Sunday, June 29, 2014

DOCTORS DAY- SPECIAL





 ಆರೋಗ್ಯ ರಕ್ಷಣೆ : ವೈದ್ಯರ ಹೊಣೆ 

ಸಹಸ್ರಾರು ವರ್ಷಗಳಿಂದ ಸಮಾಜದ ಸ್ವಾಸ್ಥ್ಯ ಸಂರಕ್ಷಣೆಯ ಮಹತ್ತರವಾದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ ವೈದ್ಯರನ್ನು ಕೃತಜ್ಞತೆಯಿಂದ ಸ್ಮರಿಸುತ್ತಿದ್ದ ನಮ್ಮ ಪೂರ್ವಜರು, " ವೈದ್ಯೋ ನಾರಾಯಣೋ ಹರಿ" ಎನ್ನುವ ಮಾತುಗಳನ್ನು ಅಕ್ಷರಶಃ ಪರಿಪಾಲಿಸುತ್ತಿದ್ದರು. ಅರ್ಥಾತ್ ವೈದ್ಯರನ್ನು ಪೂಜ್ಯ ಭಾವನೆಯಿಂದ ಗೌರವಿಸುತ್ತಿದ್ದರು. ಬಡವ ಬಲ್ಲಿದನೆಂಬ ಭೇದವಿಲ್ಲದೇ, ಅನ್ಯಥಾ ಶರಣಂ ನಾಸ್ತಿ ಎಂದು ತಮ್ಮಲ್ಲಿ ಚಿಕಿತ್ಸೆಗಾಗಿ ಬರುವ ಪ್ರತಿಯೊಬ್ಬ ರೋಗಿಯ ಕಾಯಿಲೆಯನ್ನು ನಿಖರವಾಗಿ ಪತ್ತೆಹಚ್ಚಿ, ಅತ್ಯುತ್ತಮ ಚಿಕಿತ್ಸೆಯನ್ನು ನೀಡಿ ಸಾಂತ್ವನಿಸುವ ವೈದ್ಯರಿಗೆ ಇಂದಿಗೂ ನಮ್ಮ ಸಮಾಜದಲ್ಲಿ ವಿಶೇಷವಾದ ಸ್ಥಾನಮಾನಗಳಿವೆ. 

ಜನಸಾಮಾನ್ಯರ ಆರೋಗ್ಯದ ರಕ್ಷಣೆ ಮತ್ತು ವ್ಯಾಧಿಪೀಡಿತರ ಚಿಕಿತ್ಸೆಗಾಗಿ ಹಗಲಿರುಳು ಶ್ರಮಿಸುವ ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಧ್ಯಯನ ಮತ್ತು ಸಂಶೋಧನೆಗಳ ಫಲವಾಗಿ, ನಮ್ಮ ಆರೋಗ್ಯದ ಗುಣಮಟ್ಟಗಳು ಹೆಚ್ಚಿವೆ. ಜೊತೆಗೆ ಭಾರತೀಯರ ಸರಾಸರಿ ಆಯುಷ್ಯದ ಪ್ರಮಾಣವೂ ನಿಸ್ಸಂದೇಹವಾಗಿ ವೃದ್ಧಿಸುತ್ತಿದೆ. 

ಮನುಕುಲವನ್ನು ಕಾಡುವ ಅಸಂಖ್ಯ ವ್ಯಾಧಿಗಳಿಗೆ ನೂರಾರು ಕಾರಣಗಳಿದ್ದು, ಇವುಗಳಲ್ಲಿ ಅನುವಂಶಿಕತೆ, ರೋಗಕಾರಕ ಸೂಕ್ಷ್ಮಾಣು ಜೀವಿಗಳು, ಜನ್ಮದತ್ತ ತೊಂದರೆಗಳು ಹಾಗೂ ವೈಕಲ್ಯಗಳು, ನಮ್ಮ ಸುತ್ತಮುತ್ತಲ ಪರಿಸರ, ನಾವು ಸೇವಿಸುವ ಗಾಳಿ, ನೀರು ಮತ್ತು ಆಹಾರಗಳ ಗುಣಮಟ್ಟ, ಮಾನಸಿಕ ಒತ್ತಡಗಳು ಮತ್ತು ದುಶ್ಚಟಗಳು ಪ್ರಮುಖವಾಗಿವೆ. 

ಅದೇ ರೀತಿಯಲ್ಲಿ ಅಧಿಕತಮ ವ್ಯಾಧಿಗಳನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಹಾಗೂ ಶಾಶ್ವತ ಪರಿಹಾರವಿಲ್ಲದ ಕಾಯಿಲೆಗಳನ್ನು ಸಮರ್ಪಕವಾಗಿ ನಿಯಂತ್ರಣದಲ್ಲಿ ಇರಿಸಬಲ್ಲ ಔಷದಗಳು ಲಭ್ಯವಿದೆ. ಆದರೆ ಕೆಲವೊಂದು ಕಾಯಿಲೆಗಳನ್ನು ಚಿಕಿತ್ಸಿಸಬಲ್ಲ, ನಿಯಂತ್ರಿಸಬಲ್ಲ ಹಾಗೂ ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳೇ ಲಭ್ಯವಿಲ್ಲ ಎನ್ನುವುದು ನಿಮಗೂ ತಿಳಿದಿರಬೇಕು. ಆದರೂ ಇಂತಹ ಕಾಯಿಲೆಗಳನ್ನು ತಡೆಗಟ್ಟಬಲ್ಲ ಲಸಿಕೆಗಳು ಮತ್ತು ಗುಣಪಡಿಸಬಲ್ಲ ಔಷದಗಳನ್ನು ಸಂಶೋಧಿಸುವ ಪ್ರಯತ್ನ ನಡೆಯುತ್ತಲೇ ಇದೆ. 

ಆದರೆ ಸೂಕ್ತ ಲಸಿಕೆ ಅಥವಾ ಔಷದಗಳು ಲಭ್ಯವಿಲ್ಲದ ವ್ಯಾಧಿಗಳಿಂದ ಪೀಡಿತ ರೋಗಿಗಳಿಗೆ ಧೈರ್ಯ ತುಂಬಿ, ಅವರ ನೋವನ್ನು ಕಡಿಮೆಮಾಡುವ ಹಾಗೂ ಬದುಕನ್ನು ಒಂದಿಷ್ಟು ಸಹನೀಯವನ್ನಾಗಿಸುವ ಪ್ರಯತ್ನವನ್ನು ವೈದ್ಯರು ಸದಾ ಮಾಡುತ್ತಾರೆ. ಅಹರ್ನಿಶಿ ತಮ್ಮ ರೋಗಿಗಳ ಹಿತರಕ್ಷಣೆಗಾಗಿ ದುಡಿಯುವ ವೈದ್ಯರು, ಅನೇಕ ಸಂದರ್ಭಗಳಲ್ಲಿ ತಮ್ಮ ಆರೋಗ್ಯವನ್ನೇ ನಿರ್ಲಕ್ಷಿಸಿದ ಉದಾಹರಣೆಗಳೂ ಸಾಕಷ್ಟಿವೆ. 

ವಿಶ್ವಾಸವೇ ಸಂಜೀವಿನಿ 

ವೈದ್ಯರು ಮತ್ತು ರೋಗಿಗಳ ನಡುವಿನ ಅವಿನಾಭಾವ ಸಂಬಂಧವು " ವಿಶ್ವಾಸ " ಎನ್ನುವ ಭದ್ರವಾದ ತಳಹದಿಯ ಮೇಲೆ ಸ್ಥಿರವಾಗಿ ನಿಂತಿರುತ್ತದೆ. ಬಹುತೇಕ ಸಂದರ್ಭಗಳಲ್ಲಿ ಈ ಅಚಲ ವಿಶ್ವಾಸವೇ ರೋಗಿಯ ಕಾಯಿಲೆಯನ್ನು ಗುಣಪಡಿಸುವಲ್ಲಿ ಯಾವುದೇ ಚಿಕಿತ್ಸೆಗಿಂತಲೂ ಅಧಿಕ ಪರಿಣಾಮವನ್ನು ಬೀರುತ್ತದೆ. ಜನಸಾಮಾನ್ಯರು "ವೈದ್ಯರ ಕೈಗುಣ " ಎನ್ನುವುದು ನಿಜಕ್ಕೂ ರೋಗಿಗೆ ವೈದ್ಯರ ಮೇಲಿರುವ ವಿಶ್ವಾಸವೇ ಹೊರತು ಬೇರೇನೂ ಅಲ್ಲ!. ಈ ರೀತಿಯ ವಿಶ್ವಾಸವನ್ನು ಗಳಿಸಲು ಹಲವಾರು ವರ್ಷಗಳೇ ಬೇಕಾಗುವುದಾದರೂ, ಇದನ್ನು ಕಳೆದುಕೊಳ್ಳಲು ಅತ್ಯಲ್ಪ ಸಮಯ ಸಾಕಾಗುತ್ತದೆ. 

ಚಿಕಿತ್ಸೆ ಎಂತು, ಏನು?

ಸಾಮಾನ್ಯವಾಗಿ ತಮ್ಮಲ್ಲಿ ಚಿಕಿತ್ಸೆಗಾಗಿ ಬರುವ ಅನಾರೋಗ್ಯ ಪೀಡಿತರನ್ನು ಕೂಲಂಕುಶವಾಗಿ ಪರೀಕ್ಷಿಸಿ, ಅವರನ್ನು ಬಾಧಿಸುತ್ತಿರುವ ವ್ಯಾಧಿಯನ್ನು ನಿಖರವಾಗಿ ಪತ್ತೆಹಚ್ಚಬೇಕಾದ ಹೊಣೆಗಾರಿಕೆ ವೈದ್ಯರ ಮೇಲಿದೆ. ಬಳಿಕ ಅತ್ಯಲ್ಪ ವೆಚ್ಚದಲ್ಲಿ ಹಾಗೂ ಅತ್ಯಂತ ಕಡಿಮೆ ಅವಧಿಯಲ್ಲಿ ಇದನ್ನು ಗುಣಪಡಿಸಲು ಅತ್ಯವಶ್ಯಕ ಎನಿಸುವಷ್ಟೇ ಔಷದಗಳನ್ನು ನೀಡಬೇಕಾಗುತ್ತದೆ. ಈ ಅಲಿಖಿತ ನಿಯಮವನ್ನು ಪರಿಪಾಲಿಸುವುದು ಪ್ರತಿಯೊಬ್ಬ ವೈದ್ಯರ ವೃತ್ತಿಧರ್ಮವೂ ಆಗಿದೆ. 

ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಕಾರಣಾಂತರಗಳಿಂದ ಹಳಸುತ್ತಿರುವ ರೋಗಿ ಮತ್ತು ವೈದ್ಯರ ಸಂಬಂಧಗಳಿಂದಾಗಿ, ಮಾನವೀಯ ಮೌಲ್ಯಗಳೇ ಕಣ್ಮರೆಯಾಗುತ್ತಿವೆ. ಪ್ರಾಯಶಃ ಇದೇ ಕಾರಣದಿಂದಾಗಿ ಕ್ಷುಲ್ಲಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೂ ಅನಾವಶ್ಯಕ ಪರೀಕ್ಷೆಗಳನ್ನು ನಡೆಸುವ ಹಾಗೂ ಅವಶ್ಯಕತೆ ಇಲ್ಲದಿದ್ದರೂ ಪ್ರಬಲ ಔಷದಗಳನ್ನು ನೀಡುವ ಪ್ರವೃತ್ತಿ ಹೆಚ್ಚುತ್ತಿದೆ. ಅಂತೆಯೇ ಅತ್ಯಂತ ಅನಿವಾರ್ಯವೆನಿಸುವ ನಿರ್ದಿಷ್ಟ ಪರೀಕ್ಷೆಯೊಂದನ್ನು ಮಾಡಿಸಲೇ ಬೇಕೆಂದ ಅಥವಾ ಸಂದರ್ಭೋಚಿತವಾಗಿ ಅನ್ಯಮಾರ್ಗವಿಲ್ಲದೇ ದುಬಾರಿ ಔಷದಗಳನ್ನು ನೀಡಿರುವ ವೈದ್ಯರನ್ನು ಸಂದೇಹದ ದೃಷ್ಟಿಯಿಂದ ನೋಡುವ ರೋಗಿಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದೆ. ತತ್ಪರಿಣಾಮವಾಗಿ ರೋಗಿ ಮತ್ತು ವೈದ್ಯರ ನಡುವಿನ ಸಂಬಂಧಗಳಲ್ಲಿ ಒಡಕುಗಳು ಮೂಡುತ್ತಿವೆ. ವೈದ್ಯಕೀಯ ಶಿಕ್ಷಣ ಮತ್ತು ವೃತ್ತಿಗಳ ವಾಣಿಜ್ಯೀಕರಣಗಳೂ ಈ ಸಮಸ್ಯೆಗೆ ಪರೋಕ್ಷವಾಗಿ ಕಾರಣವೆನಿಸಿವೆ. ಇವೆಲ್ಲಾ ಕಾರಣಗಳಿಂದಾಗಿ ರೋಗಿಗಳು ಮತ್ತು ವೈದ್ಯರ ನಡುವೆ ಪರಸ್ಪರ ಪ್ರೀತಿ,ವಿಶ್ವಾಸಗಳ ಬದಲಾಗಿ ಸಂದೇಹ ಮತ್ತು ಅವಿಶ್ವಾಸಗಳು ಕಂಡುಬರುತ್ತಿವೆ. ಈ ಅನಪೇಕ್ಷಿತ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿದಲ್ಲಿ, " ವೈದ್ಯರ ದಿನ " ದ ಆಚರಣೆಯು ಇನ್ನಷ್ಟು ಅರ್ಥಪೂರ್ಣವೆನಿಸಲಿದೆ!. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 



No comments:

Post a Comment