Monday, December 21, 2015

SOLID WASTE MANAGEMENT - DO IT PROPERLY


                     ವೈಜ್ಞಾನಿಕ ತಾಜ್ಯವಿಲೇವಾರಿ : ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ

ರಾಜ್ಯದ ಬಹುತೇಕ ನಗರ – ಮಹಾನಗರಗಳಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಆದರೆ ಆಧುನಿಕ ಮತ್ತು ವೈಜ್ಞಾನಿಕ ವಿಧಾನಗಳಿಂದ ತ್ಯಾಜ್ಯಗಳನ್ನು ವಿಲೇವಾರಿ ಮಾಡಬಲ್ಲ ವ್ಯವಸ್ಥೆಗಳಿರುವ ನಗರ – ಮಹಾನಗರಗಳೂ ಇದನ್ನು ಕ್ರಮಬದ್ಧವಾಗಿ ನಡೆಸಲು ವಿಫಲವಾಗಿವೆ. ಈ ಅನಾರೋಗ್ಯಕರ ಮತ್ತು ಅಪಾಯಕಾರಿ ಸಮಸ್ಯೆಗೆ ಕೇವಲ ಸ್ಥಳೀಯ ಸಂಸ್ಥೆಗಳು ಮಾತ್ರವಲ್ಲ, ಸ್ಥಳೀಯ ನಿವಾಸಿಗಳ ಅಸಹಕಾರವೂ ಪ್ರಮುಖ ಕಾರಣವೆನಿಸಿದೆ. ಕರ್ನಾಟಕ ಮುನಿಸಿಪಲ್ ಕಾಯಿದೆಯಂತೆ ತ್ಯಾಜ್ಯಗಳು ಉತ್ಪನ್ನವಾಗುವ ಮೂಲಗಳಲ್ಲೇ ( ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಂದ ) ಈ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ನಿಯೋಜಿತ ಸಂಗ್ರಾಹಕರಿಗೆ ನೀಡಬೇಕಿದ್ದು, ಇದಕ್ಕಾಗಿ ನಿಗದಿತ ಮಾಸಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಅಲ್ಪಮೊತ್ತದ ಶುಲ್ಕವನ್ನು ತೆರಲು ನಿರಾಕರಿಸುವ ಅನೇಕ ಜನರು, ತಮ್ಮಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುತ್ತಿರುವುದರಿಂದಾಗಿ, ಕಣ್ಣು ಹಾಯಿಸಿದಲ್ಲೆಲ್ಲಾ ತ್ಯಾಜ್ಯಗಳ ರಾಶಿಗಳೇ ಕಾಣಸಿಗುತ್ತವೆ. ವಿಶೇಷವೆಂದರೆ ಆಧುನಿಕ ತ್ಯಾಜ್ಯ ವಿಲೇವಾರಿ ಘಟಕಗಳಿರುವ ನಗರ – ಮಹಾನಗರಗಳಲ್ಲೂ, ವೈಜ್ಞಾನಿಕ ವಿಧಾನಗಳಿಂದ ಹಾಗೂ ಸುರಕ್ಷಿತವಾಗಿ ತ್ಯಾಜ್ಯಗಳನ್ನು ವಿಲೇವಾರಿ ಮಾಡದಿರುವುದು ಮಾತ್ರ ನಂಬಲಸಾಧ್ಯವೆನಿಸುತ್ತದೆ. ಇದೀಗ ರಾಜ್ಯದ ಉಚ್ಛ ನ್ಯಾಯಾಲಯವು ಬೆಂಗಳೂರು ಮಹಾನಗರ ಪಾಲಿಕೆ ಮತ್ತು “ ತ್ಯಾಜ್ಯಗಳ ಉತ್ಪಾದಕರಿಗೆ “ ( ಸ್ಥಳೀಯ ನಿವಾಸಿಗಳಿಗೆ ) ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಸೂಚನೆಗಳನ್ನು ನೀಡಿದ್ದು, ಇವುಗಳನ್ನು ಸಮರ್ಪಕವಾಗಿ ಪರಿಪಾಲಿಸುವಂತೆ ಆದೇಶಿಸಿದೆ.

ಅವೈಜ್ಞಾನಿಕ ವ್ಯವಸ್ಥೆ

ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ  ದಿನನಿತ್ಯ ಉತ್ಪನ್ನವಾಗುತ್ತಿರುವ ಅಗಾಧ ಪ್ರಮಾಣದ ಹಾಗೂ ವೈವಿಧ್ಯಮಯ ಘನತ್ಯಾಜ್ಯಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಿ,ಸುರಕ್ಷಿತವಾಗಿ ತ್ಯಾಜ್ಯವಿಲೇವಾರಿ ಘಟಕಗಳಿಗೆ ಸಾಗಿಸಿದ ಬಳಿಕ ವೈಜ್ಞಾನಿಕ ವಿಧಿವಿಧಾನಗಳಿಂದ ವಿಲೇವಾರಿ ಮಾಡಲು ಪಾಲಿಕೆಯು ದಯನೀಯವಾಗಿ ವಿಫಲಗೊಂಡಿದೆ. ಈ ವೈಫಲ್ಯಕ್ಕೆ ಸ್ಥಳೀಯ ನಿವಾಸಿಗಳ ಅಸಹಕಾರ, ಹೆಚ್ಚುತ್ತಲೇ ಇರುವ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುತ್ತಿರುವ ತ್ಯಾಜ್ಯಗಳ ಪ್ರಮಾಣ ಮತ್ತು ಅವಶ್ಯಕ ಸಂಖ್ಯೆಯ ತ್ಯಾಜ್ಯ ವಿಲೇವಾರಿ ಘಟಕಗಳ ಕೊರತೆಗಳೂ ಪರೋಕ್ಷವಾಗಿ ಕಾರಣವೆನಿಸಿದೆ. ಇದರೊಂದಿಗೆ ಈಗಾಗಲೇ ತುಂಬಿ ತುಳುಕುತ್ತಿರುವ ಹಳೆಯ ತ್ಯಾಜ್ಯ ವಿಲೇವಾರಿ ಘಟಕಗಳ ಆಸುಪಾಸಿನ ನಿವಾಸಿಗಳು, ಈ ಘಟಕಗಳಲ್ಲಿ ತ್ಯಾಜ್ಯಗಳನ್ನು ಸುರಿಯದಂತೆ ಮತ್ತು ನೂತನ ಘಟಕಗಳಿಗಾಗಿ ಆಯ್ಕೆಮಾಡಿರುವ ಸ್ಥಳಗಳ ಸಮೀಪದ ನಿವಾಸಿಗಳು ಘಟಕವನ್ನು ಆರಂಭಿಸದಂತೆ ನಡೆಸುತ್ತಿರುವ ಪ್ರತಿಭಟನೆಗಳಿಂದಾಗಿ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತಿದೆ. ಈ ಅಪಾಯಕಾರಿ ಮತ್ತು ಅನಾರೋಗ್ಯಕರ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಕೆಲ ಸಾರ್ವಜನಿಕ ಮತ್ತು ಸ್ವಯಂ ಸೇವಾ ಸಂಘಟನೆಗಳು ರಾಜ್ಯದ ಉಚ್ಛ ನ್ಯಾಯಾಲಯದ ಮೊರೆಹೋಗಿದ್ದವು. ಇದೀಗ ನ್ಯಾಯಾಲಯವು ಈ ವಿಚಾರದಲ್ಲಿ ಮಧ್ಯಂತರ ತೀರ್ಪೊಂದನ್ನು ನೀಡಿದ್ದು, ತ್ಯಾಜ್ಯ ಸಂಗ್ರಹ, ಸಾಗಾಣಿಕೆ ಮತ್ತು ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡಲು ಮಾರ್ಗದರ್ಶಿ ಸಲಹೆ ಸೂಚನೆಗಳನ್ನು ನೀಡಿದೆ. ನ್ಯಾಯಾಲಯದ ಈ ಆದೇಶವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದಲ್ಲಿ ಬೆಂಗಳೂರಿನ ನಿವಾಸಿಗಳನ್ನು ಶಾಪದೋಪಾದಿಯಲ್ಲಿ ಕಾಡುತ್ತಿರುವ ಬೃಹತ್ ಸಮಸ್ಯೆಯೊಂದು ನಿಶ್ಚಿತವಾಗಿಯೂ ಬಗೆಹರಿಯುವ ಸಾಧ್ಯತೆಗಳೂ ಇವೆ. ಆದರೆ ಇದಕ್ಕೆ ಸ್ಥಳೀಯ ನಿವಾಸಿಗಳ ಮನಸ್ಪೂರ್ವಕ ಸಹಕಾರವು ಅತ್ಯವಶ್ಯಕವೆನಿಸಲಿದೆ.

ತ್ಯಾಜ್ಯಗಳ ನಿರ್ವಹಣೆ – ವಿಲೇವಾರಿ
ಉಚ್ಛ ನ್ಯಾಯಾಲಯದ ಆದೇಶದಂತೆ ಇನ್ನುಮುಂದೆ ತ್ಯಾಜ್ಯಗಳ ಉತ್ಪಾದಕರು ಅರ್ಥಾತ್ ಬೆಂಗಳೂರಿನ ನಿವಾಸಿಗಳು ತಮ್ಮಲ್ಲಿ ಉತ್ಪನ್ನವಾಗುವ ಹಸಿ, ಒಣ ಮತ್ತು ಅಪಾಯಕಾರಿ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಇದನ್ನು ನಿಯೋಜಿತ  ತ್ಯಾಜ್ಯ ಸಂಗ್ರಹಕಾರರಿಗೆ ನೀಡಬೇಕಾಗುತ್ತದೆ. ಅಂತೆಯೇ ತುಸು ಅಧಿಕ ಪ್ರಮಾಣದ ತ್ಯಾಜ್ಯಗಳನ್ನು ಉತ್ಪಾದಿಸುವವರು, ಈ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ನೀಡುವಂತಿಲ್ಲ. ಮಣ್ಣಿನಲ್ಲಿ ಕರಗಿ ಬೇರೆಯಬಲ್ಲ ಹಾಗೂ ಹಸಿ ತ್ಯಾಜ್ಯಗಳನ್ನು ಹಸಿರು ಬಣ್ಣದ ತೊಟ್ಟಿಯಲ್ಲಿ ಹಾಗೂ ಅಪಾಯಕಾರಿ ತ್ಯಾಜ್ಯಗಳನ್ನು ಕೆಂಪು ಬಣ್ಣದ ತೊಟ್ಟಿಗಳಲ್ಲಿ  ಮತ್ತು ಮಣ್ಣಿನಲ್ಲಿ ಕರಗಿ ಬೇರೆಯದ ಹಾಗೂ ಒಣ ತ್ಯಾಜ್ಯಗಳನ್ನು ಮರುಬಳಕೆ ಮಾಡಬಹುದಾದ ಚೀಲಗಳಲ್ಲಿ ತುಂಬಿಸಿಡುವುದು ಕಡ್ಡಾಯವೆನಿಸಲಿದೆ.

ಹಸಿರು ಬಣ್ಣದ ತೊಟ್ಟಿಗಳಲ್ಲಿ ಅಡುಗೆಮನೆಯ ತ್ಯಾಜ್ಯಗಳು, ತರಕಾರಿಗಳು,ಹಣ್ಣುಗಳ ಸಿಪ್ಪೆ, ಕೊಳೆತ ತರಕಾರಿ – ಹಣ್ಣುಗಳು, ಮೀನು, ಮಾಂಸ ಹಾಗೂ ಕೋಳಿಗಳ ಮುಳ್ಳು – ಎಲುಬುಗಳು, ಬೇಯಿಸಿದ ಮತ್ತು ಬಳಸಿ ಉಳಿದ ಆಹಾರಪದಾರ್ಥಗಳು, ಬಳಸಿರುವ ಕಾಫಿ – ಚಹಾ ಹುಡಿ ಮತ್ತಿತರ ತ್ಯಾಜ್ಯಗಳನ್ನು ಹಾಕಬೇಕಾಗುವುದು. ಅದೇ ರೀತಿಯಲ್ಲಿ ಕೆಂಪು ಬಣ್ಣದ ತೊಟ್ಟಿಯಲ್ಲಿ ಬ್ಯಾಂಡೇಜ್, ಬಳಸಿದ ಹತ್ತಿ, ಮಕ್ಕಳಿಗೆ ತೊಡಿಸಿದ ಡಯಾಪರ್ , ಮಹಿಳೆಯರು ಬಳಸಿದ ಸ್ಯಾನಿಟರಿ ಪ್ಯಾಡ್, ಹಳೆಯ ರೇಜರ್ – ಬ್ಲೇಡ್, ನಿರುಪಯುಕ್ತ ಕಬ್ಬಿಣದ ವಸ್ತುಗಳು ಹಾಗೂ ಔಷದಗಳು, ಒಡೆದ ಗಾಜಿನ ಚೂರುಗಳಂತಹ ವಸ್ತುಗಳನ್ನು ಹಾಕಬೇಕಾಗುವುದು. ಇದಲ್ಲದೇ ವಿವಿಧ ದಿನಬಳಕೆ ವಸ್ತುಗಳನ್ನು ಪ್ಯಾಕ್ ಮಾಡಿರುವ ಪ್ಲಾಸ್ಟಿಕ್ ಮತ್ತಿತರ ಹೊರಕವಚಗಳು, ಪ್ಲಾಸ್ಟಿಕ್ ಕೈಚೀಲ, ಬಾಟಲಿ,ತಟ್ಟೆ,ಲೋಟ ಹಾಗೂ ಚಮಚಗಳು,ರಟ್ಟಿನ ಪೆಟ್ಟಿಗೆಗಳು, ಅಲ್ಯುಮಿನಿಯಂ ಹಾಳೆಗಳು, ಪ್ಲಾಸ್ಟಿಕ್ ಹಾಗೂ ಅಲ್ಯುಮಿನಿಯಂ ಕರಡಿಗೆಗಳು, ರಬ್ಬರ್ ಹಾಗೂ ಹಳೆಯ ಪಾದರಕ್ಷೆಗಳು, ಕೆಟ್ಟು ಹೋದ ಸಿ ಎಫ್ ಎಲ್, ಟ್ಯೂಬ್ ಲೈಟ್ ಹಾಗೂ ಸಾಮಾನ್ಯ ಬಲ್ಬ್ ಗಳು, ಬ್ಯಾಟರಿಗಳು, ಹಳೆಯ ಪೊರಕೆ ಮತ್ತಿತರ ನಿರುಪಯುಕ್ತ ವಸ್ತುಗಳನ್ನು ಮರುಬಳಕೆ ಮಾಡಬಹುದಾದ ಚೀಲಗಳಲ್ಲಿ ಸಂಗ್ರಹಿಸಿ ಇರಿಸಬೇಕಾಗುತ್ತದೆ.
ಈ ರೀತಿಯಲ್ಲಿ ವಸತಿ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಪ್ರತ್ಯೇಕಿಸಿ ಇರಿಸಿರುವ ತ್ಯಾಜ್ಯಗಳನ್ನು ನಿಯೋಜಿತ ಸಂಗ್ರಹಗಾರರು ಪ್ರತಿನಿತ್ಯ ನಿಗದಿತ ಸಮಯದಲ್ಲಿ ಸಂಗ್ರಹಿಸಿದ ಬಳಿಕ,  ನೇರವಾಗಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಸಾಗಿಸಬೇಕು. ಹಾಗೂ ತ್ಯಾಜ್ಯ ಸಾಗಾಟದ ವಾಹನದಲ್ಲಿ ತುಂಬಿಸಿದ ತ್ಯಾಜ್ಯಗಳನ್ನು ಸಂಪೂರ್ಣವಾಗಿ ಮುಚ್ಚಿಯೇ ಸಾಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಇದರೊಂದಿಗೆ ಮಾರುಕಟ್ಟೆಗಳು ಮತ್ತು ಉದ್ಯಾನವನಗಳಲ್ಲಿ ಹೇರಳವಾಗಿ ಉತ್ಪನ್ನವಾಗುವ ಹಾಗೂ ಸುಲಭದಲ್ಲೇ ಕೊಳೆಯುವಂತಹ ತರಕಾರಿ, ಹಣ್ಣು ಹಂಪಲುಗಳು, ಮೀನು ಮತ್ತು ಮಾಂಸಗಳ ತ್ಯಾಜ್ಯಗಳನ್ನು ಬಳಸಿ ಆಯಾ ಸ್ಥಳಗಳಲ್ಲೇ ಗೊಬ್ಬರವನ್ನಾಗಿ ಪರಿವರ್ತಿಸಬಲ್ಲ ವ್ಯವಸ್ಥೆಯನ್ನು ಸಿದ್ಧಪಡಿಸುವ ಮೂಲಕ, ಇವುಗಳನ್ನು ಸಂಗ್ರಹಿಸುವ ಮತ್ತು  ಸಾಗಿಸುವ ವೆಚ್ಚ ಮತ್ತು ಸಮಯಗಳನ್ನು ಉಳಿಸುವುದರೊಂದಿಗೆ, ಈ ಗೊಬ್ಬರವನ್ನು ಉದ್ಯಾನವನಗಳಲ್ಲಿ ಬಳಸಬಹುದಾಗಿದೆ ಎಂದು ಹೇಳಿದೆ.

ಇವೆಲ್ಲಕ್ಕೂ ಮಿಗಿಲಾಗಿ ಘನತ್ಯಾಜ್ಯ ನಿರ್ವಹಣಾ ನಿಯಮಗಳು ೨೦೧೫ ನ್ನು ಪರಿಪಾಲಿಸದೇ ಇರುವುದು ಕರ್ನಾಟಕ ಮುನಿಸಿಪಲ್ ಕಾಯಿದೆಯ ಸೆಕ್ಷನ್ ೪೩೧ ಎ ಅನ್ವಯ ಶಿಕ್ಷಾರ್ಹ ಅಪರಾಧವಾಗಿದ್ದು, ಇದನ್ನು ಉಲ್ಲಂಘಿಸಿದವರಿಗೆ ದಂಡವನ್ನು ವಿಧಿಸಬಹುದಾಗಿದೆ ಎಂದೂ ನ್ಯಾಯಾಲಯವು ಅಭಿಪ್ರಾಯಿಸಿದೆ.

ಅದೇನೇ ಇರಲಿ, ಇದೀಗ ರಾಜ್ಯದ ಉಚ್ಛ ನ್ಯಾಯಾಲಯದ ಈ ಆದೇಶವನ್ನು ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರಿನ ನಿವಾಸಿಗಳು ಪರಿಪಾಲಿಸುವರೇ ಮತ್ತು ತಮ್ಮನ್ನು ನಿರಂತರವಾಗಿ ಕಾಡುತ್ತಿರುವ ಗಂಭೀರ ಸಮಸ್ಯೆಯೊಂದನ್ನು ಪರಿಹರಿಸಲು ಮನಸ್ಪೂರ್ವಕ ಸಹಕಾರವನ್ನು ನೀಡುವರೇ?, ಎನ್ನುವುದನ್ನು ಕಾಲವೇ ಹೇಳಬೇಕಷ್ಟೆ!.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು


ಚಿತ್ರ – ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪ್ರತ್ಯೇಕಿಸದೇ ಸುರಿದಿರುವ ತ್ಯಾಜ್ಯಗಳು   


     

No comments:

Post a Comment