Tuesday, July 22, 2014

FAKE DOCTORS !





 ನಕಲಿ ವೈದ್ಯರಿದ್ದಾರೆ ಜೋಕೆ !

ನಾಳೆ ವಿಶ್ವ ವೈದ್ಯರ ದಿನಾಚರಣೆ. ಜನರು ತಮ್ಮ ಆರೋಗ್ಯದ ರಕ್ಷಣೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ವೈದ್ಯ ಸಮುದಾಯಕ್ಕೆ ಕೃತಜ್ಞತೆಗಳನ್ನು ಸಲ್ಲಿಸುವ ದಿನ. ಈ ಸಂದರ್ಭದಲ್ಲಿ ಯಾವುದೇ ವೈದ್ಯಕೀಯ ಅರ್ಹತೆಗಳೇ ಇಲ್ಲದಿದ್ದರೂ, ತಜ್ಞ ವೈದ್ಯರಂತೆ ಸೋಗು ಹಾಕಿ, ಜನಸಾಮಾನ್ಯರನ್ನು ವಂಚಿಸಿ ಸುಲಿಗೆ ಮಾಡುವ ನಕಲಿ ವೈದ್ಯರ ಬಗ್ಗೆ ಅರಿವನ್ನು ಉಂಟುಮಾಡುವ ಪ್ರಯತ್ನವೇ ಈ ಲೇಖನ. 
-----------           ------------           ------------         ------------

ಶಾಶ್ವತ ಪರಿಹಾರವೇ ಇಲ್ಲದ ಅನೇಕ ವ್ಯಾಧಿಗಳನ್ನು ಗುಣಪಡಿಸುವ ಆಶ್ವಾಸನೆಗಳಿರುವ ಹಲವಾರು ಜಾಹೀರಾತುಗಳನ್ನು ನೀವು ಕಂಡಿರಲೇಬೇಕು. ದಾಂಪತ್ಯ ಸಮಸ್ಯೆಗಳಿಗೆ ಯಶಸ್ವೀ ಚಿಕಿತ್ಸೆ, ಮಧುಮೇಹ ರೋಗಿಗಳಿಗೆ ಇನ್ನು ನಿಶ್ಚಿಂತೆ, ಆಸ್ತಮಾ ಗುಣವಾಗುವುದು ಹಾಗೂ ಬೈಪಾಸ್ ಸರ್ಜರಿ ತಡೆಗಟ್ಟಿರಿ ಎನ್ನುವ ಆಕರ್ಷಕ ತಲೆಬರಹಗಳ ಆಹೀರಾತುಗಳು, ದುರ್ಬಲ ಮನಸ್ಸಿನ ವ್ಯಕ್ತಿಗಳನ್ನು ಆಯಸ್ಕಾಂತದಂತೆ ಆಕರ್ಷಿಸುತ್ತವೆ. 

ಪದವಿ ಹೀನ ವೈದ್ಯರು 

ಮಾಧ್ಯಮಗಳಲ್ಲಿ ಪ್ರಕಟವಾಗುವ ಇಂತಹ ಜಾಹೀರಾತುಗಳಲ್ಲಿ ನಮೂದಿಸಿರುವ ವೈದ್ಯರ ಹೆಸರಿನ ಹಿಂದೆ "ಡಾ " ಎನ್ನುವ ಪದ ಇದ್ದರೂ, ಇವರ ಹೆಸರಿನ ಮುಂದೆ ನಮೂದಿಸಲೇ ಬೇಕಾದ ಪದವಿ ಹಾಗೂ ಸ್ನಾತಕೋತ್ತರ ಪದವಿಗಳು ಮತ್ತು ನೋಂದಣಿ ಸಂಖ್ಯೆಯನ್ನು ನೀವೆಂದಾದರೂ ಕಂಡಿದ್ದೀರಾ?. ಅಸಲಿ ಪದವಿಯನ್ನೇ ಗಳಿಸಿರದ ಈ ನಕಲಿ ವೈದ್ಯರು, ವೈದ್ಯಕೀಯ ಮಂಡಳಿಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಸಾಧ್ಯವಿಲ್ಲ. ಇದೇ ಕಾರಣದಿಂದಾಗಿ ಇವರ ಹೆಸರಿನ ಮುಂದೆ ಪದವಿಗಳಾಗಲೀ, ನೋಂದಣಿ ಸಂಖ್ಯೆಯಾಗಲೀ ಇರುವುದಿಲ್ಲ. 

ತಾವು ಚಿಕಿತ್ಸೆ ನೀಡುವ ವ್ಯಾಧಿಗಳಿಗೆ ಅನುಗುಣವಾಗಿ ಲೈಂಗಿಕ ತಜ್ಞ, ಆಸ್ತಮಾ ತಜ್ಞ ಎಂದು ಸ್ವಯಂ ಘೋಷಿಸಿಕೊಳ್ಳುವ ಖದೀಮರು, ನಿಜಕ್ಕೂ ವೈದ್ಯಕೀಯ ಪದವೀಧರರೇ ಆಲ್ಲ. ಆದರೂ ಇಂತಹ ನಕಲಿ ವೈದ್ಯರು ತಮ್ಮ ಹೆಸರಿನ ಮುಂದೆ ಆರ್. ಎಂ. ಪಿ ಅಥವಾ ಗವರ್ಮೆಂಟ್ ರೆಜಿಸ್ಟರ್ಡ್ ಎಂದು ತಪ್ಪದೆ ನಮೂದಿಸುತ್ತಾರೆ. ನಿಜ ಹೇಳಬೇಕಿದ್ದಲ್ಲಿ ಆರ್.ಎಂ.ಪಿ ಎಂದರೆ ರೆಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟಿಶನರ್ ಅರ್ಥಾತ್, ತನ್ನ ವೃತ್ತಿಯನ್ನು ನಡೆಸಲು ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಸಿರುವ ಪದವೀಧರ ವೈದ್ಯ!. 

ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ರಾಜಾರೋಷವಾಗಿ ತಮ್ಮ ಧಂದೆಯನ್ನು ನಡೆಸುವ ಈ ಮಂದಿ, ಕೇಂದ್ರ ಸರ್ಕಾರದ ಗದ್ದುಗೆಯಿರುವ ದೆಹಲಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವುದು ಸತ್ಯ. ಅದೇ ರೀತಿಯಲ್ಲಿ ಯಾವುದೇ ಪ್ರಾಥಮಿಕ ಅರ್ಹತೆಗಳಿಲ್ಲದ ವ್ಯಕ್ತಿಗಳಿಗೂ ( ನಕಲಿ ) ವೈದ್ಯಕೀಯ ಪದವಿಗಳನ್ನು ನೀಡುವ ನಕಲಿ ವಿಶ್ವವಿದ್ಯಾಲಯಗಳು ನಮ್ಮ ದೇಶದಲ್ಲಿ ಸಾಕಷ್ಟಿವೆ. ಇಂತಹ ವಿಶ್ವವಿದ್ಯಾಲಯಗಳು ನೀಡುವ ಕೇವಲ ಒಂದು ಪುಟದ "ಪದವಿ ಪ್ರಮಾಣ ಪತ್ರ " ದಲ್ಲಿ ಹಲವಾರು ಪದವಿಗಳನ್ನು ನಮೂದಿಸುವ ಭಂಡತನ ಮಾತ್ರ, ಭಾರತದ ಯಾವುದೇ ಅಸಲಿ ವಿಶ್ವವಿದ್ಯಾಲಯಗಳಿಗೆ ಇಲ್ಲ!. 

ಜನಸಾಮಾನ್ಯರ ಅಜ್ನಾನವನ್ನೇ ಬಂಡವಾಳವನ್ನಾಗಿಸಿ ತಮ್ಮ ಧಂದೆಯನ್ನು ನಡೆಸುವ ನಕಲಿ ವೈದ್ಯರು, ಸಾಮಾನ್ಯವಾಗಿ ಆಯ್ದುಕೊಳ್ಳುವುದು ಶಾಶ್ವತ ಪರಿಹಾರವೇ ಇಲ್ಲದ ವ್ಯಾಧಿಗಳನ್ನೇ ಎನ್ನುವುದು ಗಮನಾರ್ಹ. 

ಬಹುತೇಕ ವಿದ್ಯಾವಂತರಿಗೆ ತಿಳಿದಿರುವಂತೆ ಮಧುಮೇಹ (ಡಯಾಬೆಟೆಸ್) , ಅಧಿಕ ರಕ್ತದ ಒತ್ತಡ, ಆಸ್ತಮಾ, ಕೆಲ ವಿಧದ ಕ್ಯಾನ್ಸರ್ ಹಾಗೂ ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ವೈದ್ಯಕೀಯ ಸಂಶೋಧಕರು ಇಂದಿನ ತನಕ ಪತ್ತೆಹಚ್ಚಿಲ್ಲ. ಆದರೂ ನಕಲಿ ವೈದ್ಯರು ಇಂತಹ ಕಾಯಿಲೆಗಳನ್ನು ನಿಶ್ಚಿತವಾಗಿ ಗುಣಪಡಿಸುವ " ಆಶ್ವಾಸನೆ" ಯನ್ನು ನೀಡುತ್ತಾರೆ. 

ಉದಾಹರಣೆಗೆ ನಮ್ಮ ಶರೀರದಲ್ಲಿರುವ ಮೇದೋಜೀರಕ ಗ್ರಂಥಿಯು ಸ್ವಾಭಾವಿಕವಾಗಿ ಸ್ರವಿಸುವ "ಇನ್ಸುಲಿನ್" ಚೋದನಿಯ ಪ್ರಮಾಣವು ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ನಶಿಸಿದಾಗ ಮಧುಮೇಹ ವ್ಯಾಧಿ ಉದ್ಭವಿಸುವುದು. ಈ ರೀತಿಯಲ್ಲಿ ಕುಂಠಿತವಾಗಿರುವ ಅಥವಾ ಸಂಪೂರ್ಣವಾಗಿ ನಶಿಸಿರುವ ಇನ್ಸುಲಿನ್ ನ ಉತ್ಪಾದನೆಯನ್ನು ಮತ್ತೆ ಪುನಶ್ಚೇತನಗೊಳಿಸಬಲ್ಲ ಔಷದಗಳೇ ಇಲ್ಲ. ಹಾಗೂ ಇದೇ ಕಾರಣದಿಂದಾಗಿ ಮಧುಮೇಹ ವ್ಯಾಧಿಗೆ ಶಾಶ್ವತ ಪರಿಹಾರವೇ ಇಲ್ಲ. 

ಆದರೆ ನಕಲಿ ವೈದ್ಯರು ಮಾತ್ರ ಈ ವ್ಯಾಧಿಯನ್ನು ಖಚಿತವಾಗಿ ಗುಣಪಡಿಸುವುದಾಗಿ ಭರವಸೆಯನ್ನು ನೀಡುತ್ತಾರೆ. ಇಂತಹ ಚಿಕಿತ್ಸೆಯನ್ನು ನೀಡುವ ನಕಲಿ ವೈದ್ಯನೊಬ್ಬ ಹೇಳುವಂತೆ ಆತನ ಚಿಕಿತ್ಸೆಯನ್ನು ಪ್ರಾರಂಭಿಸಿದಂತೆಯೇ, ನೀವು ಈಗಾಗಲೇ ಸೇವಿಸುತ್ತಿರುವ ಮಾತ್ರೆಗಳು ಅಥವಾ ಚುಚ್ಚಿಸಿಕೊಳ್ಳುತ್ತಿರುವ ಇನ್ಸುಲಿನ್ ನ ಪ್ರಮಾಣವನ್ನು ಕಡಿಮೆ ಮಾಡುತ್ತಾ ಬಂದು, ಅಂತಿಮವಾಗಿ ಇವುಗಳನ್ನು ಸಂಪೂರ್ಣವಾಗಿ ನಿಲ್ಲಿಸಬಹುದಾಗಿದೆ. ಆದರೆ ಇಂತಹ ಪ್ರಯೋಗಗಳನ್ನು ನೀವು ಪ್ರಯತ್ನಿಸಿದಲ್ಲಿ, ಅಂತಿಮವಾಗಿ ನೀವು ಉಸಿರಾಡುವುದನ್ನೇ ನಿಲ್ಲಿಸುವ ಸಾಧ್ಯತೆಗಳಿವೆ!. 

ಕೆಲವರ್ಷಗಳ ಹಿಂದೆ " ಬೈಪಾಸ್ ಸರ್ಜರಿ ತಡೆಗಟ್ಟಿರಿ " ಎನ್ನುವ ಜಾಹೀರಾತಿನಲ್ಲಿ ಎಂಜಿಯೋಗ್ರಫಿ, ಎಂಜಿಯೋಪ್ಲಾಸ್ಟಿ, ಸ್ಟೆಂಟ್ ಮತ್ತು ಬೈಪಾಸ್ ಸರ್ಜರಿಗಳನ್ನು ತಡೆಗಟ್ಟಲು ಮತ್ತು ನಿಮ್ಮ ಹೃದಯದಲ್ಲಿರುವ ಅಡೆತಡೆಗಳನ್ನು ನಿವಾರಿಸಲು ಡಾ. ........ ಇವರ ಚಿಕಿತ್ಸೆಯನ್ನು ಪಡೆಯಿರಿ ಎಂದು ಪ್ರಕಟಿಸಲಾಗುತ್ತಿತ್ತು. ಜೊತೆಗೆ ಚಿಕಿತ್ಸೆಗೆ ಮುನ್ನ ಮತ್ತು ಅನಂತರ ಎನ್ನುವ ತಲೆಬರಹದೊಂದಿಗೆ ಎರಡು ಹೃದಯಗಳ ಚಿತ್ರವನ್ನೂ ಪ್ರಕಟಿಸಲಾಗುತ್ತಿತ್ತು. ಮೊದಲ ಚಿತ್ರದಲ್ಲಿ (ಚಿಕಿತ್ಸೆಗೆ ಮುನ್ನ) ಹೃದಯದ ಗಾತ್ರ ತುಸು ದೊಡ್ಡದಾಗಿದ್ದು, ಎರಡನೆಯ ಚಿತ್ರದಲ್ಲಿ (ಚಿಕಿತ್ಸೆಯ ಬಳಿಕ) ಹೃದಯದ ಗಾತ್ರ ಒಂದಿಷ್ಟು ಚಿಕ್ಕದಾಗಿರುತ್ತಿತ್ತು. ಈ ಜಾಹೀರಾತನ್ನು ನೀಡಿದ್ದ ನಕಲಿ ವೈದ್ಯನಿಗೆ ಹೃದ್ರೋಗಗಳ ಪ್ರಾಥಮಿಕ ಜ್ಞಾನವೇ ಇಲ್ಲದಿರುವುದನ್ನು ಈ ಚಿತ್ರಗಳೇ ಸ್ಪಷ್ಟಪಡಿಸುತ್ತಿದ್ದವು. ಜೊತೆಗೆ ಎಂಜಿಯೋಗ್ರಾಂ ಪರೀಕ್ಷೆಯನ್ನು ರಕ್ತನಾಳಗಲ್ಲಿನ ಅಡಚಣೆ ಅಥವಾ ಇತರ ಸಮಸ್ಯೆಗಳನ್ನು ಪತ್ತೆಹಚ್ಚುವ ಸಲುವಾಗಿ ನಡೆಸುವುದಾಗಿದ್ದು, ಇದನ್ನು "ತಡೆಗಟ್ಟುವ" ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅದೇ  ರೀತಿಯಲ್ಲಿ ಹೃದಯಕ್ಕೆ ರಕ್ತವನ್ನು ಸರಬರಾಜು ಮಾಡುವ ಕೊರೋನರಿ ರಕ್ತನಾಳಗಳಲ್ಲಿನ ಅಡಚನೆಯಿಂದಾಗಿ ಹೃದಯದ ಗಾತ್ರ ಹಿಗ್ಗುವುದಿಲ್ಲ. ಅಂತೆಯೇ ಈ ಸಮಸ್ಯೆಯ ನಿವಾರಣೆಯ ಬಳಿಕ ಹೃದಯದ ಗಾತ್ರವು ಕುಗ್ಗುವುದೂ ಇಲ್ಲ!. ಆದರೆ ಶಸ್ತ್ರಚಿಕಿತ್ಸೆಯ ಭಯವಿರುವ ಮತ್ತು ಬೈಪಾಸ್ ಸರ್ಜರಿ ಅಥವಾ ಎಂಜಿಯೋಪ್ಲಾಸ್ಟಿ ಚಿಕಿತ್ಸೆಯ ವೆಚ್ಚಗಳನ್ನು ಭರಿಸಲಾರದ ವಿದ್ಯಾವಂತರೂ, ಇಂತಹ ನಕಲಿ ವೈದ್ಯರ ಬಲೆಗೆ ಸುಲಭದಲ್ಲೇ ಬೀಳುತ್ತಾರೆ. 

ಇನ್ನು ಆಸ್ತಮಾ ಗುಣವಾಗದು ಎನ್ನುವುದನ್ನೇ ಒಪ್ಪದ ಸ್ವಯಂಘೋಷಿತ ಆಸ್ತಮಾ ತಜ್ಞನು ಒಂದೆರಡು ದಶಕಗಳ ಹಿಂದೆ ಸ್ವಯಂಸೇವಾ ಸಂಘಟನೆಗಳ ನೆರವಿನಿಂದ ರಾಜ್ಯಾದ್ಯಂತ ಅನೇಕ ನಗರಗಳಲ್ಲಿ  ನೂರಾರು ಚಿಕಿತ್ಸಾ ಶಿಬಿರಗಳನ್ನು ನಡೆಸಿದ್ದನು. ಅನೇಕ ವರ್ಷಗಳ ಹಿಂದೆ ಹೈಸ್ಕೂಲ್ ನಲ್ಲೇ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದ್ದ ಈ ತಜ್ಞನು, ಅಲ್ಪಾವಧಿಯಲ್ಲೇ ಆಸ್ತಮಾ ತಜ್ಞನಾಗಿ ಪ್ರಖ್ಯಾತನಾಗಿದ್ದನು!. ವಿಶೇಷವೆಂದರೆ ಈತನ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿದ್ದ ಸ್ವಯಂಸೇವಾ ಸಂಘಟನೆಯಲ್ಲಿ ಸುಪ್ರಸಿದ್ಧ ವೈದ್ಯರೂ ಸದಸ್ಯರಾಗಿದ್ದರೂ, ಯಾರೊಬ್ಬರೂ ಈತನ ವಿದ್ಯಾರ್ಹತೆಗಳನ್ನು ಅರಿಯುವ ಪ್ರಯತ್ನವನ್ನೇ ಮಾಡದಿದ್ದುದು ಮಾತ್ರ ನಂಬಲು ಅಸಾಧ್ಯವೆನಿಸಿತ್ತು. 

ಅಮಾಯಕ ಜನರ ಅಜ್ಞಾನವನ್ನು ದುರುಪಯೋಗಪಡಿಸಿ ಮಾನವ ಶರೀರದ ಸ್ವಾಭಾವಿಕ ಕ್ರಿಯೆಗಳನ್ನೇ ಗಂಭೀರ ಸಮಸ್ಯೆಗಳೆಂದು ಚಿತ್ರಿಸಿ, ಸಹಸ್ರಾರು ರೂಪಾಯಿಗಳನ್ನು ದೋಚುವ ನಕಲಿ " ಲೈಂಗಿಕ ತಜ್ಞರು" ನಮ್ಮ ದೇಶದಲ್ಲಿ ಸಹಸ್ರಾರು ಸಂಖ್ಯೆಯಲ್ಲಿದ್ದಾರೆ. ಹದಿಹರೆಯದಲ್ಲಿ ಸಹಜವೆನಿಸುವ ಹಸ್ತಮೈಥುನದಂತಹ ಹವ್ಯಾಸದಿಂದ ನಿಮ್ಮ ದಾಂಪತ್ಯ ಜೀವನವೇ ವಿಫಲವಾಗುವುದೆಂದು ಹೆದರಿಸುವ ನಕಲಿ ಲೈಂಗಿಕ ತಜ್ಞರು, ೧೦ ರಿಂದ ೨೦ ಸಾವಿರ ರೂ. ಗಳನ್ನು ವಸೂಲು ಮಾಡಿ ನೀಡುವ ಔಷದಗಳು ನಿಶ್ಚಿತವಾಗಿಯೂ ಅಸಲಿಯಲ್ಲ!. 

ಪ್ರಾಯಶಃ ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣವನ್ನು ಕಡ್ಡಾಯವಾಗಿ ಜಾರಿಗೊಳಿಸದೇ ಇರುವುದು, ವಿದ್ಯಾವಂತರೂ ಲೈಂಗಿಕ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚಿಸಲು ನಾಚುವುದು, ಯುವಜನರಿಗೆ ಈ ಬಗ್ಗೆ ಇರುವ ತಪ್ಪುಕಲ್ಪನೆಗಳು ಅಥವಾ ಅಜ್ಞಾನಗಳೇ ಇಂತಹ ನಕಲಿ ವೈದ್ಯರ ಧಂಧೆಗೆ ಪ್ರೋತ್ಸಾಹವನ್ನು ನೀಡುತ್ತದೆ.ಜಗತ್ಪ್ರಸಿದ್ಧ "ಕಾಮಸೂತ್ರ" ದ ಲೇಖಕನಾದ ವಾತ್ಸಾಯನನ ತವರಾದ ಭಾರತದಲ್ಲಿ, ಅದರಲ್ಲೂ ಈ ವೈಜ್ಞಾನಿಕ ಯುಗದಲ್ಲೂ ಇಂತಹ ಸಮಸ್ಯೆಗಳಿರುವುದು ನಂಬಲು ಅಸಾಧ್ಯವೆನಿಸುತ್ತದೆ. 

ಇವೆಲ್ಲಕ್ಕೂ ಮಿಗಿಲಾಗಿ ಸಂತಾನಹೀನ ದಂಪತಿಗಳಿಗೆ ಸಂತಾನ ಭಾಗ್ಯವನ್ನು ಕರುಣಿಸುವುದಾಗಿ ಭರವಸೆ ನೀಡುವ ನಕಲಿ "ಸಂತತಿ ತಜ್ಞ" ರು, ಈ ದಂಪತಿಗಳನ್ನು ಯಾವುದೇ ರೀತಿಯ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸದೇ ಹಾಗೂ ಯಾರಲ್ಲಿ ದೋಷವಿದೆ ಎಂದು ಪತ್ತೆಹಚ್ಚದೆ ಚಿಕಿತ್ಸೆಯನ್ನು ನೀಡುವುದರಲ್ಲಿ ಸಿದ್ಧಹಸ್ತರು. ಇನ್ನು ಕೆಲವರಂತೂ ಕೇವಲ ಹೆಂಗಸರನ್ನು ಮಾತ್ರ ತಪಾಸಣೆಗೆ ಒಳಪಡಿಸುವ ನಾಟಕವನ್ನು ಆಡುವುದರಲ್ಲಿ ನಿಸ್ಸೀಮರು!. 

ಅದೇನೇ ಇರಲಿ, ನಿಮ್ಮ ನಂಬಿಗಸ್ಥ ಕುಟುಂಬ ವೈದ್ಯರು ಅಥವಾ ನಿಮ್ಮದೇ ಊರಿನ ತಜ್ಞವೈದ್ಯರು ಶಾಶ್ವತವಾಗಿ ಗುಣಪಡಿಸಲಾಗದ ಕಾಯಿಲೆಗಳನ್ನು, ನಕಲಿ ವೈದ್ಯರು ಗುಣಪಡಿಸುವುದು ಅಸಾಧ್ಯವೆಂದು ಅರಿತಿರಿ. ಕೇವಲ ನಾಲ್ಕಾರು ರೂಪಾಯಿ ಬೆಲೆಬಾಳುವ ಔಷದವನ್ನು ದಿನದಲ್ಲಿ ಒಂದು ಅಥವಾ ಎರಡುಬಾರಿ ಸೇವಿಸಿ, ಆಹಾರ ಸೇವನೆಯಲ್ಲಿ ಒಂದಿಷ್ಟು ಪಥ್ಯ ಮತ್ತು ದಿನನಿತ್ಯ ವ್ಯಾಯಾಮ, ಕ್ರೀಡೆ ಅಥವಾ  ನಡಿಗೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ, ನಿಮ್ಮನ್ನು ಬಾಧಿಸುತ್ತಿರುವ ಮಧುಮೇಹ, ಅಧಿಕ ರಕ್ತದ ಒತ್ತಡ, ಅಧಿಕ ತೂಕ, ಅತಿ ಬೊಜ್ಜು ಇತ್ಯಾದಿ ಆರೋಗ್ಯದ ಸಮಸ್ಯೆಗಳನ್ನು ನಿಯಂತ್ರಣದಲ್ಲಿ ಇರಿಸುವುದು ಸುಲಭಸಾಧ್ಯ. ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ಚಿಕಿತ್ಸಾ ವಿಧಾನಗಳನ್ನು ಕೈಬಿಟ್ಟು, ನಕಲಿ ವೈದ್ಯರ ಚಿಕಿತ್ಸೆಯನ್ನು ಪ್ರಯೋಗಿಸದಿರಿ.

ವೈದ್ಯಕೀಯ ಕ್ಷೇತ್ರದಲ್ಲಿ ಶಾಶ್ವತ ಪರಿಹಾರವಿಲ್ಲದ ವ್ಯಾಧಿಗಳನ್ನು ನಿಶ್ಚಿತವಾಗಿ ಮತ್ತು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಸಂಶೋಧಿಸಿದವರಿಗೆ " ನೊಬೆಲ್ ಪ್ರಶಸ್ತಿ" ಕಟ್ಟಿಟ್ಟ ಬುತ್ತಿ. ಆದರೆ ನಮ್ಮ ದೇಶದ ನಕಲಿ ವೈದ್ಯರು ಕೋಟ್ಯಂತರ ಡಾಲರ್ ಬಹುಮಾನದೊಂದಿಗೆ, ವಿಶ್ವವಿಖ್ಯಾತರಾಗುವ ಇಂತಹ ಸುವರ್ಣಾವಕಾಶವನ್ನು ಸದುಪಯೋಗಪಡಿಸುತ್ತಿಲ್ಲವೇಕೆ?, ಎನ್ನುವ ಬಗ್ಗೆ ಒಂದಿಷ್ಟು ಚಿಂತನ ಮಂಥನ ಮಾಡಿ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಡಿ. ೩೦-೦೬-೨೦೦೯ ರ ಉದಯವಾಣಿ ಪತ್ರಿಕೆಯ ಅಂಕಣದಲ್ಲಿ ವೈದ್ಯರ ದಿನಾಚರಣೆಯ ಸಲುವಾಗಿ ಪ್ರಕಟಿತ ಲೇಖನ.  



No comments:

Post a Comment