Saturday, July 19, 2014

LED SREETLIGHTS






 ಅಲ್ಪಾವಧಿಯಲ್ಲೇ ಅಸುನೀಗುತ್ತಿರುವ  ಎಲ್ ಇ ಡಿ ದಾರಿದೀಪಗಳು !

ರಾಜ್ಯದ ವಿದ್ಯುತ್ ಕೊರತೆಯನ್ನು ಒಂದಿಷ್ಟು ಕಡಿಮೆಮಾಡಬಲ್ಲ ಉಪಕ್ರಮಗಳಲ್ಲಿ ಅತ್ಯಲ್ಪ ಪ್ರಮಾಣದ ವಿದ್ಯುತ್ ಶಕ್ತಿಯನ್ನು ಬಳಸಿ, ಪ್ರಖರವಾದ ಬೆಳಕನ್ನು ನೀಡುವ ಎಲ್ ಇ ಡಿ ದೀಪಗಳ ಅಳವಡಿಕೆಯೂ ಒಂದಾಗಿದೆ. ರಾಜ್ಯದ ಅನೇಕ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ಬಳಕೆಯಲ್ಲಿದ್ದ ಹಾಗೂ ಅಗಾಧ ಪ್ರಮಾಣದ ವಿದ್ಯುತ್ ಶಕ್ತಿಯನ್ನು ಬಳಸುವುದರೊಂದಿಗೆ ಸಾಕಷ್ಟು ಉಷ್ಣತೆಯನ್ನೂ ಉತ್ಪಾದಿಸುವ ಮೂಲಕ ಪರಿಸರಕ್ಕೆ ಹಾನಿಯನ್ನು ಎಸಗುತ್ತಿದ್ದ " ಸೋಡಿಯಂ ಭಾಷ್ಪ ದೀಪ " ಗಳಿಗೆ ಬದಲಾಗಿ, ಇತ್ತೀಚಿನ ಒಂದೆರಡು ವರ್ಷಗಳಿಂದ ಎಲ್ ಇ ಡಿ ದಾರಿದೀಪಗಳನ್ನು ಬಳಸಲಾಗುತ್ತಿದೆ. ಅನ್ಯ ವಿಧದ ದಾರಿದೀಪಗಳಿಗಿಂತ ಸಾಕಷ್ಟು ದುಬಾರಿ ಎನಿಸುವ ಈ ದೀಪಗಳು, ಸುದೀರ್ಘಕಾಲ ಬಾಳ್ವಿಕೆ ಬರುವುದರಿಂದ ಇವುಗಳು ಉಳಿತಾಯ ಮಾಡಬಲ್ಲ ವಿದ್ಯುತ್ ಶಕ್ತಿಯ ಪ್ರಮಾಣವೂ ಗಣನೀಯವಾಗಿರುತ್ತದೆ. ಹಾಗೂ ಇದೇ ಕಾರಣದಿಂದಾಗಿ ರಾಜ್ಯದಲ್ಲಿ ವಿದ್ಯುತ್ ಶಕ್ತಿಯ ಬೇಡಿಕೆಯ ಪ್ರಮಾಣವೂ ಇಳಿಯುತ್ತದೆ. ಪ್ರಾಯಶಃ ಇದೇ ಉದ್ದೇಶದಿಂದ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ- ಕೇಂದ್ರ ಸರ್ಕಾರಗಳು ನೀಡುವ ಅನುದಾನಗಳ ಹಣವನ್ನು ಬಳಸಿ, ಎಲ್ ಇ ಡಿ ದಾರಿದೀಪಗಳನ್ನು ಅಳವಡಿಸಲು ಸೂಚನೆಯನ್ನು ನೀಡಲಾಗಿತ್ತು. ಈ ಸೂಚನೆಯನ್ನು ಬಹುತೇಕ ಸ್ಥಳೀಯ ಸಂಸ್ಥೆಗಳು ಈಗಾಗಲೇ ಪರಿಪಾಲಿಸಿದ್ದು, ಮುಂದಿನ ದಿನಗಳಲ್ಲಿ ಹಳೆಯ ದಾರಿದೀಪಗಳನ್ನು ತೆಗೆದುಹಾಕಿ, ಕೇವಲ ಎಲ್ ಇ ಡಿ ದಾರಿದೀಪಗಳನ್ನು ಅಳವಡಿಸಲಾಗುತ್ತದೆ. ಎಲ್ ಇ ಡಿ ದಾರಿದೀಪಗಳನ್ನು ಅಳವಡಿಸುತ್ತಿರುವ ಸ್ಥಳೀಯ ಸಂಸ್ಥೆಗಳಲ್ಲಿ ದ.ಕ ಜಿಲ್ಲೆಯ ಪುತ್ತೂರು ನಗರವೂ ಒಂದಾಗಿದೆ. 

ಅಸುನೀಗುತ್ತಿರುವ ದಾರಿದೀಪಗಳು 

ಪುತ್ತೂರು ಪುರಸಭೆಗೆ ಲಭಿಸಿದ್ದ ಅನುದಾನದ ಹಣದಿಂದ ಎಲ್ ಇ ಡಿ ದಾರಿದೀಪಗಳನ್ನು ಅಳವಡಿಸುವ ಕಾರ್ಯವು ಗತವರ್ಷದಲ್ಲೇ ಆರಂಭವಾಗಿತ್ತು. ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ನಗರದ ಪ್ರಧಾನ ರಸ್ತೆಯಲ್ಲಿದ್ದ ಸೋಡಿಯಂ ಭಾಷ್ಪ ದೀಪಗಳನ್ನು ತೆಗೆದು, ೬೮ ಎಲ್ ಇ ಡಿ ದೀಪಗಳನ್ನು ಅಳವಡಿಸಲು ೧೦ ಲಕ್ಷ ರೂಪಾಯಿಗಳನ್ನು ವ್ಯಯಿಸಲಾಗಿತ್ತು. ತದನಂತರ ಜೂನ್ ನಲ್ಲಿ ಮತ್ತೆ ೧೫.೪೫ ಲಕ್ಷ ರೂ. ಗಳನ್ನು ವ್ಯಯಿಸಿ, ೭೩ ದೀಪಗಳನ್ನು ಅಳವಡಿಸಲಾಗಿತ್ತು. ಇವೆರಡೂ ಕಾಮಗಾರಿಗಳನ್ನು ಬೆಳ್ತಂಗಡಿಯ ಸ್ವಸ್ತಿಕ್ ಲುಮಿನರೀಸ್ ಸಂಸ್ಥೆ ನಡೆಸಿತ್ತು. ಬಳಿಕ ಡಿಸೆಂಬರ್ ೨೦೧೩ ಮತ್ತು ಜನವರಿ ೨೦೧೪ ರಲ್ಲಿ " ಕ್ರೆಡಲ್ " ಸಂಸ್ಥೆಯಿಂದ ಪುರಸಭೆಗೆ ಉಚಿತವಾಗಿ ಲಭಿಸಿದ್ದ ೧೨೦ ದೀಪಗಳನ್ನು ತಯಾರಿಸಿದ್ದ ಕೃಪಾ ಎಲೆಕ್ಟ್ರಿಕಲ್ಸ್ ಸಂಸ್ಥೆಯೇ ಅಳವಡಿಸಿತ್ತು. ಇದಾದ ನಂತರ ಮಾರ್ಚ್ ೨೦೧೪ ರಲ್ಲಿ ಮತ್ತೆ ೫೪ ದೀಪಗಳನ್ನು ಮಂಗಳೂರಿನ ಸನ್ ಲೈಟ್ ಸಂಸ್ಥೆಯ ವತಿಯಿಂದ ಅಳವಡಿಸುವ ಮೂಲಕ, ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿನ ೩೧೫ ದಾರಿದೀಪಗಳನ್ನು ( ಶೇ.೧೨ ರಷ್ಟು ) ಬದಲಾಯಿಸಿ, ಎಲ್ ಇ ಡಿ ದೀಪಗಳನ್ನು ಹಾಕಲಾಗಿತ್ತು. ಈ ಸಂದರ್ಭದಲ್ಲಿ ತೆರವುಗೊಳಿಸಿದ್ದ ದೀಪಗಳೆಲ್ಲವೂ ಸೋಡಿಯಂ ಭಾಷ್ಪ ದೀಪಗಳೇ ಆಗಿದ್ದುದರಿಂದ, ವಿದ್ಯುತ್ ಶಕ್ತಿಯ ಬಳಕೆಯ ಪ್ರಮಾಣವೂ ಸ್ವಾಭಾವಿಕವಾಗಿಯೇ ಕಡಿಮೆಯಾಗುವ ನಿರೀಕ್ಷೆ ಇದ್ದಿತು. ಆದರೆ " ತಾನೊಂದು ಬಗೆದರೆ ದೈವ ಮತ್ತೊಂದು ಬಗೆಯಿತು " ಎನ್ನುವ ಆಡುಮಾತಿನಂತೆಯೇ, ಹೊಸದಾಗಿ ಅಳವಡಿಸಿದ್ದ ಎಲ್ ಇ ಡಿ ದೀಪಗಳು ಅಲ್ಪಾವಧಿಯಲ್ಲೇ ಅಸುನೀಗಲು ಆರಂಭಿಸಿದ್ದವು!. 

ಖಾತರಿ ನೀಡುವವರು ಯಾರು ?

ಸಾಮಾನ್ಯವಾಗಿ ಇಂತಹ ವಸ್ತುಗಳನ್ನು ಖರೀದಿಸಿದಾಗ ಇವುಗಳ ತಯಾರಕರು ನಿಗದಿತ ಅವಧಿಗೆ ಖಾತರಿಯನ್ನು ನೀಡುತ್ತಾರೆ. ಈ ಅವಧಿಯಲ್ಲಿ ಈ ದೀಪಗಳು ಕೆಟ್ಟುಹೋದಲ್ಲಿ ಇವುಗಳನ್ನು ಪೂರೈಕೆ ಮಾಡಿದ್ದ ಸಂಸ್ಥೆಗಳು ಇವುಗಳಿಗೆ ಬದಲಾಗಿ ಹೊಸ ದೀಪಗಳನ್ನು ನೀಡಬೇಕಾಗುತ್ತದೆ. ಉದಾಹರಣೆಗೆ ನೀವು ಖರೀದಿಸುವ ಸಿ ಎಫ್ ಎಲ್ ದೀಪಗಳಿಗೆ ಕನಿಷ್ಠ ಒಂದು ವರ್ಷದ ಖಾತರಿಯನ್ನು ಇವುಗಳ ತಯಾರಕರು ನೀಡುತ್ತಾರೆ. ಈ ಅವಧಿಯಲ್ಲಿ ಇದು ಕೆಟ್ಟು ಹೋದಲ್ಲಿ, ತಕ್ಷಣ ಇದಕ್ಕೆ ಬದಲಾಗಿ ಹೊಸ ದೀಪವನ್ನು ನೀಡುತ್ತಾರೆ. ಕೇವಲ ನೂರಾರು ರೂಪಾಯಿ ಬೆಲೆಬಾಳುವ ಸಿ ಎಫ್ ಎಲ್ ಬಲ್ಬ್ ಗಳಿಗೆ ಒಂದುವರ್ಷದ ಖಾತರಿ ನೀಡುವುದಾದಲ್ಲಿ ಸಹಸ್ರಾರು ರೂಪಾಯಿ ಬೆಲೆಯ ಈ ಎಲ್ ಇ ಡಿ ದೀಪಗಳಿಗೆ ( ಇವುಗಳ ಬೆಲೆ,ಅಳವಡಿಸುವ ವೆಚ್ಚ ಇತ್ಯಾದಿಗಳನ್ನು ಸೇರಿಸಿದಲ್ಲಿ ಸುಮಾರು ೨೦.೦೦೦ ರೂ.) ನಿಗದಿತ ಅವಧಿಗೆ ಖಾತರಿಯನ್ನು ನೀಡಲೇಬೇಕು.ಹಾಗೂ ಈ ಅವಧಿಯಲ್ಲಿ ಇವು ಕೆಟ್ಟು ಹೋದಲ್ಲಿ, ಹೊಸ ದೀಪಗಳನ್ನು ನೀಡಲೇಬೇಕು.ತಾನು ನೀಡಿದ್ದ ಅನುದಾನದ ಹಣವು ಪೋಲಾಗದಂತೆ ರಾಜ್ಯ ಸರ್ಕಾರವು ಈ ಬಗ್ಗೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. 

ಆದರೆ ಪುತ್ತೂರಿನ ಎಲ್ ಇ ಡಿ ದಾರಿದೀಪಗಳು ಕೆಟ್ಟುಹೋಗಲಾರಂಭಿಸಿ ಹಲವಾರು ತಿಂಗಳುಗಳೇ ಕಳೆದಿದ್ದು, ಇವುಗಳನ್ನು ಅಳವಡಿಸಿದ್ದ ಸಂಸ್ಥೆಗಳಿಗೆ ಈ ಬಗ್ಗೆ ದೂರನ್ನು ನೀಡಲಾಗಿದೆ. ಈ ಸಂಸ್ಥೆಗಳು ಕೆಟ್ಟು ಹೋಗಿರುವ ದೀಪಗಳನ್ನು ದುರಸ್ತಿಪಡಿಸಲು ಆರಂಭಿಸಿದ್ದರೂ, ಕೆಟ್ಟುಹೋಗುತ್ತಿರುವ ದೀಪಗಳ ಸಂಖ್ಯೆ ಇನ್ನಷ್ಟು ಹೆಚ್ಚಿದಂತೆಯೇ ಮೆಸ್ಕಾಂ ನವರ ವಯರಿಂಗ್ ನಲ್ಲಿರುವ ದೋಷವೇ ಇದಕ್ಕೆ ಕಾರಣವೆಂದು ದೂರಲು ಆರಂಭಿಸಿದ್ದಾರೆ!. ಜೊತೆಗೆ ಕೆಟ್ಟು ಹೋಗಿರುವ ದೀಪಗಳನ್ನು ದುರಸ್ತಿಪಡಿಸಲು ಸಾಕಷ್ಟು ಸಮಯವನ್ನೂ ತೆಗೆದುಕೊಳ್ಳಲು ಆರಂಭಿಸಿದ್ದಾರೆ.ಈ ವಿಚಾರದಲ್ಲಿ ೧೨೦ ದೀಪಗಳನ್ನು ಉಚಿತವಾಗಿ ನೀಡಿದ್ದ ಮತ್ತು ಸರ್ಕಾರದ ಅಂಗ ಸಂಸ್ಥೆಯಾಗಿರುವ ಕ್ರೆಡಲ್ ಕೂಡಾ ಅಪವಾದವೆನಿಸಿಲ್ಲ.

ಇದಕ್ಕೂ ಮಿಗಿಲಾಗಿ ಪುರಸಭೆಯು ಅನುದಾನದ ಹಣವನ್ನು ಬಳಸಿ ಅಳವಡಿಸಿದ್ದ ೧೯೫ ಎಲ್ ಇ ಡಿ ದೀಪಗಳಿಗಾಗಿ ಒಟ್ಟು ೩೮.೩೫ ಲಕ್ಷ ರೂ.ಗಳನ್ನೂ ವ್ಯಯಿಸಿದ್ದು, ಒಂದು ದೀಪದ ಬೆಲೆಯು ಸುಮಾರು ೧೯,೬೬೬ ರೂ.ಗಳಾಗುತ್ತದೆ!. ಇಷ್ಟೊಂದು ದುಬಾರಿ ಮೊತ್ತದ ದೀಪಗಳು ವರ್ಷ ಕಳೆಯುವಷ್ಟರಲ್ಲೇ ಕೆಟ್ಟುಹೋಗುವುದಾದಲ್ಲಿ, ಒಂದು ವರ್ಷದ ಖಾತರಿ ಇರುವ ಹಾಗೂ ಕೆಟ್ಟುಹೋದಲ್ಲಿ ಹೊಸ ದೀಪಗಳು ದೊರೆಯುವ ಮತ್ತು ಈ ದೀಪಗಳಿಗಿಂತ ಸಾಕಷ್ಟು ಕಡಿಮೆ ಬೆಲೆಗೆ ಲಭಿಸುವ ಸಿ ಎಫ್ ಎಲ್ ದಾರಿದೀಪಗಳನ್ನು ಖರೀದಿಸುವುದು ನಿಸ್ಸಂದೇಹವಾಗಿಯೂ ಸಮಂಜಸವೆನಿಸುವುದು. ಜೊತೆಗೆ ಈ ಎಲ್ ಇ ಡಿ ದಾರಿದೀಪಗಳ ಖರೀದಿ ಮತ್ತು ಅಳವಡಿಕೆಗಳ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿದಲ್ಲಿ, ಇವುಗಳ ಗುಣಮಟ್ಟದ ಮತ್ತು ಬೆಲೆಗಳ ಬಗ್ಗೆ ಸತ್ಯಸಂಗತಿ ಬಯಲಿಗೆ ಬರುವುದರಲ್ಲಿ ಸಂದೇಹವಿಲ್ಲ. 

ಕೊನೆಯ ಮಾತು 

 ರಾಜ್ಯದಲ್ಲಿ ಸಕಾಲ ಯೋಜನೆ ಜಾರಿಗೆ ಬಂದ ಬಳಿಕ ಕೆಟ್ಟು ಹೋದ ದಾರಿದೀಪಗಳನ್ನು ದುರಸ್ತಿಪಡಿಸಲು ೭ ದಿನಗಳ ಅವಧಿಯನ್ನು ನಿಗದಿಸಲಾಗಿದೆ. ಆದರೆ ಕೆಟ್ಟು ಹೋಗಿರುವ ಎಲ್ ಇ ಡಿ ದೀಪಗಳನ್ನು ದುರಸ್ತಿ ಪಡಿಸಲು ಇದಕ್ಕೊ ಹೆಚ್ಚಿನ ಅವಧಿಯನ್ನು ಬಳಸುತ್ತಿರುವ ಸಂಸ್ಥೆಗಳಿಂದಾಗಿ, ಪುತ್ತೂರು ಪುರಸಭೆಯ ಅಧಿಕಾರಿಗಳು ಕೆಟ್ಟು ಹೋಗಿರುವ ಎಲ್ ಇ ಡಿ ದಾರಿದೀಪಗಳ ಜಾಗದಲ್ಲಿ T 5 ಸಿ ಎಫ್ ಎಲ್ ದೀಪಗಳನ್ನು ಖರೀದಿಸಿ ಅಳವಡಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಸಮರ್ಪಕವಾಗಿ ಬಗೆಹರಿಸಲು ಚುನಾಯಿತ ಜನ ಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನವನ್ನು ಮಾಡುವರೇ ಎನ್ನುವುದನ್ನು ಕಾದುನೋಡಬೇಕಷ್ಟೇ!. 


ಸಾಮಾನ್ಯ ವಿದ್ಯುತ್ ಬಲ್ಬ್ ಗಳು ಕನಿಷ್ಠ ೧೦೦೦ ಗಂಟೆಗಳ ಕಾಲ ಬೆಳಗುತ್ತವೆ. ಆದರೆ ಸಿ ಎಫ್ ಎಲ್ ಬಲ್ಬ್ ಗಳು ಕನಿಷ್ಠ ೧೦,೦೦೦ ಗಂಟೆ ಮತ್ತು ಎಲ್ ಇ ಡಿ ಗಳು ೫೦,೦೦೦ ಗಂಟೆಗಳ ಕಾಲ ಬೆಳಗಲೇ ಬೇಕು. ಒಂದು ರಾತ್ರಿಯಲ್ಲಿ ಎಲ್ ಇ ಡಿ ದೀಪವು ಸರಾಸರಿ ೧೨ ಗಂಟೆಗಳ ಉರಿದಲ್ಲಿ, ಒಂದು ವರ್ಷದಲ್ಲಿ ೪೩೮೦ ಗಂಟೆ, ೧೩  ಗಂಟೆ ಉರಿದಲ್ಲಿ ೪೭೪೫ ಗಂಟೆ ಮತ್ತು ೧೪ ಗಂಟೆ ಉರಿದಲ್ಲಿ ೫೧೧೦ ಗಂಟೆಗಳ ಕಾಲ ಉರಿಯುತ್ತವೆ. ಇದೀಗ ೧೩ ಗಂಟೆಗಳ ಸರಾಸರಿಯನ್ನೇ ಹಿಡಿದಲ್ಲಿ, ಈ ದೀಪಗಳು ೧೦ ವರ್ಷಗಳ ಕಾಲ ಬಾಳ್ವಿಕೆ ಬರಲೇಬೇಕು. ಆದರೆ ಪುತ್ತೂರಿನಲ್ಲಿ ಅಳವಡಿಸಿರುವ ಎಲ್ ಇ ಡಿ ದೀಪಗಳು ವರ್ಷ ಕಳೆಯುವ ಮುನ್ನ ಹಾಗೂ ಕೆಲ ದೀಪಗಳು ವರ್ಷ ಕಳೆಯುವಷ್ಟರಲ್ಲೇ ಕೆಟ್ಟುಹೋಗುತ್ತಿರಲು ಕಾರಣವೇನು ?, ಎನ್ನುವುದು ಗುಟ್ಟಾಗಿಯೇ ಉಳಿಯಬಾರದು ಎನ್ನುವುದೇ ನಮ್ಮ ಆಶಯವಾಗಿದೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 








No comments:

Post a Comment