Thursday, May 12, 2016

VANISHING WATERBODISES !


        ದೇಶದ ಜಲಮೂಲಗಳು ಬತ್ತಿಹೋಗುತ್ತಿವೆ, ಜೋಕೆ! 

ಜಾಗತಿಕ ತಾಪಮಾನದ ಹೆಚ್ಚಳ ಮತ್ತು ತತ್ಸಂಬಂಧಿತ ಅನ್ಯ ಕಾರಣಗಳ ಫಲವಾಗಿ ರಾಜ್ಯದ ಜನತೆ ಇದುವರೆಗೆ ಕಂಡುಕೇಳರಿಯದ ಬೇಸಗೆಯ ಧಗೆಯಿಂದ ಹೈರಾಣಾಗಿದ್ದಾರೆ. ಜೊತೆಗೆ ಬಹುತೇಕ ಜಿಲ್ಲೆಗಳಲ್ಲಿ ಉದ್ಭವಿಸಿರುವ ಜಲಕ್ಷಾಮದಿಂದ ಕಂಗಾಲಾಗಿದ್ದಾರೆ. ಕೆಲವೆಡೆ ಕುಡಿಯುವ ನೀರನ್ನು ಅರಸಿಕೊಂಡು  ಅಲೆದಾಡಬೇಕಾದಂತಹ ಭೀಕರ ಬರ ಬಾಧಿಸುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಜಲಮೂಲಗಳು ಬತ್ತಿಹೋಗಿವೆ ಅಥವಾ ಬತ್ತಿಹೋಗುತ್ತಿವೆ. ಕಳೆದ ಹಲವಾರು ವರ್ಷಗಳಿಂದ ರಾಜ್ಯದ ಜನತೆಯನ್ನು ಪೀಡಿಸುತ್ತಿರುವ ಈ ಗಂಭೀರ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಅವಶ್ಯಕ ಹಾಗೂ ದೀರ್ಘಕಾಲೀನ ಪರಿಹಾರಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಲು ವಿಫಲವಾಗಿರುವ ಪರಿಣಾಮವಾಗಿ, ಇದೀಗ ಜಲಕ್ಷಾಮದ ತೀವ್ರತೆ ಇನ್ನಷ್ಟು ಹೆಚ್ಚಿದೆ. 

ವಿಶೇಷವೆಂದರೆ ಕರ್ನಾಟಕವೂ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿನ ಜಲಮೂಲಗಳು ನಶಿಸುತ್ತಿರುವ ಮತ್ತು ಅಂತರ್ಜಲದ ಮಟ್ಟವು ಪಾತಾಳಕ್ಕೆ ಕುಸಿಯುತ್ತಿರುವ ಬಗ್ಗೆ " ವಿಶ್ವ ಬ್ಯಾಂಕ್ " ಐದು ವರ್ಷಗಳ ಹಿಂದೆಯೇ ಎಚ್ಚರಿಕೆಯನ್ನು ನೀಡಿತ್ತು. ಅಂತೆಯೇ ಈ ಸಮಸ್ಯೆಯನ್ನು ತಡೆಗಟ್ಟುವಂತಹ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಆದರೆ ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಪರೋಕ್ಷವಾಗಿ ಜಲಕ್ಷಾಮದ ಸಮಸ್ಯೆ ಇನ್ನಷ್ಟು ಉಲ್ಬಣಿಸಲು ಕಾರಣಕರ್ತರೆನಿಸಿವೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಜಲಕ್ಷಾಮದ ಕರಿನೆರಳು 

ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯದಂತೆ ಒಬ್ಬ ವ್ಯಕ್ತಿಗೆ ಒಂದುದಿನದಲ್ಲಿ ಬೇಕಾಗುವ ನೀರಿನ ಪ್ರಮಾಣ ೧೩೫ ಲೀಟರ್. ಆದರೆ ಧಾರಾಳ ನೀರು ಲಭ್ಯವಿರುವ ಪ್ರದೇಶಗಳ ನಿವಾಸಿಗಳು ಇದರ ಹತ್ತಾರು ಪಟ್ಟು ನೀರನ್ನು ಅನಾವಶ್ಯಕವಾಗಿ ಪೋಲುಮಾಡುತ್ತಾರೆ. ತತ್ಪರಿಣಾಮವಾಗಿ ನಮ್ಮ ದೇಶದ ಶೇ. ೬೦ ರಷ್ಟು ಜಲಮೂಲಗಳು ನಿಧಾನವಾಗಿ ನಶಿಸುತ್ತಾ, ಮುಂದಿನ ೧೫ ವರ್ಷಗಳಲ್ಲಿ ಸಂಪೂರ್ಣವಾಗಿ ಬತ್ತಿಹೋಗಲಿವೆ ಎಂದು ವಿಶ್ವಬ್ಯಾಂಕ್ ೨೦೧೧ ರಲ್ಲೇ ಎಚ್ಚರಿಕೆಯನ್ನು ನೀಡಿತ್ತು. ವಿಶ್ವಬ್ಯಾಂಕ್ ಮುಂದಿನ ೧೫ ವರ್ಷಗಳಲ್ಲಿ ಸಂಭವಿಸಲಿಸಲಿದೆ ಎಂದಿದ್ದ ಭವಿಷ್ಯವು, ಕೇವಲ ೫ ವರ್ಷಗಳಲ್ಲೇ ನಿಜವಾಗುತ್ತಿದೆ. 

ವಿಶ್ವಬ್ಯಾಂಕ್ ವರದಿಯಲ್ಲಿ ಉಲ್ಲೇಖಿಸಿರುವಂತೆ ೨೦೧೧ ರಲ್ಲೇ ಭಾರತದಲ್ಲಿರುವ ಶೇ.೨೯ ರಷ್ಟು ಜಲಮೂಲಗಳು ಅಪಾಯಕಾರಿ, ಗಂಭೀರ ಸ್ಥಿತಿಯಲ್ಲಿ ಅಥವಾ ವಿನಾಶದ ಹಾದಿಯಲ್ಲಿದ್ದವು. ಭಾರತೀಯರ ನೀರಿನ ದುರ್ಬಳಕೆಯ ಪ್ರಮಾಣವು ಇದೇ ರೀತಿಯಲ್ಲಿ ಹಾಗೂ ಇದೇ ವೇಗದಲ್ಲಿ ಮುದುವರೆದಲ್ಲಿ, ೨೦೨೫ ರಲ್ಲಿ ಶೇ. ೬೫ ರಷ್ಟು ಜಲಮೂಲಗಳು ಗಂಭೀರ ಸ್ಥಿತಿಯನ್ನು ತಲುಪಲಿವೆ. ಇದರೊಂದಿಗೆ ದೇಶದ ವಿವಿಧಭಾಗಗಳಲ್ಲಿ ಕಂಡುಬರುತ್ತಿರುವ ಹವಾಮಾನದ ವೈಪರೀತ್ಯಗಳೂ, ಈ ಸಮಸ್ಯೆ ಇನ್ನಷ್ಟು ಉಲ್ಬಣಿಸಲು ಕಾರಣವೆನಿಸಲಿವೆ ಎಂದು ವಿಶ್ವಬ್ಯಾಂಕ್ ವರದಿಯಲ್ಲಿ ನಮೂದಿಸಲಾಗಿತ್ತು. 

ಭಾರತೀಯರು ಅತಿಯಾಗಿ ಪೋಲುಮಾಡುತ್ತಿರುವ ನೀರಿನ ಬಗ್ಗೆ ಒಂದಿಷ್ಟು ಅರಿವು ಮೂಡಿಸಬಲ್ಲ ಮಾಹಿತಿಯೊಂದು ಈ ವರದಿಯಲ್ಲಿ ಸೇರಿತ್ತು. ಪ್ರಪಂಚದ ಜನರೆಲ್ಲರೂ ಒಂದು ದಿನದಲ್ಲಿ ಬಳಸುವ ನೀರಿನ ಶೇ. ೨೫ ರಷ್ಟು ಪಾಲನ್ನು ಬಳಸುವವರು ಭಾರತೀಯರೇ ಆಗಿದ್ದಾರೆ. ಭಾರತೀಯರು ಒಂದು ವರ್ಷದಲ್ಲಿ ಬಳಸುವ ನೀರಿನ ಪ್ರಮಾಣವು ಅಂದು ೨೩೦ ಕ್ಯುಬಿಕ್ ಕಿಲೋ ಲೀಟರ್ ಗಳಾಗಿತ್ತು!. 

ದೇಶದ ವಿವಿಧ ರಾಜ್ಯಗಳ ಕೃಷಿಕರು ಬಳಸುತ್ತಿದ್ದ ಶೇ.೬೫ ರಷ್ಟು ನೀರು ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿನ ನಿವಾಸಿಗಳಿಗೆ ಪ್ರತಿನಿತ್ಯ ಪೂರೈಸುತ್ತಿದ್ದ ಶುದ್ಧೀಕರಿಸಿದ ಕುಡಿಯುವ ನೀರಿನ ಶೇ. ೮೦ ರಷ್ಟನ್ನು ಪಡೆದುಕೊಳ್ಳಲು ಅಂತರ್ಜಲ ಮತ್ತು ಭೂಜಲ ಮೂಲಗಳನ್ನೇ ಅವಲಂಬಿಸಿವೆ. 

ಭಾರತದಲ್ಲಿರುವ ೫೭೨೩ ಭೂಜಲ ಕ್ಷೇತ್ರಗಳಲ್ಲಿ ೧೬೧೫ ಕ್ಷೇತ್ರಗಳು ಅತಿ ಗಂಭೀರ ಅಥವಾ ಅತಿಯಾಗಿ ಬಳಸಲ್ಪಡುವ ಸ್ಥಿತಿಯಲ್ಲಿವೆ. ಈ ಸಮಸ್ಯೆಯನ್ನು ನಿಯಂತ್ರಿಸಲು ಕೇಂದ್ರ ಭೂಜಲ ಪ್ರಾಧಿಕಾರವು ಇವುಗಳಲ್ಲಿನ ೧೦೮ ಪ್ರಮುಖ ಕ್ಷೇತ್ರಗಳನ್ನು ಸಂರಕ್ಷಿಸಲು ಐದುವರ್ಷಗಳ ಹಿಂದೆಯೇ ಅವಶ್ಯಕ ಕ್ರಮಗಳನ್ನು ಕೈಗೊಂಡಿತ್ತು. ಆದರೆ ಕೇಂದ್ರ ಭೂಜಲ ಪ್ರಾಧಿಕಾರ ಮತ್ತು ಕೆಲ ರಾಜ್ಯ ಸರ್ಕಾರಗಳ ಬಳಿ ಭೂಜಲ ಸಂರಕ್ಷಣೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಲು ಅವಶ್ಯಕ ಸಿಬಂದಿಗಳೇ ಇರದಿದ್ದ ಕಾರಣದಿಂದಾಗಿ, ಇದು ಅಪೇಕ್ಷಿತ ಪರಿಣಾಮವನ್ನು ನೀಡಲು ಯಶಸ್ವಿಯಾಗಿರಲಿಲ್ಲ. 

ಪರಿಹಾರವೇನು?

ನಮ್ಮ ಮುಂದಿನ ಪೀಳಿಗೆಯನ್ನು ಜಲಕ್ಷಾಮದ ಸಮಸ್ಯೆ ಬಾಧಿಸದಂತೆ ತಡೆಗಟ್ಟಲು, ನಾವಿಂದು ಅನಾವಶ್ಯಕ ಹಾಗೂ ಅತಿಯಾಗಿ ಪೋಲುಮಾಡುತ್ತಿರುವ ನೀರಿನ ಪ್ರಮಾಣವನ್ನು ನಿಶ್ಚಿತವಾಗಿಯೂ ಕಡಿಮೆ ಮಾಡಲೇಬೇಕು. ಇದರೊಂದಿಗೆ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಜಲಸಂರಕ್ಷಣೆಯ ಕೆಲವೊಂದು ಉಪಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಅನುಷ್ಠಾನಿಸಲೇಬೇಕು. 

ರೈತಾಪಿ ಜನರು ಬೆಳೆಯುವ ಬೆಳೆಗಳಿಗೆ ಅಗತ್ಯವಿರುವಷ್ಟೇ ನೀರುಣಿಸುವ ವೈಜ್ಞಾನಿಕ ಮಾಹಿತಿಗಳನ್ನು ಕೃಷಿಕರಿಗೆ ಸರ್ಕಾರವೇ ಒದಗಿಸಬೇಕು. ಜೊತೆಗೆ ರೈತರಿಗೆ ಉಚಿತವಾಗಿ ವಿದ್ಯುತ್ ಒದಗಿಸುತ್ತಿರುವುದರಿಂದ ದಿನದಲ್ಲಿ ಹಲವಾರು ಘಂಟೆಗಳ ಕಾಲ ಅವಶ್ಯಕತೆಗಿಂತಲೂ ಅಧಿಕ ಪ್ರಮಾಣದ ನೀರನ್ನು ಪೋಲುಮಾಡುವುದನ್ನು ನಿಯಂತ್ರಿಸಬೇಕು. ಇದಕ್ಕಾಗಿ ರೈತರು ಬಳಸುವ ವಿದ್ಯುತ್ತಿಗೆ ಒಂದಿಷ್ಟು ಶುಲ್ಕವನ್ನು ವಿಧಿಸಬೇಕು. ಸರ್ಕಾರದ ಅನುಮತಿ ಇಲ್ಲದೇ ಖಾಸಗಿ ವ್ಯಕ್ತಿಗಳು ಮತ್ತು ಸ್ಥಳೀಯ ಸಂಸ್ಥೆಗಳು ಕೊಳವೆಬಾವಿಗಳನ್ನು ಕೊರೆಸುವುದನ್ನು ನಿಯಂತ್ರಿಸಬೇಕು. ಅದರಲ್ಲೂ ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದ ಸ್ಥಳಗಳಲ್ಲಿ, ಇನ್ನಷ್ಟು ಕೊಳವೆಬಾವಿಗಳನ್ನು ಕೊರೆಸುವುದನ್ನು ನಿಷೇಧಿಸಬೇಕು. ಇದಕ್ಕೆ ಬದಲಾಗಿ ತೆರೆದ ಮತ್ತು ಕೊಳವೆ ಬಾವಿಗಳ ಜಲಮರುಪೂರಣವನ್ನು ಕಡ್ಡಾಯಗೊಳಿಸಬೇಕು. 

ರಾಜ್ಯದ ಪ್ರತಿಯೊಂದು ಹಳ್ಳಿ, ಪಟ್ಟಣ, ನಗರ ಮತ್ತು ಮಹಾನಗರಗಳಲ್ಲಿ ಮಳೆನೀರಿನ ಕೊಯ್ಲನ್ನು ಕಡ್ಡಾಯಗೊಳಿಸಬೇಕು. ಕೆರೆ ಮತ್ತು ತೆರೆದ ಬಾವಿಗಳ ಹೂಳನ್ನು ತೆಗೆಸುವುದರೊಂದಿಗೆ, ಕಾರಣಾಂತರಗಳಿಂದ ಮುಚ್ಚಿರುವ ಕೆರೆ- ಬಾವಿಗಳನ್ನು ಮತ್ತೆ ಪುನರುಜ್ಜೀವನಗೊಳಿಸಲೇಬೇಕು. ನಗರ - ಮಹಾನಗರಗಳಲ್ಲಿನ ಬಹುಮಹಡಿ ಕಟ್ಟಡಗಳು, ಬೃಹತ್ ಉದ್ದಿಮೆಗಳು ಮತ್ತು ಅನ್ಯ ವಾಣಿಜ್ಯ ಕಟ್ಟಡಗಳಿಂದ ವಿಸರ್ಜಿಸಲ್ಪಡುವ ಕಲುಷಿತ ನೀರನ್ನು ಸಂಸ್ಕರಿಸಿ, ಶುದ್ಧೀಕರಿಸಿ ಮರುಬಳಕೆ ಮಾಡಬಲ್ಲ ಘಟಕಗಳ ಸ್ಥಾಪನೆಯನ್ನು ಕಡ್ಡಾಯಗೊಳಿಸಬೇಕು. 

ಸ್ಥಳೀಯ ಸಂಸ್ಥೆಗಳು ಜನರಿಗೆ ಪೂರೈಕೆಮಾಡುವ ಶುದ್ಧೀಕರಿಸಿದ ಕುಡಿಯುವ ನೀರಿನ ವ್ಯವಸ್ಥೆಗಾಗಿ ತಗಲುವ ಸಂಪೂರ್ಣ ವೆಚ್ಚವನ್ನು ಜನರಿಂದಲೇ ವಸೂಲು ಮಾಡಬೇಕು. ತತ್ಪರಿಣಾಮವಾಗಿ ಅಲ್ಪಬೆಲೆಗೆ ನಿರಾಯಾಸವಾಗಿ ಲಭಿಸುವ ಶುದ್ಧೀಕರಿಸಿದ ನೀರನ್ನು ಪೋಲು ಮಾಡುವುದನ್ನು ತಡೆಗಟ್ಟಬಹುದಾಗಿದೆ. 

ಇವೆಲ್ಲಕ್ಕೂ ಮಿಗಿಲಾಗಿ ನಮ್ಮ ಹಾಗೂ ನಮ್ಮ ಮುಂದಿನ ಸಂತತಿಯ ಹಿತದೃಷ್ಟಿಯಿಂದ, ದೇಶದ ಪ್ರತಿಯೊಬ್ಬ ಪ್ರಜೆಯೂ ಜಲಸಂರಕ್ಷಣೆಯ ಉಪಕ್ರಮಗಳನ್ನು ಸ್ವಯಂಪ್ರೇರಿತರಾಗಿ ಅನುಷ್ಠಾನಗೊಳಿಸಬೇಕಾಗಿದೆ. ಇದಕ್ಕೆ ತಪ್ಪಿದಲ್ಲಿ ವಿಶ್ವಬ್ಯಾಂಕ್ ವರದಿಯಲ್ಲಿ ನಮೂದಿಸಿದಂತೆ, ದೇಶದ ಜಲಮೂಲಗಳು ಸದ್ಯೋಭವಿಷ್ಯದಲ್ಲಿ ನಶಿಸಲಿವೆ. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು 




No comments:

Post a Comment