Sunday, June 29, 2014

DOCTORS DAY




  ಜುಲೈ ೧, ರಾಷ್ಟ್ರೀಯ ವೈದ್ಯರ ದಿನ - ವೈದ್ಯ ಬಾಂಧವರಿಗೆ ನಮನಗಳನ್ನು ಸಲ್ಲಿಸುವ ದಿನ 

ಬಡವ ಬಲ್ಲಿದರೆನ್ನುವ ಭೇದಭಾವವಿಲ್ಲದೇ, ಹಗಲು- ಇರುಳುಗಳೆನ್ನುವ ಮತ್ತು ಹೊತ್ತುಗೊತ್ತಿನ ಪರಿವೆಯಿಲ್ಲದೇ, ಸದಾ ನಿಮ್ಮ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುವ ವೈದ್ಯರಿಗೆ ನೀವು ಕೃತಜ್ಞತೆಗಳನ್ನು ಸಮರ್ಪಿಸುವ ದಿನವೇ " ರಾಷ್ಟ್ರೀಯ ವೈದ್ಯರ ದಿನ". ನಿಮ್ಮನ್ನು ಪೀಡಿಸುವ ಸಣ್ಣಪುಟ್ಟ ಅಥವಾ ಗಂಭೀರ ಆರೋಗ್ಯದ ಸಮಸ್ಯೆಗಳನ್ನು ನಿಖರವಾಗಿ ಪತ್ತೆಹಚ್ಚಿ, ಸೂಕ್ತ ಔಷದಗಳನ್ನು ನೀಡುವುದರೊಂದಿಗೆ ನಿಮ್ಮನ್ನು ಸಾಂತ್ವನಿಸಿ ಧೈರ್ಯ ತುಂಬುವ, ನಿಮ್ಮ ಚಿರಪರಿಚಿತ ವೈದ್ಯರಿಗೆ ನಮನಗಳನ್ನು ಸಲ್ಲಿಸಲು ವೈದ್ಯರ ದಿನ ಅತ್ಯಂತ ಪ್ರಶಸ್ತವಾಗಿದೆ. ವಿಶ್ವದ ಅಧಿಕತಮ ರಾಷ್ಟ್ರಗಳಲ್ಲಿ ವೈದ್ಯರ ದಿನದಂದು ಆಯೋಜಿಸುವ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ, ವೈದ್ಯರ ಸೇವೆಯನ್ನು ಸ್ಮರಿಸಿ ಕೃತಜ್ಞತೆಗಳನ್ನು ಸಲ್ಲಿಸಲಾಗುತ್ತದೆ. 

ಹಿನ್ನೆಲೆ 

ಜಾಗತಿಕ ಮಟ್ಟದಲ್ಲಿ ಮೊತ್ತ ಮೊದಲಬಾರಿಗೆ "ವೈದ್ಯರ ದಿನ " ವನ್ನು ಮಾರ್ಚ್ ೩೦, ೧೯೩೩ ರಲ್ಲಿ ಆಚರಿಸಲಾಗಿತ್ತು. ಖ್ಯಾತ ವೈದ್ಯ ಚಾರ್ಲ್ಸ್.ಬಿ.ಆಲ್ಮಂಡ್ ಇವರ ಪತ್ನಿ ಇ.ಬಿ.ಆಲ್ಮಂಡ್ ಇವರು, ವೈದ್ಯರನ್ನು ಗೌರವಿಸುವ ಸಲುವಾಗಿ ವರ್ಷದಲ್ಲಿ ಕನಿಷ್ಠ ಒಂದು ದಿನವನ್ನು ಮೀಸಲಿಡಬೇಕು ಎಂದು ನಿರ್ಧರಿಸಿದಂತೆ ಇದನ್ನು ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ ವೈದ್ಯರಿಗೆ ಶುಭಾಶಯ ಪತ್ರಗಳನ್ನು ಕಳುಹಿಸುವ ಅಥವಾ ಹೇಳುವ ಮತ್ತು ವಿಧಿವಶರಾಗಿರುವ ಖ್ಯಾತ ವೈದ್ಯರ ಸಮಾಧಿಗಳ ಮೇಲೆ ಪುಷ್ಪಗುಚ್ಛಗಳನ್ನು ಇರಿಸುವ ಮೂಲಕ ಗೌರವಿಸಲಾಗುತ್ತಿತ್ತು. 

ತದನಂತರ ಅಮೇರಿಕ ದೇಶದ ಜನಪ್ರತಿನಿಧಿಗಳು ೧೯೫೮ ರ ಮಾರ್ಚ್ ೩೦ ರಂದು ವೈದ್ಯರ ದಿನವನ್ನು ಆಚರಿಸುವ ನಿರ್ಣಯವೊಂದನ್ನು ಅಂಗೀಕರಿಸಿದ್ದರು. ಜಾರ್ಜ್ ಬುಶ್ ಅಮೇರಿಕ ದೇಶದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ, ವರ್ಷಂಪ್ರತಿ ಮಾರ್ಚ್ ೩೦ ರಂದು ವೈದ್ಯರ ದಿನವನ್ನಾಗಿ ಆಚರಿಸುವ ವಿಧೇಯಕಕ್ಕೆ ಅಕ್ಟೋಬರ್ ೩೦, ೧೯೯೦ ರಂದು ಸಹಿ ಹಾಕಿದ್ದು, ೧೯೯೧ ರಿಂದ ಇದು ಜಾರಿಗೊಂಡಿತ್ತು. 

ನಿಜ ಹೇಳಬೇಕಿದ್ದಲ್ಲಿ ಮಾರ್ಚ್ ೩೦ ರಂದು ವೈದ್ಯರ ದಿನವನ್ನು ಆಚರಿಸಲು ನಿರ್ದಿಷ್ಟ ಕಾರಣವೊಂದು ಇಂತಿದೆ. ಡಾ.ಕ್ರಾಫರ್ಡ್ ಲಾಂಗ್ ಎನ್ನುವ ವೈದ್ಯರು ೧೮೪೨ ರ ಮಾರ್ಚ್ ೩೦ ರಂದು ಮೊತ್ತ ಮೊದಲಬಾರಿಗೆ ಈಥರ್ ಎನ್ನುವ ಅರಿವಳಿಕೆ ಔಷದವೊಂದನ್ನು ಬಳಸಿ,ರೋಗಿಯೊಬ್ಬನ ಕುತ್ತಿಗೆಯ ಭಾಗದಲ್ಲಿದ್ದ ಗಡ್ದೆಯೊಂದನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದಿದ್ದರು. ಈ ಸಂದರ್ಭದಲ್ಲಿ ತನಗೆ ಕಿಂಚಿತ್ ಕೂಡಾ ನೋವಿನ ಅನುಭವ ಆಗಿರಲಿಲ್ಲವೆಂದು ರೋಗಿಯು ಹೇಳಿದ್ದನು. ನೋವಿಲ್ಲದೆ ಶಸ್ತ್ರಚಿಕಿತ್ಸೆಯನ್ನು ಮಾಡಬಹುದಾದ ವಿಧಾನ ಹಾಗೂ ಔಷದವನ್ನು ಕಂಡುಹಿಡಿದು ಬಳಸಿದ್ದ ಈ ದಿನವನ್ನು, ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ವೈದ್ಯರ ದಿನವನ್ನಾಗಿ ಇಂದಿಗೂ ಆಚರಿಸಲಾಗುತ್ತಿದೆ. 

ಡಾ.ಬಿ.ಸಿ.ರಾಯ್ ಜನ್ಮ ದಿನ 

ಭಾರತದಲ್ಲಿ ೧೯೯೧ ರಿಂದ ಜುಲೈ ೧ ರಂದು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಹಾನ್ ಮೇಧಾವಿ, ಅಪ್ರತಿಮ ವೈದ್ಯ, ಸ್ವಾತಂತ್ರ್ಯ ಹೋರಾಟಗಾರ, ಚತುರ ರಾಜಕಾರಣಿ, ಶಿಕ್ಷಣ ತಜ್ಞ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯೂ ಆಗಿದ್ದ ಡಾ.ಬಿದಾನ್ ಚಂದ್ರ ರಾಯ್, ಇವರ ಜನ್ಮ ದಿನವನ್ನು ನಮ್ಮ ದೇಶದಲ್ಲಿ "ರಾಷ್ಟ್ರೀಯ ವೈದ್ಯರ ದಿನ " ವನ್ನಾಗಿ ಆಚರಿಸುವ ಮೂಲಕ ಈ ಧೀಮಂತ ವ್ಯಕ್ತಿಗೆ ಮತ್ತು ವೈದ್ಯ ಸಮುದಾಯಕ್ಕೆ ಗೌರವ ಮತ್ತು ಕೃತಜ್ಞತೆಗಳನ್ನು ಸಲ್ಲಿಸಲಾಗುತ್ತದೆ. 

ಬಿಹಾರದ ಪಾಟ್ನಾದಲ್ಲಿ ೧೮೮೨ ರ ಜುಲೈ ೧ ರಂದು ಜನಿಸಿದ್ದ ಡಾ.ರಾಯ್, ಕೊಲ್ಕತ್ತಾದಲ್ಲಿ ವೈದ್ಯಕೀಯ ಶಿಕ್ಷಣವನ್ನು ಮುಗಿಸಿದ ಬಳಿಕ ಲಂಡನ್ ನಲ್ಲಿ ಸ್ನಾತಕೋತ್ತರ ಪದವಿಗಳನ್ನು ಗಳಿಸಿದ್ದರು. ಬಳಿಕ ೧೯೧೧ ರಲ್ಲಿ ಭಾರತಕ್ಕೆ ಮರಳಿ, ಕೊಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಲು ಆರಂಭಿಸಿದ್ದರು. 

ಮಹಾತ್ಮಾ ಗಾಂಧಿಯವರ ನೇತ್ರತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಸಂಗ್ರಾಮದಿಂದ ಪ್ರಭಾವಿತರಾಗಿ ಇದರಲ್ಲಿ ಪಾಲ್ಗೊಂಡ ಡಾ.ರಾಯ್,ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ೧೪ ವರ್ಷಗಳ ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆಸಲ್ಲಿಸಿದ್ದರು. ಅನೇಕ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳನ್ನು ಆರಂಭಿಸಿದ್ದ ಡಾ.ಬಿ.ಸಿ.ರಾಯ್, ಕೇವಲ ವೈದ್ಯಕೀಯ ಕ್ಷೇತ್ರದಲ್ಲಿ ಮಾತ್ರವಲ್ಲ,ರಾಜಕೀಯ ಕ್ಷೇತ್ರದಲ್ಲೂ ಅಸಾಧಾರಣ ಸಾಧನೆಗಳನ್ನು ಮಾಡಿದ್ದರು. ಇವರ ಅನನ್ಯ ಸಾಧನೆಗಳನ್ನು ಗುರುತಿಸಿದ ಭಾರತ ಸರ್ಕಾರವು ಇವರಿಗೆ "ಭಾರತ ರತ್ನ " ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಸುದೀರ್ಘಕಾಲ ಜನಸೇವೆ ಮಾಡಿದ್ದ ಡಾ.ರಾಯ್, ೧೯೬೨ ರ ಜುಲೈ ೧ ರಂದು ಅರ್ಥಾತ ತಮ್ಮ ಜನ್ಮದಿನದಂದೇ ವಿಧಿವಶರಾಗಿದ್ದರು. ಇವರ ಸ್ಮರಣಾರ್ಥ ವೈದ್ಯಕೀಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಯನ್ನು ಸಲ್ಲಿಸಿದ - ಸಾಧನೆಯನ್ನು ಮಾಡಿದ ವೈದ್ಯರಿಗೆ ೧೯೭೬ ರಿಂದ, ರಾಷ್ಟ್ರೀಯ ವೈದ್ಯರ ದಿನದಂದು ಡಾ.ಬಿ.ಸಿ.ರಾಯ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು  


No comments:

Post a Comment