Friday, June 20, 2014

ROAD INFORMATION SYSTEM




 ರಸ್ತೆ ಮಾಹಿತಿ ವ್ಯವಸ್ಥೆ : ಉಪಯುಕ್ತವೆನಿಸಬಲ್ಲದೇ?

ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಎಲ್ಲಾ ರಸ್ತೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪರಿಪೂರ್ಣ ಮಾಹಿತಿಗಳನ್ನು ಒಳಗೊಂಡ " ರಸ್ತೆ ಮಾಹಿತಿ ವ್ಯವಸ್ಥೆ " ಯನ್ನು ರಾಜ್ಯ ಸರ್ಕಾರವು ಸದ್ಯೋಭವಿಷ್ಯದಲ್ಲಿ ಆರಂಭಿಸಲಿದೆ ಎಂದು ಕೆಲ ದಿನಗಳ ಹಿಂದೆ ಲೋಕೋಪಯೋಗಿ ಸಚಿವರು ಘೋಷಿಸಿದ್ದರು. ಸಚಿವರ ಹೇಳಿಕೆಯಂತೆ ರಸ್ತೆಗಳ ನಿರ್ಮಾಣ ಮತ್ತು ಕಾಮಗಾರಿಗಳಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಹಾಗೂ ಇದರಲ್ಲಿ ನಡೆಯುವ ಭ್ರಷ್ಟಾಚಾರವನ್ನು ನಿಯಂತ್ರಿಸುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆಯ ವತಿಯಿಂದ ಆರ್.ಐ.ಎಸ್ ( ರೋಡ್ ಇನ್ಫೋರ್ಮೆಶನ್ ಸಿಸ್ಟಂ ) ಜಾರಿಗೊಳಿಸಲಾಗುತ್ತದೆ. 

ನೂತನ ವ್ಯವಸ್ಥೆ ಅನುಷ್ಠಾನಗೊಂಡ ಬಳಿಕ ರಸ್ತೆಗಳು ಹಾಳಾಗಲು ನಿರ್ದಿಷ್ಟ ಕಾರಣಗಳು, ಇವುಗಳನ್ನು ದುರಸ್ತಿಪಡಿಸಿದ ಸಮಯ ಹಾಗೂ ಇದಕ್ಕಾಗಿ ತಗಲಿದ ಅವಧಿ, ದುರಸ್ತಿಪಡಿಸದೇ ಇದ್ದಲ್ಲಿ ಇದಕ್ಕೆ ಸಮರ್ಥನೀಯ ಕಾರಣಗಳು ಮತ್ತು ಕಾಮಗಾರಿಗಳಿಗೆ ತಗಲಿದ ವೆಚ್ಚ ಮತ್ತಿತರ ಮಾಹಿತಿಗಳು ಆರ್.ಐ.ಎಸ್ ನಲ್ಲಿ ಲಭಿಸುತ್ತವೆ. ಇದರ ಉಸ್ತುವಾರಿಯನ್ನು ವಹಿಸಲು ಟೆಂಡರ್ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಈ ಎಲ್ಲಾ ಮಾಹಿತಿಗಳನ್ನು ಇಲಾಖೆಯ ಅಂತರ್ಜಾಲ ತಾಣದಲ್ಲಿ ಪ್ರಕಟಿಸುವ ಮೂಲಕ ಜನರಿಗೆ ಸಂಪೂರ್ಣ ವಿವರಗಳು ಲಭಿಸುವಂತೆ ಮಾಡಲಾಗುವುದು. ಇಂತಹ ವ್ಯವಸ್ಥೆಯಿಂದಾಗಿ ಅವ್ಯವಹಾರಗಳಿಗೆ ಕಡಿವಾಣ ತೊಡಿಸಲು ಸಾಧ್ಯವೆಂದು ಸಚಿವರು ಹೇಳಿದ್ದಾರೆ. 

ಆರ್.ಐ.ಎಸ್ ಯಶಸ್ವಿಯಾಗುವುದೇ ?

ಲೋಕೋಪಯೋಗಿ ಸಚಿವರು ಹೇಳಿದಂತೆ ರಸ್ತೆಗಳು ಹಾಳಾಗಲು ನಿರ್ದಿಷ್ಟ ಕಾರಣಗಳನ್ನು ಅರಿತುಕೊಳ್ಳಲು ನೂತನ ವ್ಯವಸ್ಥೆಯ ಅವಶ್ಯಕತೆಯೇ ಬೇಕಾಗಿಲ್ಲ ಎನ್ನುವುದು ಜನಸಾಮಾನ್ಯರ ಅಭಿಪ್ರಾಯ. ಅಂತೆಯೇ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದೊಡನೆ ಅವ್ಯವಹಾರಗಳಿಗೆ ಕಡಿವಾಣ ತೊಡಿಸಬಹುದು ಎನ್ನುವ ವಿಚಾರವೂ ಸರಿಯಲ್ಲ. ಏಕೆಂದರೆ ರಸ್ತೆಗಳ ನಿರ್ಮಾಣ, ನಿರ್ವಹಣೆ ಮತ್ತು ದುರಸ್ತಿಗಳ ಕಾಮಗಾರಿಗಳಲ್ಲಿ ಸರ್ಕಾರ ವ್ಯಯಿಸುವ ಕೋಟ್ಯಂತರ ರೂಪಾಯಿಗಳು ಸೋರಿಹೊಗುತ್ತಿರುವುದು ಗುಟ್ಟಿನ ವಿಷಯವೇನಲ್ಲ. ಜೊತೆಗೆ ಸೋರಿಹೋಗುವ ಮೊತ್ತ ಎಲ್ಲಿಗೆ ತಲುಪುತ್ತದೆ ಎನ್ನುವ ವಿಚಾರವು ಸಚಿವರಿಗೂ ತಿಳಿದಿರಲೇಬೇಕು!. 

ನಿಜಸ್ಥಿತಿ ಇಂತಿರುವಾಗ ಆರ್.ಐ.ಎಸ್ ವ್ಯವಸ್ಥೆಯನ್ನು ಇದಕ್ಕಾಗಿ ಜಾರಿಗೊಳಿಸುವ ಅವಶ್ಯಕತೆಯೇ ಉದ್ಭವಿಸುವುದಿಲ್ಲ. ಹಾಗೂ ಇದಕ್ಕಾಗಿ ಇನ್ನಷ್ಟು ಹಣವನ್ನು ವ್ಯಯಿಸಬೇಕಾದ ಅನಿವಾರ್ಯತೆಯೂ ಇಲ್ಲವೆಂದಲ್ಲಿ ತಪ್ಪೆನಿಸಲಾರದು. 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿರುವ ಅನುದಾನದ ಹಣದಿಂದ ಅನುಷ್ಠಾನಗೊಳ್ಳುವ ರಸ್ತೆಗಳ ಕಾಮಗಾರಿಗಳ ಗುಣಮಟ್ಟಗಳು ಕಳಪೆಯಾಗಿರುತ್ತವೆ ಎನ್ನುವುದನ್ನು ರಾಜ್ಯದ ಹಿರಿಯ ಮಂತ್ರಿ ಹಾಗೂ ಮಂಗಳೂರಿನ ಸಂಸದರೂ ೨೦೧೦ ರಲ್ಲಿ ಒಪ್ಪಿಕೊಂಡಿದ್ದರು. ಈ ಸಮಸ್ಯೆಯನ್ನು ತಡೆಗಟ್ಟಲು ಪ್ರತಿಯೊಂದು ಕಾಮಗಾರಿಗಳ ಗುಣಮಟ್ಟಗಳನ್ನು ಪರಿಶೀಲಿಸುವ ಸಲುವಾಗಿ, ಸ್ಥಳೀಯ ಆಡಳಿತ ಸಂಸ್ಥೆಗಳು ಪ್ರಯೋಗಾಲಯಗಳನ್ನು ಸ್ಥಾಪಿಸಲು ಸರ್ಕಾರ ಸೂಚಿಸಿತ್ತು. ಆದರೆ ನಮಗೆ ತಿಳಿದಂತೆ ೨೦೧೦ ರಲ್ಲಿ ರಾಜ್ಯ ಸರ್ಕಾರ ನೀಡಿದ್ದ ಈ ಸೂಚನೆಯು ಇಂದಿನ ತನಕ ಅನುಷ್ಠಾನಗೊಂಡಿಲ್ಲ!.

ಕಳಪೆ ಕಾಮಗಾರಿಗಳಿಗೆ ಮೂಲ ಕಾರಣವೆನಿಸಿರುವ ಭ್ರಷ್ಟಾಚಾರದೊಂದಿಗೆ ಇತರ ನಿರ್ದಿಷ್ಟ ಕಾರಣಗಳನ್ನು ನಿಗ್ರಹಿಸಲು ಪ್ರಾಮಾಣಿಕ ಪ್ರಯತ್ನವನ್ನು ನಡೆಸಿದಲ್ಲಿ, ಬಹುತೇಕ ರಸ್ತೆಗಳ ಕಾಮಗಾರಿಗಳ ಗುಣಮಟ್ಟ ಹೆಚ್ಚುವುದರೊಂದಿಗೆ, ನಮ್ಮ ರಸ್ತೆಗಳು ಸುದೀರ್ಘಕಾಲ ಬಾಳ್ವಿಕೆ ಬರುವ ಸಾಧ್ಯತೆಗಳಿವೆ.  

ಸಮಸ್ಯೆ- ಕಾರಣಗಳು 

ಸಾಮಾನ್ಯವಾಗಿ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಅನುಷ್ಠಾನಿಸುವ ರಸ್ತೆ ಕಾಮಗಾರಿಗಳ ಅಂದಾಜುಪಟ್ಟಿಯನ್ನು ಲೋಕೋಪಯೋಗಿ ಇಲಾಖೆಯ ದರಪಟ್ಟಿಯ ಆಧಾರದ ಮೇಲೆ ಸಿದ್ಧಪಡಿಸಲಾಗುತ್ತದೆ. ತದನಂತರ ಈ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗುತ್ತದೆ. ಈ ದರಪಟ್ಟಿಯನ್ನು ಅಪರೂಪದಲ್ಲೊಮ್ಮೆ ಪರಿಷ್ಕರಿಸುವುದರಿಂದ, ಹೆಚ್ಚಿನ ಗುತ್ತಿಗೆದಾರರು ಅಂದಾಜುಪಟ್ಟಿಯಲ್ಲಿ ನಮೂದಿಸಿದ ದರಗಳಿಗಿಂತಲೂಶೇ.೧೦ ರಿಂದ ೩೦ ರಷ್ಟು ಅಧಿಕ ದರಗಳನ್ನು ತಮ್ಮ ಬಿಡ್ಡುಗಳಲ್ಲಿ ನಮೂದಿಸುತ್ತಾರೆ. ಅಂತಿಮವಾಗಿ ಅತ್ಯಂತ ಕಡಿಮೆ ದರವನ್ನು ನಮೂದಿಸಿದ ಗುತ್ತಿಗೆದಾರರಿಗೆ ಕಾಮಗಾರಿಗಳ ಗುತ್ತಿಗೆಯನ್ನು ನೀಡಲಾಗುತ್ತದೆ. ಕೆಲ ಸಂದರ್ಭಗಳಲ್ಲಿ ಗುತ್ತಿಗೆದಾರರೊಂದಿಗೆ ಈ ದರಗಳ ಬಗ್ಗೆ ಒಂದಿಷ್ಟು ಚೌಕಾಶಿಯನ್ನೂ ಮಾಡಲಾಗುತ್ತದೆ. 

ವಿಶೇಷವೆಂದರೆ ಗುತ್ತಿಗೆಯನ್ನು ಪಡೆದುಕೊಳ್ಳಲು ಮತ್ತು ಕಾಮಗಾರಿಗಳು ಮುಗಿದ ಬಳಿಕ ಅಂತಿಮ ಬಿಲ್ಲುಗಳ ಮೊತ್ತವನ್ನು ಪಡೆದುಕೊಳ್ಳಲು ಗುತ್ತಿಗೆದಾರರು ವಿವಿಧ ಹಂತಗಳಲ್ಲಿ ಸಂಬಂಧಿತ ವ್ಯಕ್ತಿಗಳಿಗೆ ನಿರ್ದಿಷ್ಟ ಪ್ರಮಾಣದ " ರುಷುವತ್ತು " ನೀಡಲೇಬೇಕಾಗುತ್ತದೆ!. ಹರಸಾಹಸವನ್ನೇ ನಡೆಸಿ ಗುತ್ತಿಗೆಯನ್ನು ಪಡೆದುಕೊಳ್ಳಲು ಯಶಸ್ವಿಯಾಗುವ ಗುತ್ತಿಗೆದಾರರು, ಗುತ್ತಿಗೆಯ ಮೊತ್ತದ ಶೇ.೭.೫ ರಷ್ಟನ್ನು ಧಾರಣಾ ಮೊತ್ತವನ್ನಾಗಿ ಇರಿಸಬೇಕಾಗುವುದು. ಕಾಮಗಾರಿಗಳು ಪರಿಪೂರ್ಣಗೊಂಡ ಬಳಿಕ, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಕಂಡುಬರಬಹುದಾದ ಲೋಪದೋಷಗಳನ್ನು ಗುತ್ತಿಗೆದಾರರು ಸರಿಪಡಿಸಿದಲ್ಲಿ ಮಾತ್ರ ಈ ಮೊತ್ತವನ್ನು ಅವರಿಗೆ ಮರಳಿಸಲಾಗುತ್ತದೆ. 

ನಿಗದಿತ ಕಾಮಗಾರಿಗಳು ಮುಗಿದ ಬಳಿಕ ಥರ್ಡ್ ಪಾರ್ಟಿ ಇನ್ಸ್ಪೆಕ್ಷನ್ ವರದಿಯಲ್ಲಿ ಕಾಮಗಾರಿಗಳ ಗುಣಮಟ್ಟಗಳು ತೃಪ್ತಿಕರವಾಗಿವೆ ಎಂದು ಉಲ್ಲೇಖಿಸಿದಲ್ಲಿ ಮಾತ್ರ ಗುತ್ತಿಗೆದಾರರ ಅಂತಿಮ ಬಿಲ್ಲಿನ ಮೊತ್ತವನ್ನು ಪಾವತಿಸಲಾಗುತ್ತದೆ. ಆದರೆ ಇದಕ್ಕೂ ಮುನ್ನ ಗುತ್ತಿಗೆಯ ಮೊತ್ತದ ಶೇ. ೨.೨೫ ರಷ್ಟು ಆದಾಯ ತೆರಿಗೆ,ಶೇ. ೪ ರಷ್ಟು ಕಾಮಗಾರಿ ಗುತ್ತಿಗೆ ತೆರಿಗೆ(ಮಾರಾಟ ತೆರಿಗೆ), ಕಾಮಗಾರಿಗಳಲ್ಲಿ ಬಳಸಿರುವ ಜಲ್ಲಿ, ಮರಳು ಹಾಗೂ ಶಿಲೆಕಲ್ಲು ಇತ್ಯಾದಿಗಳ ಪ್ರಮಾಣಕ್ಕೆ ಅನುಗುಣವಾಗಿ ರಾಜಧಾನ, ಮತ್ತು ಶೇ.೧ ರಷ್ಟು ಮೊತ್ತವನ್ನು ಕಾರ್ಮಿಕರ ಕಲ್ಯಾಣ ನಿಧಿಗಳ ಸಲುವಾಗಿ ಕಡಿತ ಮಾಡಲಾಗುತ್ತದೆ. ಇವೆಲ್ಲವುಗಳನ್ನು ಸೇರಿಸುವಾಗ ಕಡಿತವಾಗುವ ಹಣದ ಪ್ರಮಾಣವು ಶೇ.೧೦ ರಷ್ಟಾಗುವುದು. ಇದರೊಂದಿಗೆ ಗುತ್ತಿಗೆದಾರರು ಇರಿಸಿದ ಧಾರಣಾ ಮೊತ್ತವನ್ನು ಸೇರಿಸಿದಲ್ಲಿ, ಇದು ಶೇ. ೧೭.೫ ರಷ್ಟಾಗುವುದು. ಇದಲ್ಲದೇ ಕಾಮಗಾರಿಗಳಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮತ್ತು ಇತರ ಸಿಬಂದಿಗಳಿಗೆ ಪಾವತಿಸಲೇ ಬೇಕಾದ " ದಕ್ಷಿಣೆ" ಯ ಮೊತ್ತವು ಸುಮಾರು ಶೇ.೩೦ ರಷ್ಟಿದ್ದು, ಇವೆಲ್ಲವುಗಳ ಒಟ್ಟು ಮೊತ್ತವು ಶೇ.೪೭.೫೦ ಆಗುತ್ತದೆ!. 

ಈ ರೀತಿಯಲ್ಲಿ ತಮಗೆ ದೊರೆಯಲಿರುವ ಗುತ್ತಿಗೆಯ ಮೊತ್ತದ ಶೇ.೪೭.೫೦ ರಷ್ಟು ಮೊತ್ತವನ್ನು( ಶೇ.೭.೫೦ ಮರಳಿ ದೊರೆತಲ್ಲಿ ಈ ಮೊತ್ತ ಶೇ.೪೦ ರಷ್ಟಾಗುವುದು) ಕಳೆದುಕೊಳ್ಳಲಿರುವ ಗುತ್ತಿಗೆದಾರರು, ಉತ್ತಮ ಗುಣಮಟ್ಟದ ಹಾಗೂ ಸುದೀರ್ಘಕಾಲ ಬಾಳ್ವಿಕೆ ಬರುವಂತಹ ರಸ್ತೆಗಳನ್ನು ನಿರ್ಮಿಸುವುದಾದರೂ ಹೇಗೆಂದು ಊಹಿಸುವುದು ಕೂಡಾ ಜನಸಾಮಾನ್ಯರಿಗೆ ಅಸಾಧ್ಯವೆನಿಸುವುದು. ಇವೆಲ್ಲಾ ವಿಚಾರಗಳ ಬಗ್ಗೆ ನಮ್ಮನ್ನಾಳುವವರಿಗೆ ಸಾಕಷ್ಟು ಮಾಹಿತಿ ತಿಳಿದಿದೆ. ಅಂತೆಯೇ ಇದನ್ನು ಪರಿಹರಿಸುವ ರಾಜಕೀಯ ಇಚ್ಛಾಶಕ್ತಿಯ ಕೊರತೆಯೂ ಇದೆ. ಇವೆಲ್ಲಾ ಕಾರಣಗಳಿಂದಾಗಿ ನಮ್ಮ ದೇಶದ ಪುಟ್ಟ ಹಳ್ಳಿಯಿಂದ ಹಿಡಿದು ದಿಲ್ಲಿಯ ತನಕ ಅನುಷ್ಠಾನಿಸಲ್ಪಡುತ್ತಿರುವ ಬಹುತೇಕ ರಸ್ತೆ ಕಾಮಗಾರಿಗಳ ಗುಣಮಟ್ಟಗಳು ಕಳಪೆಯಾಗಿ ಇರುತ್ತವೆಯೇ ಹೊರತು ಉತ್ತಮವಾಗಿ ಇರುವುದಿಲ್ಲ ಎನ್ನುವುದರಲ್ಲಿ ಸಂದೇಹವಿಲ್ಲ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 




No comments:

Post a Comment