Friday, October 16, 2015

G Category sites - Politicians grab it!



          ಜಿ ಪ್ರವರ್ಗದ ನಿವೇಶನ :ರಾಜಕಾರಣಿಗಳಿಂದ ಆಪೋಶನ

ಸಮಾಜ ಸೇವೆ ಮಾಡುವ ಸಲುವಾಗಿ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುತ್ತಿರುವುದಾಗಿ ಹೇಳುವ ರಾಜಕಾರಣಿಗಳು, ಒಂದುಬಾರಿ ಚುನಾವಣೆಯಲ್ಲಿ ಗೆದ್ದ  ಬಳಿಕ ತಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಸಾಕಷ್ಟು ಶ್ರಮಿಸುತ್ತಾರೆ. ಅಂತೆಯೇ ತಮಗೆ ಬೇಕೆನಿಸಿದಾಗ ಮತ್ತು ತಮಗೆ ಬೇಕೆನಿಸಿದಷ್ಟು ಪ್ರಮಾಣದಲ್ಲಿ ತಮ್ಮ ಸಂಬಳ, ಭತ್ಯೆ, ಪಿಂಚಿಣಿ ಮತ್ತಿತರ ಸವಲತ್ತುಗಳನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ, ಸಾಕಷ್ಟು ಸಂಪತ್ತನ್ನೂ ಗಳಿಸುವತ್ತ ಗಮನ ಹರಿಸುತ್ತಾರೆ. ಇಂತಹ ಸವಲತ್ತುಗಳಲ್ಲಿ ಕ್ಷುಲ್ಲಕ ಬೆಲೆಗೆ ಬೆಂಗಳೂರಿನಲ್ಲಿ  “ ಜಿ ಪ್ರವರ್ಗದ ನಿವೇಶನ “ ವನ್ನು ಮಂಜೂರು ಮಾಡಿಸಿಕೊಳ್ಳುವುದೂ ಸೇರಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಕಳೆದ ಹಲವರು ವರ್ಷಗಳಿಂದ ಸಾಕಷ್ಟು ವಾದವಿವಾದಗಳಿಗೆ ಕಾರಣವೆನಿಸಿದ್ದ " ಜಿ ಪ್ರವರ್ಗದ ನಿವೇಶನ " ಗಳ ವಿಚಾರವು, ಇದೀಗ ಮತ್ತೊಮ್ಮೆ ಮಾಧ್ಯಮಗಳಿಗೆ ಗ್ರಾಸವೆನಿಸುತ್ತಿದೆ. ರಾಜ್ಯದ ಉಚ್ಛ ನ್ಯಾಯಾಲಯದ ಆದೇಶದಂತೆ ಸ್ಥಗಿತಗೊಂಡಿದ್ದ ಜಿ ಪ್ರವರ್ಗದ ನಿವೇಶನಗಳ ಹಂಚಿಕೆಯು ಮತ್ತೊಮ್ಮೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗೂ ಇದಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಹಂಚಿಕೆಯ ನಿಯಮಗಳಿಗೆ ರಾಜ್ಯ ಸರ್ಕಾರವು ಅವಶ್ಯಕ ತಿದ್ದುಪಡಿಗಳನ್ನು ಮಾಡಿದೆ. ವಿಶೇಷವೆಂದರೆ ಕೆಲ ವರ್ಷಗಳ ಹಿಂದೆ ಉಚ್ಛ ನ್ಯಾಯಾಲಯವು ಜಿ ಪ್ರವರ್ಗದ ನಿವೇಶನಗಳ ಹಂಚಿಕೆಯ ಪ್ರಕರಣದ ಬಗ್ಗೆ ತೀರ್ಪನ್ನು ನೀಡುವಾಗ, ರಾಜ್ಯ ಸರ್ಕಾರವು ಬಿಡಿ ನಿವೇಶನಗಳ ಹಂಚಿಕೆಯ ನಿಯಮಗಳನ್ನು ಸಮರ್ಪಕವಾಗಿ ರೂಪಿಸುವಂತೆ ನೀಡಿದ್ದ ಸಲಹೆಯನ್ನು ಈ ತಿದ್ದುಪಡಿಗಾಗಿ ಬಳಸಿಕೊಂಡಿದೆ!.

ಜಿ ಪ್ರವರ್ಗ ರಾಜಕಾರಣಿಗಳಿಗಲ್ಲ

 ಕರ್ನಾಟಕದಲ್ಲಿ ಜರಗಿದ್ದ ಹಲವಾರು ಹಗರಣಗಳಲ್ಲಿ ದುಬಾರಿ ಬೆಲೆಯ ಗೃಹ ನಿವೇಶನಗಳನ್ನು ಅತ್ಯಲ್ಪ ಬೆಲೆಗೆ  ರಾಜ್ಯದ ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಮತ್ತು ಇವರ ಬಂಧುಮಿತ್ರರಿಗೆ ಹಂಚಿದ್ದ ಹಗರಣವೂ ಸೇರಿದೆ. ಜಿ ಪ್ರವರ್ಗದ ನಿವೇಶನಗಳನ್ನು ಈ ರೀತಿಯಲ್ಲಿ ವಿತರಿಸುವುದು ಸರಿಯಲ್ಲ ಎಂದು ರಾಜ್ಯದ ಉಚ್ಛ ನ್ಯಾಯಾಲಯವೇ ೨೦೧೦ ರ ತೀರ್ಪಿನಲ್ಲಿ ಉಲ್ಲೇಖಿಸಿದೆ.  ೧೯೭೬ ರ ಬಿ ಡಿ ಎ ನಿಯಮಗಳಂತೆ  ಗೃಹ ನಿವೇಶನಗಳನ್ನು ಹಂಚುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲದಿದ್ದರೂ,ಸಹಸ್ರಾರು ನಿವೇಶನಗಳನ್ನು ಹಂಚಿದ್ದು ಕಾನೂನುಬಾಹಿರವೆಂದು ಹೇಳಿದ್ದು, ಈ ರೀತಿಯಲ್ಲಿ ನಿವೇಶನಗಳನ್ನು ಹಂಚುವುದನ್ನು ನಿಲ್ಲಿಸುವಂತೆ ಆದೇಶಿಸಿತ್ತು. ಈ ತೀರ್ಪು ಹೊರಬಿದ್ದ ಬಳಿಕವೂ, ರಾಜ್ಯ ಸರ್ಕಾರವು ಕೆಲ ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಮತ್ತಿತರ ೨೨ ಪ್ರಭಾವಶಾಲಿ ವ್ಯಕ್ತಿಗಳಿಗೆ ೨೦೧೧ ರಲ್ಲಿ ಮತ್ತೆ ಜಿ ಪ್ರವರ್ಗದ ನಿವೇಶನಗಳನ್ನು ಮಂಜೂರು ಮಾಡಿತ್ತು!.

೧೯೯೭ ರಿಂದ ೨೦೧೧ ರ ಅವಧಿಯಲ್ಲಿ ಜಿ ಪ್ರವರ್ಗದನ್ವಯ ೧೧೨೮ ನಿವೇಶನಗಳನ್ನು ಮುಖ್ಯಮಂತ್ರಿಗಳ  ಕೋಟಾದಲ್ಲಿ ವಿತರಿಸಲಾಗಿತ್ತು. ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಸ್. ಎಂ . ಕೃಷ್ಣ – ೩೩೪, ಜೆ. ಎಚ್. ಪಟೇಲ್ – ೨೨೨, ಧರ್ಮ ಸಿಂಗ್ – ೭೬, ಕುಮಾರಸ್ವಾಮಿ – ೨೮೬ ಮತ್ತು ಯಡ್ಡ್ಯೂರಪ್ಪ – ೨೧೦ ನಿವೇಶನಗಳನ್ನು ವಿತರಿಸಿದ್ದು, ಇದರಲ್ಲಿ ರಾಜ್ಯದ ಸಂಸದರು ಮತ್ತು ಶಾಸಕರಿಗೆ ಸಿಂಹಪಾಲು ಸಂದಿದೆ.

ಜಿ ಪ್ರವರ್ಗದ ನಿವೇಶನಗಳನ್ನು ಹಂಚುವ ಅಧಿಕಾರವನ್ನು ರಾಜ್ಯ ಸರ್ಕಾರ – ಮುಖ್ಯಮಂತ್ರಿಗಳಿಗೆ ನೀಡಿರುವುದನ್ನು ರದ್ದುಪಡಿಸುವಂತೆ ಹಿರಿಯ ವಕೀಲರೊಬ್ಬರು ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ  ಸಾರ್ವಜನಿಕ ಹಿತಾಸಕ್ತಿ ದಾವೆಯೊಂದನ್ನು ೨೦೦೯ ರ ಅಂತ್ಯದಲ್ಲಿ ಸಲ್ಲಿಸಿದ್ದರು. ಜಿ ಪ್ರವರ್ಗದ ನಿವೇಶನಗಳ ವಿತರಣೆಗೆ ತಡೆಯಾಜ್ಞೆ ನೀಡಿದ ನ್ಯಾಯಾಲಯವು, ತದನಂತರ ರಾಜ್ಯದ ಯಾವುದೇ ಭಾಗದಲ್ಲಿ ನಿವೇಶನ ಹೊಂದಿರದವರಿಗೆ ನಿವೇಶನಗಳನ್ನು ನೀಡಬಹುದು ಎಂದಿತ್ತು. ಇದಲ್ಲದೇ ಬಿ ಡಿ ಎ ನಿವೇಶನಗಳ ಹಂಚಿಕೆಗಾಗಿ ಸೂಕ್ತ ನಿಯಮಗಳನ್ನು ರೂಪಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಹಾಗೂ ಜಿ ಪ್ರವರ್ಗದ ನಿವೇಶನಗಳ ಮಂಜೂರಾತಿಯ ಬಗ್ಗೆ ವಿಚಾರಣೆಯನ್ನು ನಡೆಸಲು ನ್ಯಾ. ಪದ್ಮರಾಜ ಆಯೋಗವನ್ನು ನೇಮಿಸಿತ್ತು. ಆಯೋಗವು ವಿಚಾರಣೆಯನ್ನು ನಡೆಸಿದ ಬಳಿಕ ೨೦೦೪ – ೨೦೧೧ ರ ಅವಧಿಯಲ್ಲಿ ನೀಡಿದ್ದ ೩೦೮ ನಿವೇಶನಗಳ ಮಂಜೂರಾತಿಯನ್ನು ರದ್ದುಪಡಿಸಲು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆಯೋಗದ ವರದಿಯನ್ನು ತಿರಸ್ಕರಿಸಿದ್ದ ಸರ್ಕಾರವು ಇದಕ್ಕಾಗಿ ಮತ್ತೊಂದು ಸಮಿತಿಯನ್ನು ನೇಮಿಸಿತ್ತು!.  

ಪ್ರಸ್ತುತ ಉಚ್ಛ ನ್ಯಾಯಾಲಯವು ಬಿ ಡಿ ಎ ನಿಯಮಗಳನ್ನು ಸಮರ್ಪಕವಾಗಿ ರೂಪಿಸುವಂತೆ ಉಚ್ಛ ನ್ಯಾಯಾಲಯ ಹಿಂದೆ ನೀಡಿದ್ದ ಆದೇಶವನ್ನು ಬಳಸಿಕೊಂಡಿರುವ ಸರ್ಕಾರವು, ರಾಜ್ಯದ ಶಾಸಕರು ಮತ್ತು ಸಂಸದರಿಗೆ ಜಿ ಪ್ರವರ್ಗದ ನಿವೇಶನಗಳನ್ನು ನೀಡಲು ಅನುಕೂಲವಾಗುವಂತೆ ಬಿ ಡಿ ಎ ನಿಯಮಗಳಿಗೆ ಅವಶ್ಯಕ ತಿದ್ದುಪಡಿಗಳನ್ನು ಮಾಡಿದೆ.

ಬಿ ಡಿ ಎ ನಿಯಮಗಳು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ತಾನು ನಿರ್ಮಿಸಿರುವ ಬಡಾವಣೆಗಳಲ್ಲಿನ ಬಿಡಿ ನಿವೇಶನಗಳನ್ನು ವಿತರಿಸಲು ಕೆಲವೊಂದು ನಿಯಮಗಳನ್ನು ರೂಪಿಸಿದೆ. ನಿಯಮ ೫ ( ನಿವೇಶನಗಳ ಮಂಜೂರಾತಿ ) ೧೦೮೪ ಮತ್ತು ೧೯೯೭ ರಂತೆ ಬಿಡಿ ನಿವೇಶನಗಳ ವಿತರಣೆಗಾಗಿ ಏಳು  ಪ್ರವರ್ಗಗಳನ್ನು ಗುರುತಿಸಿದೆ. ಇವುಗಳಲ್ಲಿ ಎ ಪ್ರವರ್ಗಕ್ಕೆ ಸೇರಿದ ನಿವೇಶನಗಳನ್ನು ಹರಾಜು ಪ್ರಕ್ರಿಯೆಯ ಮೂಲಕ ವಿತರಿಸಬೇಕಾಗುವುದು. ಬಿ ಪ್ರವರ್ಗದ ನಿವೇಶನಗಳನ್ನು ಕ್ರೀಡೆಗಳಲ್ಲಿ ಉನ್ನತ ಸಾಧನೆಗೈದವರಿಗೆ, ಸಿ ಪ್ರವರ್ಗ – ಕಲೆ, ವಿಜ್ಞಾನ, ಸಾಹಿತ್ಯ, ಶಿಕ್ಷಣ, ವೈದ್ಯಕೀಯ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ಸಾಧನೆಗೈದವರಿಗೆ, ಡಿ – ಮಾಜಿ ಸೈನಿಕರಿಗೆ, ಎಫ್ – ಕರ್ತವ್ಯದಲ್ಲಿರುವಾಗ ಮೃತಪಟ್ಟ ಸರ್ಕಾರಿ ನೌಕರರ ಅವಲಂಬಿತರಿಗೆ ಮತ್ತು ಜಿ ಪ್ರವರ್ಗದ ನಿವೇಶನಗಳನ್ನು ಸಾರ್ವಜನಿಕ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದ ವ್ಯಕ್ತಿಗಳಿಗೆ ( ಸರ್ಕಾರದ ಸೂಚನೆಯಂತೆ,ಇಂತಹ ವ್ಯಕ್ತಿಗಳಿಗೆ ನಿವೇಶನಗಳನ್ನು ಮಂಜೂರು ಮಾಡುವ ಅಧಿಕಾರವನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ನೀಡಿರುವುದರಿಂದ ಇದನ್ನು ಮುಖ್ಯಮಂತ್ರಿಗಳ ವಿವೇಚನಾ ಕೋಟಾ ಎಂದು ಕರೆಯಲಾಗುತ್ತಿದೆ ) ವಿತರಿಸಬೇಕಾಗುತ್ತದೆ. ಆದರೆ ಬಿ ಡಿ ಎ ರೂಪಿಸಿರುವ ನಿಯಮಗಳನ್ನು ಅನೇಕ ಸಂದರ್ಭಗಳಲ್ಲಿ ರಾಜಾರೋಷವಾಗಿ ಉಲ್ಲಂಘಿಸಲಾಗಿದೆ. ಈ ವಿಚಾರದಲ್ಲಿ ರಾಜಕಾರಣಿಗಳು, ಉನ್ನತ ಸರ್ಕಾರಿ ಅಧಿಕಾರಿಗಳು ಮತ್ತು ಇವರ ಬಂಧುಮಿತ್ರರಿಗೆ ( ಜಿ ಪ್ರವರ್ಗದ ನಿವೇಶನಗಳನ್ನು ಪಡೆಯುವ ಅರ್ಹತೆ ಇಲ್ಲದಿದ್ದರೂ ) ದುಬಾರಿ ಬೆಲೆಯ ನಿವೇಶನಗಳನ್ನು ಅತ್ಯಲ್ಪ ಬೆಲೆಗೆ ಕಾನೂನುಬಾಹಿರವಾಗಿ ಮಂಜೂರು ಮಾಡಲಾಗಿದೆ.

ಬಿ ಡಿ ಎ ನಿಯಮಗಳಂತೆ ಜಿ ಪ್ರವರ್ಗದ ನಿವೇಶನಗಳನ್ನು ಪಡೆಯುವ ವ್ಯಕ್ತಿಗಳು ಸ್ವಂತ ಮನೆ ಅಥವಾ ನಿವೇಶನವನ್ನು ಹೊಂದಿರಬಾರದು. ಅದಾಗಲೇ ಒಂದು ನಿವೇಶನವನ್ನು ಪಡೆದುಕೊಂಡವರು ಮತ್ತೊಂದು ನಿವೇಶನವನ್ನು ಪಡೆಯುವಂತಿಲ್ಲ. ಸ್ವಂತ ವಾಸ್ತವ್ಯಕ್ಕಾಗಿ ಮನೆಯೊಂದನ್ನು ಕಟ್ಟಲು ಪಡೆದ ನಿವೇಶನವನ್ನು ಮುಂದಿನ ೧೦ ವರ್ಷಗಳ ಕಾಲ ಮಾರುವಂತಿಲ್ಲ. ಏಕೆಂದರೆ ನಿವೇಶನ ಮಂಜೂರಾದ ೧೦ ವರ್ಷಗಳ ಬಳಿಕವೇ ಇದು ಫಲಾನುಭವಿಗಳ ಹೆಸರಿಗೆ ವರ್ಗಾವಣೆಯಾಗುತ್ತದೆ. ಹಾಗೂ ಈ ೧೦ ವರ್ಷಗಳ ಅವಧಿಯಲ್ಲಿ ಫಲಾನುಭವಿಗಳು ವಾರ್ಷಿಕ ೧೦ ರೂ. ಸ್ಥಳ ಬಾಡಿಗೆಯನ್ನು ಬಿ ಡಿ ಎ ಗೆ ಪಾವತಿಸಬೇಕು. ನಿವೇಶನ ಮಂಜೂರಾದ ಬಳಿಕ ಐದು ವರ್ಷಗಳಲ್ಲಿ ಸ್ವಂತ ವಾಸ್ತವ್ಯಕ್ಕಾಗಿ ಮನೆಯೊಂದನ್ನು ನಿರ್ಮಿಸಬೇಕೇ ಹೊರತು, ಬೇರೆ ಯಾವುದೇ ರೀತಿಯ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಈ ನಿವೇಶನ ಅಥವಾ ಕಟ್ಟಡವನ್ನು ಪರಭಾರೆ ಮಾಡುವಂತಿಲ್ಲ. ಈ ಷರತ್ತುಗಳನ್ನು ಅಥವಾ ೧೯೮೪ ರ ನಿವೇಶನ ಹಂಚಿಕೆ ನಿಯಮಗಳನ್ನು ಉಲ್ಲಂಘಿಸಿದಲ್ಲಿ, ೧೫ ದಿನಗಳ ನೋಟೀಸನ್ನು ನೀಡಿ, ಯಾವುದೇ ಪರಿಹಾರವನ್ನು ನೀಡದೇ ಈ ಸ್ವತ್ತನ್ನು ಬಿ ಡಿ ಎ ಸ್ವಾಧೀನ ಪಡಿಸಿಕೊಳ್ಳಬಹುದು. ಇದಲ್ಲದೆ ಅನ್ಯ ಕೆಲವು ಷರತ್ತುಗಳಿದ್ದರೂ, ಜಿ ಪ್ರವರ್ಗದ ನಿವೇಶನಗಳನ್ನು ಪಡೆದಿರುವ ಬಹುತೇಕ ರಾಜಕಾರಣಿಗಳು ಅಧಿಕತಮ ಷರತ್ತುಗಳನ್ನು ರಾಜಾರೋಷವಾಗಿ ಉಲ್ಲಂಘಿಸಿದ್ದಾರೆ. ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಸ್ವಂತ ವಾಸ್ತವ್ಯಕ್ಕಾಗಿ ಮನೆಯೊಂದನ್ನು ಕಟ್ಟಲು ಪಡೆದಿದ್ದ ನಿವೇಶನದಲ್ಲಿ ಐದು ಅಂತಸ್ತಿನ ವಾಣಿಜ್ಯ ಸಂಕೀರ್ಣವನ್ನೇ ನಿರ್ಮಿಸಿದ್ದಾರೆ!. ಬಿ ಡಿ ಎ ಶರತ್ತುಗಳ ಉಲ್ಲಂಘನೆಯ ಆಧಾರದ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡಲ್ಲಿ, ನೂರಾರು ಜಿ ಪ್ರವರ್ಗದ ನಿವೇಶನಗಳನ್ನು ಯಾವುದೇ ಪರಿಹಾರ ನೀಡದೇ ಸ್ವಾಧೀನಪಡಿಸಿಕೊಳ್ಳಬಹುದಾಗಿದೆ. ಆದರೆ “ ಬೆಕ್ಕಿನ ಕೊರಳಿಗೆ ಗಂಟೆಯನ್ನು ಕಟ್ಟುವವರು ಯಾರು? “ ಎನ್ನುವ ಸಮಸ್ಯೆ ಇದಾಗಿದೆ.

ಬಿ ಡಿ ಎ ನೀಡಿದ್ದ ಮಾಹಿತಿ

ಜಿ ಪ್ರವರ್ಗದ ನಿವೇಶನಗಳ ಹಂಚಿಕೆಯ ಬಗ್ಗೆ ಮಾಹಿತಿ ಹಕ್ಕು ಕಾಯಿದೆಯನ್ವಯ ೨೦೦೯ ರಲ್ಲಿ ಬಳಕೆದಾರರ ಹಿತರಕ್ಷಣಾ ವೇದಿಕೆಯು ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ಲಭಿಸಿದ್ದ ಮಾಹಿತಿ ಇಂತಿದೆ. ಬಿ ಡಿ ಎ ನಿವೇಶನ ಹಂಚಿಕೆ ನಿಯಮಾವಳಿ ೧೯೮೪ ರನ್ವಯ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲು ಅವಕಾಶವಿರುವುದಿಲ್ಲ. ಆದರೂ ೦೬-೦೮-೧೯೯೭ ರ ಸರ್ಕಾರದ ಮಾರ್ಗಸೂಚಿಯನುಸಾರ ಬಿ ಡಿ ಎ ಬಿಡಿ ನಿವೇಶನಗಳನ್ನು ವಿಲೇವಾರಿ ಮಾಡಬೇಕಾಗಿರುತ್ತದೆ.ಸದರಿ ಮಾರ್ಗಸೂಚಿಯನ್ವಯ ಸರ್ಕಾರ ನಿರ್ದೇಶನ ನೀಡುವ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳಿಗೆ ( ಪ್ರಾಯಶಃ ಸಾರ್ವಜನಿಕ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿದ್ದ – ಉನ್ನತ ಸಾಧನೆಗೈದ ಎನ್ನುವ ಅರ್ಥದಲ್ಲಿ ) ಜಿ ಪ್ರವರ್ಗದ ನಿವೇಶನಗಳನ್ನು ಹಂಚಿಕೆ ಮಾಡಲು ಆವಕಾಶವಿರುತ್ತದೆ ಎನ್ನುವ ಮಾಹಿತಿಯನ್ನು ನೀಡಲಾಗಿತ್ತು. ಆದರೆ ಇದೀಗ ಮತ್ತೆ ರಾಜಕಾರಣಿಗಳ ಒತ್ತಡಕ್ಕೆ ಮಣಿದಿರುವ ಸರ್ಕಾರವು, ಜಿ ಪ್ರವರ್ಗದ ನಿವೇಶನಗಳನ್ನು ಮುಖ್ಯಮಂತ್ರಿಗಳ ಆದೇಶದಂತೆ ವಿತರಿಸಲು ಬಿ ಡಿ ಎ ನಿಯಮಗಳಿಗೆ ಅವಶ್ಯಕ ತಿದ್ದುಪಡಿಗಳನ್ನು ಮಾಡಿದೆ. ಇದರಂತೆ ಲಭ್ಯ ನಿವೇಶನಗಳಲ್ಲಿ ಶೇ.೩೦ ರಷ್ಟನ್ನು ಸಾರ್ವಜನಿಕ ಸೇವೆಯಲ್ಲಿರುವವರಿಗೆ ( ಅರ್ಥಾತ್ ರಾಜಕಾರಣಿಗಳಿಗೆ ) ವಿತರಿಸಲು ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ.  ತತ್ಪರಿಣಾಮವಾಗಿ ಮುಂದಿನ ಕೆಲವೇ ತಿಂಗಳುಗಳಲ್ಲಿ ರಾಜ್ಯದ ಅನೇಕ ರಾಜಕಾರಣಿಗಳು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಅತ್ಯಲ್ಪ ಬೆಲೆಗೆ ದುಬಾರಿ ನಿವೇಶನಗಳನ್ನು ಪಡೆಯಲಿದ್ದಾರೆ.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು






No comments:

Post a Comment