Friday, May 30, 2014

E- Governance




  ನಾಗರಿಕರಿಗೆ ವರದಾನವೆನಿಸಲಿರುವ ಇ - ಆಡಳಿತ 

ತಮ್ಮ ಕೆಲಸಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಎಡತಾಕುವ ಜನಸಾಮಾನ್ಯರನ್ನು ಇಲ್ಲಸಲ್ಲದ ನೆಪವನ್ನು ಮುಂದೊಡ್ಡಿ ಸತಾಯಿಸುವ ಸರ್ಕಾರಿ ನೌಕರರ ವರ್ತನೆಗಳಿಗೆ ಸದ್ಯೋಭವಿಷ್ಯದಲ್ಲಿ ಕಡಿವಾಣ ಬೀಳಲಿದೆ. ಏಕೆಂದರೆ ಈ ವರ್ಷಾಂತ್ಯದಲ್ಲಿ ಬಹುತೇಕ ಸರ್ಕಾರಿ ಸೇವೆಗಳನ್ನು ಇ - ಆಡಳಿತದ ಮೂಲಕ ನೀಡುವ ಯೋಜನೆಯೊಂದು ಕಾರ್ಯಗತವಾಗಲಿದೆ. ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಬಂದ ಬಳಿಕ, ಸರ್ಕಾರಿ ನೌಕರರಿಂದ ರಾಜ್ಯದ ಪ್ರಜೆಗಳಿಗೆ ಸಂಭವಿಸುತ್ತಿದ್ದ ಕಿರುಕುಳ ಮತ್ತು ಭ್ರಷ್ಟಾಚಾರದ ಸಮಸ್ಯೆಗಳು ನಿಶ್ಚಿತವಾಗಿಯೂ ಕೊನೆಗೊಳ್ಳಲಿವೆ. 

ರಾಜ್ಯದ ಹಾಗೂ ದೇಶದ ಪ್ರಜೆಗಳಿಗೆ ಸರ್ಕಾರ ಒದಗಿಸುವ ಸೇವೆಗಳನ್ನು ತ್ವರಿತಗತಿಯಲ್ಲಿ ಒದಗಿಸಲು ಮತ್ತು ಆಡಳಿತದಲ್ಲಿ ಪಾರದರ್ಶಕತೆಯನ್ನು ಜಾರಿಗೊಳಿಸಲು ಉಪಯುಕ್ತವೆನಿಸಬಲ್ಲ ಇ - ಆಡಳಿತವನ್ನು ಜಾರಿಗೆ ತರುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದ ಸರ್ಕಾರೇತರ ಸಂಸ್ಥೆಗಳಲ್ಲಿ, ಪುತ್ತೂರಿನ ಬಳಕೆದಾರರ ಹಿತರಕ್ಷಣಾ ವೇದಿಕೆಯೂ ಸಕ್ರಿಯವಾಗಿ ಕಾರ್ಯನಿರ್ವಹಿಸಿತ್ತು. 

ಇ -ಆಡಳಿತ 

ರಾಷ್ಟ್ರೀಯ ಇ - ಆಡಳಿತ ಯೋಜನೆಯ ಅಂಗವಾಗಿ ಕರ್ನಾಟಕ ಇ - ಜಿಲ್ಲಾ ಯೋಜನೆಯನ್ನು ಅನುಷ್ಠಾನಗೊಳಿಸಲು, ೨೮ ಸರ್ಕಾರಿ ಇಲಾಖೆಗಳು ಜನರಿಗೆ ಒದಗಿಸುವ ೩೬೯ ಸೇವೆಗಳನ್ನು ಈಗಾಗಲೇ ಆಯ್ಕೆಮಾಡಲಾಗಿದೆ. ಸಂಬಂಧಿತ ಅಧಿಕಾರಿಗಳು ಹೇಳುವಂತೆ ಇವೆಲ್ಲಾ ಸೇವೆಗಳನ್ನು ಇ - ಆಡಳಿತದ ಮೂಲಕ ಒದಗಿಸುವ ಕಾರ್ಯವು ಇದೇ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಪ್ರಾರಂಭವಾಗಲಿದೆ. ಕೇಂದ್ರ ಸರ್ಕಾರದ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಮಂತ್ರಾಲಯದ ಅಧೀನದಲ್ಲಿರುವ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಒದಗಿಸುವ ಆರ್ಥಿಕ ನೆರವಿನಿಂದ ಅನುಷ್ಠಾನಗೊಳ್ಳಲಿರುವ ಇ - ಜಿಲ್ಲಾ ಯೋಜನೆಯು, ಸರ್ಕಾರದಿಂದ ಪ್ರಜೆಗಳಿಗೆ ವಿದ್ಯುನ್ಮಾನ ಮತ್ತು ಬೃಹತ್ ಪ್ರಮಾಣದ ಸೇವೆಗಳನ್ನು ಜಿಲ್ಲಾ ಮತ್ತು ಕೆಳಮಟ್ಟಗಳಲ್ಲಿ ನೀಡಲಿದೆ. ರಾಜ್ಯ ಇ -ಆಡಳಿತ ಇಲಾಖೆಯ ಅಧೀನದಲ್ಲಿರುವ ನಾಗರಿಕ ಸೇವೆಗಳನ್ನು ವಿದ್ಯುನ್ಮಾನ ವಿಧಾನದಿಂದ ನೀಡುವ ನಿರ್ದೇಶನಾಲಯದ ಮಾಹಿತಿಯಂತೆ, ಈ ಯೋಜನೆಯನ್ನು ಅನುಷ್ಠಾನಿಸಲು  ನಿಯೋಜಿತ ಸಂಸ್ಥೆಯು ಸರ್ಕಾರದ ವಿವಿಧ ಇಲಾಖೆಗಳ ೧೮೫೬ ಸೇವೆಗಳನ್ನು ಗುರುತಿಸಿದ್ದು, ೧೨೭೦ ಸೇವೆಗಳನ್ನು ಸಮ್ಮಿಶ್ರಗೊಳಿಸಲು ನಿರ್ಧರಿಸಿದೆ. ಇವುಗಳಲ್ಲಿ ೨೮ ಇಲಾಖೆಗಳ ೩೬೯ ಸೇವೆಗಳನ್ನು ಆಯ್ಕೆಮಾಡಲಾಗಿದೆ. 

ಇ - ಜಿಲ್ಲಾ ಯೋಜನೆಯ ಬಗ್ಗೆ ವಿಸ್ತ್ರತ ಯೋಜನಾ ವರದಿಯನ್ನು ಈಗಾಗಲೇ ಸರ್ಕಾರವು ಅನುಮೋದಿಸಿದ್ದು, ಇದರ ಅನುಷ್ಠಾನದ ಸಲುವಾಗಿ ಒಡಂಬಡಿಕೆಯೊಂದಕ್ಕೆ ಸಹಿಹಾಕಲಾಗಿದೆ. ಹಾಗೂ ಈ ಯೋಜನೆಯನ್ನು ಎರಡು ಹಂತಗಳಲ್ಲಿ ಅನುಷ್ಠಾನಿಸಲಾಗುತ್ತದೆ. ರಾಜ್ಯ ಸಚಿವ ಸಂಪುಟವು ಇದೇ ವರ್ಷದ ಆದಿಯಲ್ಲಿ ಈ ಯೋಜನೆಗೆ ಹಸಿರು ನಿಶಾನೆಯನ್ನು ತೋರಿದ್ದು, ಇದನ್ನು ಅನುಷ್ಠಾನಗೊಳಿಸಲು ಆದೇಶಿಸಿದೆ. ಪ್ರಸ್ತುತ ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಈ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದು, ಇವುಗಳ ಅನುಮತಿ ಪತ್ರವನ್ನು ನಿರೀಕ್ಷಿಸಲಾಗಿದೆ. ಎಲ್ಲವೂ ಸುಸೂತ್ರವಾಗಿ ಜರಗಿದಲ್ಲಿ ಇದೇ ವರ್ಷದ ಅಂತ್ಯದಲ್ಲಿ ರಾಜ್ಯದ ಪ್ರಜೆಗಳಿಗೆ ಇ - ಸೇವೆಗಳು ಲಭ್ಯವಾಗಲಿವೆ. 

ಉದಾಹರಣೆಗೆ ಮಾಹಿತಿ ಪಡೆಯುವ ಹಕ್ಕು ಕಾಯಿದೆಯನ್ವಯ ಅರ್ಜಿಯನ್ನು ಸಲ್ಲಿಸುದು ಹಾಗೂ ಇದರ ಸ್ಥಿತಿಗತಿಗಳನ್ನು ಗಮನಿಸುವುದು ಇ - ಜಿಲ್ಲಾ ಆಡಳಿತ ಯೋಜನೆಯಲ್ಲಿ ಸುಲಭವೆನಿಸಲಿದೆ. ಅದೇ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಅಯಾಚಿತ ಸಂಕಷ್ಟಗಳಿಗೆ ಕಾರಣವೆನಿಸುತ್ತಿರುವ ಪ್ರೌಢ ಶಿಕ್ಷಣ ಮಂಡಳಿಯ ಒಂಬತ್ತು ಸೇವೆಗಳು ಈ ಯೋಜನೆಯಲ್ಲಿ ಲಭ್ಯವಿದೆ. ಇದರಿಂದಾಗಿ ತಮ್ಮ ಉತ್ತರ ಪತ್ರಿಕೆಗಳ ಛಾಯಾಪ್ರತಿ, ಅಂಕಪಟ್ಟಿಯ ನಕಲು ಪ್ರತಿ, ಪುನರ್ ಮೌಲ್ಯಮಾಪನ ಮತ್ತಿತರ ಸೇವೆಗಳು ಇ - ಸೇವೆಯ ಮೂಲಕ ದೊರೆಯಲಿವೆ. ಇದಲ್ಲದೇ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ, ಹಿಂದುಳಿದ ವರ್ಗ ಮತ್ತು ಪಂಗಡಗಳ ಅಭಿವೃದ್ಧಿ, ಅಲ್ಪಸಂಖ್ಯಾತರ ಮತ್ತು ಸಮಾಜ ಕಲ್ಯಾಣ ಮತ್ತಿತರ ಇಲಾಖೆಗಳ ಹಲವಾರು ಸೇವೆಗಳು ನಿಮ್ಮ ಬೆರಳ ತುದಿಯಲ್ಲಿ ಲಭ್ಯವಾಗಲಿವೆ. 

ದೇಶದ ಇತರ ನಾಲ್ಕು ರಾಜ್ಯಗಳಲ್ಲಿ ಈಗಾಗಲೇ ಅನುಷ್ಠಾನಗೊಂಡಿರುವ ಈ ಯೋಜನೆಯು ನಮ್ಮ ರಾಜ್ಯದಲ್ಲಿ ಅನುಷ್ಠಾನಗೊಂಡ ಬಳಿಕ, ರಾಜ್ಯದ ಪ್ರಜೆಗಳಿಗೆ ಇದು ನಿಸ್ಸಂದೇಹವಾಗಿಯೂ ವರದಾನವಾಗಿ ಪರಿಣಮಿಸಲಿದೆ. ಆದರೆ ಇದರ ಅನುಷ್ಠಾನ ಅಸಮರ್ಪಕವಾದಲ್ಲಿ, ಇನ್ನಷ್ಟು ಸಮಸ್ಯೆಗಳಿಗೆ ಕಾರಣವೆನಿಸಲಿದೆ. ಇವೆಲ್ಲಕ್ಕೂ ಮಿಗಿಲಾಗಿ ರಾಜ್ಯದ ಪ್ರಜೆಗಳು ಸರ್ಕಾರ ಒದಗಿಸಲಿರುವ ಈ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ತನ್ಮೂಲಕ ಅನಾವಶ್ಯಕ ತೊಂದರೆಗಳನ್ನು ಸುಲಭವಾಗಿಯೇ ನಿವಾರಿಸಿಕೊಳ್ಳಬಹುದಾಗಿದೆ. 

ಕೊನೆಯ ಮಾತು 

ರಾಜ್ಯದ ಜನತೆಗೆ ನಿಗದಿತ ಕಾಲಮಿತಿಯಲ್ಲಿ ಸರ್ಕಾರಿ ಸೇವೆಗಳನ್ನು ಒದಗಿಸುವ ಸಲುವಾಗಿ ಜಾರಿಗೆ ಬಂದಿದ್ದ " ಸಕಾಲ " ಯೋಜನೆಯಿಂದಾಗಿ, ಜನಸಾಮಾನ್ಯರು ತಮ್ಮ ಕೆಲಸಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಹಲವಾರು ಬಾರಿ ಭೇಟಿ ನೀಡಬೇಕಾದ ಸಮಸ್ಯೆ ತಕ್ಕ ಮಟ್ಟಿಗೆ ಪರಿಹಾರಗೊಂಡಿತ್ತು. ಸಕಾಲ ಯೋಜನೆಯ ಯಶಸ್ಸನ್ನು ಗಮನಿಸಿದ ರಾಜ್ಯ ಸರ್ಕಾರವು, ಹಲವಾರು ಸರ್ಕಾರಿ ಇಲಾಖೆಗಳ ನೂರಾರು ಸೇವೆಗಳನ್ನು ಇದರ ವ್ಯಾಪ್ತಿಗೆ ಸೇರಿಸಿತ್ತು. ಆದರೆ ಇಂದಿಗೂ ರಾಜ್ಯದ ಅನೇಕ ಪ್ರಜೆಗಳಿಗೆ ಸಕಾಲ ಯೋಜನೆ ಏನೆಂದೇ ತಿಳಿದಿಲ್ಲ ಎಂದಲ್ಲಿ ನೀವೂ ನಂಬಲಾರಿರಿ. ಅದೇ ರೀತಿಯಲ್ಲಿ ಮುಂದೆ ಜಾರಿಗೊಳ್ಳಲಿರುವ ಇ - ಆಡಳಿತ ವ್ಯವಸ್ಥೆಯ ಪ್ರಯೋಜನವನ್ನು ಪಡೆದುಕೊಳ್ಳಲು, ಕಂಪ್ಯೂಟರ್ ಮತ್ತು ಅಂತರಜಾಲಗಳ ಬಳಕೆಯ ಬಗ್ಗೆ ಒಂದಿಷ್ಟು ಜ್ನಾನವಿರುವುದು ಅತ್ಯಗತ್ಯವೂ ಹೌದು. ಪ್ರಗತಿಪಥದಲ್ಲಿ ಮುನ್ನಡೆಯುತ್ತಿರುವ ನಮ್ಮ ದೇಶದ ಬಹುತೇಕ ನಗರ- ಪಟ್ಟಣಗಳಲ್ಲಿನ ಜನರಿಗೆ ಮೊಬೈಲ್ ದೂರವಾಣಿಯ ಮೂಲಕ ಈ ಸೇವೆಯನ್ನು ಬಳಸಿಕೊಳ್ಳುವ ವಿಧಾನವನ್ನು ಕಲಿಸಿದಲ್ಲಿ, ಇ - ಆಡಳಿತ ಯೋಜನೆಯು ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 



No comments:

Post a Comment