Thursday, June 5, 2014

SVACHA PUTTOORU JAAGRATI ABHIYAANA




 ಸ್ವಚ್ಚ ಪುತ್ತೂರು ಜಾಗೃತಿ ಅಭಿಯಾನ 

ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಯಲ್ಲಿ ಸಹಕರಿಸಿ 

ಕಳೆದ ಒಂದೆರಡು ದಶಕಗಳಲ್ಲಿ ಪುತ್ತೂರಿನ ಜನಸಂಖ್ಯೆ ಸಾಕಷ್ಟು ಹೆಚ್ಚಿದೆ. ಜನಸಂಖ್ಯೆಯ ಆಧಾರದಲ್ಲಿ ಪುತ್ತೂರು ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೆ ಏರದೇ ಇದ್ದರೂ, ತ್ಯಾಜ್ಯಗಳ ಉತ್ಪಾದನೆಯಲ್ಲಿ ಮತ್ತು ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯುವ ವಿಚಾರದಲ್ಲಿ ಪುತ್ತೂರು ನಿಸ್ಸಂದೇಹವಾಗಿಯೂ ಮೇಲ್ದರ್ಜೆಗೆ ಏರಿದೆ!. 

ಕೇವಲ ಒಂದೆರಡು ದಶಕಗಳ ಹಿಂದೆ ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ಉತ್ಪನ್ನವಾಗುತ್ತಿದ್ದ ತ್ಯಾಜ್ಯಗಳನ್ನು ನಗರದ ವಿವಿಧಭಾಗಗಳಲ್ಲಿ ಇರಿಸಲಾಗಿದ್ದ ಕಸದ ತೊಟ್ಟಿಗಳಲ್ಲಿ ಹಾಕಲಾಗುತ್ತಿತ್ತು. ಪೌರಕಾರ್ಮಿಕರು ದಿನನಿತ್ಯ ಇವುಗಳನ್ನು ಸಂಗ್ರಹಿಸಿ, ನೆಕ್ಕಿಲದಲ್ಲಿರುವ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಸುರಿದು ಬರುತ್ತಿದ್ದರು. ತದನಂತರ ಗತದಶಕದಲ್ಲಿ ಅನುಷ್ಠಾನಗೊಂಡಿದ್ದ ೫೬.೯೮ ಕೋಟಿ ರೂ. ವೆಚ್ಚದ ಕುಡ್ಸೆಂಪ್ ಯೋಜನೆಗಳಲ್ಲಿ ನೆಕ್ಕಿಲದಲ್ಲಿ ಸುಸಜ್ಜಿತ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲಾಗಿತ್ತು. ಇದರೊಂದಿಗೆ ನಗರದ ಆಯ್ದ ಭಾಗಗಳಲ್ಲಿ ಆಧುನಿಕ ಕಸದ ತೊಟ್ಟಿಗಳನ್ನು ಇರಿಸಿ, ಇವುಗಳಲ್ಲಿ ಸಂಗ್ರಹಿತವಾಗಿದ್ದ ತ್ಯಾಜ್ಯಗಳನ್ನು ಇದಕ್ಕಾಗಿಯೇ ಒದಗಿಸಿದ್ದ ವಾಹನಗಳಲ್ಲಿ ಸಾಗಿಸಿ ನೆಕ್ಕಿಲದ ನೂತನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ತಕ್ಕ ಮಟ್ಟಿಗೆ ವ್ಯವಸ್ಥಿತವಾಗಿ ನಡೆಯುತ್ತಿದ್ದ ಈ ಕಾರ್ಯಕ್ರಮವು, ಕೆಲವೇ ವರ್ಷಗಳಲ್ಲಿ ಹಳಿತಪ್ಪಿತ್ತು. ಆದರೆ ಇದಕ್ಕೊಂದು ನಿರ್ದಿಷ್ಟ ಕಾರಣವೂ ಇದ್ದಿತು. 

ಸರ್ವೋಚ್ಛ ನ್ಯಾಯಾಲಯದ ಆದೇಶ 

ದೇಶಾದ್ಯಂತ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ವ್ಯವಸ್ಥೆಯನ್ನು ವೈಜ್ಞಾನಿಕ ವಿಧಾನಗಳಿಂದ ನಡೆಸುವಂತೆ ಮತ್ತು ಬೀದಿಬದಿಗಳಲ್ಲಿ ಇರಿಸಿರುವ ಕಸದ ತೊಟ್ಟಿಗಳು ತುಂಬಿ ತುಳುಕುವ ಕಾರಣದಿಂದಾಗಿ, ಇವೆಲ್ಲಾ ಕಸದ ತೊಟ್ಟಿಗಳನ್ನು ತೆಗೆದು ತ್ಯಾಜ್ಯಗಳು ಉತ್ಪನ್ನವಾಗುವ ಸ್ಥಳಗಳಿಂದಲೇ ಸಂಗ್ರಹಿಸುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ದೇಶದ ಸರ್ವೋಚ್ಚ ನ್ಯಾಯಾಲಯ ಆದೇಶಿಸಿತ್ತು. ಆದರೆ ಈ ಆದೇಶವನ್ನು ಕಾರ್ಯರೂಪಕ್ಕೆ ತರುವುದು ಹೇಳಿದಷ್ಟು ಸುಲಭವಾಗಿರಲಿಲ್ಲ. ತ್ಯಾಜ್ಯ ಸಂಗ್ರಹ ಮತ್ತು ಸಾಗಾಟಕ್ಕೆ ಬೇಕಾಗುವ ಕಾರ್ಯಕರ್ತರು ಮತ್ತು ವಾಹನಗಳ ವ್ಯವಸ್ಥೆಯನ್ನು ಒದಗಿಸಲು ಆರ್ಥಿಕ ಮತ್ತು ಇತರ ಅಡಚಣೆಗಳಿದ್ದ ಸ್ಥಳೀಯ ಸಂಸ್ಥೆಗಳು, ನೂತನ ವ್ಯವಸ್ಥೆಯನ್ನು ಜಾರಿಗೊಳಿಸಲು ದಯನೀಯವಾಗಿ ವಿಫಲಗೊಂಡಿದ್ದವು. ಇದಿಷ್ಟು ಸಾಲದೆನ್ನುವಂತೆ ತ್ಯಾಜ್ಯ ಸಂಗ್ರಹಕ್ಕಾಗಿ ನಿಗದಿತ ಶುಲ್ಕವನ್ನು ಪಾವತಿಸಲು ನಿರಾಕರಿಸಿದ ಸ್ಥಳೀಯ ಜನರಿಂದಾಗಿ, ಸಮಗ್ರ ವ್ಯವಸ್ಥೆಯೇ ಕುಸಿದ ಪರಿಣಾಮವಾಗಿ ಬಹುತೇಕ ನಗರ- ಪಟ್ಟಣಗಳ ಬೀದಿಬೀದಿಗಳಲ್ಲಿ ಮತ್ತು ಚರಂಡಿಗಳಲ್ಲಿ ತ್ಯಾಜ್ಯಗಳು ರಾಶಿ ಬಿದ್ದು ಸುತ್ತ ಮುತ್ತಲ ಪರಿಸರವೇ ಅನಾರೋಗ್ಯಕರವಾಗಿ ಪರಿವರ್ತನೆಗೊಂಡಿತ್ತು. ಕಳೆದ ಹಲವಾರು ವರ್ಷಗಳಿಂದ ಈ ಸಮಸ್ಯೆಯನ್ನು ಸಮರ್ಪಕವಾಗಿ ಬಗೆಹರಿಸಲು ಸ್ಥಳೀಯ ಸಂಸ್ಥೆಗಳು ನಡೆಸಿದ್ದ ಪ್ರಯತ್ನಗಳು ಅಪೇಕ್ಷಿತ ಪರಿಣಾಮವನ್ನು ನೀಡಲು ವಿಫಲವಾಗಿದ್ದವು. ತತ್ಪರಿಣಾಮವಾಗಿ ಸರ್ವೋಚ್ಚ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದ ಸ್ಥಳೀಯ ಸಂಸ್ಥೆಗಳು, ಇದೀಗ ತಮ್ಮ ವ್ಯಾಪ್ತಿಯಲ್ಲಿ ಉತ್ಪನ್ನವಾಗುತ್ತಿರುವ ತ್ಯಾಜ್ಯಗಳನ್ನು ಸಂಗ್ರಹಿಸಿ, ಇವುಗಳನ್ನು ಪ್ರತ್ಯೇಕಿಸಿದ ಬಳಿಕ ನಿರುಪಯುಕ್ತ ತ್ಯಾಜ್ಯಗಳನ್ನು ಮಾತ್ರ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡಲು ಹರಸಾಹಸವನ್ನೇ ನಡೆಸುತ್ತಿವೆ. ಈ ವಿಚಾರದಲ್ಲಿ ಪುತ್ತೂರು ಪುರಸಭೆಯೂ ಅಪವಾದವೆನಿಸಿಲ್ಲ. 

ಜಾಗೃತಿ ಅಭಿಯಾನ 

ಪುತ್ತೂರು ಪುರಸಭೆಯ ವತಿಯಿಂದ ವಿಶ್ವ ಪರಿಸರ ದಿನದಂದು "ಸ್ವಚ್ಛ ಪುತ್ತೂರು ಜಾಗೃತಿ ಅಭಿಯಾನ" ಉದ್ಘಾಟನೆಗೊಂಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ವಸತಿ- ವಾಣಿಜ್ಯ ಕೇಂದ್ರಗಳಿಂದ ತ್ಯಾಜ್ಯಗಳನ್ನು ಸಂಗ್ರಹಿಸಲು ಏಳು ವಾಹನಗಳೊಂದಿಗೆ, ಸುಮಾರು ೨೫ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ಅಭಿಯಾನದಲ್ಲಿ ಸ್ಥಳೀಯ ಜನರು ಮನಸ್ಪೂರ್ವಕ ಸಹಕಾರವನ್ನು ನೀಡಿದಲ್ಲಿ, ಸ್ವಚ್ಚ ಪುತ್ತೂರು ಜಾಗೃತಿ ಅಭಿಯಾನವು ಯಶಸ್ವಿಯಾಗಲಿದೆ. ಇದರೊಂದಿಗೆ ಕಂಡಲ್ಲಿ ಕಸವನ್ನು ಎಸೆಯುವ ಕೆಟ್ಟ ಪ್ರವೃತ್ತಿಯನ್ನು ತ್ಯಜಿಸಿದಲ್ಲಿ ಪುತ್ತೂರು ನಗರವು " ನಿರ್ಮಲ ನಗರ" ವಾಗಿ ಪರಿವರ್ತನೆಗೊಳ್ಳುವುದರಲ್ಲಿ ಸಂದೇಹವಿಲ್ಲ. 

ಕೊನೆಯ ಮಾತು 

ಜಾಗತಿಕ ಮಟ್ಟದಲ್ಲಿ ವರ್ಷದಲ್ಲಿ ಅನೇಕ "ದಿನ" ಗಳನ್ನು ಆಚರಿಸಲಾಗುತ್ತಿದ್ದು, ಬಹುತೇಕ ದಿನಗಳು ಸರಕಾರೀ ಪ್ರಾಯೋಜಿತ ಕಾರ್ಯಕ್ರಮಗಳೇ ಆಗಿರುತ್ತವೆ. ಉದಾಹರಣೆಗೆ ವಿಶ್ವ ಪರಿಸರ ದಿನಾಚರಣೆಯಂದು ಪುತ್ತೂರಿನಲ್ಲೂ ಪೂರ್ವ ನಿಗದಿತ ಕಾರ್ಯಕ್ರಮಗಳು ಜರಗಿವೆ. ಇವುಗಳಲ್ಲಿ ಪರಿಸರ ಸಂರಕ್ಷಣೆಯ ಸಲುವಾಗಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನೂ ನಡೆಸಲಾಗಿತ್ತು. ಆದರೆ ಈ ಸಂದರ್ಭದಲ್ಲಿ ನೆಟ್ಟಿರುವ ಗಿಡಗಳನ್ನು ನೀರೆರೆದು ಸಂರಕ್ಷಿಸದೇ ಇದ್ದಲ್ಲಿ, ನಮ್ಮ ಸುತ್ತಮುತ್ತಲ ಪರಿಸರದಂತೆಯೇ ಈ ಗಿಡಗಳೂ ನಿರ್ಲಕ್ಷ್ಯಕ್ಕೆ ಒಳಗಾಗಿ ನಾಶವಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಸಂಬಂಧಿತರು ಗಮನ ಹರಿಸಿ, ಈ ಗಿಡಗಳನ್ನು ಮತ್ತು ನಮ್ಮ ಸುತ್ತಮುತ್ತಲ ಪರಿಸರವನ್ನು ಸಂರಕ್ಷಿಸಬೇಕಾದ ಅವಶ್ಯಕತೆಯಿದೆ.  


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

No comments:

Post a Comment