Wednesday, June 18, 2014

TRASH ON THE RAILWAY TRACKS !




 ರೈಲುಹಳಿಗಳ ಬದಿಯಲ್ಲಿ ಎಷ್ಟೊಂದು ತ್ಯಾಜ್ಯ !

ಪ್ರತಿನಿತ್ಯ ಬೆಳಗಿನ ಜಾವ ಅಥವಾ ಸಾಯಂಕಾಲದ ಸಮಯದಲ್ಲಿ ತಮ್ಮ ಆರೋಗ್ಯವನ್ನು ಉನ್ನತ ಸ್ತರದಲ್ಲಿ ಇರಿಸಿಕೊಳ್ಳುವ ಸಲುವಾಗಿ ನಡಿಗೆಯಲ್ಲಿ ತೊಡಗಿಸಿಕೊಳ್ಳುವ ಹವ್ಯಾಸ ಅನೇಕರಲ್ಲಿದೆ. ಸಾಮಾನ್ಯವಾಗಿ ಬೆಳಗಿನ ಜಾವದಲ್ಲಿ ನಿರ್ಜನವಾಗಿರುವ ಹಾಗೂ ವಾಹನಗಳ ಓಡಾಟ ಇಲ್ಲದ ಕಾರಣದಿಂದ ಧೂಳು ಅಥವಾ ಹೊಗೆಯ ಬಾಧೆಯೂ ಇಲ್ಲದ ರಸ್ತೆಗಳಲ್ಲಿ ಅನೇಕರು ವಾಕಿಂಗ್ ಮಾಡುವುದನ್ನು ನೀವೂ ಕಂಡಿರಬಹುದು. ಇನ್ನು ಕೆಲವರು ಶಾಲೆಗಳ ಆಟದ ಮೈದಾನ ಅಥವಾ ರೈಲ್ವೆ ಹಳಿಗಳ ಬದಿಗಳಲ್ಲೂ ನಡೆಯುವುದು ಅಪರೂಪವೇನಲ್ಲ. 

ಅದೊಂದು ದಿನ ಮುಂಜಾನೆ ಎಂದಿನಂತೆ ಪ್ರಧಾನ ರಸ್ತೆಯಲ್ಲಿ ವಾಕಿಂಗ್ ಹೋಗಲು ತುಸು ತಡವಾಗಿದ್ದುದರಿಂದ, ಮನೆಯ ಸಮೀಪದಲ್ಲಿರುವ ರೈಲ್ವೆ ಹಳಿಗಳ ಮೇಲೆ ನಡೆಯಲು ನಿರ್ಧರಿಸಿದೆ. ಹಳಿಗಳ ಪಕ್ಕದಲ್ಲಿ ದಿನನಿತ್ಯ ಓಡಾಡುವ ಜನರಿಂದಾಗಿ ನಿರ್ಮಾಣಗೊಂಡಿದ್ದ ಕಾಲುದಾರಿಯಿದ್ದರೂ, ಇದರ ಮೇಲೆ ನಡೆಯುವುದು ಅಷ್ಟೊಂದು ಸುಲಭವಲ್ಲ ಎನ್ನುವುದು ಅಂದು ತಿಳಿಯಿತು. ಅಂತೆಯೇ ರೈಲು ಹಳಿಗಳ ಇಕ್ಕೆಲಗಳಲ್ಲಿ ಪ್ರಯಾಣಿಕರು ಎಸೆದಿರುವ ವೈವಿಧ್ಯಮಯ ತ್ಯಾಜ್ಯಗಳನ್ನು ಕಣ್ಣಾರೆ ಕಾಣುವ ಅವಕಾಶವೂ ಲಭಿಸಿತ್ತು. 

ಈ ಸಮಸ್ಯೆಗೆ ಕಾರಣವೇನು ?

 ರೈಲುಹಳಿಗಳ ಇಕ್ಕೆಲಗಳಲ್ಲಿ ಇಷ್ಟೊಂದು ತ್ಯಾಜ್ಯಗಳು ಬಿದ್ದಿರಲು ಕಾರಣವೇನು ಎಂದು ಸ್ನೇಹಿತರ ಬಳಿ ವಿಚಾರಿಸಿದಾಗ, ಮಹತ್ವಪೂರ್ಣವಾದ ಮಾಹಿತಿ ಲಭಿಸಿತ್ತು. ರೈಲುಗಳಲ್ಲಿ ಹೆಚ್ಚಾಗಿ ಸಂಚರಿಸುವ ಪ್ರಯಾಣಿಕರು ಹೇಳುವಂತೆ, ದೀರ್ಘಾವಧಿಯ ಅಥವಾ ಹಗಲು ಪ್ರಯಾಣದ ಸಂದರ್ಭದಲ್ಲಿ ಬಹುತೇಕ ಜನರು ತಮಗೆ ಬೇಕಾಗುವಷ್ಟು ಖಾದ್ಯಪೇಯಗಳನ್ನು ತರುತ್ತಾರೆ. ಏಕೆಂದರೆ ರೈಲು ನಿಲ್ಲುವ ಬಹುತೇಕ ತಾಣಗಳಲ್ಲಿ ತಾವು ಬಯಸುವ ಖಾದ್ಯಪೇಯಗಳು ಲಭಿಸದೆ ಇರುವ ಅಥವಾ ಖಾದ್ಯಪೇಯಗಳನ್ನು ಖರೀದಿಸಿ ತರುವಷ್ಟು ಸಮಯ ರೈಲು ನಿಲ್ಲದೆ ಇರುವ ಮತ್ತು ವಯೋವೃದ್ಧರು ಹಾಗೂ ಮಹಿಳೆಯರು ಯಾವುದೇ ನಿಲ್ದಾಣದಲ್ಲಿ ಇಳಿದು ತಮಗೆ ಬೇಕಾದ ಆಹಾರಗಳನ್ನು ಖರೀದಿಸುವಷ್ಟು ಸಾಮರ್ಥ್ಯವನ್ನು ಹೊಂದಿರದಿರುವುದೇ ಇದಕ್ಕೆ ಪ್ರಮುಖ ಕಾರಣವೆನಿಸಿದೆ. 

ಬಹುತೇಕ ಪ್ರಯಾಣಿಕರು ತಾವು ಮನೆಯಿಂದ ಅಥವಾ ಹೋಟೆಲ್ ಗಳಿಂದ ತಂದಿದ್ದ ಖಾದ್ಯಪೇಯಗಳನ್ನು ಸೇವಿಸುವ ಸಂದರ್ಭದಲ್ಲಿ, ಬಳಸಿ ಎಸೆಯುವ ಪ್ಲಾಸ್ಟಿಕ ನಿರ್ಮಿತ  ಲೋಟ, ತಟ್ಟೆ, ಚಮಚ ಮತ್ತಿತರ ಪರಿಕರಗಳನ್ನು ಬಳಸುತ್ತಾರೆ. ಅಂತೆಯೇ ಪ್ಲಾಸ್ಟಿಕ್ ಬಾಟಲಿಗಳಲ್ಲಿ ದೊರೆಯುವ ನೀರು ಅಥವಾ ಲಘುಪಾನೀಯಗಳನ್ನು ಮತ್ತು ಇನ್ನುಕೆಲವರು ಮಾದಕ ಪೇಯಗಳನ್ನೂ ಕದ್ದುಮುಚ್ಚಿ ಕುಡಿಯುತ್ತಾರೆ. ಬಳಿಕ ತಾವು ಬಳಸಿದ ಲೋಟ,ತಟ್ಟೆ, ಚಮಚ ಮತ್ತು ಪ್ಲಾಸ್ಟಿಕ್ ಹಾಗೂ ಗಾಜಿನ ಬಾಟಲಿಗಳನ್ನು ರೈಲಿನ ಕಿಟಿಕಿ- ಬಾಗಿಲುಗಳಿಂದ ಹೊರಗೆಸೆಯುತ್ತಾರೆ.ಏಕೆಂದರೆ ರೈಲುಗಳ ಬೋಗಿಗಳಲ್ಲಿ ಪ್ರಯಾಣಿಕರು ಬಳಸಿ ಎಸೆಯುವ ತ್ಯಾಜ್ಯಗಳನ್ನು ಹಾಕಲು ಸೂಕ್ತ ವ್ಯವಸ್ಥೆಯೇ ಇಲ್ಲ. ಈ ವ್ಯವಸ್ಥೆ ಇರುವ ರೈಲುಗಳಲ್ಲೂಅವಶ್ಯಕ ಪ್ರಮಾಣದ ತ್ಯಾಜ್ಯಗಳನ್ನು ಸಂಗ್ರಹಿಸಬಲ್ಲ ಡಬ್ಬಿಗಳನ್ನು ಇರಿಸಲಾಗಿಲ್ಲ. ಪ್ರಯಾಣಿಕರೊಬ್ಬರು ಹೇಳುವಂತೆ ತ್ಯಾಜ್ಯಗಳನ್ನು ಹಾಕಲು ಇರಿಸಿದ ಡಬ್ಬಿಗಳಲ್ಲಿ ಸುಮಾರು ಒಂದು ಬಕೆಟ್ ನಲ್ಲಿ ಹಿಡಿಯುವಷ್ಟು ತ್ಯಾಜ್ಯಗಳನ್ನು ಹಾಕಬಹುದಾಗಿದೆ. ಸಾಮಾನ್ಯವಾಗಿ ಕುಳಿತು ಪ್ರಯಾಣಿಸುವ ರೈಲು ಬೋಗಿಯೊಂದರಲ್ಲಿ ಸುಮಾರು ೧೦೮ ಮತ್ತು ಸ್ಲೀಪರ್ ಬೋಗಿಗಳಲ್ಲಿ ಸುಮಾರು ೭೨ ಪ್ರಯಾಣಿಕರಿಗೆ ಸ್ಥಳಾವಕಾಶ ಇರುತ್ತದೆ. ದೂರ ಪ್ರಯಾಣದ ರೈಲುಗಳಲ್ಲಿ ಇವೆಲ್ಲಾ ಬೋಗಿಗಳು ಜನರಿಂದ ತುಂಬಿ ತುಳುಕುತ್ತವೆ. ಈ ರೀತಿಯಲ್ಲಿ ಒಂದು ರೈಲಿನಲ್ಲಿ ಸಾವಿರಕ್ಕೂ ಅಧಿಕ ಪ್ರಯಾಣಿಕರು ಇರುವುದರಿಂದ, ಇವರು ಉತ್ಪಾದಿಸುವ ತ್ಯಾಜ್ಯಗಳ ಪ್ರಮಾಣವೂ ಸ್ವಾಭಾವಿಕವಾಗಿಯೇ ಸಾಕಷ್ಟು ಅಧಿಕವಾಗಿರುತ್ತದೆ. ಇದೇ ಕಾರಣದಿಂದಾಗಿ ರೈಲುಹಳಿಗಳ ಇಕ್ಕೆಲಗಳಲ್ಲಿ ಇಂತಹ ಅಪಾರ ಪ್ರಮಾಣದ ತ್ಯಾಜ್ಯಗಳು ಅಲ್ಲಲ್ಲಿ ಬಿದ್ದಿರುತ್ತವೆ. ನಗರ- ಪಟ್ಟಣಗಳ ರಸ್ತೆಗಳ ಬದಿಗಳಲ್ಲಿ ಬಿದ್ದಿರುವ ತ್ಯಾಜ್ಯಗಳನ್ನು ಪೌರ ಕಾರ್ಮಿಕರು ಸಂಗ್ರಹಿಸಿ ವಿಲೇವಾರಿ ಮಾಡುವರಾದರೂ, ರೈಲುಹಳಿಗಳ ಅಕ್ಕಪಕ್ಕದಲ್ಲಿ ಬಿದ್ದಿರುವ ತ್ಯಾಜ್ಯಗಳನ್ನು ಹೆಕ್ಕುವ ವ್ಯವಸ್ಥೆ ಇಲ್ಲ.ಇದೇ ಕಾರಣದಿಂದಾಗಿ ಮುಂದಿನ ಕೆಲವೇ ವರ್ಷಗಳಲ್ಲಿ ರೈಲುಹಳಿಗಳ ಇಕ್ಕೆಲಗಳು ವೈವಿಧ್ಯಮಯ ತ್ಯಾಜ್ಯಗಳಿಂದ ತುಂಬಿ, ಬೃಹತ್ ತ್ಯಾಜ್ಯ ವಿಲೇವಾರಿ ಘಟಕಗಳಂತೆ ಗೋಚರಿಸಲಿವೆ!. 

ಪರಿಹಾರವೇನು? 

ಈ ಸಮಸ್ಯೆಯನ್ನು ಪರಿಹರಿಸಲು ಪ್ರಯಾಣಿಕರು ಮತ್ತು ರೈಲ್ವೇ ಇಲಾಖೆಯ ಅಧಿಕಾರಿಗಳ ಸಹಕಾರಗಳ ಅವಶ್ಯಕತೆಯಿದೆ. ಮೊದಲನೆಯದಾಗಿ ರೈಲ್ವೆ ಇಲಾಖೆಯ ವತಿಯಿಂದ ಆಯ್ದ ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ಗಳಲ್ಲಿ ಹಲವಾರು ಕಸದ ತೊಟ್ಟಿಗಳನ್ನು ಇರಿಸುವ ವ್ಯವಸ್ಥೆಯನ್ನು ಮಾಡಬೇಕು.ಅಂತೆಯೇ ಪ್ರಯಾಣಿಕರು ತಾವು ಕೊಂಡೊಯ್ದ ಖಾದ್ಯಪೇಯಗಳನ್ನು ಸೇವಿಸಿದ ಬಳಿಕ ಉತ್ಪನ್ನವಾದ ತ್ಯಾಜ್ಯಗಳನ್ನು ಮತ್ತೆ ಅದೇ ರೀತಿಯಲ್ಲಿ ಸಂಗ್ರಹಿಸಿ, ನಿಗದಿತ ನಿಲ್ದಾಣಗಳಲ್ಲಿ ಇರಿಸಿದ ಕಸದ ತೊಟ್ಟಿಗಳಲ್ಲಿ ಹಾಕಬೇಕು. ಅಥವಾ ನಿಗದಿತ ನಿಲ್ದಾಣಗಳಲ್ಲಿ ರೈಲಿನ ಬೋಗಿಗಳಿಂದಲೇ ಇಂತಹ ತ್ಯಾಜ್ಯಗಳನ್ನು ಸಂಗ್ರಹಿಸಲು ಅವಶ್ಯಕ ಸಿಬಂದಿಗಳನ್ನು ನೇಮಿಸಬೇಕು.ಇಂತಹ ವ್ಯವಸ್ಥೆಯನ್ನು ಕಲ್ಪಿಸಲು ಇಲಾಖೆಯ ಅಧಿಕಾರಿಗಳಿಗೆ ಸಾಧ್ಯವಾಗದೇ ಇದ್ದಲ್ಲಿ , ರೈಲುಗಳಲ್ಲಿ ಪ್ಲಾಸ್ಟಿಕ್ ನಿರ್ಮಿತ ಲೋಟ, ತಟ್ಟೆ, ಚಮಚ ಮತ್ತು ಬಾಟಲಿಗಳನ್ನು ಬಳಸುವುದನ್ನೇ ನಿಷೇಧಿಸಬೇಕು. ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳದೇ ಇದ್ದಲ್ಲಿ, ಭಾರತದ ಬಹುತೇಕ ರೈಲುಹಳಿಗಳ ಉದ್ದಕ್ಕೂ ಬೀಳಲಿರುವ ತ್ಯಾಜ್ಯಗಳು ಇನ್ನಷ್ಟು ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸುವುದರಲ್ಲಿ ಸಂದೇಹವಿಲ್ಲ. 

ಕೊನೆಯ ಮಾತು 

ಅಧಿಕತಮ ಪ್ರಯಾಣಿಕರು ಹೇಳುವಂತೆ ದೂರ ಪ್ರಯಾಣದ ರೈಲುಗಳ ಬೋಗಿಗಳೇ ಸ್ವಚ್ಛವಾಗಿರುವುದಿಲ್ಲ. ಸಾಕಷ್ಟು ಕಸದಿಂದ ತುಂಬಿರುವ ಬೋಗಿಗಳು ಮತ್ತು ಸ್ವಚ್ಛಗೊಳಿಸದ ಕಾರಣದಿಂದಾಗಿ ದುರ್ವಾಸನೆಯನ್ನು ಬೀರುವ ಶೌಚಾಲಯಗಳನ್ನು ಕಂಡಲ್ಲಿ, ಇವುಗಳಲ್ಲಿ ಪ್ರಯಾಣಿಸುವ ವ್ಯಕ್ತಿಗಳಿಗೆ ಜಿಗುಪ್ಸೆಯನ್ನು ಉಂಟುಮಾಡುತ್ತದೆ. ರೈಲುಗಳ ಬೋಗಿಗಳನ್ನು ಸ್ವಚ್ಛವಾಗಿ ಇರಿಸದ ಇಲಾಖೆಯ ಸಿಬಂದಿಗಳು, ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಗೋಜಿಗೆ ಹೋಗುವುದಿಲ್ಲ ಎಂದು ಇತ್ತೀಚಿಗೆ ದೆಹಲಿಗೆ ಪ್ರಯಾಣಿಸಿದ ರೋಟರಿ ಸದಸ್ಯರು ಹೆಲುತ್ತಾರೆ. ಇವರು ಹೇಳುವಂತೆ ದೆಹಲಿಯಿಂದ ಮರಳುವಾಗ ಪ್ರಯಾಣವನ್ನು ಆರಂಭಿಸುವ ತಾಣದಲ್ಲೇ ರೈಲಿನ ಬೋಗಿಗಳು ಮತ್ತು ಶೌಚಾಲಯಗಳು ಹೊಲಸಾಗಿದ್ದವು. ನಿಜ ಸ್ಥಿತಿ ಇಂತಿದ್ದಲ್ಲಿ, ರೈಲುಗಳಲ್ಲಿ ತ್ಯಾಜ್ಯಗಳನ್ನು ಹಾಕಲು ಸೂಕ್ತ ವ್ಯವಸ್ಥೆಯನ್ನು ಸಂಬಂಧಿತ ಅಧಿಕಾರಿಗಳು ಒದಗಿಸುವ ಸಾಧ್ಯತೆಗಳೇ ಇಲ್ಲ. ವಿಶೇಷವೆಂದರೆ ದೆಹಲಿಯನ್ನು ಸಮೀಪಿಸುತ್ತಿದ್ದಂತೆಯೇ ಅನೇಕ ನಿಲ್ದಾಣಗಳಲ್ಲಿ ಹದಿಹರೆಯದ ಹುಡುಗರು ಬೋಗಿಗಳನ್ನು ಪ್ರವೇಶಿಸಿ, ಪ್ರಯಾಣಿಕರು ಅಲ್ಲಲ್ಲಿ ಎಸೆದಿದ್ದ ಪ್ಲಾಸ್ಟಿಕ್ ಬಾಟಲಿಗಳನ್ನು ಗೋಣಿಚೀಲಗಳಲ್ಲಿ ತುಂಬಿಸಿ ಕೊಂಡೊಯ್ದ ಕಾರಣದಿಂದಾಗಿ ಬೋಗಿಗಳಲ್ಲಿ ತ್ಯಾಜ್ಯಗಳ ಪ್ರಮಾಣ ಒಂದಿಷ್ಟು ಕಡಿಮೆಯಾಗಿತ್ತು ಎನ್ನುವುದನ್ನೂ ಇವರು ಗಮನಿಸಿದ್ದಾರೆ. 

ಅದೇನೇ ಇರಲಿ, ಇದೀಗ ಪ್ರಯಾಣದ ದರವನ್ನು ಹೆಚ್ಚಿಸಲು ಸನ್ನದ್ಧವಾಗುತ್ತಿರುವ ರೈಲ್ವೆ ಇಲಾಖೆಯು, ರೈಲುಗಳು ಮತ್ತು ನಿಲ್ದಾಣಗಳ ಸ್ವಚ್ಛತೆಯತ್ತ   ಗಮನಹರಿಸಬೇಕಾಗಿದೆ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 






No comments:

Post a Comment