Saturday, December 5, 2015

RTI - MAKE IT MORE PEOPLE FRIENDLY



    ಮಾಹಿತಿ ಹಕ್ಕು ಕಾಯಿದೆ : ಮತ್ತಷ್ಟು ಜನಸ್ನೇಹಿ ಆಗಬೇಕಿದೆ

ದೇಶಾದ್ಯಂತ ಮಾಹಿತಿಹಕ್ಕು ಕಾಯಿದೆ ಜಾರಿಗೆ ಬಂದು ಹತ್ತು ವರ್ಷಗಳೇ ಕಳೆದಿವೆ. ಈ ಅವಧಿಯಲ್ಲಿ ಇದರಲ್ಲಿ ಕಂಡುಬಂದಿರಬಹುದಾದ ಲೋಪದೋಷಗಳು ಮತ್ತು ಇದರ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಿ, ಇದನ್ನು ಮತ್ತಷ್ಟು ಜನಸ್ನೇಹಿ ಮಾಡಬಲ್ಲ ಸರಳ ಮತ್ತು ಸುಲಭವಾದ ವಿಧಾನವೂ ಇದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಹಿನ್ನೆಲೆ

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು ೫೮ ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೌಪ್ಯತೆಯ ಮುಸುಕಿನಲ್ಲೇ ಕಾರ್ಯನಿರ್ವಹಿಸುತ್ತಿದ್ದವು. ಅಂದಿನ ದಿನಗಳಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದರೂ, ದೇಶದ ಪ್ರಜೆಗಳಿಗೆ ಮಾತ್ರ ತಮಗೆ ಬೇಕಾದ ಮಾಹಿತಿಗಳನ್ನು ಸರ್ಕಾರದಿಂದ ಪಡೆದುಕೊಳ್ಳುವ ಸ್ವಾತಂತ್ರ್ಯವೇ ಇರಲಿಲ್ಲ. ಏಕೆಂದರೆ ಸುಮಾರು ಹತ್ತು ವರ್ಷಗಳ ಹಿಂದಿನ ತನಕ " ಸರ್ಕಾರಿ ರಹಸ್ಯಗಳ ಅಧಿನಿಯಮ ೧೯೨೩ " ರಂತೆ ಸರ್ಕಾರದ ಬಳಿಯಿರುವ ಮಾಹಿತಿಗಳನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವಾಗಿತ್ತು!.

ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಎನಿಸಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಕ್ಷತೆ, ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಪ್ರಾಮಾಣಿಕತೆಗಳು ದುರ್ಲಭವೆನಿಸಿದ್ದವು. ತತ್ಪರಿಣಾಮವಾಗಿ ದೇಶದ ಪ್ರಜೆಗಳು ತಮ್ಮ ನ್ಯಾಯಸಮ್ಮತ ಕೆಲಸಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಹಲವಾರುಬಾರಿ ಅಲೆದಾಡಬೇಕಾದ ಮತ್ತು ಅಧಿಕಾರಿಗಳಿಂದ ಅನಾವಶ್ಯಕ ಕಿರುಕುಳಗಳಿಗೆ ಗುರಿಯಾಗಬೇಕಾದ ಪರಿಸ್ಥಿತಿ ಇದ್ದಿತು. ಈ ಅವ್ಯವಸ್ಥೆಯನ್ನು ಸರಿಪಡಿಸಲು ಬೆರಳೆಣಿಕೆಯಷ್ಟು ಸರ್ಕಾರೇತರ ಸ್ವಯಂಸೇವಾ ಸಂಘಟನೆಗಳು, ನಮ್ಮ ದೇಶಕ್ಕೆ ಕೋಟ್ಯಂತರ ರೂಪಾಯಿ ಸಾಲವನ್ನು ನೀಡುವ ವಿಶ್ವ ಬ್ಯಾಂಕ್ ಮತ್ತು ಕೆಲ ಪಾಶ್ಚಿಮಾತ್ಯ ದೇಶಗಳ ನಿರಂತರ ಒತ್ತಡಗಳಿಗೆ ಮಣಿದಿದ್ದ ಕೇಂದ್ರ ಸರ್ಕಾರವು, ಭಾರತದಲ್ಲಿ ಮಾಹಿತಿ ಪಡೆಯುವ ಹಕ್ಕು ಕಾಯಿದೆಯನ್ನು ೨೦೦೫ ರಲ್ಲಿ  ಜಾರಿಗೆ ತಂದಿತ್ತು.

ಅರ್ಜಿದಾರರಿಗೆ ಆತಂಕ

ಆದರೆ ೨೦೦೫ ರ ಅಕ್ಟೋಬರ್ ೧೨ ರಂದು ದೇಶಾದ್ಯಂತ ಜಾರಿಗೆ ಬಂದಿದ್ದ " ಮಾಹಿತಿ ಪಡೆಯುವ ಹಕ್ಕು ಅಧಿನಿಯಮವು, ಕೆಲವೊಂದು ದೇಶದ ಭದ್ರತೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದ ನಿರ್ದಿಷ್ಟ ಮಾಹಿತಿಗಳನ್ನು ಹೊರತುಪಡಿಸಿ, ಸರ್ಕಾರದ ಸ್ವಾಧೀನದಲ್ಲಿರುವ ಎಲ್ಲ ಮಾಹಿತಿಗಳನ್ನು ಬಹಿರಂಗಗೊಳಿಸುವುದನ್ನು ಕಡ್ಡಾಯಗೊಳಿಸಿದೆ. ಆದರೆ ಈ ಕಾಯಿದೆ ಜಾರಿಗೆ ಬಂದು ಹತ್ತು ವರ್ಷಗಳೇ ಕಳೆದಿದ್ದರೂ, ಮಾ.ಹ. ಕಾಯಿದೆಯನ್ವಯ ಅರ್ಜಿಯನ್ನು ಸಲ್ಲಿಸುವ ಕಾರ್ಯಕರ್ತರಿಗೆ ನಿಗದಿತ ಅವಧಿಯಲ್ಲಿ ಅಪೇಕ್ಷಿತ ಮಾಹಿತಿಗಳನ್ನು ನೀಡದಿರುವ, ಪ್ರಥಮ ಮೇಲ್ಮನವಿಯನ್ನು ಸಲ್ಲಿಸಿದರೂ ಸ್ಪಂದಿಸದಿರುವ, ತಮ್ಮ ಅರ್ಜಿಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸುವ – ಬೆದರಿಕೆಯನ್ನು ಒಡ್ಡುವ, ದೈಹಿಕ ಹಲ್ಲೆಯನ್ನು ನಡೆಸಿದ ಮತ್ತು ಸುಮಾರು ೫೦ ಅರ್ಜಿದಾರರು ಬಲಿಯಾದ ಪ್ರಕರಣಗಳು ನಿಜಕ್ಕೂ ಆತಂಕಕಾರಿ ಬೆಳವಣಿಗೆಗಳಾಗಿವೆ. ಈ ವಿಲಕ್ಷಣ ಬೆಳವಣಿಗೆಗಳಿಗೆ ಮಾಹಿತಿಹಕ್ಕು ಕಾಯಿದೆಯನ್ನು ಬಳಸಿ ಬಹಿರಂಗಗೊಂಡ ಭ್ರಷ್ಟಾಚಾರದ ಪ್ರಕರಣಗಳು ಮತ್ತು ಬಹುಕೋಟಿ ಹಗರಣಗಳೇ ಕಾರಣವೆನಿಸಿವೆ.

ಸರ್ಕಾರದ ಆಡಳಿತದಲ್ಲಿ ಪ್ರಜೆಗಳು ಭಾಗಿಯಾಗುವ ಪರಿಣಾಮಕಾರಿ ವಿಧಾನಗಳಲ್ಲಿ ಮಾಹಿತಿ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಪ್ರಮುಖವಾಗಿದೆ. ಈ ಕಾಯಿದೆಯು ಭಾರತದ ಪ್ರತಿಯೊಬ್ಬ ಪ್ರಜೆಗೆ ಅಪೇಕ್ಷಿತ ಮಾಹಿತಿಗಳನ್ನು ಸರ್ಕಾರದಿಂದ ಪಡೆಯುವ ಹಕ್ಕನ್ನು ನೀಡಿದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಸ್ವಾಧೀನದಲ್ಲಿರುವ ಎಲ್ಲ ಮಾಹಿತಿಗಳು ಸಾರ್ವಜನಿಕರ ಸೊತ್ತು ಎನ್ನುವುದನ್ನು ಈ ಕಾಯಿದೆ ಅಂಗೀಕರಿಸಿದೆ. ಇದೇ ಕಾರಣದಿಂದಾಗಿ ಜನಸಾಮಾನ್ಯರು ಅಪೇಕ್ಷಿಸುವ ಮಾಹಿತಿಗಳನ್ನು ನಿಗದಿತ ಅವಧಿಯಲ್ಲಿ ನೀಡುವುದು ಸರ್ಕಾರದ ಆದ್ಯ ಕರ್ತವ್ಯಗಳಲ್ಲಿ ಒಂದಾಗಿದೆ. ಆದರೆ ಪ್ರಜೆಗಳ ಪಾಲಿಗೆ ಪ್ರಬಲ ಅಸ್ತ್ರವೆಂದು ಪರಿಗಣಿತವಾದ ಈ ಕಾಯಿದೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸುತ್ತಿರುವ ನಾಗರಿಕರಿಗೆ, ಅನೇಕ ರೀತಿಯ ಅಡ್ಡಿ ಆತಂಕಗಳು ಎದುರಾಗುತ್ತಿವೆ. ಜೊತೆಗೆ ಈ ಕಾಯಿದೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ಅವಿರತವಾಗಿ ಸಾಗುತ್ತಿವೆ.

ಸ್ವಯಂಪ್ರೇರಿತ ಮಾಹಿತಿ

ಮಾಹಿತಿಹಕ್ಕು ಕಾಯಿದೆಯಾ ಸೆಕ್ಷನ್ ೪ ರನ್ವಯ ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರಗಳು ೧೭ ವಿಧದ ಮಾಹಿತಿಗಳನ್ನು ಕಡ್ಡಾಯವಾಗಿ ಹಾಗೂ ಯಾರೂ ಕೇಳದೇ ಇದ್ದರೂ ಪ್ರಕಟಿಸಬೇಕಾಗುವುದು. ಇವುಗಳಲ್ಲಿ ಪ್ರಾಧಿಕಾರದ ಸಂರಚನೆ, ಕಾರ್ಯ ನಿರ್ವಹಿಸುವ ಕ್ರಮ, ಆಯವ್ಯಯದ ವಿವರಗಳು, ಸಾರ್ವಜನಿಕರು ಭಾಗವಹಿಸಬಹುದಾದ ವೇದಿಕೆಗಳ ವಿವರ, ಅಪೇಕ್ಷಿತ ಮಾಹಿತಿಗಳನ್ನು ಪಡೆಯುವ ವಿಧಾನ ಇತ್ಯಾದಿ ಮಾಹಿತಿಗಳನ್ನು ಪ್ರಕತಿಸುವುದರೊಂದಿಗೆ,ಇವುಗಳನ್ನು ನಿಯಮಿತವಾಗಿ ಪರಿಷ್ಕರಿಸಬೇಕಾಗುತ್ತದೆ. ಪ್ರಜೆಗಳಿಗೆ ಅವಶ್ಯಕ ಮತ್ತು ಉಪಯುಕ್ತ ಮಾಹಿತಿಗಳು ನೇರವಾಗಿ ಹಾಗೂ ಸುಲಭವಾಗಿ ದೊರೆಯಬೇಕು ಎನ್ನುವುದೇ ಇದರ ಉದ್ದೇಶವಾಗಿದೆ. ಆದರೆ ರಾಜ್ಯದ ಬಹುತೇಕ ಸಾರ್ವಜನಿಕ ಪ್ರಾಧಿಕಾರಗಳು ಈ ಮಾಹಿತಿಗಳನ್ನು ಪ್ರಕಟಿಸದೇ ಇರುವುದರಿಂದ, ಈ ಕಾಯಿದೆಯ ಮೂಲ ಉದ್ದೇಶವೇ ವಿಫಲವಾಗುತ್ತಿದೆ.  ಹಾಗೂ ಇದೇ ಕಾರಣದಿಂದಾಗಿ ಈ ಮಾಹಿತಿಗಳನ್ನು ಪಡೆಯಲು ಅಪೇಕ್ಷಿಸುವ ಜನರು, ನಿಗದಿತ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತಿದೆ. ವಿಶೇಷವೆಂದರೆ ಅರ್ಜಿ ಸಲ್ಲಿಸಿದವರಿಗೂ ಅನೇಕ ಸಂದರ್ಭಗಳಲ್ಲಿ ಈ ಮಾಹಿತಿಗಳನ್ನು ನೀಡಲು ಸತಾಯಿಸಲಾಗುತ್ತಿದೆ. ತತ್ಪರಿಣಾಮವಾಗಿ ಆಡಳಿತದಲ್ಲಿ ಪಾರದರ್ಶಕತೆಯನ್ನು ತರಬೇಕು ಎನ್ನುವ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತಿದೆ. 

ಪಾರದರ್ಶಕತೆಗೊಂದು ಸುಲಭೋಪಾಯ

ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆಯನ್ನು ಜಾರಿಗೊಳಿಸುವ ಮೂಲಕ ಅಧಿಕಾರಿಗಳ ದಕ್ಷತೆ. ಪ್ರಾಮಾಣಿಕತೆ  ಹಾಗೂ ಉತ್ತರದಾಯಿತ್ವಗಳನ್ನು ಹೆಚ್ಚಿಸುವುದರೊಂದಿಗೆ, ಭ್ರಷ್ಟಾಚಾರಕ್ಕೆ ಕಡಿವಾಣವನ್ನು ತೊಡಿಸಲು ಮಾಹಿತಿಹಕ್ಕು ಕಾಯಿದೆ ಅತ್ಯಂತ ಪರಿಣಾಮಕಾರಿ ಎನಿಸುತ್ತದೆ. ಖ್ಯಾತ ಮಾಹಿತಿಹಕ್ಕು ಕಾರ್ಯಕರ್ತ ಮತ್ತು ಕೇಂದ್ರ ಮಾಹಿತಿ ಆಯುಕ್ತರಾಗಿದ್ದ ಶೈಲೇಶ್ ಗಾಂಧಿಯವರು ಹೇಳುವಂತೆ, ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆಯನ್ನು ಜಾರಿಗೆ ತರಬಲ್ಲ ಸುಲಭೋಪಾಯವೊಂದು ಇಂತಿದೆ.

ದೇಶದ ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ದೈನಂದಿನ ಕೆಲಸಕಾರ್ಯಗಳಿಗಾಗಿ ಕಂಪ್ಯೂಟರ್ ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಇದರೊಂದಿಗೆ ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರಗಳು ತಮ್ಮದೇ ಆದ ಅಂತರ್ಜಾಲ ತಾಣವೊಂದನ್ನು ಸಿದ್ಧಪಡಿಸಿ, ತಮ್ಮ ಕಚೇರಿಯ ಎಲ್ಲ ವ್ಯವಹಾರಗಳನ್ನು ಈ ತಾಣಗಳಲ್ಲಿ ನಿಯಮಿತವಾಗಿ ಪ್ರಕಟಿಸಿದಲ್ಲಿ, ಪಾರದರ್ಶಕತೆಯು ಸುಲಭದಲ್ಲೇ ಜಾರಿಗೊಳ್ಳುತ್ತದೆ. ಉದಾಹರಣೆಗೆ ಸ್ಥಳೀಯ ಸಂಸ್ಥೆಯೊಂದು ತನ್ನ ಮುಂಗಡ ಆಯವ್ಯಯ ಪತ್ರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಲಭಿಸಿರುವ ಅನುದಾನದ ವಿವರಗಳು, ಹಮ್ಮಿಕೊಂಡಿರುವ ಯೋಜನೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆ ಮತ್ತಿತರ ವಿವರಗಳು, ಆಸ್ತಿತೆರಿಗೆ ಮತ್ತು ಕುಡಿಯುವ ನೀರಿನ ಶುಲ್ಕಗಳ ಸಂಗ್ರಹದ ವಿವರಗಳು, ಅನ್ಯಮೂಲಗಳಿಂದ ಲಭಿಸುವ ಆದಾಯ, ಕಟ್ಟಡ ಮತ್ತಿತರ ನಿರ್ಮಾಣ ಕಾಮಗಾರಿಗಳಿಗಾಗಿ ನೀಡಿರುವ ಅನುಮತಿ ಮತ್ತಿತರ ವಿವರಗಳೇ ಮುಂತಾದ ಮಾಹಿತಿಗಳನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದಲ್ಲಿ, ಇಂತಹ ಮಾಹಿತಿಗಳನ್ನು ಪಡೆದುಕೊಳ್ಳಲು ಅರ್ಜಿಸಲ್ಲಿಸುವ ಅವಶ್ಯಕತೆಯೇ ಉದ್ಭವಿಸದು. ಜೊತೆಗೆ ಸಮಗ್ರ ವ್ಯವಹಾರಗಳು ಪಾರದರ್ಶಕವಾಗಿ ನಡೆಯುವುದರಿಂದ, ಅವ್ಯವಹಾರ ಮತ್ತು ವಂಚನೆಗಳಿಗೆ ಆಸ್ಪದವಿರದು. ಉದಾಹರಣೆಗೆ ನಿರ್ದಿಷ್ಟ ವಸ್ತುವೊಂದನ್ನು ಖರೀದಿಸಲು ಸ್ಥಳೀಯ ಸಂಸ್ಥೆಯು ಟೆಂಡರ್ ಗಳನ್ನು ಆಹ್ವಾನಿಸಿದ ಬಳಿಕ ಸಲ್ಲಿಕೆಯಾದ ಎಲ್ಲ ಟೆಂಡರ್ ಗಳ ವಿವರಗಳನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸಬೇಕಾಗುವುದರಿಂದ, ಭ್ರಷ್ಟಾಚಾರ ಮತ್ತು ವಂಚನೆಗಳಿಗೆ ಅವಕಾಶವೇ ಇರುವುದಿಲ್ಲ. ಆಕಸ್ಮಿಕವಾಗಿ ವಂಚನೆ ನಡೆದರೂ, ಅಂತರ್ಜಾಲ ತಾಣದಲ್ಲಿ ತತ್ಸಂಬಂಧಿತ ಮಾಹಿತಿಯನ್ನು ಗಮನಿಸಿದ ನಾಗರಿಕರಿಗೆ ಇದು ತಿಳಿಯುವುದರಿಂದ, ಮೋಸ – ವಂಚನೆಗಳ ಸಂಭಾವ್ಯತೆಯೂ ನಿವಾರಿಸಲ್ಪಡುತ್ತದೆ.

ಹಣ – ಸಮಯಗಳ ಉಳಿತಾಯ

ಸರ್ಕಾರದ ಪ್ರತಿಯೊಂದು ಇಲಾಖೆಗಳ ವ್ಯವಹಾರಗಳನ್ನು ಕಂಪ್ಯೂಟರೀಕರಣಗೊಳಿಸಿದಲ್ಲಿ, ಈ ಕಾಗದಪತ್ರಗಳನ್ನು ಸಿದ್ಧಪಡಿಸಲು, ಕಡತಗಳಲ್ಲಿ ಇರಿಸಲು, ಸಂರಕ್ಷಿಸಲು ಮತ್ತು ಅವಶ್ಯಕತೆಯಿದ್ದಾಗ ಇವುಗಳನ್ನು ಹುಡುಕಲು ವ್ಯಯಿಸುವ ಸಮಯ ಮತ್ತು ಕೋಟ್ಯಂತರ ರೂಪಾಯಿಗಳ ವೆಚ್ಚಗಳನ್ನೂ ಉಳಿಸಬಹುದಾಗಿದೆ. ಜೊತೆಗೆ ಪ್ರಮುಖ ಕಡತಗಳು ಅಥವಾ ಇವುಗಳಲ್ಲಿರುವ ಕೆಲ ದಾಖಲೆಗಳು ಕಾಣೆಯಾಗುವಂತಹ ಘಟನೆಗಳನ್ನು ಸುಲಭದಲ್ಲೇ ತಡೆಗಟ್ಟಬಹುದಾಗಿದೆ. ಶೈಲೇಶ್ ಗಾಂಧಿಯವರ ಈ ಅಮೂಲ್ಯ ಸಲಹೆಯನ್ನು ಕೇಂದ್ರ ಸರ್ಕಾರವು ಅನುಷ್ಠಾನಗೊಳಿಸಿದಲ್ಲಿ, ನಿಶ್ಚಿತವಾಗಿಯೂ ಮಾಹಿತಿಹಕ್ಕು ಕಾಯಿದೆಯು ಮತ್ತಷ್ಟು “ ಜನಸ್ನೇಹಿ “ ಮತ್ತು ಅತ್ಯಂತ ಪರಿಣಾಮಕಾರಿ ಎನಿಸುವುದರಲ್ಲಿ ಸಂದೇಹವಿಲ್ಲ. ಅಂತೆಯೇ ಇದನ್ನು ಜಾರಿಗೊಳಿಸಿದ್ದ ಮೂಲ ಉದ್ದೇಶವು ಈಡೇರುವುದರಲ್ಲಿ ಅಡ್ಡಿ ಆತಂಕಗಳು ಉದ್ಭವಿಸುವ ಸಾಧ್ಯತೆಗಳೇ ಇಲ್ಲ!.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 




No comments:

Post a Comment