Saturday, May 24, 2014

HERBAL TOOTHPASTE- IS IT REALLY NATURAL ?





  "ಹರ್ಬಲ್ " ಟೂತ್ ಪೇಸ್ಟ್ : ನಿಜಕ್ಕೂ ನೈಸರ್ಗಿಕವೇ ?

ಇತ್ತೀಚಿನ ಕೆಲವರ್ಷಗಳಿಂದ ಭಾರತೀಯ ಗ್ರಾಹಕರಲ್ಲಿ  ನೈಸರ್ಗಿಕ ಉತ್ಪನ್ನಗಳನ್ನು ಬಳಸುವ ಹವ್ಯಾಸ ಹೆಚ್ಚುತ್ತಿದೆ. ಇದರೊಂದಿಗೆ ಆಯುರ್ವೇದೀಯ ಪದ್ದತಿಯಲ್ಲಿ ತಯಾರಿಸಿದ ವೈವಿಧ್ಯಮಯ ಉತ್ಪನ್ನಗಳನ್ನು ಬಳಸುವ ಬಹುತೇಕ ಗ್ರಾಹಕರು, ತಾವು ದಿನನಿತ್ಯ ಬಳಸುವ ಟೂತ್ ಪೇಸ್ಟ್, ಸೋಪ್, ಶಾಂಪೂ, ಕೇಶ ತೈಲ, ತಲೆಗೂದಲಿಗೆ ಬಳಿಯುವ ಬಣ್ಣಗಳೇ ಮುಂತಾದವುಗಳನ್ನು ಬಳಸಲು, ಇವು ನೈಸರ್ಗಿಕ ಹಾಗೂ ಗಿಡಮೂಲಿಕೆಗಳಿಂದ ತಯಾರಿಸಿರುವುದೆನ್ನುವ ಧೃಢ ವಿಶ್ವಾಸವೇ ಕಾರಣವೆನಿಸಿದೆ. ಆದರೆ ಇಂತಹ " ಹರ್ಬಲ್ " ಅಥವಾ ಆಯುರ್ವೇದ ಉತ್ಪನ್ನಗಳಲ್ಲಿ ಇರುವ ನೈಸರ್ಗಿಕ ದ್ರವ್ಯಗಳು ಅಥವಾ ಗಿಡಮೂಲಿಕೆಗಳ ಪ್ರಮಾಣ ಎಷ್ಟೆನ್ನುವುದು ಯಾವುದೇ ಗ್ರಾಹಕರಿಗೆ ತಿಳಿದಿಲ್ಲ. ಉದಾಹರಣೆಗೆ ನೀವು ಬಳಸುತ್ತಿರುವ ಹರ್ಬಲ್ ಟೂತ್ ಪೇಸ್ಟ್ ಮತ್ತು ಇತರ ಯಾವುದೇ ಸಾಮಾನ್ಯ ಟೂತ್ ಪೇಸ್ಟ್ ಗಳ ನಡುವೆ ವಿಶೇಷ ವ್ಯತ್ಯಾಸಗಳೇ ಇಲ್ಲ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಉತ್ಪಾದಕರ ಮಾರಾಟ ತಂತ್ರ 

ಬೆಳಗಿನ ಜಾವ ಸವಿನಿದ್ದೆಯಿಂದ ಎದ್ದ ಬಳಿಕ ಹಾಗೂ ರಾತ್ರಿ ನಿದ್ದೆಗೆ ಶರಣಾಗುವ ಮುನ್ನ ನಿಮ್ಮ ಹಲ್ಲು ಮತ್ತು ಒಸಡುಗಳನ್ನು ಸ್ವಚ್ಚಗೊಳಿಸಲು ಬಳಸುವ ಟೂತ್ ಪೇಸ್ಟ್ ನಲ್ಲಿರುವ ದ್ರವ್ಯಗಳ ಬಗ್ಗೆ ನಿಮಗೂ ಅರಿವಿರಲಾರದು. ಅಧಿಕತಮ ಜನರು ಇಂತಹ ಉತ್ಪನ್ನಗಳ ಉತ್ಪ್ರೇಕ್ಷಿತ ಜಾಹೀರಾತುಗಳಿಗೆ ಮರುಳಾಗಿ, ಇವುಗಳನ್ನು ಖರೀದಿಸಿ ಬಳಸುತ್ತಿರುವುದು ಸತ್ಯ. 

ಇತ್ತೀಚಿನ ಕೆಲ ವರ್ಷಗಳಿಂದ ಜನಪ್ರಿಯವೆನಿಸಿರುವ " ಹರ್ಬಲ್ " ( ಸಸ್ಯಗಳಿಂದ ತಯಾರಿಸಿದ ) ಉತ್ಪನ್ನಗಳನ್ನು ಬಳಸುತ್ತಿರುವ ಅಸಂಖ್ಯ ಜನರು, ಇವುಗಳನ್ನು ವಿವಿಧ ರೀತಿಯ ಗಿಡಮೂಲಿಕೆಗಳನ್ನು ಬಳಸಿ ತಯಾರಿಸಲಾಗಿದೆ ಎಂದೇ ನಂಬಿದ್ದಾರೆ. ಹಾಗೂ ಇದೇ ಕಾರಣದಿಂದಾಗಿ ಇವುಗಳು " ನೈಸರ್ಗಿಕ ಮತ್ತು ರಾಸಾಯನಿಕ ರಹಿತ " ಎಂದು ಭಾವಿಸಿದ್ದಾರೆ. ಆದರೆ ಹರ್ಬಲ್ ಟೂತ್ ಪೇಸ್ಟ್ ಗಳಲ್ಲಿರುವ ಗಿಡಮೂಲಿಕೆಗಳ ಪ್ರಮಾಣವು, ಇವುಗಲ್ಲಿರುವ ದ್ರವ್ಯಗಳ ಶೇ. ೫ ರಷ್ಟು ಮಾತ್ರ ಎಂದಲ್ಲಿ ನೀವೂ ನಂಬಲಾರಿರಿ. ಈ ಕ್ಷುಲ್ಲಕ ಪ್ರಮಾಣದ ಗಿಡಮೂಲಿಕೆಗಳ ಅಂಶವನ್ನು ಹೊರತುಪಡಿಸಿದಲ್ಲಿ, ಈ ಉತ್ಪನ್ನ ಹಾಗೂ ಇತರ ಯಾವುದೇ ಸಾಮಾನ್ಯ ಟೂತ್ ಪೇಸ್ಟ್ ಗಳಿಗೂ ಯಾವುದೇ ವ್ಯತ್ಯಾಸವೇ ಇಲ್ಲವೆಂದಲ್ಲಿ ನಿಮಗೂ ಆಶ್ಚರ್ಯವೆನಿಸೀತು. ಅರ್ಥಾತ್, ಹರ್ಬಲ್ ಟೂತ್ ಪೇಸ್ಟ್ ಗಳಲ್ಲಿರುವ ಶೇ. ೯೫ ರಷ್ಟು ಅಂಶಗಳು, ಇತರ ಟೂತ್ ಪೇಸ್ಟ್ ಗಳಲ್ಲಿರುವಂತಹ ರಾಸಾಯನಿಕಗಳೇ ಆಗಿವೆ!. 

ಭಾರತದ ಸುಪ್ರಸಿದ್ಧ ಗ್ರಾಹಕ ಸಂಸ್ಥೆಯೊಂದು ಗತವರ್ಷದಲ್ಲಿ ನಡೆಸಿದ್ದ ಅಧ್ಯಯನದ ಪರಿಣಾಮವಾಗಿ ಈ ಸತ್ಯಸಂಗತಿ ಬಯಲಿಗೆ ಬಂದಿದೆ. ಈ ವರದಿಯಂತೆ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಹರ್ಬಲ್ ಟೂತ್ ಪೇಸ್ಟ್ ಗಳು " ನೈಸರ್ಗಿಕ, ಗಿಡಮೂಲಿಕೆಗಳಿಂದ ತಯಾರಿಸಿದ ಮತ್ತು ರಾಸಾಯನಿಕ ರಹಿತ " ಎಂದು ಘೋಷಿಸುವ ಅರ್ಹತೆಯನ್ನೇ ಹೊಂದಿಲ್ಲ. 

ವ್ಯತ್ಯಾಸವೇನು ? 

ಹರ್ಬಲ್ ಟೂತ್ ಪೇಸ್ಟ್ ಗಳ ಬಣ್ಣ ಮತ್ತು ಸ್ವಾದಗಳನ್ನು ಹೊರತುಪಡಿಸಿ, ಅನ್ಯ ವಿಚಾರಗಳಲ್ಲಿ ಇವುಗಳ ಮತ್ತು ಇತರ ಸಾಮಾನ್ಯ ಟೂತ್ ಪೇಸ್ಟ್ ಗಳ ನಡುವೆ ಯಾವುದೇ ವ್ಯತ್ಯಾಸವೇ ಇಲ್ಲ. ಹರ್ಬಲ್ ಟೂತ್ ಪೇಸ್ಟ್ ಗಳನ್ನು ಶತ ಪ್ರತಿಶತ ನೈಸರ್ಗಿಕ ಎನ್ನಬೇಕಿದ್ದಲ್ಲಿ, ಇವುಗಳಲ್ಲಿ ಯಾವುದೇ ರೀತಿಯ ಕೃತಕ ಹಾಗೂ ಅಸ್ವಾಭಾವಿಕ ರಾಸಾಯನಿಕಗಳು, ವರ್ಣಕಾರಕಗಳು, ರುಚಿವರ್ಧಕಗಳು, ಮತ್ತು ಸಂರಕ್ಷಕ ದ್ರವ್ಯಗಳನ್ನು ಬಳಸದೇ, ಕೇವಲ ನೈಸರ್ಗಿಕ ದ್ರವ್ಯಗಳನ್ನಷ್ಟೇ ಬಳಸಬೇಕಾಗುವುದು. ಇದಲ್ಲದೇ ಬೆಳವಣಿಗೆಯ ಚೋದನಿಗಳು, ರಾಸಾಯನಿಕಗಳು ಮತ್ತು ಕೀಟನಾಶಕಗಳನ್ನು ಬಳಸಿ ಇವುಗಳನ್ನು ಸಂಸ್ಕರಿಸಬಾರದು. ಆದರೆ ನಮ್ಮ ದೇಶದಲ್ಲಿ ಲಭ್ಯವಿರುವ ಹತ್ತು ವಿಧದ ಹರ್ಬಲ್ ಟೂತ್ ಪೇಸ್ಟ್ ಮತ್ತು ಎರಡು ವಿಧದ ಟೂತ್ ಪೌಡರ್ ಗಳನ್ನು ಅಂತರ ರಾಷ್ಟ್ರೀಯ ಗುಣಮಟ್ಟದ ಪ್ರಯೋಗಾಲಯಗಳಲ್ಲಿ ಪರೀಕ್ಷೆಗಳಿಗೆ ಒಳಪಡಿಸಿದಾಗ, ಇವುಗಳಲ್ಲಿ ಯಾವುದೇ ಉತ್ಪನ್ನವು " ಹರ್ಬಲ್ " ಎಂದು ಪ್ರಮಾಣೀಕರಿಸಬಹುದಾದ ಅರ್ಹತೆಯನ್ನೇ ಹೊಂದಿರಲಿಲ್ಲ ಎಂದು ಗ್ರಾಹಕ ಸಂಸ್ಥೆಯು ಬಹಿರಂಗಪಡಿಸಿದೆ. ಇಷ್ಟು ಮಾತ್ರವಲ್ಲ, ಇದೇ ರೀತಿಯ ಪರೀಕ್ಷೆಗಳಿಗೆ ಒಳಪಡಿಸಿದ್ದ ಟೂತ್ ಪೌಡರ್ ಗಳು " ಸೂಕ್ಷ್ಮಾಣುಜೀವಿ" ಗಳ ಪರೀಕ್ಷೆಯಲ್ಲಿ ವಿಫಲವಾಗಿದ್ದುದರಿಂದ, ಇವುಗಳ ಬಳಕೆಯೂ ನಿಮ್ಮ ಬಾಯಿಯ ಆರೋಗ್ಯ ರಕ್ಷಣೆಯ ವಿಚಾರದಲ್ಲಿ ಸುರಕ್ಷಿತವಲ್ಲ ಎಂದು ತಿಳಿದುಬಂದಿದೆ. ಇಂತಹ ಟೂತ್ ಪೌಡರ್ ಗಳನ್ನು ಬಳಸುವುದಕ್ಕಿಂತಲೂ, ಸಾಮಾನ್ಯ ಟೂತ್ ಪೇಸ್ಟ್ ಗಳನ್ನು ಮತ್ತು ಟೂತ್ ಬ್ರಶ್ ಗಳನ್ನು ಬಳಸುವುದು ನಿಮ್ಮ ಹಲ್ಲು ಮತ್ತು ಒಸಡುಗಳನ್ನು ಸಂರಕ್ಷಿಸಲು ಉಪಯುಕ್ತವೆನಿಸುವುದು. 

ಜನಸಾಮಾನ್ಯರು ಬಳಸುವ ಸಾಮಾನ್ಯ ಟೂತ್ ಪೇಸ್ಟ್ ಗಳಲ್ಲಿ ಹಲ್ಲುಗಳನ್ನು ತಿಕ್ಕಿ ಸ್ವಚ್ಚಗೊಳಿಸುವ, ನೊರೆಯನ್ನು ಉಂಟುಮಾಡುವ, ದಂತಕುಳಿಗಳನ್ನು ತಡೆಗಟ್ಟಬಲ್ಲ, ರುಚಿಕಾರಕ ಮತ್ತು ಸಿಹಿಯಾದ ಸ್ವಾದವನ್ನು ನೀಡುವ ಕೃತಕ ರಾಸಾಯನಿಕಗಳ ಪ್ರಮಾಣವು ಶೇ. ೯೦ ರಷ್ಟು ಇರುವುದು. ಇನ್ನುಳಿದಂತೆ ಶೇ. ೧೦ ರಷ್ಟು ರುಚಿವರ್ಧಕ ಸ್ವಾದಗಳೇ ಮುಂತಾದ ಅನ್ಯದ್ರವ್ಯಗಳನ್ನು ಬಳಸುವ ಮೂಲಕ ಇಂತಹ ಉತ್ಪನ್ನಗಳ ವೈಶಿಷ್ಟ್ಯತೆಯನ್ನು ಕಾಪಾಡಲಾಗುತ್ತದೆ. ಈ ಶೇ. ೧೦ ರಷ್ಟು ಅಂಶಗಳಲ್ಲಿ ಕೇವಲ ಶೇ. ೨.೫ ರಷ್ಟು ಸಸ್ಯಗಳ ಸಾರಗಳು ಅಥವಾ ಆಯುರ್ವೇದ ದ್ರವ್ಯಗಳನ್ನು ಬಳಸಿದೊಡನೆ, ಈ ಉತ್ಪನ್ನಗಳು ಹರ್ಬಲ್ ಟೂತ್ ಪೇಸ್ಟ್ ಗಳಾಗಿ ಪರಿವರ್ತನೆಗೊಳ್ಳುತ್ತವೆ!. 

ಅದೇನೇ ಇರಲಿ, ಬಹುತೇಕ ಗ್ರಾಹಕರಂತೂ ಇಂತಹ ಉತ್ಪನ್ನಗಳು ಹರ್ಬಲ್ ಅಥವಾ ಆಯುರ್ವೇದ ಪದ್ದತಿಯಿಂದ ತಯಾರಿಸಿದ ಉತ್ಪನ್ನಗಳೇ ಎಂದು ನಂಬಿರುವುದು ಮಾತ್ರ ಸುಳ್ಳೇನಲ್ಲ!. 

ಕೊನೆಯ ಮಾತು 

ಕೃತಕ ರಾಸಾಯನಿಕಗಳ ಬಳಕೆ ಅಪಾಯಕಾರಿ ಎನ್ನುವ ಕಾರಣದಿಂದಾಗಿಯೇ ಸಸ್ಯಜನ್ಯ ದ್ರವ್ಯಗಳಿಂದ ಸಿದ್ಧಪಡಿಸಿದ ಉತ್ಪನ್ನಗಳನ್ನು ಬಳಸುವ ಅನೇಕ ಗ್ರಾಹಕರು, ಅಪರೂಪದಲ್ಲಿ ಇವುಗಳ ಸತ್ಯಾಸತ್ಯತೆಯನ್ನು ಅರಿತುಕೊಳ್ಳುವ ಸಂದರ್ಭ ಅಯಾಚಿತವಾಗಿ ಲಭಿಸುವುದುಂಟು. ಇಂತಹ ಘಟನೆಯೊಂದು ಇಂತಿದೆ. ಬಿಳಿಯಾದ್ದ ತನ್ನ ತಲೆಗೂದಲುಗಳಿಗೆ ಕಪ್ಪು ಬಣ್ಣವನ್ನು ಬಳಿದ ಪರಿಣಾಮವಾಗಿ ತೀವ್ರಸ್ವರೂಪದ "ಅಲರ್ಜಿ" ಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬರಿಗೆ, ಇನ್ನು ಮುಂದೆ ಇಂತಹ ಯಾವುದೇ ಉತ್ಪನ್ನವನ್ನು ಬಳಸದಂತೆ ವೈದ್ಯರು ಎಚ್ಚರಿಕೆಯನ್ನು ನೀಡಿದ್ದರು. ಆದರೆ ತನ್ನ ಪತ್ನಿ ಬಳಸುತ್ತಿದ್ದ " ಹರ್ಬಲ್ " ಉತ್ಪನ್ನವೊಂದು ನಿರಪಾಯಕಾರಿ ಎಂದು ನಂಬಿ ತನ್ನ ಮೀಸೆಗೆ ಬಳಿದುಕೊಂಡ ಈತನಿಗೆ, ಮತ್ತೊಮ್ಮೆ ತೀವ್ರಸ್ವರೂಪದ ಅಲರ್ಜಿ ತಲೆದೋರಿದ ಪರಿಣಾಮವಾಗಿ ಒಂದುವಾರ ಮನೆಯಲ್ಲೇ ಕುಳಿತುಕೊಳ್ಳುವ ಪ್ರಸಂಗ ಸಂಭವಿಸಿತ್ತು. ಏಕೆಂದರೆ ಮೀಸೆಗೆ ಬಣ್ಣವನ್ನು ಬಳಿದುಕೊಂಡ ಪರಿಣಾಮವಾಗಿ ಈತನ ಮುಖವು, ಹನುಮಂತನ ಮೂತಿಯಂತಾಗಿತ್ತು !. 

ಈ ಹರ್ಬಲ್ ಉತ್ಪನ್ನವು ನಿಜಕ್ಕೂ ಸಸ್ಯಗಳಿಂದ ತಯಾರಿಸಿದ್ದಲ್ಲಿ, ಇದನ್ನು ಬಳಸಿದ ವ್ಯಕ್ತಿಗೆ ಯಾವುದೇ ರೀತಿಯ ದುಷ್ಪರಿಣಾಮ ಅಥವಾ ಅಡ್ಡ ಪರಿಣಾಮ ಮತ್ತು ಅಲರ್ಜಿ ಗಳಂತಹ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳೇ ಇರುತ್ತಿರಲಿಲ್ಲ. ಆದರೆ ಈ ಉತ್ಪನ್ನದಲ್ಲಿ ಸಾಕಷ್ಟು ಕೃತಕ ರಾಸಾಯನಿಕಗಳು ಇದ್ದುದರಿಂದಾಗಿಯೇ ಆತನಿಗೆ ತೀವ್ರಸ್ವರೂಪದ ಅಲರ್ಜಿ ಉದ್ಭವಿಸಿತ್ತು. ಇಂತಹ ಅನೇಕ ಘಟನೆಗಳನ್ನು ಚರ್ಮರೋಗ ತಜ್ಞರು ತಮ್ಮ ರೋಗಿಗಳಿಗೆ ಉದಾಹರಣೆಯನ್ನಾಗಿ ನೀಡುತ್ತಾರೆ. ಆದರೂ ಇದನ್ನು ಗಂಭೀರವಾಗಿ ಪರಿಗಣಿಸದ ವ್ಯಕ್ತಿಗಳು, ಮತ್ತೆ ತಮ್ಮ ತಪ್ಪುಗಳನ್ನು ಪುನರಾವರ್ತಿಸುತ್ತಾರೆ!. 

ಡಾ. ಸಿ . ನಿತ್ಯಾನಂದ ಪೈ, ಪುತ್ತೂರು 



No comments:

Post a Comment