Monday, December 7, 2015

AIR POLLUTION - CONTROL IT



           ವಾಯುಮಾಲಿನ್ಯದ ಸಮಸ್ಯೆಯನ್ನು ನಿರ್ಲಕ್ಷಿಸದಿರಿ      

ದೇಶದ ರಾಜಧಾನಿಯಾಗಿರುವ ದೆಹಲಿಯಲ್ಲಿ ವಾಯುಮಾಲಿನ್ಯದ ಸಮಸ್ಯೆ ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಬಗ್ಗೆ ಸೆಂಟರ್ ಫಾರ್ ಸಯನ್ಸ್ ಎಂಡ್ ಎನ್ವಿರಾನ್ಮೆಂಟ್ ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಎಚ್ಚರಿಕೆಯನ್ನು ನೀಡುತ್ತಿದೆ. ವಿಶೇಷವೆಂದರೆ ಜಗತ್ತಿನ ಅತ್ಯಂತ ಪ್ರದೂಷಿತ ೨೦ ನಗರಗಳಲ್ಲಿ, ೧೩ ನಗರಗಳು ನಮ್ಮ ದೇಶದ ಮಹಾನಗರಗಳೇ ಆಗಿವೆ!. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಗರ - ಪಟ್ಟಣಗಳಲ್ಲಿ ದಿನೇದಿನೇ ವೃದ್ಧಿಸುತ್ತಿರುವ ವಾಯುಮಾಲಿನ್ಯದ ಸಮಸ್ಯೆಯನ್ನು ಪರಿಹರಿಸಲು ಮೀನಮೇಷ ಎನಿಸುತ್ತಿವೆ ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು.

ದೇಶದ ಸಂವಿಧಾನದಲ್ಲಿ ಸ್ವಚ್ಛವಾದ ಗಾಳಿ ಹಾಗೂ ಶುದ್ಧವಾದ ನೀರುಗಳನ್ನು ಪಡೆಯುವ   ಮತ್ತು ಪರಿಶುದ್ಧ ಪರಿಸರದಲ್ಲಿ ಜೀವಿಸುವ ಹಕ್ಕನ್ನು ಪ್ರಜೆಗಳಿಗೆ ನೀಡಿದ್ದರೂ, ಇವೆಲ್ಲವೂ ನಮಗಿಂದು ದುರ್ಲಭವೆನಿಸಿವೆ. ಆದರೆ ವಾಯು, ಜಲ ಮತ್ತು ಪರಿಸರ ಮಾಲಿನ್ಯದ ಸಮಸ್ಯೆಯು ಅನಿಯಂತ್ರಿತವಾಗಿ ವೃದ್ಧಿಸುವಲ್ಲಿ ಜನಸಾಮಾನ್ಯರ ನಿರ್ಲಕ್ಷ್ಯದೊಂದಿಗೆ ಹೆಚ್ಚುತ್ತಿರುವ ಜನ ಮತ್ತು ವಾಹನಗಳ ಸಂಖ್ಯೆಗಳೂ ಕಾರಣವೆನಿಸಿವೆ.

ಇತ್ತೀಚಿಗೆ ದೆಹಲಿಯ ಉಚ್ಛ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ವಾಯುಮಾಲಿನ್ಯದ ಸಮಸ್ಯೆಯನ್ನು ನಿಯಂತ್ರಿಸಲು ಸರ್ಕಾರಕ್ಕೆ ಆದೇಶಿಸಿತ್ತು. ತತ್ಪರಿಣಾಮವಾಗಿ ಸರ್ಕಾರವು ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಆದರೆ ಇದು ಅಪೇಕ್ಷಿತ ಪರಿಣಾಮವನ್ನು ನೀಡಲು ಯಶಸ್ವಿಯಾಗುವುದೇ ಎನ್ನುವುದನ್ನು ಕಾದುನೋಡಬೇಕಷ್ಟೇ.

ಮಾರಕವೆನಿಸುವ ವಾಯುಮಾಲಿನ್ಯ

ಭಾರತದ ಮಹಾನಗರಗಳನ್ನು ಜ್ಞಾಪಿಸಿದೊಡನೆ ಕಿಕ್ಕಿರಿದ ವಾಹನಗಳ ಮತ್ತು ಜನಸಂದಣಿಗಳೊಂದಿಗೆ, ತೀವ್ರಸ್ವರೂಪದ ವಾಯುಮಾಲಿನ್ಯದ ನೆನಪಾಗುವುದು ಸ್ವಾಭಾವಿಕ. ಕೆಲವೇ ವರ್ಷಗಳ ಹಿಂದೆ ದೇಶದ ಮಹಾನಗರಗಳಿಗೆ ಸೀಮಿತವಾಗಿದ್ದ ಈ ಸಮಸ್ಯೆಯು, ಇದೀಗ ದೇಶದ ಸಣ್ಣಪುಟ್ಟ ನಗರ ಹಾಗೂ ಪಟ್ಟಣಗಳಿಗೂ ಹರಡಲಾರಂಭಿಸಿದೆ. ಇರುವೆಗಳ ಸಾಲಿನಂತೆ ಸಂಚರಿಸುವ ಸಾಲುಸಾಲು ವಾಹನಗಳು ಹೊರಸೂಸುವ ಹೊಗೆಯಿಂದಾಗಿ ಹೆಚ್ಚುತ್ತಿರುವ ವಾಯುಮಾಲಿನ್ಯವು, ಅನೇಕ ವಿಧದ ಗಂಭೀರ ಮತ್ತು ಮಾರಕ ವ್ಯಾಧಿಗಳಿಗೆ ಕಾರಣವೆನಿಸುತ್ತಿದೆ. ಇತ್ತೀಚಿನ ವರದಿಗಳಂತೆ ದೆಹಲಿಯ ಜನರು ಉಸಿರಾಡುವ ಗಾಳಿಯು, ಮಕ್ಕಳು ಮತ್ತು ವಯೋವೃದ್ಧರು ಉಸಿರಾಡಲು ಅಯೋಗ್ಯವೆನಿಸುವಷ್ಟು ಪ್ರದೂಷಿತವಾಗಿದೆ!.

ಅಧಿಕೃತ ಮಾಹಿತಿಯಂತೆ ಭಾರತದ ಶೇ.೫೦ ರಷ್ಟು ನಗರಗಳು ಅತ್ಯಂತ ಪ್ರದೂಷಿತ ಪ್ರದೇಶಗಳೆನಿಸಿವೆ.ಅಂತೆಯೇ ನಮ್ಮ ದೇಶದಲ್ಲಿ ಸಂಭವಿಸುತ್ತಿರುವ ಮರಣಗಳಿಗೆ ಕಾರಣವೆನಿಸುವ ಅಪಾಯಕಾರಿ ಸಮಸ್ಯೆಗಳಲ್ಲಿ, ವಾಯುಮಾಲಿನ್ಯವು ೫ ನೆಯ ಸ್ಥಾನದಲ್ಲಿದೆ. ಈ ಸಮಸ್ಯೆಯನ್ನು ಸಮರೋಪಾದಿಯಲ್ಲಿ ನಿಯಂತ್ರಿಸಲು ನಾವು ವಿಫಲರಾದಲ್ಲಿ, ಪ್ರಾಯಶಃ ಮುಂದಿನ ಕೆಲವೇ ವರ್ಷಗಳಲ್ಲಿ ಇದು ಅಗ್ರಸ್ಥಾನವನ್ನು ತಲುಪುವ  ಸಾಧ್ಯತೆಗಳೂ ಇವೆ.

ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳನ್ನು ಬಳಸುವ ವಾಹನಗಳು ಹೊರಹೊಮ್ಮುವ ಧೂಮದಲ್ಲಿ ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮೊನೊಕ್ಸೈಡ್, ಸಲ್ಫರ್ ಡೈ ಆಕ್ಸೈಡ್, ಆಕ್ಸೈಡ್ ಆಫ್ ನೈಟ್ರೋಜೆನ್ ಮುಂತಾದ ಅಪಾಯಕಾರಿ ಅನಿಲಗಳಿವೆ. ಈ ಹಸಿರುಮನೆ ಅನಿಲಗಳನ್ನು ಸೇವಿಸುವ ಜನರಲ್ಲಿ ಕಣ್ಣುಗಳಲ್ಲಿ ಉರಿ, ತಲೆನೋವು, ವಾಕರಿಕೆ, ಶ್ವಾಸಾಂಗಗಳ ಕಾಯಿಲೆಗಳು, ಶ್ವಾಸಕೋಶಗಳ ಉರಿಯೂತ, ಹೃದ್ರೋಗಗಳ ಉಲ್ಬಣಿಸುವಿಕೆ ಮತ್ತು ಕೆಲವಿಧದ ಕ್ಯಾನ್ಸರ್ ಉದ್ಭವಿಸುವ ಸಾಧ್ಯತೆಗಳಿವೆ. ಹಾಗೂ ಇದೇ  ಕಾರಣದಿಂದಾಗಿ  ವಾಯುಮಾಲಿನ್ಯದ ಸಮಸ್ಯೆಯನ್ನು ಸಮರೋಪಾದಿಯಲ್ಲಿ ನಿಯಂತ್ರಿಸಬೇಕಿದೆ.

ಮುಂದೇನು ಸಂಭವಿಸಲಿದೆ?

ತಜ್ಞರ ಅಭಿಪ್ರಾಯದಂತೆ ಮುಂದಿನ ಎರಡು ದಶಕಗಳಲ್ಲಿ ಭಾರತೀಯರ ದೈನಂದಿನ ಸಂಚಾರದ ಪ್ರಮಾಣವು ದುಪ್ಪಟ್ಟಾಗಲಿದೆ. ಇದರೊಂದಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವವರ ಪ್ರಮಾಣವು ಶೇ. ೨೬ ರಿಂದ ಶೇ. ೧೬ ಕ್ಕೆ ಕುಸಿಯಲಿದೆ. ಇದರೊಂದಿಗೆ ವೈಯುಕ್ತಿಕ ವಾಹನಗಳ ಪ್ರಮಾಣವು ಶೇ.೩೪ ರಿಂದ ಶೇ. ೫೧ ಕ್ಕೆ ಏರಲಿದೆ. ಅಂತೆಯೇ ಮಹಾನಗರಗಳಲ್ಲಿ ಸಂಚರಿಸುವ ವಾಹನಗಳ ವೇಗವು ಇದೀಗ ಪ್ರತಿ ಗಂಟೆಗೆ ೧೬ ಕಿ.ಮೀ. ಇದ್ದು, ಮುಂದೆ ಇದು ಗಂಟೆಗೆ ೮ ಕಿ.ಮೀ. ಗಳಿಗೆ ಇಳಿಯಲಿದೆ. ಇವೆಲ್ಲವುಗಳ ಸಂಯುಕ್ತ ಪರಿಣಾಮಗಳಿಂದಾಗಿ ದೇಶದ ನಗರಗಳಲ್ಲಿ ಸಂಭವಿಸಲಿರುವ ವಾಯುಮಾಲಿನ್ಯದ ಪ್ರಮಾಣವು ಇನ್ನಷ್ಟು ಹೆಚ್ಚಲಿದೆ!.

ನಿಯಂತ್ರಿಸುವುದೆಂತು?

ದೇಶಾದ್ಯಂತ ಅತ್ಯಂತ ವ್ಯಾಪಕವಾಗಿ ಹಬ್ಬುತ್ತಿರುವ ವಾಯುಮಾಲಿನ್ಯವು ಅನಾರೋಗ್ಯಕರ ಹಾಗೂ ಅಪಾಯಕಾರಿಯಾಗಿದ್ದು, ಇದನ್ನು ನಿಶ್ಚಿತವಾಗಿ ನಿಯಂತ್ರಿಸಲು ಕೇಂದ್ರ ಸರ್ಕಾರವು ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗುವುದು ಇದರಂತೆ ರಾಷ್ಟ್ರೀಯ ಪರಿಶುದ್ಧ ಗಾಳಿ ಕ್ರಿಯಾಯೋಜನೆಯೊಂದನ್ನು ರೂಪಿಸಿ, ಇದನ್ನು ಅನುಷ್ಠಾನಿಸುವ ಮೂಲಕ ದೇಶದ ಪ್ರತಿಯೊಂದು ನಗರಗಳು ೨೦೨೦-೨೧ ಕ್ಕೆ ಮುನ್ನ ಪರಿಶುದ್ಧ ಗಾಳಿಯ ಮಾನದಂಡಗಳಿಗೆ ಅನುಗುಣವಾಗಿರುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಇದಲ್ಲದೇ ವಾಹನಗಳು ಉಗುಳುವ ಹೊಗೆಯ ವಿಚಾರದಲ್ಲಿ ರೂಪಿಸಿರುವ ಮಾನದಂಡಗಳನ್ನು ( ಭಾರತ್ ೪, ೫ ಮತ್ತು ೬ ) ೨೦೨೦-೨೧ ಕ್ಕೆ ಮುನ್ನ ಹಣತಹಂತವಾಗಿ ಜಾರಿಗೆ ತರುವುದು ಅನಿವಾರ್ಯವೆನಿಸಲಿದೆ. ಇದರೊಂದಿಗೆ ಡೀಸೆಲ್ ಇಂಧನವನ್ನು ಬಳಸುವ ವಾಹನಗಳು ಹೊರಸೂಸುವ ಹೊಗೆಯಲ್ಲಿನ ಪ್ರದೂಷಕಗಳನ್ನು ವಿಶ್ವ ಆರೋಗ್ಯ ಸಂಸ್ಥೆಯು “ ಕ್ಯಾನ್ಸರ್ ಕಾರಕ “ ಎಂದು ಘೋಷಿಸಿದ್ದು, ಇದನ್ನು ನಿಯಂತ್ರಿಸಲು ಭಾರತ್ – ೬ ಮಾನದಂಡದ ಅನುಷ್ಠಾನ ಅತ್ಯವಶ್ಯಕವೆನಿಸುವುದು. ಅಂತೆಯೇ ಸಾರ್ವಜನಿಕ ಸಾರಿಗೆ ವಾಹನಗಳ ಸಲುವಾಗಿ ಒಂದಿಷ್ಟು ಸಹಾಯಧನದಿಂದಾಗಿ ಕಡಿಮೆಬೆಲೆಗೆ ಲಭಿಸುವ ಡೀಸೆಲ್ ಇಂಧನವನ್ನು ಬಳಸುವ ಶ್ರೀಮಂತರ ವಿಲಾಸಿ ಕಾರುಗಳು ಮತ್ತು ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳ ಮೇಲಿನ ಅಬಕಾರಿ ಸುಂಕ ಮತ್ತು ಇಂಧನದ ತೆರಿಗೆಗಳನ್ನು ಮತ್ತಷ್ಟು ಹೆಚ್ಚಿಸಬೇಕಾಗುವುದು.

ಇವೆಲ್ಲಕ್ಕೂ ಮಿಗಿಲಾಗಿ ದೇಶದ ಪ್ರತಿಯೊಂದು ನಗರ – ಮಹಾನಗರಗಳಲ್ಲಿ ಸಿ ಎನ್ ಜಿ ಅನಿಲವನ್ನು ಬಳಸುವ ಸಾರಿಗೆ ವಾಹನಗಳ ಬಳಕೆಯನ್ನುಕಡ್ಡಾಯಗೊಳಿಸುವುದು,, ಈ ಇಂಧನದ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದು ಮತ್ತು ಇದನ್ನು ಬಳಸುವ ವಾಹನಗಳ ಮೇಲೆ ವಿಧಿಸುವ ತೆರಿಗೆಯಲ್ಲಿ ರಿಯಾಯಿತಿ ನೀಡುವುದು ವಾಯುಮಾಲಿನ್ಯದ ಸಮಸ್ಯೆಯನ್ನು ನಿಯಂತ್ರಿಸಲು ಉಪಯುಕ್ತವೆನಿಸುವುದು. ಇದರೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಿಸುವ ಹಾಗೂ ಅತ್ಯಲ್ಪ ಪ್ರಮಾಣದ ಪ್ರದೂಷಕಗಳನ್ನು ವಿಸರ್ಜಿಸುವ ಮತ್ತು ಬ್ಯಾಟರಿ ಚಾಲಿತ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು.

ಅಂತಿಮವಾಗಿ ನಗರಪ್ರದೇಶಗಳ ನಿವಾಸಿಗಳಿಗೆ ಕೈಗೆಟಕುವ ದರದಲ್ಲಿ ಸಮರ್ಪಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಒದಗಿಸುವುದು ಹಾಗೂ ಇದಕ್ಕಾಗಿ ಸರ್ಕಾರದಿಂದ ಸಹಾಯಧನ ನೀಡುವುದು ಹಾಗೂ ಇದನ್ನು ಸರಿದೂಗಿಸಲು ಕಾರುಗಳ ಮೇಲಿನ ತೆರಿಗೆಯನ್ನು ಮತ್ತಷ್ಟು ಹೆಚ್ಚಿಸುವುದು, ಕಾರುಗಳಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ರದ್ದುಪಡಿಸಿ ಶುಲ್ಕ ವಿಧಿಸುವುದು, ಪಾದಚಾರಿಗಳು ನಿರಾತಂಕವಾಗಿ ಸಂಚರಿಸಬಲ್ಲ ಸುರಕ್ಷಿತ ಕಾಲುದಾರಿಗಳ ನಿರ್ಮಾಣ, ಸೈಕಲ್ ಸವಾರರಿಗೆ ಪ್ರತ್ಯೇಕ ಹಕ್ಕಿನ ಹಾದಿ, ಶೇ.೮೦ ರಷ್ಟು ನಗರವಾಸಿಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವಂತಹ ಉಪಕ್ರಮಗಳು, ವೈಯುಕ್ತಿಕ ವಾಹನಗಳ ಸಂಖ್ಯೆಯನ್ನು ನಿಯಂತ್ರಿಸುವುದೇ ಮುಂತಾದ ಉಪಕ್ರಮಗಳನ್ನು ಅನುಷ್ಠಾನಿಸುವ ಮೂಲಕ ವಾಯುಮಾಲಿನ್ಯದ ಸಮಸ್ಯೆಯನ್ನು ನಿಯಂತ್ರಿಸಬಹುದಾಗಿದೆ. ಜೊತೆಗೆ ಪರಿಸರ ಮತ್ತು ಜನಸಾಮಾನ್ಯರ ಆರೋಗ್ಯಗಳನ್ನೂ ಸಂರಕ್ಷಿಸಬಹುದಾಗಿದೆ.

ಕೊನೆಯ ಮಾತು

ದೆಹಲಿ ಸರ್ಕಾರವು ಜನವರಿ ೧ ರಿಂದ ಸಮ ಮತ್ತು ಬೆಸ ಸಂಖ್ಯೆಯಿಂದ ಅಂತ್ಯಗೊಳ್ಳುವ ನೋಂದಣಿ ಸಂಖ್ಯೆ ಇರುವ ಖಾಸಗಿ ಕಾರುಗಳು, ದಿನ ಬಿಟ್ಟು ದಿನ ಸಂಚರಿಸಬೇಕು ಎಂದು ಆದೇಶಿಸಿದೆ. ಆದರೆ ಬಹುತೇಕ ಶ್ರೀಮಂತರಲ್ಲಿ ಹಲವಾರು ಕಾರುಗಳಿದ್ದು, ಇವುಗಳಲ್ಲಿ ಸಮ ಮತ್ತು ಬೆಸ ಸಂಖ್ಯೆಯನ್ನು ಹೊಂದಿರುವ ಕಾರುಗಳು ಇರುವ ಸಾಧ್ಯತೆಗಳಿವೆ. ಇಲ್ಲದಿದ್ದಲ್ಲಿ ಶ್ರೀಮಂತರು ಈ ಸಮಸ್ಯೆಯಿಂದ ಪಾರಾಗಲು ಸಮ ಅಥವಾ ಬೆಸ ಸಂಖ್ಯೆಯಿಂದ ಅಂತ್ಯಗೊಳ್ಳುವ ನೋಂದಣಿ ಸಂಖ್ಯೆಯಿರುವ ಹೊಸ ಕಾರನ್ನು ಖರೀದಿಸುವ ಸಾಧ್ಯತೆಗಳೂ ಇವೆ!.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು


No comments:

Post a Comment