Wednesday, June 4, 2014

THE UGLY INDIAN






 " ಕುರೂಪಿ ಭಾರತೀಯ": ಕಾರ್ಯಕರ್ತರ ಸೇವೆ ಅನುಕರಣೀಯ 

ಭಾರತದ ಪ್ರತಿಯೊಂದು ರಾಜ್ಯಗಳ ಪ್ರತಿಯೊಂದು ನಗರ- ಪಟ್ಟಣಗಳ ಬಹುತೇಕ ರಸ್ತೆಗಳು ಹಾಗೂ ರಾಜ್ಯ ಹೆದ್ದಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳ ಬದಿಗಳಲ್ಲಿ ಅಗಾಧ ಪ್ರಮಾಣದ ವೈವಿಧ್ಯಮಯ ತ್ಯಾಜ್ಯಗಳ ರಾಶಿಗಳು ಸದಾ  ಕಾಣಸಿಗುತ್ತವೆ. ಈ ಸಮಸ್ಯೆಯು ಅನಿಯಂತ್ರಿತವಾಗಿ ವೃದ್ಧಿಸುತ್ತಲೇ ಇದ್ದು, ಇದನ್ನು ಪರಿಹರಿಸುವುದು ಬಿಡಿ, ನಿಯಂತ್ರಿಸಲೂ ಆಗದಂತಹ ಪರಿಸ್ಥಿತಿ ಉದ್ಭವಿಸಿದೆ. ಈ ಬಗ್ಗೆ ತತ್ಸಂಬಂಧಿತ ಅಧಿಕಾರಿಗಳು ಮತ್ತು ಸಿಬಂದಿಗಳನ್ನು ದೂರುವ ನಾಗರಿಕರು, ತಾವು ಅತಿಯಾಗಿ ಉತ್ಪಾದಿಸಿ ಕಂಡಲ್ಲಿ ಎಸೆಯುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆಮಾಡುವ ಅಥವಾ ಸ್ಥಳೀಯ ಸಂಸ್ಥೆಗಳ ಸಿಬಂದಿಗಳೊಂದಿಗೆ ಸಹಕರಿಸುವ ವಿಚಾರವನ್ನು ಅನುಕೂಲಕರವಾಗಿ ಮರೆತುಬಿಡುತ್ತಾರೆ!. 

ನಮ್ಮದೇ ರಾಜ್ಯದ ಅನೇಕ ನಗರ- ಪಟ್ಟಣಗಳ ಪ್ರಧಾನ ರಸ್ತೆಯೂ ಸೇರಿದಂತೆ ಅಧಿಕತಮ ರಸ್ತೆಗಳ ಬದಿಗಳಲ್ಲಿ ಎಸೆದ ತ್ಯಾಜ್ಯಗಳು ಕೊಳೆತು ನಾರುತ್ತಿದ್ದರೂ, ಇನ್ನಷ್ಟು ತ್ಯಾಜ್ಯಗಳನ್ನು ಅದೇ ರಾಶಿಯ ಮೇಲೆ ತಂದು ಸುರಿಯುವ ಜನರು, ತಾವು ಮಾಡುತ್ತಿರುವ ತಪ್ಪನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತಾರೆ. ಜೊತೆಗೆ ಪೌರ ಕಾರ್ಮಿಕರು ಮತ್ತು ಸ್ಥಳೀಯ ಸಂಸ್ಥೆಯ ಅಧಿಕಾರಿಗಳನ್ನು ದೂಷಿಸುತ್ತಾರೆ. ಆದರೆ ಈ ರೀತಿಯಲ್ಲಿ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದು ಕಾನೂನುಬಾಹಿರ ಮತ್ತು ಅನಾರೋಗ್ಯಕರ ಎನ್ನುವುದನ್ನು ಮರೆತುಬಿಡುತ್ತಾರೆ!. 

ದ ಅಗ್ಲಿ ಇಂಡಿಯನ್ 

ದೇಶದ ಮೂಲೆಮೂಲೆಗಳಲ್ಲಿ ಕಂಡುಬರುತ್ತಿರುವ ಈ ಸಮಸ್ಯೆಯನ್ನು ಸದ್ದು ಗದ್ದಲವಿಲ್ಲದೇ ಪರಿಹರಿಸುವ ಪ್ರಾಮಾಣಿಕ ಪ್ರಯತ್ನವೊಂದು ಇದೀಗ ನಮ್ಮ ದೇಶದ ಅನೇಕ ರಾಜ್ಯಗಳಲ್ಲಿ ನಡೆಯುತ್ತಿದೆ. ವಿಶೇಷವೆಂದರೆ ಇದನ್ನು ಪರಿಹರಿಸಲು ಪ್ರಯತ್ನಿಸುತ್ತಿರುವ " ದ ಅಗ್ಲಿ ಇಂಡಿಯನ್ " ಎನ್ನುವ ಸ್ವಯಂ ಸೇವಾ ಸಂಘಟನೆಯ ಅನಾಮಧೇಯ ಸದಸ್ಯರು, ಈಗಾಗಲೇ ತಮ್ಮ ಕೈಚಳಕವನ್ನು ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ತೋರಿದ್ದಾರೆ. ದಾರಿಹೋಕರು ಮೂಗು ಮುಚ್ಚಿಕೊಂಡು ಓಡಾಡುವಂತಹ ಸ್ಥಳಗಳಲ್ಲಿ ರಾಶಿಬಿದ್ದಿರುವ ತ್ಯಾಜಗಳನ್ನು ತೆಗೆದು, ಈ ಪ್ರದೇಶವನ್ನು ಸ್ವಚ್ಚಗೊಳಿಸಿದ ಬಳಿಕ ಅವಶ್ಯಕತೆಯಿದ್ದಲ್ಲಿ ಕಾಲುದಾರಿಗಳನ್ನು ದುರಸ್ಥಿಪಡಿಸುವುದರೊಂದಿಗೆ ಅಕ್ಕಪಕ್ಕದಲ್ಲಿರಬಹುದಾದ ಗೋಡೆಗಳಿಗೆಮತ್ತು ಕಾಲುದಾರಿಯ ಅಂಚಿಗೆ ಸುಣ್ಣ ಬಣ್ಣಗಳನ್ನು ಬಳಿದು ಆಕರ್ಷಕವಾಗಿ ಕಾಣುವಂತೆ ಪರಿವರ್ತಿಸುತ್ತಾರೆ.ಸ್ಥಳಾವಕಾಶವಿದ್ದಲ್ಲಿ ಜನರು ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳನ್ನೂಅಳವಡಿಸುತ್ತಾರೆ. "ಸ್ಪಾಟ್ ಫಿಕ್ಸಿಂಗ್ " ಎಂದು ಕರೆಯಲ್ಪಡುವ ಈ ವಿಶಿಷ್ಟ ಕಾರ್ಯಾಚರಣೆಯು, ಅತ್ಯಂತ ಅಸಹ್ಯಕರ ಎನಿಸುವಂತಿದ್ದ ಸ್ಥಳಗಳನ್ನು ಅತ್ಯಂತ ನಿರ್ಮಲ ಹಾಗೂ ಆಕರ್ಷಕವಾಗಿ ಪರಿವರ್ತಿಸಲು ಯಶಸ್ವಿಯಾಗಿದೆ. ೨೫ ರಿಂದ ೪೦ ವರ್ಷ ವಯಸ್ಸಿನ ಈ " ಪ್ರಜ್ಞಾವಂತ ನಾಗರಿಕ "  ಸಂಘಟನೆಯ ಸದಸ್ಯರು ಉನ್ನತ ವಿದ್ಯಾಭ್ಯಾಸವನ್ನು ಪಡೆದು ಉತ್ತಮ ಉದ್ಯೋಗಗಳಲ್ಲಿದ್ದರೂ, ಇಂತಹ ಕೆಲಸಗಳಲ್ಲಿ ಭಾಗಿಯಾಗಲು ಹಿಂಜರಿಯುವುದೇ ಇಲ್ಲ!. 

ನಮ್ಮ ರಸ್ತೆಗಳ ಬದಿಗಳಲ್ಲಿ ರಾಶಿಬಿದ್ದಿರುವ ತ್ಯಾಜ್ಯಗಳ ಸಮಸ್ಯೆಯ ಬಗ್ಗೆ ಪ್ರಬಲವಾದ ಭಾವನೆಗಳನ್ನು ಹೊಂದಿರುವ ಈ ಸಂಘಟನೆಯ ಸದಸ್ಯರು " ಸ್ಟಾಪ್ ಟಾಕಿಂಗ್, ಸ್ಟಾರ್ಟ್ ವರ್ಕಿಂಗ್ " ಎನ್ನುವ ಮಾತನ್ನು ಅಕ್ಷರಶಃ ಪರಿಪಾಲಿಸುತ್ತಾರೆ. ಯಾವುದೇ ಸಮಸ್ಯೆಯ ಬಗ್ಗೆ ಯಾರನ್ನೂ ದೂರದೇ, ನೇರವಾಗಿ ಇದನ್ನು ಪರಿಹರಿಸಲು ಸರಳವಾದ ಕಾರ್ಯತಂತ್ರವನ್ನು ಜಾರಿಗೊಳಿಸುವ ಮೂಲಕ ಅಪೇಕ್ಷಿತ ಪರಿವರ್ತನೆಯನ್ನು ಅನುಷ್ಠಾನಿಸುವ ಈ ಸಂಘಟನೆಯ ಕೆಲಸಕಾರ್ಯಗಳು  ಅನುಕರಣೀಯವೂ ಹೌದು. ಇವರ ಅಭಿಪ್ರಾಯದಂತೆ ನಾಗರಿಕ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿ ಪರಿಹರಿಸಬಲ್ಲ ಮಂತ್ರದಂಡ ನಮಗಿಂದು ಲಭ್ಯವಿಲ್ಲ. ಆದರೆ ನಾವಿಂದು ಎದುರಿಸುತ್ತಿರುವ ಬಹುತೇಕ ನಾಗರಿಕ ಸಮಸ್ಯೆಗಳಲ್ಲಿ, ತ್ಯಾಜ್ಯಗಳ ಸಮಸ್ಯೆ ಪ್ರಮುಖವಾಗಿದ್ದು, ಇದಕ್ಕೆ ಜನರ ವರ್ತನೆ ಮತ್ತು ಧೋರಣೆಗಳೇ ಕಾರಣವೆನಿಸಿವೆ. ಈ ಸಮಸ್ಯೆಯನ್ನು ನಾವಿಂದು ಪರಿಹರಿಸಬಹುದಾಗಿದೆ. ಇದಕ್ಕಾಗಿ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಬದಲಾಯಿಸುವ, ಸಾಕಷ್ಟು ಹಣವನ್ನು ವ್ಯಯಿಸುವ ಮತ್ತು ವ್ಯವಸ್ಥೆಯನ್ನೇ ಬದಲಾಯಿಸುವ ಅವಶ್ಯಕತೆಯಿಲ್ಲ. ಕೇವಲ " ಕುಶಲ ಕಲ್ಪನೆ"( Smart ideas) ಗಳ ಮೂಲಕ ಜನರ ಸಾಂಸ್ಕೃತಿಕ ವರ್ತನೆಗಳು ಮತ್ತು ಧೋರಣೆಗಳನ್ನು ಬದಲಾಯಿಸಬೇಕಾಗುವುದು. ಇದಕ್ಕಾಗಿ ಈ ಕುಶಲ ಕಲ್ಪನೆಗಳನ್ನು ಯಶಸ್ವಿಗೊಳಿಸಲು ಒಂದಿಷ್ಟು ಶ್ರಮಿಸಬೇಕಾಗುತ್ತದೆ. 

ಅಗ್ಲಿ ಇಂಡಿಯನ್ ಸಂಘಟನೆಯು ಭಾಷಣಗಳನ್ನು ಬಿಗಿಯುವ, ಕರಪತ್ರಗಳನ್ನು ಹಂಚುವುದೇ ಮುಂತಾದ ವಿಧಾನಗಳನ್ನು ಅನುಸರಿಸದೇ, ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಬೆಂಬಲಿಸುವ ಮೂಲಕ ಹಾಗೂ ಇದರ ಪರಿಣಾಮವನ್ನು ವೃದ್ಧಿಸುವ ಮೂಲಕ ಒಳಿತನ್ನು ಮಾಡುತ್ತದೆ. ನಮ್ಮ ಸಂಘಟನೆಯ ಸದಸ್ಯರು ಅನಾಮಧೇಯರಾಗಿ ಉಳಿದುಕೊಳ್ಳಲು ಇವರ ಪರಿಚಯ ಅಥವಾ ನಿರ್ದಿಷ್ಟ ವ್ಯಕ್ತಿಯೊಬ್ಬನ ವಿಚಾರ ಮಹತ್ವಪೂರ್ಣವಲ್ಲ. ಏಕೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ಕಣ್ಣಿಗೆ ಕಾಣುವ ಪರಿಣಾಮ ದೊರೆಯಲು ನೂರರು ಜನರ ಬೆಂಬಲದ ಅವಶ್ಯಕತೆಯಿದೆ. ಪ್ರತಿಯೊಂದು ಸಮುದಾಯದಲ್ಲಿ ಒಬ್ಬ "ಕುರೂಪಿ ಭಾರತೀಯ"ನಿದ್ದು, ಈತನು ಮೊದಲ ಹೆಜ್ಜೆಯನ್ನಿರಿಸಬೇಕು. ಆದರೆ ಇದಕ್ಕೆ ಸಮಗ್ರ ಸಮುದಾಯವು ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದಲ್ಲಿ, ಈ ಹೆಜ್ಜೆಯೂ ಅಪೇಕ್ಷಿತ ಪರಿಣಾಮವನ್ನು ನೀಡಲು ಯಶಸ್ವಿಯಾಗದು ಎನ್ನುವುದು  ಸಂಘಟನೆಯ ಅಭಿಪ್ರಾಯವಾಗಿದೆ. 

ಪ್ರಸ್ತುತ ಭಾರತದ ಅನೇಕ ಮಹಾನಗರ ಮತ್ತು ಪ್ರಮುಖ ನಗರಗಳಾಗಿರುವ ಬೆಂಗಳೂರು, ಆಗ್ರಾ, ಕಾನ್ಪುರ, ವಿಶಾಖಪಟ್ಟಣ, ಹೈದರಾಬಾದ್, ಮುಂಬೈ, ಪುಣೆಗಳಲ್ಲಿ ದ ಅಗ್ಲಿ ಇಂಡಿಯನ್ ಸಂಘಟನೆಯು ಕಾರ್ಯಾಚರಿಸುತ್ತಿದ್ದು, ಸದ್ಯೋಭವಿಷ್ಯದಲ್ಲಿ ಚೆನ್ನೈ, ದೆಹಲಿ, ಗೋವಾ ಮತ್ತಿತರ ಪ್ರದೇಶಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಈ ಸಂಘಟನೆಯ ಕಾರ್ಯತಂತ್ರದ ಯಶಸ್ಸನ್ನು ಗಮನಿಸಿರುವ ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೇಶಿಯಾ ಮತ್ತು ಇತರ ಯುರೋಪಿಯನ್ ದೇಶಗಳು ಇವರು ನಡೆಸುವ "ಸ್ಪಾಟ್ ಫಿಕ್ಸಿಂಗ್ " ಬಗ್ಗೆ ಅರಿತುಕೊಳ್ಳಲು ಇವರನ್ನು ಸಂಪರ್ಕಿಸಿದ್ದಾರೆ.

ಈ ಸಂಘಟನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಅರಿತುಕೊಳ್ಳಲು ಅಂತರ್ಜಾಲ ತಾಣದ ಮೂಲಕ ಇದರ ವಿವರಗಳನ್ನು ಅರಿತುಕೊಳ್ಳಬಹುದು. ಅಂತೆಯೇ ಪ್ರತಿಯೊಂದು ಊರಿನಲ್ಲೂ ಇಂತಹ ಸಂಘಟನೆಯನ್ನು ಪ್ರಾರಂಭಿಸಿ, ಇದೇ ರೀತಿಯಲ್ಲಿ ಕಾರ್ಯಾಚರಿಸಿದಲ್ಲಿ  ನಮ್ಮ ದೇಶದ ಪ್ರತಿಯೊಂದು ನಗರ- ಪಟ್ಟಣಗಳು " ನಿರ್ಮಲ ನಗರ" ಗಳಾಗಿ ಪರಿವರ್ತನೆಗೊಳ್ಳುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಚಿತ್ರ- ಬೆಂಗಳೂರಿನ ತ್ಯಾಜ್ಯಭರಿತ ಪ್ರದೇಶವನ್ನು ಸ್ವಚ್ಚ ಹಾಗೂ ಆಕರ್ಷಕವಾಗಿ ಪರಿವರ್ತಿಸಿರುವ ದೃಶ್ಯ.  


No comments:

Post a Comment