Monday, June 16, 2014

PROTECT ENVIRONMENT






 

 ತ್ಯಾಜ್ಯಗಳನ್ನು ಸಂಗ್ರಹಿಸಿ : ಪರಿಸರವನ್ನು ಸಂರಕ್ಷಿಸಿ 

ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಆರಂಭವಾಗುವ ಮುಂಗಾರು ಮಳೆಯ ಅಬ್ಬರವು, ಈ ಬಾರಿ ಅತ್ಯಂತ ದುರ್ಬಲವಾಗಿದೆ. ಧಾರಾಕಾರ ವರ್ಷಾಧಾರೆಗೆ ಬದಲಾಗಿ, ಬಿಸಿಲು- ಮಳೆಗಾಲ ಕಣ್ಣುಮುಚ್ಚಾಲೆ ನಡೆಯುತ್ತಲೇ ಇದೆ. ಅವಶ್ಯಕ ಪ್ರಮಾಣದ ಮಳೆ ಬೀಳದಿದ್ದಲ್ಲಿ ನೀರಿನ ಕೊರತೆಯೊಂದಿಗೆ, ಬೆಲೆಯೇರಿಕೆಯ ಬಿಸಿಯೂ ಜನಸಾಮಾನ್ಯರನ್ನು ಕಾಡಲಿದೆ. ಆದರೆ ಈ ರೀತಿಯ ಹವಾಮಾನದ ವ್ಯತ್ಯಯಗಳಿಗೆ ನಾವಿಂದು ಅತಿಯಾಗಿ ಉತ್ಪಾದಿಸುತ್ತಿರುವ ಹಾಗೂ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡದೇ ರಾಶಿಹಾಕಿರುವ ತ್ಯಾಜ್ಯಗಳೂ ಕಾರಣವೆನಿಸುತ್ತಿವೆ. ಅದರಲ್ಲೂ ನಾವು ನೀವೆಲ್ಲರೂ ಬಳಸಿ ಎಸೆಯುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳು, ಕೇವಲ ಹವಾಮಾನದ ವ್ಯತ್ಯಯ ಮಾತ್ರವಲ್ಲ, ಅನೇಕ ವಿಧದ ಅನ್ಯ ಸಮಸ್ಯೆಗಳಿಗೂ ಕಾರಣವೆನಿಸುತ್ತಿವೆ. 

ಹವಾಮಾನದ ವ್ಯತ್ಯಯ 

ಕಳೆದ ಕೆಲ ವರುಷಗಳಿಂದ ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ಕಂಡುಬರುತ್ತಿರುವ ಹವಾಮಾನದ ವ್ಯತ್ಯಯಗಳಿಂದಾಗಿ, ಜನಸಾಮಾನ್ಯರಿಗೆ ಮತ್ತು ಸರ್ಕಾರಗಳಿಗೆ ಸಾಕಷ್ಟು ಕಷ್ಟನಷ್ಟಗಳು ಸಂಭವಿಸುತ್ತಿವೆ. ದೇಶದ ಒಂದು ಭಾಗದಲ್ಲಿ ಬೇಸಗೆಯ ಧಗೆಯೊಂದಿಗೆ ಏರುತ್ತಿರುವ ತಾಪಮಾನದ ಮಟ್ಟವು ಅನೇಕ ಜೀವಗಳನ್ನು ಈಗಾಗಲೇ ಬಲಿಪಡೆದಿದೆ. ಇನ್ನು ಕೆಲ ರಾಜ್ಯಗಳಲ್ಲಿ ಅಕಾಲಿಕ ಅತಿವೃಷ್ಟಿ ಹಾಗೂ ಆಲಿಕಲ್ಲು ಮಳೆ ಸುರಿದ ಪರಿಣಾಮವಾಗಿ ರೈತಾಪಿ ಜನರು ಬೆಳೆದಿರುವ ವಿವಿಧ ಬೆಳೆಗಳು ಹಾನಿಗೀಡಾಗಿವೆ. ಅದೇ ರೀತಿಯಲ್ಲಿ ಮುಂಗಾರು ಮಳೆಯ ಕಣ್ಣುಮುಚ್ಚಾಲೆಯಿಂದಾಗಿ ಹಲವಾರು ರಾಜ್ಯಗಳಲ್ಲಿ " ಬರ " ದ ಹಾಗೂ ಅನಾವೃಷ್ಟಿಯ ಭಯ ಕಾಡುತ್ತಿದೆ. ಈ ಸಮಸ್ಯೆಗೆ ಅತಿಯಾದ ಪರಿಸರ ಪ್ರದೂಷಣೆಯ ಪರಿಣಾಮವಾಗಿ ಏರುತ್ತಿರುವ ತಾಪಮಾನವೂ ಕಾರಣವೆನಿಸುತ್ತಿದೆ. ಇವೆಲ್ಲಕ್ಕೂ ಮಿಗಿಲಾಗಿ ನಾವಿಂದು ಅತಿಯಾಗಿ ಉತ್ಪಾದಿಸುತ್ತಿರುವ ತ್ಯಾಜ್ಯಗಳು ಮತ್ತು ಇದರಿಂದಾಗಿ ಸಂಭವಿಸುತ್ತಿರುವ ಪರಿಸರ ಪ್ರದೂಷಣೆ ಮೂಲವೆನಿಸುತ್ತಿರುವುದು ಸುಳ್ಳೇನಲ್ಲ. ಅಯಾಚಿತ ಸಮಸ್ಯೆಗಳಿಗೆ ಕಾರಣವೆನಿಸುತ್ತಿರುವ ಜನಸಾಮಾನ್ಯರ ಈ ಕೆಟ್ಟ ಹವ್ಯಾಸವನ್ನು ನಿವಾರಿಸದೇ ಇದ್ದಲ್ಲಿ, ಇಂತಹ ಸಮಸ್ಯೆಗಳು ಅನಿಯಂತ್ರಿತವಾಗಿ ವೃದ್ಧಿಸಲಿವೆ. 

ತ್ಯಾಜ್ಯಗಳನ್ನು ಸಂಗ್ರಹಿಸಿ 

ಜನಸಾಮಾನ್ಯರು ಪ್ರತಿನಿತ್ಯ ಉತ್ಪಾದಿಸುವ ವೈವಿಧ್ಯಮಯ ತ್ಯಾಜ್ಯಗಳನ್ನು ವೈಜ್ಞಾನಿಕ ವಿಧಾನಗಳಿಂದ ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡುವ ವ್ಯವಸ್ಥೆಯು ನಮ್ಮ ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳಲ್ಲಿ ಲಭ್ಯವಿಲ್ಲ. ಆದರಲ್ಲೂ ಅತ್ಯಂತ ಅಪಾಯಕಾರಿ ಎನಿಸುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಪುನರ್ ಆವರ್ತನಗೊಳಿಸುವ ಅಥವಾ ಮತ್ತೆ ಇದರಿಂದ ಇಂಧನವನ್ನು ಉತ್ಪಾದಿಸುವ ವ್ಯವಸ್ಥೆ ನಮ್ಮಲ್ಲಿ ಲಭ್ಯವಿರಲಿಲ್ಲ. ಆದರೆ ಇದೀಗ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ  ಬೆಳ್ಳಾರೆಯಲ್ಲಿ ಸುಮಾರು ೧.೬ ಕೋಟಿ ರೂ. ವೆಚ್ಚದಲ್ಲಿ ಇಂತಹ ಘಟಕವೊಂದು ಸಿದ್ಧಗೊಳ್ಳುತ್ತಿದ್ದು, ವಿವಿಧರೀತಿಯ " ಸ್ವಚ್ಚವಾಗಿರುವ ಪ್ಲಾಸ್ಟಿಕ್ ತ್ಯಾಜ್ಯ " ಗಳನ್ನು ಸಂಗ್ರಹಿಸಿ, ಇವುಗಳಿಂದ ಇಂಧನವನ್ನು ಪಡೆಯುವ ಮೂಲಕ ಪ್ಲಾಸ್ಟಿಕ್ ತ್ಯಾಜ್ಯಗಳ ಸಮಸ್ಯೆಯನ್ನು ಪರಿಹರಿಸಲಿದೆ. ಮುಂದಿನ ತಿಂಗಳಿನಲ್ಲಿ ಪ್ರಾರಂಭವಾಗಲಿರುವ ಈ ಘಟಕಕ್ಕೆ ನಾವು ದಿನನಿತ್ಯ ಉತ್ಪಾದಿಸುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ನೀಡುವ ಮೂಲಕ ಕಿಂಚಿತ್ ಆದಾಯವನ್ನೂ ಗಳಿಸಬಹುದಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಸಿದ್ಧಗೊಳ್ಳಲಿರುವ ಈ ಘಟಕವು ಪರಿಸರಸ್ನೇಹಿಯಾಗಿದ್ದು, ಯಾವುದೇ ರೀತಿಯ ಪ್ರದೂಷಣೆಗೆ ಕಾರಣವೆನಿಸುವುದಿಲ್ಲ. ತ್ಯಾಜ್ಯ ಪ್ಲಾಸ್ಟಿಕ್ ನ್ನು ಮರುಸಂಸ್ಕರಣೆ ಮಾಡುವ ಸಂದರ್ಭದಲ್ಲಿ ಉತ್ಪನ್ನವಾಗುವ ಅನಿಲವನ್ನೇ ಈ ಘಟಕದಲ್ಲಿರುವ ಯಂತ್ರಗಳಿಗೆ ಇಂಧನವನ್ನಾಗಿ ಬಳಸುವುದರಿಂದ, ಪ್ರತ್ಯೇಕ ಇಂಧನಕ್ಕಾಗಿ ಹಣವನ್ನು ವ್ಯಯಿಸಬೇಕಾಗಿಲ್ಲ. 

ಪ್ಲಾಸ್ಟಿಕ್ ನಿಂದ ಇಂಧನ 

ಬಹುತೇಕ ಜನರಿಗೆ ಪ್ಲಾಸ್ಟಿಕ್ ತಯಾರಿಕೆಗೆ ಭೂಗರ್ಭದಲ್ಲಿ ದೊರೆಯುವ ಕಚ್ಚಾ ತೈಲವೇ ಮೂಲವೆಂದು ತಿಳಿದಿಲ್ಲ. ಕಚ್ಚಾ ತೈಲವನ್ನು ಸಂಸ್ಕರಿಸಿ ಪೆಟ್ರೋಲ್ ಮತ್ತು ಡೀಸೆಲ್ ಗಳನ್ನು ತಯಾರಿಸುವ ಸಂದರ್ಭದಲ್ಲಿ ಇದರ ಉಪ ಉತ್ಪನ್ನವಾಗಿರುವ ಪ್ಲಾಸ್ಟಿಕ್ ಲಭಿಸುತ್ತದೆ. ಇದೇ ಕಾರಣದಿಂದಾಗಿ ತ್ಯಾಜ್ಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮರಳಿ ತೈಲ ರೂಪಿ ಇಂಧನವನ್ನಾಗಿ ಪರಿವರ್ತಿಸಬಹುದಾಗಿದೆ. ರಿಕ್ಲೈಮೇಶನ್ ವಿಧಾನದಿಂದ ಸುಮಾರು ೫೦೦ ಕಿಲೋ ತ್ಯಾಜ್ಯ ಪ್ಲಾಸ್ಟಿಕ್ ತ್ಯಾಜ್ಯಗಳಿಂದ  ೨೫೦ ಲೀಟರ್ ದ್ರವರೂಪಿ ಇಂಧನವನ್ನು ಪಡೆಯಬಹುದಾಗಿದೆ. ಹಾಗೂ ಇದನ್ನು ವಿದ್ಯುತ್ ಜನಕ, ವಾಹನಗಳು ಮತ್ತು ಕಾರ್ಖಾನೆಗಳ ಬಾಯ್ಲರ್ ಗಳಲ್ಲಿ ಬಳಸಬಹುದಾಗಿದೆ. ಇವೆಲ್ಲಕ್ಕೂ ಮಿಗಿಲಾಗಿ ಈ ಇಂಧನದ ಬೆಲೆಯೂ ಡೀಸೆಲ್ ಹಾಗೂ ಪೆಟ್ರೋಲ್ ಗಳಿಗಿಂತಲೂ ಸಾಕಷ್ಟು ಕಡಿಮೆಯಿರುತ್ತದೆ. 

ದ.ಕ ಜಿಲ್ಲೆಯ ೨೦೩ ಗ್ರಾಮಪಂಚಾಯತ್ ಗಳ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಈ ಘಟಕವು ಬಳಸಲಿದ್ದು, ಇದರಿಂದಾಗಿ ಪ್ಲಾಸ್ಟಿಕ್ ತ್ಯಾಜ್ಯಗಳ ವೈಜ್ಞಾನಿಕ ಮತ್ತು ಸುರಕ್ಷಿತ ವಿಲೇವಾರಿಗಾಗಿ ಈ ಸ್ಥಳೀಯ ಸಂಸ್ಥೆಗಳು ತಮ್ಮ ಆದಾಯವನ್ನು ವ್ಯಯಿಸಬೇಕಿಲ್ಲ. ಅಂತೆಯೇ ನೂತನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಸರ್ಕಾರವು ಕೋಟ್ಯಂತರ ರೂ.ಗಳನ್ನು ವ್ಯಯಿಸಬೇಕಾಗಿದ್ದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಇಂಧನವನ್ನಾಗಿ ಪರಿವರ್ತಿಸುವ ಘಟಕಗಳನ್ನು ಸ್ಥಾಪಿಸಿದಲ್ಲಿ, ಲ್ಯಾಂಡ್ ಫಿಲ್ ಸೈಟ್ ಗಳಲ್ಲಿ ಬಂದುಬೀಳುವ ಪ್ಲಾಸ್ಟಿಕ್ ತ್ಯಾಜ್ಯಗಳ ಪ್ರಮಾಣ ಸಾಕಷ್ಟು ಕಡಿಮೆಯಾಗುವುದು. ಈ ವಿಶಿಷ್ಟ ಯೋಜನೆಯ ಯಶಸ್ಸಿಗಾಗಿ ಜನಸಾಮಾನ್ಯರ ಸಹಕಾರ ಅತ್ಯವಶ್ಯಕವೂ ಹೌದು. ಜನಸಾಮಾನ್ಯರು ತಾವು ಉತ್ಪಾದಿಸಿದ ಪ್ರತಿಯೊಂದು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಈ ಘಟಕಕ್ಕೆ ನೀಡಿದಲ್ಲಿ, ಬೀದಿಬದಿ- ಚರಂಡಿಗಳಲ್ಲಿ ತುಂಬಿರುವ ಮತ್ತು ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ರಾಶಿ ಬಿದ್ದಿರುವ ಬೆಟ್ಟದಷ್ಟು ಪ್ಲಾಸ್ಟಿಕ್ ತ್ಯಾಜ್ಯಗಳು ಸದ್ಯೋಭವಿಷ್ಯದಲ್ಲಿ ಕಣ್ಮರೆಯಾಗಲಿವೆ.

ಮುಂದಿನ ತಿಂಗಳಿನಲ್ಲಿ ಕಾರ್ಯಾರಂಭ ಮಾಡಲಿರುವ ಈ ಘಟಕಕ್ಕೆ ಸ್ವಚ್ಚವಾದ ಯಾವುದೇ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನೀವು ನೀಡಬಹುದಾಗಿದೆ. ಇದಲ್ಲದೇ ನಿಮ್ಮದೇ ಊರಿನ ಗುಜರಿ ಅಂಗಡಿಗಳೂ ಎಲ್ಲಾ ವಿಧದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಖರೀದಿಸುತ್ತಿವೆ. ಆದುದರಿಂದ ಇಂದಿನಿಂದಲೇ ನೀವು ಬಳಸಿ ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿಡಿ. ಹಾಗೂ ಇವುಗಳನ್ನು ಮಾರಾಟಮಾಡಿ ಒಂದಿಷ್ಟು ಆದಾಯವನ್ನೂ ಗಳಿಸಿ. ತನ್ಮೂಲಕ ನಿಮ್ಮ ಸುತ್ತಮುತ್ತಲ ಪರಿಸರವನ್ನು ಮತ್ತು ನಿಮ್ಮ ಊರನ್ನು ಸ್ವಚ್ಛವಾಗಿರಿಸಲು  ಸಹಕರಿಸಿ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 


No comments:

Post a Comment