Wednesday, October 21, 2015

GOVT. BANS PLASTIC CARRY BAGS ETC.


           ಪ್ಲಾಸ್ಟಿಕ್ ನಿಷೇಧದ ನಿರ್ಧಾರ : ನಿಜಕ್ಕೂ ಆರೋಗ್ಯಕರ

ಕರ್ನಾಟಕ ರಾಜ್ಯ ಸರ್ಕಾರವು ಇದೀಗ ಪರಿಸರ ಸಂರಕ್ಷಣಾ ಕಾಯಿದೆಯ ಕಲಂ  ೫ ರನ್ವಯ ೪೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲ ಮತ್ತಿತರ ಉತ್ಪನ್ನಗಳ ಮೇಲೆ ನಿಷೇಧವನ್ನು ಹೇರುವ ಕರಡು ಅಧಿಸೂಚನೆಗೆ ಹಸಿರು ನಿಶಾನೆಯನ್ನು ತೋರಿದೆ. ರಾಜ್ಯ ಪರಿಸರ ಮತ್ತು ಅರಣ್ಯ ಇಲಾಖೆಯು ಈ ಬಗ್ಗೆ ಸೂಚನೆಯನ್ನು ಪ್ರಕಟಿಸಲಿದ್ದು, ಸಾರ್ವಜನಿಕರಿಂದ ಸೂಕ್ತ ಸಲಹೆಗಳು ಅಥವಾ ಆಕ್ಷೇಪಗಳನ್ನು ಆಹ್ವಾನಿಸಲಿದೆ. ರಾಜ್ಯ ಮಂತ್ರಿ ಮಂಡಲದ ಸಭೆಯಲ್ಲಿ ಅಂಗೀಕರಿಸಲ್ಪಟ್ಟಿರುವ ಕರಡು ಅಧಿಸೂಚನೆಯಲ್ಲಿ ೪೦ ಮೈಕ್ರಾನ್ ಗಿಂತ ಕಡಿಮೆಯ ಪ್ಲಾಸ್ಟಿಕ್ ಕೈಚೀಲ ಮತ್ತಿತರ ಲಕೋಟೆಗಳು, ಜಾಹೀರಾತುಗಳಲ್ಲಿ ಬಳಸುವ ಫ್ಲೆಕ್ಸ್, ಪ್ಲಾಸ್ಟಿಕ್ ತೋರಣಗಳು ಹಾಗೂ ಧ್ವಜಗಳು, ತಟ್ಟೆ, ಲೋಟ, ಚಮಚ, ಪ್ಲಾಸ್ಟಿಕ್ ಹಾಳೆಗಳು, ಥರ್ಮೋಕೂಲ್ ನಿರ್ಮಿತ ತಟ್ಟೆ ಮತ್ತು ಲೋಟ ಇತ್ಯಾದಿ ೧೩ ವಿಧದ ವಸ್ತುಗಳ ತಯಾರಿಕೆ, ಸಾಗಾಣಿಕೆ, ವಿತರಣೆ ಮತ್ತು ಮಾರಾಟಗಳನ್ನೇ ನಿಷೇಧಿಸುವ ಪ್ರಸ್ತಾವನೆಯಿದೆ. ಪ್ರಾಯಶಃ ಇದೇ ವರ್ಷದ ಅಂತ್ಯಕ್ಕೆ ಮುನ್ನ ಈ ಅಧಿಸೂಚನೆಯು ಜಾರಿಯಾಗಲಿದೆ.

ನಿಷೇಧ ಪರಿಣಾಮಕಾರಿಯಾಗಲಿ

೨೦೧೧ ರಲ್ಲಿ ದೇಶಾದ್ಯಂತ ಪ್ಲಾಸ್ಟಿಕ್ ತ್ಯಾಜ್ಯಗಳ ನಿಭಾವಣೆ ಮತ್ತು ನಿರ್ವಹಣೆಗಳ ನಿಯಮ ೨೦೧೧ ಜಾರಿಗೆ ಬಂದಿದ್ದು, ೨೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳ ತಯಾರಿಕೆ ಮತ್ತು ಮಾರಾಟಗಳನ್ನು ನಿಷೇಧಿಸಲಾಗಿತ್ತು. ಅಂತೆಯೇ ಕೆಲ ರಾಜ್ಯಗಳು ಮತ್ತು ಮಹಾನಗರಗಳು ೪೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲಗಳ ಮಾರಾಟವನ್ನು ನಿಷೇಧಿಸಿದ್ದವು.ಆದರೆ ಈ ನಿಯಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಕರ ಅಸಹಕಾರಗಳಿಂದಾಗಿ, ಇಂದಿಗೂ ೨೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲಗಳನ್ನು ದೇಶಾದ್ಯಂತ ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ!.

ಪ್ಲಾಸ್ಟಿಕ್ ಉದ್ದಿಮೆಗಳ ವಕ್ತಾರರು ಹೇಳುವಂತೆ ರಾಜ್ಯದಲ್ಲಿ ತೆಳ್ಳನೆಯ ಪ್ಲಾಸ್ಟಿಕ್ ಕೈಚೀಲಗಳನ್ನು ತಯಾರಿಸದೆ ಇದ್ದರೂ, ನೆರೆಯ ರಾಜ್ಯಗಳಿಂದ ಇವುಗಳನ್ನು ಕದ್ದುಮುಚ್ಚಿ ಆಮದು ಮಾಡಲಾಗುತ್ತಿದೆ. ಇದರಿಂದಾಗಿ ನಮ್ಮ ಉತ್ಪನ್ನಗಳು ಮಾರಾಟವಾಗದೇ ನಷ್ಟ ಸಂಭವಿಸುತ್ತಿದೆ. ಆದರೆ ಕೆಲ ಅಧಿಕಾರಿಗಳು ಹೇಳುವಂತೆ ರಾಜ್ಯದಲ್ಲೂ ೨೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳನ್ನು ರಾತ್ರಿಯ ಪಾಳಿಯಲ್ಲಿ ತಯಾರಿಸಿ ಖಾಸಗಿ ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ. ೨೦ ಮೈಕ್ರಾನ್ ದಪ್ಪದ ಹಾಗೂ ಇದಕ್ಕೂ ತೆಳ್ಳಗಿರುವ ಪ್ಲಾಸ್ಟಿಕ್ ಕೈಚೀಲಗಳ ಬೆಲೆಗಳ ನಡುವೆ ಅಗಾಧ ಅಂತರ ಇರುವುದರಿಂದಾಗಿ, ತೆಳ್ಳಗಿನ ಪ್ಲಾಸ್ಟಿಕ್ ಚೀಲಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹಾಗೂ ಇದೇ ಕಾರಣದಿಂದಾಗಿ ಈ ಸಮಸ್ಯೆಯನ್ನು ನಿಯಂತ್ರಿಸುವುದು ಅಸಾಧ್ಯವೆನಿಸುತ್ತಿದೆ.

ತ್ಯಾಜ್ಯಗಳ ಸಮಸ್ಯೆ 

ಕಳೆದ ಹಲವಾರು ವರ್ಷಗಳಿಂದ ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಹಗಲಿರುಳು ಕಾಡುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳ ಸಮಸ್ಯೆಯನ್ನು ಆಂಶಿಕವಾಗಿ ಪರಿಹರಿಸಬಲ್ಲ ದಿಟ್ಟ ನಿರ್ಧಾರವನ್ನು ರಾಜ್ಯ ಸರ್ಕಾರ ತಳೆದಿದೆ. ಕೊನೆಗೂ ತುಕ್ಕು ಹಿಡಿದಿರುವ ಸರ್ಕಾರಿ ಯಂತ್ರ ಮತ್ತೆ ಚಲಿಸಲು ಆರಂಭಿಸಿದ ಪರಿಣಾಮವಾಗಿ, ಇದೀಗ ೪೦ ಮೈಕ್ರಾನ್ ಗಳಿಗಿಂತ ತೆಳ್ಳಗಿನ ಕೈಚೀಲ ಮತ್ತಿತರ ಪ್ಲಾಸ್ಟಿಕ್ ಉತ್ಪನ್ನಗಳು ಹಾಗೂ ದಿನಬಳಕೆಯ ವಸ್ತುಗಳನ್ನು ನಿಷೇಧಿಸಲು ರಾಜ್ಯ ಮಂತ್ರಿಮಂಡಲವು ನಿರ್ಧರಿಸಿದೆ. ಅನೇಕ ವರ್ಷಗಳಿಂದ ಇಂತಹ ದಿಟ್ಟ ನಿರ್ಧಾರವೊಂದನ್ನು ತಳೆಯಲು ಸರ್ಕಾರವನ್ನು ಒತ್ತಾಯಿಸುತ್ತಿದ್ದ ಸ್ವಯಂ ಸೇವಾ ಸಂಘಟನೆಗಳ ಆಗ್ರಹಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಈ ನಿರ್ಧಾರವು ಅನುಷ್ಠಾನಗೊಂಡ ಬಳಿಕ ರಾಜ್ಯದ ಪ್ರತಿಯೊಂದು ಹಳ್ಳಿಗಳಿಂದ ಆರಂಭಿಸಿ, ರಾಜಧಾನಿಯಾಗಿರುವ ಬೆಂಗಳೂರಿನ ತನಕ ಕಾಣಸಿಗುವ ಪ್ಲಾಸ್ಟಿಕ್ ತ್ಯಾಜ್ಯಗಳ ಸಮಸ್ಯೆಯು ತಕ್ಕ ಮಟ್ಟಿಗೆ ಪರಿಹಾರಗೊಳ್ಳಲಿದೆ. ಆದರೆ ಈ ಸಮಸ್ಯೆಯು ಸಂಪೂರ್ಣವಾಗಿ ಪರಿಹಾರಗೊಳ್ಳಬೇಕಿದ್ದಲ್ಲಿ, ಪ್ಲಾಸ್ಟಿಕ್ ಬಾಟಲಿಗಳು ಮತ್ತು ಅಸಂಖ್ಯ ಗ್ರಾಹಕ ಉತ್ಪನ್ನಗಳನ್ನು ಪ್ಯಾಕ್ ಮಾಡಲು ಬಳಸುವ ವಿವಿಧ ರೀತಿಯ ಪ್ಲಾಸ್ಟಿಕ್ ಗಳನ್ನೂ ನಿಷೇಧಿಸಲೇಬೇಕು. ಇದಕ್ಕೆ ತಪ್ಪಿದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಮತ್ತು ಇವುಗಳಿಂದಾಗಿ ಉದ್ಭವಿಸುವ ವೈವಿಧ್ಯಮಯ ಸಮಸ್ಯೆಗಳನ್ನು ಸಮರ್ಪಕವಾಗಿ ಸಂಪೂರ್ಣವಾಗಿ ಪರಿಹರಿಸುವುದು ಅಸಾಧ್ಯವೆನಿಸಲಿದೆ.

ಕೆಲವರ್ಷಗಳ ಹಿಂದೆ ರಾಜ್ಯ ಸರ್ಕಾರವು ೨೦ ಮೈಕ್ರಾನ್ ಗಿಂತ ಕಡಿಮೆಯ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳನ್ನು ನಿಷೇಧಿಸಿತ್ತು. ನಿಷೇಧ ಜಾರಿಯಾದ ಕೆಲವೇ ತಿಂಗಳುಗಳ ಕಾಲ ಕಣ್ಮರೆಯಾಗಿದ್ದ ಅತ್ಯಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲಗಳು, ಮುಂದಿನ ಕೆಲವೇ ತಿಂಗಳುಗಳಲ್ಲಿ ಮತ್ತೆ ಮಾರುಕಟ್ಟೆಯಲ್ಲಿ ಪ್ರತ್ಯಕ್ಷವಾಗಿದ್ದವು!. ವಿಶೇಷವೆಂದರೆ ಈ ಬಾರಿ ೪೦ ಮೈಕ್ರಾನ್ ಗಿಂತ ಕಡಿಮೆಯಿರುವ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳನ್ನು ರಾಜ್ಯದಲ್ಲಿ ತಯಾರಿಸಿ ಹೊರದೇಶಗಳಿಗೆ ರಫ್ತು ಮಾಡಲು ಅವಕಾಶವನ್ನು ನೀಡಲಾಗಿದೆ. ಅರ್ಥಾತ್ ೪೦ ಮೈಕ್ರಾನ್ ಗಿಂತ ತೆಳ್ಳಗಿರುವ ಪ್ಲಾಸ್ಟಿಕ್ ಕೈಚೀಲ ಇತ್ಯಾದಿಗಳನ್ನು ಪ್ಲಾಸ್ಟಿಕ್ ಉತ್ಪನ್ನಗಳ ಘಟಕಗಳು ತಯಾರಿಸಬಹುದಾಗಿದೆ. ಹಾಗೂ ಇದೇ ಕಾರಣದಿಂದಾಗಿ ಇಂತಹ ಉತ್ಪನ್ನಗಳು ರಾಜ್ಯದ ಮಾರುಕಟ್ಟೆಗಳಲ್ಲಿ ಹಿಂದಿನಂತೆ ಗುಪ್ತವಾಗಿ ಮಾರಾಟವಾಗುವ ಸಾಧ್ಯತೆಗಳೂ ಇವೆ. ಇದನ್ನು ನಿಶ್ಚಿತವಾಗಿ ನಿಯಂತ್ರಿಸಬೇಕಿದ್ದಲ್ಲಿ, ಇಂತಹ ಉತ್ಪನ್ನಗಳನ್ನು ರಾಜ್ಯದಲ್ಲಿ ತಯಾರಿಸುವ ಮತ್ತು ವಿದೇಶಗಳಿಗೆ ರಫ್ತು ಮಾಡುವುದನ್ನೂ ನಿಷೆಧಿಸಲೇಬೇಕಾಗುವುದು.

ತ್ಯಾಜ್ಯಗಳು ಕಡಿಮೆಯಾಗಲಿವೆ

ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದ ಮೂಲೆಮೂಲೆಗಳಲ್ಲಿ ಕಾಣಸಿಗುವ ವೈವಿಧ್ಯಮಯ ಪ್ಲಾಸ್ಟಿಕ್ ತ್ಯಾಜ್ಯಗಳು ಮತ್ತು ಸಭೆ - ಸಮಾರಂಭಗಳ ಸಂದರ್ಭದಲ್ಲಿ ಉತ್ಪನ್ನವಾಗುವ ಪ್ಲಾಸ್ಟಿಕ್ ನಿರ್ಮಿತ ತಟ್ಟೆ, ಲೋಟ, ಚಮಚ ಮತ್ತಿತರ ತ್ಯಾಜ್ಯಗಳ ಪ್ರಮಾಣವು ನಿಸ್ಸಂದೇಹವಾಗಿ ಕಡಿಮೆಯಾಗಲಿದೆ. ಇದರಿಂದಾಗಿ ರಸ್ತೆಯ ಬದಿಗಳಲ್ಲಿನ ಚರಂಡಿಗಳಲ್ಲಿ ವಿಸರ್ಜಿಸಲ್ಪಡುವ ತ್ಯಾಜ್ಯಗಳ ಪ್ರಮಾಣ ಕಡಿಮೆಯಾಗಲಿದ್ದು, ಇವುಗಳನ್ನು ತಿಂದು ಅಸುನೀಗುವ ಪಶುಪಕ್ಷಿಗಳ ಸಂಖ್ಯೆಯೂ ಇಳಿಮುಖವಾಗಲಿದೆ. ಇದಲ್ಲದೇ ಮಳೆಗಾಲದಲ್ಲಿ ಮಳೆನೀರಿನೊಂದಿಗೆ ಹರಿದು ನದಿ ಮತ್ತು ಸಮುದ್ರಗಳನ್ನು ಸೇರುವ ಪ್ಲಾಸ್ಟಿಕ್ ತ್ಯಾಜ್ಯಗಳ ಪ್ರಮಾಣವೂ ಸಹಜವಾಗಿಯೇ ಕಡಿಮೆಯಾಗಲಿದೆ.  ಇಷ್ಟು ಮಾತ್ರವಲ್ಲ, ಈ ತ್ಯಾಜ್ಯಗಲಿಂದಾಗಿ ಸಂಭವಿಸುತ್ತಿದ್ದ  ಜಲಪ್ರದೂಷಣೆಯ ಪ್ರಮಾಣವು ನಿಯಂತ್ರಿಸಲ್ಪಡುವುದಲ್ಲದೇ, ಜಲಚರಗಳ ಅಕಾಲಿಕ ಮರಣದ ಪ್ರಮಾಣವೂ ಕಡಿಮೆಯಾಗಲಿದೆ.

ಸರ್ಕಾರದ ಈ ನಿರ್ಧಾರದಿಂದ ಖಾಲಿಜಾಗಗಳು ಮತ್ತು ಚರಂಡಿಗಳಲ್ಲಿ ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯಗಳಿಂದಾಗಿ ಕೊಳಚೆನೀರಿನ ಹರಿವಿಗೆ ಅಡಚಣೆಯಾಗುತ್ತಿದ್ದ ಕಾರಣದಿಂದಾಗಿ ಉದ್ಭವಿಸುತ್ತಿದ್ದ ಅನೇಕ ಆರೋಗ್ಯದ ಸಮಸ್ಯೆಗಳು ಮತ್ತು ಧಾರಾಕಾರ ಮಳೆ ಸುರಿದಾಗ ಉದ್ಭವಿಸುವ ಕೃತಕ ನೆರೆಯ ಸಮಸ್ಯೆಗಳು  ಸ್ವಾಭಾವಿಕವಾಗಿಯೇ ನಿಯಂತ್ರಿಸಲ್ಪಡಲಿವೆ. ಅಂತೆಯೇ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿಗೆ ಬೆಂಕಿ ಹಚ್ಚಿ ಸುಡುವುದರಿಂದ ಉತ್ಪನ್ನವಾಗುವ ಅಪಾಯಕಾರಿ ಹಸಿರುಮನೆ ಅನಿಲಗಳಿಂದಾಗಿ ಹೆಚ್ಚುವ ಜಾಗತಿಕ ತಾಪಮಾನ ಮತ್ತು ತತ್ಪರಿಣಾಮವಾಗಿ ಉದ್ಭವಿಸುವ ಹವಾಮಾನದ ವ್ಯತ್ಯಯದಂತಹ ಗಂಭೀರ ಸಮಸ್ಯೆಗಳೂ ಕಡಿಮೆಯಾಗಲಿವೆ.

ಇವೆಲ್ಲಕ್ಕೂ ಮಿಗಿಲಾಗಿ ರಾಜದ ಸ್ಥಳೀಯ ಸಂಸ್ಥೆಗಳಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿರುವ ಅಗಾಧ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಗಳ ಸಂಗ್ರಹಣೆ, ಸಾಗಾಟ ಮತ್ತು ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡಲು ತಗಲುವ ವೆಚ್ಚದಲ್ಲಿ ಸಾಕಷ್ಟು ಉಳಿತಾಯವಾಗಲಿದೆ. ಇದರೊಂದಿಗೆ ವಿದೇಶಗಳಿಂದ ಆಮದು ಮಾಡುತ್ತಿರುವ ಕಚ್ಚಾ ತೈಲಕ್ಕಾಗಿ ಸರ್ಕಾರವು ವ್ಯಯಿಸುತ್ತಿರುವ ಅಮೂಲ್ಯವಾದ ವಿದೇಶೀ ವಿನಿಮಯವೂ  ಉಳಿತಾಯವಾಗಲಿದೆ.

ಆದರೂ ಕೇವಲ ಕೆಲವಿಧದ ಪ್ಲಾಸ್ಟಿಕ್ ಗಳನ್ನು ನಿಷೇಧಿಸುವುದರಿಂದ ತ್ಯಾಜ್ಯಗಳ ಸಮಸ್ಯೆಯು ಸಂಪೂರ್ಣವಾಗಿ ಪರಿಹಾರಗೊಳ್ಳುವ ಸಾಧ್ಯತೆಗಳಿಲ್ಲ. ಹಾಗೂ ಇದೇ ಕಾರಣದಿಂದಾಗಿ ಸರ್ಕಾರವು ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ. ಪ್ರಸ್ತುತ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೊಳಿಸಿದಂತೆಯೇ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಇವುಗಳು ಉತ್ಪನ್ನವಾಗುವ ಮೂಲಗಳಿಂದಲೇ ಪ್ರತ್ಯೇಕಿಸಿ ಸಂಗ್ರಹಿಸುವ, ಸುರಕ್ಷಿತವಾಗಿ ಸಾಗಿಸುವ ಮತ್ತು ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡುವ ವ್ಯವಸ್ಥೆಗಳನ್ನು ಪ್ರತಿಯೊಂದು ಸ್ಥಳೀಯ ಸಂಸ್ಥೆಗಳಲ್ಲೂ ಒದಗಿಸಬೇಕು. ಉದಾಹರಣೆಗೆ  ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆಗಳ ನಿರ್ಮಾಣದಲ್ಲಿ ಬಳಸುವುದನ್ನು ಕಡ್ಡಾಯಗೊಳಿಸುವ ಮೂಲಕ, ರಸ್ತೆಗಳ ನಿರ್ಮಾಣದ ವೆಚ್ಚವನ್ನು ಉಳಿಸುವ, ರಸ್ತೆಗಳ ಆಯುಷ್ಯವನ್ನು ಹೆಚ್ಚಿಸುವ ಮತ್ತು ಅಪಾಯಕಾರಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುರಕ್ಷಿತವಾಗಿ ಹಾಗೂ ಉಪಯುಕ್ತವೆನಿಸುವಂತೆ ವಿಲೇವಾರಿ ಮಾಡುವ ವಿಧಾನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲೇಬೇಕು. ಇಂತಹ ಉಪಕ್ರಮಗಳನ್ನು ಶೀಘ್ರದಲ್ಲಿ ಜಾರಿಗೊಳಿಸದೇ, ಕೇವಲ ನಿರ್ದಿಷ್ಟ ಗುಣಮಟ್ಟದ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸುವುದರಿಂದ ಅಪೇಕ್ಷಿತ ಫಲಿತಾಂಶ ದೊರೆಯದು ಎನ್ನುವುದನ್ನು ಸರ್ಕಾರ ಅರ್ಥೈಸಿಕೊಳ್ಳಬೇಕಿದೆ.

ಇವೆಲ್ಲಕ್ಕೂ ಮಿಗಿಲಾಗಿ ನಿಷೇಧಿಸಲ್ಪಡಲಿರುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ವರ್ತಕರು ಖರೀದಿಸದಿರುವ ಮತ್ತು ಗ್ರಾಹಕರು ತಿರಸ್ಕರಿಸುವ ಇಚ್ಛಾಶಕ್ತಿಯನ್ನು ತೋರದಿದ್ದಲ್ಲಿ, ಸರ್ಕಾರದ ಪ್ರಯತ್ನವು ನಿಶ್ಚಿತವಾಗಿಯೂ ನಿಷ್ಪ್ರಯೋಜಕ ಎನಿಸಲಿದೆ.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು


No comments:

Post a Comment