Monday, October 3, 2016

SWACH BHARATH SECOND ANNIVERSARY


      ಸ್ವಚ್ಛ ಭಾರತ ಅಭಿಯಾನದ ದ್ವಿತೀಯ ವಾರ್ಷಿಕೋತ್ಸವ  

ಎರಡು ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿಯವರ ಜನ್ಮದಿನದಂದು ದೇಶದ ಪ್ರಧಾನ ಜನಸೇವಕ ನರೇಂದ್ರ ಮೋದಿಯವರು ಸ್ವತಃ ಕಸವನ್ನು ಗುಡಿಸುವ ಮೂಲಕ " ಸ್ವಚ್ಛಭಾರತ ಅಭಿಯಾನ " ವನ್ನು  ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ವಾರದಲ್ಲಿ ಎರಡು ಘಂಟೆಗಳಂತೆ, ವರ್ಷದಲ್ಲಿ ೧೦೦ ಘಂಟೆಗಳನ್ನು ಸ್ವಚ್ಛತೆಗಾಗಿ ವಿನಿಯೋಗಿಸಬೇಕು ಎಂದು ವಿನಂತಿಸಿದ್ದರು. ಈ ಅಭಿಯಾನವು ಮುಂದಿನ ಐದು ವರ್ಷಗಳ ಕಾಲ ನಿರಂತರವಾಗಿ ನಡೆಯಲಿದ್ದು, ಗಾಂಧೀಜಿಯವರ ೧೫೦ ನೇ ಜನ್ಮದಿನದಂದು ಸಂಪನ್ನಗೊಳ್ಳಲಿದ್ದು, ಈ ಅವಧಿಯಲ್ಲಿ ನಮ್ಮ ದೇಶವನ್ನು  ಸ್ವಚ್ಛ, ಸ್ವಸ್ಥ ಮತ್ತು ಸುಂದರವನ್ನಾಗಿಸಲು ದೇಶದ ಪ್ರಜೆಗಳೆಲ್ಲರೂ ಶ್ರಮಿಸುವಂತೆ ಕರೆನೀಡಿದ್ದರು.

 ಈ ಅಭಿಯಾನದ ಉದ್ಘಾಟನೆಯ ಸಂದರ್ಭದಲ್ಲಿ ದೇಶದ ಪ್ರತಿಯೊಂದು ರಾಜ್ಯಗಳ ರಾಜಕೀಯ ನೇತಾರರು, ಉನ್ನತ ಅಧಿಕಾರಿಗಳು, ಬೃಹತ್ ಉದ್ದಿಮೆ – ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳು, ವಿದ್ಯಾರ್ಥಿಗಳು ಮತ್ತು ಶ್ರೀಸಾಮಾನ್ಯರು ಇದರಲ್ಲಿ ಭಾಗಿಯಾಗಿದ್ದು, ಇನ್ನುಮುಂದೆ ಪ್ರತಿ ತಿಂಗಳಿನಲ್ಲೂ ಸ್ವಚ್ಛತಾ ಕಾರ್ಯಕ್ರಮವನ್ನು ನಿಯಮಿತವಾಗಿ ನಡೆಸುವುದಾಗಿ ಘೋಷಿಸಿದ್ದರು. ಆದರೆ ಈ ಆರಂಭಶೂರತ್ವವು ಒಂದೆರಡು ತಿಂಗಳುಗಳಲ್ಲೇ ಅಂತ್ಯಗೊಂಡಿದ್ದುದು ಮಾತ್ರ ಸುಳ್ಳೇನಲ್ಲ!. ಪ್ರಾಯಶಃ ಮಾಧ್ಯಮಗಳಲ್ಲಿ ಲಭಿಸಲಿರುವ ಪುಕ್ಕಟೆ ಪ್ರಚಾರಕ್ಕಾಗಿ ಭಾಗಿಯಾಗಿದ್ದ ಇವರೆಲ್ಲರೂ, ಬಳಿಕ ಕಣ್ಮರೆಯಾಗಿದ್ದರು. ನಿಜ ಹೇಳಬೇಕಿದ್ದಲ್ಲಿ  ಕೇವಲ ಪ್ರಚಾರದ ಸಲುವಾಗಿ ಭಾಗಿಯಾಗುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ  ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗದು ಎನ್ನುವುದರಲ್ಲಿ ಎರಡು ಮಾತಿಲ್ಲ. ಅಂತೆಯೇ ದೇಶದ ಜನತೆ ಮನಸ್ಪೂರ್ವಕವಾಗಿ ಇದರಲ್ಲಿ ಭಾಗವಹಿಸಿದಲ್ಲಿ, ಇದು ಯಶಸ್ವಿಯಾಗುವುದರಲ್ಲೂ ಸಂದೇಹವಿಲ್ಲ.

ವಿಶೇಷವೆಂದರೆ ಈ ಅಭಿಯಾನ ಆರಂಭವಾಗುವ ಮುನ್ನವೇ ದೇಶದ ಅನೇಕ ಮಹಾನಗರಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ " ಆಗ್ಲಿ ಇಂಡಿಯನ್ಸ್ " ನಾಮಧೇಯದ ಸೇವಾ ಸಂಘಟನೆ ಮತ್ತು ಅಭಿಯಾನ ಆರಂಭವಾದ ಬಳಿಕ ಇದರಲ್ಲಿ ಭಾಗಿಯಾಗಿದ್ದ ರಾಮಕೃಷ್ಣ ಮಿಶನ್ ಮತ್ತಿತರ ಬೆರಳೆಣಿಕೆಯಷ್ಟು ಸಂಘಟನೆಗಳು, ಇಂದಿಗೂ ಸ್ವಚ್ಛತಾ ಕಾರ್ಯಕ್ರಮವನ್ನು ನಿಯಮಿತವಾಗಿ ನಡೆಸುತ್ತಿವೆ. ತತ್ಪರಿಣಾಮವಾಗಿ ಅನೇಕ ನಗರಗಳಲ್ಲಿನ ದುರ್ವಾಸನೆಯನ್ನು ಬೀರುವ ಹಾಗೂ ಅಸಹ್ಯವೆನಿಸುವ ತ್ಯಾಜ್ಯಗಳ ರಾಶಿಗಳು ಕಣ್ಮರೆಯಾಗಿವೆ. ಜೊತೆಗೆ ಇಂತಹ ಸ್ಥಳಗಳು ಸ್ವಚ್ಚ ಮತ್ತು ಸುಂದರವಾಗಿವೆ. 

ಅಭಿಯಾನಕ್ಕೆ ಎರಡು ವರ್ಷ

ದೇಶದ ವಿವಿಧ ರಾಜ್ಯಗಳ ಮಾಹಿತಿಯನ್ನು ಪರಿಶೀಲಿಸಿದಾಗ ಈ ಅಭಿಯಾನವು ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಆದರೆ ಪ್ರಧಾನಿಯವರ ಅಪೇಕ್ಷೆಯಂತೆ ದೇಶದ ಪ್ರತಿಯೊಬ್ಬ ಪ್ರಜೆಯು ಇದರಲ್ಲಿ ಭಾಗವಹಿಸಿದ್ದಲ್ಲಿ, ಅಭಿಯಾನವು  ಇನ್ನಷ್ಟು ಯಶಸ್ವಿಯಾಗುತ್ತಿತ್ತು ಎನ್ನುವುದರಲ್ಲಿ ಸಂದೇಹವಿಲ್ಲ. ಅಂತೆಯೇ ಸ್ಥಳೀಯ ಸಂಸ್ಥೆಗಳು, ರಾಜ್ಯಮತ್ತು ಕೇಂದ್ರ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ತ್ಯಾಜ್ಯಗಳ ಸಂಗ್ರಹ ಮಾತ್ರವಲ್ಲ, ಈ ತ್ಯಾಜ್ಯಗಳನ್ನು ಸುರಕ್ಷಿತ ಮತ್ತು ವೈಜ್ಞಾನಿಕ ವಿಧಿವಿಧಾನಗಳಿಂದ ಪುನರ್ಬಳಕೆ ಹಾಗೂ ಪುನರ್ ಆವರ್ತನಗೊಳಿಸುವ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವ, ಸಿಮೆಂಟ್ ಮತ್ತು ಉಕ್ಕಿನ ಕಾರ್ಖಾನೆಗಳ ಕುಲುಮೆಗಳಲ್ಲಿ ಇಂಧನವನ್ನಾಗಿ ಬಳಸುವ, ಭಗ್ನಗೊಳಿಸಿದ ಕಟ್ಟಡಗಳ ತ್ಯಾಜ್ಯಗಳಿಂದ ಹೊಸ ಕಟ್ಟಡಗಳನ್ನು ಅಥವಾ ಹೊಸ ರಸ್ತೆಗಳನ್ನು ನಿರ್ಮಿಸುವ, ತ್ಯಾಜ್ಯಗಳನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡುವ ಘಟಕಗಳನ್ನು ಸ್ಥಾಪಿಸುವ, ಸಂಪೂರ್ಣವಾಗಿ ನಿರುಪಯುಕ್ತ ಎನಿಸುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಇನ್ಸಿನರೇಟರ್ ಮೂಲಕ ಸುರಕ್ಷಿತವಾಗಿ ದಹಿಸುವ ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳಿಂದ ವಾಹನಗಳಲ್ಲಿ ಬಳಸಬಹುದಾದ ಇಂಧನವನ್ನು ತಯಾರಿಸಬಲ್ಲ ಘಟಕಗಳನ್ನು ಸ್ಥಾಪಿಸಿದಲ್ಲಿ, ಕಣ್ಣು ಹಾಯಿಸಿದಲ್ಲೆಲ್ಲಾ ಕಾಣಸಿಗುವ ಮತ್ತು ಲ್ಯಾಂಡ್ ಫಿಲ್ ಸೈಟ್ ಗಳಲ್ಲಿ ತುಂಬಿ ತುಳುಕುತ್ತಿರುವ ಅಗಾಧ ಪ್ರಮಾಣದ ತ್ಯಾಜ್ಯಗಳು ಕಣ್ಮರೆಯಾಗುತ್ತಿದ್ದವು. ತತ್ಪರಿಣಾಮವಾಗಿ ಹೊಸ ಲ್ಯಾಂಡ್ ಫಿಲ್ ಸೈಟ್ ಗಳ ನಿರ್ಮಾಣಕ್ಕಾಗಿ ಸ್ಥಳವನ್ನು ಹುಡುಕುವ ಹಾಗೂ ಸ್ಥಾಪಿಸಲು ತಗಲುವ ವೆಚ್ಚಗಳನ್ನು ಮತ್ತು ಇವುಗಳ ಸ್ಥಾಪನೆಯನ್ನು ವಿರೋಧಿಸುವ ಜನರ ಪ್ರತಿಭಟನೆಗಳನ್ನು ಸುಲಭದಲ್ಲೇ ನಿವಾರಿಸಬಹುದಾಗಿತ್ತು. 

ನೀವೇನು ಮಾಡಬಹುದು

ಬಡವ ಶ್ರೀಮಂತರೆನ್ನುವ ಭೇದವಿಲ್ಲದೇ ದೇಶದ ಪ್ರಜೆಗಳೆಲ್ಲರೂ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು.ಕಾರಣಾಂತರಗಳಿಂದ ಈ ಅಭಿಯಾನದಲ್ಲಿ ಪ್ರತ್ಯಕ್ಷವಾಗಿ ಭಾಗಿಗಳಾಗಲು ಸಾಧ್ಯವಿಲ್ಲದಿದ್ದಲ್ಲಿ, ತಾವು ದಿನನಿತ್ಯ ಉತ್ಪಾದಿಸುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆ ಮಾಡುವ ಹಾಗೂ ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯುವ ಕೆಟ್ಟ ಹವ್ಯಾಸವನ್ನು ತೊರೆಯುವ ಮೂಲಕವೂ ಅಭಿಯಾನವನ್ನು ಯಶಸ್ವಿಗೊಳಿಸಬಹುದಾಗಿದೆ. ಅಂತೆಯೇ ಅಧಿಕತಮ ಜನರು ಅತಿಯಾಗಿ ಬಳಸುವ ಪ್ಲಾಸ್ಟಿಕ್ ಕೈಚೀಲ ಮತ್ತಿತರ " ಬಳಸಿ ಎಸೆಯುವ " ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವ, ಪುನರ್ ಬಳಕೆ ಮಾಡುವ ಮೂಲಕ ಹಾಗೂ ನಿರುಪಯುಕ್ತ ಪ್ಲಾಸ್ಟಿಕ್ ಚೀಲಗಳನ್ನು ಪುನರ್ ಆವರ್ತನಗೊಳಿಸುವ ಸಲುವಾಗಿ ಪ್ರತ್ಯೇಕಿಸಿ ಇರಿಸುವ ಮೂಲಕ ಮತ್ತು ಪ್ಲಾಸ್ಟಿಕ್ ಚೀಲಗಳನ್ನು ನಿರಾಕರಿಸುವ ಮೂಲಕ, ಇಂತಹ ವಸ್ತುಗಳನ್ನು ತ್ಯಾಜ್ಯ ರೂಪದಲ್ಲಿ ವಿಸರ್ಜಿಸುವುದನ್ನು ಸುಲಭದಲ್ಲೇ ತಡೆಗಟ್ಟಬಹುದಾಗಿದೆ.

ವಿದ್ಯಾರ್ಥಿಗಳಿಗೊಂದು ಅವಕಾಶ

ಶಾಲಾಕಾಲೇಜು ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವುದರೊಂದಿಗೆ ಒಂದಿಷ್ಟು ಆದಾಯವನ್ನು ಗಳಿಸಬಲ್ಲ ಸುಲಭೋಪಾಯವೊಂದು ಇಂತಿದೆ. ತಮ್ಮ ಮನೆಗಳಲ್ಲಿ, ಶಾಲಾಕಾಲೇಜುಗಳ ಆವರಣಗಳಲ್ಲಿ, ತಾವು ದಿನನಿತ್ಯ ನಡೆದಾಡುವ ರಸ್ತೆಗಳ ಬದಿಗಳಲ್ಲಿ ಕಾಣಸಿಗುವ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಸ್ವಚ್ಚವಾದ ಪ್ಲಾಸ್ಟಿಕ್ ಕೈಚೀಲ ಇತ್ಯಾದಿಗಳನ್ನು ಸಂಗ್ರಹಿಸಿ, ನಿಮ್ಮದೇ ಊರಿನ ಗುಜರಿ ಅಂಗಡಿಗಳಿಗೆ ನೀಡಬಹುದಾಗಿದೆ. ಅದೇ ರೀತಿಯಲ್ಲಿ ರಟ್ಟಿನ ಪೆಟ್ಟಿಗೆಗಳು ನಿರುಪಯುಕ್ತ ಕಾಗದ ಇತ್ಯಾದಿ ವಸ್ತುಗಳನ್ನು ಒಲೆಯಲ್ಲಿ ಸುಡುವ ಬದಲಾಗಿ, ಇವುಗಳನ್ನು ಕೂಡಾ ಗುಜರಿ ಅಂಗಡಿಗಳಿಗೆ ಮಾರಬಹುದಾಗಿದೆ. ಇದರಿಂದಾಗಿ ತ್ಯಾಜ್ಯಗಳ ಉತ್ಪಾದನೆಯು ಕಡಿಮೆಯಾಗುವುದಲ್ಲದೇ, ನೀವು ಸಂಗ್ರಹಿಸಿ ಮಾರಾಟ ಮಾಡುವ ತ್ಯಾಜ್ಯಗಳ ಪ್ರಮಾಣಕ್ಕೆ ಅನುಗುಣವಾಗಿ ನಿಮಗೆ ಒಂದಿಷ್ಟು ಆದಾಯವೂ ಲಭಿಸುತ್ತದೆ. ನಮ್ಮೂರಿನ ಶಾಲೆಯೊಂದರ ವಿದ್ಯಾರ್ಥಿಗಳು ಈ ವಿಧಾನವನ್ನು ಅನುಸರಿಸುವ ಮೂಲಕ, ತಮಗೆ ಬೇಕಾಗುವ ಸ್ಲೇಟು, ಪುಸ್ತಕ, ಪೆನ್ಸಿಲ್, ಪೆನ್, ಸ್ಕೂಲ್ ಬ್ಯಾಗ್, ಕೊಡೆ ಮತ್ತಿತರ ವಸ್ತುಗಳನ್ನು ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಪಡೆಯುತ್ತಿದ್ದಾರೆ. ಈ ವಿಧಾನವನ್ನು ದೇಶದ ಎಲ್ಲ ಶಾಲಾಕಾಲೇಜುಗಳಲ್ಲಿ ಅನುಷ್ಠಾನಿಸಬಹುದಾಗಿದೆ. ತನ್ಮೂಲಕ ವಿದ್ಯಾರ್ಥಿಗಳಿಗೆ ಈ ಅಭಿಯಾನದಲ್ಲಿ ಭಾಗವಹಿಸುವ ಅವಕಾಶವನ್ನು ಕಲ್ಪಿಸುವುದರೊಂದಿಗೆ, ಅವರ ಹೊಣೆಗಾರಿಕೆಯನ್ನು ಹೆಚ್ಚಿಸಬಹುದಾಗಿದೆ.

ಇಷ್ಟು ಮಾತ್ರವಲ್ಲ, ಮಾರುಕಟ್ಟೆ ಅಥವಾ ಸಮೀಪದ ಅಂಗಡಿಗಳಲ್ಲಿ ಯಾವುದೇ ವಸ್ತುವನ್ನು ಖರೀದಿಸಲು ಹೋಗುವಾಗ ಮರೆಯದೇ ಬಟ್ಟೆಯ ಚೀಲವೊಂದನ್ನು ಒಯ್ಯಿರಿ. ಸರಣಿ ಮಳಿಗೆಗಳಲ್ಲಿ ಖರೀದಿಸುವ ಪ್ರತಿಯೊಂದು ತರಕಾರಿ ಹಾಗೂ ಹಣ್ಣುಗಳನ್ನು ಪ್ರತ್ಯೇಕ ಪ್ಲಾಸ್ಟಿಕ್ ಚೀಲದಲ್ಲಿ ಹಾಕಲೇಬೇಕೆಂದು ಒತ್ತಾಯಿಸಿದಲ್ಲಿ ನಿರಾಕರಿಸಿ. ಇವೆಲ್ಲವುಗಳನ್ನು ತೂಕ ಮಾಡಿದ ಬಳಿಕ ಇವುಗಳ ತೂಕ ಮತ್ತು ಬೆಲೆಯನ್ನು ಸೂಚಿಸುವ  ಸ್ಟಿಕ್ಕರ್ ಗಳನ್ನು ಕೇವಲ ಒಂದು ಪ್ಲಾಸ್ಟಿಕ್ ಚೀಲಕ್ಕೆ ಅಂಟಿಸುವಂತೆ ಸೂಚಿಸಿ. ಅನಿವಾರ್ಯವಾಗಿ ಪ್ಲಾಸ್ಟಿಕ್ ಚೀಲವನ್ನು ವ್ಯಾಪಾರಿಗಳಿಂದ ಪಡೆದುಕೊಂಡಲ್ಲಿ, ಇದನ್ನು ಹಲವಾರು ಬಾರಿ ಪುನರ್ಬಳಸಿ. ಯಾವುದೇ ಸಂದರ್ಭದಲ್ಲೂ ನಿಮ್ಮ ಮನೆಯಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಸಲುವಾಗಿಯೇ ಪ್ಲಾಸ್ಟಿಕ್ ಕೈಚೀಲಗಳನ್ನು ಕೇಳಿ ಪಡೆಯದಿರಿ!.

ಪ್ರಧಾನ ಮಂತ್ರಿಯವರು ಅಪೇಕ್ಷಿಸಿದಂತೆ ಕನಿಷ್ಠ ನೀವು ದಿನನಿತ್ಯ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆಮಾಡಿ.ಉತ್ಪಾದಿಸಿರುವ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಹಸಿ ತ್ಯಾಜ್ಯಗಳನ್ನು ನಿಮ್ಮ ಆವರಣದಲ್ಲಿರುವ ಮರಗಿಡಗಳ ಬುಡದಲ್ಲಿ ಹಾಕಿರಿ. ಗುಜರಿ ಅಂಗಡಿಗೆ ನೀಡಲು ಆಸಾಧ್ಯವೆನಿಸುವ ಹಾಗೂ ತೀರಾ ನಿರುಪಯುಕ್ತ ಮತ್ತು ಪುನರ್ ಆವರ್ತನಗೊಳಿಸಲಾಗದ ತ್ಯಾಜ್ಯಗಳನ್ನು ಮಾತ್ರ ನಿಮ್ಮ ವಸತಿ – ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯ ಸಂಗ್ರಹಿಸುವ ಕಾರ್ಯಕರ್ತರಿಗೆ ನೀಡಿ. ನಿಮ್ಮೂರಿನ ಸ್ಥಳೀಯ ಸಂಸ್ಥೆಯು ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ನಿರ್ವಹಿಸಲು ವಿಧಿಸುವ ಶುಲ್ಕವನ್ನು ತಪ್ಪದೆ ಪಾವತಿಸಿ. ಈ ಶುಲ್ಕವನ್ನು ಉಳಿಸುವ ಸಲುವಾಗಿ ತ್ಯಾಜ್ಯಗಳನ್ನು ರಸ್ತೆಬದಿ ಅಥವಾ ಚರಂಡಿಗಳಲ್ಲಿ ಎಸೆಯದಿರಿ. ನಿಮ್ಮ ನೆರೆಕರೆಯ ನಿವಾಸಿಗಳಿಗೂ ಇದೇ ರೀತಿಯಲ್ಲಿ ಸಹಕರಿಸಲು ಪ್ರೇರೇಪಿಸಿ.

ಅಭಿಯಾನದ ಪ್ರಗತಿ 

ಸರ್ಕಾರಿ ಅಂಕಿ ಅಂಶಗಳಂತೆ ಸ್ವಚ್ಛ ಭಾರತ ಅಭಿಯಾನದಲ್ಲಿ ಗಣನೀಯ ಪ್ರಮಾಣದ ಪ್ರಗತಿ ಕಂಡುಬರುತ್ತದೆ. ಈ ಅಭಿಯಾನದಲ್ಲಿ ಬಯಲು ಶೌಚಮುಕ್ತ ಭಾರತ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣವೆ ಮುಂತಾದ ಅನ್ಯ ಯೋಜನೆಗಳನ್ನು ಸೇರಿಸಿದ್ದು, ಇವೆಲ್ಲವನ್ನೂ ಒಂದಾಗಿ ಪರಿಗಣಿಸಿರುವುದು ಇದಕ್ಕೆ ಕಾರಣವೆನಿಸುತ್ತದೆ. ಆದರೆ ದೇಶದ ಮೂಲೆಮೂಲೆಗಳಲ್ಲಿ ಇಂದಿಗೂ ಕಾಣಸಿಗುವ ತ್ಯಾಜ್ಯಗಳ ರಾಶಿಗಳನ್ನು ಕಂಡಾಗ, ಅಭಿಯಾನದ ಯಶಸ್ಸಿನ ಬಗ್ಗೆ ಸಂದೇಹವೂ ಮೂಡುತ್ತದೆ. ಕಣ್ಣು ಹಾಯಿಸಿದಲ್ಲೆಲ್ಲಾ ಕಾಣಸಿಗುವ ತ್ಯಾಜ್ಯಗಳ ಸಮಸ್ಯೆ ಬಗೆಹರಿಯಬೇಕಿದ್ದಲ್ಲಿ, ದೇಶದ ಪ್ರತ್ಯೊಬ್ಬ ಪ್ರಜೆಯ ಸಹಕಾರ ಅತ್ಯವಶ್ಯಕ ಎನಿಸುತ್ತದೆ. ಆದುದರಿಂದ ಮುಂದಿನ ಮೂರು ವರ್ಷಗಳಲ್ಲಿ ಈ ಅಭಿಯಾನವು ಅಪೇಕ್ಷಿತ ಫಲಿತಾಂಶವನ್ನು ನೀಡಬೇಕಿದ್ದಲ್ಲಿ, ನಾವುನೀವೆಲ್ಲರೂ ಒಂದಾಗಿ ಇದರ ಯಶಸ್ಸಿಗಾಗಿ ಶ್ರಮಿಸಲೇಬೇಕು. 

ಕೊನೆಯ ಮಾತು

ಆರೋಗ್ಯವೇ ಭಾಗ್ಯ ಎನ್ನುವ ಮುತ್ತಿನಂತಹ ಮಾತುಗಳನ್ನು ನೀವು ಕೇಳಿರಲೇಬೇಕು. ಸ್ವಚ್ಛತೆ ಮತ್ತು ನಮ್ಮ ಆರೋಗ್ಯಕ್ಕೆ ಅವಿನಾಭಾವ ಸಂಬಂಧವಿದೆ. ಸಾಮಾನ್ಯವಾಗಿ ಸ್ವಚ್ಛತೆ ಇರುವಲ್ಲಿ ವ್ಯಾಧಿಗಳ ಬಾಧೆ ಇರುವ ಸಾಧ್ಯತೆಗಳಿಲ್ಲ. ಆದರೆ ಅಸ್ವಚ್ಛ ಪರಿಸರದಲ್ಲಿ ಕಾಯಿಲೆಗಳ ಹಾವಳಿ ಸ್ವಾಭಾವಿಕವಾಗಿಯೇ ಹೆಚ್ಚಾಗಿರುತ್ತದೆ. ಆದುದರಿಂದ ನಿಮ್ಮ ಮನೆ, ಸುತ್ತಲಿನ ಆವರಣ, ಸಮೀಪದ ರಸ್ತೆ, ನಿಮ್ಮ ಕೇರಿ ಮತ್ತು ಊರಿನ ಸ್ವಚ್ಛತೆಯನ್ನು ಕಾಪಾಡುವುದರೊಂದಿಗೆ, ನಮ್ಮ ದೇಶವನ್ನು ಸ್ವಚ್ಛ, ಸ್ವಸ್ಥ ಮತ್ತು ಸುಂದರ ಭಾರತವನ್ನಾಗಿಸಿ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು



No comments:

Post a Comment