Thursday, October 8, 2015

RTI ACT 2005 - LOOSING ITS TEETH



      ಮಾಹಿತಿಹಕ್ಕು ಕಾಯಿದೆ : ಇನ್ನಷ್ಟು ದುರ್ಬಲಗೊಳ್ಳುವುದೇ? 

ದೇಶಾದ್ಯಂತ ಮಾಹಿತಿ ಪಡೆಯುವ ಹಕ್ಕು ಕಾಯಿದೆ ಜಾರಿಗೆ ಬಂದು ಹತ್ತು ವರ್ಷಗಳೇ ಸಂದಿವೆ. ಕಳೆದ ಹತ್ತು ವರ್ಷಗಳಲ್ಲಿ ಈ ಕಾಯಿದೆಯ ಯಶಸ್ಸಿನಿಂದ ಕುಪಿತರಾಗಿರುವ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು, ಇದನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಇಂದಿಗೂ ಮುಂದುವರೆಸಿದ್ದಾರೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಭವ್ಯ ಭಾರತದ ಪ್ರಜಾಡಳಿತ ವ್ಯವಸ್ಥೆಯಲ್ಲಿ ದಕ್ಷತೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಗಳು ದುರ್ಲಭವೆನಿಸಿವೆ. ತತ್ಪರಿಣಾಮವಾಗಿ ದೇಶದ ಪ್ರಜೆಗಳು ತಮ್ಮ ನ್ಯಾಯಸಮ್ಮತ ಕೆಲಸಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಹಲವಾರುಬಾರಿ ಅಲೆದಾಡುವುದು ಮತ್ತು ಅಧಿಕಾರಿಗಳಿಂದ ಅನಾವಶ್ಯಕ ಕಿರುಕುಳಗಳಿಗೆ ಒಳಗಾಗುವುದು ಅನಿವಾರ್ಯವೆನಿಸಿದೆ. ನಮ್ಮನ್ನಾಳುವ ರಾಜಕೀಯ ನೇತಾರರು, ಸರ್ಕಾರಿ ಅಧಿಕಾರಿಗಳು ಮತ್ತು ಸಿಬಂದಿಗಳ ಇಂತಹ ವರ್ತನೆಗಳಿಂದಾಗಿ, ಪ್ರಜಾಪ್ರಭುತ್ವದಲ್ಲಿ ಪ್ರಜಾಪೀಡನೆಯೇ  ಮೂಲಮಂತ್ರವೆನಿಸಿದೆ!.

ಈ ಅವ್ಯವವಸ್ಥೆಯನ್ನು ಸರಿಪಡಿಸಲು ದೇಶದ ಪ್ರಜ್ಞಾವಂತ ನಾಗರಿಕರು ಪ್ರಯತ್ನಿಸದಿದ್ದರೂ, ಬೆರಳೆಣಿಕೆಯಷ್ಟು ಸಂಖ್ಯೆಯ ಸರ್ಕಾರೇತರ ಸ್ವಯಂಸೇವಾ ಸಂಘಟನೆಗಳು ಹಾಗೂ ಭಾರತಕ್ಕೆ ಕೋಟ್ಯಂತರ ಡಾಲರ್ ಸಾಲವನ್ನು ನೀಡುವ ವಿಶ್ವ ಬ್ಯಾಂಕ್ ಮತ್ತು ಕೆಲ ಪಾಶ್ಚಿಮಾತ್ಯ ದೇಶಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರವು, ಅಂತಿಮವಾಗಿ ೨೦೧೫ ರ ಅಕ್ಟೋಬರ್ ೧೨ ರಂದು ದೇಶಾದ್ಯಂತ " ಮಾಹಿತಿ ಪಡೆಯುವ ಹಕ್ಕು ಕಾಯಿದೆ - ೨೦೧೫ ನ್ನು ಜಾರಿಗೆ ತಂದಿತ್ತು. ಯು ಪಿ ಎ ಸರ್ಕಾರದ ಈ ಕೊಡುಗೆಯು ಜನಸಾಮಾನ್ಯರ ಪಾಲಿಗೆ ಅತ್ಯಂತ ಪ್ರಬಲ ಅಸ್ತ್ರವಾಗಿ ಪರಿಣಮಿಸಿತ್ತು!.

ತಮ್ಮ ಹಕ್ಕುಗಳಿಗೆ ಚ್ಯುತಿಯಾದಾಗ, ಅನ್ಯಾಯವಾದಾಗ, ತಮ್ಮ ನ್ಯಾಯಸಮ್ಮತ ಕೆಲಸಕಾರ್ಯಗಳಿಗೆ ಸರ್ಕಾರಿ ಅಧಿಕಾರಿಗಳು ಅಥವಾ ಸಿಬಂದಿಗಳು ಅಡ್ಡಿಆತಂಕಗಳನ್ನು ಒಡ್ಡಿದಾಗ ಮತ್ತು ಇವರಿಂದ ಅನಾವಶ್ಯಕ ಕಿರುಕುಳಗಳಿಗೆ ಗುರಿಯಾಗುತ್ತಿದ್ದ ಪ್ರಜೆಗಳಿಗೆ ರಕ್ಷಣೆಯನ್ನು ನೀಡಲು ಮಾಹಿತಿಹಕ್ಕು ಕಾಯಿದೆಯು ಯಶಸ್ವಿಯಾಗಿತ್ತು. ಇಷ್ಟು ಮಾತ್ರವಲ್ಲ, ದೇಶದ ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಮತ್ತು ಇತರ ಸಿಬಂದಿಗಳು ಶಾಮೀಲಾಗಿರುವ ಬಹುಕೋಟಿ ಹಗರಣಗಳನ್ನು ಬಯಲಿಗೆಳೆಯುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿತ್ತು. ತತ್ಪರಿಣಾಮವಾಗಿ ಚುನಾಯಿತ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಸಿಬಂದಿಗಳ ಸ್ವೇಚ್ಛಾಚಾರ,ಭ್ರಷ್ಟಾಚಾರ ಮತ್ತು ಸರ್ವಾಧಿಕಾರಿ ಪ್ರವೃತ್ತಿಗಳಿಗೆ ಕಡಿವಾಣವನ್ನು ತೊಡಿಸಿತ್ತು.

ಅಸಹಾಯಕ ಹಾಗೂ ಪ್ರಾಮಾಣಿಕ ನಾಗರಿಕರ ಪಾಲಿಗೆ ಪ್ರಬಲ ಅಸ್ತ್ರವೆನಿಸಿದ್ದ ಈ ಕಾಯಿದೆಯು ಸರ್ಕಾರಿ ನೌಕರರು, ಅಧಿಕಾರಿಗಳು ಮತ್ತು ರಾಜಕೀಯ ನೇತಾರರಿಗೂ ಕಂಟಕಪ್ರಾಯವಾಗಿ ಪರಿಣಮಿಸಿದ್ದ ಪರಿಣಾಮವಾಗಿ, ಇದನ್ನು ದುರ್ಬಲಗೊಳಿಸುವ ಪ್ರಯತ್ನಗಳು ಅಂದಿನ ದಿನಗಳಲ್ಲೇ ಆರಂಭವಾಗಿದ್ದವು. ಇದರ ಅಂಗವಾಗಿ ಈ ಕಾಯಿದೆಗೆ ಕೆಲವೊಂದು ತಿದ್ದುಪಡಿಗಳನ್ನು ಜಾರಿಗೆ ತರುವ ಮೂಲಕ, ಹಲ್ಲು ಕಿತ್ತ ಹಾವಿನಂತಾಗಿಸುವ ಸರ್ಕಾರದ ಪ್ರಯತ್ನವನ್ನು  ಸಾರ್ವಜನಿಕರ ಪ್ರಬಲ ಪ್ರತಿಭಟನೆಯಿಂದಾಗಿ ಕೈಬಿಡಲಾಗಿತ್ತು.

ಅಸಮರ್ಪಕ ಅನುಷ್ಠಾನ

ಈ ಕಾಯಿದೆಯ ಸೆಕ್ಷನ್ ೪ ರಂತೆ ಸಾರ್ವಜನಿಕ ಪ್ರಾಧಿಕಾರಗಳು ೧೭ ವಿಧದ ಮಾಹಿತಿಗಳನ್ನು ಸ್ವಯಂಪ್ರೇರಿತವಾಗಿ ಪ್ರಕಟಿಸಬೇಕಿದೆ. ಇವುಗಳಲ್ಲಿ ಪ್ರಾಧಿಕಾರದ ಸಂರಚನೆ, ಕಾರ್ಯನಿರ್ವಹಿಸುವ ಕ್ರಮ, ಪ್ರಾಧಿಕಾರದ ಆಯವ್ಯಯಗಳ ವಿವರಗಳು, ಸಾರ್ವಜನಿಕರು ಭಾಗವಹಿಸಬಹುದಾದ ವೇದಿಕೆಗಳ ವಿವರ, ಮಾಹಿತಿ ಪಡೆಯುವ ವಿಧಾನಗಳೇ ಮುಂತಾದ ಮಾಹಿತಿಗಳನ್ನು ತಾವಾಗಿ ಪ್ರಕಟಿಸುವುದರೊಂದಿಗೆ ಆಗಾಗ ಪರಿಷ್ಕರಿಸಬೇಕಿದೆ. ನಾಗರಿಕರಿಗೆ ಅವಶ್ಯಕ ಮತ್ತು ಉಪಯುಕ್ತವೆನಿಸುವ ಮಾಹಿತಿಗಳನ್ನು ನೇರವಾಗಿ ಮತ್ತು ಸುಲಭವಾಗಿ ಒದಗಿಸಬೇಕು ಎನ್ನುವುದೇ ಇದರ ಉದ್ದೇಶವಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಅಧಿಕತಮ ಪ್ರಾಧಿಕಾರಗಳು ಸ್ವಯಂಪ್ರೇರಿತವಾಗಿ ಇಂತಹ ಮಾಹಿತಿಗಳನ್ನು ಪ್ರಕಟಿಸದೇ ಇರುವುದರಿಂದಾಗಿ, ಈ ಕಾಯಿದೆಯ ಪ್ರಾಥಮಿಕ ಉದ್ದೇಶವೇ ವಿಫಲವಾಗುತ್ತಿದೆ. ಜೊತೆಗೆ ಈ ಮಾಹಿತಿಗಳನ್ನು ಪಡೆದುಕೊಳ್ಳಲೂ ಮಾ.ಹ.ಕಾಯಿದೆಯನ್ವಯ ಅರ್ಜಿಯನ್ನು ಸಲ್ಲಿಸಬೇಕಿದೆ!.

ಮಾಹಿತಿಯನ್ನೇ ನೀಡದ ಅಧಿಕಾರಿಗಳು

ಸರ್ಕಾರ ನಿಗದಿಸಿರುವ ಕೆಲವೊಂದು ನಿರ್ದಿಷ್ಟ ಮಾಹಿತಿಗಳನ್ನು ಹೊರತುಪಡಿಸಿ, ಜನಸಾಮಾನ್ಯರು ಅಪೇಕ್ಷಿಸುವ ಮಾಹಿತಿಗಳನ್ನು ನೀಡಬೇಕಾದ ಹೊಣೆಗಾರಿಕೆಯನ್ನು ಸಾರ್ವಜನಿಕ ಪ್ರಾಧಿಕಾರಗಳು ಸಮರ್ಪಕವಾಗಿ ನಿಭಾಯಿಸಲು ವಿಫಲವಾಗಿವೆ. ನಿರ್ದಿಷ್ಟ ಮಾಹಿತಿಯನ್ನು ಪಡೆಯಲು ನಾಗರಿಕರು ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ, ಅರ್ಜಿಗಳನ್ನು ಸ್ವೀಕರಿಸಿದರೂ ನಿಗದಿತ ಅವಧಿಯಲ್ಲಿ ಮಾಹಿತಿ ನೀಡದ, ಅಪೂರ್ಣ ಅಥವಾ ಸುಳ್ಳು ಮಾಹಿತಿಗಳನ್ನು ನೀಡಿದ, ಅರ್ಜಿದಾರರಿಗೆ ಕಿರುಕುಳ ನೀಡಿದ ಹಾಗೂ ಬೆದರಿಕೆಯನ್ನು ಒಡ್ಡಿದ ಅಸಂಖ್ಯ ಪ್ರಕರಣಗಳು ದೇಶಾದ್ಯಂತ ಸಂಭವಿಸಿವೆ. ಇದಕ್ಕೂ ಮಿಗಿಲಾಗಿ ಬೃಹತ್ ಹಗರಣಗಳನ್ನು ಬಯಲಿಗೆಳೆಯಳು ಪ್ರಯತ್ನಿಸಿದ ೩೦೦ ರಕ್ಕೂ ಅಧಿಕ ಮಾಹಿತಿಹಕ್ಕು ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದ್ದ್ದು,೪೦ ಕ್ಕೂ  ಅಧಿಕ ಕಾರ್ಯಕರ್ತರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆಗೈಯ್ಯಲಾಗಿದೆ. ಜನಸಾಮಾನ್ಯರ ಮನದಲ್ಲಿ ಭೀತಿಯನ್ನು ಹುಟ್ಟಿಸುವ ಮೂಲಕ ಬಹುಕೋಟಿ ಹಗರಣಗಳನ್ನು ಬಯಲಿಗೆಳೆಯಲು ಪ್ರಯತ್ನಿಸುವ ಕಾರ್ಯಕರ್ತರನ್ನು ದಮನಿಸಲು ಯತ್ನಿಸಲಾಗುತ್ತಿದೆ.

ಮಾಹಿತಿ ಹಕ್ಕು ಕಾಯಿದೆಯನ್ನು ಪರೋಕ್ಷವಾಗಿ ದುರ್ಬಲಗೊಳಿಸಲು ಕೆಲ ಅಧಿಕಾರಿಗಳು ಅನುಸರಿಸುವ ತಂತ್ರಗಳು ಇಂತಿವೆ. ಅರ್ಜಿದಾರರು ಅಂಚೆಯ ಮೂಲಕ ಕಳುಹಿಸಿದ ಲಕೋಟೆಯಲ್ಲಿ ಅರ್ಜಿಯೇ ಇರಲಿಲ್ಲ ಎನ್ನುವುದು,ಅಪೇಕ್ಷಿಸಿರುವ ಮಾಹಿತಿಗಳನ್ನು ನಿಗದಿತ ಅವಧಿಯಲ್ಲಿ ನೀಡದಿರುವುದು, ನಿಗದಿತ ಶುಲ್ಕಕ್ಕೆ ಬದಲಾಗಿ ದುಬಾರಿ ಶುಲ್ಕವನ್ನು ವಿಧಿಸುವುದು, ಅಪೇಕ್ಷಿತ ಮಾಹಿತಿ ( ಕಡತಗಳು ) ತಮ್ಮಲ್ಲಿಲ್ಲ ಎನ್ನುವುದು, ಪ್ರಥಮ ಮೇಲ್ಮನವಿ ಸಲ್ಲಿಸಿದರೂ ಮಾಹಿತಿ ನೀಡದಿರುವುದೇ ಮುಂತಾದ ವಿಧಾನಗಳಿಂದ ಅರ್ಜಿದಾರರನ್ನು ಸತಾಯಿಸಿದ ಘಟನೆಗಳು ಸಾಕಷ್ಟಿವೆ. ಇದರೊಂದಿಗೆ ಕೇಂದ್ರ ಸರ್ಕಾರ ಮತ್ತು ಬಹುತೇಕ ರಾಜ್ಯ ಸರ್ಕಾರಗಳು ಕೇಂದ್ರ ಮತ್ತು ರಾಜ್ಯ ಮಾಹಿತಿ ಆಯೋಗಗಳಿಗೆ ಅವಶ್ಯಕ ಸಂಖ್ಯೆಯ ಆಯುಕ್ತರನ್ನು ನೇಮಿಸದೇ ಇರುವುದರಿಂದಾಗಿ, ಈ ಆಯೋಗಗಳಲ್ಲಿ ಮೇಲ್ಮನವಿಯನ್ನು ಸಲ್ಲಿಸಿರುವ ಸಹಸ್ರಾರು ಪ್ರಕರಣಗಳು ಇತ್ಯರ್ಥವಾಗದೇ ಉಳಿದುಕೊಂಡಿವೆ!.

ಶಿಕ್ಷೆ – ದಂಡ ವಿಧಿಸದ ಆಯೋಗ

ಇಷ್ಟೆಲ್ಲಾ ಸಾಲದೆನ್ನುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳು ಅಪೇಕ್ಷಿತ ಮಾಹಿತಿಗಳನ್ನು ನೀಡಲು ವಿಳಂಬಿಸಿದ ಅಥವಾ ನಿರಾಕರಿಸಿದ ಕಾರಣದಿಂದಾಗಿ ರಾಜ್ಯ ಹಾಗೂ ಕೇಂದ್ರ ಮಾಹಿತಿ ಆಯೋಗಕ್ಕೆ ದೂರನ್ನು ಮೇಲ್ಮನವಿ ಸಲ್ಲಿಸಿದ ಸಂದರ್ಭದಲ್ಲಿ, ವಿಚಾರಣೆಯ ಬಳಿಕ ಅಪೇಕ್ಷಿತ ಮಾಹಿತಿಗಳನ್ನು ನೀಡುವಂತೆ ಆಯುಕ್ತರು ಆದೇಶಿಸಿದರೂ, ತಪ್ಪಿತಸ್ತ ಅಧಿಕಾರಿಗೆ ದಂಡವನ್ನು ವಿಧಿಸದ ಹಾಗೂ ಶಿಸ್ತುಕ್ರಮ ಕೈಗೊಳ್ಳದ ನೂರಾರು ಪ್ರಕರಣಗಳಿವೆ. ಪ್ರಾಯಶಃ ಅಧಿಕತಮ ಆಯುಕ್ತರು ನಿವೃತ್ತ ಐ ಎ ಎಸ್  ಅಧಿಕಾರಿಗಳೇ ಆಗಿರುವುದರಿಂದ, ಇವರು ತಮ್ಮ ಹಿಂದಿನ ಸಹೋದ್ಯೋಗಿಗಳಿಗೆ ದಂಡ ವಿಧಿಸಲು ಅಥವಾ ಶಿಕ್ಷೆಯನ್ನು ನೀಡಲು ಹಿಂಜರಿಯುತ್ತಾರೆ.ಆದರೆ ಅಧಿಕಾರಿಗಳು ಎಸಗಿದ ತಪ್ಪಿಗೆ ಸೂಕ್ತ ಶಿಕ್ಷೆ ನೀಡದಿರುವುದು ಈ ಕಾಯಿದೆಯ ಮೂಲ ಉದ್ದೇಶಕ್ಕೆ ಕಂಟಕವಾಗಿ ಪರಿಣಮಿಸಿದೆ.

ಪ್ರಸ್ತುತ ದೇಶದ ಬಹುತೇಕ ರಾಜ್ಯಗಳ ಮಾಹಿತಿ ಆಯೋಗಗಳ ಮುಂದೆ ವಿಚಾರಣೆಗಾಗಿ ಉಳಿದಿರುವ ಪ್ರಕರಣಗಳ ಸಂಖ್ಯೆ ಲಕ್ಷಕ್ಕೂ ಹೆಚ್ಚಿವೆ.ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಮುಂದೆ ವಿಚಾರಣೆಗಾಗಿ ಕಾಯುತ್ತಿರುವ ಪ್ರಕರಣಗಳ ಒಟ್ಟು ಸಂಖ್ಯೆಯೇ ೧೪ ಸಾವಿರದಷ್ಟಿದೆ.ಆಯೋಗವು ಮೊದಲ ಆಲಿಕೆಯನ್ನು ಕೈಗೆತ್ತಿಕೊಳ್ಳಲು ಸರಾಸರಿ ೬ ರಿಂದ ೮ ತಿಂಗಳುಗಳು ತಗಲುತ್ತದೆ. ಕೆಲ ರಾಜ್ಯಗಳ ಮಾಹಿತಿ ಆಯೋಗಗಳು ಇದೀಗ ಕೈಗೆತ್ತಿಕೊಂಡಿರುವ ಪ್ರಕರಣಗಳು ೨೦೧೨ ರಲ್ಲಿ ಮೇಲ್ಮನವಿಯನ್ನು ಸಲ್ಲಿಸಿದವೇ ಆಗಿವೆ. ಇನ್ನು ಕೇಂದ್ರ ಮಾಹಿತಿ ಆಯೋಗದಲ್ಲಿ ಇದೇ   ವರ್ಷದ ಜುಲೈ ತಿಂಗಳಿನಲ್ಲಿ ವಿಚಾರಣೆಗಾಗಿ ಕಾಯುತ್ತಿದ್ದ ಪ್ರಕರಣಗಳ ಸಂಖ್ಯೆಯು ೪೦ ಸಾವಿರದ ಗಡಿಯನ್ನು ದಾಟಿತ್ತು!. ಈ ರೀತಿಯಲ್ಲಿ ದೇಶದ ಪ್ರಜೆಗಳು ಅಪೇಕ್ಷಿಸುವ ಮಾಹಿತಿಗಳನ್ನು ನೀಡದೇ ಸತಾಯಿಸುವ ವಿಶಿಷ್ಠ  ಧೋರಣೆಯಿಂದಾಗಿ, ಜನಸಾಮಾನ್ಯರ ಮೂಲಭೂತ ಹಕ್ಕಿಗೆ ಚ್ಯುತಿಯಾಗುವುದರೊಂದಿಗೆ, ಕಾಯಿದೆಯನ್ನು ಜಾರಿಗೆ ತಂದ ಮೂಲ ಉದ್ದೇಶವೇ ವಿಫಲವಾಗಿದೆ.

ಅದೇನೇ ಇರಲಿ, ಪ್ರಸ್ತುತ ಮಾಹಿತಿ ಪಡೆಯುವ ಹಕ್ಕು ಕಾಯಿದೆಯ ದಶಮಾನೋತ್ಸವದ ಸಂದರ್ಭದಲ್ಲಿ ದೇಶದ ನಾಗರಿಕರು ಈ ಕಾಯಿದೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸುವ ಮೂಲಕ, ಪ್ರಜಾಡಳಿತದಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ದಕ್ಷತೆಗಳನ್ನು ಹೆಚ್ಚಿಸಲು  ಯತ್ನಿಸುವ ಮೂಲಕ, ಸರ್ಕಾರಿ ಅಧಿಕಾರಿಗಳು ಮತ್ತು ನಮ್ಮನ್ನಾಳುವವರ  ಭ್ರಷ್ಟಾಚಾರ ಹಾಗೂ ಸ್ವೇಚ್ಛಾಚಾರಗಳಿಗೆ ಕಡಿವಾಣವನ್ನು ತೊಡಿಸಲು ಶ್ರಮಿಸಬೇಕಾಗಿದೆ. ಜೊತೆಗೆ ಈ ಕಾಯಿದೆಯನ್ನು ಇನ್ನಷ್ಟು ಪ್ರಬಲಗೊಳಿಸಲು ಪ್ರಯತ್ನಿಸಬೇಕಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು







No comments:

Post a Comment