Sunday, May 1, 2016

INTERNATIONAL NOISE AWARENESS DAY

    

  ಶಬ್ದಮಾಲಿನ್ಯದ ಗದ್ದಲವನ್ನು ನಿಯಂತ್ರಿಸುವವರು ಯಾರು ?

ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಎಪ್ರಿಲ್ ೨೭ ರಂದು " ಇಂಟರ್ನ್ಯಾಶನಲ್ ನೋಯ್ಸ್ ಅವೇರ್ನೆಸ್ ಡೇ " ಯನ್ನು ಆಚರಿಸಲಾಗುತ್ತದೆ. ದ ಸೆಂಟರ್ ಫಾರ್ ಹಿಯರಿಂಗ್  ಎಂಡ್  ಕಮ್ಯೂನಿಕೇಶನ್  ಈ ಕಾರ್ಯಕ್ರಮವನ್ನು ೧೯೯೬ ರಲ್ಲಿ ಆರಂಭಿಸಿದ್ದು, ಇದೀಗ ೨೧ ನೇ ವರ್ಷದ ಐ ಎನ್  ಎ ಡಿ ಕಾರ್ಯಕ್ರಮವು ಇಂದು ಜರಗಲಿದೆ. ಈ ಸಂದರ್ಭದಲ್ಲಿ ನಮ್ಮ ದೈನಂದಿನ ಜೀವನದಲ್ಲಿ ಕಾಡುತ್ತಿರುವ " ಶಬ್ದಮಾಲಿನ್ಯದ ಸಮಸ್ಯೆ " ಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. 
 
ದೇಶದ ಪ್ರಜೆಗಳು ನೆಮ್ಮದಿಯಿಂದ ಜೀವಿಸಲು ಭಾರತದ ಸಂವಿದಾನದಲ್ಲಿ ಅನೇಕ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಹಾಗೂ ಇದಕ್ಕಾಗಿಯೇ ಹಲವಾರು ಕಾನೂನು ಮತ್ತು ನೀತಿ ನಿಯಮಗಳನ್ನೂ ರೂಪಿಸಲಾಗಿದೆ.ಆದರೆ ಇವೆಲ್ಲವನ್ನೂ ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಇರುವ ಏಕಮಾತ್ರ ಕಾರಣದಿಂದಾಗಿ, ನಮ್ಮ ದೈನಂದಿನ ಜೀವನದಲ್ಲಿ ಅನೇಕ ಸಮಸ್ಯೆಗಳು ಮತ್ತು ಅಡ್ಡಿಆತಂಕಗಳನ್ನು ಎದುರಿಸಬೇಕಾಗುತ್ತಿದೆ. ಇಂತಹ ಸಮಸ್ಯೆಗಳಲ್ಲಿ " ಶಬ್ದ ಮಾಲಿನ್ಯ" ವೂ ಒಂದಾಗಿದೆ.
 
ನಿಮ್ಮೂರಿನ ರಸ್ತೆಗಳಲ್ಲಿ ನಡೆದಾಡುವಾಗ ನಿಮ್ಮನ್ನು ಬೆಚ್ಚಿಬೀಳಿಸುವಂತಹ ವಾಹನಗಳ ಕರ್ಕಶವಾದ ಹಾರ್ನ್ ಮತ್ತು ಸಭೆ - ಸಮಾರಂಭ ಮತ್ತಿತರ ಕಾರ್ಯಕ್ರಮಗಳ ಪ್ರಚಾರದ ಸಲುವಾಗಿ, ವಾಹನಗಳಲ್ಲಿ ಅಳವಡಿಸಿರುವ ಗಜಗಾತ್ರದ ಸ್ಪೀಕರ್ ಗಳಿಂದ ಹೊರಹೊಮ್ಮುವ ಕಿವಿಯ ತಮ್ಮಟೆ ಒಡೆದುಹೋಗುವಂತಹ ಸಂಗೀತ ಅಥವಾ ಪ್ರಚಾರಕರ ಕಿರುಚಾಟಗಳಿಂದ ಸಾಕಷ್ಟು ತೊಂದರೆಗಳನ್ನು ನೀವೂ ಅನುಭವಿಸಿರಲೇಬೇಕು. ಪರೀಕ್ಷೆಗಳ ಸಮಯದಲ್ಲಂತೂ, ಇಂತಹ ಸದ್ದು ಗದ್ದಲಗಳಿಂದ ವಿದ್ಯಾರ್ಥಿಗಳ ನೆಮ್ಮದಿಗೆ ಭಂಗಬರುವುದರಲ್ಲಿ ಸಂದೇಹವಿಲ್ಲ. ಆದರೆ ಕಾನೂನುಬಾಹಿರವಾಗಿ ಇಷ್ಟೊಂದು ಶಬ್ದಮಾಲಿನ್ಯವನ್ನು ಮಾಡುತ್ತಿರುವವರ ವಿರುದ್ಧ, ಸಂಬಂಧಿತ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳುವುದೇ ಇಲ್ಲ. ತತ್ಪರಿಣಾಮವಾಗಿ ಈ ವಿಲಕ್ಷಣ ಸಮಸ್ಯೆಯು ಅನಿಯಂತ್ರಿತವಾಗಿ ವೃದ್ಧಿಸುತ್ತಲೇ ಇದೆ.
 
ಕಾನೂನುಬಾಹಿರ
 
ಸಾರಿಗೆ ಇಲಾಖೆಯ ನಿಯಮಗಳಂತೆ ನಗರಗಳಲ್ಲಿ ಕರ್ಕಶವಾದ ಹಾರ್ನ್ ಗಳನ್ನು ಬಳಸುವಂತಿಲ್ಲ. ವಿಶೇಷವಾಗಿ ಶಾಲಾಕಾಲೇಜುಗಳು, ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು ಮತ್ತು ಶುಶ್ರೂಷಾ ಕೇಂದ್ರಗಳ ಆಸುಪಾಸಿನಲ್ಲಿ ಮತ್ತು ಇತರ ಸ್ಥಳಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕರ್ಕಶ ಹಾರ್ನ್ ಮತ್ತು ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಲಾಗಿದೆ. ಅಂತೆಯೇ ಶಬ್ದಮಾಲಿನ್ಯ ನಿಯಂತ್ರಣ ಕಾಯಿದೆ ೨೦೦೦ ದ ನಿಯಮ ೩ ರನ್ವಯ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಸರ್ಕಾರ ಕಡ್ಡಾಯವಾಗಿ ಜಾರಿಗೊಳಿಸಬೇಕೆಂದು ಉಚ್ಛ ನ್ಯಾಯಾಲಯ ಆದೇಶಿಸಿದೆ. ಇದಲ್ಲದೇ ರಾತ್ರಿ ೧೦ ಗಂಟೆಯಿಂದ ಬೆಳಗಿನ ಜಾವ ೬ ಗಂಟೆಯ ತನಕ ದ್ವನಿವರ್ಧಕಗಳನ್ನು ಬಳಸದಂತೆ ಸರ್ವೋಚ್ಛ ನ್ಯಾಯಾಲಯದ ಆದೇಶವಿದೆ. ಆದರೆ ಈ ಆದೇಶವನ್ನು ರಾಜಾರೋಷವಾಗಿ ಉಲ್ಲಂಘಿಸಲಾಗುತ್ತಿದೆ. ದೇಶದ ಪ್ರಜೆಗಳ ಮೂಲಭೂತ ಹಕ್ಕು ಮತ್ತು ಆರೋಗ್ಯಗಳಿಗೆ ಚ್ಯುತಿಯಾಗುವಂತಹ ಇಂತಹ ಕಾನೂನುಬಾಹಿರ ವರ್ತನೆಗಳಿಗೆ ಕಡಿವಾಣವನ್ನು ತೊಡಿಸಲೇಬೇಕಾಗಿದೆ. ಪ್ರಾಯಶಃ ಇದೇ ಕಾರಣದಿಂದಾಗಿ ಇತ್ತೀಚೆಗೆ ರಾಜ್ಯದ ಉಚ್ಛ ನ್ಯಾಯಾಲಯವು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.
 
ಪರವಾನಿಗೆಯ ನಿಯಮ
 
ಸಾಮಾನ್ಯವಾಗಿ ಖಾಸಗಿ ಆಥವಾ ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಧ್ವನಿವರ್ಧಕಗಳನ್ನು ಬಳಸುವ ಮುನ್ನ ಸ್ಥಳೀಯ ಆರಕ್ಷಕ ಠಾಣೆಯಲ್ಲಿ ಅರ್ಜಿಯನ್ನು ಸಲ್ಲಿಸಿ ಅನುಮತಿಯನ್ನು ಪಡೆದುಕೊಳ್ಳಬೆಕಾಗುತ್ತದೆ. ಈ ಅರ್ಜಿಯಲ್ಲಿ ನಮೂದಿಸಿರುವ ಒಂದು ಷರತ್ತಿನಂತೆ ದ್ವನಿವರ್ಧಕವನ್ನು ಯಾವುದೇ ಪ್ರಚಾರ ಅಥವಾ ಅಪಪ್ರಚಾರಕ್ಕಾಗಿ ಬಳಸುವಂತಿಲ್ಲ. ವಿಶೇಷವೆಂದರೆ ಅನುಮತಿಯನ್ನು ಪಡೆದುಕೊಳ್ಳುವ ಅಧಿಕತಮ ಜನರು ಇದನ್ನು ಕೇವಲ ಪ್ರಚಾರಕ್ಕಾಗಿಯೇ ಬಳಸುತ್ತಾರೆಯೇ ಹೊರತು ಅನ್ಯ ಉದ್ದೇಶಗಳಿಗಾಗಿ ಅಲ್ಲ !.
 
ಧ್ವನಿವರ್ಧಕದ ಬಳಕೆಗಾಗಿ ಅನುಮತಿಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸುವಾಗ ಅರ್ಜಿದಾರರ ಹೆಸರು, ವಿಳಾಸ, ಅನುಮತಿ ಪಡೆಯುವ ಉದ್ದೇಶ, ಇದರ ಪರಿಮಿತಿ, ವ್ಯಾಪ್ತಿ, ದಿನಾಂಕ, ವೇಳೆಗಳೊಂದಿಗೆ ಉಪಯೋಗಿಸುವ ಸ್ಥಳದ ವಿವರಗಳನ್ನು ನಮೂದಿಸಬೇಕಾಗುವುದು. ಜೊತೆಗೆ ಅನುಮತಿ ಪತ್ರದಲ್ಲಿರುವ ಷರತ್ತುಗಳನ್ನು ಕಡ್ಡಾಯವಾಗಿ ಪರಿಪಾಲಿಸಬೇಕಾಗುತ್ತದೆ. ಇದಕ್ಕೆ ತಪ್ಪಿದಲ್ಲಿ ಧ್ವನಿವರ್ಧಕವನ್ನು ಮುಟ್ಟುಗೋಲು ಹಾಕುವುದದರೊಂದಿಗೆ ಕರ್ನಾಟಕ ಪೊಲೀಸ್ ಕಾಯಿದೆಯ ಸೆಕ್ಷನ್ ೩೭ ರಂತೆ, ೩ ತಿಂಗಳ ಸಜೆ ಅಥವಾ ೫೦೦ ರೂ. ದಂಡ ಅಥವಾ ಇವೆರಡನ್ನೂ ವಿಧಿಸಬಹುದಾಗಿದೆ. ಬಹುತೇಕ ಜನರು ನಿರ್ದಿಷ್ಟ ಕಾರ್ಯಕ್ರಮವೊಂದರ ಪ್ರಚಾರದ ಸಲುವಾಗಿಯೇ ಅನುಮತಿಯನ್ನು ಪಡೆದುಕೊಳ್ಳುತ್ತಿದ್ದು, ಪರವಾನಿಗೆಯ ಷರತ್ತಿನಂತೆ ಧ್ವನಿವರ್ಧಕವನ್ನು ಪ್ರಚಾರ - ಅಪಪ್ರಚಾರಕ್ಕಾಗಿ ಬಳಸುವಂತಿಲ್ಲ. ಅರ್ಥಾತ್, ಸಂಗೀತ, ನಾಟಕ, ನೃತ್ಯ ಮತ್ತಿತರ ಸಬಾ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ !.
 
ಆದರೆ ಕಿವಿಗಡಚಿಕ್ಕುವ ಸದ್ದುಮಾಡುವ ಧ್ವನಿವರ್ಧಕಗಳ ಬಳಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ, ಪರವಾನಿಗೆಯ ಶರತ್ತಿನ ಉಲ್ಲಂಘನೆಯ ಸಲುವಾಗಿ ಆರಕ್ಷಕರು ಇವುಗಳನ್ನು ಬಳಸುವವರ ವಿರುದ್ಧ ಯಾವುದೇ ಕಾನೂನು ಕ್ರಮಗಳನ್ನು ಕೈಗೊಂಡಿರುವುದು ನಮಗಂತೂ ತಿಳಿದಿಲ್ಲ. ಇತ್ತೀಚಿಗೆ ರಾಜ್ಯದ ಉಚ್ಛ ನ್ಯಾಯಾಲಯವು ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆದೇಶಿಸಿರುವ ಪರಿಣಾಮ ಏನಾಗಲಿದೆ ಎಂದು ಕಾದುನೋಡಬೇಕಷ್ಟೇ.
 
ಡಾ.ಸಿ.ನಿತ್ಯಾನಂದ ಪೈ, ಪುತ್ತೂರು





 
 

No comments:

Post a Comment