Wednesday, June 29, 2016

NATIONAL DOCTORS DAY


      ಜುಲೈ ೧ : ರಾಷ್ಟ್ರೀಯ ವೈದ್ಯರ ದಿನಾಚರಣೆ
                             ಬೆಳ್ಳಿ ಹಬ್ಬದ ಸಂಭ್ರಮಾಚರಣೆ 

ಸಹಸ್ರಾರು ವರ್ಷಗಳಿಂದ ಸಮಾಜದ ಸ್ವಾಸ್ಥ್ಯ ಸಂರಕ್ಷಣೆಯ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ವೈದ್ಯ ಬಾಂಧವರನ್ನು ಸದಾ ಗೌರವಿಸುತ್ತಿದ್ದ ನಮ್ಮ ಪೂರ್ವಜರು, ಕೃತಜ್ಞತಾ ಪೂರ್ವಕವಾಗಿ " ವೈದ್ಯೋ ನಾರಾಯಣೋ ಹರಿ " ಎಂದು ನಮಿಸುತ್ತಿದ್ದರು. ಅಂತೆಯೇ ನಮ್ಮ ದೇಶದಲ್ಲಿ ೧೯೯೧ ರಿಂದ ವರ್ಷಂಪ್ರತಿ ಜುಲೈ ೧ ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತಿದೆ. ಇದೀಗ ರಾಷ್ಟ್ರೀಯ ವೈದ್ಯರ ದಿನಾಚರಣೆಗೆ ಬೆಳ್ಳಿಹಬ್ಬದ ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಆರೋಗ್ಯದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಹಾಗೂ ನಿಮ್ಮ ಆತ್ಮೀಯ ಮಿತ್ರರೂ ಆಗಿರುವ ವೈದ್ಯರಿಗೆ, ನಿಮ್ಮ ಪ್ರೀತಿ ವಿಶ್ವಾಸಗಳ ದ್ಯೋತಕವಾಗಿ ಇಂದು ಶುಭಕಾಮನೆಗಳನ್ನು ಸಲ್ಲಿಸುವ ಮೂಲಕ ಈ ದಿನವನ್ನು ಅವಿಸ್ಮರಣೀಯವನ್ನಾಗಿಸಿ. 

ವೈದ್ಯರ ದಿನಾಚರಣೆಯ ಹಿನ್ನೆಲೆ 

ಜಾಗತಿಕ ಮಟ್ಟದಲ್ಲಿ ಮೊತ್ತಮೊದಲಬಾರಿಗೆ " ವೈದ್ಯರ ದಿನ " ವನ್ನು ೧೯೩೩ ರ ಮಾರ್ಚ್ ೩೦ ರಂದು ಆಚರಿಸಲಾಗಿತ್ತು. ಖ್ಯಾತ ವೈದ್ಯ ಚಾರ್ಲ್ಸ್. ಬಿ . ಆಲ್ಮಂಡ್ ಇವರ ಪತ್ನಿ ಇ. ಬಿ. ಆಲ್ಮಂಡ್ ಇವರು, ವೈದ್ಯರನ್ನು ಗೌರವಿಸುವ ಸಲುವಾಗಿ ವರ್ಷದಲ್ಲಿ ಕನಿಷ್ಠ ಒಂದು ದಿನವನ್ನು ಮೀಸಲಿಡಬೇಕು ಎಂದು ನಿರ್ಧರಿಸಿದಂತೆ ಇದನ್ನು ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ ತಮ್ಮ ವೈದ್ಯರಿಗೆ ಶುಭಾಶಯ ಪತ್ರವನ್ನು ಕಳುಹಿಸುವ ಅಥವಾ ಹೇಳುವ ಮತ್ತು ವಿಧಿವಶರಾಗಿರುವ ಖ್ಯಾತ ವೈದ್ಯರ ಸಮಾಧಿಗಳ ಮೇಲೆ ಪುಷ್ಪಗುಚ್ಛಗಳನ್ನು ಇರಿಸುವ ಮೂಲಕ ಗೌರವಿಸಲಾಗುತ್ತಿತ್ತು. 

ತದನಂತರ ಅಮೆರಿಕ ದೇಶದ ಜನಪ್ರತಿನಿಧಿಗಳು ೧೯೫೮ ರ ಮಾರ್ಚ್ ೩೦ ರಂದು ವೈದ್ಯರ ದಿನವನ್ನು ಆಚರಿಸುವ ನಿರ್ಣಯವೊಂದನ್ನು ಅಂಗೀಕರಿಸಿದ್ದರು. ಜಾರ್ಜ್ ಬುಶ್ ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ, ವರ್ಷಂಪ್ರತಿ ಮಾರ್ಚ್ ೩೦ ರಂದು ವೈದ್ಯರ ದಿನವನ್ನಾಗಿ ಆಚರಿಸುವ ವಿಧೇಯಕಕ್ಕೆ ೧೯೯೦ ರ ಅಕ್ಟೋಬರ್ ೩೦ ರಂದು ಸಹಿಹಾಕಿದ್ದು, ೧೯೯೧ ರಿಂದ ಇದು ಜಾರಿಗೊಂಡಿತ್ತು. 

ಮಾರ್ಚ್ ೩೦ ರಂದು ವೈದ್ಯರ ದಿನವನ್ನು ಆಚರಿಸಲು ನಿರ್ದಿಷ್ಟ ಕಾರಣವೊಂದು ಇಂತಿದೆ. ಡಾ. ಕ್ರಾಫರ್ಡ್ ಲಾಂಗ್ ಎನ್ನುವ ವೈದ್ಯರು ೧೮೪೨ ರ ಮಾರ್ಚ್ ೩೦ ರಂದು ಮೊತ್ತಮೊದಲಬಾರಿಗೆ ಈಥರ್ ಎನ್ನುವ ಅರಿವಳಿಕೆ ಔಷದವನ್ನು ಬಳಸಿ, ರೋಗಿಯ ಕತ್ತಿನ ಭಾಗದಲ್ಲಿದ್ದ ಗೆಡ್ಡೆಯೊಂದನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದಿದ್ದರು. ಈ ಸಂದರ್ಭದಲ್ಲಿ ತನಗೆ ಕಿಂಚಿತ್ ಕೂಡಾ ನೋವಿನ ಅನುಭವ ಆಗಿರಲಿಲ್ಲವೆಂದು ರೋಗಿ ಹೇಳಿದ್ದನು. ನೋವಿಲ್ಲದೇ ಶಸ್ತ್ರಚಿಕಿತ್ಸೆಯನ್ನು ಮಾಡಬಹುದಾದ ವಿಧಾನ ಮತ್ತು ಔಷದವನ್ನು ಸಂಶೋಧಿಸಿ ಬಳಸಿದ್ದ ಈ ದಿನವನ್ನು, ಜಗತ್ತಿನ ಬಹುತೇಕ ರಾಷ್ಟ್ರಗಳು ವೈದ್ಯರ ದಿನವನ್ನಾಗಿ ಆಚರಿಸುತ್ತಿವೆ. 

ಡಾ. ಬಿ. ಸಿ. ರಾಯ್ ಜನ್ಮದಿನ 

ಅಪ್ರತಿಮ ವೈದ್ಯ ಹಾಗೂ ಮಹಾನ್ ರಾಜಕಾರಣಿ ಎಂದೇ ಸುಪ್ರಸಿದ್ಧರಾಗಿದ್ದ ಡಾ. ಬಿದಾನ ಚಂದ್ರ ರಾಯ್ ಇವರ ಜನ್ಮದಿನವನ್ನು ಭಾರತದಲ್ಲಿ " ರಾಷ್ಟ್ರೀಯ ವೈದ್ಯರ ದಿನ " ವನ್ನಾಗಿ ಆಚರಿಸಲಾಗುತ್ತಿದೆ. ವಿಶೇಷವೆಂದರೆ ಜುಲೈ ೧, ೧೮೮೨ ರಂದು ಜನಿಸಿದ್ದ ಡಾ. ರಾಯ್, ೧೯೬೨ ಜುಲೈ ೧ ರಂದು ಅರ್ಥಾತ್ ತಮ್ಮ ಜನ್ಮದಿನದಂದೇ  ವಿಧಿವಶರಾಗಿದ್ದರು. ಈ ಮಹಾನ್ ಸಾಧಕನ ಜನ್ಮದಿನವನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲು ಭಾರತ ಸರ್ಕಾರವು ೧೯೯೧ ರಲ್ಲಿ ನಿರ್ಧರಿಸಿತ್ತು. 

೧೮೮೨ ಜುಲೈ ೧ ರಂದು ಜನಿಸಿದ್ದ ಬಿ. ಸಿ. ರಾಯ್, ಕೊಲ್ಕತ್ತಾದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದ ಬಳಿಕ, ಇಂಗ್ಲೆಂಡ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದರು. ೧೯೧೧ ರಲ್ಲಿ ಸ್ವದೇಶಕ್ಕೆ ಮರಳಿದ ಡಾ. ರಾಯ್, ಕೊಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು. 

ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾಗಿದ್ದ ಡಾ. ರಾಯ್, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದರು. ತದನಂತರ ೧೪ ವರ್ಷಗಳ ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಮುಖ್ಯಮಂತ್ರಿಯಂತಹ ಬಿಡುವಿಲ್ಲದ ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ, ಪ್ರತಿನಿತ್ಯ ಕನಿಷ್ಠ ೧ ಗಂಟೆಯಷ್ಟು ಸಮಯವನ್ನು ಕೊಳೆಗೇರಿಯ ನಿವಾಸಿಗಳಿಗೆ ವೈದ್ಯಕೀಯ ಚಿಕಿತ್ಸೆಯನ್ನು ನೀಡಲು ವಿನಿಯೋಗಿಸುತ್ತಿದ್ದರು. ಡಾ. ರಾಯ್ ಇವರ ಮಹೋನ್ನತ ಸಾಧನೆಯನ್ನು ಗುರುತಿಸಿದ್ದ ಕೇಂದ್ರ ಸರ್ಕಾರವು, ೧೯೬೧ ರಲ್ಲಿ ಇವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. 
--------------------------------------------------------------------------------------------
                ನಿಮ್ಮ ಆರೋಗ್ಯದ ರಕ್ಷಣೆ ನಿಮ್ಮ ಕೈಯ್ಯಲ್ಲೇ ಇದೆ!
--------------------------------------------------------------------------------------------

ಪ್ರಸ್ತುತ ನಮ್ಮ ದೇಶದಲ್ಲಿ ವಿಭಿನ್ನ ವೈದ್ಯಕೀಯ ಚಿಕಿತ್ಸಾ ಪದ್ದತಿಗಳು ಬಳಕೆಯಲ್ಲಿವೆ. ಇವುಗಳಲ್ಲಿ ಸಹಸ್ರಾರು ವರ್ಷಗಳ ಹಿಂದೆ ಆವಿಷ್ಕರಿಸಿದ್ದ ಆಯುರ್ವೇದದೊಂದಿಗೆ ಸಿದ್ಧ, ಯುನಾನಿ, ಹೋಮಿಯೋಪತಿ, ಆಲೋಪತಿಗಳಲ್ಲದೇ, ಪ್ರಕೃತಿ ಚಿಕಿತ್ಸಾ ಪದ್ದತಿಯೂ ವ್ಯಾಪಕವಾಗಿ ಬಳಕೆಯಲ್ಲಿದೆ. ಆದರೆ ಅತ್ಯಧಿಕ ಸಂಖ್ಯೆಯ ಭಾರತೀಯರು ತಮ್ಮ ಆರೋಗ್ಯದ ರಕ್ಷಣೆಗಾಗಿ, ಮಾರಕ ಅಥವಾ ಗಂಭೀರ ಕಾಯಿಲೆಗಳಿಂದ ರಕ್ಷಣೆಯನ್ನು ಪಡೆದುಕೊಳ್ಳಲು ಮತ್ತು ಅನ್ಯ ವ್ಯಾಧಿಗಳು ಬಾಧಿಸಿದ ಸಂದರ್ಭಗಳಲ್ಲಿ ಆಧುನಿಕ ಅರ್ಥಾತ್ ಅಲೋಪತಿ ವೈದ್ಯಕೀಯ ಪದ್ದತಿಯನ್ನು ಬಳಸುತ್ತಿದ್ದಾರೆ. ಈ ರೀತಿಯಲ್ಲಿ ಹಲವಾರು ವೈದ್ಯಕೀಯ ಪದ್ದತಿಗಳು ನಮ್ಮ ದೇಶದಲ್ಲಿ ಬಳಸಲ್ಪಡುತ್ತಿದ್ದರೂ, ಇವೆಲ್ಲಾ ಪದ್ದತಿಗಳ ಮೂಲ ಉದ್ದೇಶವು ಮನುಷ್ಯನ ಸ್ವಾಸ್ಥ್ಯ ರಕ್ಷಣೆಯೇ ಆಗಿದೆ. 

ಮನುಷ್ಯನನ್ನು ಬಾಧಿಸಬಲ್ಲ ಸಹಸ್ರಾರು ವಿಧದ ಕಾಯಿಲೆಗಳಿಗೆ ಕಾರಣಗಳೂ ನೂರಾರು. ಇವುಗಳಲ್ಲಿ ರೋಗನಿರೋಧಕ ಶಕ್ತಿಯ ಕೊರತೆ, ಅನುವಂಶಿಕತೆ, ಬ್ಯಾಕ್ಟೀರಿಯಾ ಹಾಗೂ ವೈರಸ್ ಮತ್ತಿತರ ರೋಗಕಾರಕ ಸೂಕ್ಷ್ಮಾಣುಜೀವಿಗಳು, ಜನ್ಮದತ್ತ ವೈಕಲ್ಯ ಹಾಗೂ ತೊಂದರೆಗಳು, ಆಧುನಿಕ ಜೀವನಶೈಲಿ, ಅತಿಯಾದ ಮಾನಸಿಕ ಒತ್ತಡ, ಮಾದಕ ದ್ರವ್ಯ ಇತ್ಯಾದಿಗಳ ಸೇವನೆಯಂತಹ ದುಶ್ಚಟಗಳು, ಪ್ರದೂಷಿತ ಪರಿಸರ, ಕಲುಷಿತ ನೀರು ಮತ್ತು ಗಾಳಿ, ಕೀಟನಾಶಕಗಳನ್ನು ಬಳಸಿ ಬೆಳೆಸಿದ ಆಹಾರ ಪದಾರ್ಥಗಳ ಸೇವನೆಯೊಂದಿಗೆ, ಅಲ್ಪಾವಧಿಯಲ್ಲಿ ಕೈತುಂಬಾ ಸಂಪಾದಿಸುವ ಸಲುವಾಗಿ ನಿದ್ರಾಹಾರಗಳನ್ನು ನಿರ್ಲಕ್ಷಿಸಿ ಎಡೆಬಿಡದೇ ದುಡಿಯುವುದೇ ಮುಂತಾದ ಕಾರಣಗಳು ವೈವಿಧ್ಯಮಯ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತವೆ. 

ಅದೇ ರೀತಿಯಲ್ಲಿ ಮನುಷ್ಯನನ್ನು ಬಾಧಿಸುವ ಬಹುತೇಕ ವ್ಯಾಧಿಗಳನ್ನು ಗುಣಪಡಿಸಬಲ್ಲ ಔಷದಗಳು ಲಭ್ಯವಿದ್ದು, ಶಾಶ್ವತ ಪರಿಹಾರವೇ ಇಲ್ಲದ ಕೆಲ ಗಂಭೀರ ಕಾಯಿಲೆಗಳನ್ನು ಸಮರ್ಪಕವಾಗಿ ನಿಯಂತ್ರಿಸಬಲ್ಲ ಔಷದಗಳಿವೆ. ಆದರೆ ಕೆಲವಿಧದ ಗಂಭೀರ ಅಥವಾ ಮಾರಕ ಕಾಯಿಲೆಗಳನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷದಗಳೇ ಇಲ್ಲವೆನ್ನುವುದು ನಿಮಗೂ ತಿಳಿದಿರಲೇಬೇಕು. ಆದರೆ ಇಂತಹ ವ್ಯಾಧಿಗಳನ್ನು ಗುಣಪಡಿಸಬಲ್ಲ ಔಷದಗಳನ್ನು ಪತ್ತೆಹಚ್ಚಲು ವೈದ್ಯಕೀಯ ವಿಜ್ಞಾನಿಗಳು ನಿರಂತರವಾಗಿ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ನಿರತರಾಗಿದ್ದಾರೆ. 

ಆರೋಗ್ಯವೇ ಭಾಗ್ಯ 

ಆರೋಗ್ಯವೇ ಭಾಗ್ಯ ಎನ್ನುವ ಮುತ್ತಿನಂತಹ ಮಾತುಗಳನ್ನು ನೀವು ಕೇಳಿರಲೇಬೇಕು. ಅದೇ ರೀತಿಯಲ್ಲಿ ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ ಎನ್ನುವ ಉಕ್ತಿಯನ್ನೂ ಕೇಳಿರಬೇಕು. ಇವೆರಡೂ ಮಾತುಗಳನ್ನು ಅಕ್ಷರಶಃ ಪರಿಪಾಲಿಸಿದಲ್ಲಿ, ಕಾಯಿಲೆಗಳನ್ನು ದೂರವಿರಿಸುವುದು ಸುಲಭಸಾಧ್ಯ. 

ನಿಮ್ಮ ಶಾರೀರಿಕ ಕ್ಷಮತೆಯನ್ನು ಮತ್ತು ರೋಗನಿರೋಧಕ ಶಕ್ತಿಯನ್ನು ಉನ್ನತಸ್ತರದಲ್ಲಿ ಕಾಪಾಡಿಕೊಳ್ಳಲು ಆರೋಗ್ಯಕರ ಜೀವನಶೈಲಿಯನ್ನು ಪರಿಪಾಲಿಸಬೇಕು. ಇದರ ಅಂಗವಾಗಿ ದಿನನಿತ್ಯ ಮುಂಜಾನೆ ಬೇಗನೆ ಎದ್ದು, ನಿತ್ಯಕರ್ಮಗಳನ್ನು ಮುಗಿಸಿದ ಬಳಿಕ ಕನಿಷ್ಠ ಅರ್ಧದಿಂದ ಒಂದು ಗಂಟೆಯ ಕಾಲ ವ್ಯಾಯಾಮ ಅಥವಾ ಯೋಗ ಹಾಗೂ ಪ್ರಾಣಾಯಾಮ ಅಥವಾ ಶಾರೀರಿಕ ಶ್ರಮದ ಕ್ರೀಡೆಗಳಲ್ಲಿ ಅಥವಾ ನಡಿಗೆಯಲ್ಲಿ ತೊಡಗಿಸಿಕೊಳ್ಳಿರಿ. 

ಪ್ರತಿನಿತ್ಯ ಸಮತೋಲಿತ ಆಹಾರವನ್ನು ಸೇವಿಸಿ. ಎಣ್ಣೆ, ಬೆಣ್ಣೆ, ತುಪ್ಪಗಳನ್ನು ಬಳಸಿ ತಯಾರಿಸಿದ ಮತ್ತು ಸಿಹಿತಿಂಡಿಗಳ ಸೇವನೆಯಲ್ಲಿ ಇತಿಮಿತಿಗಳಿರಲಿ. ಮಾಂಸಾಹಾರಕ್ಕಿಂತ ಸಸ್ಯಾಹಾರದ ಸೇವನೆ ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಎನ್ನುವುದನ್ನು ಮರೆಯದಿರಿ. 

ನಿಮ್ಮ ಮಕ್ಕಳನ್ನು ಗಂಭೀರ ಅಥವಾ ಮಾರಕ ವ್ಯಾಧಿಗಳಿಂದ ರಕ್ಷಿಸಬಲ್ಲ ವಿವಿಧ ಲಸಿಕೆಗಳನ್ನು ನಿಗದಿತ ಸಮಯದಲ್ಲಿ ತಪ್ಪದೆ ಕೊಡಿಸಿ. ಅಂತೆಯೇ ಸಾಂಕ್ರಾಮಿಕ ವ್ಯಾಧಿಗಳು ವ್ಯಾಪಕವಾಗಿ ಕಂಡುಬಂದಲ್ಲಿ, ಇವುಗಳನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ ಲಸಿಕೆಗಳು ಲಭ್ಯವಿದ್ದಲ್ಲಿ ಪಡೆದುಕೊಳ್ಳಿ. ಅಂತೆಯೇ ಅನ್ಯ ಕಾಯಿಲೆಗಳು ಬಾಧಿಸಿದಾಗ ನಿಮ್ಮ ನಂಬಿಗಸ್ಥ ವೈದ್ಯರ ಸಲಹೆ ಹಾಗೂ ಚಿಕಿತ್ಸೆಗಳನ್ನು ಪಡೆಯಿರಿ. ವೈದ್ಯರ ನಿರ್ಧಾರದ ಬಗ್ಗೆ ಸಂದೇಹವಿದ್ದಲ್ಲಿ, ಅವರು ಸೂಚಿಸಿದ ಚಿಕಿತ್ಸೆಯನ್ನು ನಿರಾಕರಿಸುವ ಹಾಗೂ ಮತ್ತೊಬ್ಬ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವ ಹಕ್ಕು ನಿಮಗಿದೆ.

ಅಂತಿಮವಾಗಿ ಕ್ಷಿಪ್ರಗತಿಯಲ್ಲಿ ಶ್ರೀಮಂತರಾಗುವ ಹಂಬಲದಿಂದ ನಿದ್ರಾಹಾರಗಳನ್ನು ನಿರ್ಲಕ್ಷಿಸಿ ಕೈತುಂಬಾ ಹಣವನ್ನು ಸಂಪಾದಿಸುವ ಸಂದರ್ಭದಲ್ಲಿ  ಕಳೆದುಕೊಂಡ ಆರೋಗ್ಯವನ್ನು ಮತ್ತೆ ಗಳಿಸಲು, ಅದುವರೆಗೆ ಸಂಪಾದಿಸಿದ ಹಣವನ್ನು ಮತ್ತೆ ಕಳೆದುಕೊಳ್ಳದಿರಿ!. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು 



No comments:

Post a Comment