Saturday, May 10, 2014

BIRD FLU


  " ಪಕ್ಷಿಜ್ವರ" ದಿಂದ ರಕ್ಷಣೆ ಇಹುದೇ ?

೨೦೦೩ ರಲ್ಲಿ ಏಶಿಯಾ ಖಂಡದಲ್ಲಿ ಉದ್ಭವಿಸಿ, ಜಗತ್ತಿನಾದ್ಯಂತ ಭೀತಿ ಹುಟ್ಟಿಸಿದ್ದ " ಸಾರ್ಸ್" ವ್ಯಾಧಿಯ ಹಾವಳಿ ಕಡಿಮೆಯಾಯಿತೆಂದು ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಂತೆಯೇ, ಇದೀಗ ( ೨೦೦೪ ರಲ್ಲಿ) ಹೆಡೆ ಎತ್ತಿರುವ " ಪಕ್ಷಿಜ್ವರ" ವು ಮನುಕುಲಕ್ಕೆ ಮಾರಕ ಎನಿಸಬಹುದೆಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಈಗಾಗಲೇ ಹತ್ತಕ್ಕೂ ಹೆಚ್ಚು ರೋಗಿಗಳನ್ನು ಬಲಿಪಡೆದಿರುವ ಈ ಕಾಯಿಲೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 
---------------                 -----------------             -------------------                  -------------------             -----------------

ಏನಿದು ಪಕ್ಷಿಜ್ವರ ? 

ಕಳೆದ ಶತಮಾನದಲ್ಲಿ ಹಲವಾರು ಬಾರಿ ಸಾಂಕ್ರಾಮಿಕವಾಗಿ ಹಬ್ಬಿ, ಪಕ್ಷಿಸಂಕುಲವನ್ನು ಪೀಡಿಸಿದ್ದ ಇನ್ಫ್ಲುಯೆಂಜಾ ಜ್ವರಕ್ಕೆ ಕಾರಣವೆನಿಸಿದ್ದ ವೈರಸ್ ಗಳಲ್ಲಿ ಸುಮಾರು ೧೫ ಪ್ರಭೇದಗಳಿವೆ. ಅನೇಕ ವರ್ಷಗಳಿಂದ ಜಗತ್ತಿನ ವಿವಿಧ ದೇಶಗಳಲ್ಲಿ ಪತ್ತೆಯಾಗಿದ್ದ ಪಕ್ಷಿಜ್ವರವು, ಕಳೆದ ಶತಮಾನದ ಅಂತ್ಯದ ತನಕ ಕೇವಲ ಪಕ್ಷಿಗಳಿಂದ ಪಕ್ಷಿಗಳಿಗೆ ಮಾತ್ರ ಹರಡುತ್ತಿತ್ತು. ಇತರ ಯಾವುದೇ ರೋಗಾಣುಗಳಂತೆಯೇ ಈ ವೈರಸ್ ಗಳಲ್ಲಿನ ವಂಶವಾಹಿನಿಗಳು, ಕಾಲಕ್ರಮೇಣ ಪರಿವರ್ತನೆಗೊಂಡು ಇದೀಗ ಪಕ್ಷಿಗಳಿಂದ ಮನುಷ್ಯರಿಗೆ ಹರಡುವ ಸಾಮರ್ಥ್ಯವನ್ನು ಗಳಿಸಿವೆ. 

ಸಾಮಾನ್ಯವಾಗಿ ಮೊಟ್ಟೆ ಮತ್ತು ಮಾಂಸಗಳಿಗಾಗಿ ಬೆಳೆಸುವ ಕೋಳಿ ಹಾಗೂ ಬಾತುಕೋಳಿಗಳಿಗೆ ಈ ಸೋಂಕು ತಗಲಿದಲ್ಲಿ, ಇದರ ವೈರಸ್ ಗಳು ಕಾಡ್ಗಿಚ್ಚಿನಂತೆ ಹರಡುತ್ತವೆ. ಅತ್ಯಲ್ಪ ಸಮಯದಲ್ಲಿ ರೋಗಪೀಡಿತ ಕೋಳಿಗಳು ಸಾಮೂಹಿಕವಾಗಿ ಸಾಯಲಾರಂಭಿಸುತ್ತವೆ. ಪ್ರಸ್ತುತ ಈ ವ್ಯಾಧಿ ಪತ್ತೆಯಾಗಿರುವ ದೇಶಗಳ ಸರ್ಕಾರಗಳು ಈ ವೈರಸ್ ಪತ್ತೆಯಾಗಿರುವ ಪ್ರಾಂತ್ಯಗಳಲ್ಲಿನ ಎಲ್ಲ ಕೋಳಿ ಮತ್ತು ಬಾತುಕೋಳಿಗಳನ್ನು ಸಂಹರಿಸಲು ಆದೇಶಿಸಿವೆ. ಏಕೆಂದರೆ ಲಕ್ಷಾಂತರ ಕೋಳಿಗಳಿಗೆ ಈ ವೈರಸ್ ಹರಡಿದಲ್ಲಿ, ಅಷ್ಟೇ ಪ್ರಮಾಣದಲ್ಲಿ ಇವುಗಳ ಸಂಪರ್ಕವಿರುವ ಅಪಾರ ಸಂಖ್ಯೆಯ ಮನುಷ್ಯರಿಗೆ ಈ ವ್ಯಾಧಿ ಹರಡುವ ಸಾಧ್ಯತೆಗಳು ಇನ್ನಷ್ಟು ಹೆಚ್ಚುತ್ತವೆ. 

ಆತಂಕಕಾರಿ ಬೆಳವಣಿಗೆ 

೧೯೯೭ ರಲ್ಲಿ ಹಾಂಗ್ ಕಾಂಗ್ ನಲ್ಲಿ ಪತ್ತೆಯಾಗಿದ್ದ ಪಕ್ಷಿಜ್ವರದ ವೈರಸ್ ಗಳಲ್ಲಿಯೇ ಅತ್ಯಂತ ಪ್ರಬಲ ಹಾಗೂ ಮಾರಕವೆನಿಸಿರುವ ಎಚ್ ೫ ಏನ್ ೧ ಎನ್ನುವ ತಳಿಯು, ಇದೀಗ ವಿಯೆಟ್ನಾಂ ಮತ್ತು ಥಾಯ್ಲೆಂಡ್ ದೇಶಗಳಲ್ಲಿ ಹತ್ತಕ್ಕೂ ಅಧಿಕ ಮಂದಿಯನ್ನು ಬಲಿಪಡೆದಿದೆ. ಈ ವೈರಸ್ ಣ ೧೫ ಪ್ರಭೇದಗಳಲ್ಲಿ ಎಚ್ ೭ ಎನ೧ ಹಾಗೂ ಎಚ್ ೯ ಎನ೧ ಎನ್ನುವ ಎರಡು ತಳಿಗಳು ತುಸು ಶಕ್ತಿಯುತ ಎನಿಸಿದರೂ, ಇದುವರೆಗೆ ಈ ತಳಿಗಳು ಪಕ್ಷಿಗಳಿಂದ ಮನುಷ್ಯರಿಗೆ ಹರಡಿಲ್ಲ. 

ಇದಕ್ಕೂ ಮುನ್ನ ಸಾಮಾನ್ಯವಾಗಿ ಪಕ್ಷಿಗಳಿಂದ ಪಕ್ಷಿಗಳಿಗೆ ಹರಡುತ್ತಿದ್ದ ಈ ವೈರಸ್, ಕಾಲಕ್ರಮೇಣ ಫಾರ್ಮ್ ಗಳಲ್ಲಿ ಕೋಳಿಗಳೊಂದಿಗೆ ಸಾಕಿದ್ದ ಹಂದಿಗಳಿಗೆ ಹರಡಿ, ತನ್ಮೂಲಕ ಮನುಷ್ಯರಿಗೆ ಹರಡಲಾರಂಭಿಸಿತು. 

ಆದರೆ ಇದೀಗ ವಿಶ್ವ ಆರೋಗ್ಯ ಸಂಸ್ಥೆಗೆ ಕಳವಳ ಮೂಡಿಸಿರುವ ಅತ್ಯಂತ ಗಂಭೀರ ಹಾಗೂ ಮಾರಕವೆನಿಸಬಲ್ಲ ಸಂಭಾವ್ಯ ಸಮಸ್ಯೆಯು ಇಂತಿದೆ. ಆಕಸ್ಮಿಕವಾಗಿ ಮನುಷ್ಯನಲ್ಲಿ ಕಂಡುಬರುವ ಇನ್ಫ್ಲುಯೆಂಜಾ ವೈರಸ್ ಮತ್ತು ಪಕ್ಷಿಗಳನ್ನು ಪೀಡಿಸುವ ಇನ್ಫ್ಲುಯೆಂಜಾ ವೈರಸ್ ಗಳೆರಡೂ, ಏಕಕಾಲದಲ್ಲಿ ಒಬ್ಬ ವ್ಯಕ್ತಿಯ ಶರೀರದಲ್ಲಿ ಪ್ರವೇಶ ಗಳಿಸಿದಲ್ಲಿ, ಇವೆರಡೂ ವೈರಸ್ ಗಳು ತಮ್ಮ ವಂಶವಾಹಿನಿಗಳನ್ನು ವಿನಿಮಯಿಸಿಕೊಳ್ಳುವ ಸಾಧ್ಯತೆಗಳಿವೆ. ತತ್ಪರಿಣಾಮವಾಗಿ ಉದ್ಭವಿಸಬಲ್ಲ ನೂತನ ತಳಿಗಳು ಮನುಷ್ಯನಿಂದ ಮನುಷ್ಯನಿಗೆ ಹರಡುವ ಸಾಮರ್ಥ್ಯವನ್ನು ಗಳಿಸಿಕೊಂಡಲ್ಲಿ, ಈ ವ್ಯಾಧಿಯು ಮನುಕುಲಕ್ಕೆ ಮಾರಕವೆನಿಸುವುದರಲ್ಲಿ ಸಂದೇಹವಿಲ್ಲ. ಜನಸಾಮಾನ್ಯರ ಕಲ್ಪನೆಗೂ ಮೀರಿದ ಇಂತಹ ಸಾಧ್ಯತೆಗಳು ನಿಜವಾದಲ್ಲಿ, ಈ ವೈರಸ್ ಲಕ್ಷಾಂತರ ಜನರ ಪ್ರಾಣಕ್ಕೆ ಎರವಾಗುವುದರಲ್ಲಿ ಸಂದೇಹವಿಲ್ಲ. 

ಹಲವಾರು ದೇಶಗಳಲ್ಲಿ ಇದೀಗ ಏಕಕಾಲದಲ್ಲಿ ಉದ್ಭವಿಸಿದ ಈ ಪಕ್ಷಿಜ್ವರವು, ಹಿಂದೆಂದೂ ಈ ರೀತಿಯಲ್ಲಿ ವ್ಯಾಪಕವಾಗಿ ಪತ್ತೆಯಾಗಿರಲೇ ಇಲ್ಲ. ಪ್ರಾಯಶಃ ಕೋಳಿ ಸಾಕಣಾ ಕೇಂದ್ರಗಳಿಗೆ ಲಗ್ಗೆಯಿಡುವ ಗಿಡುಗಗಳಂತಹ ಹಾಗೂ ದೇಶದಿಂದ ದೇಶಕ್ಕೆ ವಲಸೆ ಹೋಗುವ ಪಕ್ಷಿಗಳಿಂದಾಗಿ  ಈ ವ್ಯಾಧಿಯು ಹಲವಾರು ದೇಶಗಳಿಗೆ ಹರಡಿರುವ ಸಾಧ್ಯತೆಗಳಿವೆ. ಹಾಂಗ್ ಕಾಂಗ್ ನಲ್ಲಿ ಪತ್ತೆಯಾಗಿದ್ದ ಸತ್ತ ಗಿಡುಗನ ದೇಹದಲ್ಲಿ ಈ ವೈರಸ್ ಪತ್ತೆಯಾಗಿರುವುದು ಇಂತಹ ಸಾಧ್ಯತೆಗಳನ್ನು ಪುಷ್ಟೀಕರಿಸುತ್ತದೆ. ಹಾಗೂ ಇದೇ  ಕಾರಣದಿಂದಾಗಿ ಪಕ್ಷಿಜ್ವರವನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಅಸಾಧ್ಯವೆನಿಸಬಲ್ಲದು. 

ಈಗಾಗಲೇ ವಿಯೆಟ್ನಾಂ, ಥಾಯ್ಲೆಂಡ್, ಜಪಾನ್, ದಕ್ಷಿಣ ಕೊರಿಯ, ಕಾಂಬೋಡಿಯ, ಇಂಡೋನೇಶಿಯ, ಚೀನಾ, ತೈವಾನ್, ಲಾವೋಸ್ ಮತ್ತು ನಮ್ಮ ನೆರೆಯ ಪಾಕಿಸ್ತಾನಗಳಲ್ಲಿ ಈ ವ್ಯಾಧಿ ವ್ಯಾಪಕವಾಗಿ ಹರಡಿದೆ. ಆದರೆ ಪಾಕಿಸ್ತಾನದಲ್ಲಿ ಪತ್ತೆಯಾದ ಈ ವೈರಸ್ ನ ಎಚ್ ೭ ಎನ್ ೧ ಹಾಗೂ ಎಚ್ ೯ ಎನ್ ೧ ತಳಿಗಳು ಇದುವರೆಗೆ ಪಕ್ಷಿಗಳಿಂದ ಪಕ್ಷಿಗಳಿಗೆ ಹರಡುವುದೇ ಹೊರತು, ಪಕ್ಷಿಗಳಿಂದ ಮನುಷ್ಯರಿಗೆ ಹರಡಿಲ್ಲ ಎನ್ನುವುದೇ ಸಮಾಧಾನದ ವಿಷಯ.

ಮನುಷ್ಯನಿಂದ ಮನುಷ್ಯನಿಗೆ ?

ಈ ಲೇಖನವನ್ನು ಬರೆಯುತ್ತಿರುವ ಸಂದರ್ಭದಲ್ಲಿ ಲಭಿಸಿದ ಮಾಹಿತಿಯಂತೆ ವಿಯೆಟ್ನಾಂ ದೇಶದ ಇಬ್ಬರು ಸೋದರಿಯರು, ತಮ್ಮ ರೋಗಪೀಡಿತ ಸೋದರನ ಸಂಪರ್ಕದಿಂದ ರೋಗಪೀಡಿತರಾಗಿ  ಸಾವನ್ನಪ್ಪಿದ್ದಾರೆ. ಇದು ನಿಜವಾಗಿದ್ದಲ್ಲಿ ಈ ಬಾರಿ ಉದ್ಭವಿಸದ ಪಕ್ಷಿಜ್ವರ ಮನುಷ್ಯನಿಂದ ಮನುಷ್ಯನಿಗೆ ಹರಡಿದ ಮೊದಲ ಘಟನೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಆದರೆ ೧೯೯೭ ರಲ್ಲಿ ಹಾಂಗ್ ಕಾಂಗ್ ನಲ್ಲಿ ಅಲ್ಪ ಪ್ರಮಾಣದ ರೋಗಿಗಳಲ್ಲಿ ಪಕ್ಷಿಜ್ವರವು ಮನುಷ್ಯನಿಂದ ಮನುಷ್ಯನಿಗೆ ಹರಡಿದ್ದರೂ, ಸಾಂಕ್ರಾಮಿಕ ರೂಪವನ್ನು ತಳೆದಿರಲಿಲ್ಲ ಎಂದೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ರೀತಿಯ ಪರಸ್ಪರ ದ್ವಂದಾರ್ಥದ ಹೇಳಿಕೆಗಳು ಜನರಲ್ಲಿ ಆತಂಕವನ್ನು ಮೂಡಿಸುತ್ತವೆ. 

ರೋಗಲಕ್ಷಣಗಳು 

ಮನುಷ್ಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಇನ್ಫ್ಲುಯೆಂಜಾ ಜ್ವರದ ಲಕ್ಷಣಗಳಾದ ಜ್ವರ, ತಲೆನೋವು, ಮೈಕೈ ನೋವು, ಒಣಕೆಮ್ಮು, ಮೂಗು ಮತ್ತು ಶ್ವಾಸನಾಳಗಳಲ್ಲಿ ಕೆರೆತ, ಕಣ್ಣಿನ ರೆಪ್ಪೆಯ ಉರಿಯೂತಗಳೊಂದಿಗೆ ಕೆಲವೊಂದು ರೋಗಿಗಳಲ್ಲಿ ತೀವ್ರ ಜ್ವರ ಮತ್ತು ಚಳಿಗಳು ಪಕ್ಷಿಜ್ವರ ಪೀಡಿತ ವ್ಯಕ್ತಿಗಳಲ್ಲಿ ಕಂಡುಬರಬಹುದು. 

ಕಾಯಿಲೆ ಉಲ್ಬಣಿಸಿದಲ್ಲಿ ನ್ಯುಮೋನಿಯ, ಶ್ವಾಸೋಚ್ಚ್ವಾಸದ ತೊಂದರೆಗಳು, ವಾಂತಿ ಮತ್ತು ತೀವ್ರ ಚಳಿಜ್ವರಗಳಂತಹ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಹೃದಯದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಲ್ಲಿ " ಟಾಕ್ಸಿಕ್ ಕಾರ್ಡಿಯಾಕ್ ಮಯೋಪತಿ" ಯಿಂದ ಮರಣ ಸಂಭವಿಸಬಹುದು. ಇದಲ್ಲದೇ ಮೆದುಳಿನ ಉರಿಯೂತ ಮತ್ತಿತರ ಗಂಭೀರ - ಮಾರಕ ಸಮಸ್ಯೆಗಳೂ ಬಾಧಿಸುವ ಸಾಧ್ಯತೆಗಳಿವೆ. ಇದುವರೆಗೆ ಪಕ್ಷಿಜ್ವರದಿಂದ ಮೃತಪಟ್ಟ ವ್ಯಕ್ತಿಗಳಲ್ಲಿ ಹೆಚ್ಚಿನವರು ಎಳೆಯ ವಯಸ್ಸಿನವರು ಮತ್ತು ವೃದ್ಧರಾಗಿರಲು ಕಾರಣವೇನೆಂದು ತಿಳಿದುಬಂದಿಲ್ಲ. 

ಚಿಕಿತ್ಸೆ 

ಈ ವೈರಸ್ ನ್ನು ನಾಶಪಡಿಸಬಲ್ಲ ಅಥವಾ ನಿಯಂತ್ರಣದಲ್ಲಿ ಇರಿಸಬಲ್ಲ ನಿರ್ದಿಷ್ಟ ಔಷದಗಳನ್ನು ಇದುವರೆಗೆ ಸಂಶೋಧಿಸಿಲ್ಲ. ರೋಗಿಯ ರೋಗಲಕ್ಷಣಗಳಿಗೆ ಅನುಗುಣವಾಗಿ ವೈದ್ಯರು ಔಷದಗಳನ್ನು ನೀಡಬೇಕಾಗುತ್ತದೆ. ರೋಗಿಗೆ ಸಂಪೂರ್ಣ ವಿಶ್ರಾಂತಿಯನ್ನು ನೀಡುವುದರೊಂದಿಗೆ ಆತನನ್ನು ಪ್ರತ್ಯೆಕವಾಗಿರಿಸಿ, ರೋಗ ಇತರರಿಗೆ ಹರಡುವ ಸಾಧ್ಯತೆಗಳನ್ನು ನಿವಾರಿಸುವುದು ಪ್ರಾಥಮಿಕ ಅವಶ್ಯಕತೆಯೂ ಹೌದು. 

ವಿಶ್ವ ಆರೋಗ್ಯ ಸಂಸ್ಥೆಯು ವೈರಸ್ ನ್ನು ತಡೆಗಟ್ಟಬಲ್ಲ ಲಸಿಕೆಯನ್ನು ಸಂಶೋಧನೆಗೆ ಆದ್ಯತೆ ನೀಡಿದೆ. ಆದರೆ ಲಸಿಕೆಯ ಸಂಶೋಧನೆ ಮತ್ತು ತದನಂತರ ಇದರ ಸಾಧಕ- ಬಾಧಕಗಳ ಹಾಗೂ ಸಾಮರ್ಥ್ಯದ ಬಗ್ಗೆ ನಡೆಸಲೆಬೇಕಾದ ಅಧ್ಯಯನಗಳಿಗೆ ಸಾಕಷ್ಟು ಸಮಯ ತಗಲುವುದು ಅನಿವಾರ್ಯ. 

ಏಕಮಾತ್ರ ಪರಿಹಾರ 

ಪಕ್ಷಿಗಳು, ಅದರಲ್ಲೂ ವಿಶೇಷವಾಗಿ ಕೋಳಿಗಳು ಸಾಮೂಹಿಕವಾಗಿ ಸಾಯಲು ಆರಂಭಿಸಿದಲ್ಲಿ " ಪಕ್ಷಿಜ್ವರ" ವೆಂದು ಸಂದೇಹಿಸಬೇಕಾಗುತ್ತದೆ. ಸತ್ತ ಕೋಳಿಗಳ ಶರೀರದಲ್ಲಿ ಈ ವೈರಸ್ ಗಳ ಇರುವಿಕೆಯನ್ನು ಖಚಿತಪಡಿಸಿಕೊಂಡು, ಫಾರ್ಮ್ ಗಳಲ್ಲಿರುವ ಎಲ್ಲಾ ಕೋಳಿ ಹಾಗೂ ಹಂದಿಗಳನ್ನು ಸಂಹರಿಸಿ ಸುಟ್ಟುಹಾಕಬೇಕಾಗುವುದು. ರೋಗಪೀಡಿತ ಪಕ್ಷಿಗಳ ನಾಸಿಕಸ್ರಾವ ಮತ್ತು ಮಲಗಳ ಮೂಲಕ ಈ ವೈರಸ್ ಸುಲಭವಾಗಿ ಹರಡುತ್ತವೆ. ಈ ವಿಸರ್ಜಿತ ಮಲವು ಮಣ್ಣಿನಲ್ಲಿ ಬೆರೆತು, ಧೂಳಿನ ಕಣಗಳೊಂದಿಗೆ ಗಾಳಿಯ ಮೂಲಕ ಹರಡುವುದರಿಂದ, ಈ ವೈರಸ್ ಗಳು ಇನ್ನಷ್ಟು ವ್ಯಾಪಕವಾಗಿ ಹರಡಲು ಉಪಯುಕ್ತವೆನಿಸುತ್ತದೆ. ಫಾರ್ಮ್ ನ ಉದ್ಯೋಗಿಗಳು ಹಾಗೂ ರೋಗಪೀಡಿತ ಕೋಳಿಗಳನ್ನು ಸಂಹರಿಸುವ ಕೆಲಸಗಾರರು ಈ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. 

ಭಕ್ಷಣೆಯಿಂದ ರೋಗ ಬಾಧಿಸದು 

ಮಾಂಸಾಹಾರ ಪ್ರಿಯರಿಗೆ ಚಿಂತೆಗೆ ಕಾರಣವೆನಿಸಿರುವ ಪಕ್ಷಿಜ್ವರದ ವೈರಸ್, ಲಭ್ಯ ಮಾಹಿತಿಯಂತೆ ರೋಗಪೀಡಿತ ಕೋಳಿಯ ಮಾಂಸದ ಭಕ್ಷಣೆಯಿಂದ ನಿಮ್ಮನ್ನು ಪೀಡಿಸಲಾರದು. ಆದರೆ ಹಸಿ ಮೊಟ್ಟೆ ಅಥವಾ ಹಸಿ ಮಾಂಸವನ್ನು ಅಡುಗೆಗಾಗಿ ಸಿದ್ಧಪಡಿಸುವವರು, ಈ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸಬೇಕಾಗುತ್ತದೆ. 

ರೆಫ್ರಿಜೆರೇಟರ್ ಅಥವಾ ಫ್ರೀಜರ್ ನಲ್ಲಿ ಮಾಂಸವನ್ನು ಶೇಖರಿಸಿ ಇಡುವುದರಿಂದ ಈ ವೈರಸ್ ನ ರೋಗಕಾರಕತೆ ಹಾಗೂ ತೀವ್ರತೆಗಳು ಕಡಿಮೆಯಾಗದು. ಆದರೆ ೭೦ ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಇದನ್ನು ಬೇಯಿಸಿ ತಯಾರಿಸಿದ ಖಾದ್ಯಗಳಲ್ಲಿ ಈ ವೈರಸ್ ಗಳು ಬದುಕಿರುವ ಸಾಧ್ಯತೆಗಳು ಇಲ್ಲವೆಂದೇ ಹೇಳಬಹುದಾಗಿದೆ. 

ಡಾ. ಸಿ . ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೫-೦೨೨-೨೦೦೪ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ. 


No comments:

Post a Comment