Thursday, June 26, 2014

Street dogs and rabies





 ಬೀದಿನಾಯಿಗಳ ಕಾಟ : ಜನರಿಗೆ ಪ್ರಾಣಸಂಕಟ 

ನಮ್ಮ ರಾಜ್ಯದಲ್ಲಿ ಬೀದಿನಾಯಿಗಳ ಮಾರಕ ದಾಳಿಗೆ ಹಲವಾರು ಮಕ್ಕಳು ಬಲಿಯಾದ ಘಟನೆಗಳನ್ನು ಬಹುತೇಕ ಜನರು ಈಗಾಗಲೇ ಮರೆತುಬಿಟ್ಟಿದ್ದಾರೆ. ಸ್ಥಳೀಯ ಸಂಸ್ಥೆಗಳು ವರ್ಷಂಪ್ರತಿ ನಡೆಸುತ್ತಿದ್ದ "ಶ್ವಾನ ಸಂಹಾರ " ವನ್ನು ನಿಲ್ಲಿಸಿದ ಬಳಿಕ, ಬೀದಿನಾಯಿಗಳ ಸಂತತಿ ಅನಿಯಂತ್ರಿತವಾಗಿ ವೃದ್ಧಿಸಿರುವುದೇ ಇದಕ್ಕೆ ಕಾರಣವೆಂದು ಜನಸಾಮಾನ್ಯರು ದೂರುತ್ತಾರೆ. ಆದರೆ ತಾವು ಸಾಕಿದ ಹೆಣ್ಣು ನಾಯಿಯು ಮರಿ ಹಾಕಿದ ಬಳಿಕ, ಇವುಗಳಲ್ಲಿನ ಹೆಣ್ಣು ಮರಿಗಳನ್ನು ಬೀದಿಪಾಲು ಮಾಡುವ ಹಾಗೂ ಬೀದಿನಾಯಿಗಳಿಗೆ ತಮ್ಮಲ್ಲಿ ಉಳಿದಿರುವ ಆಹಾರವನ್ನು ನೀಡಿ ಸಲಹುವ ನಾಗರಿಕರೂ, ಈ ಸಮಸ್ಯೆಗೆ ನೇರವಾಗಿ ಹೊಣೆಗಾರರು ಎಂದಲ್ಲಿ ತಪ್ಪೆನಿಸಲಾರದು. ಅಂತೆಯೇ, ತಾವು ಸಾಕಿದ ಹೆಣ್ಣು ನಾಯಿಗೆ ಪಶುವೈದ್ಯರ ಸಲಹೆಯನ್ನು ಪಡೆದು ಸಂತತಿ ನಿಯಂತ್ರಣಕ್ಕೆ ಉಪಯುಕ್ತವೆನಿಸುವ ಮಾತ್ರೆಗಳನ್ನು ನೀಡದ ಜನರ ಬೇಜವಾಬ್ದಾರಿಯೂ, ಬೀದಿನಾಯಿಗಳ ಸಂತತಿ ಹೆಚ್ಚುತ್ತಿರಲು ಮತ್ತೊಂದು ಪ್ರಮುಖ ಕಾರಣವೆನಿಸಿದೆ. 

ಅದೇನೇ ಇರಲಿ, ಭಾರತದಲ್ಲಿ ಸುಮಾರು ೨೫ ರಿಂದ ೩೦ ಲಕ್ಷ ಬೀದಿನಾಯಿಗಳು ಇವೆ ಎಂದು ಅಂದಾಜು ಮಾಡಲಾಗಿದ್ದು, ವರ್ಷಂಪ್ರತಿ ಸುಮಾರು ೩೦ ರಿಂದ ೫ ಲಕ್ಷಕ್ಕೂ ಅಧಿಕ ಜನರು "ನಾಯಿಕಡಿತ " ಕ್ಕೆ ಒಳಗಾಗುತ್ತಾರೆ. ಅದೇ ರೀತಿಯಲ್ಲಿ ವಿಶ್ವಾದ್ಯಂತ " ಹುಚ್ಚುನಾಯಿ" ಗಳ ಕಡಿತದಿಂದಾಗಿ ಉದ್ಭವಿಸುವ ಮಾರಕ "ರೇಬೀಸ್" ಕಾಯಿಲೆಗೆ ಬಲಿಯಾಗುತ್ತಿರುವ ಶೇ.೫೦ ರಷ್ಟು ಜನರು ಭಾರತೀಯರೇ ಆಗಿದ್ದಾರೆ ಎನ್ನುವ ವಿಚಾರ ಪ್ರಾಯಶಃ ನಿಮಗೂ ತಿಳಿದಿರಲಾರದು. ಏಕೆಂದರೆ ಪುಟ್ಟ ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದರೂ, ಹುಚ್ಚುನಾಯಿ ಕಡಿತದಿಂದ ಮೃತಪಟ್ಟವರ ಬಗ್ಗೆ ಮಾಧ್ಯಮಗಳಲ್ಲಿ ಅವಶ್ಯಕ ಅಂಕಿಅಂಶಗಳು ಪ್ರಕಟವಾಗುವುದಿಲ್ಲ. 

ಪರಿಹಾರ ಕಾಣದ ಸಮಸ್ಯೆ 

ಹಲವಾರು ವರ್ಷಗಳ ಹಿಂದೆ ಪ್ರಾಣಿದಯಾ ಸಂಘಗಳ ತೀವ್ರ ಪ್ರತಿಭಟನೆಯಿಂದಾಗಿ ದೇಶಾದ್ಯಂತ ಸ್ಥಳೀಯ ಸಂಸ್ಥೆಗಳು ಕನಿಷ್ಠ ವರ್ಷದಲ್ಲಿ ಒಂದುಬಾರಿ ನಡೆಸುತ್ತಿದ್ದ ಬೀದಿನಾಯಿಗಳ ಸಾಮೂಹಿಕ ಸಂಹಾರ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿತ್ತು. ಬೀದಿನಾಯಿಗಳ ಸಂತತಿ ಅನಿಯಂತ್ರಿತವಾಗಿ ಹೆಚ್ಚಲು ಇದೊಂದು ಪ್ರಮುಖ ಕಾರಣವೆನಿಸಿತ್ತು. 

ಬೀದಿನಾಯಿಗಳ ಸಂಖ್ಯೆಯೊಂದಿಗೆ ರೇಬೀಸ್ ಕಾಯಿಲೆಯನ್ನು ನಿಯಂತ್ರಿಸಬಲ್ಲ ಯೋಜನೆಗಳನ್ನು ಸರ್ಕಾರ- ಸ್ಥಳೀಯ ಸಂಸ್ಥೆಗಳು ಅನುಷ್ಠಾನಿಸುವುದು ಸುಲಭಸಾಧ್ಯವೇನಲ್ಲ. ಜೊತೆಗೆ ನಾಗರಿಕರ ಪರಿಪೂರ್ಣ ಸಹಕಾರವಿಲ್ಲದೇ ಇಂತಹ ಯೋಜನೆಗಳು ಯಶಸ್ವಿಯಾಗುವ ಸಾಧ್ಯತೆಗಳೂ ಇಲ್ಲ. 

ನಿಜ ಹೇಳಬೇಕಿದ್ದಲ್ಲಿ ಬೀದಿನಾಯಿಗಳ ಸಂತತಿ ನಿಯಂತ್ರಣದ ಕಾರ್ಯಕ್ರಮದ ಅನುಷ್ಠಾನವು ದುಬಾರಿ ಹಾಗೂ ಕಷ್ಟಸಾಧ್ಯವಾಗಿದೆ. ಬೀದಿನಾಯಿಗಳಿಗೆ ಪ್ರತಿವರ್ಷ ರೇಬೀಸ್ ನಿರೋಧಕ ಚುಚ್ಚುಮದ್ದನ್ನು ನೀಡುವುದು ಅಸಾಧ್ಯವೂ ಹೌದು. ಇದೇ ಕಾರಣದಿಂದಾಗಿ ರೇಬೀಸ್ ವ್ಯಾಧಿಯನ್ನು ತದೆಗತ್ತುವುದೂ ಕಷ್ಟಸಾಧ್ಯ. ಇದರೊಂದಿಗೆ ಅನೇಕ ಜನರು ತಾವು ಸಾಕಿರುವ ನಾಯಿಗಳಿಗೆ ಈ ಚುಚ್ಚುಮದ್ದನ್ನು ಕೊಡಿಸದೇ ಇರುವುದು ಕೂಡಾ ಈ ವ್ಯಾಧಿಯ ಹರಡುವಿಕೆಗೆ ಕಾರಣವೆನಿಸುತ್ತಿದೆ. ಈ ಕಾಯಿಲೆಗೆ ಅಸಂಖ್ಯ ಜನರು ಬಲಿಯಾಗುತ್ತಿರಲು, ಜನಸಾಮಾನ್ಯರ ಅಜ್ನಾನದೊಂದಿಗೆ ರೇಬೀಸ್ ಪ್ರತಿರೋಧಕ ಲಸಿಕೆಯ ದುಬಾರಿ ಬೆಲೆಯೂ ಕಾರಣವೆನಿಸಿದೆ. 


 ನಿಜ ಹೇಳಬೇಕಿದ್ದಲ್ಲಿ ಯಾವುದೇ ನಾಯಿ ಕಚ್ಚಿದರೂ ರೇಬೀಸ್ ನಿರೋಧಕ ಚುಚ್ಚುಮದ್ದನ್ನು ಪಡೆದುಕೊಳ್ಳುವುದು ನಿಶ್ಚಿತವಾಗಿಯೂ ಜೀವರಕ್ಷಕ ಎನಿಸುವುದು. ಕಾರಣಾಂತರಗಳಿಂದ ಚುಚ್ಚುಮದ್ದನ್ನು ಪಡೆಯದೇ ರೇಬೀಸ್ ವ್ಯಾಧಿ ಉದ್ಭವಿಸಿದಲ್ಲಿ, ರೋಗಿಯು ಬದುಕಿ ಉಳಿಯುವ ಸಾಧ್ಯತೆಗಳೇ ಇರುವುದಿಲ್ಲ. ಏಕೆಂದರೆ ರೇಬೀಸ್ ಕಾಯಿಲೆ ಉದ್ಭವಿಸಿದ ಬಳಿಕ, ಇದನ್ನು ಗುಣಪಡಿಸಬಲ್ಲ ಔಷದಗಳೇ ಲಭ್ಯವಿಲ್ಲ. ಆದರೂ ಈ ಕಾಯಿಲೆಯನ್ನು ಗುಣಪಡಿಸುವುದಾಗಿ ಹೇಳುವ ಹಾಗೂ ಗಿಡಮೂಲಿಕೆಗಳಿಂದ ತಯಾರಿಸಿದ "ಹಳ್ಳಿ ಮದ್ದು" ಪ್ರಯೋಗಿಸಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟವರ ಸಂಖ್ಯೆಯೂ ಕಡಿಮೆಯೇನಿಲ್ಲ!. ಇದೇ ಕಾರಣದಿಂದಾಗಿ ಮಾರಕ ರೇಬೀಸ್ ವ್ಯಾಧಿಯನ್ನು ತಡೆಗಟ್ಟಲು " ರೇಬೀಸ್ ನಿರೋಧಕ ವ್ಯಾಕ್ಸೀನ್" ಚುಚ್ಚುಮದ್ದನ್ನು ಹೊರತುಪಡಿಸಿ, ಅನ್ಯ ಚಿಕಿತ್ಸೆಗಳನ್ನು ಪ್ರಯೋಗಿಸುವುದು ನಿಶ್ಚಿತವಾಗಿಯೂ ರೋಗಿಯ ಮರಣಕ್ಕೆ ಕಾರಣವೆನಿಸಬಲ್ಲದು. 

ಮಾರಕ ರೇಬೀಸ್ 

ಸಾಮಾನ್ಯವಾಗಿ ಹುಚ್ಚು ನಾಯಿ ( ಹಾಗೂ ಇತರ ಕೆಲ ಪ್ರಾಣಿಗಳ ) ಕಡಿತದಿಂದ ಉದ್ಭವಿಸುವ ಭಯಾನಕ ಹಾಗೂ ಮಾರಕ ರೇಬೀಸ್ ಕಾಯಿಲೆಯನ್ನು ಕ್ರಿ.ಪೂ. ೩೦೦ ರಲ್ಲೇ ಅರಿಸ್ಟಾಟಲ್ ಗುರುತಿಸಿದ್ದರು. ಅಂತೆಯೇ ರೇಬೀಸ್ ನಿರೋಧಕ ಚುಚ್ಚುಮದ್ದನ್ನು ಲೂಯಿ ಪ್ಯಾಶ್ಚರ್ ೧೮೮೫ ರಲ್ಲಿ ಮೊದಲ ಬಾರಿಗೆ ಆಲ್ಬರ್ಟ್ ಮೈಸ್ಟರ್ ಎನ್ನುವ ವ್ಯಕ್ತಿಯ ಮೇಲೆ ಪ್ರಯೋಗಿಸಿದ್ದರು. ಈ ಚುಚ್ಚುಮದ್ದಿನ ಪರಿಣಾಮವಾಗಿ ರೇಬೀಸ್ ಕಾಯಿಲೆಯಿಂದ ಪಾರಾಗಿದ್ದ ಆಲ್ಬರ್ಟ್, ೧೯೪೦ ರ ತನಕ ಪ್ಯಾಸ್ಚರ್ ಇನ್ಸ್ಟಿಟ್ಯೂಟ್ ನ ಉದ್ಯೋಗಿಯಾಗಿದ್ದರು. 

ಸಾಮಾನ್ಯವಾಗಿ ಹುಚ್ಚುನಾಯಿ ಕಚ್ಚಿದ ಬಳಿಕ ರೇಬೀಸ್ ವ್ಯಾಧಿಯ ಲಕ್ಷಣಗಳು ಪ್ರತ್ಯಕ್ಷವಾಗಲು ಕೆಲವಾರು ದಿನಗಳಿಂದ ಹಿಡಿದು ಹಲವಾರು ತಿಂಗಳುಗಳೇ ತಗಲಬಹುದು. ಆದರೆ ಕಚ್ಚಿದ ನಾಯಿಯು ನಿಶ್ಚಿತವಾಗಿಯೂ ರೇಬೀಸ್ ಪೀಡಿತವಾಗಿದ್ದಲ್ಲಿ, ೭ ರಿಂದ ೧೦ ದಿನಗಳಲ್ಲಿ ನಿಸ್ಸಂದೇಹವಾಗಿಯೂ ಸಾಯುವುದು. 

ವ್ಯಾಧಿಪೀಡಿತ ನಾಯಿಯ ಜೊಲ್ಲಿನ ಮೂಲಕ ಹರಡುವ ವೈರಸ್ ಗಳು, ಕಡಿತಕ್ಕೆ ಒಳಗಾದ ಮನುಷ್ಯ ಅಥವಾ ಪ್ರಾಣಿಯ ಮೆದುಳು ಮತ್ತು ನರಮಂಡಲಗಳಿಗೆ ತೀವ್ರ ಸ್ವರೂಪದ ಹಾನಿಯನ್ನು ಉಂಟುಮಾಡುತ್ತವೆ. ಸೋಂಕು ಪೀಡಿತ ವ್ಯಕ್ತಿಗೆ ಪ್ರಾರಂಭಿಕ ಹಂತದಲ್ಲಿ ಜ್ವರ ಹಾಗೂ ಮೈಕೈ ನೋವುಗಳಂತಹ ಲಕ್ಷಣಗಳು ಕಂಡುಬರುತ್ತವೆ. ಮುಂದಿನ ಹಂತದಲ್ಲಿ ತೀವ್ರ ಜ್ವರ, ಮಾನಸಿಕ ಗೊಂದಲ ಹಾಗೂ ನಾಯಿ ಕಚ್ಚಿದ ಭಾಗದಲ್ಲಿ ನೋವು ಮತ್ತು ಚುಚ್ಚಿದಂತಹ ಸಂವೇದನೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ. 

ರೇಬೀಸ್ ರೋಗ ಲಕ್ಷಣಗಳು ಹುಚ್ಚುನಾಯಿ ಕಡಿತಕ್ಕೆ ಒಳಗಾದ ೧ ರಿಂದ ೮ ವಾರಗಳಲ್ಲಿ ತಲೆದೋರುತ್ತವೆ. ರೇಬೀಸ್ ವ್ಯಾಧಿಯನ್ನು ತಡೆಗಟ್ಟಬಲ್ಲ ವ್ಯಾಕ್ಸೀನ್ ಗಳನ್ನು ಹುಚ್ಚುನಾಯಿ ಕಚ್ಚಿದ ಕೂಡಲೇ ಪಡೆದುಕೊಳ್ಳದೇ ಇದ್ದಲ್ಲಿ, ರೇಬೀಸ್ ಉದ್ಭವಿಸಿ ಉಲ್ಬಣಿಸುವುದರಿಂದ ರೋಗಿಯು ದಾರುಣವಾಗಿ ಮೃತಪಡುವುದರಲ್ಲಿ ಸಂದೇಹವಿಲ್ಲ. ಶಾಲಾ ವಿದ್ಯಾರ್ಥಿಗಳಿಗೂ ತಿಳಿದಿರುವ ಈ ವಿಚಾರದ ಬಗ್ಗೆ ಸಾಕಷ್ಟು ಜನರ ಮನದಲ್ಲಿ ಅನೇಕ ರೀತಿಯ ತಪ್ಪು ಕಲ್ಪನೆಗಳಿವೆ. 

ರೇಬೀಸ್ ರೋಗ ಉಲ್ಬಣಿಸಿದ ಸಂದರ್ಭದಲ್ಲಿ ರೋಗಪೀಡಿತ ವ್ಯಕ್ತಿಯಲ್ಲಿ "ಹೈಡ್ರೋಫೋಬಿಯಾ " ಅರ್ಥಾತ್ ನೀರಿನ ಭಯ ದೊಂದಿಗೆ ಇನ್ನಿತರ ರೋಗ ಲಕ್ಷಣಗಳು ಪ್ರಕಟಗೊಳ್ಳುತ್ತವೆ. ಹಾಗೂ ವ್ಯಾಧಿ ಉದ್ಭವಿಸಿದ ಕೆಲವೇ ದಿನಗಳಲ್ಲಿ ರೋಗಿ ಮೃತಪಡುತ್ತಾನೆ. 


ರೇಬಿಸ್ ನಿಂದ ರಕ್ಷಣೆ 

ರೇಬಿಸ್ ಕಾಯಿಲೆಯಿಂದ ಮನುಷ್ಯನನ್ನು ರಕ್ಷಿಸಬಲ್ಲ ಲಸಿಕೆಗಳು ನಮ್ಮ ದೇಶದಲ್ಲಿ ಲಭ್ಯವಿದೆ. ಯಾವುದೇ ನಾಯಿ ಕಚ್ಚಿದ ಅಥವಾ ಪರಚಿದ ಸಂದರ್ಭದಲ್ಲಿ ಉಂಟಾದ ಗಾಯವನ್ನು ಸಾಬೂನು ಮತ್ತು ಅಯೋಡಿನ್ ಯುಕ್ತ ಕ್ರಿಮಿನಾಶಕ ದ್ರಾವನದಿಂದ ತೊಳೆದು ಶುಚಿಗೊಳಿಸಬೇಕು. ಬಳಿಕ ವೈದ್ಯರನ್ನು ಸಂದರ್ಶಿಸಿ, ಒಂದು ಟೆಟನಸ್ ಟಾಕ್ಸಾಯ್ದ್ ಇಂಜೆಕ್ಷನ್, ಒಂದು ಇಮ್ಮ್ಯುನೋಗ್ಲೋಬ್ಯುಲಿನ್ ಮತ್ತು ರೇಬಿಸ್ ಪ್ರತಿರೋಧಕ ಇಂಜೆಕ್ಷನ್ ಗಳನ್ನು ಆದಷ್ಟು ಶೀಘ್ರ ಪಡೆದುಕೊಳ್ಳಬೇಕು. ನಿಗದಿತ ದಿನಗಳಲ್ಲಿ ಮೂರು ರೇಬಿಸ್ ಪ್ರತಿರೋಧಕ ಇಂಜೆಕ್ಷನ್ ಪಡೆದುಕೊಂಡ ಬಳಿಕವೂ ಕಚ್ಚಿದ ನಾಯಿ ಬದುಕಿ ಉಳಿದಲ್ಲಿ ಚಿಕಿತ್ಸೆಯನ್ನು ನಿಲ್ಲಿಸಬಹುದು. ಆದರೆ ಬೀದಿನಾಯಿಗಳು ಕಚ್ಚಿದಲ್ಲಿ ಐದು ಚುಚ್ಚುಮದ್ದುಗಳನ್ನು ಪಡೆದುಕೊಳ್ಳುವುದು ಸುರಕ್ಷಿತ ಹಾಗೂ ಜೀವರಕ್ಷಕವೆನಿಸುವುದು. 

ರೇಬಿಸ್ ನಿಂದ ರಕ್ಷಣೆಯನ್ನು ಪಡೆದುಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಮೂರು ರೇಬಿಸ್ ಇಂಜೆಕ್ಷನ್ ಪಡೆದಿರುವವರು, ಆಕಸ್ಮಿಕವಾಗಿ ನಾಯಿಕಡಿತಕ್ಕೆ ಈಡಾದಲ್ಲಿ ಇಮ್ಮ್ಯುನೋಗ್ಲೋಬ್ಯುಲಿನ್ ಇಂಜೆಕ್ಷನ್ ಪಡೆಯಬೇಕಿಲ್ಲ. ಜೊತೆಗೆ ಐದು ರೇಬಿಸ್ ಪ್ರತಿರೋಧಕ ಇಂಜೆಕ್ಷನ್ ಗಳಿಗೆ ಬದಲಾಗಿ, ಕೇವಲ ಎರಡು ಇಂಜೆಕ್ಷನ್ ಗಳನ್ನು ಪಡೆದುಕೊಂಡರೆ ಸಾಕಾಗುತ್ತದೆ. 

ಇವೆಲ್ಲಕ್ಕೂ ಮಿಗಿಲಾಗಿ ತಾವು ಸಾಕಿದ ನಾಯಿಗಳಿಗೆ ವರ್ಷಂಪ್ರತಿ ತಪ್ಪದೇ ರೇಬಿಸ್ ನಿರೋಧಕ ಇಂಜೆಕ್ಷನ್ ಕೊಡಿಸಿದಲ್ಲಿ, ಈ ವ್ಯಾಧಿಯ ಹಾವಳಿಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸಬಹುದಾಗಿದೆ. ಇದರೊಂದಿಗೆ ಮನೆಮಂದಿಯೆಲ್ಲರೂ ಈ ವ್ಯಾಧಿಯಿಂದ ರಕ್ಷಣೆಯನ್ನು ಪಡೆಯಲು ಮೂರು ರೇಬಿಸ್ ಪ್ರತಿರೋಧಕ ಇಂಜೆಕ್ಷನ್ ಗಳನ್ನು ಪಡೆದುಕೊಳ್ಳುವುದು ಅತ್ಯಂತ ಪರಿಣಾಮಕಾರಿ ಉಪಕ್ರಮವೆನಿಸುವುದು. 

ಕೆಲ ದಶಕಗಳ ಹಿಂದೆ ನಮ್ಮ ದೇಶದಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿದ್ದ, ರೋಗಿಗಳ ಹೊಕ್ಕುಳಿನ ಸುತ್ತಲೂ ಚುಚ್ಚಲಾಗುತ್ತಿದ್ದೆ " ಸೆಂಪಲ್ ವ್ಯಾಕ್ಸೀನ್" ಅನ್ನು ಕೆಲ ವರ್ಷಗಳ ಹಿಂದೆ ನಿಷೇಧಿಸಲಾಯಿತು. ಏಕೆಂದರೆ ಈ ಲಸಿಕೆಯ ಅಡ್ಡ ಹಾಗೂ ದುಷ್ಪರಿಣಾಮಗಳಿಂದಾಗಿ ಮತ್ತು ತೀವ್ರ ಸ್ವರೂಪದ ಪ್ರತಿಕ್ರಿಯೆಗಳಿಂದಾಗಿ ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದರು. ಇದೇ ಕಾರಣದಿಂದಾಗಿ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಹೂಡಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ಪರಿಣಾಮವಾಗಿ, ಈ ವ್ಯಾಕ್ಸೀನ್ ನ ಬಳಕೆಯನ್ನೇ ನಿಷೇಧಿಸಲಾಗಿತ್ತು. 

ಇದೀಗ ಬಳಕೆಯಲ್ಲಿರುವ " ಸೆಲ್ ಕಲ್ಚರ್ ವ್ಯಾಕ್ಸೀನ್" ಸುರಕ್ಷಿತವೆನಿಸಿದ್ದರೂ, ತುಸು ದುಬಾರಿಯಾಗಿರುವುದರಿಂದ ಬಡವರಿಗೆ ಹೊರೆಯಾಗಿ ಪರಿಣಮಿಸುತ್ತಿದೆ. ಆದರೆ ಇದನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿರುವ ವ್ಯಾಕ್ಸೀನ್ ಚರ್ಮದ ಪದರಕ್ಕೆ ಚುಚ್ಚಬಹುದಾಗಿದ್ದು, ಇದರ ಪ್ರಮಾಣವೂ ಅತ್ಯಂತ ಕಡಿಮೆಯಾಗಿದೆ. ತತ್ಪರಿಣಾಮವಾಗಿ ಒಂದು ವ್ಯಾಕ್ಸೀನ್ ನನ್ನು ಹಲವಾರು ರೋಗಿಗಳಿಗೆ ನೀಡಬಹುದಾಗಿದೆ. 

ಕೊನೆಯ ಮಾತು 

ನೀವು ಸಾಕಿರುವ ಹೆಣ್ಣು ನಾಯಿಗೆ ವರ್ಷಂಪ್ರತಿ ರೇಬಿಸ್ ನಿರೋಧಕ ಚುಚ್ಚುಮದ್ದನ್ನು ತಪ್ಪದೇ ಕೊಡಿಸಿ. ಜೊತೆಗೆ ಪಶುವೈದ್ಯರ ಸಲಹೆಯನ್ನು ಪಡೆದು ಗರ್ಭ ನಿರೋಧಕ ಮಾತ್ರೆಗಳನ್ನು ನೀಡುವ ಮೂಲಕ, ಅನಾವಶ್ಯಕ ಗರ್ಭಧಾರಣೆಯನ್ನು ತಡೆಗಟ್ಟಿ. ಇಂತಹ ಉಪಕ್ರಮಗಳಿಂದ ರೇಬಿಸ್ ವ್ಯಾಧಿಯನ್ನು ಮತ್ತು ಬೀದಿನಾಯಿಗಳ ಸಂಖ್ಯೆಯನ್ನು ನಿಶ್ಚಿತವಾಗಿಯೂ ತಡೆಗಟ್ಟಬಹುದಾಗಿದೆ. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೮-೧೧-೨೦೦೭ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ. 


No comments:

Post a Comment