Thursday, July 31, 2014

HEART ATTACK



  ಹೃದಯಾಘಾತಕ್ಕಿಲ್ಲ ಪಕ್ಷಪಾತ !

ಬಡವ- ಬಲ್ಲಿದ, ಸ್ತ್ರೀ- ಪುರುಷ, ಹದಿಹರೆಯದ- ಇಳಿವಯಸ್ಸಿನವರೆನ್ನುವ ಪಕ್ಷಪಾತ ತೋರದೇ ಪೀಡಿ ಸಬಲ್ಲ ಹಾಗೂ ಯಾವುದೇ ಪೂರ್ವಸೂಚನೆಯನ್ನು ನೀಡದೇ ಬರಸಿಡಿಲಿನಂತೆ ಬಂದೆರಗಬಲ್ಲ " ಹೃದಯಾಘಾತ " ದ ಬಗ್ಗೆ ನೀವು ತಿಳಿದಿರಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ.
-------------               -------------              --------------                --------------               -----

ಇಳಿವಯಸ್ಸಿನ ವಾಮನರಾಯರಿಗೆ ಕಳೆದ ಆರೇಳು ತಿಂಗಳಿನಿಂದ ಒಂದಿಷ್ಟು ಶಾರೀರಿಕ ಶ್ರಮದ ಕೆಲಸವನ್ನು ಮಾಡಿದೊಡನೆ ಸಣ್ಣಗೆ ಎದೆನೋವು ಆರಂಭವಾಗುತ್ತಿತ್ತು. ಆಶ್ಚರ್ಯವೆಂದರೆ ಒಂದೆರಡು ವಾಯುಮಾತ್ರೆ ನುಂಗಿ ವಿಶ್ರಾಂತಿ ಪಡೆದೊಡನೆ ನೋವು ಮಾಯವಾಗುತ್ತಿತ್ತು. 

ಆದರೆ ಅಷ್ಟಮಿಯಂದು ಎಂದಿನಂತೆ ಬೆಳಗಿನ ಜಾವ ಎದ್ದ ರಾಯರು ಬಹಿರ್ದೆಶೆಗೆ ತೆರಳಿದಾಗ ಎದೆನೋವು ಪ್ರತ್ಯಕ್ಷವಾಗಿತ್ತು. ಎಂದಿಗಿಂತಲೂ ತುಸು ತೀವ್ರವಾದ ಎದೆನೋವಿನೊಂದಿಗೆ ಈ ಬಾರಿ ಅತಿಅಯಾಸ, ವಾಕರಿಕೆ ಹಾಗೂ ಉಸಿರುಕಟ್ಟಿದ ಅನುಭವವಾಗಿತ್ತು. ಪ್ರಯಾಸದಿಂದ ಮುಖಮಾರ್ಜನ ಮುಗಿಸಿ ಬಂದ ರಾಯರ ಮೈಯ್ಯಿಂದ, ಧಾರಾಕಾರವಾಗಿ ಬೆವರು ಹರಿಯಲು ಆರಂಭಿಸಿತ್ತು. ಏಕೋ ಇಂದು ವಾಯುಬಾಧೆ ತೀವ್ರವಾಗಿದೆ ಎಂದು ಭ್ರಮಿಸಿದ ರಾಯರು, ವಾಯುಮಾತ್ರೆ ನುಂಗಿ ಹಾಸಿಗೆಯಲ್ಲಿ ಮಲಗಿದರು. 

ಏಳು ಗಂಟೆಯಾದರೂ ಏಳದಿದ್ದ ಪತಿಯ ಬಗ್ಗೆ ಚಿಂತಿತರಾದ ಪಾರ್ವತಮ್ಮನು ರಾಯರನ್ನು ಎಬ್ಬಿಸಲು ಬಂದಾಗ ರಾಯರ ದೇಹ ತಣ್ಣಗಾಗಿತ್ತು. ಗಾಬರಿಯಿಂದ ಸಮೀಪದ ವೈದ್ಯರನ್ನು ಕರೆಸಿ ಪರೀಕ್ಷಿಸಿದ ಬಳಿಕ, ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವರೆಂದು ತಿಳಿದುಬಂತು. 
ಅನೇಕ ವಿದ್ಯಾವಂತರು ಇಂದಿಗೂ ರಾಯರಲ್ಲಿ ಕಂಡುಬಂದಂತಹ ಲಕ್ಷಣಗಳನ್ನು " ಗ್ಯಾಸ್ ಟ್ರಬಲ್ " ಎಂದು ನಂಬಿ, ವಾಯುಮಾತ್ರೆ, ಜೀರಿಗೆಯ ಕಷಾಯ ಇತ್ಯಾದಿಗಳನ್ನು ಸೇವಿಸುವುದು ಸುಳ್ಳೇನಲ್ಲ. ವಾಸ್ತವವಾಗಿ ಇಂತಹ ರೋಗಿಗಳನ್ನು ತುರ್ತಾಗಿ ಸುಸಜ್ಜಿತ ಆಸ್ಪತ್ರೆಗೆ ದಾಖಲಿಸಿ ಕ್ಷಿಪ್ರಗತಿಯಲ್ಲಿ ಚಿಕಿತ್ಸೆ ನೀಡುವುದರಿಂದ, ರೋಗಿಯ ಪ್ರಾಣ ಉಳಿಯುವ ಸಾಧ್ಯತೆಗಳು ಹೆಚ್ಚುತ್ತವೆ. 

ಮಾರಕವೆನಿಸಬಲ್ಲ ಸಮಸ್ಯೆ 
ಗತಶತಮಾನದ ಆದಿಯಲ್ಲಿ ಅಪರೂಪದಲ್ಲಿ ಹಾಗೂ ಹೆಚ್ಚಾಗಿ ಶ್ರೀಮಂತರಲ್ಲಿ ಪತ್ತೆಯಾಗುತ್ತಿದ್ದ ಹೃದಯಾಘಾತವು, ನೂತನ ಸಹಸ್ರಮಾನದ ಆದಿಯಲ್ಲಿ ಎಲ್ಲಾ ವರ್ಗದ ಜನರಲ್ಲೂ ವ್ಯಾಪಕವಾಗಿ ಕಂಡುಬರುತ್ತಿದೆ. ಉದಾಹರಣೆಗೆ ದಿನಪತ್ರಿಕೆಗಳಲ್ಲಿ ನೀವು ಓದಿರಬಹುದಾದ " ಆಟದ ಮೈದಾನದಲ್ಲಿ ಕುಸಿದು ಶಾಲಾಬಾಲಕನ ಮೃತ್ಯು", ೩೮ ರ ಹರೆಯದ ತರುಣ ಬಸ್ಸಿನಲ್ಲಿ ಕುಳಿತಲ್ಲೇ ಮೃತಪಟ್ಟ ಹಾಗೂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿ ಹಠಾತ್ತಾಗಿ ಸಾವನ್ನಪ್ಪಿದ ಘಟನೆಗಳಲ್ಲಿ, ಸಾಮಾನ್ಯವಾಗಿ ತೀವ್ರ ಹೃದಯಾಘಾತವೇ ಕಾರಣವಾಗಿರುತ್ತದೆ. ಕೆಲ ವರ್ಷಗಳ ಹಿಂದೆ ಅಮೆರಿಕದ ಈಜು ಚಾಂಪಿಯನ್ ಬಾಲಕಿಯೊಬ್ಬಳು ಈಜುಕೊಳದಲ್ಲಿ ಮುಳುಗಿ ಮೃತಪಟ್ಟಿದ್ದಳು. ಸಂದೇಹಾಸ್ಪದ ಮತ್ತು ಅಕಾಲಿಕ ಮರಣದ ಕಾರಣವನ್ನರಿಯಲು ಶವಪರೀಕ್ಷೆ ನಡೆಸಿದ ಬಳಿಕ, ತೀವ್ರ ಹೃದಯಾಘಾತವೇ ಆಕೆಯ ಮರಣಕ್ಕೆ ಕಾರಣವೆಂದು ತಿಳಿದುಬಂದಿತ್ತು. ಹದಿಹರೆಯದಲ್ಲಿ ಮತ್ತು ತಾರುಣ್ಯದಲ್ಲಿ, ಯಾವುದೇ ರೀತಿಯ ದುಶ್ಚಟಗಳಿಲ್ಲದ ಆರೋಗ್ಯವಂತರನ್ನೂ ಬಲಿತೆಗೆದುಕೊಳ್ಳುವ ಈ ಗಂಭೀರ - ಮಾರಕ ಸಮಸ್ಯೆಗೆ ಅನುವಂಶೀಯತೆ ಮತ್ತು ಅಪರೂಪದಲ್ಲಿ ಇತರ ಕೆಲ ಕಾರಣಗಳಿರುವುದುಂಟು. 

ಹೃದಯಾಘಾತ ಎಂದರೇನು?

ಸುಧೃಢವಾದ ಮಾಂಸಪೇಶಿಗಳಿಂದ ನಿರ್ಮಿತವಾದ, ದಿನವೊಂದರಲ್ಲಿ ಲಕ್ಷಕ್ಕೂ ಹೆಚ್ಚುಬಾರಿ ಮಿಡಿಯುವ, ನಿಮ್ಮ ಹಿಡಿಗಾತ್ರದ " ಹೃದಯ " ಎನ್ನುವ ಅದ್ಭುತ ಯಂತ್ರವು, ಹಗಲಿರುಳು ನಿರಂತರವಾಗಿ ಕಾರ್ಯಾಚರಿಸುತ್ತದೆ. ಇತರ ಯಾವುದೇ ಯಂತ್ರದಂತೆಯೇ ನಿಮ್ಮ ಹೃದಯದ ಕಾರ್ಯಾಚರಣೆಗೂ "ಶುದ್ಧ ರಕ್ತ " ಎನ್ನುವ ಇಂಧನದ ಅವಶ್ಯಕತೆಯಿದೆ. ಸಮಗ್ರ ಶರೀರದ ವಿವಿಧ ಅಂಗಾಂಗಗಳಿಗೆ ರಕ್ತವನ್ನು ಪೂರೈಸುವ ಹೃದಯದಲ್ಲಿ ಸಾಕಷ್ಟು ಪ್ರಮಾಣದ ರಕ್ತವಿದ್ದರೂ, ನಿಮ್ಮ ಹೃದಯಕ್ಕೆ ಇದರಿಂದ ಕಿಂಚಿತ್ ಪ್ರಯೋಜನವೂ ಇಲ್ಲವೆಂದಲ್ಲಿ ನಿಮಗೂ ಆಶ್ಚರ್ಯವೆನಿಸೀತು. ಮನುಷ್ಯನ ಹೃದಯಕ್ಕೆ ಶುದ್ಧ ರಕ್ತವನ್ನು ಪೂರೈಸುವ ಮಹತ್ತರವಾದ ಜವಾಬ್ದಾರಿಯನ್ನು " ಕೊರೋನರಿ ಆರ್ಟರಿ " ಎಂದು ಕರೆಯಲ್ಪಡುವ ರಕ್ತನಾಳಗಳು ನಿರ್ವಹಿಸುತ್ತವೆ. 

ಮಾನವನ ಶರೀರದ ಇತರ ಯಾವುದೇ ರಕ್ತನಾಳಗಳಂತೆಯೇ, ಈ ಕೊರೋನರಿ ರಕ್ತನಾಳಗಳ ಒಳಮೈಯ್ಯಲ್ಲಿ ಕೊಬ್ಬಿನ ಅಂಶ ಹಾಗೂ ಕೊಲೆಸ್ಟರಾಲ್ ಗಳ ಸಂಗ್ರಹದಿಂದಾಗಿ ಉದ್ಭವಿಸಬಲ್ಲ ಅಡಚಣೆಯಿಂದ ಹಾಗೂ ವಯಸ್ಸಾದಂತೆಯೇ ಅಥವಾ ಇತರ ಕಾರಣಗಳಿಂದ ರಕ್ತನಾಳಗಳು ಪೆಡಸಾದಾಗ, ಹೃದಯಕ್ಕೆ ಪೂರೈಕೆಯಾಗುವ ರಕ್ತದ ಪ್ರಮಾಣವು ಕುಂಠಿತಗೊಳ್ಳುತ್ತದೆ. ತತ್ಪರಿಣಾಮವಾಗಿ ಕಿಂಚಿತ್ ಶಾರೀರಿಕ ಶ್ರಮದ ಕೆಲಸ ಮಾಡಿದೊಡನೆ " ಎಂಜೈನಾ " ಎಂದು ಕರೆಯಲ್ಪಡುವ ಎದೆನೋವು ಪ್ರಾರಂಭವಾಗುವುದು. ಎಂಜೈನಾದ ಅವಧಿ ಮತ್ತು ತೀವ್ರತೆಯು ಕೊರೋನರಿ ರಕ್ತನಾಳಗಳಲ್ಲಿನ ಅಡಚಣೆಯ ಮತ್ತು ಶಾರೀರಿಕ ಶ್ರಮದ ತೀವ್ರತೆಯ ಪ್ರಮಾಣಕ್ಕೆ ಅನುಗುಣವಾಗಿ ಹೆಚ್ಚು ಅಥವಾ ಕಡಿಮೆಯಾಗುವುದು. ಅಂತೆಯೇ ರೋಗಿ ವಿರಮಿಸುತ್ತಿರುವಾಗ ಹೃದಯಕ್ಕೆ ಹೆಚ್ಚಿನ ರಕ್ತದ ಪೂರೈಕೆಯ ಅವಶ್ಯಕತೆ ಇಲ್ಲದಿರುವುದರಿಂದ, ಸಾಮಾನ್ಯವಾಗಿ ಎಂಜೈನಾ ಪೀಡಿಸುವುದಿಲ್ಲ. 

ಹೆಪ್ಪುಗಟ್ಟಿದ ರಕ್ತದ ತುಣುಕು ಅಥವಾ ಕೊಬ್ಬಿನಿಂದಾಗಿ ಯಾವುದೇ ಒಂದು ಕೊರೋನರಿ ರಕ್ತನಾಳದಲ್ಲಿ ಸಂಪೂರ್ಣ ಅಡಚಣೆ ಉದ್ಭವಿಸಿದಾಗ, ಹೃದಯದ ಒಂದು ಭಾಗಕ್ಕೆ ರಕ್ತದ ಪೂರೈಕೆಯೂ ಸ್ಥಗಿತಗೊಳ್ಳುತ್ತದೆ. ಇಂತಹ ಅಡಚಣೆಯ ಅವಧಿ ೨೦ ನಿಮಿಷಗಳನ್ನು ಮೀರಿದಲ್ಲಿ, ಆ ಭಾಗದ ಮಾಂಸಪೇಶಿಗಳು ಮೃತಪಡುತ್ತವೆ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು " ಮಯೋಕಾರ್ಡಿಯಲ್ ಇನ್ಫಾರ್ಕ್ಶನ್ " ಎನ್ನುತ್ತಾರೆ. ಜನಸಾಮಾನ್ಯರು ಮಾತ್ರ ಇದನ್ನು ಹಾರ್ಟ್ ಅಟಾಕ್ ಎಂದೇ ಕರೆಯುವುದು ವಾಡಿಕೆಯಾಗಿದೆ. 

ಹೃದಯಾಘಾತದ ಪ್ರಕ್ರಿಯೆಗಳಿಗೆ ನಿಖರವಾಗಿ ಹಾಗೂ ನಿರ್ದಿಷ್ಟವಾಗಿ ಕಾರಣೀಭೂತವೆನಿಸುವ ಅಂಶಗಳನ್ನು ಅರಿತುಕೊಳ್ಳಲು ಇಂದಿಗೂ ಸಂಶೋಧನೆಗಳು ನಡೆಯುತ್ತಿವೆ. 

ಹೃದಯಾಘಾತದ ಲಕ್ಷಣಗಳು 

ಎದೆಯ ಮಧ್ಯಭಾಗದಲ್ಲಿ ತೀವ್ರ ನೋವು, ಕುತ್ತಿಗೆ,ಹೆಗಲು ಹಾಗೂ ಕೈಗಳಿಗೆ ನೋವು ಹರಿದಾಡಿದಂತಹ ಅನುಭವ, ಉಸಿರಾಡಲು ಕಷ್ಟವೆನಿಸುವುದು, ತಲೆತಿರುಗಿದಂತಾಗುದು, ಕಣ್ಣು ಕತ್ತಲಾವರಿಸಿದಂತಾಗುವುದು, ತೀವ್ರ ಎದೆಬಡಿತ, ಅಸಹಜ ಆಯಾಸ, ಅತಿಯಾಗಿ ಬೆವರುವುದು, ವಾಕರಿಕೆ ಅಥವಾ ವಾಂತಿ ಮತ್ತು ಹೊಟ್ಟೆ ತೊಳಸಿದಂತಾಗುವುದೇ ಮುಂತಾದ ಲಕ್ಷಣಗಳು ಸಾಮಾನ್ಯವಾಗಿ ಹೃದಯಾಘಾತ ಸಂಭವಿಸಿದಾಗ ಕಂಡುಬರುತ್ತವೆ. ಆದರೆ ಅಪರೂಪದಲ್ಲಿ ಮಧುಮೇಹ ಪೀಡಿತರಲ್ಲಿ ಎದೆನೋವು ಕಾಣಿಸಿಕೊಳ್ಳದೇ ಹೃದಯಾಘಾತ ಸಂಭವಿಸುವುದುಂಟು. ಇದನ್ನು ಸೈಲೆಂಟ್ ಅಟಾಕ್ ಎನ್ನುವರು. 

ಕಾರಣವೆನಿಸಬಲ್ಲ ಅಂಶಗಳು 

ಸುಖ ವೈಭೋಗದ ಜೀವನಶೈಲಿ, ನಿಷ್ಕ್ರಿಯತೆ, ಕೊಬ್ಬು ಇತ್ಯಾದಿಗಳಿಂದ ಸಮೃದ್ಧವಾದ ಹಾಗೂ ಅತಿಆಹಾರ ಸೇವನೆ, ಧೂಮ- ಮದ್ಯಪಾನ, ಅಧಿಕ ರಕ್ತದೊತ್ತಡ, ಅಧಿಕತೂಕ, ಅತಿಬೊಜ್ಜು, ಮಧುಮೇಹ, ತೀವ್ರ ರಕ್ತಹೀನತೆ, ತೀವ್ರ ಮಾನಸಿಕ ಒತ್ತಡ- ಖಿನ್ನತೆ,ರಕ್ತದಲ್ಲಿ ಅತಿಯಾಗಿರುವ ಕೊಲೆಸ್ಟರಾಲ್- ಟ್ರೈಗ್ಲಿಸರೈಡ್ ಗಳು, ತೀವ್ರ ಭಯ-ಸಂತೋಷ ಅಥವಾ ದುಃಖ, ಅನುವಂಶೀಯತೆ ಮತ್ತು ಕೆಲವೊಂದು ವೈದ್ಯಕೀಯ ಕಾರಣಗಳು ಹಾಗೂ ಸನ್ನಿವೇಶಗಳು ಹೃದಯಾಘಾತಕ್ಕೆ ಕಾರಣವೆನಿಸುವ ಸಾಧ್ಯತೆಗಳಿವೆ. 

ಹೃದಯಾಘಾತವಾದಾಗ ಏನುಮಾಡಬೇಕು?

ಯಾವುದೇ ವ್ಯಕ್ತಿಗೆ ಹೃದಯಾಘಾತವಾಗಿದೆ ಎನ್ನುವ ಸಂದೇಹ ಮೂಡಿದಲ್ಲಿ ರೋಗಿಗೆ ಶಾರೀರಿಕ ಶ್ರಮವಾಗದಂತೆ ಮುನ್ನೆಚ್ಚರಿಕೆ ವಹಿಸಿ, ಆತನನ್ನು ಕ್ಷಿಪ್ರಗತಿಯಲ್ಲಿ ಸುಸಜ್ಜಿತ ಆಸ್ಪತ್ರೆಗೆ ದಾಖಲಿಸಿ ತುರ್ತುಚಿಕಿತ್ಸೆ ನೀಡಬೇಕು. ಹ್ರುದ್ರೋಗವಿರುವ ಅಥವಾ ಹಿಂದೊಮ್ಮೆ ಹೃದಯಾಘಾತಕ್ಕೆ ಈಡಾಗಿದ್ದ ವ್ಯಕ್ತಿಗಳಿಗೆ, ಅವರ ವೈದ್ಯರು ಇಂತಹ ಸ್ಥಿತಿಯಲ್ಲಿ ಬಳಸುವಂತೆ ಸೂಚಿಸಿದ್ದ ಗುಳಿಗೆಯನ್ನು ನಾಲಗೆಯ ಕೆಳಗೆ ಇರಿಸುವುದು ಪ್ರಾಣರಕ್ಷಕವೆನಿಸಬಲ್ಲದು. ಹಿಂದೆ ಹೃದ್ರೋಗದ ಸಮಸ್ಯೆ ಇದ್ದಿಲ್ಲದ ವ್ಯಕ್ತಿಗಳಿಗೆ ಒಂದು " ಆಸ್ಪಿರಿನ್ " ಮಾತ್ರೆಯನ್ನು ಇಂತಹ ಸಂದರ್ಭದಲ್ಲಿ ನೀಡಬಹುದು. ಆದರೆ ವೃಥಾ ಕಾಲಹರಣ ಮಾಡುವುದು ರೋಗಿಯ ಜೀವರಕ್ಷಣೆಯ ದೃಷ್ಟಿಯಿಂದ ಹಿತಕರವಲ್ಲ. 



ಚಿಕಿತ್ಸೆ: ಎಂತು- ಏನು ?

ಹೃದಯಾಘಾತಕ್ಕೆ ಈಡಾದ ವ್ಯಕ್ತಿಯನ್ನು ಹೃದ್ರೋಗ ಚಿಕಿತ್ಸಾ ಸೌಲಭ್ಯವಿರುವ ಸುಸಜ್ಜಿತ ಆಸ್ಪತ್ರೆಯಲ್ಲಿ ದಾಖಲಿಸುವುದು ಹಿತಕರ. ಚಿಕಿತ್ಸೆಯ ಮೂಲ ಉದ್ದೇಶವೇ ರೋಗಿಯನ್ನು ಪೀಡಿಸುತ್ತಿರುವ ತೀವ್ರ ಎದೆನೋವನ್ನು ಶಮನಗೊಳಿಸುವ, ಶಾಕ್ ಮತ್ತು ಹೃದಯ ವೈಫಾಲ್ಯಗಳನ್ನು ಸರಿಪಡಿಸುವ ಮತ್ತು ಹೃದಯದ ಕಾರ್ಯಾಚರಣೆಯ ಒತ್ತಡವನ್ನು ಕಡಿಮೆ ಮಾಡುವುದೇ ಆಗಿದೆ. ಇದರೊಂದಿಗೆ ಕೊರೋನರಿ ರಕ್ತನಾಳಗಳಲ್ಲಿನ ಅಡಚಣೆಗಳನ್ನು ನಿವಾರಿಸಿ, ಹೃದಯಕ್ಕೆ ಸಮರ್ಪಕವಾಗಿ ರಕ್ತದ ಸರಬರಾಜಾಗುವಂತೆ ತುರ್ತು ಚಿಕಿತ್ಸೆ ನೀಡಬೇಕಾಗುವುದು. ಹೃದಯಾಘಾತಕ್ಕೆ ಈಡಾದ ಕೆಲ ರೋಗಿಗಳಲ್ಲಿ ಈ ಸಂದರ್ಬ್ಜದಲ್ಲಿ ಉದ್ಭವಿಸಬಲ್ಲ ಕೆಲವೊಂದು ಗಂಭೀರ - ಮಾರಕ ಸಮಸ್ಯೆಗಳಿಂದ ಆತನನ್ನು ರಕ್ಷಿಸಲು ವೈದ್ಯಕೀಯ ಸಿಬಂದಿ ಸಜ್ಜಾಗಿರಬೇಕಾಗುವುದು. ಹೃದಯಾಘಾತದ ತೀವ್ರತೆ, ರೋಗಿಯ ವಯಸ್ಸು, ಆತನಲ್ಲಿರಬಹುದಾದ ಅನ್ಯ ಕಾಯಿಲೆಗಳು ಹಾಗೂ ವೈದ್ಯಕೀಯ ಚಿಕಿತ್ಸೆಯನ್ನು ಆರಂಭಿಸಲು ತಗಲಿದ ಅವಧಿಗಳನ್ನು ಹೊಂದಿಕೊಂಡು ಚಿಕಿತ್ಸೆಯ ಫಲಿತಾಂಶದ ಗತಿ ಬದಲಾಗುವ ಸಾಧ್ಯತೆಗಳಿವೆ. 

ಆಸ್ಪತ್ರೆಗೆ ಕರೆತಂದ ರೋಗಿಯ ನಾಡಿ - ಹೃದಯ ಬಡಿತ, ರಕ್ತದೊತ್ತಡ ಹಾಗೂ ಇ.ಸಿ.ಜಿ ಮತ್ತಿತರ ಪರೀಕ್ಷೆಗಳನ್ನು ನಡೆಸುವ ಮೂಲಕ ಹೃದಯಾಘಾತ ಆಗಿರುವುದನ್ನು ಖಚಿತಪಡಿಸಿಕೊಂಡ ವೈದ್ಯರು, ರೋಗಿಯನ್ನು ಇಂಟೆನ್ಸಿವ್ ಕೊರೋನರಿ ಕೇರ್ ಯೂನಿಟ್ ಅಥವಾ ಇಂಟೆನ್ಸಿವ್ ಕೇರ್ ಯೂನಿಟ್ ನಲ್ಲಿ ದಾಖಲಿಸಿ ಚಿಕಿತ್ಸೆಯನ್ನು ಆರಂಭಿಸುವರು. ರೋಗಿಯ ಸ್ಥಿತಿಗತಿಗಳಿಗೆ ಅನುಗುಣವಾಗಿ ಶ್ವಾಸೋಚ್ಛ್ವಾಸ ಸುಲಭವಾಗುವಂತೆ ಆಮ್ಲಜನಕ ಹಾಗೂ ತೀವ್ರ ಎದೆನೋವು ಮತ್ತು ಇತರ ಸಮಸ್ಯೆಗಳಿಗೆ ಸೂಕ್ತ ಔಷದೋಪಚಾರಗಳನ್ನು ನೀಡುವರು. ಸಾಮಾನ್ಯವಾಗಿ ಕೊರೋನರಿ ರಕ್ತನಾಳಗಳಲ್ಲಿ ಹೆಪ್ಪುಗಟ್ಟಿದ ರಕ್ತದಿಂದ ಉದ್ಭವಿಸಿದ ಅಡಚಣೆಯೇ ಹೃದಯಾಘಾತಕ್ಕೆ ಕಾರಣವಾಗಿರುವುದರಿಂದ, ಇದರ ನಿವಾರಣೆಗೆ ಕ್ಷಿಪ್ರ ಚಿಕಿತ್ಸೆ ಅತ್ಯವಶ್ಯಕ ಎನಿಸುವುದು. ಹೆಪ್ಪುಗಟ್ಟಿದ ರಕ್ತವನ್ನು ಮತ್ತೆ ತೆಳ್ಳಗಾಗಿಸಬಲ್ಲ ಔಷದಗಳನ್ನು ಹೃದಯಾಘಾತವಾದ ೬ ರಿಂದ ೧೨ ಗಂಟೆಗಳ ಒಳಗಾಗಿ ನೀಡಬೇಕಾಗುವುದು. 

ಆಕಸ್ಮಿಕವಾಗಿ ತಲೆದೋರುವ ಹೃದಯ ಸಂಬಂಧಿ ಅನ್ಯ ಸಮಸ್ಯೆಗಳನ್ನು ಅರಿತುಕೊಳ್ಳಲು, ಹೃದಯ ಬಡಿತದ ಗತಿ- ಲಯಗಳನ್ನು ನಿರಂತರವಾಗಿ ತೋರಿಸಬಲ್ಲ ಕಾರ್ಡಿಯಾಕ್ ಮಾನಿಟರ್ ಣ ಅಳವಡಿಕೆ ಅತ್ಯವಶ್ಯಕವೂ ಹೌದು. ಕಾರ್ಡಿಯಾಕ್ ಅರಿಥ್ಮಿಯಾಸ್ ಎನ್ನುವ ಹೃದಯದ ಗತಿ- ಲಯಗಳಲ್ಲಿ  ಕಾಣಿಸಿಕೊಳ್ಳುವ ವೈಪರೀತ್ಯಗಳಿಂದಾಗಿ ಹೃದಯದ ವೈಫಲ್ಯ ಹಾಗೂ ರಕ್ತದೊತ್ತಡ ಕುಸಿಯುವ ಸಂಭವವಿದ್ದು, ಇದನ್ನು ತುರ್ತುಚಿಕಿತ್ಸೆ ನೀಡಿ ಸರಿಪಡಿಸದೆ ಇದ್ದಲ್ಲಿ ಪ್ರಾಣಾಂತಿಕವೆನಿಸಬಲ್ಲದು. 

ಹೃದಯ ರೋಗಗಳನ್ನು ಚಿಕಿತ್ಸಿಸುವ ಸೌಲಭ್ಯಗಳಿರುವ ಆಸ್ಪತ್ರೆಗಳಲ್ಲಿ ಹೃದಯಾಘಾತಕ್ಕೆ ಒಳಗಾದ ರೋಗಿಗಳಿಗೆ ತುರ್ತು ಚಿಕಿತ್ಸೆಯ ಅಂಗವಾಗಿ ಎಂಜಿಯೋ ಗ್ರಾಂ ಪರೀಕ್ಷೆಯನ್ನು ನಡೆಸಿ, ಕೊರೋನರಿ ರಕ್ತನಾಳಗಳಲ್ಲಿನ ಅಡಚಣೆಯ ಪ್ರಮಾಣವನ್ನು ಅರಿತುಕೊಳ್ಳಬಹುದಾಗಿದೆ. ಈ ಅಡಚಣೆಯನ್ನು ಎಂಜಿಯೋ ಪ್ಲಾಸ್ಟಿಯ ಮೂಲಕ ನಿವಾರಿಸುವ ಹಾಗೂ ಅವಶ್ಯಕತೆಯಿದ್ದಲ್ಲಿ " ಸ್ಟೆಂಟ್ " ಅಳವಡಿಸುವ ಚಿಕಿತ್ಸೆಯನ್ನು ತಕ್ಷಣ ನೀಡಬಹುದಾಗಿದೆ. ಇದರಿಂದಾಗಿ ಹೃದಯಕ್ಕೆ ಸರಾಗವಾಗಿ ರಕ್ತದ ಪೂರೈಕೆಯು ಸಾಧ್ಯವಾಗುವುದು. ಆದರೆ ಈ ಚಿಕಿತ್ಸೆಯನು ಹೃದಯಾಘಾತವಾದ ೬ ಗಂಟೆಗಳ ಒಳಗೆ ನಡೆಸಬೇಕಾಗುತ್ತದೆ. ತೀವ್ರ ಸ್ವರೂಪದ ಅದಚನೆಗಲಿರುವ ರೋಗಿಗಳಿಗೆ " ಬೈಪಾಸ್ " ಶಸ್ತ್ರಚಿಕಿತ್ಸೆ ಅನಿವಾರ್ಯವೆನಿಸುತ್ತದೆ. 

ಕೊರೋನರಿ ರಕ್ತನಾಳಗಲ್ಲಿ ಹೆಪ್ಪುಗಟ್ಟಿದ ರಕ್ತವನ್ನು ಕರಗಿಸಲು ನೀಡುವ ಔಷದಗಳಿಗಿಂತ ಈ ಚಿಕಿತ್ಸೆ ಪರಿಣಾಮಕಾರಿ ಎನಿಸುವುದಾದರೂ, ಇದರಲ್ಲೂ ಕೆಲ ಅನಪೇಕ್ಷಿತ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಆದರೆ ರೋಗಿಯ ಪ್ರಾಣರಕ್ಷಣೆಯ ದೃಷ್ಟಿಯಿಂದ ಇದರ ಸಾಧಕ- ಬಾಧಕಗಳನ್ನು ತುಲನೆ ಮಾಡಿದಾಗ ಸಾಧಕಗಳೇ ಮೇಲೆನಿಸುವುದು ಸತ್ಯ. 

ಸಾಮಾನ್ಯವಾಗಿ ಹೃದಯಕ್ಕೆ ಸಂಭವಿಸಿದ ಆಘಾತವು ೪ ರಿಂದ ೬ ವಾರಗಳ ಅವಧಿಯಲ್ಲಿ " ದುರಸ್ತಿ " ಯಾಗುವುದು. ಈ ಅವಧಿಯಲ್ಲಿ ರೋಗಿಗೆ ಸಂಪೂರ್ಣ ವಿಶ್ರಾಂತಿಯನ್ನು ನೀಡಲೇಬೇಕು. ಗಂಭೀರ ಸಮಸ್ಯೆಗಳಿರದ ಹಾಗೂ ಲಘು ಹ್ರುದಯಾಘಾತವಾಗಿರುವ ವ್ಯಕ್ತಿಗಳು ಕೆಲವೇ ದಿನಗಳಲ್ಲಿ ಎದ್ದು ಕುಳಿತುಕೊಳ್ಳುವುದು ಹಾಗೂ ವಾರ ಕಳೆದೊಡನೆ ನಡೆದಾಡಬಹುದಾಗಿದೆ. ಅಂತೆಯೇ ತೃಪ್ತಿಕರ ಫಲಿತಾಂಶ ಕಂಡುಬಂದ ರೋಗಿಗಳು ಹತ್ತು ದಿನಗಳು ಕಳೆದೊಡನೆ ಮನೆಗೆ ಮರಳಬಹುದಾಗಿದೆ. ಆರು ವಾರಗಳ ಬಳಿಕ ಮತ್ತೆ ವೈದ್ಯಕೀಯ ಪರೀಕ್ಷೆಗಳ ಫಲಿತಾಂಶಗಳನ್ನು ಹೊಂದಿಕೊಂಡು, ರೋಗಿಯು ತನ್ನ ದೈನಂದಿನ ಕೆಲಸಕಾರ್ಯಗಳನ್ನು ನಿಧಾನವಾಗಿ ಆರಂಭಿಸಬಹುದು. 

ನಕಲಿ ವೈದ್ಯರ ಬಗ್ಗೆ ಎಚ್ಚರವಿರಲಿ 

ಮಾನವ ಶರೀರದ ಅಂಗ ರಚನೆ, ಶಾರೀರಿಕ ಕ್ರಿಯೆಗಳು, ವಿವಿಧ ರೀತಿಯ ರೋಗ ಪತ್ತೆಹಚ್ಚುವ ವಿಧಾನಗಳು- ಪರೀಕ್ಷೆಗಳು, ಸಹಸ್ರಾರು ವಿಧದ ವ್ಯಾಧಿಗಳು ಮತ್ತು ಇವುಗಳ ಚಿಕಿತ್ಸೆಗಳ ಬಗ್ಗೆ ಪ್ರಾಥಮಿಕ ಮಾಹಿತಿಯನ್ನೇ ತಿಳಿದಿರದ " ಪದವಿಹೀನ " ನಕಲಿ ವೈದ್ಯರು, ಅನೇಕ ಅಮಾಯಕರನ್ನು ಮರುಳುಮಾಡಿ ಹೃದ್ರೋಗಗಳಿಗೂಚಿಕಿತ್ಸೆ ನೀಡುವುದುಂಟು. 

ತನ್ನಲ್ಲಿ ಬಂದಿರುವ ರೋಗಿಯ ಅಜ್ಞಾನ ಹಾಗೂ ಆತನ ಹಣದ ಥೈಲಿಯನ್ನು ಹೊಂದಿಕೊಂಡು, ಸಹಸ್ರಾರು ರೂಪಾಯಿಗಳನ್ನು ದೋಚುವ ಇಂತಹ ವಂಚಕ ಶಿಖಾಮಣಿಗಳಿಂದಾಗಿ ಬಹಳಷ್ಟು ರೋಗಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವುದು ಸತ್ಯ. ಅತ್ಯಂತ ಗಂಭೀರ ಸಮಸ್ಯೆಗಳಿರುವ ರೋಗಿಗಳಿಗೂ ತಾನು ನೀಡುವ ಚಿಕಿತ್ಸೆಯಿಂದ ಕೆಲವಾರಗಳಲ್ಲೇ ಅದ್ಭುತ ಪರಿಣಾಮ ದೊರೆಯುವುದೆಂದು ಹೇಳಿ, ಬಳಿಕ ರೋಗಿ ಅದಾಗಲೇ ಸೇವಿಸುತ್ತಿದ್ದ ಔಷದಗಳ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಹೇಳುವುದು ಅಪರೂಪವೇನಲ್ಲ. ಈತನ ಔಷದಗಳನ್ನು ಸೇವಿಸುತ್ತಾ, ತಜ್ಞ ವೈದ್ಯರು ನೀಡಿದ್ದ ಔಷದಗಳ ಸೇವನೆಯನ್ನು ನಿಲ್ಲಿಸಿದ ಅನೇಕ ಅಮಾಯಕರು, ಕೆಲವೇ ದಿನಗಳಲ್ಲಿ ಉಸಿರಾಡುವುದನ್ನೇ ನಿಲ್ಲಿಸಿದ ಘಟನೆಗಳು ಸಾಕಷ್ಟಿವೆ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ.೧೫-೦೧-೨೦೦೪ ರ ಸಂಚಿಕೆಯ ಬಳಕೆದಾರ: ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 




No comments:

Post a Comment