Wednesday, December 30, 2015

VIOLATION OF TRAFFIC RULES.........


ಸಂಚಾರ ನಿಯಮಗಳನ್ನು ಉಲ್ಲಂಘಿಸುವವರನ್ನು ನಿಯಂತ್ರಿಸುವುದೆಂತು?
ರಾಜ್ಯದ ಪ್ರತಿಯೊಂದು ನಗರ - ಪಟ್ಟಣಗಳಲ್ಲಿ ವರ್ಷಂಪ್ರತಿ  ಜನವರಿ ತಿಂಗಳಿನಲ್ಲಿ ಸಾರಿಗೆ ಇಲಾಖೆ ಮತ್ತು ಸಂಚಾರ ವಿಭಾಗದ ಆರಕ್ಷಕರ ಸಂಯುಕ್ತ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಸಪ್ತಾಹವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಂಚಾರ ನಿಯಮಗಳ ಪಾಲನೆ ಮತ್ತು ಸುರಕ್ಷಿತ ಜನ - ವಾಹನಗಳ ಸಂಚಾರ ಮತ್ತಿತರ ವಿಚಾರಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ದೇವರ ವರ್ಷಾವಧಿ ಜಾತ್ರೆಯಂತೆ ತಪ್ಪದೇ ಜರಗುವ ಈ ಸಪ್ತಾಹದ ಬಳಿಕ, ಜನಸಾಮಾನ್ಯರು ಹಾಗೂ ಸಾರಿಗೆ ಇಲಾಖೆ ಮತ್ತು ಸಂಚಾರ ವಿಭಾಗದ ಆರಕ್ಷಕರು ಈ ಪ್ರಮುಖ ವಿಚಾರವನ್ನೇ ಮರೆತುಬಿಡುತ್ತಾರೆ!.

ನಿಯಮಗಳ ಉಲ್ಲಂಘನೆ

ದೇಶದ ರಸ್ತೆಗಳಲ್ಲಿ ಜನ – ವಾಹನಗಳ ಸುಗಮ ಸಂಚಾರಕ್ಕಾಗಿ ಅನೇಕ ನೀತಿನಿಯಮಗಳು ಮತ್ತು ಕಾನೂನುಗಳನ್ನು ರೂಪಿಸಲಾಗಿದೆ. ಇವೆಲ್ಲವನ್ನೂ ಚಾಚೂ ತಪ್ಪದೆ ಪರಿಪಾಲಿಸಿದಲ್ಲಿ ಸಂಚಾರ ಸಮಸ್ಯೆಗಳು ಮತ್ತು ರಸ್ತೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳನ್ನು ನಿಶ್ಚಿತವಾಗಿಯೂ ನಿಯಂತ್ರಿಸಬಹುದಾಗಿದೆ. ಅಂತೆಯೇ ರಸ್ತೆ ಅಪಘಾತಗಳಿಂದ ಸಂಭವಿಸುವ ಮರಣಗಳ ಪ್ರಮಾಣವನ್ನೂ ನಿಸ್ಸಂದೇಹವಾಗಿ ನಿಯಂತ್ರಿಸಬಹುದಾಗಿದೆ. ಆದರೆ ಈ ನಿಯಮಗಳು ಮತ್ತು ಕಾನೂನುಗಳನ್ನು ಸ್ವಯಂಪ್ರೇರಿತರಾಗಿ ಪರಿಪಾಲಿಸುವ ಹವ್ಯಾಸವು ರಸ್ತೆಗಳನ್ನು ಬಳಸುವವರಲ್ಲಿ ಇಲ್ಲದಿರುವ ಕಾರಣದಿಂದಾಗಿಯೇ, ಗಂಭೀರ ಅಪಘಾತಗಳೊಂದಿಗೆ ಅಯಾಚಿತ ಸಮಸ್ಯೆಗಳು ಉದ್ಭವಿಸುತ್ತವೆ. ಜೊತೆಗೆ ಪಾದಚಾರಿಗಳೂ ಸೇರಿದಂತೆ, ಲಕ್ಷಾಂತರ ಅಮಾಯಕರ ಪ್ರಾಣಹಾನಿಗೆ ಕಾರಣವೆನಿಸುತ್ತಿದೆ.

 ಸಾಮಾನ್ಯವಾಗಿ ಸಂಚಾರ ವಿಭಾಗದ ಆರಕ್ಷಕರು  ಉಪಸ್ಥಿತರಿರುವ ಸ್ಥಳಗಳಲ್ಲಿ ಅಧಿಕತಮ ವಾಹನಗಳ ಚಾಲಕರು ಸಂಚಾರ ನಿಯಮಗಳನ್ನು ತಪ್ಪದೇ ಪರಿಪಾಲಿಸುವುದನ್ನು ನೀವೂ ಕಂಡಿರಲೇಬೇಕು. ಆದರೆ ಆರಕ್ಷಕರು ಹಾಜರಿಲ್ಲದ  ಸ್ಥಳಗಳಲ್ಲಿ ಅಥವಾ ಇವರ ಅನುಪಸ್ಥಿತಿಯಲ್ಲಿ, ಅನೇಕ ಚಾಲಕರು ಸಂಚಾರ ನಿಯಮಗಳನ್ನು ರಾಜಾರೋಷವಾಗಿ ಉಲ್ಲಂಘಿಸಲು ಹಿಂಜರಿಯುವುದಿಲ್ಲ!.

ಸಾಮಾನ್ಯವಾಗಿ ಸಂಚಾರ ನಿಯಮಗಳ ಉಲ್ಲಂಘನೆಯ ಪ್ರಕರಣಗಳಲ್ಲಿ ವಾಹನ ಚಾಲಕರು ವಾಹನ ಚಾಲನಾ ಪರವಾನಿಗೆ ಇಲ್ಲದಿದ್ದರೂ ವಾಹನ ಚಲಾಯಿಸುವುದು, ಅತಿವೇಗದ ಚಾಲನೆ, ಹೆಲ್ಮೆಟ್  - ಸೀಟ್ ಬೆಲ್ಟ್ ಧರಿಸದಿರುವುದು, ಪ್ರವೇಶ ನಿಷೇಧಿಸಿರುವ ರಸ್ತೆಗಳಲ್ಲಿ ವಾಹನ ಚಲಾಯಿಸುವುದು, ದ್ವಿಚಕ್ರ ವಾಹನಗಳಲ್ಲಿ  ತ್ರಿಮೂರ್ತಿಗಳು ಸಂಚರಿಸುವುದು,ಮೊಬೈಲ್ ದೂರವಾಣಿಯಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವುದು, ಅಮಲು ಪದಾರ್ಥ – ಮದ್ಯ ಸೇವಿಸಿ ವಾಹನ ಚಲಾಯಿಸುವುದೇ ಮುಂತಾದ ಅಪಾಯಕಾರಿ ಹವ್ಯಾಸಗಳು ಪ್ರಮುಖವಾಗಿವೆ. ಇಂತಹ ಕೆಟ್ಟ ಹವ್ಯಾಸವು ಸ್ವಯಂ ಚಾಲಕರಿಗೆ ಮಾತ್ರವಲ್ಲ, ಅನ್ಯ ವಾಹನಗಳು – ಚಾಲಕರಿಗೆ ಮತ್ತು ರಸ್ತೆಯನ್ನು ಬಳಸುವ ಪಾದಚಾರಿಗಳು ಮತ್ತಿತರರ ಪ್ರಾಣಕ್ಕೆ ಎರವಾಗುವ ಸಾಧ್ಯತೆಗಳಿವೆ.

ಸಾರಿಗೆ ನಿಯಮಗಳ ಉಲ್ಲಂಘನೆಯ ಪ್ರಕರಣಗಳಲ್ಲಿ ಮೇಲೆ ನಮೂದಿಸಿದ ಕೆಲ ಹವ್ಯಾಸಗಳೊಂದಿಗೆ ವಾಹನಗಳ ಜೀವಿತಾವಧಿ ತೆರಿಗೆಯನ್ನು ಪಾವತಿಸದಿರುವುದು, ನೂತನ ವಾಹನಗಳನ್ನು ನೋಂದಣಿ ಮಾಡಿಸದೇ ರಸ್ತೆಯಲ್ಲಿ ಓಡಿಸುವುದು, ನೆರೆಯ ರಾಜ್ಯಗಳಲ್ಲಿ ನೋಂದಣಿ ಮಾಡಿರುವ ವಾಹನಗಳನ್ನು ರಾಜ್ಯದಲ್ಲಿ ನೋಂದಣಿ ಮಾಡಿಸದೇ ಬಳಸುವುದು, ನಿಗದಿತ ಪ್ರಮಾಣಕ್ಕಿಂತ ಅಧಿಕ ಸರಕುಗಳನ್ನು ಅಥವಾ ಪ್ರಯಾಣಿಕರನ್ನು ಹೇರುವುದು, ಸರಕು ಸಾಗಿಸುವ ವಾಹನಗಳಲ್ಲಿ ಜನರನ್ನು ಸಾಗಿಸುವುದು, ಸುಸ್ಥಿತಿಯಲ್ಲಿಲ್ಲದ ವಾಹನಗಳನ್ನು ಬಳಸುವುದು, ಲಾರಿಗಳ ಗಾತ್ರಕ್ಕಿಂತ ಉದ್ದದ ಅಥವಾ ಹೊರ ಚಾಚುವ ಸರಕುಗಳನ್ನು ಸಾಗಿಸುವುದು, ಬಸ್ಸುಗಳ ಮೇಲೆ ಅತಿಯಾದ ಪ್ರಮಾಣದಲ್ಲಿ ಸರಕುಗಳನ್ನು ತುಂಬಿಸಿ ಸಾಗಿಸುವುದೇ ಮುಂತಾದ ನಿಯಮಗಳ ಉಲ್ಲಂಘನೆಗಳ ಪ್ರಕರಣಗಳು ಪ್ರಮುಖವಾಗಿವೆ. ತತ್ಪರಿಣಾಮವಾಗಿ ಅನಿರೀಕ್ಷಿತ ಅಪಘಾತ ಸಂಭವಿಸಿದಲ್ಲಿ, ಸಾವುನೋವಿನ ಪ್ರಮಾಣಗಳು ಸ್ವಾಭಾವಿಕವಾಗಿಯೇ ತುಸು ಅಧಿಕವಾಗಿರುತ್ತವೆ.

ತಪಾಸಣೆ – ದಂಡ  
                                                                                                               
ಪ್ರಾದೇಶಿಕ ಸಾರಿಗೆ ಕಚೇರಿ ಅಥವಾ ಸಂಚಾರ ವಿಭಾಗದ ಆರಕ್ಷಕ ಠಾಣೆಗಳಿರುವ ನಗರ – ಪಟ್ಟಣಗಳಲ್ಲಿ, ಇವೆರಡೂ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬಂದಿಗಳು ನಿಯಮಿತವಾಗಿ ವಾಹನಗಳ ತಪಾಸಣೆಯನ್ನು ಮಾಡಿ ತಪ್ಪಿತಸ್ಥರಿಗೆ ದಂಡವನ್ನು ವಿಧಿಸುತ್ತಿದ್ದಲ್ಲಿ, ಸಾರಿಗೆ ಮತ್ತು ಸಂಚಾರ ನಿಯಮಗಳ ಉಲ್ಲಂಘನೆಯ ಪ್ರಮಾಣವು ತುಸು ಕಡಿಮೆ ಇರುತ್ತದೆ. ಜೊತೆಗೆ ಸರ್ಕಾರದ ಬೊಕ್ಕಸಕ್ಕೂ ಒಂದಿಷ್ಟು ಹೆಚ್ಚುವರಿ ಆದಾಯ ಲಭ್ಯವಾಗುತ್ತದೆ. ಅರ್ಥಾತ್ ಒಂದೇ ಕಲ್ಲಿನಿಂದ  ಎರಡು ಹಕ್ಕಿಗಳನ್ನು ಹೊಡೆದಂತಾಗುತ್ತದೆ!.

ಉದಾಹರಣೆಗೆ ಇತ್ತೀಚಿಗೆ  ಬೆಂಗಳೂರು ನಗರದಲ್ಲಿ  ಸಾರಿಗೆ ಇಲಾಖೆಯ ಅಧಿಕಾರಿಗಳು ನಡೆಸಿದ್ದ ತಪಾಸಣೆಯ ಸಂದರ್ಭದಲ್ಲಿ ಸಾರಿಗೆ ನಿಯಮ – ಕಾನೂನುಗಳನ್ನು ಉಲ್ಲಂಘಿಸಿದ್ದ ವಾಹನಗಳ ಚಾಲಕರಿಂದ ೪೦ ಕೋಟಿ ರೂಪಾಯಿ ದಂಡವನ್ನು ಸಂಗ್ರಹಿಸಿದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅದೇ ರೀತಿಯಲ್ಲಿ ಕೆಲವೇ ತಿಂಗಳುಗಳ ಹಿಂದೆ ಸಂಚಾರ ವಿಭಾಗದ ಆರಕ್ಷಕರು ನಡೆಸಿದ್ದ ಕಾರ್ಯಾಚರಣೆಯಲ್ಲಿ ಹಲವಾರು ಲಕ್ಷ ರೂಪಾಯಿಗಳ ದಂಡವನ್ನು ವಸೂಲು ಮಾಡಿದ ಸುದ್ದಿಯೂ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಇವೆರಡೂ ಇಲಾಖೆಗಳು ನಿಯಮಿತವಾಗಿ ಇಂತಹ ಕಾರ್ಯಾಚರಣೆಯನ್ನು ನಡೆಸುತ್ತಿದ್ದಲ್ಲಿ, ಸಂಚಾರ - ಸಾರಿಗೆ ನಿಯಮಗಳು ಮತ್ತು ಕಾನೂನುಗಳನ್ನು ಉಲ್ಲಂಘಿಸುವವರ ಸಂಖ್ಯೆ ನಿಶ್ಚಿತವಾಗಿಯೂ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ.

ಕೊನೆಯ ಮಾತು

ಡಿಸೆಂಬರ್  ಮೂರನೆಯ ವಾರದಲ್ಲಿ ಸಾರಿಗೆ ಮಂಗಳೂರಿನಲ್ಲಿ ಇಲಾಖೆಯವರು ನಡೆಸಿದ್ದ ಕಾರ್ಯಾಚರಣೆಯಲ್ಲಿ ಮೋಟಾರು ವಾಹನಗಳ ಅಧಿನಿಯಮಗಳನ್ನು ಉಲ್ಲಂಘಿಸಿದ್ದ ಕಾಂಟ್ರಾಕ್ಟ್ ಕ್ಯಾರಿಯೇಜ್  ಬಸ್ಸುಗಳ ವಿರುದ್ಧ ಕಾನೂನುಕ್ರಮಗಳನ್ನು ಕೈಗೊಂಡಿದ್ದರು. ಇಲಾಖೆಯ ಅಧಿಕಾರಿಗಳೇ ಹೇಳಿದಂತೆ ಸಿ.ಸಿ ಬಸ್ಸುಗಳು ಸ್ಟೇಜ್ ಕ್ಯಾರಿಯರ್ಸ್ ಗಳಂತೆ ಟಿಕೆಟ್ ನೀಡಿ ಪ್ರಯಾಣಿಕರನ್ನು ಕೊಂಡೊಯ್ಯುವುದು ಕಾನೂನುಬಾಹಿರವಾಗಿದೆ. ಹಾಗೂ ಇದೇ ಕಾರಣದಿಂದಾಗಿ ಆರು ಸಿ.ಸಿ ಬಸ್ಸುಗಳ ವಿರುದ್ಧ ಕಾನೂನುಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷವೆಂದರೆ ದ.ಕ ಜಿಲ್ಲೆಯಲ್ಲಿ ಸಿ.ಸಿ ಬಸ್ಸುಗಳು ಸ್ಟೇಜ್ ಕ್ಯಾರಿಯರ್ ನಂತೆ ಪ್ರಯಾಣಿಕರನ್ನು ಕೊಂಡೊಯ್ಯುವುದು  ಅನೇಕ ವರ್ಷಗಳಿಂದ ಅಡೆತಡೆಯಿಲ್ಲದೆ ( ಇಂದಿಗೂ ) ನಡೆಯುತ್ತಿದೆ!.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು



No comments:

Post a Comment