Tuesday, April 15, 2014

Low backpain




      ಸೊಂಟನೋವು ಗಂಟುಬಿದ್ದೀತು ಜೋಕೆ !

ಸೊಂಟನೋವು ಪ್ರಾರಂಭವಾಗಲು ಹಾಗೂ ತೀವ್ರಗೊಳ್ಳಲು ನಿಮ್ಮ ಜೀವನಶೈಲಿ, ನಿಮ್ಮ ಉದ್ಯೋಗ, ಶಾರೀರಿಕ ಕ್ಷಮತೆಯ ಮಟ್ಟ ಮತ್ತು ದುರಭ್ಯಾಸಗಳೂ ಕಾರಣವೆನಿಸಬಲ್ಲವು, ಅಂತೆಯೇ ಸ್ತ್ರೀಯರಲ್ಲಿ ವಿವಿಧ ರೀತಿಯ ಶ್ರಮದಾಯಕ ಮನೆಗೆಲಸಗಳಿಂದ ಆರಂಭಿಸಿ, ಎತ್ತರದ ಹಿಮ್ಮಡಿಯ ಪಾದರಕ್ಷೆಗಳನ್ನು ಧರಿಸುವ " ಫ್ಯಾಶನ್" ಕೂಡಾ ಈ ಸಮಸ್ಯೆಗೆ ಮೂಲವೆನಿಸುವ ಸಾಧ್ಯತೆಗಳಿವೆ.
---------------                   ----------------                ----------------             ----------------           ----------------

  ಯಾವುದೇ ಪೂರ್ವಸೂಚನೆಗಳಿಲ್ಲದೇ ಕ್ಷಣಮಾತ್ರದಲ್ಲಿ ಪ್ರಾರಂಭಗೊಳ್ಳುವ ಸೊಂಟನೋವು, ನಿಮಿಷಾರ್ಧದಲ್ಲಿ ನಿಮ್ಮನ್ನು ಪರಾವಲಂಬಿಯನ್ನಾಗಿಸುವಷ್ಟು ಪ್ರಬಲವಾಗಿರಲು " ಉಷ್ಣ' ಅಥವಾ "ವಾಯು" ಗಳಂತೂ ಖಂಡಿತವಾಗಿಯೂ ಕಾರಣವಲ್ಲ. ಹೆಚ್ಚಿನ ಜನರಲ್ಲಿ ಸಣ್ಣಪುಟ್ಟ ಕಾರಣಗಳಿಂದಾಗಿ ಪ್ರಾರಂಭವಾಗುವ ಈ ವಿಶಿಷ್ಟ ಸಮಸ್ಯೆಯು, ಸ್ವಯಂ ಚಿಕಿತ್ಸೆ ಹಾಗೂ ವಿಶ್ರಾಂತಿಗಳಿಂದ ಶಮನವಾಗದೇ ಇದ್ದಲ್ಲಿ ವೈದ್ಯರ ಸಲಹೆ ಪಡೆಯುವುದು ಹಿತಕರ. 

ದೀವಿಹಲಸಿನ ಪೋಡಿ ಕಾರಣವೇ?

 ಹೊಟ್ಟೆಯ ಪಾಡಿಗಾಗಿ ಪುಟ್ಟ ದಿನಸಿ ಅಂಗಡಿಯನ್ನು ನಡೆಸುತ್ತಿದ್ದ ನಾಗಪ್ಪನು ದಿನದಲ್ಲಿ ಹದಿನೈದು ಗಂಟೆಗಳ ಕಾಲ ದುಡಿಯುವುದು ಅನಿವಾರ್ಯವಾಗಿತ್ತು. ಆದರೂ ದಣಿವೆಂದರೆ ಏನೆಂದು ಅರಿಯದ ಆತನಿಗೆ, ಇತ್ತೀಚಿನ ಕೆಲದಿನಗಳಿಂದ ಸೊಂಟನೋವು ಆರಂಭವಾಗಿತ್ತು. ಅದೊಂದು ದಿನ ಹೆಂಡತಿ ತಯಾರಿಸಿದ್ದ ದೀವಿಹಲಸಿನ ಪೋಡಿಯನ್ನು ಪೊಗದಸ್ತಾಗಿ ತಿಂದಿದ್ದ ನಾಗಪ್ಪನಿಗೆ, ಸಂಜೆ ಗಿರಾಕಿಯೊಬ್ಬರ ಚೀಲವನ್ನು ಎತ್ತಿಕೊಡುವಾಗ ಸೊಂಟದಲ್ಲಿ ಛಳಕು ಹೊಡೆದಂತಾಗಿತ್ತು. ನೋವಿನ ತೀವ್ರತೆಗೆ ಕ್ಷಣಕಾಲ ಕಣ್ಣು ಕತ್ತಲಾವರಿಸಿದಂತೆ ಆದರೂ, ಸಾವರಿಸಿಕೊಂಡು ಸಮೀಪದಲ್ಲಿದ್ದ ಗೋಣಿಚೀಲದ ಮೇಲೆ ಪ್ರಯಾಸದಿಂದ ಕುಳಿತುಕೊಳ್ಳಬೇಕಾಯಿತು. ಆಕಸ್ಮಿಕವಾಗಿ ಉಲ್ಬಣಿಸಿದ ತನ್ನ ಸೊಂಟನೋವಿಗೆ, ದೀವಿಹಲಸಿನ ಪೋಡಿಯೇ  ಕಾರಣವಾಗಿರಬೇಕೆನ್ನುವ ಸಂದೇಹ ನಾಗಪ್ಪನಿಗೆ ಮೂಡಿತ್ತು. ಮುಂದಿನ ಮೂರುದಿನಗಳ ಕಾಲ ಹೆಂಡತಿ ತಯಾರಿಸಿ ನೀಡುತ್ತಿದ್ದ ಜೀರಿಗೆ ಕಷಾಯ ಹಾಗೂ ದಿನದಲ್ಲಿ ಎರಡು ಬಾರಿ ತಿಕ್ಕುತ್ತಿದ್ದ ನೋವಿನ ಎಣ್ಣೆಗಳ ಚಿಕಿತ್ಸೆಯ ಬಳಿಕವೂ, ಸೊಂಟನೋವಿಗೆ ಕಾರಣವೆಂದು ಭಾವಿಸಿದ್ದ " ವಾಯು" ಶಮನಗೊಂಡಿರಲಿಲ್ಲ. 

ಮರುದಿನ ಬೆಳಗ್ಗೆ ಹಾಸಿಗೆಯಿಂದ ಏಳಲಾರದೆ ನರಳುತ್ತಿದ್ದ ನಾಗಪ್ಪನ ಅವಸ್ಥೆಯನ್ನು ಕಂಡು ಗಾಬರಿಗೊಂಡ ಆತನ ಪತ್ನಿಯು, ಸಮೀಪದ ವೈದ್ಯರನ್ನು ಮನೆಗೆ ಕರೆಸಿದ್ದಳು. ರೋಗಿಯನ್ನು ಪರೀಕ್ಷಿಸಿದ ಬಳಿಕ ನೋವು ನಿವಾರಕ ಇಂಜೆಕ್ಷನ್ ನೀಡಿದ ವೈದ್ಯರು, ತಜ್ಞ ವೈದ್ಯರ ಸಲಹೆ ಪಡೆಯಲು ಸೂಚಿಸಿದ್ದರು. ಅದೇ ಸಂಜೆ ತಜ್ಞ ವೈದ್ಯರ ಬಳಿಗೆ ತೆರಳಿದ ನಾಗಪ್ಪನನ್ನು ಅವಶ್ಯಕ ಪರೀಕ್ಷೆಗಳಿಗೆ ಒಳಪಡಿಸಿದ ಬಳಿಕ ಆತನನ್ನು ಕಾಡುತ್ತಿರುವ ಸಮಸ್ಯೆಗೆ " ಸ್ಲಿಪ್ ಡಿಸ್ಕ್" ಕಾರಣವೆಂದು ಪತ್ತೆಯಾಗಿತ್ತು. ಮೂರುವಾರಗಳ ವಿಶ್ರಾಂತಿ ಹಾಗೂ ಚಿಕಿತ್ಸೆಯಿಂದ ಸಮಸ್ಯೆ ಬಗೆಹರಿಯದೇ ಇದ್ದುದರಿಂದ, ಅಂತಿಮವಾಗಿ ಶಸ್ತ್ರಚಿಕಿತ್ಸೆ ಮಾಡಬೇಕಾಗಿಬಂದಿತ್ತು.ಶಸ್ತ್ರಚಿಕಿತ್ಸೆಯ ಬಳಿಕ ನಾಗಪ್ಪನು ಸಂಪೂರ್ಣವಾಗಿ ಗುಣಮುಖನಾದರೂ, ತದನಂತರ ಅಪ್ಪಿತಪ್ಪಿಯೂ ದೀವಿಹಲಸಿನ ಪೋಡಿಯನ್ನು ತಿನ್ನುವುದನ್ನೇ ನಿಲ್ಲಿಸಿದ್ದನು!. 

ಬೆಂಬಿಡದ ಬೆನ್ನುನೋವು 

ವೈದ್ಯಕೀಯ ಪರಿಭಾಷೆಯಲ್ಲಿ " ಲೋ ಬ್ಯಾಕ್ ಪೈನ್" ಎಂದು ಕರೆಯಲ್ಪಡುವ ಈ ಸಮಸ್ಯೆಯು ವಿಶ್ವದ ಶೇ.೮೦ ರಷ್ಟು ಜನರ ಜೀವಿತಾವಧಿಯಲ್ಲಿ ಒಂದಲ್ಲ ಒಂದುಬಾರಿಯಾದರೂ ಬಾಧಿಸುತ್ತದೆ. ಜಗತ್ತಿನಾದ್ಯಂತ ಅತ್ಯಂತ ವ್ಯಾಕವಾಗಿ ಕಂಡುಬರುವ ಶೀತ ಹಾಗೂ ತಲೆನೋವುಗಳ  ಅನಂತರ ಮೂರನೆಯ ಸ್ಥಾನ ಸೊಂಟನೋವಿಗೆ ಸಲ್ಲುತ್ತದೆ. ಜನಸಾಮಾನ್ಯರ ದೈನಂದಿನ ಕೆಲಸಕಾರ್ಯಗಳಿಗೂ ತೊಡಕಾಗಬಲ್ಲ ಈ ಸೊಂಟನೋವು ತೀವ್ರಗೊಂದಾಗ, ಎಂಟೆದೆಯ ಬಂಟರೂ ಹಾಸಿಗೆ ಹಿಡಿಯುವುದು ಆಶ್ಚರ್ಯವೇನಲ್ಲ. ಇತ್ತೀಚಿನ ಒಂದೆರಡು ದಶಕಗಳಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚಲು ಆಧುನಿಕ - ಆರಾಮದಾಯಕ ಜೀವನಶೈಲಿಯೇ ಕಾರಣವೆನ್ನಬಹುದು.

ಯೌವ್ವನ- ವೃದ್ಧಾಪ್ಯ, ಬಡವ- ಬಲ್ಲಿದ ಮತ್ತು ಸ್ತ್ರೀ- ಪುರುಷರೆನ್ನುವ ಭೇದವಿಲ್ಲದೇ ಎಲ್ಲರನ್ನೂ ಬಾಧಿಸಬಲ್ಲ ಸೊಂಟನೋವಿನ ಬಗ್ಗೆ ಜನಮನದಲ್ಲಿ ಸಾಕಷ್ಟು ತಪ್ಪುಕಲ್ಪನೆಗಳಿವೆ. ಬಹುತೇಕ ಜನರಲ್ಲಿ ಆಕಸ್ಮಿಕವಾಗಿ ಆರಂಭವಾಗಿ ತೀವ್ರಗೊಳ್ಳುವ ಸೊಂಟನೋವಿಗೆ, " ವಾಯು, ಉಷ್ಣ ಮತ್ತು ಗ್ಯಾಸ್ಟ್ರಿಕ್" ತೊಂದರೆಗಳೇ ಕಾರಣವೆಂದು ನಂಬುವವರಲ್ಲಿ ಹೆಚ್ಚಿನವರು ವಿದ್ಯಾವಂತರೆಂದಲ್ಲಿ ನೀವೂ  ನಂಬಲಾರಿರಿ. ಅಧಿಕತಮ ಜನರು ಈ ಸಮಸ್ಯೆಯನ್ನು ಪ್ರಾರಂಭಿಕ ಹಂತದಲ್ಲಿ ನಿರ್ಲಕ್ಷಿಸುವುದು ಅಥವಾ ಸ್ವಯಂಚಿಕಿತ್ಸೆ ಪ್ರಯೋಗಿಸುವುದು ಅಪರೂಪವೇನಲ್ಲ. ಕುಳಿತರೆ ಏಳಲಾಗದ, ಬಗ್ಗಿದ ಬಳಿಕ ನೆಟ್ಟಗಾಗದ ಮತ್ತು ಮಲಗಿದಲ್ಲಿಂದ ಎದ್ದೇಳಲಾರದ  ಸ್ಥಿತಿಯನ್ನು ತಲುಪಿದ ಬಳಿಕವೇ ವೈದ್ಯರ ಸಲಹೆ ಮತ್ತು ಚಿಕಿತ್ಸೆಗಳಿಗೆ ಶರಣಾಗುವುದು ಭಾರತೀಯರ ವಿಶೇಷತೆ ಅನ್ನುವುದು ನಿಮಗೂ ತಿಳಿದಿರಲೇಬೇಕು!. 

ಕಾರಣಗಳೇನು?

ಸೊಂಟನೋವು ಪ್ರಾರಂಭವಾಗಲು ಹಾಗೂ ತೀವ್ರಗೊಳ್ಳಲು ನಿಮ್ಮ ಜೀವನಶೈಲಿ, ಉದ್ಯೋಗ, ಶಾರೀರಿಕ ಕ್ಷಮತೆಯ ಮಟ್ಟ ಮತ್ತು ದುರಭ್ಯಾಸಗಳೂ ಕಾರಣವೆನಿಸಬಲ್ಲವು. ಅಂತೆಯೇ ಸ್ತ್ರೀಯರಲ್ಲಿ ವಿವಿಧ ರೀತಿಯ ಶ್ರಮದಾಯಕ ಮನೆಗೆಲಸಗಳಿಂದ ಆರಂಭಿಸಿ, ಎತ್ತರದ ಹಿಮ್ಮಡಿಯ ಪಾದರಕ್ಷೆಗಳನ್ನೂ ಧರಿಸುವ "ಫ್ಯಾಶನ್" ಕೂಡಾ ಈ ಸಮಸ್ಯೆಗೆ ಮೂಲವೆನಿಸುವ ಸಾಧ್ಯತೆಗಳಿವೆ. 

ಆರಾಮದಾಯಕ ಜೀವನ ಶೈಲಿ, ವ್ಯಾಯಾಮ ಮತ್ತು ಶಾರೀರಿಕ ಕ್ಷಮತೆಯ ಅಭಾವ, ಅತಿಯಾದ ಶಾರೀರಿಕ ಶ್ರಮದ ಕೆಲಸಗಳು, ಅಸಮರ್ಪಕ ಶಾರೀರಿಕ ಭಂಗಿಗಳು, ಅತಿಯಾದ ಭಾರವನ್ನು ಎತ್ತುವುದು ಹಾಗೂ ಹೊರುವುದು, ಎರಡಕ್ಕೂ ಅಧಿಕಬಾರಿ ಗರ್ಭಧಾರಣೆ ಮತ್ತು ಪ್ರಸವ, ಅತಿಬೊಜ್ಜು, ಅಧಿಕತೂಕ, ಅತಿ ಧೂಮಪಾನ- ಮದ್ಯಪಾನ ಮತ್ತು ವೃತ್ತಿ ಸಂಬಂಧಿತ ಅಪಾಯಕಾರಿ ಅಂಶಗಳು ಸೊಂಟನೋವಿಗೆ ಪ್ರಮುಖ ಕಾರಣಗಳಾಗಿವೆ. 

ಬೆನ್ನುಮೂಳೆಯ ಅಸಹಜತೆ, ಕೆಲವಿಧದ ಸೋಂಕುಗಳು, ಕಶೇರು ಆಸ್ಥಿಯ ಕುಸಿತ, ವಿಶಿಷ್ಟ ರೀತಿಯ ಮಾಂಸಪೇಶಿಗಳ  ಕಾಯಿಲೆ ( ಫೈಬ್ರೋಮಯಾಲ್ಜಿಯಾ), ರಾಜಯಕ್ಷ್ಮ (ಟಿ.ಬಿ) ಮತ್ತು ಕೆಲವಿಧದ ಕ್ಯಾನ್ಸರ್ (ಉದಾ- ಬೆನ್ನುಮೂಳೆಯ ಕ್ಯಾನ್ಸರ್- ಸ್ತ್ರೀಯರ ಅಂಡಾಶಯಗಳ ಕ್ಯಾನ್ಸರ್) ಇತ್ಯಾದಿಗಳೂ ಈ ಸಮಸ್ಯೆಗೆ ಹೇತುವೆನಿಸಬಲ್ಲವು. ಇದಲ್ಲದೇ ಅಸ್ಥಿಸಂಧಿಗಳ  ಉರಿಯೂತ, ಸ್ಪಾಂಡಿಲೈಟಿಸ್, ರುಮಟಾಯ್ಡ್ ಆರ್ಥ್ರೈಟಿಸ್, ರುಮ್ಯಾಟಿಕ್ ಜ್ವರ, ಮೂಳೆಗಳ ದೌರ್ಬಲ್ಯ ಮತ್ತು ಸವೆತ, ಸ್ಥಾನಪಲ್ಲಟಗೊಂಡ ಅಥವಾ ಹೊರಚಾಚಿದ ಕಶೇರು ಅಸ್ಥಿ ( ಸ್ಲಿಪ್ ಡಿಸ್ಕ್), ದೀರ್ಘಕಾಲೀನ ಮಾನಸಿಕ ಖಿನ್ನತೆ, ಕೆಮ್ಮು ಮತ್ತು ಸ್ಟೆರಾಯ್ಡ್ ಔಷದಗಳ ದೀರ್ಘಕಾಲೀನ ಸೇವನೆಗಳಿಂದಲೂ ಸೊಂಟನೋವು ಉದ್ಭವಿಸುವ ಹಾಗೂ ಉಲ್ಬಣಿಸುವ ಸಾಧ್ಯತೆಗಳಿವೆ. ಕೆಲವಿಧದ ಮೂತ್ರಪಿಂಡಗಳ ಹಾಗೂ ಗರ್ಭಕೋಶದ ಕಾಯಿಲೆಗಳು, ಮೂತ್ರಾಶಯದ ಸೋಂಕು, ರಿಕೆಟ್ಸ್ ಮತ್ತು ಆಸ್ಟಿಯೋ ಮಲೆಶಿಯದಂತಹ ವ್ಯಾಧಿಗಳು ಬೆನ್ನುನೋವಿನ ಸಮಸ್ಯೆಗಳನ್ನು ಹುಟ್ಟುಹಾಕುವುದುಂಟು. 

ಅಪಾಯಕಾರಿ ಸಂಕೇತಗಳು 

೧೮ ವರ್ಷಕ್ಕಿಂತ ಕೆಳಗಿನ ಮತ್ತು ೫೦ ವರ್ಷ ಮೀರಿದ ವ್ಯಕ್ತಿಗಳಲ್ಲಿ ಆಕಸ್ಮಿಕವಾಗಿ ಪ್ರಾರಂಭವಾಗಿ, ಕ್ಷಣಮಾತ್ರದಲ್ಲಿ ತೀವ್ರಗೊಂಡು ಅನೇಕ ದಿನಗಳ ಕಾಲ ಬಾಧಿಸುವ ಸೊಂಟನೋವು, ಕೈಕಾಲು ಮತ್ತು ತೊಡೆಗಳಲ್ಲಿ ಬಲಹೀನತೆ ಅಥವಾ ಸ್ಪರ್ಶಜ್ಞಾನದ ಅಭಾವ, ಕೈಕಾಲುಗಳ ಮಾಂಸಪೇಶಿಗಳಲ್ಲಿ ಅಸಹಜ ದೌರ್ಬಲ್ಯ, ಸೊಂಟದ ಹಿಂಭಾಗದಿಂದ ಹಿಡಿದು ಕಾಲಿನ ಹಿಮ್ಮಡಿಯ ತನಕ ಅಥವಾ ಹೆಗಲಿನಿಂದ ಹಿಡಿದು ಕೈಬೆರಳುಗಳ ತನಕ ಛಳಕು ಹೊಡೆದಂತೆ ಬರುವ ನೋವು, ಜ್ವರ, ಬೆನ್ನು ಅಥವಾ ಸೊಂಟದಲ್ಲಿ ಬಾವು ಮತ್ತು ಉರಿಯೂತ, ಸೊಂಟದ ಮಧ್ಯಭಾಗದಲ್ಲಿ ತೀವ್ರ ಉರಿ ಮತ್ತು ನೋವು, ಅರಿವಿಲ್ಲದೆ ಮಲಮೂತ್ರಗಳ ವಿಸರ್ಜನೆ, ಮೂತ್ರ ವಿಸರ್ಜಿಸಲು ಕಷ್ಟಸಾಧ್ಯವೆನಿಸುವುದು, ಜನನಾಂಗದಲ್ಲಿ ಅಥವಾ ಸೊಂಟದಿಂದ ಪಾದಗಳ ತನಕ ತೀವ್ರನೋವು ಮತ್ತು ನಡೆಯುವಾಗ ನಿಯಂತ್ರಣ ಇಲ್ಲದಂತೆ ಆಗುವುದು ಇತ್ಯಾದಿ ಸಮಸ್ಯೆಗಳು ನಿಮ್ಮನ್ನು ಪೀಡಿಸುತ್ತಿದ್ದಲ್ಲಿ ತಕ್ಷಣ ತಜ್ಞ ವೈದ್ಯರ ಸಲಹೆ- ಚಿಕಿತ್ಸೆ ಪಡೆಯುವುದರಿಂದ ಮುಂದೆ ಸಂಭವಿಸಬಹುದಾದ ಗಂಭೀರ ಸಮಸ್ಯೆಗಳನ್ನು ತಡೆಗಟ್ಟುವುದು ಸುಲಭಸಾಧ್ಯ. 

ಅವಶ್ಯಕ ಪರೀಕ್ಷೆಗಳು 

ಬಹುತೇಕ ಜನರಲ್ಲಿ ಅಪರೂಪದಲ್ಲಿ ಕಂಡುಬರುವ ಸೌಮ್ಯರೂಪದ ಸೊಂಟನೋವಿಗೆ ದೈನಂದಿನ ಚಟುವಟಿಕೆ ಅಥವಾ ಆಘಾತಗಳೇ ಕಾರಣವಾಗಿರುತ್ತವೆ. ಅಲ್ಪಾವಧಿಯ ಚಿಕಿತ್ಸೆಯಿಂದ ಶಮನಗೊಳ್ಳುವ ಇಂತಹ ತೊಂದರೆಗಳಲ್ಲಿ ವಿಶೇಷ ಪರೀಕ್ಷೆಗಳನ್ನು ನಡೆಸುವ ಅವಶ್ಯಕತೆಯೇ ಇರದು. 

ರೋಗಿಯ ದೈನಂದಿನ ಚಟುವಟಿಕೆ ಹಾಗೂ ಕೆಲಸಕಾರ್ಯಗಳಿಗೆ ಅದ್ದಿಯಾಗಬಲ್ಲ, ತೀವ್ರ ನೋವಿನಿಂದ ಹಾಸಿಗೆ ಹಿಡಿಸಬಲ್ಲಮತ್ತು ದೀರ್ಘಕಾಲೀನ ಬೆನ್ನು- ಸೊಂಟನೋವುಗಳಿಗೆ ನಿರ್ದಿಷ್ಟ ಕಾರಣವನ್ನು ಅರಿತುಕೊಳ್ಳಲು ನಿಖರವಾದ ಪರೀಕ್ಷೆಗಳನ್ನು ನಡೆಸಬೇಕಾಗುವುದು.ಇವುಗಳಲ್ಲಿ ಕ್ಷ- ಕಿರಣ, ಸಿ.ಟಿ ಸ್ಕ್ಯಾನ್, ಎಂ.ಆರ್.ಐ ,ಮತ್ತು ಕಿಂಚಿತ್ ಅಧಿಕ ಮಾಹಿತಿಗಾಗಿ ಬೋನ್ ಸ್ಕ್ಯಾನ್ ಎನ್ನುವ ಪರೀಕ್ಷೆಗಳು ಪ್ರಮುಖವಾಗಿವೆ. ಇದಲ್ಲದೇ ರೋಗಿಯ ಸ್ಥಿತಿಗತಿಗಳಿಗೆ ಅನುಸಾರವಾಗಿ ತಜ್ಞ ವೈದ್ಯರು ಅನ್ಯ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. 

ಚಿಕಿತ್ಸೆ ಎಂತು - ಏನು ?

ಬೆನ್ನು - ಸೊಂಟನೋವುಗಳ ರೋಗನಿದಾನ ಮತ್ತು ಚಿಕಿತ್ಸೆಗಳಲ್ಲಿ ಕುಟುಂಬ ವೈದ್ಯರು, ವೈದ್ಯಕೀಯ ತಜ್ಞರು, ಮೂಳೆಗಳ ತಜ್ಞರು, ಮೆದುಳು- ನರರೋಗ ತಜ್ಞರು, ಶಾರೀರಿಕ ಚಿಕಿತ್ಸಕರು, ಅರಿವಳಿಕೆ ತಜ್ಞರು ಮತ್ತು ಕೆಲ ಸಂದರ್ಭಗಳಲ್ಲಿ ಮಾನಸಿಕ ತಜ್ಞರ ಪಾತ್ರ ಮಹತ್ವಪೂರ್ಣ ಹಾಗೂ ಅವಶ್ಯಕವೆನಿಸುವುದು. 

ವೈವಿಧ್ಯಮಯ ಕಾರಣಗಳಿಂದ ತಲೆದೋರುವ ಈ ವಿಶಿಷ್ಟ ಸಮಸ್ಯೆಯಲ್ಲಿ ತೀವ್ರ ನೋವು ಬಾಧಿಸಿದಾಗ ಸಂಪೂರ್ಣ ವಿಶ್ರಾಂತಿಯು ಪ್ರಾಥಮಿಕ ಅವಶ್ಯಕತೆಯಾಗಿದೆ. ಆದರೆ ಇತ್ತೀಚಿನ ಸಂಶೋಧನೆಗಳಂತೆ ವಿಶ್ರಾಂತಿ ಮತ್ತು ಔಷದ ಸೇವನೆಯಿಂದ ನೋವಿನ ತೀವ್ರತೆ ಕಡಿಮೆಯಾದಂತೆಯೇ, ಅಲ್ಪಪ್ರಮಾಣದ ಚಲನವಲನಗಳು ಮತ್ತು ಲಘು ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುವುದು ಲಾಭದಾಯಕ ಎನಿಸುವುದು. 

ಗಂಭೀರ ಸಮಸ್ಯೆಗಳು ಉದ್ಭವಿಸಿದಲ್ಲಿ ಔಷದ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಮಾನಸಿಕ ತಜ್ಞರ ಚಿಕಿತ್ಸೆ ಮತ್ತು ಶಾರೀರಿಕ ಚಿಕಿತ್ಸಕರ ಸಂಯುಕ್ತ ಪ್ರಯೋಗವು ಅತ್ಯಗತ್ಯ ಎನಿಸಬಹುದು. ಶಾರೀರಿಕ ಚಿಕಿತ್ಸೆಯ ಅಂಗವಾಗಿ ನಿಮ್ಮ ನೋವು ಉಲ್ಬಣಿಸದಂತಹ , ವಿಶೇಷವಾಗಿ ಬೆನ್ನು- ಸೊಂಟದ ಮಾಂಸಪೇಶಿಗಳು, ಅಸ್ಥಿ- ಅಸ್ಥಿಸಂಧಿಗಳು ಹಾಗೂ ಶಾರೀರಿಕ ಕ್ಷಮತೆಯ ಮಟ್ಟವನ್ನು ಹೆಚ್ಚಿಸವನ್ನು ಹೆಚ್ಚಿಸಬಲ್ಲ ಲಘು ವ್ಯಾಯಾಮಗಳು ಖಚಿತವಾಗಿಯೂ ಅಪೇಕ್ಷಿತ ಪರಿಣಾಮವನ್ನು ನೀಡುತ್ತವೆ. ಶಾಖ, ಅಲ್ಟ್ರಾ ಸೌಂಡ್ ಡೈನಾವೇವ್, ಮಸಾಜ್, ಬಿಸಿನೀರಿನ ಚೀಲ, ಇನ್ಫ್ರಾ ರೆಡ್ ದೀಪ ಹಾಗೂ ಶಾರ್ಟ್ ವೇವ್  ಡಯಾಥರ್ಮಿಗಳನ್ನು ಸೊಂಟನೋವಿನ ಚಿಕಿತ್ಸೆಯಲ್ಲಿ ಬಳಸುತ್ತಾರೆ. 

ರೋಗಿಯನ್ನು ಹಾಸುಗೆಯ ಮೇಲೆ ಮಲಗಿಸಿ "ಟ್ರಾಕ್ಶನ್ " ನೀಡುವುದು, ಸೊಂಟಕ್ಕೆ ಆಧಾರ ನೀಡುವ ಲಂಬೋ ಸಾಕ್ರಲ್ ಬೆಲ್ಟ್ ಧರಿಸುವುದು, ಸೊಂಟದ ನಿರ್ದಿಷ್ಟ ಭಾಗದಲ್ಲಿ ಎಪಿಡ್ಯೂರಲ್ ಇಂಜೆಕ್ಷನ್ ನೀಡುವುದು, ಅಕ್ಯುಪಂಕ್ಚರ್, ಯೋಗ ಇತ್ಯಾದಿಗಳೂ ಈ ಸಮಸ್ಯೆಯ ಪರಿಹಾರದಲ್ಲಿ ಪರಿಣಾಮಕಾರಿ ಎನಿಸುತ್ತವೆ. 

ಆದರೆ ಗಂಭೀರ ಹಾಗೂ ಅಪಾಯಕಾರಿ ಸಂಕೇತ- ಲಕ್ಷಣಗಳು ಕಂಡುಬಂದಲ್ಲಿ ಶಸ್ತ್ರಚಿಕಿತ್ಸೆ ಏಕಮಾತ್ರ ಪರಿಹಾರವೆನಿಸುವುದು ಅಪರೂಪವೇನಲ್ಲ. 
  
ಕೊನೆಯದಾಗಿ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ಸೊಂಟ- ಬೆನ್ನು ನೋವು ನಿಮ್ಮನ್ನು ಪೀಡಿಸುತ್ತಿದ್ದಲ್ಲಿ, ಅವಶ್ಯವಾಗಿ ತಜ್ಞ ವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆದುಕೊಳ್ಳಿ. ನೆರೆಕರೆಯ ಸ್ವಯಂವೈದ್ಯರು ನೀಡುವ ಯಾವುದೇ ಮಾತ್ರೆ- ಮುಲಾಮುಗಳನ್ನು ಬೇಕೆನಿಸಿದಾಗ ಬಳಸದಿರಿ. ನಿಮಗೆ ವಯಸ್ಸಾದಂತೆಯೇ ಸವೆತಕ್ಕೊಳಗಾದ ನಿಮ್ಮ ಅಸ್ಥಿಸಂಧಿಗಳಲ್ಲಿ ಪ್ರಾರಂಭವಾಗುವ ನೋವು, ಕೇವಲ ಒಂದು ಇಂಜೆಕ್ಷನ್ ನಿಂದ ಶಾಶ್ವತವಾಗಿ ಗುಣವಾಗದೆಂದು ಅರಿತಿರಿ. ಅದೇ ರೀತಿಯಲ್ಲಿ ಮೂಳೆಗಳು ತಮ್ಮ ಧೃಢತೆಯನ್ನು ಕಳೆದುಕೊಳ್ಳುವುದರಿಂದಾಗಿ, ವಯಸ್ಸಾದವರಲ್ಲಿ ಮೂಳೆಗಳ ದೌರ್ಬಲ್ಯವೂ ಹೆಚ್ಚಾಗಿ ಕಂಡುಬರುವುದು. ನೋವು ನಿವಾರಕ ಮುಲಾಮು-ಎಣ್ಣೆಗಳನ್ನು ತಿಕ್ಕುವುದರಿಂದ ಮೂಳೆಗಳು ಮತ್ತೆ ತಮ್ಮ ಧೃಢತೆಯನ್ನು ಮರಳಿ ಗಳಿಸಿಕೊಳ್ಳುವುದು ಅಸಾಧ್ಯ ಎನ್ನುವುದು ನೆನಪಿರಲಿ. 

ಆರೋಗ್ಯಕರ ಜೀವನಶೈಲಿ, ಶಿಸ್ತುಬದ್ಧ ಜೀವನಕ್ರಮ, ಸಮತೋಲಿತ ಆಹಾರ ಸೇವನೆ, ಪ್ರತಿನಿತ್ಯ ವ್ಯಾಯಾಮ- ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಮಾನಸಿಕ ಒತ್ತಡಗಳನ್ನು ದೂರವಿರಿಸುವುದೇ ಮುಂತಾದ ಉಪಕ್ರಮಗಳಿಂದ ನಿಮ್ಮ ಶಾರೀರಿಕ ಕ್ಷಮತೆ ಮತ್ತು ಆರೋಗ್ಯದ ಮಟ್ಟವನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳುವುದು ನಿಶ್ಚಿತವಾಗಿಯೂ ಸುಲಭಸಾಧ್ಯ ಎನ್ನುವುದನ್ನು ಮರೆಯದಿರಿ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೯-೦೯-೨೦೦೪ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.


No comments:

Post a Comment