Wednesday, May 14, 2014

Karnataka MLA's Foreign tour


ಶಾಸಕರ ವಿದೇಶ ಅಧ್ಯಯನ ಪ್ರವಾಸವನ್ನು ರದ್ದುಪಡಿಸಿ 

ಯಾರದ್ದೋ ದುಡ್ಡು, ಎಲ್ಲಮ್ಮನ ಜಾತ್ರೆ ಎನ್ನುವ ಆಡುಮಾತು, ಕರ್ನಾಟಕದ ಶಾಸಕರ ವಿದೇಶ ಅಧ್ಯಯನ ಪ್ರವಾಸದ ಬಗ್ಗೆ ಅನ್ವರ್ಥವೆನಿಸುತ್ತದೆ. ಏಕೆಂದರೆ ರಾಜ್ಯದ ಪ್ರಜೆಗಳು ಪಾವತಿಸಿದ ತೆರಿಗೆಯ ಹಣವನ್ನು ಸನ್ಮಾನ್ಯ ಶಾಸಕರು ತಮ್ಮ ಮೋಜು- ಮಸ್ತಿಗಳಿಗಾಗಿ ವ್ಯಯಿಸುತ್ತಿದ್ದಾರೆ. 

ರಾಜ್ಯದ ಶಾಸಕರ ವಿದೇಶ ಯಾತ್ರೆಯ ಬಗ್ಗೆ ಕರ್ನಾಟಕದಲ್ಲಿ ಮಾತ್ರವಲ್ಲ, ರಾಷ್ಟ್ರೀಯ ಮಟ್ಟದಲ್ಲಿ ಕೂಡಾ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದೆ. ಜೊತೆಗೆ ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರತಿಕೂಲ ಪ್ರತಿಕ್ರಿಯೆಗಳು ಪ್ರಕಟಗೊಂಡಿವೆ. ಆದರೂ ರಾಜ್ಯದಲ್ಲಿ ಲೋಕಸಭಾ ಚುನಾವಣೆಗಳು ಮುಗಿದೊಡನೆ, ನಾಲ್ಕು ಸದನ ಸಮಿತಿಗಳು ವಿದೇಶ ಅಧ್ಯಯನ ಪ್ರವಾಸಕ್ಕೆ ಹೊರಡಲು ಹೊರಡಲು ಪೂರ್ವಸಿದ್ಧತೆಗಳನ್ನು ನಡೆಸಿದ್ದವು. ಸಾಕಷ್ಟು ವಾದವಿವಾದಗಳಿಗೆ ಕಾರಣವೆನಿಸಿರುವ ಈ ಪ್ರವಾಸಕ್ಕೆ ಅನುಮತಿಯನ್ನು ನೀಡಲು ನಿರಾಕರಿಸಿದ್ದ ವಿಧಾನ ಸಭಾಧ್ಯಕ್ಷರು, ವಿದೇಶ ಪ್ರವಾಸದ ವಿಚಾರದಲ್ಲಿ ಕೆಲವೊಂದು ನೀತಿ ನಿಯಮಗಳು ಮತ್ತು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ನೇಮಿಸಿರುವ ಅಧಿಕೃತ ಸಮಿತಿಯು ತನ್ನ  ಶಿಫಾರಸುಗಳನ್ನು ಸಲ್ಲಿಸಿದ ಬಳಿಕವೇ ಅಂತಿಮ ನಿರ್ಧಾರವನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ.ಜೊತೆಗೆ ಕಳೆದ ಐದು ವರ್ಷಗಳಲ್ಲಿ ವಿದೇಶ ಪ್ರವಾಸವನ್ನು ಕೈಗೊಂಡಿದ್ದ ಸಮಿತಿಗಳು ಸಲ್ಲಿಸಿದ್ದ ಅಧ್ಯಯನದ ವರದಿಗಳನ್ನು ಪರಿಶೀಲಿಸುವುದಾಗಿಯೂ ಘೋಷಿಸಿದ್ದಾರೆ. ತನ್ಮೂಲಕ ೨೦೦೯ ರಲ್ಲಿ ರೂಪಿಸಿದ್ದ ಮಾರ್ಗದರ್ಶಿ ನಿಯಮಗಳ ಬಗ್ಗೆ ತಮಗೇನೂ ತಿಳಿದಿಲ್ಲವೆಂದು ಮತ್ತು ಇದಕ್ಕೂ ಮುನ್ನ ವಿದೇಶ ಪ್ರವಾಸ ಕೈಗೊಂಡಿದ್ದ ಸದನ ಸಮಿತಿಗಳು ತಮಗೆ ಸಲ್ಲಿಸಿದ್ದ ಅಧ್ಯಯನದ ವರದಿಗಳನ್ನು ಇಂದಿನ ತನಕ ತಾವು ಪರಿಶೀಲಿಸಿಲ್ಲ ಎನ್ನುವುದನ್ನು ಸ್ವಯಂ ಧೃಢಪಡಿಸಿದ್ದಾರೆ. 


ಕರ್ನಾಟಕ ರಾಜ್ಯದ ವಿಧಾನ ಮಂಡಲಗಳ ವಿವಿಧ ಸದನ ಸಮಿತಿಗಳ ಸದಸ್ಯರಾಗಿರುವ ಶಾಸಕರು ಅಧ್ಯಯನದ ನೆಪದಲ್ಲಿ ಉಚಿತ ವಿದೇಶ ಪ್ರವಾಸ ಕೈಗೊಳ್ಳುವುದನ್ನು ಇದೀಗ  ಅಂತ್ಯಗೊಳಿಸಲೇಬೇಕಾಗಿದೆ. ರಾಜ್ಯದ ಪ್ರಜೆಗಳು ತೆತ್ತ ತೆರಿಗೆಯ ಹಣವನ್ನು ವ್ಯಯಿಸಿ, ಮೋಜು- ಮಸ್ತಿಗಳ ಸಲುವಾಗಿ ಸುಪ್ರಸಿದ್ಧ ವಿದೇಶಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ನಮ್ಮ ಶಾಸಕರುಅಲ್ಲಿ ನಡೆಸುವ " ಅಧ್ಯಯನ" ಏನೆಂದು ಜನಸಾಮಾನ್ಯರಿಗೂ ತಿಳಿದಿದೆ. ವಿಶೇಷವೆಂದರೆ ವಿವಿಧ ಸದನ ಸಮಿತಿಗಳ ಕರ್ತವ್ಯ ಹಾಗೂ ಹೊಣೆಗಾರಿಕೆಗಳಿಗೆ ಮತ್ತು ಇವರು ಅಧ್ಯಯನದ ಸಲುವಾಗಿ ಸಂದರ್ಶಿಸುವ ವಿದೇಶಿ ಪ್ರವಾಸಿ ತಾಣಗಳಿಗೆ ಯಾವುದೇ ಸಂಬಂಧ ಇಲ್ಲದಿರುವುದು ಈ ಪ್ರವಾಸದ ಉದ್ದೇಶವನ್ನು ಬಯಲುಗೊಳಿಸುತ್ತದೆ !.
ಶಾಸಕರ ವಿದೇಶ ಪ್ರವಾಸದ ವಿಚಾರದಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದ ಪ್ರತಿಕೂಲ ಪ್ರತಿಕ್ರಿಯೆಗಳ ಹೊರತಾಗಿಯೂ, ಇದೇ ವರ್ಷದ ಆದಿಯಲ್ಲಿ ವಿದೇಶ ಪ್ರವಾಸವನ್ನು ಕೈಗೊಂಡಿದ್ದ ಶಾಸಕರ ಸಂದರ್ಶನವನ್ನು ನಡೆಸಿದ್ದ ರಾಷ್ಟ್ರೀಯ ಖಾಸಗಿ ಟಿ. ವಿ ವಾಹಿನಿಯ ವರದಿಗಾರರ ಪ್ರಶ್ನೆಗಳಿಗೆ ತಬ್ಬಿಬ್ಬಾದ ಶಾಸಕರು ನೀಡಿದ್ದ ಉತ್ತರಗಳುಈ ಕಾರ್ಯಕ್ರಮವನ್ನು ವೀಕ್ಷಿಸಿದವರಿಗೆ ಸಾಕಷ್ಟು ಮನೋರಂಜನೆಯನ್ನು ನೀಡಲು ಯಶಸ್ವಿಯಾಗಿತ್ತು!. 

ಪ್ರವಾಸಕ್ಕೆ ತಡೆ 

ವಿಧಾನಸಭೆಯ ಸ್ಪೀಕರ್ ಕಾಗೋಡು ತಿಮ್ಮಪ್ಪನವರ ಹೇಳಿಕೆಯಂತೆ ರಾಜ್ಯದ ಜನತೆ ಬರಗಾಲದಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ಶಾಸಕರು ವಿದೇಶ ಪ್ರವಾಸಕ್ಕೆ ತೆರಳುವುದು ಸರಿಯಲ್ಲ.ಈ ಬಗ್ಗೆ ಯಾವುದೇ ಪ್ರಸ್ತಾವನೆ ತಮ್ಮ ಬಳಿಗೆ ಬಂದಿಲ್ಲ. ಪ್ರಸ್ತಾವನೆ ಬಂದರೂ ಶಾಸಕರ ವಿದೇಶ ಪ್ರವಾಸದ ವಿಚಾರದಲ್ಲಿ ಸೂಕ್ತ ನೀತಿನಿಯಮಗಳು ಮತ್ತು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ತಾವು ಇದೀಗ ನೇಮಿಸಿರುವ ಸಮಿತಿಯ ವರದಿಯು ಕೈಸೇರಿದ ಬಳಿಕ ಈ ಬಗ್ಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳುವುದಾಗಿಯೂ ಹೇಳಿದ್ದಾರೆ. 

ಇದಕ್ಕೂ ಮಿಗಿಲಾಗಿ ವಿಧಾನ ಸಭೆಯ ಸಚಿವಾಲಯದ ಕಾರ್ಯದರ್ಶಿಯವರು ಸುತ್ತೊಲೆಯೊಂದನ್ನು ಹೊರಡಿಸಿಯಾವುದೇ ಸದನ ಸಮಿತಿಗಳ ಸದಸ್ಯರಾಗಿರುವ ಶಾಸಕರು ವಿದೇಶ ಪ್ರವಾಸದ ಪ್ರಸ್ತಾವನೆಯನ್ನು ಸಲ್ಲಿಸದಂತೆ ಸೂಚಿಸಿದ್ದಾರೆ. ಜೊತೆಗೆ ವಿಧಾನ ಸಭೆಯ ಅಧ್ಯಕ್ಷರು ನೇಮಿಸಿರುವ ಅಧಿಕೃತ ಸಮಿತಿಯು ಈ ಬಗ್ಗೆ ಮಾರ್ಗದರ್ಶಿ ನೀತಿ ನಿಯಮಗಳನ್ನು ರೂಪಿಸುವ ತನಕ ಶಾಸಕರ ವಿದೇಶ ಪ್ರವಾಸವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಸೂಚಿಸಿದ್ದಾರೆ. ಪ್ರಾಯಶಃ ರಾಜ್ಯದ ಅನೇಕ ಭಾಗಗಳಲ್ಲಿ ತೀವ್ರ ಬರಗಾಲ ಬಾಧಿಸುತ್ತಿದ್ದು, ಈ ಸಂದರ್ಭದಲ್ಲಿ ನಮ್ಮ ಶಾಸಕರು ವಿದೇಶಗಳಿಗೆ ತೆರಳಿ ಮೋಜುಮಸ್ತಿ ಮಾಡುವುದು ಸರಿಯಲ್ಲ ಎನ್ನುವ ಟೀಕೆಗೆ ಅವಕಾಶವನ್ನು ನೀಡದಿರಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಆದರೆ ಈ ಸದನ ಸಮಿತಿಗಳು ತಮ್ಮ ವಿದೇಶ ಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಿವೆಯೇ ಹೊರತು ರದ್ದುಪಡಿಸಿಲ್ಲ. ಆದುದರಿಂದ ಇಂದಲ್ಲ ನಾಳೆ ವಿದೇಶ ಪ್ರವಾಸವನ್ನು ಕೈಗೊಳ್ಳುವುದರಲ್ಲಿ ಸಂದೇಹವಿಲ್ಲ!. 
.
ಅದೇರೀತಿಯಲ್ಲಿ ವಿಧಾನಸಭಾಧ್ಯಕ್ಷರು ತಾವು ನೇಮಿಸಿರುವ ಸಮಿತಿಯ ವರದಿ ಕೈಸೇರಿದ ಬಳಿಕ, ಅದರಲ್ಲಿನ ಶಿಫಾರಸುಗಳನ್ವಯ ಸದನ ಸಮಿತಿಗಳಿಗೆ ವಿದೇಶ ಪ್ರವಾಸಕ್ಕೆ ಅನುಮತಿಯನ್ನು ನೀಡುವುದಾಗಿ  ಹೇಳಿದ್ದಾರೆ. ಅರ್ಥಾತ್, ಶಾಸಕರ ವಿದೇಶ ಅಧ್ಯಯನ ಪ್ರವಾಸ ರದ್ದುಗೊಳ್ಳುವ ಸಾಧ್ಯತೆಗಳಿಲ್ಲ ಎನ್ನುವುದನ್ನು ಪರೋಕ್ಷವಾಗಿ ಸೂಚಿಸಿದ್ದಾರೆ.

ಬದಲಾಗಲಿರುವ ವ್ಯವಸ್ಥೆ 

ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ವರದಿಯಂತೆ ರಾಜ್ಯದ ಶಾಸಕರು ಅಧ್ಯಯನದ ನೆಪದಲ್ಲಿ ವಿದೇಶ ಪ್ರವಾಸವನ್ನು ಖಾಸಗಿ ಟ್ರಾವಲ್ ಏಜೆಂಟರ ಮೂಲಕ ನಿಗದಿಸಿಕೊಂಡು, ಮೋಜುಮಾಡುವುದಕ್ಕೆ ಬ್ರೇಕ್ ಹಾಕುವಂತಹ ಪ್ರಯತ್ನವೊಂದು ನಡೆದಿದೆ. 

ಶಾಸಕರು ಇನ್ನುಮುಂದೆ ಕೇಂದ್ರ ವಿದೇಶಾಂಗ ಸಚಿವಾಲಯದ ಮೂಲಕವೇ ವಿದೇಶ ಪ್ರವಾಸ ಕೈಗೊಳ್ಳಬೇಕು ಮತ್ತು ವಿದೇಶಗಳಲ್ಲಿ ಭೇಟಿನೀಡುವ ತಾಣಗಳನ್ನು ಆಯಾ ದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳೇ ನಿರ್ಧರಿಸಬೇಕು. ಶಾಸಕರ ವಿದೇಶ ಪ್ರವಾಸದ ಮಾರ್ಗಸೂಚಿ ನಿಯಮಗಳನ್ನು ಸಿದ್ಧಪಡಿಸಲು ರಚಿಸಲಾದ ವಿಧಾನಮಂಡಲದ ಉಭಯ ಸದನಗಳ ಕಾರ್ಯದರ್ಶಿಗಳ ಸಮಿತಿಯು ಇಂತಹದ್ದೊಂದು ಶಿಫಾರಸು ಮಾಡಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. 

ಶಾಸಕರು ಯಾವ ವಿಷಯದ ಮೇಲೆ ಯಾವ ದೇಶದಲ್ಲಿ ಅಧ್ಯಯನ ಮಾಡಲು ಪ್ರವಾಸ ಕೈಗೊಳ್ಳುತ್ತಿದ್ದಾರೆ ಎನ್ನುವ ಬಗ್ಗೆ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿ ಮಾಹಿತಿ ನೀಡಬೇಕಾಗುತ್ತದೆ. ಬಳಿಕ ವಿದೇಶಾಂಗ ಸಚಿವಾಲಯವು ಶಾಸಕರು ಹೋಗಬಯಸುವ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಈ ಮಾಹಿತಿಯನ್ನು ರವಾನಿಸಿ, ಎಲ್ಲೆಲ್ಲಿ ಅಧ್ಯಯನವನ್ನು ನಡೆಸಬಹುದು ಎನ್ನುವುದರ ಬಗ್ಗೆ ಪಟ್ಟಿಯನ್ನು ಪಡೆದುಕೊಳ್ಳಬೇಕಾಗುವುದು. ಅಂತೆಯೇ ಅಲ್ಲಿನ ಸರಕಾರಕ್ಕೂ ವಿಷಯವನ್ನು ತಿಳಿಸಿ, ಶಾಸಕರನ್ನು ಸ್ವಾಗತಿಸಿ ಮಾಹಿತಿ ನೀಡುವ ವ್ಯವಸ್ಥೆ ಮಾಡಿಸುವುದು ಇದರ ಉದ್ದೇಶವೆಂದು ಹೇಳಲಾಗಿದೆ. 

ಈ ವಿಚಾರವು ನಿಜವಾಗಿದ್ದಲ್ಲಿ ನಮ್ಮ ಶಾಸಕರು ಇದನ್ನು ತೀವ್ರವಾಗಿ ವಿರೋಧಿಸುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ಇಂತಹ ಅಧ್ಯಯನ ಪ್ರವಾಸದಲ್ಲಿ ಮೋಜು- ಮಸ್ತಿಗಳಿಗೆ ಅವಕಾಶ ದೊರೆಯುವ ಸಾಧ್ಯತೆಗಳೇ ಇಲ್ಲ!. ಆದರೂ ಜನಸಾಮಾನ್ಯರ ಅಭಿಪ್ರಾಯದಂತೆ ರಾಜ್ಯದ ಶಾಸಕರಿಗೆ ನೀಡಿರುವ " ಪುಕ್ಕಟೆ ವಿದೇಶ ಅಧ್ಯಯನ ಪ್ರವಾಸ" ದ ಸೌಲಭ್ಯವನ್ನು ರದ್ದುಪಡಿಸಲೇಬೇಕು. 

ಅಸ್ತಿತ್ವದಲ್ಲಿರುವ ನೀತಿನಿಯಮಗಳು  

ನಿಜ ಹೇಳಬೇಕಿದ್ದಲ್ಲಿ ಸದನ ಸಮಿತಿಗಳ ಸದಸ್ಯರಾಗಿರುವ ವಿಧಾನ ಸಭೆ ಮತ್ತ ವಿಧಾನ ಪರಿಷತ್ತುಗಳ ಶಾಸಕರು ಕೈಗೊಳ್ಳುವ ವಿದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ ಕೆಲವೊಂದು ನೀತಿ ನಿಯಮಗಳನ್ನು ೨೦೦೯ರ ಜೂನ್ ತಿಂಗಳಿನಲ್ಲೇ  ರೂಪಿಸಲಾಗಿತ್ತು. ಇದರ ಯಥಾಪ್ರತಿಯೊಂದು ನಮಗೆ ಮಾಹಿತಿ ಪಡೆಯುವ ಹಕ್ಕು ಕಾಯಿದೆ- ೨೦೦೫ ರನ್ವಯ ಇದೇ  ವರ್ಷದ ಆದಿಯಲ್ಲಿ ಲಭಿಸಿತ್ತು.ಈ ನೀತಿ ನಿಯಮಗಳು ಈ ಕೆಳಗಿನಂತಿವೆ.

ಪ್ರಸ್ತಾವನೆ:

೧೨ ನೆ ವಿಧಾನ ಸಭೆಯ ಅವಧಿಯಲ್ಲಿ ತಮ್ಮ ಐದು ವರ್ಷಗಳ ಅವಧಿಯಲ್ಲಿ ಸಮಿತಿಗಳು ಎರಡು ಬಾರಿ ಸ್ವದೇಶಿ ಅಧ್ಯಯನ ಪ್ರವಾಸ ಹಾಗೂ ಒಮ್ಮೆ ವಿದೇಶಿ ಅಧ್ಯಯನ ಪ್ರವಾಸ ಕೈಗೊಳ್ಳಲು ಅಂದಿನ ಮಾನ್ಯ ಸಭಾಧ್ಯಕ್ಷರು ಅನುಮತಿ ನೀಡಿದ್ದರು. ವಿಧಾನ ಮಂಡಲದ ಸಮಿತಿಗಳು ಒಂದುಬಾರಿ ವಿದೇಶ ಪ್ರವಾಸ ಹಾಗೂ ಮೂರು ಬಾರಿ ಸ್ವದೇಶಿ ಅಧ್ಯಯನ ಪ್ರವಾಸ ಕೈಗೊಳಲು ಅನುವು ಮಾಡಿಕೊಡಲು ಮಾನ್ಯ ಸಭಾಧ್ಯಕ್ಷರ ಸೂಚನೆಯಂತೆ ವಿಶೇಷ ಮಂಡಳಿಯ ಮುಂದೆ ಹೊಸ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಈ ಸಂಬಂಧ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಿ, ಸದರಿ ಪ್ರಸ್ತಾವನೆಗೆ ಮಾನ್ಯ ವಿಶೇಷ ಮಂಡಳಿಯು ಅನುಮೋದನೆ ನೀಡಿರುತ್ತದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ,ವಿಧಾನ ಮಂಡಲದ ವಿವಿಧ ಸಮಿತಿಗಳು ವಿದೇಶ ಪ್ರವಾಸ ಕೈಗೊಳ್ಳುವ ಸಂಬಂಧ ಈ ಕೆಳಕಂಡ ನಿಯಮಗಳನ್ನು ವಿಧಿಸಲಾಗಿದೆ.
. ಒಬ್ಬ ಸದಸ್ಯರು ಅವರ ಸದಸ್ಯತ್ವದ ಅವಧಿಯಲ್ಲಿ ಯಾವುದಾದರೂ ಒಂದು ಸಮಿತಿಯೊಂದಿಗೆಒಂದು ಬಾರಿ ಮಾತ್ರ ವಿದೇಶಿ ಪ್ರವಾಸ ಕೈಗೊಳ್ಳತಕ್ಕದ್ದು.
. ಒಬ್ಬ ಸದಸ್ಯರು ಒಂದು ಸಮಿತಿಯೊಂದಿಗೆ ವಿದೇಶಿ ಪ್ರವಾಸ ಕೈಗೊಂಡ ಪಕ್ಷದಲ್ಲಿ ಅವರು ಮುಂದಿನ ವರ್ಷಗಳಲ್ಲಿ ಬೇರೊಂದು ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವಾಗ ಆ ಸಮಿತಿಯು ವಿದೇಶಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮತ್ತೊಮ್ಮೆ ಯಾವುದೇ ಸಮಿತಿಯೊಂದಿಗೆ ಎರಡನೇ ಬಾರಿ ವಿದೇಶಿ ಪ್ರವಾಸ ಕೈಗೊಳ್ಳಲು ಅವಕಾಶ ನೀಡುವಂತಿಲ್ಲ.
. ಸಮಿತಿಯು ದೂರದ ದೇಶಕ್ಕೆ ವಿದೇಶಿ ಪ್ರವಾಸ ನಿಗದಿಗೊಳಿಸಿದ ಸಂದರ್ಭದಲ್ಲಿ ಮಾರ್ಗದ ಮಧ್ಯೆ ಇರುವ ದೇಶಗಳಿಗೆ ಮಾತ್ರ ಭೇಟಿ ನೀಡತಕ್ಕದ್ದು.
. ವಿದೇಶಿ ಅಧ್ಯಯನ ಪ್ರವಾಸವನ್ನು ಪ್ರಯಾಣದ ದಿನಗಳನ್ನು ಹೊರತುಪಡಿಸಿ ಒಟ್ಟು ೧೫ ದಿನಗಳು ಮೀರದಂತೆ ಕೈಗೊಳ್ಳತಕ್ಕದ್ದು.
. ವಿದೇಶ ಪ್ರವಾಸ ಕೈಗೊಳ್ಳುವ ಸದಸ್ಯರು ಹಾಗೂ ಅಧಿಕಾರಿಗಳ ಖರ್ಚು ವೆಚ್ಚವನ್ನು ( ಪ್ರಯಾಣ - ದಿನ ಭತ್ಯೆ ಸೇರಿದಂತೆ) ಸರ್ಕಾರಿ ಆದೇಶ ಸಂಖ್ಯೆ: ಎಫ್ ಡಿ ೯ ಎಸ್ ಆರ್ ಎ ೨೦೦೦ದಿನಾಂಕ ೨೦-೧೧-೨೦೦೩ ರನ್ವಯ ನಿಯಂತ್ರಣಗೊಳಿಸತಕ್ಕದ್ದು.
. ಅಧ್ಯಯನ ಪ್ರವಾಸ ಕೈಗೊಳ್ಳುವ ಸದಸ್ಯರು/ ಅಧಿಕಾರಿಗಳು ಎಕಾನಮಿ ದರ್ಜೆಯಲ್ಲಿ ಮಾತ್ರ ಪ್ರಯಾಣ ಕೈಗೊಳ್ಳತಕ್ಕದ್ದು.
.ಅಂತಿಮ ಪ್ರಯಾಣದ ಬಿಲ್ಲನ್ನು ಸಲ್ಲಿಸುವಾಗ ಅಗತ್ಯ ದಾಖಲೆಗಳನ್ನು ಅಂದರೆ ವಿಮಾನಯಾನಕ್ಕೆ ಸಂಬಂಧಪಟ್ಟ ಬಿಲ್ಲುಗಳು, ಬೋರ್ಡಿಂಗ್ ಪಾಸ್,ಹೋಗುವ  ಹೋಟೆಲ್ ರೆಂಟಲ್ ರಸೀದಿಯನ್ನು ಕಡ್ಡಾಯವಾಗಿ ಸಲ್ಲಿಸಲು ಹಾಗೂ ಮೇಲೆ ತಿಳಿಸಿದ ಆದೇಶದನ್ವಯ ಅವರ ಪ್ರಯಾಣ ಭತ್ಯೆಯನ್ನು ಪಡೆಯತಕ್ಕದ್ದು.
. ವಿದೇಶಿ ಅಧ್ಯಯನ ಪ್ರವಾಸ ಕೈಗೊಳ್ಳುವ ಸಮಿತಿಯೊಂದಿಗೆ ಪ್ರಯಾಣ ಮಾಡುವ ಅಧಿಕಾರಿ/ನೌಕರರ ( ವರದಿಗಾರರು ಸೇರಿದಂತೆ) ಸಂಖ್ಯೆಯನ್ನು ಮೂರಕ್ಕೆ ಮಿತಿಗೊಳಿಸತಕ್ಕದ್ದು.
. ಸಚಿವಾಲಯದ ಅಧಿಕಾರಿಗಳು ಯಾವುದೇ ಒಂದಕ್ಕಿಂತ ಹೆಚ್ಚಿನ ಸಮಿತಿಗಳಲ್ಲಿ ಇದ್ದ ಪಕ್ಷದಲ್ಲಿ ವಿಧಾನ ಸಭೆಯ ಒಂದು ಅವಧಿಯಲ್ಲಿ ಯಾವುದಾದರೂ ಒಂದು ಸಮಿತ್ಯೊಂದಿಗೆ ಒಮ್ಮೆ ಮಾತ್ರ ಪ್ರವಾಸ ಕೈಗೊಳ್ಳತಕ್ಕದ್ದು.
೧೦. ವಿದೇಶಿ ಅಧ್ಯಯನ ಪ್ರವಾಸ ಕೈಗೊಂಡ ಸಮಿತಿಗೆ ಪ್ರವಾಸದ ನಂತರ ಪ್ರವಾಸಕ್ಕೆ ಸಂಬಂಧಪಟ್ಟ ಸಂಕ್ಷಿಪ್ತ ವರದಿಯನ್ನು ಮಾನ್ಯ ಸಭಾಪತಿಯವರು/ ಮಾನ್ಯ ಸಭಾಧ್ಯಕ್ಷರಿಗೆ ಸಲ್ಲಿಸತಕ್ಕದ್ದು.
೧೧. ವಿದೇಶಿ ಅಧ್ಯಯನ ಪ್ರವಾಸಕ್ಕೆ ಸಂಬಂಧಪಟ್ಟ ಕಾರ್ಯಕ್ರಮ ಪಟ್ಟಿಗೆ ಸನ್ಮಾನ್ಯಸಭಾಪತಿಯವರ/  ಸಭಾಧ್ಯಕ್ಷರ ಅನುಮೋದನೆ ಪಡೆಯತಕ್ಕದ್ದು.

೨೦೦೯ ರಲ್ಲಿ ರೂಪಿತಗೊಂಡಿದ್ದ ನಿಯಮಗಳಿದ್ದರೂಇದೀಗ ಮಾನ್ಯ ಸಭಾಧ್ಯಕ್ಷರು ಮತ್ತೆ ಹೊಸದಾಗಿ ಮಾರ್ಗದರ್ಶಿ ನೀತಿ ನಿಯಮಗಳನ್ನು ರೂಪಿಸಲು ಸಮಿತಿಯೊಂದನ್ನು ನೇಮಿಸಿರುವುದು ಏಕೆಂದು ಅರಿತುಕೊಳ್ಳುವ ಹಕ್ಕು ರಾಜ್ಯದ ಪ್ರಜೆಗಳಿಗೆ ಇದೆ. ತಾವು ತೆತ್ತಿರುವ ತೆರಿಗೆಯ ಹಣವನ್ನುತಾವೇ ಆಯ್ಕೆಮಾಡಿರುವ ಶಾಸಕರು ವಿದೇಶಿ ಅಧ್ಯಯನ ಪ್ರವಾಸದ ನೆಪದಲ್ಲಿ ಮೋಜು- ಮಸ್ತಿಗಳಿಗಾಗಿ ವ್ಯಯಿಸುವುದನ್ನು ನಿಲ್ಲಿಸುವಂತೆ ಸೂಚಿಸುವ ಹಕ್ಕು ಕೂಡಾ ರಾಜ್ಯದ ಪ್ರಜೆಗಳಿಗೆ ನಿಶ್ಚಿತವಾಗಿಯೂ ಇದೆ. ಆದರೆ ಒಂದುಬಾರಿ ಚುನಾವಣೆಯಲ್ಲಿ ಗೆದ್ದು ಶಾಸಕರಾದ ಬಳಿಕ ಮತದಾರರ ಸಲಹೆ ಸೂಚನೆಗಳನ್ನು ಮನ್ನಿಸಲು ಸಿದ್ಧರಿಲ್ಲದ ನಮ್ಮ ನೇತಾರರು, ತಮ್ಮ ಇಚ್ಛೆಯಂತೆ ನಡೆದುಕೊಳ್ಳುವುದು ಜನಸಾಮಾನ್ಯರಿಗೆ ತಿಳಿಯದ ವಿಚಾರವೇನಲ್ಲ.ಉದಾಹರಣೆಗೆ ಕರ್ನಾಟಕ ವಿಧಾನಮಂಡಲದ ೧೫ ಸದನ ಸಮಿತಿಗಳಲ್ಲಿ, ಬಿ. ಜೆ. ಪಿ ಸರ್ಕಾರದ ಅಧಿಕಾರಾವಧಿಯಲ್ಲಿ ೧೨ ಸದನ ಸಮಿತಿಗಳು ವಿದೇಶ ಪ್ರವಾಸವನ್ನು ಕೈಗೊಂಡಿದ್ದವು. ಆದರೆ ಇವುಗಳಲ್ಲಿ ಮೂರು ಸಮಿತಿಗಳು ತಾವು ನಡೆಸಿದ್ದ " ಅಧ್ಯಯನ" ದ ವರದಿಗಳನ್ನೇ ಸಭಾಧ್ಯಕ್ಷರಿಗೆ ಸಲ್ಲಿಸಿರಲಿಲ್ಲ!. ಇನ್ನುಳಿದ ೯ ಸಮಿತಿಗಳು ಸಲ್ಲಿಸಿದ್ದ ವರದಿಗಳನ್ನು ಸಭಾಧ್ಯಕ್ಷರು ಪರಿಶೀಲಿಸಿರಲಿಲ್ಲ. ಇವೆಲ್ಲಕ್ಕೂ ಮಿಗಿಲಾಗಿ ಶಾಸಕರ ವಸತಿ ಸೌಕರ್ಯಗಳ ಸಮಿತಿ, ವಿಧಾನಸಭೆಯ ಅರ್ಜಿಗಳ ಸಮಿತಿ, ಗ್ರಂಥಾಲಯಗಳ ಸಮಿತಿ ಮತ್ತು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಗಳು ತಲಾ ಎರಡುಬಾರಿ ವಿದೇಶ ಪ್ರವಾಸಕ್ಕೆ ತೆರಳಿದ್ದವು!. 

ಅದೇ ರೀತಿಯಲ್ಲಿ ವಿವಿಧ ಸದನ ಸಮಿತಿಗಳ ಕರ್ತವ್ಯ ಮತ್ತು ಹೊಣೆಗಾರಿಕೆಗಳಿಗೆ ಮತ್ತು ವಿದೇಶ ಪ್ರವಾಸಗಳಿಗೆ ಏನೇನೂ ಸಂಬಂಧವಿಲ್ಲ. ಉದಾಹರಣೆಗೆ ಶಾಸಕರ ವಸತಿ ಸೌಕರ್ಯಗಳ ಸಮಿತಿ ಅಥವಾ ಗ್ರಂಥಾಲಯಗಳ ಸಮಿತಿಗಳ ಸದಸ್ಯರು ಅಥವಾ ಇತರ ಯಾವುದೇ ಸಮಿತಿಗಳು ವಿದೇಶಗಳಲ್ಲಿ ,ಅದರಲ್ಲೂ ಸುಪ್ರಸಿದ್ಧ ಪ್ರವಾಸಿ ತಾಣಗಳನ್ನು ಸಂದರ್ಶಿಸಿ ಏನನ್ನು ಅಧ್ಯಯನ ಮಾಡುತ್ತಾರೆ ಹಾಗೂ ಇವುಗಳಿಗೆ ಮತ್ತು ಈ ಸಮಿತಿಗಳ ಕರ್ತವ್ಯ ಹಾಗೂ ಹೊಣೆಗಾರಿಕೆಗಳಿಗೆ ಇರುವ ಸಂಬಂಧವಾದರೂ ಏನು?, ಇಂತಹ ಪ್ರಶ್ನೆಗಳಿಗೆ ಸೂಕ್ತ ಉತ್ತರ ದೊರೆಯುವ ಸಾಧ್ಯತೆಗಳೇ ಇಲ್ಲ. 

ಅದೇನೇ ಇರಲಿ, ರಾಜಕಾರಣಿಗಳ ಹಲವಾರು ಹಗರಣಗಳನ್ನು ಬಯಲಿಗೆಳೆಯಲು ಮತ್ತು ಇಂತಹವರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ದಾವೆಗಳನ್ನು ಹೂಡುವ ಪ್ರಜ್ಞಾವಂತ ನಾಗರಿಕರು, ನಮ್ಮ ಶಾಸಕರ ಸ್ವದೇಶಿ ಮತ್ತು ವಿದೇಶಿ ಪುಕ್ಕಟೆ  ಪ್ರವಾಸ ಭಾಗ್ಯವನ್ನು  ರದ್ದುಗೊಳಿಸುವಂತೆ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ದಾವೆಯನ್ನು ಹೂಡುವರೇ ಎಂದು ಕಾದುನೋಡೋಣ.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 















No comments:

Post a Comment