Tuesday, May 3, 2016

HOTTEST SUMMER AND ................


             ಧಗಧಗಿಸುವ ಬೇಸಗೆ : ಜೊತೆಗೆ ಜಲಕ್ಷಾಮದ ಬೇಗೆ 

ದಕ್ಷಿಣ ಕನ್ನಡದ ಜನತೆ ಈ ಬಾರಿ ಇದುವರೆಗೆ ಕಂಡುಕೇಳರಿಯದಂತಹ ಸೆಖೆ ಮತ್ತು ಜಲಕ್ಷಾಮದ ಸಮಸ್ಯೆಯಿಂದ ಬಸವಳಿದಿದ್ದಾರೆ. ಜಿಲ್ಲೆಯ ಸರಾಸರಿ ತಾಪಮಾನವು ೩೮ ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಜಲಕ್ಷಾಮದ ಸಮಸ್ಯೆ ಇನ್ನಷ್ಟು ಬಿಗಡಾಯಿಸಲು ಕಾರಣವೆನಿಸುತ್ತಿದೆ. ಕೆರೆ, ತೊರೆ, ಬಾವಿಗಳು ಮಾತ್ರವಲ್ಲ, ನದಿಗಳೂ ಬತ್ತಿಹೋಗಿವೆ. ಕುಡಿಯಲು ಶುದ್ಧವಾದ ನೀರಿಲ್ಲದೇ ಜನರು ಹೈರಾಣಾಗಿದ್ದಾರೆ. ರಾಜ್ಯದ ೨೭ ಜಿಲ್ಲೆಗಳು ಹಾಗೂ ೧೩೦ ತಾಲೂಕುಗಳು ಬರದ ಬೇಗೆಯಿಂದ ಬಳಲುತ್ತಿವೆ. ಆದರೆ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದ ಬರ ತಲೆದೋರದೇ ಇದ್ದರೂ, ಸಹಿಸಲಾರದ ಬೇಸಗೆಯ ಧಗೆ ಮತ್ತು ಕುಡಿಯುವ ನೀರಿನ ಕೊರತೆ ಈ ಜಿಲ್ಲೆಗಳ ಜನತೆಯನ್ನು ಬಾಧಿಸುತ್ತಿವೆ. 

ಕಾರಣವೇನು?
ಪ್ರಾಯಶಃ ಹೆಚ್ಚುತ್ತಿರುವ ಜನ - ವಾಹನಗಳ ಸಂಖ್ಯೆ, ವೃದ್ಧಿಸುತ್ತಿರುವ ಕಾಂಕ್ರೀಟ್ ಕಾಡುಗಳ ಸಂಖ್ಯೆ, ನಾಯಿಕೊಡೆಗಳಂತೆ ತಲೆಯೆತ್ತುತ್ತಿರುವ ಬೃಹತ್ ಉದ್ದಿಮೆಗಳು, ನಾವಿಂದು ಅತಿಯಾಗಿ ಹಾಗೂ ಅನಾವಶ್ಯಕವಾಗಿ ಉತ್ಪಾದಿಸುತ್ತಿರುವ ತ್ಯಾಜ್ಯಗಳು ಮತ್ತು ಪೋಲು ಮಾಡುತ್ತಿರುವ ನೀರಿನ ಪ್ರಮಾಣ, ವೈವಿಧ್ಯಮಯ ಕಾರಣಗಳಿಂದಾಗಿ ಸಂಭವಿಸುತ್ತಿರುವ ಪರಿಸರ ಮಾಲಿನ್ಯ, ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಹಸಿರುಮನೆ ಅನಿಲಗಳ ದುಷ್ಪರಿಣಾಮಗಳೊಂದಿಗೆ, ಕ್ಷಯಿಸುತ್ತಿರುವ ಮುಂಗಾರು ಮತ್ತು ಹಿಂಗಾರು ಮಳೆಗಳ ಪ್ರಮಾಣಗಳೂ ಈ ಗಂಭೀರ ಸಮಸ್ಯೆಗಳಿಗೆ ಪ್ರಮುಖ ಕಾರಣವೆನಿಸಿವೆ. 

ಮಳೆಯ ಕೊರತೆ 

ಕೆಲವೇ ದಶಕಗಳ ಹಿಂದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರುಮಳೆಯು ಹಗಲಿರುಳು ಸುರಿಯುತ್ತಿದ್ದುದನ್ನು ನೀವೂ ಕಂಡಿರಬಹುದು. ಅಂತೆಯೇ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಭತ್ತದ ಗದ್ದೆಗಳಲ್ಲಿ ಸಂಗ್ರಹವಾದ ಹಾಗೂ ದೊಡ್ಡ ಗಾತ್ರದ ಚರಂಡಿಗಳಲ್ಲಿ ನಿರ್ಮಿಸುತ್ತಿದ್ದ ಒಡ್ಡುಗಳಿಂದಾಗಿ ಸಂಗ್ರಹವಾಗುತ್ತಿದ್ದ ಮಳೆನೀರು ಅಯಾಚಿತವಾಗಿ ಭೂಗರ್ಭವನ್ನು ಸೇರುವ ಮೂಲಕ ಅಂತರ್ಜಲದ ಪ್ರಮಾಣವು ಹೆಚ್ಚುತ್ತಿತ್ತು. ಇದಲ್ಲದೇ ಪ್ರತಿಯೊಂದು ಊರುಗಳಲ್ಲೂ ಕಾಣಸಿಗುತ್ತಿದ್ದ ಕೆರೆ - ತೊರೆಗಳು ಮತ್ತು ತುಂಬಿಹರಿಯುತ್ತಿದ್ದ ನದಿಗಳಿಂದಾಗಿ ಜಲಮರುಪೂರಣದ ಪ್ರಕ್ರಿಯೆ ಸ್ವಾಭಾವಿಕವಾಗಿಯೇ ನಡೆಯುತ್ತಿತ್ತು. ಬಹುತೇಕ ಮನೆಗಳಲ್ಲಿ ಕುಡಿಯುವ ನೀರಿನ ಬಾವಿಗಳು ಅಥವಾ ಹಳ್ಳಿಗಳಲ್ಲಿನ ಕೆರೆಗಳು, ಕಡು ಬೇಸಗೆಯ ದಿನಗಳಲ್ಲೂ ಬತ್ತುತ್ತಿರಲಿಲ್ಲ. ತತ್ಪರಿಣಾಮವಾಗಿ ಜಿಲ್ಲೆಯ ಜನತೆಗೆ ಜಲಕ್ಷಾಮದ ಬೇಗೆ ಏನೆಂದೇ ತಿಳಿದಿರಲಿಲ್ಲ. 

ಕಣ್ಮರೆಯಾಗುತ್ತಿರುವ ಬಾವಿಗಳು 

ಆದರೆ ಕಾಲಕ್ರಮೇಣ ಸರ್ಕಾರದ ವತಿಯಿಂದ ಜನತೆಗೆ ಶುದ್ಧೀಕರಿಸಿದ ಕುಡಿಯುವ ನೀರಿನ ಪೂರೈಕೆ ಆರಂಭವಾದಂತೆಯೇ, ನಗರವಾಸಿಗಳು ತಮ್ಮ ಬಾವಿಗಳಿಂದ ನೀರನ್ನು ಸೇದುವ ಹವ್ಯಾಸವನ್ನು ತೊರೆಯಲಾರಂಭಿಸಿದ್ದರು. ಮುಂದಿನ ಕೆಲವೇ ವರ್ಷಗಳಲ್ಲಿ ಅನೇಕ ನಗರವಾಸಿಗಳು ತಮ್ಮ ಬಾವಿಗಳನ್ನೇ ಮುಚ್ಚಿಸಿದ್ದರು!. ಇದಕ್ಕೂ ಮಿಗಿಲಾಗಿ ಜಿಲ್ಲೆಯ ಬಹುತೇಕ ಊರುಗಳಲ್ಲಿ ಕಾಣಸಿಗುತ್ತಿದ್ದ ಸರ್ಕಾರಿ ಬಾವಿಗಳನ್ನು ಬಳಸುತ್ತಿದ್ದ ನೂರಾರು ಜನರು, ಸಾರ್ವಜನಿಕ ನಳ್ಳಿಗಳನ್ನು ಬಳಸಲು ಆರಂಭಿಸಿದ್ದರು. ಪುಕ್ಕಟೆಯಾಗಿ ಹಾಗೂ ಶಾರೀರಿಕ ಶ್ರಮವಿಲ್ಲದೇ ಶುದ್ಧೀಕರಿಸಿದ ಕುಡಿಯುವ ನೀರು ಲಭಿಸಲು ಆರಂಭವಾದ ಬಳಿಕ, ಜನರು ಬಾವಿಯ ನೀರಿನ ಬಳಕೆಯನ್ನೇ ನಿಲ್ಲಿಸಿದ್ದ ಪರಿಣಾಮವಾಗಿ ನಿರುಪಯುಕ್ತವೆನಿಸಿದ್ದ ಸಾರ್ವಜನಿಕ ಬಾವಿಗಳ ನೀರು, ಅಲ್ಪಾವಧಿಯಲ್ಲೇ ಕಲುಷಿತಗೊಂಡಿತ್ತು. ವಿಶೇಷವೆಂದರೆ ಇಂತಹ ನಿರುಪಯುಕ್ತ ಸರ್ಕಾರಿ ಬಾವಿಗಳನ್ನು ಸ್ವಚ್ಛಗೊಳಿಸಿ ಸಂರಕ್ಷಿಸಬೇಕಿದ್ದ ಸ್ಥಳೀಯ ಸಂಸ್ಥೆಗಳೇ ಇವುಗಳನ್ನು ಮುಚ್ಚಿಸಿದ್ದವು!. 

ಕೊಳವೆಬಾವಿಗಳ ಹಾವಳಿ 

ಕೆಲವರ್ಷಗಳ ಹಿಂದೆ ನಿರ್ದಿಷ್ಟ ಕಾರಣಗಳಿಂದಾಗಿ ಭತ್ತವನ್ನು ಬೆಳೆಯುವುದನ್ನು ನಿಲ್ಲಿಸಿದ್ದ ಜಿಲ್ಲೆಯ ಕೃಷಿಕರು, ತಮ್ಮ ಜಮೀನಿನಲ್ಲಿ ಅಡಿಕೆ ಸಸಿಗಳನ್ನು ನೆಡಲು ಆರಂಭಿಸಿದ್ದರು. ಮಾರುಕಟ್ಟೆಯಲ್ಲಿ ಅಡಿಕೆಯ ಬೆಲೆ ಗಗನಕ್ಕೇರಿದ ಪರಿಣಾಮವಾಗಿ ಆರಂಭವಾಗಿದ್ದ ಈ ಚಟುವಟಿಕೆಯು, ಕೃಷಿಕರು ತಮ್ಮ ಅಡಿಕೆ ತೋಟಗಳಿಗೆ ನೀರುಣಿಸಲು ಕೊಳವೆ ಬಾವಿಗಳನ್ನು ಕೊರೆಸುವ ಹಂತಕ್ಕೆ ತಲುಪಿತ್ತು. ವರುಷಗಳು ಉರುಳಿದಂತೆಯೇ ಸ್ಥಳೀಯ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರವೂ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಬೇಕಾಬಿಟ್ಟಿಯಾಗಿ ಕೊಳವೆ ಬಾವಿಗಳನ್ನು ಕೊರೆಸಲು ಆರಂಭಿಸಿದ್ದವು. ಇದೀಗ ಬರಪೀಡಿತ ಪ್ರದೇಶಗಳಲ್ಲಿ ಮತ್ತಷ್ಟು ಕೊಳವೆ ಬಾವಿಗಳನ್ನು ಕೊರೆಸುತ್ತಿರುವ ಸರ್ಕಾರವು, ಅಂತರ್ಜಲದ ಮಟ್ಟವು ಇನ್ನಷ್ಟು ಕುಸಿಯಲು ಪರೋಕ್ಷವಾಗಿ ಕಾರಣೀಭೂತವಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಕೆಲವೇ ವರ್ಷಗಳ ಹಿಂದೆ ೪೦೦ - ೬೦೦ ಅಡಿಗಳಷ್ಟು ಕೊರೆದಾಗ ಲಭಿಸುತ್ತಿದ್ದ ನೀರು, ಇದೀಗ ಬಲ್ಲವರು ಹೇಳುವಂತೆ ೧೦೦೦ ಅಡಿಗಳಷ್ಟು ಆಳಕ್ಕೆ ಕುಸಿದಿದೆ. ಕೆಲವರ್ಷಗಳ ಹಿಂದೆಯೇ ರಾಜ್ಯ ಸರ್ಕಾರವು ಮಳೆನೀರಿನ ಕೊಯ್ಲು ಹಾಗೂ ಕೊಳವೆಬಾವಿಗಳಿಗೆ ಜಲಮರುಪೂರಣ, ಕೆರೆ, ತೊರೆ ಮತ್ತು ಬಾವಿಗಳ ಪುನಶ್ಚೇತನಗಳನ್ನು ಕ್ರಮಬದ್ಧವಾಗಿ ಹಾಗೂ ಕಡ್ಡಾಯವಾಗಿ ಅನುಷ್ಠಾನಗೊಳಿಸಿದ್ದಲ್ಲಿ, ಇಂದು ತೀವ್ರಸ್ವರೂಪದ ಬರ ಮತ್ತು ಕುಡಿಯುವ ನೀರಿಗಾಗಿ ಪರದಾಡಬೇಕಾದಂತಹ ಸ್ಥಿತಿ ಉದ್ಭವಿಸುತ್ತಿರಲಿಲ್ಲ. 

ಕೊನೆಯ ಮಾತು 

ಅದೇನೇ ಇರಲಿ, ಪ್ರಸ್ತುತ ನಮ್ಮ ರಾಜ್ಯದ ಮತ್ತು ದೇಶದ ಅನೇಕ ರಾಜ್ಯಗಳನ್ನು ಪೀಡಿಸುತ್ತಿರುವ ಸಮಸ್ಯೆಗಳಿಗೆ ಹೆಚ್ಚುತ್ತಿರುವ ಜನಸಂಖ್ಯೆಯೂ ಕಾರಣ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಯಾವುದೇ ರಾಜಕೀಯ ಪಕ್ಷಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೇವಲ ತಮ್ಮ ಮತಬ್ಯಾಂಕ್ ಬಗ್ಗೆ ಮಾತ್ರ ಚಿಂತಿಸುವ ರಾಜಕಾರಣಿಗಳು, ದೇಶದ ಜನತೆಯನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹರಿಸಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಭಾರತೀಯರನ್ನು ಎಡೆಬಿಡದೇ ಪೀಡಿಸುತ್ತಿರುವ ಬಹುತೇಕ ಸಮಸ್ಯೆಗಳು ಇಂದಿಗೂ ಬಗೆಹರಿದಿಲ್ಲ!. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು 



No comments:

Post a Comment