Monday, May 19, 2014

obstacles in road widening




 ರಸ್ತೆಗಳ ವಿಸ್ತರಣೆಗೆ ಸಂಭವಿಸುತ್ತಿರುವ ಅಡಚಣೆಗಳು 

ರಾಜ್ಯದ ಬಹುತೇಕ ಸಣ್ಣಪುಟ್ಟ ನಗರ- ಪಟ್ಟಣಗಳ ಅಧಿಕತಮ ರಸ್ತೆಗಳು ಅತ್ಯಂತ ಅಗಲಕಿರಿದಾಗಿ ಉಳಿದಿರಲು, ಇವುಗಳ ಇಕ್ಕೆಲಗಳಲ್ಲಿ ಹಲವಾರು ವರ್ಷಗಳ ಹಿಂದೆ ನಿರ್ಮಿತವಾಗಿದ್ದ ವಸತಿ- ವಾಣಿಜ್ಯ ಕಟ್ಟಡಗಳೇ ಕಾರಣವೆನಿಸಿವೆ. ಅಂದಿನ ದಿನಗಳಲ್ಲಿ ಎತ್ತಿನ ಗಾಡಿ ಮತ್ತು ಬೆರಳೆಣಿಕೆಯಷ್ಟು ಸಣ್ಣಪುಟ್ಟ ಮೋಟಾರು ವಾಹನಗಳು ಅಪರೂಪದಲ್ಲಿ ಸಂಚರಿಸುತ್ತಿದ್ದ ಈ ರಸ್ತೆಗಳು ಕಾರಣಾಂತರಗಳಿಂದ ವಿಸೃತಗೊಂಡಿರಲೇ ಇಲ್ಲ. 

ಇಂತಹ ಕಾರಣಗಳಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿದ್ದ ಹಳೆಯ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡಗಳನ್ನು ನಿರ್ಮಿಸದೇ ಇರುವುದು ಹಾಗೂ ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ವಿಶೇಷ ಆಸಕ್ತಿಯನ್ನು ತೋರದಿರುವುದು ಪ್ರಮುಖ ಕಾರಣವೆನಿಸಿದೆ. ಆದರೆ ಅನೇಕ ಸಂದರ್ಭಗಳಲ್ಲಿ ಹಳೆಯ ಕಟ್ಟಡಗಳನ್ನು ಕೆಡವಿ ನೂತನ ಕಟ್ಟಡಗಳನ್ನು ನಿರ್ಮಿಸಿದರೂ, ರಸ್ತೆಯ ವಿಸ್ತರಣೆಗಾಗಿ ಇಂತಿಷ್ಟು ಜಮೀನನ್ನು ಬಿಟ್ಟುಕೊಡಬೇಕು ಎನ್ನುವ ನಿಯಮವನ್ನು ಪರಿಪಾಲಿಸದೇ ಇರುವುದು ಅಥವಾ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸದೇ ಇರುವುದು, ಇನ್ನಷ್ಟು ಸಮಸ್ಯೆಗಳಿಗೆ ಕಾರಣವೆನಿಸುತ್ತದೆ. ಈ ವಿಚಾರದಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಭ್ರಷ್ಟಾಚಾರ ಅಥವಾ ರಾಜಕೀಯ ನೇತಾರರ ಹಸ್ತಕ್ಷೇಪಗಳು ಪ್ರಮುಖವಾಗಿವೆ. ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಸೂಕ್ತ ನೀತಿನಿಯಮಗಳಿದ್ದರೂ, ಇವುಗಳನ್ನು ಅನುಷ್ಠಾನಿಸಲು ಬೇಕಾದ ಇಚ್ಛಾಶಕ್ತಿಯ ಕೊರತೆಯಿಂದಾಗಿ, ಅಧಿಕತಮ ನಗರ- ಪಟ್ಟಣಗಳ ರಸ್ತೆಗಳು ಇಂದಿಗೂ ಯಥಾಸ್ಥಿತಿಯಲ್ಲಿ ಉಳಿದುಕೊಂಡಿವೆ. 

ಸಮಸ್ಯೆಗಳು 

ಹೆಚ್ಚುತ್ತಿರುವ ಜನ- ವಾಹನಗಳ ಸಂಖ್ಯೆಗೆ ಅನುಗುಣವಾಗಿ ಆಯಾ ನಗರ- ಪಟ್ಟಣಗಳ ರಸ್ತೆಗಳನ್ನು ವಿಸ್ತರಿಸದೆ ಇರುವುದರಿಂದಾಗಿ, ಜನ-ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತದೆ. ತತ್ಪರಿಣಾಮವಾಗಿ ಸಂಭವಿಸುವ ಟ್ರಾಫಿಕ್ ಜಾಮ್ ನಿಂದಾಗಿ, ಸಾಲುಗಟ್ಟಿ ನಿಲ್ಲುವ ವಾಹನಗಳ ಇಂಧನದ ಬಳಕೆಯ ಪ್ರಮಾಣ ಹೆಚ್ಚುವುದರೊಂದಿಗೆ, ಇವುಗಳು ಉಗುಳುವ ಅಗಾಧ ಪ್ರಮಾಣದ ಹೊಗೆಯು ತೀವ್ರ ಸ್ವರೂಪದ ಪರಿಸರ ಪ್ರದೂಷಣೆ ಮತ್ತು ಜನಸಾಮ್ಯರ ಅನಾರೋಗ್ಯಗಳಿಗೆ ಕಾರಣವೆನಿಸುತ್ತದೆ. ಅದೇ ರೀತಿಯಲ್ಲಿ ಅಗಲಕಿರಿದಾದ ರಸ್ತೆಗಳ ಇಕ್ಕೆಲಗಳಲ್ಲಿ ಪಾದಚಾರಿಗಳು ನಿರಾತಂಕವಾಗಿ ಸಂಚರಿಸಬಲ್ಲ ಕಾಲುದಾರಿಗಳ ಅಭಾವದಿಂದಾಗಿ, ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಯ ಮೇಲೆ ನಡೆದಾಡುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವುದಲ್ಲದೇ, ಅಯಾಚಿತ ಅಪಘಾತಗಳಿಗೂ ಮೂಲವೆನಿಸುತ್ತದೆ. ಇದಲ್ಲದೇ ಇಂತಹ ರಸ್ತೆಗಳ ಇಕ್ಕೆಲಗಳಲ್ಲಿ ವಾಹನಗಳು ತಂಗಲು ಸೂಕ್ತ ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶ ದೊರೆಯದಿರುವುದರಿಂದಾಗಿ, ರಸ್ತೆ- ರಸ್ತೆಬದಿಗಳಲ್ಲೇ ತಂಗುವ ವಾಹನಗಳಿಂದಾಗಿ ಅನ್ಯ ವಾಹನಗಳ ಮತ್ತು ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡಚಣೆಯಾಗುವುದರೊಂದಿಗೆ,ರಸ್ತೆ ಅಪಘಾತಗಳಿಗೂ ಕಾರಣವೆನಿಸುತ್ತದೆ. ಇವೆಲ್ಲಾ ಸಮಸ್ಯೆಗಳ ಬಗ್ಗೆ ಅರಿವಿದ್ದರೂ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಬಳಸಿಕೊಳ್ಳುವ ಮೂಲಕ ರಸ್ತೆಗಳನ್ನು ವಿಸ್ತರಿಸುವತ್ತ ಗಮನಹರಿಸುವುದಿಲ್ಲ. 

ವಿಶೇಷವೆಂದರೆ ಹಳೆಯ ಕಟ್ಟಡಗಳನ್ನು ಕೆಡವಿ ನೂತನ ಕಟ್ಟಡಗಳನ್ನು ನಿರ್ಮಿಸುವ ಸಂದರ್ಭದಲ್ಲಿ, ರಸ್ತೆಯ ಬದಿಯಲ್ಲಿನ ತಮ್ಮ ಖಾಸಗಿ ಜಮೀನಿನ ಅಂಚಿನಿಂದ ಸುಮಾರು ೬ ರಿಂದ ೯ ಮೀಟರ್ ಜಮೀನನ್ನು ರಸ್ತೆಗಾಗಿ ಬಿಟ್ಟುಕೊಡಬೇಕೆನ್ನುವ ನಿಯಮವಿದೆ. ಆದರೆ ಅನೇಕ ಕಟ್ಟಡಗಳ ಮಾಲೀಕರು ತಮ್ಮ ಹಳೆಯ ಕಟ್ಟಡಗಳನ್ನು ಕೆಡವಿದೊಡನೆ, ತಮ್ಮ ಜಮೀನಿನ ಅಂಚಿನ ಉದ್ದಕ್ಕೂ ತಾತ್ಕಾಲಿಕವಾದ ಆವರಣವೊಂದನ್ನು ನಿರ್ಮಿಸುತ್ತಾರೆ. ಇದರಿಂದಾಗಿ ಇದರ ಹಿಂದೆ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳು ದಾರಿಹೋಕರ ಕಣ್ಣಿಗೆ ಬೀಳುವುದಿಲ್ಲ. ಅಂತೆಯೇ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು- ಚುನಾಯಿತ ಜನಪ್ರತಿನಿಧಿಗಳು ಇತ್ತ ಕಣ್ಣು ಹಾಯಿಸುವುದೇ ಇಲ್ಲ!. ಅದೃಷ್ಟವಶಾತ್ ಎಲ್ಲ ಕಟ್ಟಡಗಳ ನಿರ್ಮಾಣದ ಸಂದರ್ಭದಲ್ಲಿ ಇಂತಹ ಸಮಸ್ಯೆ ತಲೆದೋರದಿರಲು, ಪ್ರಜ್ಞಾವಂತ ಕಟ್ಟಡ ಮಾಲಿಕರ ಪ್ರಾಮಾಣಿಕತೆಯೇ ಪ್ರಮುಖ ಕಾರಣವಾಗಿರುತ್ತದೆ. 

ಆದರೆ ಅನೇಕ ಸಂದರ್ಭಗಳಲ್ಲಿ  ತೆರೆಯ  ಮರೆಯಲ್ಲಿ ನಡೆಯುವ ಕಟ್ಟಡ ನಿರ್ಮಾಣದೊಂದಿಗೆ ತೆರೆಯ ಮರೆಯಲ್ಲಿ ನಡೆಯುವ ಅವ್ಯವಹಾರಗಳ ಪರಿಣಾಮವಾಗಿ, ಅನೇಕ ಕಟ್ಟಡಗಳ ಮಾಲಿಕರು ರಸ್ತೆಯ ವಿಸ್ತರಣೆಗಾಗಿ ನಿಗದಿತ ಪ್ರಮಾಣದ ಜಮೀನನ್ನು ಬಿಟ್ಟುಕೊಡುವುದಿಲ್ಲ. ಇವೆಲ್ಲವುಗಳ ಸಂಯುಕ್ತ ಪರಿಣಾಮಗಳಿಂದಾಗಿ ರಸ್ತೆಗಳ ವಿಸ್ತರಣೆ ಆಗದೇ ಇರುವುದರಿಂದ, ತತ್ಸಂಬಂಧಿತ ಸಮಸ್ಯೆಗಳು ಪರಿಹಾರಗೊಳ್ಳುವುದೇ ಇಲ್ಲ!. ಸ್ಥಳೀಯ ಜನರಿಗೆ ಇವೆಲ್ಲಾ ವಿಚಾರಗಳ ಅರಿವಿದ್ದರೂ ಪ್ರತಿಭಟಿಸದೇ ಇರುವುದರಿಂದಾಗಿ, ಸಮಸ್ಯೆಗಳು ಸುದೀರ್ಘಕಾಲ ಜನಸಾಮಾನ್ಯರನ್ನು ಬಾಧಿಸುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 


No comments:

Post a Comment