Wednesday, May 21, 2014

SARKAARADA BOKKASAKKE HOREYAGUTTIRUVA NIVRATTA SHAASAKARU !







ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿರುವ ನಿವೃತ್ತ ಶಾಸಕರು !   

ಯಾವುದೇ ರೀತಿಯ ಶೈಕ್ಷಣಿಕ ಅಥವಾ ಔದ್ಯೋಗಿಕ ಅರ್ಹತೆ, ಅನುಭವ ಮತ್ತು ಬುದ್ಧಿವಂತಿಕೆಗಳು ಇಲ್ಲದಿದ್ದರೂ ಕೈತುಂಬಾ ಸಂಬಳ ಮತ್ತು ಭತ್ಯೆಗಳೊಂದಿಗೆ, ಅನ್ಯ ಹಲವಾರು ವಿಧದ ಉಚಿತ ಸವಲತ್ತುಗಳನ್ನು ಮತ್ತು ಅಜೀವಪರ್ಯಂತ ಪಿಂಚಣಿ ಮತ್ತಿತರ ಸೌಲಭ್ಯಗಳನ್ನು ಗಳಿಸಬಲ್ಲ ಉತ್ತಮ ಉದ್ಯೋಗವೊಂದಿರುವುದು ರಾಜ್ಯದ ಬಹುತೇಕ ಪ್ರಜೆಗಳಿಗೆ ತಿಳಿದಿಲ್ಲ. ಆದರೆ ಇದನ್ನು ಗಳಿಸಿಕೊಳ್ಳಲು ಬೇಕಾದಂತಹ ಸಾಮರ್ಥ್ಯ ನಿಮ್ಮಲ್ಲಿದ್ದಲ್ಲಿ, ಕೇವಲ ಐದು ವರ್ಷಗಳ ಕಾಲ ದುಡಿದಲ್ಲಿ ಅಥವಾ ದುಡಿದಂತೆ ನಟಿಸಿದಲ್ಲಿ ಮುಂದೆ ಜೀವನಪರ್ಯಂತ ಆರಾಮವಾಗಿ ವಿಶ್ರಮಿಸಬಹುದಾಗಿದೆ. ಈ ಉದ್ಯೋಗ ದೊರೆಯಬೇಕಿದ್ದಲ್ಲಿ ಒಂದಿಷ್ಟು ರಾಜಕೀಯ ಪ್ರಭಾವ, ಮತ್ತೊಂದಿಷ್ಟು ಹಣಬಲ ಮತ್ತು ಸಾಕಷ್ಟು ತೋಳ್ಬಲಗಳ ಅವಶ್ಯಕತೆ ಇದೆ. ಜೊತೆಗೆ ಈ ಉದ್ಯೋಗವನ್ನು ಗಳಿಸಲು ನೀವು ಕೇವಲ ಒಂದುಬಾರಿ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲ್ಲಬೇಕಾಗುತ್ತದೆ. ತದನಂತರ ಐದು ವರ್ಷಗಳ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದಲ್ಲಿ,ಮುಂದೆ ನಿಶ್ಚಿಂತೆಯಿಂದ ನಿವೃತ್ತ ಜೀವನವನ್ನು ನಡೆಸಬಹುದಾಗಿದೆ!. 
------------               -----------------                ---------------               -----------------          -------------

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುವ ಮುತ್ತಿನಂತಹ ಮಾತುಗಳು ಈಗಾಗಲೇ ಅರ್ಥಹೀನವೆನಿಸಿರುವುದು ನಿಮಗೂ ತಿಳಿದಿರಲೇಬೇಕು. ಏಕೆಂದರೆ ಒಮ್ಮೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ನಿರ್ದಿಷ್ಠ ಅಭ್ಯರ್ಥಿಯೊಬ್ಬರನ್ನು ಆಯ್ಕೆಮಾಡಿದ ಬಳಿಕ, ದೇಶದ ಮತದಾರರು ಮುಂದಿನ ಚುನಾವಣೆಯ ತನಕ ಕೇವಲ " ಸೇವಕ" ರಾಗಿರುತ್ತಾರೆಯೇ ಹೊರತು ಪ್ರಭುಗಳಾಗಿರುವುದಿಲ್ಲ. ಆದರೆ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆಯಾಗಿದ್ದ ರಾಜಕೀಯ ನೇತಾರರು, ಮುಂದಿನ ಐದು ವರ್ಷಗಳ ಕಾಲ " ಪ್ರಭು" ಗಳಾಗಿ ವಿಜೃಂಭಿಸುವುದು ಜನಸಾಮಾನ್ಯರಿಗೆ ತಿಳಿಯದ ವಿಚಾರವೇನಲ್ಲ. ಅಧಿಕಾರದಲ್ಲಿರುವಾಗ ಸಕಲ ಸುಖ ವೈಭೋಗಗಳನ್ನು ಸರ್ಕಾರದ ವೆಚ್ಚದಲ್ಲಿ ಸವಿಯುವ ನಮ್ಮ ಶಾಸಕರು, ನಿವೃತ್ತರಾದ ಬಳಿಕ ಜೀವನಪರ್ಯಂತ ಕೈತುಂಬಾ ( ತಮಗೆ ಲಭಿಸುತ್ತಿದ್ದ ಮಾಸಿಕ ವೇತನಕ್ಕಿಂತಲೂ ಅಧಿಕ) ಪಿಂಚಣಿಯನ್ನು  ಪಡೆಯುತ್ತಿರುವುದು ಮತ್ತು ಅಕಸ್ಮಾತ್ ಈ ಶಾಸಕರು ನಿಧನರಾದಲ್ಲಿ, ಇವರು ಸೂಚಿಸಿದ್ದ ಕುಟುಂಬದ ಸದಸ್ಯರೊಬ್ಬರಿಗೆ ಶೇ. ೫೦ ರಷ್ಟು ಪಿಂಚಣಿಯನ್ನು ನೀಡುವುದು ಪ್ರಾಯಶಃ ನಿಮಗೂ ತಿಳಿದಿರಲಾರದು. 


ಕೇವಲ ಎರಡು ವರ್ಷಗಳ ಹಿಂದೆ ರಾಜ್ಯದ ಇತಿಹಾಸದಲ್ಲೇ ಮೊದಲಬಾರಿಗೆ ಅಂದಿನ ಮುಖ್ಯಮಂತ್ರಿಗಳು ಒಂದು ಲಕ್ಷ ಕೋಟಿಗೂ ಅಧಿಕ ಮೊತ್ತದ ಆಯವ್ಯಯ ಪತ್ರವನ್ನು ವಿಧಾನಸಭೆಯಲ್ಲಿ ಮಂಡಿಸಿದ್ದುದನ್ನು ನೀವೂ ಮರೆತಿರಲಾರಿರಿ. ಇದರೊಂದಿಗೆ ರಾಜ್ಯಸರ್ಕಾರದ ಸಾಲದ ಮೊತ್ತವೂ ಸಹಜವಾಗಿಯೇ ಲಕ್ಷ ಕೋಟಿಯನ್ನು ಮೀರಿತ್ತು. ವಿಶೇಷವೆಂದರೆ ಇದೇ ಅಧಿವೇಶನದಲ್ಲಿ ರಾಜ್ಯದ ಮಾಜಿ ಶಾಸಕರಿಗೆ ನೀಡುವ ಮಾಸಿಕ ಪಿಂಚಣಿ, ಭತ್ಯೆ ಮತ್ತಿತರ ಸೌಲಭ್ಯಗಳನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಸದ್ದುಗದ್ದಲವಿಲ್ಲದೇ ಅಂಗೀಕರಿಸಲಾಗಿತ್ತು. ತತ್ಪರಿಣಾಮವಾಗಿ ಕರ್ನಾಟಕದ ಹಾಲಿ ಶಾಸಕರಿಗೆ ನೀಡುತ್ತಿದ್ದ ಮಾಸಿಕ ವೇತನಕ್ಕಿಂತಲೂ, ಮಾಜಿ ಶಾಸಕರಿಗೆ ನೀಡುವ ಮಾಸಿಕ ಪಿಂಚಣಿಯ ಮೊತ್ತವೇ ಅಧಿಕವಾಗಲಿತ್ತು!. 

ನಿಜಹೆಳಬೇಕಿದ್ದಲ್ಲಿ ನಮ್ಮ ದೇಶದಲ್ಲಿ ಯಾವುದೇ ಉದ್ಯೋಗದಲ್ಲಿರುವ ವ್ಯಕ್ತಿಯೊಬ್ಬನು ಸುದೀರ್ಘಕಾಲ ಸೇವೆಸಲ್ಲಿಸಿ  ನಿವೃತ್ತನಾದ ಬಳಿಕ ಲಭಿಸುವ ಮಾಸಿಕ ಪಿಂಚಣಿಯ ಮೊತ್ತವು, ಆತನು ಪಡೆಯುತ್ತಿದ್ದ ಮಾಸಿಕ ವೇತನಕ್ಕಿಂತ ಸಾಕಷ್ಟು ಕಡಿಮೆಯಾಗಿರುತ್ತದೆ. ಅದೇ ರೀತಿಯಲ್ಲಿ ಸರ್ಕಾರಿ ಉದ್ಯೋಗಿಗಳು ನಿವೃತ್ತಿ ವೇತನವನ್ನು ಪಡೆಯಬೇಕಿದ್ದಲ್ಲಿ ಕನಿಷ್ಠ ೧೫ ವರ್ಷಗಳ ಕಾಲ ಸೇವೆ ಸಲ್ಲಿಸಲೇಬೇಕು. ಆದರೆ ರಾಜ್ಯದ ಶಾಸಕರು ಕೇವಲ ೫ ವರ್ಷಗಳ ಅವಧಿಯನ್ನು ಪೂರೈಸಿದಲ್ಲಿ, ಜೀವನಪರ್ಯಂತ ಪಿಂಚಣಿ ಮತ್ತಿತರ ಆರ್ಥಿಕ ಹಾಗೂ ಅನ್ಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ!. ಇಷ್ಟು ಮಾತ್ರವಲ್ಲ, ಆಕಸ್ಮಿಕವಾಗಿ ಇವರು ನಿಧನರಾದಲ್ಲಿ, ಇವರೇ ಸೂಚಿಸಿದ್ದ ಇವರ ಕುಟುಂಬದ ಸದಸ್ಯರೊಬ್ಬರಿಗೆ ಶೇ. ೫೦ ರಷ್ಟು ಪಿಂಚಣಿ ಮತ್ತು ವೈದ್ಯಕೀಯ ಭತ್ಯೆ ದೊರೆಯುತ್ತದೆ. ವಿಶೇಷವೆಂದರೆ ತಮ್ಮ ವೇತನ, ಭತ್ಯೆ ಮತ್ತು ಇನ್ನಿತರ ಸವಲತ್ತುಗಳನ್ನು ತಮಗೆ ಬೇಕೆನಿಸಿದಾಗ ಮತ್ತು ತಮಗೆ ಬೇಕೆನಿಸಿದಷ್ಟು ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುವ ಅಧಿಕಾರ ನಮ್ಮ ಶಾಸಕರ ಕೈಯಲ್ಲೇ ಇದೆ. ಜೊತೆಗೆ ಇಂತಹ ಪ್ರಸ್ತಾವನೆಗಳನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸುವಾಗ, ಆಡಳಿತ ಹಾಗೂ ವಿರೋಧ ಪಕ್ಷಗಳ ಶಾಸಕರಲ್ಲಿ ಬಹಳ ಅಪರೂಪದಲ್ಲಿ ಕಂಡುಬರುವ " ಸಹಮತ" ವು, ಇಂತಹ ವಿಚಾರಗಳಲ್ಲಿ ಮಹತ್ವಪೂರ್ಣ ಪಾತ್ರವನ್ನು ನಿರ್ವಹಿಸುತ್ತದೆ. 


ಕರ್ನಾಟಕದ ನಿವೃತ್ತ ಶಾಸಕರಿಗೆ ಸರ್ಕಾರದ ವತಿಯಿಂದ ಲಭಿಸುತ್ತಿರುವ ಮಾಸಿಕ ಪಿಂಚಣಿ ಮತ್ತು ಇತರ ಅರ್ಥಿಕ ಹಾಗೂ ಅನ್ಯ ಸೌಲಭ್ಯಗಳ ಬಗ್ಗೆ ಅರಿತುಕೊಳ್ಳುವ ಕುತೂಹಲದಿಂದ, ಮಾಹಿತಿ ಪಡೆಯುವ ಹಕ್ಕು ಕಾಯಿದೆ-೨೦೦೫ ರನ್ವಯ ಇದೇ ವರ್ಷದಲ್ಲಿ ಸಲ್ಲಿಸಿದ್ದ ಅರ್ಜಿಗಳ ಫಲವಾಗಿ ದೊರೆತಿರುವ ಮಾಹಿತಿಗಳು  ನಮ್ಮನಿಮ್ಮೆಲ್ಲರನ್ನು ದಿಗ್ಭ್ರಮೆಗೊಳಿಸುವಂತಿದೆ. ಈ ಬಗ್ಗೆ ಸರ್ಕಾರವೇ ಒದಗಿಸಿರುವ ಅಧಿಕೃತ ಮಾಹಿತಿ ಇಂತಿದೆ. 

 ಅರ್ಹತೆಗಳು - ಲಭ್ಯ ಸವಲತ್ತುಗಳು 

* ಕರ್ನಾಟಕ ವಿಧಾನ ಮಂಡಲಗಳ ವೇತನ, ನಿವೃತ್ತಿ ವೇತನ ಮತ್ತು ಭತ್ಯೆಗಳ ಅಧಿನಿಯಮ ೧೯೫೬ ರಂತೆ ಶಾಸಕರಾಗಿ ಆಯ್ಕೆಯಾಗಿರುವ ವ್ಯಕ್ತಿಗಳು ಪಿಂಚಣಿಯನ್ನು ಪಡೆಯಲು ಅರ್ಹರಿರುತ್ತಾರೆ. ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ಪ್ರತಿಯೊಬ್ಬ ಶಾಸಕರಿಗೆ ಅವರ ಜೀವಿತಾವಧಿಯಲ್ಲಿ ಪ್ರತಿ ತಿಂಗಳಲ್ಲೂ ೨೫,೦೦೦ ರೂ. ನಿವೃತ್ತಿ ವೇತನವನ್ನು ಪಾವತಿಸಲಾಗುತ್ತದೆ. ಐದು ವರ್ಷಗಳಿಗಿಂತ ಅಧಿಕ ಸೇವೆಯನ್ನು ಸಲ್ಲಿಸಿದಲ್ಲಿ, ತದನಂತರದ ಪ್ರತಿಯೊಂದು ವರ್ಷಕ್ಕೆ ೧೦೦೦ ರೂ.ಗಳಂತೆ ಹೆಚ್ಚುವರಿ ನಿವೃತ್ತಿ ವೇತನವನ್ನು ನೀಡಲಾಗುತ್ತಿದ್ದು, ಇದರ ಗರಿಷ್ಠ ಮಿತಿಯನ್ನು ೩೫,೦೦೦ ರೂ.ಗಳಿಗೆ  ನಿಗದಿಸಲಾಗಿದೆ. 

*ಮಾಜಿ ಶಾಸಕರು ತಮ್ಮ ಜೊತೆಗಾರರೊಂದಿಗೆ ಪ್ರಯಾಣಿಸಲು ವರ್ಗಾವಣೆ ಮಾಡಲಾಗದ ಒಂದು ಬಸ್ ಪಾಸ್/ ಗುರುತಿನ ಚೀಟಿಯನ್ನು ನೀಡಲಾಗುತ್ತದೆ. ಇದನ್ನು ಬಳಸಿ ಕರ್ನಾಟಕ ಮತ್ತು ಅನ್ಯ ಯಾವುದೇ ರಾಜ್ಯಗಳಲ್ಲಿ, ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ನಿರ್ದಿಷ್ಟ ದರ್ಜೆಯಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

* ಇದಲ್ಲದೇ ಮಾಜಿ ಶಾಸಕರು ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚದ ರಸೀತಿಗಳನ್ನು ಮರುಪಾವತಿಗಾಗಿ ಸಲ್ಲಿಸಿದಲ್ಲಿ, ಇವರಿಗೆ ನೀಡುವ ಮಾಸಿಕ ೪೦೦೦/-ರೂ. ವೈದ್ಯಕೀಯ ವೆಚ್ಚವನ್ನು ಕಳೆದು ಉಳಿದ ಮೊತ್ತವನ್ನು ಪಾವತಿಸಲಾಗುತ್ತದೆ. ಹಾಗೂ ಇದಕ್ಕೆ ಯಾವುದೇ ಇತಿಮಿತಿಗಳನ್ನು ನಿಗದಿಸಿಲ್ಲ. 

* ಇಷ್ಟು ಮಾತ್ರವಲ್ಲ, ೨೮-೦೪- ೨೦೧೨ ರಿಂದ ಜಾರಿಗೆ ಬರುವಂತೆ ರೈಲು- ವಿಮಾನ ಪ್ರಯಾಣ ಭತ್ಯೆಯಾಗಿ ವಾರ್ಷಿಕ ೧,೦೦,೦೦೦ ರೂ.ಗಳನ್ನು ಪ್ರತಿ ಎಪ್ರಿಲ್ ಹಾಗೂ ಒಕ್ಟೋಬರ್ ತಿಂಗಳುಗಳಲ್ಲಿ ಎರಡು ಸಮಾನ ಕಂತುಗಳಲ್ಲಿ ಪಾವತಿಸಲಾಗುತ್ತದೆ. ಈ ಮೊತ್ತಕ್ಕೆ ಪ್ರತಿಯಾಗಿ ವಿಮಾನ- ರೈಲುಯಾನಗಳ ಟಿಕೆಟ್ ಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕಿಲ್ಲ. ಅರ್ಥಾತ್, ಮಾಜಿ ಶಾಸಕರು ಒಂದು ವರ್ಷದಲ್ಲಿ ಅಥವಾ ಯಾವತ್ತೂ ಎಲ್ಲಿಗೂ ಪ್ರಯಾಣಿಸದಿದ್ದರೂ, ಈ ಭತ್ಯೆಯು ಅವರಿಗೆ ಲಭಿಸುತ್ತದೆ.  

* ಮಾಜಿ ಶಾಸಕರು ಮೃತಪಟ್ಟಲ್ಲಿ ಅವರ ಕುಟುಂಬ ಅಂದರೆ ಪತಿ ಅಥವಾ ಪತ್ನಿ, ಅಪ್ರಾಪ್ತ ಮಗ ಮತ್ತು ಅವಿವಾಹಿತ ಅಪ್ರಾಪ್ತ ಮಗಳು, ಇವರಲ್ಲಿ ಯಾರಾದರೂ ಒಬ್ಬರಿಗೆ ಕುಟುಂಬ ಪಿಂಚಣಿಯನ್ನು ನೀಡಲಾಗುತ್ತದೆ. ದಿ. ೦೧-೦೧-೨೦೦೯ ರ ನಂತರ ನಿಧನರಾದ ಮಾಜಿ ಶಾಸಕರು ಪಡೆಯುತ್ತಿದ್ದ ಪಿಂಚಣಿಯ ಶೇ.೫೦ ರಷ್ಟು ಮೊತ್ತವನ್ನು ಕುಟುಂಬದ ಸದಸ್ಯರೊಬ್ಬರಿಗೆ ನೀಡಲಾಗುತ್ತದೆ. ಈ ಸೌಲಭ್ಯವು ಕುಟುಂಬ ಪಿಂಚಣಿದಾರರಿಗೆ ಅಜೀವ ಪರ್ಯಂತ ಅಥವಾ ಮರುಮದುವೆಯಾಗುವವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯ ತನಕ ನೀಡಲಾಗುತ್ತದೆ. 

* ಇವೆಲ್ಲಕ್ಕೂ ಮಿಗಿಲಾಗಿ ದಿ. ೦೫-೦೨-೨೦೧೧ ರಿಂದ ಅನ್ವಯವಾಗುವಂತೆ, ೧೯೫೨ ಕ್ಕೂ ಮುನ್ನ ( ಮೈಸೂರು ಪ್ರಜಾಪ್ರತಿನಿಧಿಯಾಗಿ) ಹಾಗೂ ಅನಂತರ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿ ನಿಧನರಾಗಿದ್ದ ಮಾಜಿ ಶಾಸಕರ ಕುಟುಂಬಗಳಿಗೂ ಕುಟುಂಬ ಪಿಂಚಣಿಯನ್ನು ನೀಡಲು ಸರ್ಕಾರ ಆದೇಶಿಸಿದೆ. 

* ಇದರೊಂದಿಗೆ ದಿ. ೧೭- ೦೧- ೨೦೧ ರಿಂದ ಜಾರಿಗೆ ಬರುವಂತೆ ಮಾಸಿಕ ೨೦೦೦/- ರೂ.ಗಳನ್ನು ವೈದ್ಯಕೀಯ ಭತ್ಯೆಯಾಗಿ ಕುಟುಂಬ ಪಿಂಚಣಿದಾರರಿಗೆ ಪಾವತಿಸಲಾಗುತ್ತಿದೆ. 

*೧೯೫೨ ನೇ ಇಸವಿಗೆ ಮುನ್ನ ( ಮೈಸೂರು ಪ್ರಜಾ ಪ್ರತಿನಿಧಿಯಾಗಿ) ಹಾಗೂ ನಂತರ ಸದಸ್ಯರಾಗಿ ( ಶಾಸಕರಾಗಿ ) ಸೇವೆ ಸಲ್ಲಿಸಿ ನಿಧನರಾಗಿರುವವರ ಕುಟುಂಬಗಳಿಗೆ ಕುಟುಂಬ ಪಿಂಚಣಿಯನ್ನು ನೀಡುವ ಆದೇಶವನ್ನು ೨೨-೦೨- ೨೦೧೪ ರಂದು ಹೊರಡಿಸಲಾಗಿದ್ದು, ಈ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿದೆ. 

* ಇದೀಗ ನಿವೃತ್ತಿವೇತನವನ್ನು ಪಡೆಯುತ್ತಿರುವ ಶಾಸಕರ ಸಂಖ್ಯೆಯು ೫೫೩ ಆಗಿದ್ದು, ೨೦೧೩-೧೪ ನೇ ಸಾಲಿನಲ್ಲಿ  ಇವರಿಗೆ ಸಂದಿರುವ ಪಿಂಚಣಿ ಹಾಗೂ ವೈದ್ಯಕೀಯ ಭತ್ಯೆಯ ಒಟ್ಟು ಮೊತ್ತವು ೨೧, ೩೫,೭೬,೦೦೦/- ರೂ. ಗಳಾಗಿವೆ. 

* ನಿಧನರಾಗಿರುವ ಶಾಸಕರ ಕುಟುಂಬ ಪಿಂಚಣಿಯನ್ನು ಪಡೆಯುತ್ತಿರುವವರ ಸಂಖ್ಯೆಯು ೨೬೩ ಆಗಿದ್ದು, ೨೦೧೩-೧೪ ನೇ  ಸಾಲಿನಲ್ಲಿ ಇವರಿಗೆ ಸಂದಿರುವ ಕುಟುಂಬ ಪಿಂಚಣಿ ಮತ್ತು ವೈದ್ಯಕೀಯ ಭತ್ಯೆಯ ಒಟ್ಟು ಮೊತ್ತವು ೫,೧೦,೦೦,೦೦೦ ಆಗಿದೆ. 

* ಪಿಂಚಣಿ ಪಡೆಯುತ್ತಿರುವ ಶಾಸಕರಿಗೆ ೨೦೧೩-೧೪ ನೇ ಸಾಲಿನಲ್ಲಿ ಸಂದಿರುವ ರೈಲ್ವೇ - ವಿಮಾನ ಪ್ರಯಾಣ ಭತ್ಯೆಯು ೩,೬೮,೨೯,೩೫೫/- ರೂ. ಮತ್ತು ವೈದ್ಯಕೀಯ ವೆಚ್ಚವು ೨,೨೫,೨೨,೯೭೧/- ರೂ. ಗಳಾಗಿತ್ತು. 

* ಮಾಜಿ ಶಾಸಕರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ೨೦೧೩-೧೪ ನೇ ಆರ್ಥಿಕ ವರ್ಷದಲ್ಲಿ ಸಂದಾಯವಾಗಿದ್ದ ಪಿಂಚಣಿ ಮತ್ತಿತರ ಸಕಲ ಆರ್ಥಿಕ ಸೌಲಭ್ಯಗಳ ಪಾವತಿಗಾಗಿ ಸರ್ಕಾರವು ವ್ಯಯಿಸಿರುವ ಒಟ್ಟು ಮೊತ್ತವು ೩೨,೩೯,೨೮,೩೨೬/- ರೂ. ಗಳಾಗಿವೆ. 

ಇನ್ನಷ್ಟು ಹೆಚ್ಚಲಿರುವ ಹೊರೆ 

ಸರ್ಕಾರವು ಅಧಿಕೃತವಾಗಿ ನೀಡಿರುವ ಮಾಹಿತಿಯಂತೆ ಗತ ಆರ್ಥಿಕ ವರ್ಷದಲ್ಲಿ ಮಾಜಿ ಶಾಸಕರಿಗೆ- ಶಾಸಕರ ಕುಟುಂಬದ ಸದಸ್ಯರಿಗಾಗಿ  ಸುಮಾರು ೩೨. ೩೦ ಕೋಟಿ ರೂ. ಗಳನ್ನು ವ್ಯಯಿಸಿದೆ. ಇದರಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಾಜಿ ಶಾಸಕರು ಪ್ರಯಾಣಿಸಿದ ವೆಚ್ಚವನ್ನು ಸಂಸ್ಥೆಯಿಂದ ಮಾಹಿತಿ ದೊರೆತಿರದ ಕಾರಣದಿಂದಾಗಿ, ಈ ಮೊತ್ತವನ್ನು ಪಾವತಿಸಿಲ್ಲ. ಜೊತೆಗೆ ೧೯೫೨ ನೇ ಇಸವಿಗೆ ಮುನ್ನ ಮತ್ತು ನಂತರ ಶಾಸಕರಾಗಿ ಸೇವೆ ಸಲ್ಲಿಸಿ ನಿಧನರಾಗಿದ್ದವರ ಕುಟುಂಬ ಪಿಂಚಣಿಯ ಪಾವತಿಯು ಇನ್ನಷ್ಟೇ ಆರಂಭವಾಗಬೇಕಿದ್ದು, ೨೦೧೪-೧೫ ನೇ ಆರ್ಥಿಕ  ವರ್ಷದಲ್ಲಿ ಮಾಜಿ ಶಾಸಕರನ್ನು ಸಲಹಲು ಸರ್ಕಾರ ವ್ಯಯಿಸಲಿರುವ ಮೊತ್ತವು ಇನ್ನಷ್ಟು ಹೆಚ್ಚಲಿದೆ. ಇದರೊಂದಿಗೆ ಹಾಲಿ ಶಾಸಕರು ತಮ್ಮ ಮಾಸಿಕ ವೇತನ ಮತ್ತಿತರ ಸೌಲಭ್ಯಗಳನ್ನು ಹೆಚ್ಚಿಸುವತ್ತ ತಮ್ಮ ಗಮನವನ್ನು ಹರಿಸಿದ್ದು, ರಾಜ್ಯದ ಬೊಕ್ಕಸದ ಹೊರೆ ಮತ್ತಷ್ಟು ಹೆಚ್ಚಲಿದೆ!. 

ಕೊನೆಯ ಮಾತು 

ಸಮಾಜಸೇವೆ ಮಾಡುವ ಸಲುವಾಗಿ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿರುವುದಾಗಿ ಹೇಳುವ ನಮ್ಮ ರಾಜಕಾರಣಿಗಳು, ಚುನಾವಣೆಗಳಲ್ಲಿ ಗೆದ್ದು ಶಾಸಕರಾದ ಬಳಿಕ ಕೆಲವೇ ವರ್ಷಗಳಲ್ಲಿ ಕೋಟ್ಯಾಧಿಪತಿಗಳಾಗುತ್ತಿರುವುದು ಮತದಾರರಿಗೆ ತಿಳಿಯದ ವಿಚಾರವೇನಲ್ಲ. ಆದರೂ ನಿವೃತ್ತರಾದ ಬಳಿಕ ಸರ್ಕಾರದ ಬೊಕ್ಕಸದಿಂದ ಲಭಿಸುವ ಮಾಸಿಕ ಪಿಂಚಣಿ ಮತ್ತಿತರ ಸೌಲಭ್ಯಗಳಿಗಾಗಿ ಇವರು ಕೈಚಾಚುವುದೇಕೆ?, ಎನ್ನುವ ಪ್ರಶ್ನೆಗೆ ಉತ್ತರ ದೊರೆಯುವ ಸಾಧ್ಯತೆಗಳೇ ಇಲ್ಲ. 

ಡಾ .ಸಿ . ನಿತ್ಯಾನಂದ ಪೈ, ಪುತ್ತೂರು 


No comments:

Post a Comment