Tuesday, July 1, 2014

ROAD ACCIDENTS AND PREVENTION





 

 ರಸ್ತೆ ಅಪಘಾತಗಳನ್ನು ತಡೆಗಟ್ಟುವತ್ತ ಗಮನಹರಿಸಿ 

ಅಭಿವೃದ್ಧಿಪಥದಲ್ಲಿ ದಾಪುಗಾಲು ಹಾಕುತ್ತಿರುವ ನಮ್ಮ ದೇಶದಲ್ಲಿ ಅಸಂಖ್ಯ ಪ್ರಜೆಗಳ ಅಕಾಲಿಕ ಮರಣಕ್ಕೆ ಕಾರಣಗಳೂ ಹಲವಾರು. ಅದರಲ್ಲೂ ಗಂಭೀರ ಹಾಗೂ ಮಾರಕ ಆರೋಗ್ಯದ ಸಮಸ್ಯೆಗಳು ಸಹಸ್ರಾರು ಜನರ ಮರಣಕ್ಕೆ ಕಾರಣವೆನಿಸುತ್ತಿವೆ. ಅದರಲ್ಲೂ ಸಾಂಕ್ರಾಮಿಕವಾಗಿ ಹರಡುವ ಮತ್ತು ಹರಡದ ಅನೇಕ ವಿಧದ ಕಾಯಿಲೆಗಳಿಗೆ ಅನೇಕ ಜನರು ಬಲಿಯಾಗುತ್ತಿದ್ದಾರೆ. ಅದೇ ರೀತಿಯಲ್ಲಿ ನಮ್ಮ ದೇಶದಲ್ಲಿ ಪ್ರತಿನಿತ್ಯ ಸಂಭವಿಸುತ್ತಿರುವ ರಸ್ತೆ ಅಪಘಾತಗಳಿಂದಾಗಿಯೂ ಸಹಸ್ರಾರು ಜನರು ಅಸುನೀಗುವುದರೊಂದಿಗೆ, ಮತ್ತಷ್ಟು ಜನರು ಶಾಶ್ವತ ಅಂಗವೈಕಲ್ಯಕ್ಕೆ ಈಡಾಗುತ್ತಿದ್ದಾರೆ. ಆದರೆ ಅತ್ಯಂತ ಗಂಭೀರವೆಂದು ಪರಿಗಣಿಸಬಹುದಾದ ಈ ಸಮಸ್ಯೆಯನ್ನು ದೇಶದ "ಆರೋಗ್ಯ ಕಾರ್ಯಸೂಚಿ" ಯಲ್ಲಿ ನಮೂದಿಸದೇ ಇರುವುದು ಮಾತ್ರ ನಂಬಲು ಅಸಾಧ್ಯವೆನಿಸುತ್ತದೆ. 

ಇತ್ತೀಚಿಗೆ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದ ಗೋಪಿನಾಥ ಮುಂಡೆಯವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂದರ್ಭದಲ್ಲಿ ಈ ವಿಚಾರದ ಬಗ್ಗೆ ಒಂದಿಷ್ಟು ಚರ್ಚೆ ನಡೆದಿದ್ದರೂ, ಅವರು ಹಿರಿಯ ರಾಜಕಾರಣಿ ಮತ್ತು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದುದೇ ಇದಕ್ಕೆ ಕಾರಣವೆನಿಸಿತ್ತು. ಅಪರೂಪದಲ್ಲಿ ಇಂತಹ ಘಟನೆಗಳ ಬಗ್ಗೆ ಮಾಧ್ಯಮಗಳು ಗಮನ ಸೆಳೆದರೂ, ಸರ್ಕಾರದ ಮಟ್ಟದಲ್ಲಿ ರಸ್ತೆ ಅಪಘಾತಗಳು ಮತ್ತು ಇವುಗಳಿಗೆ ಬಲಿಯಾಗುತ್ತಿರುವವರ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದಲ್ಲಿ ತಪ್ಪೆನಿಸಲಾರದು. 

ಗಂಭೀರ ಸಮಸ್ಯೆ 

ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಮಟ್ಟದ " ಆರೋಗ್ಯ ಕಾರ್ಯಸೂಚಿ"ಯಲ್ಲಿ ರಸ್ತೆ ಅಪಘಾತಗಳಿಗೆ ಆಗ್ರ ಸ್ಥಾನವನ್ನು ನೀಡಿದೆ. ಸಂಸ್ಥೆಯು ಹೇಳುವಂತೆ ವಿಶ್ವಾದ್ಯಂತ ಸಂಭವಿಸುತ್ತಿರುವ ರಸ್ತೆ ಅಪಘಾತಗಳು, ೧೫ ರಿಂದ ೨೯ ವರ್ಷ ವಯಸ್ಸಿನ ಯುವಜನರ ಮರಣಕ್ಕೆ ಕಾರಣವೆನಿಸುತ್ತಿದೆ. ವಿಶೇಷವೆಂದರೆ ಈ ಸಮಸ್ಯೆಯು ಅತ್ಯಲ್ಪ ಅಥವಾ ಮಧ್ಯಮ ಆದಾಯವಿರುವ ಮತ್ತು ಅಲ್ಪ ಪ್ರಮಾಣದ ವಾಹನಗಳು ಇರುವ ದೇಶಗಳಲ್ಲೇ ಸಂಭವಿಸುತ್ತಿದ್ದು, ಇದರ ಪ್ರಮಾಣವು ಶೇ.೯೦ ರಷ್ಟಿದೆ!. ಅರ್ಥಾತ್, ನಾವಿಂದು ಸುರಕ್ಷಿತ ಹಾಗೂ ನಿರಾತಂಕವಾಗಿ ವಾಹನಗಳನ್ನು ಚಲಾಯಿಸಬಲ್ಲ ಸಮರ್ಪಕ ರಸ್ತೆಗಳು ಮತ್ತು ಕಾನೂನುಗಳು ಇಲ್ಲದಿದ್ದರೂ, ವಾಹನಗಳನ್ನು ಚಲಾಯಿಸುತ್ತಿರುವುದೇ ಇದಕ್ಕೆ ಮೂಲ ಕಾರಣವೆನಿಸಿದೆ. ಹಾಗೂ ಈ ವಿಲಕ್ಷಣ ಸಮಸ್ಯೆಗೆ ಬಲಿಯಾಗುತ್ತಿರುವವರಲ್ಲಿ ಶೇ.೫೦ ರಷ್ಟು ಮಂದಿ ಪಾದಚಾರಿಗಳು, ದ್ವಿಚಕ್ರ ವಾಹನ ಚಾಲಕರು ಮತ್ತು ಸೈಕಲ್ ಸವಾರರೇ ಆಗಿದ್ದಾರೆ!. 

ನಮ್ಮ ದೇಶದ ರಸ್ತೆಗಳಲ್ಲಂತೂ ಪಾದಚಾರಿಗಳು ನಿರಾತಂಕವಾಗಿ ನಡೆದಾಡುವ ಹಾಗೂ ಸೈಕಲ್ ಸವಾರರು ನಿರ್ಭೀತಿಯಿಂದ ಸವಾರಿ ಮಾಡುವ ಸಾಧ್ಯತೆಗಳೇ ಇಲ್ಲ. ಏಕೆಂದರೆ ನಾವಿಂದು ನಿರ್ಮಿಸುತ್ತಿರುವ ನೂತನ ರಸ್ತೆಗಳು ಇದಕ್ಕೆ ಆಸ್ಪದವನ್ನೇ ನೀಡುವುದಿಲ್ಲ. ಅದೇ ರೀತಿಯಲ್ಲಿ ಪಾದಚಾರಿಗಳು, ಅದರಲ್ಲೂ ಪುಟ್ಟ ಮಕ್ಕಳು, ಮಹಿಳೆಯರು ಮತ್ತು ವಯೋವೃದ್ಧರು, ಯಾವುದೇ ರಸ್ತೆಗಳನ್ನು ಸುರಕ್ಷಿತವಾಗಿ ದಾಟಲು ಆಗುತ್ತಿಲ್ಲ. ನಮ್ಮ ರಸ್ತೆಗಳ ಸ್ಥಿತಿಗತಿಗಳು ಮತ್ತು ಅತಿಯಾದ ವಾಹನ ದಟ್ಟಣೆಗಳೊಂದಿಗೆ, ವಾಹನ ಚಾಲಕರು ಪಾದಚಾರಿಗಳನ್ನು ಉಪೇಕ್ಷಿಸುತ್ತಿರುವುದು ಈ ಸಮಸ್ಯೆಗೆ ಕಾರಣವೆನಿಸಿದೆ. 

ಪರಿಹಾರವೇನು?

ನಮ್ಮ ದೇಶದಲ್ಲಿ ವರ್ಷಂಪ್ರತಿ ನಿಯಮಿತವಾಗಿ " ವಾಹನಗಳ ಗಣತಿ" ಯನ್ನು ನಡೆಸಲಾಗುತ್ತಿದ್ದರೂ, ಇವುಗಳ ವರದಿಯನ್ನು ಆಧರಿಸಿ, ವಾಹನಗಳ ಸಂಖ್ಯೆ ಮತ್ತು ತೂಕಗಳಿಗೆ ಅನುಗುಣವಾಗಿ ಸೂಕ್ತ ಧಾರಣಾ ಸಾಮರ್ಥ್ಯವಿರುವ ರಸ್ತೆಗಳನ್ನು ನಿರ್ಮಿಸುವ ಅಥವಾ ಅಸ್ತಿತ್ವದಲ್ಲಿರುವ ರಸ್ತೆಗಳನ್ನು ಪುನರ್ ನವೀಕರಿಸುವತ್ತ ಕೇಂದ್ರ-ರಾಜ್ಯ ಸರಕಾರಗಳು ಗಮನಹರಿಸಬೇಕು.ಜೊತೆಗೆ ಪ್ರತಿಯೊಂದು ರಸ್ತೆಗಳನ್ನು ವರ್ಷಂಪ್ರತಿ ಸಮರ್ಪಕವಾಗಿ ಸುಸ್ಥಿತಿಯಲ್ಲಿ ಇರುವಂತೆ ನಿರ್ವಹಿಸಬೇಕು. ಅಂತೆಯೇ ಯಾವುದೇ ವಾಹನ ಅಪಘಾತದಲ್ಲಿ ಸಾಕಷ್ಟು ಜನರು ಬಲಿಯಾದ ಸಂದರ್ಭದಲ್ಲಿ,  ಈ ಅಪಘಾತದ ಕಾರಣವನ್ನು ಪತ್ತೆಹಚ್ಚುವ ಮೂಲಕ ಇದರ ಪುನರಾವರ್ತನೆ ಆಗದಂತೆ ಅವಶ್ಯಕ ಕ್ರಮಗಳನ್ನು  ಕೈಗೊಳ್ಳಬೇಕು. ಜೊತೆಗೆ ರಸ್ತೆ ಅಪಘಾತಗ ಸಂಖ್ಯೆಯನ್ನು ನಿಯಂತ್ರಿಸಬಲ್ಲ ಮತ್ತು ಇವುಗಳಿಗೆ ಬಲಿಯಾಗುತ್ತಿರುವ ಅಮಾಯಕರ ಸಂಖ್ಯೆಯನ್ನು ಕಡಿಮೆಮಾಡಬಲ್ಲ ಇನ್ನಿತರ ಕಟ್ಟುನಿಟ್ಟಿನ ಕ್ರಮಗಳನ್ನು ಕೇಂದ್ರ- ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸಬೇಕು. 

ಇದಲ್ಲದೇ ದೇಶದ ವಿವಿಧ ರಾಜ್ಯಗಳಲ್ಲಿನ ಪ್ರತಿಯೊಂದು ನಗರ- ಪಟ್ಟಣಗಳಲ್ಲಿನ ರಸ್ತೆಗಳ ಇಕ್ಕೆಲಗಳಲ್ಲಿ ಸೈಕಲ್ ಸವಾರರಿಗೆ ಮತ್ತು ಪಾದಚಾರಿಗಳಿಗೆ ಪ್ರತ್ಯೇಕವಾದ " ಹಕ್ಕಿನ ಹಾದಿ " ಯನ್ನು ನಿರ್ಮಿಸುವತ್ತ ತತ್ಸಂಬಂಧಿತ ಇಲಾಖೆಗಳು ಗಮನಹರಿಸಬೇಕಾಗಿದೆ. ಅದೇ ರೀತಿಯಲ್ಲಿ ಮೋಟಾರು ವಾಹನಗಳಿಗೆ ವೇಗದ ಮಿತಿಯನ್ನು ನಿಗದಿಸಿ, ಇದನ್ನು ಹಾಗೂ ಅನ್ಯ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಚಾಲಕರಿಗೆ ದೊಡ್ಡ ಮೊತ್ತದ ದಂಡವನ್ನು ವಿಧಿಸಬೇಕು. ಅತಿವೇಗದ, ನಿರ್ಲಕ್ಷ್ಯದ ಮತ್ತು ಮದ್ಯಸೇವಿಸಿ ವಾಹನಗಳನ್ನು ಚಲಾಯಿಸಿ ಅಪಘಾತವೆಸಗಿದ ಚಾಲಕರ ವಾಹನ ಚಾಲನಾ ಪರವಾನಿಗೆಯನ್ನೇ ರದ್ದುಪಡಿಸುವ ಮತ್ತು ದೊಡ್ಡ ಮೊತ್ತದ ದಂಡವನ್ನು ವಿಧಿಸುವಂತೆ, ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿಯನ್ನು ಮಾಡಬೇಕು. ಚಾಲಕರ ತಪ್ಪಿನಿಂದಾಗಿ ಪ್ರಾಣವನ್ನೇ ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಅಪಘಾತಕ್ಕೆ ಕಾರಣವೆನಿಸಿದ ಚಾಲಕರೇ ನೀಡಬೇಕೆನ್ನುವ ಕಾನೂನನ್ನು ಜಾರಿಗೊಳಿಸಬೇಕು. ಈ ರೀತಿಯ ಉಪಕ್ರಮಗಳನ್ನು ಕೈಗೊಂಡಲ್ಲಿ ನಮ್ಮ ದೇಶದಲ್ಲಿ ರಸ್ತೆ ಅಪಘಾತಗಳ ಮತ್ತು ಇವುಗಳಿಗೆ ಬಲಿಯಾಗುವವರ ಸಂಖ್ಯೆಗಳು ತಕ್ಕ ಮಟ್ಟಿಗೆ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ. ಆದರೆ ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವ ಇಚ್ಛಾಶಕ್ತಿ ನಮ್ಮನ್ನಾಳುವವರಲ್ಲಿ ಇದೆಯೇ ಎನ್ನುವುದೇ " ಮಿಲಯನ್ ಡಾಲರ್ 'ಪ್ರಶ್ನೆಯಾಗಿದೆ!.

ಡಾ,ಸಿ.ನಿತ್ಯಾನಂದ ಪೈ,ಪುತ್ತೂರು   






No comments:

Post a Comment