Monday, May 23, 2016

FAKE DOCTORS








                          ನಕಲಿ ವೈದ್ಯರಿಗಿನ್ನು ಉಳಿಗಾಲವಿಲ್ಲ!

ರಾಜ್ಯದ ಪ್ರಜೆಗಳ ಹಿತದೃಷ್ಟಿಯಿಂದ ಉತ್ತಮ ಗುಣಮಟ್ಟದ ಆರೋಗ್ಯಪಾಲನೆಗೆ ಉತ್ತೇಜನ ನೀಡುವುದು ಮತ್ತು ವೈದ್ಯ ಧರ್ಮದ ತತ್ವಗಳಿಗನುಸಾರವಾಗಿ ಖಾಸಗಿ ವೈದ್ಯಕೀಯ ಸಂಸ್ಥೆಗಳು ಒದಗಿಸಬೇಕಾದ ಸೇವೆಯ ಗುಣಮಟ್ಟಗಳನ್ನು ನಿಗದಿಪಡಿಸುವ ಮೂಲಕ, ರಾಜ್ಯದಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ವ್ಯವಹಾರಗಳನ್ನು ಕಾನೂನಿನ ಮೂಲಕ ನಿಯಂತ್ರಿಸಿ ಮೇಲ್ವಿಚಾರಣೆ ಮಾಡುವುದು ಯುಕ್ತವಾಗಿರುವುದರಿಂದ ಇದಕ್ಕಾಗಿ ಸೂಕ್ತ ಕಾಯಿದೆಯೊಂದನ್ನು ರಾಜ್ಯ ಸರ್ಕಾರವು ೨೦೧೦ ರಲ್ಲಿ ಜಾರಿಗೆ ತಂದಿತ್ತು.ಇದನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ ಎಂದು ಹೆಸರಿಸಲಾಗಿತ್ತು.

ಸುಮಾರು ಐದು ವರ್ಷಗಳ ಹಿಂದೆ ರಾಜ್ಯಾದ್ಯಂತ ಅನುಷ್ಠಾನಗೊಂಡಿದ್ದ " ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ ೨೦೦೭ " ಕಾಯಿದೆಯನ್ವಯ, ಕರ್ನಾಟಕದ ಪ್ರತಿಯೊಬ್ಬ ವೈದ್ಯರು, ಚಿಕಿತ್ಸಾಲಯಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಸ್ಕ್ಯಾನ್ ಸೆಂಟರ್ ಗಳು ಮತ್ತು ಇದಕ್ಕೆ ಸಂಬಂಧಿಸಿದ ಪ್ರತಿಯೊಂದು ಖಾಸಗಿ ಸಂಸ್ಥೆಗಳು ೨೦೧೦ ರ ಫೆಬ್ರವರಿ ತಿಂಗಳಿನಲ್ಲಿ ನಿಗದಿತ ಶುಲ್ಕವನ್ನು ಪಾವತಿಸಿ ನೋಂದಣಿ ಮಾಡಿಸಿಕೊಳ್ಳುವಂತೆ ಸರ್ಕಾರ ಆದೇಶಿಸಿತ್ತು.ಹಾಗೂ ಸರ್ಕಾರಿ ಅಧಿಕಾರಿಗಳು, ಐ ಎಂ ಎ ಮತ್ತು ಆಯುಷ್ ನ ಪ್ರತಿನಿಧಿಗಳಿರುವ ತಂಡವು ಪ್ರತಿಯೊಂದು ಖಾಸಗಿ ವೈದ್ಯಕೀಯ ಸಂಸ್ಥೆಯನ್ನು ಸಂದರ್ಶಿಸಿ, ಕಾಯಿದೆಯ ಮಾನದಂಡಗಳಿಗೆ ಅನುಗುಣವಾಗಿ ಇದೆಯೇ ಎಂದು ಪರಿಶೀಲಿಸಬೇಕಿತ್ತು. ಈ ಸಂದರ್ಭದಲ್ಲಿ ವಿವಿಧ ವೈದ್ಯಕೀಯ ಪದ್ದತಿಗಳ ಪದವೀಧರ ವೈದ್ಯರು, ತಮ್ಮ ಪದವಿ ಹಾಗೂ ಸ್ನಾತಕೊತ್ತರ ಪದವಿಗಳ ಮತ್ತು ತಾವು ವೈದ್ಯಕೀಯ ಮಂಡಳಿಗಳಲ್ಲಿ ನೋಂದಣಿ ಮಾಡಿಸಿರುವ ದಾಖಲೆಗಳ ಯಥಾಪ್ರತಿಗಳನ್ನು ನಿಯೋಜಿತ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಬೇಕಿತ್ತು. 

ಈ ಕಾಯಿದೆಯನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಘೋಷಿಸಿದ್ದಂತೆ " ನಕಲಿ ವೈದ್ಯರಿಗಿನ್ನು ಉಳಿಗಾಲವಿಲ್ಲ " ಎನ್ನುವ ಶಿರೋನಾಮೆಯ ಲೇಖನಗಳು ಮುದ್ರಣ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಕಟಗೊಂಡಿದ್ದವು. ಆದರೆ ಕಾಯಿದೆ ಅನುಷ್ಠಾನಗೊಂಡು ಐದು ವರ್ಷಗಳೇ ಕಳೆದಿದ್ದರೂ, ಯಾವುದೇ ರೀತಿಯ ವೈದ್ಯಕೀಯ ಪದವಿಯನ್ನೇ ಗಳಿಸದ ಮತ್ತು ವೈದ್ಯಕೀಯ ವಿಜ್ಞಾನದ ಗಂಧಗಾಳಿಗಳನ್ನೇ ಅರಿತಿರದ ಅಸಂಖ್ಯ " ನಕಲಿ ವೈದ್ಯರು ", ಇಂದಿಗೂ ತಮ್ಮ ವೃತ್ತಿಯನ್ನು ನಿರಾತಂಕವಾಗಿ ನಡೆಸುತ್ತಲೇ ಇದ್ದಾರೆ!. ಇಷ್ಟು ಮಾತ್ರವಲ್ಲ, " ನಕಲಿ ವೈದ್ಯಕೀಯ ಪದವಿ " ಗಳನ್ನು ಹಣಕೊಟ್ಟು ಖರೀದಿಸಿದ್ದ ನೂರಾರು ಜನರು ರಾಜಾರೋಷವಾಗಿ ತಮ್ಮ ಹೆಸರಿನ ಹಿಂದೆ " ಡಾ " ಎನ್ನುವ ಪದವನ್ನು ಜೋಡಿಸಿ ವೈದ್ಯಕೀಯ ವೃತ್ತಿಯನ್ನು ನಡೆಸುತ್ತಿರುವುದು ರಾಜ್ಯ ಸರ್ಕಾರಕ್ಕೆ ತಿಳಿಯದ ವಿಚಾರವೇನಲ್ಲ. ಆದರೆ ಇದಕ್ಕೊಂದು ನಿರ್ದಿಷ್ಟ ಕಾರಣವೂ ಇದೆ. 

ಕ. ಖಾ. ವೈ. ಸಂಸ್ಥೆಗಳ ಅಧಿನಿಯಮದಂತೆ ತಮ್ಮ ಹೆಸರನ್ನು ನೋಂದಣಿ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬ ವೈದ್ಯರು ಸಲ್ಲಿಸಿದ್ದ ಪದವಿ ಅಥವಾ ಸ್ನಾತಕೋತ್ತರ ಪದವಿಗಳ ಪ್ರಮಾಣಪತ್ರದ ಯಥಾಪ್ರತಿಗಳನ್ನು ಬಳಸಿ, ಆಯಾ ವಿಶ್ವವಿದ್ಯಾಲಯಗಳನ್ನು ಸಂಪರ್ಕಿಸಿ ಇವುಗಳ ಸಾಚಾತನವನ್ನು ತತ್ಸಂಬಂಧಿತ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕಿತ್ತು. ತತ್ಪರಿಣಾಮವಾಗಿ ಅನೈತಿಕ ಮತ್ತು ಕಾನೂನುಬಾಹಿರವಾಗಿ ಅನೇಕರು ಗಳಿಸಿದ್ದ ನಕಲಿ ಪದವಿ ಪ್ರಮಾಣಪತ್ರಗಳನ್ನು ಸುಲಭದಲ್ಲೇ ಪತ್ತೆಹಚ್ಚಬಹುದಾಗಿತ್ತು. ಹಾಗೂ ಇವರ ವಿರುದ್ಧ ಕಾನೂನುಕ್ರಮಗಳನ್ನು ಕೈಗೊಳ್ಳಬಹುದಾಗಿತ್ತು. ಅದೇ ರೀತಿಯಲ್ಲಿ ಬಹುತೇಕ ನಗರ ಮತ್ತು ಪಟ್ಟಣಗಳಲ್ಲಿ ಯಾವುದೇ ವೈದ್ಯಕೀಯ ಪದವಿಯನ್ನೇ ಗಳಿಸಿರದ ಮತ್ತು ಕಾನೂನುಬಾಹಿರವಾಗಿ ವೈದ್ಯಕೀಯ ವೃತ್ತಿಯನ್ನು ನಡೆಸುತ್ತಿರುವ ( ಸರ್ಕಾರದ ಆದೇಶದಂತೆ ನೋಂದಣಿ ಮಾಡಿಸದ ) ನಕಲಿ ವೈದ್ಯರ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಖಚಿತ ಮಾಹಿತಿ ತಿಳಿದಿದ್ದರೂ, ಇಂತಹ ವ್ಯಕ್ತಿಗಳನ್ನು ಬಂಧಿಸಿ ಸೂಕ್ತ ಕಾನೂನುಕ್ರಮಗಳನ್ನು ಕೈಗೊಳ್ಳದ ಕಾರಣದಿಂದಾಗಿ ಇವರೆಲ್ಲರೂ ನಿಶ್ಚಿಂತೆಯಿಂದ ತಮ್ಮ ಧಂಧೆಯನ್ನು ನಡೆಸುತ್ತಲೇ ಇದ್ದಾರೆ. ಹಾಗೂ ಅಮಾಯಕ ರೋಗಿಗಳ ಸುಲಿಗೆಯನ್ನು ಮಾಡುವುದರೊಂದಿಗೆ, ಅವರ  ಪ್ರಾಣಕ್ಕೆ ಎರವಾಗುತ್ತಿದ್ದಾರೆ. ವಿಶೇಷವೆಂದರೆ ಇಂತಹ ನಕಲಿ ವೈದ್ಯರಲ್ಲಿ ಕ್ಯಾನ್ಸರ್ ತಜ್ಞರು, ಸಂತತಿ ಇಲ್ಲದವರಿಗೆ ಸಂತಾನಭಾಗ್ಯ ಕರುಣಿಸುವ ಮತ್ತು ಮಧುಮೇಹದಂತಹ ಶಾಶ್ವತ ಪರಿಹಾರವಿಲ್ಲದ ಕಾಯಿಲೆಗಳನ್ನು ಗುಣಪಡಿಸುವುದಾಗಿ ಘೋಷಿಸುವ ತಜ್ಞರುಗಳು ಇದ್ದಾರೆ. ಇಷ್ಟೆಲ್ಲಾ ಸಾಲದೆನ್ನುವಂತೆ ಶಾಶ್ವತ ಪರಿಹಾರವೇ ಇಲ್ಲದ ಕಾಯಿಲೆಗಳನ್ನು ಖಚಿತವಾಗಿ ಗುಣಪಡಿಸುವ ಭರವಸೆಯನ್ನು ನೀಡುವ ಜಾಹೀರಾತುಗಳನ್ನು ನೀಡುವ ನಕಲಿ ವೈದ್ಯರು ಮತ್ತು ಔಷದ ತಯಾರಿಕಾ ಸಂಸ್ಥೆಗಳ ಹಾವಳಿಯೂ ದಿನೇದಿನೇ ಹೆಚ್ಚುತ್ತಲೇ ಇದೆ. ಆದರೆ ರಾಜ್ಯದ ಪ್ರಜೆಗಳನ್ನು ಕಾಡುತ್ತಿರುವ ಇಂತಹ  ಸಮಸ್ಯೆಗಳನ್ನು ಪರಿಹರಿಸುವುದು ಬಿಡಿ, ನಿಯಂತ್ರಿಸುವುದರಲ್ಲೂ ರಾಜ್ಯದ ಆರೋಗ್ಯ ಇಲಾಖೆ ದಯನೀಯವಾಗಿ ವಿಫಲವಾಗಿರುವುದು ಸುಳ್ಳೇನಲ್ಲ!. 

ಆದರೆ ಇದೀಗ ಮತ್ತೊಮ್ಮೆ ತಮ್ಮ ಖಜಾನೆಯನ್ನು ತುಂಬಿಸಿಕೊಳ್ಳಲು ಸನ್ನದ್ಧವಾಗಿರುವ ಆರೋಗ್ಯ ಇಲಾಖೆಯು, ಐದು ವರ್ಷಗಳ ಹಿಂದೆ ಕ.ಖಾ. ವೈ. ಸಂ. ಅಧಿನಿಯಮದಂತೆ ನೋಂದಣಿ ಮಾಡಿಸಿಕೊಂಡಿದ್ದ ಅಸಲಿ ವೈದ್ಯರು ಮತ್ತು ವೈದ್ಯಕೀಯ ಸಂಸ್ಥೆಗಳು, ಇದೀಗ ಮತ್ತೊಮ್ಮೆ ನಿಗದಿತ ಶುಲ್ಕವನ್ನು ಪಾವತಿಸಿ ತಮ್ಮ ನೋಂದಣಿಯನ್ನು ನವೀಕರಿಸುವಂತೆ ಸೂಚನೆಯನ್ನು ನೀಡಿದೆ!. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 



No comments:

Post a Comment