Wednesday, July 9, 2014

RAILWAYS AND CLEANLINESS



 ರೈಲ್ವೇ : ಗತವೈಭವವನ್ನು ಮರಳಿಗಳಿಸುವ ಯತ್ನ !

ನಮ್ಮ ದೇಶದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಅಧಿಕತಮ ಜನರು ರೈಲು ಪ್ರಯಾಣವನ್ನೇ ಆಯ್ಕೆ ಮಾಡುತ್ತಾರೆ. ಅದರಲ್ಲೂ ದೂರಪ್ರಯಾಣದ ಹಾಗೂ ತುಸು ದೀರ್ಘಾವಧಿಯ ಪ್ರಯಾಣಕ್ಕೆ " ಮಲಗಿ ಪಯಣಿಸುವ" ಸೌಕರ್ಯವಿರುವ ಸ್ಲೀಪರ್ ಕೋಚ್ ಗಳನ್ನೇ ಆಯ್ದುಕೊಳ್ಳುತ್ತಾರೆ. ಅನ್ಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಿಗಿಂತ ಸಾಕಷ್ಟು ಕಡಿಮೆ ವೆಚ್ಚದಲ್ಲಿ ಪಯಣಿಸಬಹುದಾದ ರೈಲುಗಳಲ್ಲಿ ಶೌಚಾಲಯ ಮತ್ತು ದೀರ್ಘ ಪ್ರಯಾಣದ ರೈಲುಗಳಲ್ಲಿ ಪ್ಯಾಂಟ್ರಿ ಕಾರ್ ಲಭ್ಯವಿರುವುದರಿಂದ, ವಿಶೇಷವಾಗಿ ವಯೋವೃದ್ಧರು, ಮಹಿಳೆಯರು ಮತ್ತು ಕುಟುಂಬ ಸಹಿತ ಪ್ರಯಾಣ ಮಾಡುವವರು ರೈಲುಗಳಿಗೆ ಮೊದಲ ಆದ್ಯತೆಯನ್ನು ನೀಡುತ್ತಾರೆ. ಆದರೆ ಕಳೆದ ಕೆಲವರ್ಷಗಳಿಂದ ರೈಲ್ವೆ ಇಲಾಖೆಯ ನಿರ್ಲಕ್ಷ್ಯ, ಹೆಚ್ಚುತ್ತಿರುವ ಅಪಘಾತಗಳು ಹಾಗೂ ಆರ್ಥಿಕ ಸಮಸ್ಯೆಗಳಿಂದ ಬಸವಳಿದ ಇಲಾಖೆಯು, ದೇಶದ ಉದ್ದಗಲಕ್ಕೆ ಸಂಚರಿಸುವ ಅಸಂಖ್ಯ ರೈಲುಗಳಲ್ಲಿ ಪ್ರಯಾಣಿಕರ ಸೌಕರ್ಯ, ಸುರಕ್ಷತೆ, ಸ್ವಚ್ಚತೆ ಮತ್ತಿತರ ವಿಚಾರಗಳ ಬಗ್ಗೆ ಗಮನಹರಿಸಲು ಮರೆತುಬಿಟ್ಟಿತ್ತು. ತತ್ಪರಿಣಾಮವಾಗಿ ರೈಲು ಪ್ರಯಾಣಿಕರಿಂದ ದೂರುಗಳ ಮಹಾಪೂರವೇ ಹರಿದುಬರಲಾರಂಭಿಸಿತ್ತು !. 

ಸ್ವಚ್ಚತೆಯತ್ತ ಇಲಾಖೆಯ ಚಿತ್ತ 

ಆದರೆ ನೂತನ ಸರ್ಕಾರದ ಮೊದಲ ರೈಲ್ವೆ ಬಜೆಟ್ ನಲ್ಲಿ ಪ್ರಯಾಣದ ದರಗಳನ್ನು ಹೆಚ್ಚಿಸದೇ ಪ್ರಯಾಣಿಕರನ್ನು ಓಲೈಸುವ ತಂತ್ರಕ್ಕೆ ಹೊರತಾಗಿ, ಬಜೆಟ್ ಗೆ ಮುನ್ನ ಹೆಚ್ಚಿಸಿದ್ದ ದರಗಳನ್ನು ಇಳಿಸದೇ, ಪ್ರಯಾಣಿಕರಿಗೆ ಒದಗಿಸುವ ಸೌಲಭ್ಯ, ಸ್ವಚ್ಚತೆ ಇತ್ಯಾದಿಗಳನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ರೈಲ್ವೆ ಸಚಿವರು ಮಂಡಿಸಿದ್ದಾರೆ. ಸಚಿವರೇ ಹೇಳಿದಂತೆ ರೈಲು ನಿಲ್ದಾಣಗಳು, ಬೋಗಿಗಳು ಮತ್ತು ಶೌಚಾಲಯಗಳ ನೈರ್ಮಲ್ಯವನ್ನು ಕಾಪಾಡುವುದು ಇಲಾಖೆಗೆ ಒಂದು ಸವಾಲಾಗಿ ಪರಿಣಮಿಸಿದೆ. ಇದೇ ಕಾರಣದಿಂದಾಗಿ ಶುಚಿತ್ವವನ್ನು ಕಾಪಾಡಲು ಈ ಬಜೆಟ್ ನಲ್ಲಿ ಹಲವು ಕ್ರಮಗಳನ್ನು ಘೋಷಿಸಿದ್ದು, ಗತವರ್ಷಕ್ಕಿಂತ ಶೇ.೪೦ ರಷ್ಟು ಅಧಿಕ ಮೊತ್ತವನ್ನು ಇದಕ್ಕಾಗಿಯೇ ತಗೆದಿರಿಸಲಾಗಿದೆ. ಜೊತೆಗೆ ಪ್ರಮುಖ ೫೦ ನಿಲ್ದಾಣಗಳಲ್ಲಿ ಸ್ವಚ್ಚತೆಯ ಹೊಣೆಗಾರಿಕೆಯನ್ನು ವೃತ್ತಿಪರ ಖಾಸಗಿ ಸಂಸ್ಥೆಗಳಿಗೆ ಹೊರಗುತ್ತಿಗೆಯ ರೂಪದಲ್ಲಿ ನೀಡಲಾಗುತ್ತದೆ. ರೈಲುಗಳು ಮತ್ತು ನಿಲ್ದಾಣಗಳಲ್ಲಿ ಸ್ವಚ್ಚತೆಯನ್ನು ಪರಿಪಾಲಿಸಲು ಪ್ರತ್ಯೇಕ ಹೌಸ್ ಕೀಪಿಂಗ್ ವಿಂಗ್ ಸ್ಥಾಪನೆ, ಸ್ವಚ್ಚತೆಯ ನಿರ್ವಹಣೆ ಮತ್ತು ಯಂತ್ರಗಳ ದುರಸ್ತಿಗೆ ಪ್ರತಿ ನಿಲ್ದಾಣದಲ್ಲೂ ಪ್ರತ್ಯೇಕ ನಿಧಿ ಸ್ಥಾಪನೆ, ಸಿ. ಸಿ ಟಿವಿ ಯ ಮೂಲಕ ಪರಿಶೀಲನೆ, ರೈಲುಗಳಲ್ಲಿ ಜೈವಿಕ ಶೌಚಾಲಯಗಳ ವ್ಯವಸ್ಥೆ, ಎ.ಸಿ ಬೋಗಿಗಳಲ್ಲಿ ಹಾಸಿಗೆ- ಹೊದಿಕೆಗಳ ಸ್ವಚ್ಚತೆಗೆ ಆದ್ಯತೆ, ಲಾಂಡ್ರಿಗಳ ಸಂಖ್ಯೆಯಲ್ಲಿ ಹೆಚ್ಚಳ, ಸ್ವಚ್ಚತೆಯನ್ನು ಪರಿಶೀಲಿಸಲು ವಿಶೇಷ ಅಧಿಕಾರಿಗಳ ತಂಡದ ನಿಯೋಜನೆ ಇತ್ಯಾದಿ ಅನೇಕ ಉಪಕ್ರಮಗಳನ್ನು ಸಚಿವರು ಈ ಬಾರಿಯ ಬಜೆಟ್ ನಲ್ಲಿ ಘೋಷಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಪ್ರಯಾಣಿಕರ ಊಟೋಪಚಾರಗಳ ಬಗ್ಗೆ ಅನುಷ್ಠಾನಗೊಳಿಸಲಿರುವ ಉಪಕ್ರಮಗಳು, ಪ್ರಯಾಣಿಕರು ಉತ್ಪಾದಿಸಲಿರುವ ತ್ಯಾಜ್ಯಗಳ ಪ್ರಮಾಣಗಳನ್ನು ಹೆಚ್ಚಿಸಲಿರುವುದರಿಂದ, ಬೋಗಿಗಳು, ರೈಲು ನಿಲ್ದಾಣಗಳು ಹಾಗೂ ಹಳಿಗಳು ಮತ್ತು ಶೌಚಾಲಯಗಳ ಸ್ವಚ್ಚತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಲಿವೆ. 

ಖಾದ್ಯಪೇಯಗಳಿಂದ ತ್ಯಾಜ್ಯ 

ದೂರಪ್ರಯಾಣದ ರೈಲುಗಳಲ್ಲಿ ಪ್ರಯಾಣಿಕರಿಗೆ ಖಾದ್ಯಪೇಯಗಳನ್ನು ಒದಗಿಸುವ ಪ್ಯಾಂಟ್ರಿ ಕಾರ್ ನಲ್ಲಿ ಲಭ್ಯ ಆಹಾರಪದಾರ್ಥಗಳ ಗುಣಮಟ್ಟಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಖ್ಯಾತನಾಮ ಸಂಸ್ಥೆಗಳ " ರೆಡಿ ಟು ಈಟ್ " ಖಾದ್ಯಗಳ ಸರಬರಾಜು ವ್ಯವಸ್ಥೆ, ಪ್ರಮುಖ ನಿಲ್ದಾಣಗಳಲ್ಲಿ ಫುಡ್ ಕೋರ್ಟ್ ಗಳ ಸ್ಥಾಪನೆ ಹಾಗೂ ಇ-ಮೇಲ್ ಮತ್ತು ಎಸ್.ಎಂ.ಎಸ್ ಮೂಲಕ ಬೇಕಾದ ಆಹಾರವನ್ನು ತರಿಸಿಕೊಳ್ಳುವ ವ್ಯವಸ್ಥೆ ಇತ್ಯಾದಿಗಳನ್ನೂ ಬಜೆಟ್ ನಲ್ಲಿ ಘೋಷಿಸಲಾಗಿದೆ. ಆದರೆ ಇಂತಹ ವ್ಯವಸ್ಥೆಗಳ ಮೂಲಕ ಸರಬರಾಜಾಗುವ ಆಹಾರಪದಾರ್ಥಗಳನ್ನು, ಪ್ಲಾಸ್ಟಿಕ್ ನಿರ್ಮಿತ ಕರಡಿಗೆ, ತಟ್ಟೆ, ಲೋಟ, ಚಮಚಗಳೊಂದಿಗೆ ಕೈಚೀಲಗಳಲ್ಲಿ ಸರಬರಾಜು ಮಾಡುವುದರಿಂದ, ರೈಲು ಪ್ರಯಾಣಿಕರು ಉತ್ಪಾದಿಸಲಿರುವ ತ್ಯಾಜ್ಯಗಳ ಪ್ರಮಾಣವೂ ಸ್ವಾಭಾವಿಕವಾಗಿಯೇ ಇನ್ನಷ್ಟು ಹೆಚ್ಚಲಿದೆ. ಜೊತೆಗೆ ಆಹಾರ ಸೇವನೆಯ ಬಳಿಕ ಬಹುತೇಕ ಪ್ರಯಾಣಿಕರು ರೈಲಿನಿಂದ ಹೊರಕ್ಕೆ ಎಸೆಯುವ ತ್ಯಾಜ್ಯಗಳು ಹಳಿಗಳ ಇಕ್ಕೆಲಗಳಲ್ಲಿ ರಾಶಿ ಬೀಳಲಿವೆ. 

ಈ ಸಮಸ್ಯೆಯನ್ನು ಬಗೆಹರಿಸಲು ಪ್ರತಿಯೊಂದು ಬೋಗಿಗಳಲ್ಲಿ ಸೂಕ್ತ ಗಾತ್ರದ ಕಸದ ಡಬ್ಬಿಗಳನ್ನು ಇರಿಸುವುದರೊಂದಿಗೆ, ಸಂಗ್ರಹಿತ ತ್ಯಾಜ್ಯಗಳನ್ನು ನಿಗದಿತ ನಿಲ್ದಾಣಗಳಲ್ಲಿ ತೆರವುಗೊಳಿಸಬೇಕಾಗುವುದು.ಇದಲ್ಲದೇ ಬೋಗಿಗಳಲ್ಲಿ ಅಲ್ಲಲ್ಲಿ ಎಸೆದಿರಬಹುದಾದ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಮತ್ತಷ್ಟು ಸಿಬಂದಿಗಳನ್ನು ನೇಮಿಸಬೇಕಾಗುವುದು. ಜೊತೆಗೆ ಸ್ವಚ್ಚತೆಯನ್ನು ಪರಿಶೀಲಿಸಲು ಇಲಾಖೆಯು ನಿಯೋಜಿಸಲಿರುವ ವಿಶೇಷ ಅಧಿಕಾರಿಗಳು, ಹದ್ದಿನ ಕಣ್ಣುಗಳಿಂದ ಇದರ ಮೇಲ್ವಿಚಾರಣೆಯನ್ನು ನಡೆಸಬೇಕಾಗುವುದು. ಇದಕ್ಕೂ ಮಿಗಿಲಾಗಿ ತ್ಯಾಜ್ಯಗಳನ್ನು ಕಿಟಕಿಗಳಿಂದ ಹೊರಕ್ಕೆ ಎಸೆಯದಂತೆ ಅವಶ್ಯಕ ಕ್ರಮಗಳನ್ನೂ ಜಾರಿಗೊಳಿಸಲೇಬೇಕಾಗುವುದು.ಇದರೊಂದಿಗೆ  ಪ್ರಯಾಣಿಕರು ನಿರಂತರವಾಗಿ ಬಳಸುವ ಶೌಚಾಲಯಗಳ ನೈರ್ಮಲ್ಯವನ್ನು ಕಾಪಾಡಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕೆ ತಪ್ಪಿದಲ್ಲಿ ರೈಲ್ವೆ ಇಲಾಖೆಯು ಸ್ವಚ್ಚತೆಯ ಬಗ್ಗೆ ಹಮ್ಮಿಕೊಂಡಿರುವ ಉಪಕ್ರಮಗಳು ಅರ್ಥಹೀನವೆನಿಸಲಿವೆ. 
 
ಕೊನೆಯ ಮಾತು 

ಕಳೆದ ಹತ್ತುವರ್ಷಗಳಲ್ಲಿ ಹಿಂದಿನ ರೈಲ್ವೇ ಸಚಿವರುಗಳು ೯೯ ಹೊಸ ರೈಲು ಮಾರ್ಗಗಳನ್ನು ಘೋಷಿಸಿದ್ದು, ಇದುವರೆಗೆ ಕೇವಲ ಒಂದು ಮಾರ್ಗದ ಕಾಮಗಾರಿಗಳು ಮಾತ್ರ ಪರಿಪೂರ್ಣಗೊಂಡಿವೆ. ಅಂತೆಯೇ ಈ ಬಾರಿಯ ರೈಲ್ವೇ ಬಜೆಟ್ ನಲ್ಲಿ ರೈಲು ನಿಲ್ದಾಣಗಳು ಮತ್ತು ಬೋಗಿಗಳಲ್ಲಿ ಸ್ವಚ್ಚತೆಯನ್ನು ಕಾಪಾಡುವ ಸಲುವಾಗಿ ಘೋಷಿಸಿರುವ ಹತ್ತು ಹಲವು ಉಪಕ್ರಮಗಳು, ಹಿಂದಿನ ರೈಲ್ವೇ ಸಚಿವರ ಘೋಷಣೆಗಳಂತೆ ನಿರರ್ಥಕವೆನಿಸದಿರಲಿ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 





No comments:

Post a Comment