Wednesday, October 26, 2016

BDA : SUPPRESSING RTI?

           ಬಿ ಡಿ ಎ : ಮಾಹಿತಿಹಕ್ಕು ಕಾಯಿದೆಯನ್ನು ದಮನಿಸುತ್ತಿದೆಯೇ?

ಕೆಲದಿನಗಳಿಂದ ಸಾಕಷ್ಟು ವಾದವಿವಾದಗಳಿಗೆ ಗ್ರಾಸವೆನಿಸಿರುವ ಮತ್ತು ಮಾಧ್ಯಮಗಳಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವೆನಿಸಿರುವ “ ಉಕ್ಕಿನ ಮೇಲ್ಸೇತುವೆ “ ಯ ನಿರ್ಮಾಣಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಮಾಹಿತಿಹಕ್ಕು ಕಾರ್ಯಕರ್ತರೊಬ್ಬರಿಗೆ ನೀಡಲು ಬಿ ಡಿ ಎ ನಿರಾಕರಿಸಿದೆ. ತನ್ಮೂಲಕ ಸರ್ಕಾರವೇ ತನ್ನ ಪ್ರಜೆಗಳಿಗೆ ನೀಡಿದ್ದ ಮಾಹಿತಿ ಪಡೆಯುವ ಹಕ್ಕನ್ನು ದಮನಿಸಿದೆ!.

 ದೇಶಾದ್ಯಂತ ಮಾಹಿತಿ ಪಡೆಯುವ ಹಕ್ಕು ಕಾಯಿದೆ ಜಾರಿಗೆ ಬಂದು ೧೧ ವರ್ಷಗಳೇ ಸಂದಿವೆ. ಈ ಅವಧಿಯಲ್ಲಿ ಈ ಕಾಯಿದೆಯನ್ನು ದುರ್ಬಲಗೊಳಿಸಲು, ತೆರೆಯ ಮರೆಯಲ್ಲಿ ನಿರಂತರ ಪ್ರಯತ್ನಗಳೂ ನಡೆಯುತ್ತಲೇ ಇವೆ. ಪ್ರಾರಂಭಿಕ ಹಂತದಿಂದಲೂ ಈ ಕಾಯಿದೆಯನ್ನು ವಿರೋಧಿಸುತ್ತಿದ್ದ ಅನೇಕ ಸರ್ಕಾರಿ ಅಧಿಕಾರಿಗಳ ಮತ್ತು ರಾಜಕಾರಣಿಗಳ ಬಹುಕೋಟಿ ಹಗರಣಗಳು ಬೆಳಕಿಗೆ ಬರಲು ಈ ಪ್ರಬಲ ಕಾಯಿದೆ ಕಾರಣವೆನಿಸಿದೆ. ಜನಸಾಮಾನ್ಯರ ಪಾಲಿಗೆ ಅತ್ಯಂತ ಪ್ರಬಲ ಅಸ್ತ್ರವೆನಿಸಿರುವ ಹಕ್ಕು ಕಾಯಿದೆಯನ್ವಯ ಅರ್ಜಿ ಸಲ್ಲಿಸಿದ್ದ ಪ್ರಜೆಗಳಿಗೆ ಕುಂಟು ನೆಪವನ್ನು ಮುಂದೊಡ್ಡಿ ಅಪೇಕ್ಷಿತ ಮಾಹಿತಿಗಳನ್ನು ನೀಡಲು ನಿರಾಕರಿಸಿದ ಪ್ರಕರಣಗಳು ಸಾಕಷ್ಟಿವೆ. ಇದೀಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ ಇದಕ್ಕೆ ಸೇರ್ಪಡೆಯಾಗಿದೆ!.

ಬೆಂಗಳೂರಿನಲ್ಲಿ ನಿರ್ಮಾಣಗೊಳ್ಳಲಿರುವ ನೂತನ  " ಸ್ಟೀಲ್ ಫ್ಲೈ ಓವರ್ " ಗೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸುವಂತೆ ಮಾ.. ಕಾಯಿದೆಯನ್ವಯ ಅರ್ಜಿಯನ್ನು ಸಲ್ಲಿಸಿದ್ದ ವ್ಯಕ್ತಿಗೆ ಬಿ. ಡಿ. ಎ ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಿರುವ ಉತ್ತರವು, ಈ ಕಾಯಿದೆಯ ಮೂಲ ಉದ್ದೇಶಕ್ಕೆ ಧಕ್ಕೆಯುಂಟುಮಾಡುವಂತಿದೆ!.

ಮಾಹಿತಿಯೇ ಅಲ್ಲ!

ಬೆಂಗಳೂರಿನ ಬಸವೇಶ್ವರ ವೃತ್ತದಿಂದ ಹೆಬ್ಬಾಳವನ್ನು ಸಂಪರ್ಕಿಸುವ ಸಲುವಾಗಿ ನಿರ್ಮಿಸಲು ಉದ್ದೇಶಿಸಿರುವ ಸುಮಾರು ೧೮೦೦ ಕೋಟಿ ರೂ. ವೆಚ್ಚದ ಸ್ಟೀಲ್ ಫ್ಲೈ ಓವರ್ ನಿರ್ಮಾಣದ ಸಲುವಾಗಿ ಕರೆದಿದ್ದ ಟೆಂಡರ್ ನ ವಿವರಗಳನ್ನು ನೀಡುವಂತೆ ಅರ್ಜಿಯನ್ನು ಸಲ್ಲಿಸಿದ್ದ ಸಾಯಿದತ್ತ ಎನ್ನುವ ಕಾರ್ಯಕರ್ತರಿಗೆ ಬಿ.ಡಿ. ಎ ನೀಡಿರುವ ಉತ್ತರ ಇಂತಿದೆ. ಸಾ. ಮಾ ಅಧಿಕಾರಿ ನೀಡಿರುವ ಉತ್ತರದಲ್ಲಿ ಅರ್ಜಿದಾರರು ಕೋರಿರುವ ಮಾಹಿತಿಗಳನ್ನು ನೀಡಲು ಸಾಧ್ಯವಿಲ್ಲ, ಏಕೆಂದರೆ ಈ ಮಾಹಿತಿಗಳು ಮಾಹಿತಿಹಕ್ಕು ಕಾಯಿದೆಯನ್ವಯ " ಮಾಹಿತಿ " ಎಂದು ಅರ್ಥೈಸುವಂತಿಲ್ಲ. ಅರ್ಜಿದಾರರು ಅಪೇಕ್ಷಿಸಿರುವ ದಾಖಲೆಗಳನ್ನು ಸೃಷ್ಟಿಸಬೇಕಿದ್ದು, ಇದರ ವಿವರಗಳು ಬಿ.ಡಿ. ಎ ಮತ್ತು ಖಾಸಗಿ ಸಂಸ್ಥೆಗಳ ಒಡಂಬಡಿಕೆಯ ಷರತ್ತು - ನಿಯಮಗಳ ಅಧೀನದಲ್ಲಿ ಬರುತ್ತವೆ. ಇದಲ್ಲದೇ ಅಪೇಕ್ಷಿತ ಮಾಹಿತಿಗಳು “ ವೈಯುಕ್ತಿಕ “ ವಾಗಿದ್ದು, ಇದನ್ನು ಇದನ್ನು ಪ್ರಕಟಿಸುವುದಕ್ಕೆ ಮತ್ತು ಸಾರ್ವಜನಿಕ ಚಟುವಟಿಕೆ ಹಾಗೂ ಹಿತಾಸಕ್ತಿಗಳಿಗೆ ಯಾವುದೇ ಸಂಬಂಧವಿಲ್ಲ ಎನ್ನಲಾಗಿದೆ.

ಇಷ್ಟು ಮಾತ್ರವಲ್ಲ, ಮಾಹಿತಿಹಕ್ಕು ಕಾಯಿದೆಯ ಸೆಕ್ಷನ್ ೮ ( ೧ ) ( ಜೆ ) ಯಂತೆ ಈ ಮಾಹಿತಿಯು “ ತೃತೀಯ ವ್ಯಕ್ತಿ “ ಗೆ ಸಂಬಂಧಿಸಿದ್ದಾಗಿದ್ದು, ಅಪೇಕ್ಷಿತ ಮಾಹಿತಿಗಳನ್ನು ಅರ್ಜಿದಾರರಿಗೆ ನೀಡಲು ಕೆಲ ದಾಖಲೆಗಳನ್ನು ಸೃಷ್ಟಿಸಬೇಕಾಗುವುದು. ಬಿ ಡಿ ಎ ನ ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಿರುವ ಉತ್ತರದಲ್ಲಿ, ಕೇಂದ್ರ ಮಾಹಿತಿ ಆಯೋಗದ ಆದೇಶವೊಂದರಂತೆ “ ಮಾ. ಹ. ಕಾಯಿದೆಯ ಸೆಕ್ಷನ್ ೨ ( ಜೆ ) ಯನ್ವಯ ಯಾವುದೇ ಸಾರ್ವಜನಿಕ ಪ್ರಾಧಿಕಾರವು ದಾಖಲೆಗಳನ್ನು ಸೃಷ್ಟಿಸುವಂತಿಲ್ಲ. ಇದರೊಂದಿಗೆ ತಮಿಳುನಾಡಿನ ಮಾಹಿತಿ ಆಯೋಗವು ಯಾವುದೇ ಯೋಜನೆಯ ವಿವರಗಳನ್ನು ಯೋಜನೆಯ ಪ್ರಾರಂಭಿಕ ಹಂತದಲ್ಲಿ ಬಹಿರಂಗಪಡಿಸುವಂತಿಲ್ಲ ಎಂದು ಹಿಂದೆ ನೀಡಿದ್ದ  ತೀರ್ಪೊಂದನ್ನು ಉಲ್ಲೇಖಿಸಲಾಗಿದೆ.ಹಾಗೂ ಇದೇ ಕಾರಣದಿಂದಾಗಿ ಇದೀಗ ಪ್ರಾರಂಭಿಕ ಹಂತದಲ್ಲಿರುವ ಉಕ್ಕಿನ ಮೇಲ್ಸೇತುವೆಯ ನಿರ್ಮಾಣದ ಯೋಜನೆಯ ವಿವರಗಳನ್ನು ಬಹಿರಂಗಪಡಿಸಲಾಗದು ಎಂದು ಉತ್ತರಿಸಲಾಗಿದೆ.

ಇವೆಲ್ಲಕ್ಕೂ ಮಿಗಿಲಾಗಿ ಅರ್ಜಿದಾರರು ಅಪೇಕ್ಷಿಸಿರುವ ಮಾಹಿತಿಯು ಅಗಾಧವಾಗಿದ್ದು, ಇದನ್ನು ಒದಗಿಸಲು ಸಾಕಷ್ಟು ಸಂಪನ್ಮೂಲಗಳ ಅವಶ್ಯಕತೆಯಿದ್ದು ಇದಕ್ಕಾಗಿ ಸಾಕಷ್ಟು ಸಮಯವನ್ನೂ ವ್ಯಯಿಸಬೇಕಾಗುತ್ತದೆ. ಈ ಮಾಹಿತಿಗಳು ರಾಜ್ಯದ ಅಭಿವೃದ್ಧಿ  ಕ್ರಿಯಾ ಯೋಜನೆ ಮತ್ತು ಆರ್ಥಿಕ ಹಿತಗಳನ್ನು ಒಳಗೊಂಡಿರುವುದರಿಂದ, ಈ ಯೋಜನೆಯ ವಿವರಗಳನ್ನು ನೀಡುವಂತೆ ಸಲ್ಲಿಸಲಾಗಿರುವ ಅರ್ಜಿಯನ್ನು ಪುರಸ್ಕರಿಸುವಂತಿಲ್ಲ ಎಂದು ಸಾ. ಮಾ. ಅಧಿಕಾರಿ ಉತ್ತರಿಸಿದ್ದಾರೆ!.

ಸ್ವಯಂಪ್ರೇರಿತ ಮಾಹಿತಿ

ಮಾಹಿತಿಹಕ್ಕು ಕಾಯಿದೆಯನ್ವಯ ಕೆಲವೊಂದು ನಿರ್ದಿಷ್ಟ ಮಾಹಿತಿಗಳಿಗೆ ಸೆಕ್ಷನ್ ೮ ( ೧ ) ಮತ್ತು ೯ ರನ್ವಯ ವಿನಾಯಿತಿಯನ್ನು ನೀಡಲಾಗಿದೆ. ಇದೇ ಸೆಕ್ಷನ್ ನ ೮ ( ೧ ) ( ಜೆ ) ಯನ್ನು ತಿರುಚಿರುವ ಬಿ ಡಿ ಎ ನ ಸಾ. ಮಾ. ಅಧಿಕಾರಿಯು, ಈ ಸೆಕ್ಷನ್ ನ ಅಂತ್ಯದಲ್ಲಿ ನಮೂದಿಸಿರುವಂತೆ “ ಮೇಲೆ ಹೇಳಿದ ವಿನಾಯಿತಿಗಳು ಪರಿಪೂರ್ಣವಾದುದಲ್ಲ. ಈ ಮಾಹಿತಿಯನ್ನು ನೀಡುವುದರಿಂದ ಸಾರ್ವಜನಿಕ ಹಿತವನ್ನು ರಕ್ಷಿಸಿದಂತಾಗುತ್ತದೆ ( ಸೆಕ್ಷನ್ ೮ ( ೨ ) ) ಎಂದಾದಲ್ಲಿ, ಈ ಮಾಹಿತಿಯನ್ನು ನೀಡಬಹುದು “ ಎನ್ನುವ ಸಾಲನ್ನು ಅನುಕೂಲಕರವಾಗಿ ಮರೆತುಬಿಟ್ಟಿದ್ದಾರೆ!.

ಇವೆಲ್ಲಕ್ಕೂ ಮಿಗಿಲಾಗಿ ಮಾ. ಹ. ಕಾಯಿದೆ ೨೦೦೫ ಅನ್ವಯವಾಗುವ ಎಲ್ಲ ಸಾರ್ವಜನಿಕ ಪ್ರಾಧಿಕಾರಗಳು ಕೆಲವೊಂದು ಮಾಹಿತಿಗಳನ್ನು ಯಾರೂ ಕೇಳದಿದ್ದರೂ, ಸ್ವಯಂಪ್ರೇರಿತವಾಗಿ ತಮ್ಮ ಕಚೇರಿಯ ಸೂಚನಾ ಫಲಕ್ ಮತ್ತು ಅಂತರ್ಜಾಲ ತಾಣಗಳಲ್ಲಿ ಪ್ರಕಟಿಸಬೇಕೆಂದು ಹೇಳುತ್ತದೆ. ಇದೊಂದು ಬಹುಮುಖ್ಯ ಅಂಶವಾಗಿದ್ದು, ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆಯುವ ಎಲ್ಲ ಕಾಮಗಾರಿಗಳ ಸಂಪೂರ್ಣ ವಿವರಗಳನ್ನು ಸ್ವಯಂಪ್ರೇರಿತವಾಗಿ ಪ್ರಕಟಿಸುವ ಹೊಣೆಗಾರಿಕೆ ಇವುಗಳ ಮೇಲಿದೆ. ಅರ್ಥಾತ್, ಯಾರೊಬ್ಬರೂ ಕೇಳದೇ ಇದ್ದರೂ ಅಥವಾ ಮಾಹಿತಿಹಕ್ಕು ಕಾಯಿದೆಯನ್ವಯ ಅರ್ಜಿಯನ್ನು ಸಲ್ಲಿಸದೇ ಇದ್ದರೂ, ಸ್ಟೀಲ್ ಫ್ಲೈ ಓವರ್ ಕಾಮಗಾರಿಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನು ಬಿ ಡಿ ಎ ಸ್ವಯಂಪ್ರೇರಿತವಾಗಿ ಪ್ರಕಟಿಸಲೇಬೇಕಾಗುತ್ತದೆ.

ಕೊನೆಯ ಮಾತು

ಬಿ ಡಿ ಎ ನ ಸಾ. ಮಾ. ಅಧಿಕಾರಿಯು ಅಪೇಕ್ಷಿತ ಮಾಹಿತಿಗಳನ್ನು ಒದಗಿಸದಿರುವ ಬಗ್ಗೆ ಅರ್ಜಿದಾರರು ಮಾ. ಹ. ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ದೂರನ್ನು ನೀಡಿದ ಬಳಿಕವೂ ಅಪೇಕ್ಷಿತ ಮಾಹಿತಿ ಲಭಿಸದೇ ಇದ್ದಲ್ಲಿ, ರಾಜ್ಯ ಮಾಹಿತಿ ಆಯೋಗಕ್ಕೆ ದೂರನ್ನು ನೀಡುವುದರಲ್ಲಿ ಸಂದೇಹವಿಲ್ಲ. ಅಂತೆಯೇ ಮಾಹಿತಿ ಆಯೋಗವು ಅರ್ಜಿದಾರರು ಅಪೇಕ್ಷಿಸಿರುವ ಮಾಹಿತಿಗಳನ್ನು ಕ್ಷಿಪ್ರವಾಗಿ ಮತ್ತು ನಿಶ್ಶುಲ್ಕವಾಗಿ ನೀಡುವಂತೆ ಆದೇಶಿಸುವುದರಲ್ಲೂ ಸಂದೇಹವಿಲ್ಲ. ಇದರೊಂದಿಗೆ ಇನ್ನು ಮುಂದೆ ಇಂತಹ ಮಾಹಿತಿಗಳನ್ನು ಸ್ವಯಂಪ್ರೇರಿತವಾಗಿ ಪ್ರಕಟಿಸುವಂತೆ ಸೂಚಿಸಿದಲ್ಲಿ, ಇಂತಹ ಘಟನೆಗಳ ಪುನರಾವರ್ತನೆ ಆಗುವ ಸಾಧ್ಯತೆಗಳೂ ಇಲ್ಲ!.


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 


No comments:

Post a Comment