Monday, July 28, 2014

AKRAMA - SAKRAMA AND CORRUPTION




 ಅಕ್ರಮ ಎಸಗಿದವರು ನಿರಾಳ : ಕಾನೂನು ಪರಿಪಾಲಿಸಿದವರಿಗೆ ಕಿರುಕುಳ !

ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಸತಿ, ವಾಣಿಜ್ಯ ಅಥವಾ ಅನ್ಯ ಉದ್ದೇಶಕ್ಕಾಗಿ ನೂತನ ಕಟ್ಟಡಗಳನ್ನು ನಿರ್ಮಿಸುವಾಗ, ರಸ್ತೆಯಿಂದ ಇಂತಿಷ್ಟು ಅಂತರವನ್ನು ಇರಿಸಿಕೊಳ್ಳಲೇಬೇಕೆನ್ನುವ ನಿಯಮವನ್ನು ಪರಿಪಾಲಿಸಬೇಕಾಗುತ್ತದೆ. ಈ ಅಂತರವು ನಗರದ ಪ್ರಧಾನರಸ್ತೆ, ಉಪರಸ್ತೆ ಮತ್ತು ಒಳರಸ್ತೆಗಳಿಗೆ ಅನುಗುಣವಾಗಿ ಒಂದಿಷ್ಟು ವ್ಯತ್ಯಯವಾಗುತ್ತದೆ. ಇದಲ್ಲದೇ ವಸತಿ ಸಮುಚ್ಚಯಗಳು, ಬಹುಮಹಡಿ ಕಟ್ಟಡಗಳು ಮತ್ತು ಹಲವಾರು ವಾಣಿಜ್ಯ ಮಳಿಗೆಗಳಿರುವ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವಾಗ, ಈ ಕಟ್ಟಡಗಳಲ್ಲಿರುವ ಅಂತಸ್ತುಗಳ ಸಂಖ್ಯೆ, ವಸತಿಗಳ ಸಂಖ್ಯೆ ಅಥವಾ ವಾಣಿಜ್ಯ ಮಳಿಗೆಗಳ ಸಂಖ್ಯೆಗಳಿಗೆ ಅನುಗುಣವಾಗಿ ಇಲ್ಲಿನ ನಿವಾಸಿಗಳ ಮತ್ತು ಇಲ್ಲಿಗೆ ಭೇಟಿ ನೀಡಬಹುದಾದ ಗ್ರಾಹಕರ ವಾಹನಗಳ ಸಂಖ್ಯೆಗಳ ಆಧಾರದ ಮೇಲೆ ವಾಹನಗಳ ನಿಲುಗಡೆಗೆ ಸ್ಥಳಾವಕಾಶವನ್ನು ಒದಗಿಸಲೇಬೇಕಾವುದು. ಕಟ್ಟಡದ ನಕ್ಷೆಯಲ್ಲಿ ಈ ಪ್ರಮುಖ ಅಂಶಗಳು ಇಲ್ಲದೆ ಇದ್ದಲ್ಲಿ, ನೂತನ ಕಟ್ಟಡದ ನಿರ್ಮಾಣಕ್ಕೆ ಪರವಾನಿಗೆಯನ್ನು ನಿರಾಕರಿಸಲಾಗುವುದು. ಇದು ರಾಜ್ಯ ಸರ್ಕಾರ ರೂಪಿಸಿರುವ ಹಾಗೂ ಕಾಲಕಾಲಕ್ಕೆ ತಕ್ಕಂತೆ ಪರಿಷ್ಕರಿಸಲ್ಪಡುವ ನಿಯಮವಾಗಿದ್ದು, ಬಹುತೇಕ ಅಧಿಕಾರಿಗಳು ಇದನ್ನು ಕಟ್ಟುನಿಟ್ಟಾಗಿ ಪರಿಪಾಲಿಸುತ್ತಾರೆ. ಅಂತೆಯೇ ಅಧಿಕತಮ ಜನರೂ ಈ ನೀತಿನಿಯಮಗಳನ್ನು ತಪ್ಪದೇ ಪರಿಪಾಲಿಸುತ್ತಾರೆ. 

ಆದರೆ ಇತ್ತೀಚಿನ ಕೆಲವರ್ಷಗಳಿಂದ ಇಂತಹ ನೀತಿನಿಯಮಗಳನ್ನು ಪರಿಪಾಲಿಸುವ ವ್ಯಕ್ತಿಗಳಿಗೆ ಕಿರುಕುಳ ನೀಡುವ ಮತ್ತು ಇವುಗಳನ್ನು ಉಲ್ಲಂಘಿಸುವ ವ್ಯಕ್ತಿಗಳಿಗೆ " ರಾಜ ಮರ್ಯಾದೆ" ಯನ್ನು ನೀಡುವ ಪರಿಪಾಠ ಆರಂಭವಾಗಿದ್ದು, ಇದಕ್ಕೆ ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು ಮತ್ತು  ರಾಜಕೀಯ ಪಕ್ಷಗಳ ಪ್ರಭಾವಶಾಲಿ ಕಾರ್ಯಕರ್ತರೂ ಕಾರಣವೆನಿಸಿದ್ದಾರೆ. ಇದರೊಂದಿಗೆ ನಿಗದಿತ ಕಾನೂನುಗಳನ್ನು ಪರಿಪಾಲಿಸಿದರೂ ಕಿರುಕುಳ ನೀಡುವ ಅಧಿಕಾರಿಗಳ ಕೆಟ್ಟ ಹವ್ಯಾಸದಿಂದ ನೊಂದ ಕೆಲ ಜನರು, ಅನ್ಯಮಾರ್ಗವಿಲ್ಲದೇ ತತ್ಸಂಬಂಧಿತ ಅಧಿಕಾರಿಗಳಿಗೆ ಕಪ್ಪ- ಕಾಣಿಕೆಗಳನ್ನು ಸಲ್ಲಿಸುವ ಮೂಲಕ ತಮ್ಮ ಕಟ್ಟಡದ ನಿರ್ಮಾಣಕ್ಕೆ ಪರವಾನಿಗೆಯನ್ನು ಪಡೆದುಕೊಳ್ಳುತ್ತಾರೆ. ಈ ರೀತಿಯಲ್ಲಿ ಸರ್ಕಾರವೇ ರೂಪಿಸಿರುವ ನೀತಿನಿಯಮಗಳನ್ನು ಉಲ್ಲಂಘಿಸುವುದರಿಂದ, ಅಧಿಕತಮ ನಗರ- ಪಟ್ಟಣಗಳ ರಸ್ತೆಗಳು ವಿಸ್ತರಿತಗೊಳ್ಳದೇ ಯಥಾಸ್ಥಿತಿಯಲ್ಲಿ ಉಳಿದುಕೊಳ್ಳುತ್ತವೆ. ತತ್ಪರಿಣಾಮವಾಗಿ ಆಯಾ ನಗರ- ಪಟ್ಟಣಗಳಲ್ಲಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಲಭಿಸದ ಕಾರಣದಿಂದಾಗಿ ವಾಹನಗಳು ರಸ್ತೆಯ ಅಂಚಿನಲ್ಲೇ ತಂಗುತ್ತವೆ. ಹಾಗೂ ಇದೇ ಕಾರಣದಿಂದಾಗಿ ಸ್ಥಳೀಯ ರಸ್ತೆಗಳಲ್ಲಿ ಜನ- ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುವುದರಿಂದ, ದಿನನಿತ್ಯ ಟ್ರಾಫಿಕ್ ಜಾಮ್ ಉದ್ಭವಿಸುತ್ತದೆ. ದ.ಕ ಜಿಲ್ಲೆಯ ಪುತ್ತೂರು ನಗರವೂ ಈ ಸಮಸ್ಯೆಗೆ ಅಪವಾದವೆನಿಸಿಲ್ಲ. 

ಅಕ್ರಮ ಕಟ್ಟಡಗಳು 

ಪುತ್ತೂರಿನ ಪ್ರಧಾನ ರಸ್ತೆಯೂ ಸೇರಿದಂತೆ, ನಗರದ ವಿವಿಧಭಾಗಗಳಲ್ಲಿರುವ ಅನೇಕ ರಸ್ತೆಗಳ ಅಂಚಿನಲ್ಲೇ ನೂತನ ಕಟ್ಟಡಗಳನ್ನು ನಿರ್ಮಿಸಿರುವುದನ್ನು ನೀವೂ ಗಮನಿಸಿರಲೇಬೇಕು. ಅದೇ ರೀತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿದ್ದ ಅನೇಕ ಬಹುಮಹಡಿ ವಾಣಿಜ್ಯ ಸಂಕೀರ್ಣ ಮತ್ತು ಅನ್ಯ ಕಟ್ಟಡಗಳ ನೆಲ ಅಂತಸ್ತಿನಲ್ಲಿ ವಾಹನಗಳ ಪಾರ್ಕಿಂಗ್ ಎಂದು ನಕ್ಷೆಯಲ್ಲಿ ತೋರಿಸಿ, ಬಳಿಕ ವಾಣಿಜ್ಯ ಮಳಿಗೆಗಳನ್ನು ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳ ಸಂಖ್ಯೆಯೂ ಕಡಿಮೆಯೇನಿಲ್ಲ. ವಿಶೇಷವೆಂದರೆ ಇಂತಹ ಕಟ್ಟಡಗಳ ಮಾಲೀಕರು ಇದೀಗ ಮತ್ತೊಮ್ಮೆ ಕಾನೂನು ಬಾಹಿರವಾಗಿ ತಮ್ಮ ಬಹುಮಹಡಿ ಕಟ್ಟಡಗಳ ಮೇಲೆ ಮತ್ತೊಂದು ಅಂತಸ್ತನ್ನು ನಿರ್ಮಿಸಲು ಪುರಸಭೆಯ ಅಧಿಕಾರಿಗಳು ಅನುಮತಿಯನ್ನು ನೀಡಿರುವುದಾದರೂ ಹೇಗೆ?, ಎನ್ನುವ ಸಂದೇಹ ನಿಮ್ಮನ್ನೂ ಕಾಡುತ್ತಿರಬಹುದು.ಈ ಬಗ್ಗೆ ವಿಚಾರಿಸಿದಾಗ, ಕಟ್ಟಡದ ಮಾಲಕರಿಗೆ ನೋಟೀಸ್ ಜಾರಿಮಾಡಲಾಗಿದೆ ಎನ್ನುವ ಉತ್ತರ ದೊರೆಯುತ್ತದೆ. ಆದರೆ ಇಂದಿನ ತನಕ ಇಂತಹ ಅಕ್ರಮ ಕಟ್ಟಡಗಳನ್ನು ಕೆಡವಿದ ಒಂದೇ ಒಂದು ಉದಾಹರಣೆ ಪುತ್ತೂರಿನಲ್ಲಿ ನಡೆದಿಲ್ಲ.ಅಂತೆಯೇ ಬಹುಮಹಡಿ ಕಟ್ಟಡಗಳ ನೆಲ ಅಂತಸ್ತಿನಲ್ಲಿ ವಾಹನಗಳ ಪಾರ್ಕಿಂಗ್ ಎಂದು ನಕ್ಷೆಯಲ್ಲಿ ನಮೂದಿಸಿ, ಬಳಿಕ ಅಕ್ರಮವಾಗಿ ನಿರ್ಮಿಸಿದ್ದ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಿ ಪಾರ್ಕಿಂಗ್ ಸ್ಥಳಾವಕಾಶವನ್ನು ಕಲ್ಪಿಸಿರುವ ಒಂದೇ ಒಂದು ಉದಾಹರಣೆಯೂ ಕಾಣಸಿಕ್ಕಿಲ್ಲ. ಇದನ್ನು  ಒಂದು ಕಣ್ಣಿಗೆ ಬೆಣ್ಣೆ ಎನ್ನುವುದಾದಲ್ಲಿ, ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವ ಪ್ರವರ ಇಂತಿದೆ. 

ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡವನ್ನು ನಿರ್ಮಿಸುವ ಮುನ್ನ ಅವಶ್ಯಕ ದಾಖಲೆಗಳು ಮತ್ತು ಕಟ್ಟಡದ ನಕ್ಷೆ ಇತ್ಯಾದಿಗಳನ್ನು ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿ, ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ತದನಂತರ ಈ ದಾಖಲೆಗಳು, ನಕ್ಷೆಗಳು ಮತ್ತು ಪುಡಾ ನೀಡಿದ ಅನುಮತಿ ಪತ್ರಗಳನ್ನು ಪುರಸಭೆಗೆ ನೀಡಿ, ನಿಗದಿತ ಅಭಿವೃದ್ಧಿ ಶುಲ್ಕ ಹಾಗೂ ಅನ್ನಿತರ ಶುಲ್ಕಗಳನ್ನು ಪಾವತಿಸಿ ಕಟ್ಟಡ ನಿರ್ಮಾಣ ಪರವಾನಿಗೆಯನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಕೆಲ ಪ್ರಕರಣಗಳಲ್ಲಿ ಕಟ್ಟಡದ ನಕ್ಷೆಯಲ್ಲಿರುವ ಸೆಟ್ ಬ್ಯಾಕ್, ವಾಹನಗಳ ಪಾರ್ಕಿಂಗ್ ಇತ್ಯಾದಿಗಳು ನಿಯಮದಂತೆ ಇವೆ ಎಂದು ಪುಡಾ ಅಧಿಕಾರಿಗಳು ಅನುಮೋದಿಸಿ ಅನುಮತಿಯನ್ನು ನೀಡಿದ್ದರೂ, ಪಾದಚಾರಿಗಳು ನಡೆದಾಡಲು ಇರುವಂತಹ ಕಾಲುದಾರಿಯನ್ನು ಪಾರ್ಕಿಂಗ್ ಪ್ರದೇಶವೆಂದು ತೋರಿಸಿರುವುದಾಗಿ ನೆಪವನ್ನು ಒಡ್ಡುವ ಮೂಲಕ, ಅರ್ಜಿದಾರರನ್ನು ಅನಾವಶ್ಯಕವಾಗಿ ಸತಾಯಿಸಿ ಕಿರುಕುಳವನ್ನು ನೀಡುತ್ತಿರುವ ಪ್ರಕರಣಗಳು  ಇತ್ತೀಚೆಗೆ ನಡೆದಿದೆ. ಪ್ರಾಯಶಃ ಇದೇ ರೀತಿಯಲ್ಲಿ ಇಲ್ಲಸಲ್ಲದ ನೆಪವನ್ನು ಮುಂದೊಡ್ಡಿ, ಕಾನೂನಿನಂತೆ ಕಟ್ಟಡಗಳನ್ನು ನಿರ್ಮಿಸಲು ಅರ್ಜಿಸಲ್ಲಿಸಿದ ಪ್ರಾಮಾಣಿಕ ಜನರಿಗೆ ತೊಂದರೆ ನೀಡುವ ಘಟನೆಗಳ ಸಂಖ್ಯೆಯೂ ಹೆಚ್ಚುತ್ತಿರುವ ಸಾಧ್ಯತೆಗಳೂ ಇವೆ. ಜನಸಾಮಾನ್ಯರು ದೂರುವಂತೆ ಇಂತಹ ಕೆಲಸಕಾರ್ಯಗಳನ್ನು ಕ್ಷಿಪ್ರಗತಿಯಲ್ಲಿ ಮಾಡಿಸಿ ಕೊಡುವ ಮಧ್ಯವರ್ತಿಗಳ ಮೂಲಕ ವ್ಯವಹಾರವನ್ನು ನಡೆಸಿದಲ್ಲಿ, ರಾಜಕೀಯ ಪ್ರಭಾವವನ್ನು ಬಳಸಿದಲ್ಲಿ ಅಥವಾ ಅನಧಿಕೃತವಾಗಿ ಕಪ್ಪ-ಕಾಣಿಕೆಗಳನ್ನು ಸಲ್ಲಿಸಿದಲ್ಲಿ, ಯಾವುದೇ ರೀತಿಯ ಅಡೆತಡೆಗಳಿಲ್ಲದೇ ಪರವಾನಿಗೆಯನ್ನು ಪಡೆದುಕೊಳ್ಳಬಹುದಾಗಿದೆ!. 

ಕಾನೂನುಗಳನ್ನು ರೂಪಿಸಿವುದೇಕೆ?

ನಮ್ಮ ದೇಶದ ಜನತೆ ನೆಮ್ಮದಿಯಿಂದ ಜೀವಿಸಲು ಅನುಕೂಲವಾಗುವಂತೆ ಅನೇಕ ಕಾನೂನುಗಳನ್ನು ರೂಪಿಸಲಾಗಿದೆ. ಆದರೆ ಇವೆಲ್ಲಾ ಕಾನೂನುಗಳನ್ನು ಅನುಷ್ಠಾನಗೊಳಿಸಲು ಬೇಕಾದ ಇಚ್ಚಾಶಕ್ತಿ ನಮ್ಮನ್ನಾಳುವವರಲ್ಲಿ ಇಲ್ಲದಾಗಿದೆ. ಇದರೊಂದಿಗೆ ಭ್ರಷ್ಟಾಚಾರದ ಕಬಂಧಬಾಹುಗಳು ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಕವಾಗಿ ಹರಡಿದ್ದು, ಕಾನೂನುಗಳನ್ನು ಉಲ್ಲಂಘಿಸುವ ವ್ಯಕ್ತಿಗಳಿಗೆ ಶ್ರೀರಕ್ಷೆಯಾಗಿ ಪರಿಣಮಿಸಿದೆ. 

ಇಷ್ಟು ಮಾತ್ರವಲ್ಲ, ಸರ್ಕಾರವೇ ಅನೇಕ ಸಂದರ್ಭಗಳಲ್ಲಿ " ಅಕ್ರಮ " ಗಳನ್ನು " ಸಕ್ರಮ " ಗೊಳಿಸುವ ಕಾಯಿದೆಗಳನ್ನು ರೂಪಿಸಿ ಜಾರಿಗೊಳಿಸುವ ಮೂಲಕ, ನಿರಂತರವಾಗಿ ನಡೆಯುತ್ತಿರುವ ಅಕ್ರಮಗಳಿಗೆ ಪರೋಕ್ಷವಾಗಿ ಬೆಂಬಲವನ್ನು ನೀಡುತ್ತಿದೆ. ತತ್ಪರಿಣಾಮವಾಗಿ ದೇಶದ ಪ್ರಾಮಾಣಿಕ ಪ್ರಜೆಗಳು ಅಯಾಚಿತ ಸಮಸ್ಯೆಗಳಿಗೆ ಒಳಗಾಗುವಂತಹ ಸನ್ನಿವೇಶಗಳು ಸೃಷ್ಠಿಸಲ್ಪಡುತ್ತಿವೆ. ವಿಶೇಷವೆಂದರೆ ಸರ್ಕಾರಕ್ಕೆ ಈ ವಿಚಾರದ ಅರಿವಿದ್ದರೂ, ಅಧಿಕಾರದ ಗದ್ದುಗೆಯನ್ನು ಏರಿರುವ ರಾಜಕೀಯ ಪಕ್ಷಗಳ ನೇತಾರರು, ತಮ್ಮ " ಮತ ನಿಧಿ " ಗಳನ್ನು ಕಾಯ್ದುಕೊಳ್ಳಲು ಹಾಗೂ ಇನ್ನಷ್ಟು ವೃದ್ಧಿಸುವ ಸಲುವಾಗಿ ಇವೆಲ್ಲವನ್ನೂ ಕಂಡೂ ಕಾಣದಂತೆ ವರ್ತಿಸುತ್ತಾರೆ!. 

ಕೊನೆಯ ಮಾತು 

ಅಣ್ಣಾ ಹಜಾರೆಯವರ " ಭ್ರಷ್ಟಾಚಾರದ ವಿರುದ್ಧ ಹೋರಾಟ " ಕ್ಕೆ ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಬೆಂಬಲವನ್ನು ನೀಡಿದ್ದ ದೇಶದ ಯುವಜನತೆ ಮತ್ತು ಮಧ್ಯಮ ವರ್ಗದ ಜನರು, ತಮ್ಮದೇ ಊರಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಈ ರೀತಿಯ ಶೋಷಣೆಗಳ ವಿರುದ್ಧ ಹೋರಾಡಲು ಸಿದ್ಧರಿರುವುದಿಲ್ಲ. ಆದರೆ ಇಂತಹ ಘಟನೆಗಳು ಸಂಭವಿಸಿದಾಗ, ಇವುಗಳ ವಿರುದ್ಧ ಹೋರಾಡುತ್ತಿರುವ ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರನ್ನು ಸಂಪರ್ಕಿಸಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸುತ್ತಾರೆ. ಸಂಘಟನೆಗಳ ಕಾರ್ಯಕರ್ತರು ಈ ಬಗ್ಗೆ ಲಿಖಿತ ದೂರನ್ನು ನೀಡುವಂತೆ ಸೂಚಿಸಿದೊಡನೆ, ಅದೃಶ್ಯರಾಗುವ ದೂರುದಾರರು ಮತ್ತೆಂದೂ ಈ ಕಾರ್ಯಕರ್ತರನ್ನು ಸಂಪರ್ಕಿಸುವುದೇ ಇಲ್ಲ!.ಇದನ್ನು ಗಮನಿಸಿದಾಗ  ಆಂಗ್ಲ ಭಾಷೆಯಲ್ಲಿ ಹೇಳುವಂತೆ " ಮತ್ತೊಬ್ಬರ ಹೆಗಲಿನ ಮೇಲೆ ಬಂದೂಕನ್ನು ಇರಿಸಿ ಗುಂಡು ಹಾರಿಸುವ ಪ್ರವೃತ್ತಿ " ಯು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ ಎನ್ನುವುದರಲ್ಲಿ ಮಾತ್ರ ಸಂದೇಹವಿಲ್ಲ. 

ನಿಜ ಹೇಳಬೇಕಿದ್ದಲ್ಲಿ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಂಘಟಿತ ಹೋರಾಟವನ್ನು ನಡೆಸಲು ಸಿದ್ಧರಿರುವ ಜನರಿಗೆ ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರು ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲಗಳನ್ನು ನೀಡಲು ಸಿದ್ಧರಿರುತ್ತಾರೆ. ಆದರೆ ಈ ಸಂದರ್ಭದಲ್ಲಿ ಸಂಬಂಧಿತ ಅಧಿಕಾರಿಗಳಿಗೆ ತಮ್ಮ ಬಗ್ಗೆ ಅವಶ್ಯಕ ಮಾಹಿತಿಗಳು ತಿಳಿಯುವ ಸಾಧ್ಯತೆಗಳಿರುವುದರಿಂದ, ಇನ್ನಷ್ಟು ಕಿರುಕುಳಕ್ಕೆ ಒಳಗಾಗಬಹುದೆನ್ನುವ ಭೀತಿಯಿಂದ ಸಂತ್ರಸ್ತರು ದೂರು ನೀಡಲು ಹಿಂಜರಿಯುತ್ತಾರೆ. ಅರ್ಥಾತ್ "ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? " ಎನ್ನುವಂತಹ ಈ ಸಮಸ್ಯೆಯನ್ನು ಪರಿಹರಿಸುವವರು ಯಾರು?, ಎನ್ನುವ ಪ್ರಶ್ನೆಗೆ ಉತ್ತರ ದೊರೆಯುವ ಸಾಧ್ಯತೆಗಳೇ ಇಲ್ಲ. 


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 



  

No comments:

Post a Comment