ನು ನಡೆಸಿ, ಅವಶ್ಯಕ ಮಾಹಿತಿಗಳನ್ನು ಸಂಗ್ರಹಿಸಿದ್ದರೂ, ಸ್ಥಳೀಯ ಸಂಸ್ಥೆಗಳು ೨೦೦೩-೦೪ ರಲ್ಲಿ ಜಾರಿಗೆ ಬಂದಿದ್ದ ಸ್ವಯಂಘೋಷಿತ ಆಸ್ತಿತೆರಿಗೆ ಪದ್ದತಿಯನ್ವಯ ( ಆಸ್ತಿಗಳ ಮಾಲಕರು ಅಥವಾ ಬಾಡಿಗೆದಾರರು ಘೋಷಿಸಿದಂತೆ) ತೆರಿಗೆಯನ್ನು ಸಂಗ್ರಹಿಸುತ್ತಿವೆ.ಇವುಗಳಲ್ಲಿ ಸಾಕಷ್ಟು ಮಂದಿ ತಪ್ಪು ಅಥವಾ ಸುಳ್ಳು ಮಾಹಿತಿಗಳನ್ನು ನೀಡಿ ತಮ್ಮ ತೆರಿಗೆಯ ಹೊರೆಯನ್ನು ಗಣನೀಯವಾಗಿ ಕಡಿಮೆಮಾಡಿಕೊಂಡಿದ್ದಲ್ಲಿ, ಇನ್ನು ಕೆಲವರು ತೆರಿಗೆಯನ್ನೇ ಪಾವತಿಸದೇ ಇರುವುದು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ತಿಳಿಯದ ವಿಚಾರವೇನಲ್ಲ. ಸಮೀಕ್ಷೆಯಿಂದ  ಶೇ. ೩೨ ರಷ್ಟು ಆಸ್ತಿಗಳ ಮಾಲೀಕರು ಅಥವಾ ಬಾಡಿಗೆದಾರರು ಕಾನೂನುಬಾಹಿರವಾಗಿ ಆಸ್ತಿತೆರಿಗೆಯ ವ್ಯಾಪ್ತಿಯಿಂದ ತಪ್ಪಿಸಿಕೊಂಡಿದ್ದಾರೆ ಎನ್ನುವುದು ಸಾಬೀತಾಗಿದೆ. ಇವರನ್ನು ತೆರಿಗೆಯ ವ್ಯಾಪ್ತಿಗೆ ತರುವ ಹೊಣೆಗಾರಿಕೆಯನ್ನು " ಪೌರಾಡಳಿತ ಸುಧಾರಣಾ ಕೋಶ" ಎನ್ನುವ ಪ್ರತ್ಯೇಕ ವಿಭಾಗಕ್ಕೆ ನೀಡಲಾಗಿದೆ. ಈ ಸಂಸ್ಥೆಯು ತೆರಿಗೆ ಸಂಗ್ರಹಣೆಯಲ್ಲಿ ಪರಿವರ್ತನೆಗಳನ್ನು ಜಾರಿಗೊಳಿಸುವ ಹೊಣೆಗಾರಿಕೆಯನ್ನೂ ನಿರ್ವಹಿಸಬೇಕಾಗಿದೆ. 

ಈ ಕೋಶವು ಎಂ.ಐ.ಎಸ್ ಮತ್ತು ಜಿ.ಐ.ಎಸ್ ಮಾಹಿತಿಗಳ ಆಧಾರದ ಮೇಲೆ ಆಸ್ತಿಗಳನ್ನು ಈಗಾಗಲೇ ಗುರುತಿಸಿದೆ. ಜೊತೆಗೆ ಈ ಆಸ್ತಿಗಳ ಕ್ರಮಸಂಖ್ಯೆ, ಕಟ್ಟಡಗಳ ವಿಸ್ತೀರ್ಣ, ನಿರ್ಮಾಣದ ಸ್ವರೂಪ,ಮಾಲೀಕರ - ಬಾಡಿಗೆದಾರರ ಸಮಗ್ರ ಮಾಹಿತಿಗಳೊಂದಿಗೆ ೨೦೦೨ ನೆ ಸಾಲಿನಿಂದ ಪಾವತಿಸಿರುವ ತೆರಿಗೆಯ ವಿವರಗಳನ್ನು ದಾಖಲಿಸಿದ್ದು, ಇವೆಲ್ಲವೂ ಪೌರಾಡಳಿತ ಇಲಾಖೆಯ ಬಳಿ ಇವೆ. ಈ ರೀತಿಯ ಮಾಹಿತಿ ಸಂಗ್ರಹ ವ್ಯವಸ್ಥೆಯು ದೇಶದಲ್ಲೇ ಅತಿ ದೊಡ್ಡ ಪ್ರಯೋಗವಾಗಿದೆ. 

ಪೌರಾಡಳಿತ ಸುಧಾರಣಾ ಕೋಶವು ಆಸ್ತಿ- ಜಿ.ಐ.ಎಸ್ ಆಧಾರಿತ ಆಸ್ತಿತೆರಿಗೆ ಮಾಹಿತಿ ವ್ಯವಸ್ಥೆಯ ಅಂಗವಾಗಿ ಆನ್ ಲೈನ್ ತೆರಿಗೆ ನಿಷ್ಕರ್ಷೆ ಮತ್ತು ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. ಆದರೆ ಈ ಪದ್ಧತಿಯನ್ನು ಶೇ.೫೦ ಕ್ಕೂ ಕಡಿಮೆ ಸ್ಥಳೀಯಸಂಸ್ಥೆಗಳು ಅಳವಡಿಸಿಕೊಂಡಿವೆ. ಇದನ್ನು ಪ್ರತಿಯೊಂದು ಸ್ಥಳೀಯಸಂಸ್ಥೆಗಳಲ್ಲಿ ಜಾರಿಗೊಳ್ಳದೇ, ಆಸ್ತಿತೆರಿಗೆ ಸಂಗ್ರಹಣೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿಲ್ಲ. ನಿಜಹೆಳಬೇಕಿದ್ದಲ್ಲಿ ತಾಂತ್ರಿಕ ಸಿಬಂದಿಗಳ ಕೊರತೆಯಿಂದಾಗಿ ಈ ವ್ಯವಸ್ಥೆಯ ಅನುಷ್ಠಾನ ವಿಳಂಬಗೊಳ್ಳುತ್ತಿದೆ.

ಕೆ.ಯು.ಐ.ದಿ.ಎಫ್.ಸಿ ಅಧಿಕಾರಿಗಳು ಹೇಳುವಂತೆ ಅಕ್ರಮ- ಕಾನೂನುಬಾಹಿರ ಕಟ್ಟಡಗಳನ್ನು ಈಗಾಗಲೇ ಗುರುತಿಸಿ,ಅವಶ್ಯಕ ಮಾಹಿತಿಗಳನ್ನು ದಾಖಲಿಸಿರುವುದರಿಂದ ಸ್ಥಳೀಯಸಂಸ್ಥೆಗಳು ಇವರಿಂದ ತೆರಿಗೆಯನ್ನು ವಸೂಲು ಮಾಡಲು ಯಾವುದೇ ಅಡ್ಡಿಯಿಲ್ಲ. ಆದರೆ ರಾಜಕೀಯ ಹಸ್ತಕ್ಷೇಪ ಹಾಗೂ ತೆರಿಗೆ ಸಂಗ್ರಹಿಸುವ ಅಧಿಕಾರಿಗಳು ಮತ್ತು ಆಸ್ತಿಗಳ ಮಾಲಕರು- ಬಾಡಿಗೆದಾರರ ನಡುವಿನ "ಹೊಂದಾಣಿಕೆ"ಯಿಂದಾಗಿ, ಇವರಿಂದ ತೆರಿಗೆಯನ್ನು ಸಂಗ್ರಹಿಸಲು ಅನಾವಶ್ಯಕ ಸಮಸ್ಯೆಗಳು ತಲೆದೋರುತ್ತಿವೆ. 

ಹಿರಿಯ ಅಧಿಕಾರಿಯೊಬ್ಬರು ಹೇಳುವಂತೆ ಇಷ್ಟೊಂದು ಶ್ರಮವಹಿಸಿ ದಾಖಲಿಸಿರುವ ಸಮಗ್ರ ಮಾಹಿತಿಗಳನ್ನು ಸ್ಥಳೀಯಸಂಸ್ಥೆಗಳು ಮಾತ್ರ ಬಳಸಿಕೊಳ್ಳುತ್ತಿಲ್ಲ. ಈ ಮಾಹಿತಿಗಳನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ, ರಾಜ್ಯದ ಸ್ಥಳೀಯಸಂಸ್ಥೆಗಳ ಆಸ್ತಿತೆರಿಗೆ ಸಂಗ್ರಹದ ಪ್ರಮಾಣವು ಶೇ.೩೦ ರಿಂದ ೪೦ ರಷ್ಟು ಹೆಚ್ಚುವುದರಲ್ಲಿ ಸಂದೇಹವಿಲ್ಲ!. 

ಇಚ್ಚಾಶಕ್ತಿಯ ಕೊರತೆ 

ಈ ಸಮೀಕ್ಷೆಯಿಂದ ತಿಳಿದುಬಂದಂತೆ ರಾಜ್ಯದ ಸ್ಥಳೀಯಸಂಸ್ಥೆಗಳು ತಮ್ಮ ಕಾರ್ಯಕ್ಷಮತೆಯ ಮಟ್ಟವನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ, ನಮ್ಮನ್ನಾಳುವವರಲ್ಲಿ ಧೃಢವಾದ ರಾಜಕೀಯ ಇಚ್ಚಾಶಕ್ತಿ ಇಲ್ಲದೇ "ತೆರಿಗೆಯ ಬಲೆ" ಯನ್ನು ವಿಸ್ತರಿಸುವುದು ಅಸಾಧ್ಯ. ತಜ್ಞರೊಬ್ಬರ ಅಭಿಪ್ರಾಯದಂತೆ ಈ ಶೇ.೩೨ ರಷ್ಟಿರುವ ಅಕ್ರಮ ಆಸ್ತಿಗಳಿಂದ ತೆರಿಗೆಯನ್ನು ಸಂಗ್ರಹಿಸಿದಲ್ಲಿ, ಇವರ ಅಕ್ರಮವನ್ನು ಸಕ್ರಮಗೊಳಿಸಿದಂತಾಗುತ್ತದೆ. ವಿಶೇಷವೆಂದರೆ ರಾಜ್ಯ ಸರ್ಕಾರವು ಈ ವಿಚಾರದಲ್ಲಿ ಸೂಕ್ತ ನಿರ್ಧಾರವನ್ನು ತಳೆಯದಿರುವುದರಿಂದಾಗಿ, ಅನೇಕ ಆಸ್ತಿಗಳ ಮಾಲೀಕರು ತೆರಿಗೆಯನ್ನು ಪಾವತಿಸದಿದ್ದರೂ ಕುಡಿಯುವ ನೀರಿನ ಮತ್ತು ವಿದ್ಯುತ್ ಸಂಪರ್ಕವನ್ನು ಪಡೆದು ಬಳಸಿಕೊಳ್ಳುತ್ತಿದ್ದಾರೆ!. 

ಸಾಮಾನ್ಯವಾಗಿ ಕಟ್ಟಡವೊಂದರ ನಿರ್ಮಾಣಕ್ಕೆ ಮುನ್ನ, ನಿರ್ಮಿಸುವ ಸಂದರ್ಭದಲ್ಲಿ ಮತ್ತು ನಿರ್ಮಾಣದ ಕಾಮಗಾರಿಗಳು ಪರಿಪೂರ್ಣಗೊಳ್ಳುವ ತನಕ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಗಮನಕ್ಕೆ ಬಾರದೇ ಇರುವ ಸಾಧ್ಯತೆಗಳೇ ಇಲ್ಲ. ಆದರೂ ಶೇ. ೩೨ ರಷ್ಟು ಆಸ್ತಿಗಳು ತೆರಿಗೆಯನ್ನು ಪಾವತಿಸದೇ ಇರುವುದು ಹೇಗೆ ಎನ್ನುವುದು ನಮಗೂ ಅರ್ಥವಾಗುತ್ತಿಲ್ಲ!. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 



No comments:

Post a Comment