Monday, May 26, 2014

MOBILE TOWERS- ARE THEY DANGEROUS ?



  ಮೊಬೈಲ್ ಟವರ್ ಗಳ ನಿರ್ಮಾಣ - ಸಮಸ್ಯೆಗಳು 

ಮೊಬೈಲ್ ದೂರವಾಣಿಗಳನ್ನು ಅತಿಯಾಗಿ ಬಳಸುವುದರಿಂದ ಕ್ಯಾನ್ಸರ್ ನಂತಹ ಮಾರಕ ವ್ಯಾಧಿಗಳು ಉದ್ಭವಿಸುವ ಸಾಧ್ಯತೆಗಳಿವೆ ಎನ್ನುವುದು ನಿಮಗೂ ತಿಳಿದಿರಲೇಬೇಕು. ಸೆಲ್ ಫೋನ್ ಗಳನ್ನು ಬಳಸದ ವ್ಯಕ್ತಿಗಳು ಈ ವಿಚಾರವನ್ನು ಅರಿತು ನೆಮ್ಮದಿಯ ನಿಟ್ಟುಸಿರು ಬಿಟ್ಟಿರಬಹುದು. ಆದರೆ ಇದೀಗ ಕಣ್ಣು ಹಾಯಿಸಿದಲ್ಲೆಲ್ಲಾ ಕಾಣಸಿಗುವ ಮೊಬೈಲ್ ಟವರ್ ಗಳು ಅವಿರತವಾಗಿ ಹೊರಸೂಸುವ ವಿದ್ಯುತ್ ಆಯಾಸ್ಕಾಂತೀಯ ಅಲೆಗಳು ಮನುಕುಲಕ್ಕೆ ಮಾರಕವೆನಿಸುತ್ತಿವೆ ಎನ್ನುವುದು ಪ್ರಾಯಶಃ ನಿಮಗೂ ತಿಳಿದಿರಲಾರದು. ಈ ಬಗ್ಗೆ ನೀವು ಅರಿತುಕೊಳ್ಳಲೇಬೇಕಾದ ಕಿಂಚಿತ್ ಮಾಹಿತಿ ಇಲ್ಲಿದೆ. 
----------------                 ------------------                   ---------------            ---------------------            ------------

ಶತಕೋಟಿ ಸಂಖ್ಯೆಯನ್ನು ದಾಟಿ ವಿಶ್ವದಾಖಲೆಯತ್ತ ದಾಪುಗಾಲು ಹಾಕುತ್ತಿರುವ ಭಾರತದ ಜನಸಂಖ್ಯೆಗೆ ಅನುಗುಣವಾಗಿ ಮೊಬೈಲ್ ದೂರವಾಣಿಗಳ ಸಂಖ್ಯೆಯೂ ನಿರಂತರವಾಗಿ ಹೆಚ್ಚುತ್ತಿದೆ. ಎಲ್ಲರ  ಕೈಗೆಟಕುವ ಬೆಲೆಗೆ ಲಭಿಸುತ್ತಿರುವ ಈ ಪುಟ್ಟ ದೂರವಾಣಿಗಳು ನಮ್ಮ ಆಧುನಿಕ ಜೀವನಶೈಲಿಯ ಅವಿಭಾಜ್ಯ ಅಂಗವೆನಿಸಿವೆ. 

ಕೆಲವೇ ವರ್ಷಗಳ ಹಿಂದೆ ಶ್ರೀಮಂತ ವ್ಯಕ್ತಿಗಳಿಗೂ ಪ್ರತಿಷ್ಠೆಯ ಸಂಕೇತವೆನಿಸಿದ್ದ ಮೊಬೈಲ್ ದೂರವಾಣಿಗಳು, ಇದೀಗ ಕಡುಬಡವರ ಕೈಯಲ್ಲೂ ರಾರಾಜಿಸುತ್ತಿವೆ. ಅಬಾಲವೃದ್ಧರೂ ಉಪಯೋಗಿಸುತ್ತಿರುವ ಸೆಲ್ ಫೋನ್ ಗಳ ರಿಂಗಣಗಳು ಎಲ್ಲೆಂದರಲ್ಲಿ ಮೊಳಗುತ್ತಿವೆ. ಆದರೆ ಮೊಬೈಲ್ ದೂರವಾಣಿಗಳು ಮತ್ತು ಇವುಗಳ ಸಂಪರ್ಕ ಗೋಪುರಗಳು, ಜನಸಾಮಾನ್ಯರ ಆರೋಗ್ಯಕ್ಕೆ ಮಾರಕವೆನಿಸುತ್ತಿವೆ. 

ದೂರಸಂಪರ್ಕ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳು ಭಾಗವಹಿಸಲು ಅವಕಾಶವನ್ನು ಕಲ್ಪಿಸಿದ ಬಳಿಕ, ಸರ್ಕಾರಿ ಸ್ವಾಮ್ಯದ ಸಂಸ್ಥೆ ಮತ್ತು ಹಲವಾರು ಖಾಸಗಿ ಸಂಸ್ಥೆಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ತತ್ಪರಿಣಾಮವಾಗಿ ಸೆಲ್ಯುಲರ್ ಸೇವಾ ಸಂಸ್ಥೆಗಳು ಗ್ರಾಹಕರಿಗೆ ವಿಧಿಸುತ್ತಿದ್ದ ದರಗಳನ್ನು ಗಣನೀಯ ಪ್ರಮಾಣದಲ್ಲಿ ಇಳಿಸಿವೆ. ಇದರಿಂದಾಗಿ ಇವುಗಳ ಗ್ರಾಹಕರ ಸಂಖ್ಯೆಯೂ ನಿರಂತರವಾಗಿ ಹೆಚ್ಚುತ್ತಿದೆ. ಸೆಲ್ಯುಲರ್ ಸೇವೆಯನ್ನು ಒದಗಿಸುತ್ತಿರುವ ಸಂಸ್ಥೆಗಳು ತಮ್ಮ ಸಂಪರ್ಕ ಜಾಲವನ್ನು ವಿಸ್ತರಿಸುವ ಸಲುವಾಗಿ ನಿರ್ಮಿಸುತ್ತಿರುವ ಟವರ್ ಗಳ ಸಂಖ್ಯೆಯೂ ಇದೇ ಕಾರಣದಿಂದಾಗಿ ತ್ವರಿತಗತಿಯಲ್ಲಿ ಹೆಚ್ಚುತ್ತಿದೆ. 

ಬಹುತೇಕ ಸ್ಥಳೀಯ ಸಂಸ್ಥೆಗಳು ಮೊಬೈಲ್ ದೂರವಾಣಿ ಟವರ್ ಗಳ ನಿರ್ಮಾಣಕ್ಕೆ ಅನುಮತಿಯನ್ನು ನೀಡುವ ಮುನ್ನ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬೆಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಇದೇ ಕಾರಣದಿಂದಾಗಿ ದೇಶದ ಮೂಲೆ ಮೂಲೆಗಳಲ್ಲಿ ಅಸಂಕ್ಯ ಮೊಬೈಲ್ ಟವರ್ ಗಳು ನಾಯಿಕೊಡೆಗಳಂತೆ ತಲೆಯೆತ್ತುತ್ತಿವೆ. 

ಸುರಕ್ಷತೆಯತ್ತ ನಿರ್ಲಕ್ಷ್ಯ 

ಸಾಮಾನ್ಯವಾಗಿ ಭೂಮಿಯ ಅಥವಾ ಬಹುಮಹಡಿ ಕಟ್ಟಡಗಳ ಮೇಲೆ ಮೊಬೈಲ್ ಟವರ್ ಗಳನ್ನು ನಿರ್ಮಿಸಲು ಅನುಮತಿಯನ್ನು ನೀಡುವ ಮುನ್ನ, ಅನುಭವೀ ಕಟ್ಟಡ ವಿನ್ಯಾಸ ಮತ್ತು ನಿರ್ಮಾಣ ತಜ್ಞರು ಈ ಕಟ್ಟಡದ ನಕ್ಷೆ ಮತ್ತು ರಚನೆಗಳನ್ನು ಪರಿಶೀಲಿಸಿ, ಹಲವಾರು ಟನ್ ಭಾರದ ಟವರ್ ಗಳನ್ನು ಹೊರಬಲ್ಲ ಧಾರಣಾ ಸಾಮರ್ಥ್ಯವು ಈ ಕಟ್ಟಡಕ್ಕೆ ಇದೆಯೇ ಎಂದು ನಿರ್ಧರಿಸಬೇಕಾಗುವುದು. ಇದಲ್ಲದೇ ಈ ಗೋಪುರದಿಂದ ಸ್ಥಳೀಯ ನಿವಾಸಿಗಳಿಗೆ ಯಾವುದೇ ರೀತಿಯ ಹಾನಿ ಸಂಭವಿಸುವ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿದ ಬಳಿಕವೇ ಸುರಕ್ಷತಾ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ. ಯಾವುದೇ ಕಟ್ಟಡದ ನಿರ್ಮಾಣದ ಸಂದರ್ಭದಲ್ಲಿ ಇದರ ಮೇಲೊಂದು ಟವರ್ ನಿರ್ಮಿಸುವ ಸಲುವಾಗಿ ವಿನ್ಯಾಸಗೊಳಿಸದೇ ಇದ್ದಲ್ಲಿ, ಇಂತಹ ಕಟ್ಟಡಗಳ ಮೇಲೆ ಟವರ್ ಗಳನ್ನು ನಿರ್ಮಿಸುವುದು ಅಸುರಕ್ಷಿತ ಮತ್ತು ಅಪಾಯಕಾರಿ ಎನಿಸುವುದು. ಆದರೆ ಅಧಿಕತಮ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಈ ಪ್ರಮುಖ ವಿಚಾರವನ್ನು ನಿರ್ಲಕ್ಷಿಸಿ, ಟವರ್ ಗಳ ನಿರ್ಮಾಣಕ್ಕೆ ಅನುಮತಿಯನ್ನು ನೀಡುತ್ತಿದ್ದಾರೆ. ಆಕಸ್ಮಿಕವಾಗಿ ಟವರ್ ಗಳ ಭಾರವನ್ನು ತಾಳಲಾರದೇ ಅಥವಾ ಬಿರುಗಾಳಿ ಮಳೆಗಳ ಸಂದರ್ಭದಲ್ಲಿ ಇವುಗಳು ಕುಸಿದಲ್ಲಿ ಅಮಾಯಕರ ಪ್ರಾಣಕ್ಕೆ ಎರವಾಗುವ ಸಾಧ್ಯತೆಗಳಿವೆ. 

ನಿಜ ಹೇಳಬೇಕಿದ್ದಲ್ಲಿ ಮೊಬೈಲ್ ಗೋಪುರಗಳ ಸುತ್ತಮುತ್ತಲ ೩೬ ಮೀಟರ್ ಪ್ರದೇಶದಲ್ಲಿ ಜನರು ವಾಸಿಸುವಂತಿಲ್ಲ. ಅರ್ಥಾತ್, ಜನವಸತಿ ಪ್ರದೇಶಗಳಲ್ಲಿ ಗೋಪುರಗಳನ್ನು ನಿರ್ಮಿಸುವಂತಿಲ್ಲ. ಇದಲ್ಲದೇ ಯಾವುದೇ ಪ್ರದೇಶದಲ್ಲಿ ಗೋಪುರವನ್ನು ನಿರ್ಮಿಸುವ ಮುನ್ನ, ಆಸುಪಾಸಿನ ನಿವಾಸಿಗಳ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರಾಪೇಕ್ಷಣಾ ಪತ್ರವನ್ನು ಪಡೆದುಕೊಳ್ಳಲೇಬೇಕೆನ್ನುವ ವಿಚಾರ ಜನಸಾಮಾನ್ಯರಿಗೆ ತಿಳಿದಿಲ್ಲ. ವಿಶೇಷವೆಂದರೆ ಈ ನಿಯಮವನ್ನು ಅನುಷ್ಠಾನಗೊಳಿಸಲು ಸರ್ಕಾರವೇ ಆಸ್ಪದವನ್ನು ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಆದೇಶದಂತೆ ಜನಸಾಮಾನ್ಯರ ಆರೋಗ್ಯಕ್ಕೆ ಅಪಾಯಕಾರಿ ಈನುವ ನೆಪವನ್ನೊಡ್ಡಿ, ಮೊಬೈಲ್ ಗೋಪುರಗಳ ನಿರ್ಮಾಣಕ್ಕೆ ಯಾರೂ ಅಡ್ಡಿಪಡಿಸುವಂತಿಲ್ಲ!. ಪ್ರಾಯಶಃ ಇದೇ ಕಾರಣದಿಂದಾಗಿ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಸೆಲ್ಯುಲರ್ ಸೇವಾ ಸಂಸ್ಥೆಗಳು ತಮಗೆ ಬೇಕೆನಿಸಿದಾಗ ಹಾಗೂ ತಮಗೆ ಬೇಕೆನಿಸಿದಲ್ಲಿ ಸಂಪರ್ಕ ಗೋಪುರಗಳನ್ನು ನಿರಾತಂಕವಾಗಿ ನಿರ್ಮಿಸುತ್ತಿವೆ. 

ಇವೆಲ್ಲಕ್ಕೂ ಮಿಗಿಲಾಗಿ ಮೊಬೈಲ್ ಗೋಪುರಗಳನ್ನು ನಿರ್ಮಿಸುವ ಮುನ್ನ ಸ್ಥಳೀಯ ಸಂಸ್ಥೆಗಳಿಗೆ ಅರ್ಜಿಯನ್ನು ಸಲ್ಲಿಸಿ ಅನುಮತಿಯನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ನಿಗದಿತ ಮೊತ್ತವನ್ನು ಒಂದುಬಾರಿ ಪಾವತಿಸಬೇಕಾಗಿವುದು. ಸೆಲ್ಯುಲರ್ ಸೇವಾ ಸಂಸ್ಥೆಗಳು ನಿರಂತರವಾಗಿ ಆದಾಯವನ್ನು ಗಳಿಸುತ್ತಿದ್ದರೂ, ತಾವು ನಿರ್ಮಿಸಿರುವ ಟವರ್ ಗಳಿಗೆ ವರ್ಷಂಪ್ರತಿ ತೆರಿಗೆಯನ್ನೇ ಪಾವತಿಸುತ್ತಿಲ್ಲ!. ಆದರೆ ಕಡುಬಡವರ ಪುಟ್ಟ ವಾಸ್ತವ್ಯದ ಮನೆಯಿಂದ ಅವರಿಗೆ ಯಾವುದೇ ಆದಾಯ ದೊರೆಯದಿದ್ದರೂ, ವರ್ಷಂಪ್ರತಿ ಆಸ್ತಿತೆರಿಗೆಯನ್ನು ಮಾತ್ರ ತಪ್ಪದೆ ತೆರಬೇಕಾಗುತ್ತದೆ. ಸರ್ಕಾರದ ಈ ಧೋರಣೆಗೆ ಕಾರಣವೇನೆಂದು ನಮಗೂ ತಿಳಿದಿಲ್ಲ. ವಿಶೇಷವೆಂದರೆ ಮೊಬೈಲ್ ಟವರ್ ನಿರ್ಮಿಸಿರುವ ಜಾಗ ಅಥವಾ ಕಟ್ಟಡಗಳ ಮಾಲಿಕರಿಗೆ ಸೆಲ್ಯುಲರ್ ಸೇವಾ ಸಂಸ್ಥೆಗಳು ಪ್ರತಿ ತಿಂಗಳಿನಲ್ಲೂ ನಿಗದಿತ ಶುಲ್ಕ ಅಥವಾ ಬಾಡಿಗೆಯನ್ನು ನೀಡುತ್ತಿದ್ದರೂ, ಸ್ಥಳೀಯ ಸಂಸ್ಥೆಗಳಿಗೆ ವರ್ಷದಲ್ಲೊಂದು ಬಾರಿ ತೆರಿಗೆಯನ್ನು ಪಾವತಿಸುವ ಬಗ್ಗೆ ಚಕಾರವೆತ್ತುವುದಿಲ್ಲ. 

ನಾವಿಂದು ಅತ್ಯಾಧುನಿಕ ಹಾಗೂ ಅತ್ಯವಶ್ಯಕ ವಿದೇಶಿ ತಂತ್ರಜ್ಞಾನವನ್ನು ಆಮದು ಮಾಡಿಕೊಳ್ಳುತ್ತಿದ್ದರೂ, ವಿದೇಶಗಳಲ್ಲಿ ಅನುಸರಿಸುತ್ತಿರುವ ಸುರಕ್ಷತಾ ಕ್ರಮಗಳನ್ನು ಮಾತ್ರ ಅನುಸರಿಸುತ್ತಿಲ್ಲ. ಇದೇ ಕಾರಣದಿಂದಾಗಿ ಜನಸಾಮಾನ್ಯರ ಆರೋಗ್ಯಕ್ಕೆ ಮಾರಕವೆನಿಸುತ್ತಿರುವ ಮೊಬೈಲ್ ಗೋಪುರಗಳನ್ನು ನಮ್ಮ ದೇಶದಲ್ಲಿ ವಸತಿ ಪ್ರದೇಶಗಳು ಮತ್ತು ಅಸುರಕ್ಷಿತ ಕಟ್ಟಡಗಳ ಮೇಲೂ ನಿರ್ಮಿಸಲಾಗುತ್ತಿದೆ.ಇದಕ್ಕೂ ಮಿಗಿಲಾಗಿ ಈಗ ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ಕಾನೂನುಗಳನ್ನು ಉಲ್ಲಂಘಿಸಿ ಗೋಪುರಗಳನ್ನು ನಿರ್ಮಿಸಿದ ಸಂಸ್ಥೆಗಳಿಗೆ ಇದು "ಅಕ್ರಮ " ಎಂದು ಸ್ಥಳೀಯ ಸಂಸ್ಥೆಗಳು ನೋಟಿಸ್ ಜಾರಿಮಾಡಿದಲ್ಲಿ, ನಿಗದಿತ ದಂಡವನ್ನು ಪಾವತಿಸಿ ಇವುಗಳನ್ನು " ಸಕ್ರಮ " ಗೊಳಿಸಲಾಗುತ್ತಿದೆ!. 

ಅಪಾಯಕಾರಿ ಅಲೆಗಳು 

ಮೊಬೈಲ್ ಗೋಪುರಗಳು ಹೊರಸೂಸುವ ವಿದ್ಯುತ್ ಆಯಸ್ಕಾಂತೀಯ ಅಲೆಗಳು ಮನುಷ್ಯನ ಮೆದುಳು, ನರಮಂಡಲ, ಹೃದಯ, ಶ್ವಾಸಕೋಶಗಳು ಮತ್ತು ಕಣ್ಣುಗಳಿಗೆ ಸಂಬಂಧಿಸಿದ ಗಂಭೀರ ಆರೋಗ್ಯದ ಸಮಸ್ಯೆಗಳೊಂದಿಗೆ, ಕೆಲವಿಧದ ಕ್ಯಾನ್ಸರ್ ಗಳಿಗೂ ಕಾರಣವೆನಿಸಬಲ್ಲದು ಎಂದು ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಿದೆ. 

ಜರ್ಮನಿಯಲ್ಲಿ ಸುಮಾರು ೧೦ ವರ್ಷಗಳ ಕಾಲ ನಡೆಸಿದ್ದ ಅಧ್ಯಯನದ ವರದಿಯಂತೆ, ಮೊಬೈಲ್ ಗೋಪುರಗಳ ವಿದ್ಯುತ್ ಆಯಸ್ಕಾಂತೀಯ ಅಲೆಗಳಿಗೆ ಸುದೀರ್ಘಕಾಲ ಗುರಿಯಾಗಿದ್ದ ವ್ಯಕ್ತಿಗಳಿಗೆ, ವಿವಿಧ ರೀತಿಯ ಕ್ಯಾನ್ಸರ್ ಗಳು ಬಾಧಿಸುವ ಸಾಧ್ಯತೆಗಳು ಮೂರುಪಟ್ಟು ಹೆಚ್ಚಾಗುವುದು ಎಂದು ತಿಳಿದುಬಂದಿದೆ. ೧೦೦೦ ರೋಗಿಗಳ ದಾಖಲೆಗಳನ್ನು ಪರಿಶೀಲಿಸಿದ ಸಂಶೋಧಕರ ಅಭಿಪ್ರಾಯದಂತೆ, ಮೊಬೈಲ್ ಗೋಪುರಗಳ ೪೦೦ ಮೀಟರ್ ಸುತ್ತಳತೆಯ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಗಳಲ್ಲಿ ಅನೇಕ ವಿಧದ ಕ್ಯಾನ್ಸರ್ ಗಳು ಉದ್ಭವಿಸುವ ಸಾಧ್ಯತೆಗಳು ೧೦೦ ಪಟ್ಟು ಹೆಚ್ಚುತ್ತದೆ. 

ಈ ಗೋಪುರಗಳ ವ್ಯಾಪ್ತಿಯಲ್ಲಿ ಹರಡುವ ವಿದ್ಯುತ್ ಆಯಸ್ಕಾಂತೀಯ ಅಲೆಗಳ ವಿಕಿರಣದ ಶಕ್ತಿಯ ಮಟ್ಟವು, ಪ್ರತಿ ಚದರ ಮೀಟರ್ ಗೆ ೭೨೬೦ ಮೈಕ್ರೋವ್ಯಾಟ್ಸ್ ಆಗಿರುತ್ತದೆ. ಇದರಿಂದಾಗಿ ಉದ್ಭವಿಸಬಲ್ಲ ಕ್ಯಾನ್ಸರ್ ಗಳಲ್ಲಿ ಸ್ತನಗಳ ಕ್ಯಾನ್ಸರ್ ಅಗ್ರಸ್ಥಾನದಲ್ಲಿದೆ. ತದನಂತರದ ಸ್ಥಾನಗಳು ಅನುಕ್ರಮವಾಗಿ ಶುಕ್ಲ ಗ್ರಂಥಿ, ಮೇದೋಜೀರಕ ಗ್ರಂಥಿ, ಕರುಳು, ಚರ್ಮ, ಶ್ವಾಸಕೋಶಗಳು ಮತ್ತು ರಕ್ತದ ಕ್ಯಾನ್ಸರ್ ಗಳಿಗೆ ಸಲ್ಲುತ್ತವೆ. 

ಅದೃಶ್ಯ ವಿದ್ಯುತ್ ಆಯಸ್ಕಾಂತೀಯ ವಿಕಿರಣಗಳ ಮಾರಕ ಪರಿಣಾಮಗಳ ವಿರುದ್ಧ ಅಮೆರಿಕದ ಜನರು ಪ್ರತಿಭಟಿಸಲು ಆರಂಭಿಸಿದ್ದಾರೆ. ವಸತಿ ಪ್ರದೇಶಗಳಲ್ಲಿ ಗೋಪುರಗಳ ನಿರ್ಮಾಣವನ್ನು ವಿರೋಧಿಸುತ್ತಿರುವ ಅಲ್ಲಿನ ಪ್ರಜೆಗಳು, ನ್ಯಾಯಾಲಯಗಳಲ್ಲಿ ಹೂಡಿರುವ ದಾವೆಗಳ ಸಂಖ್ಯೆಯು ೫೦೦ ರ ಗಾಡಿಯನ್ನು ದಾಟಿದೆ. 

ಈ ಗಂಭೀರ ಸಮಸ್ಯೆಯ ಬಿಸಿ ಇದೀಗ ಕೇಂದ್ರ ಸರ್ಕಾರಕ್ಕೂ ತಟ್ಟಿದ್ದು, ಸರ್ಕಾರವು ಶಾಲೆ ಮತ್ತಿತರ ವಿದ್ಯಾಸಂಸ್ಥೆಗಳು ಮತ್ತು ಆಸ್ಪತ್ರೆಗಳ ಸಮೀಪದಲ್ಲಿ ಮೊಬೈಲ್ ಗೋಪುರಗಳನ್ನು ನಿರ್ಮಿಸದಂತೆ ನಿಷೇಧಿಸಿದೆ. ಆದರೆ ಆರೋಗ್ಯಕ್ಕೆ ಹಾನಿಕರ ಎನ್ನುವ ನೆಪವನ್ನೊಡ್ಡಿ ಗೋಪುರಗಳ ನಿರ್ಮಾಣಕ್ಕೆ ಅಡ್ಡಿಪಡಿಸಬಾರದು ಎನ್ನುವ ಸರ್ಕಾರದ ಆದೇಶವನ್ನು ಅಕ್ಷರಶಃ ಪರಿಪಾಲಿಸುತ್ತಿರುವ ಸ್ಥಳೀಯ ಸಂಸ್ಥೆಗಳು, ಇಂತಹ ಕಟ್ಟಡಗಳ ಮೇಲೂ ಗೋಪುರಗಳ ನಿರ್ಮಾಣಕ್ಕೆ ಕಣ್ಣುಮುಚ್ಚಿ ಅನುಮತಿಯನ್ನು ನೀಡುತ್ತಿವೆ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 



No comments:

Post a Comment