Friday, May 6, 2016

DO NOT WASTE WATER


                    ಜೀವಜಲವನ್ನು ಅನಾವಶ್ಯಕವಾಗಿ ಪೋಲುಮಾಡದಿರಿ

ಕೆಲವೇ ದಶಕಗಳ ಹಿಂದೆ ಹಗಲಿರುಳು ಸುರಿಯುತ್ತಿದ್ದ ಮುಂಗಾರು ಮಳೆಯು ಕಾಲಕ್ರಮೇಣ ಕ್ಷಯಿಸುತ್ತಾ ಬಂದು ವರುಷಗಳೇ ಸಂದಿವೆ. ಥಟ್ಟನೆ ಬಂದೆರಗಿ ಅಷ್ಟೇ ವೇಗವಾಗಿ ಅದೃಶ್ಯವಾಗುವ ಇಂದಿನ ಮುಂಗಾರು ಮಳೆ ಮತ್ತು ಎಡೆಬಿಡದೆ ಧೋ ಎಂದು ಸುರಿಯುತ್ತಿದ್ದ ಹಿಂದಿನ ಜಡಿಮಳೆಗಳಿಗೆ ಅಜಗಜಾಂತರ ವ್ಯತ್ಯಾಸವೂ ಇದೆ. ಮುಂಗಾರು ಮಳೆಯ ಕೊರತೆ ಮತ್ತು ಹೆಚ್ಚುತ್ತಿರುವ ನೀರಿನ ಬಳಕೆಗಳು ಸುದೀರ್ಘಕಾಲದ ಬಳಿಕ ಜಲಕ್ಷಾಮಕ್ಕೆ ಕಾರಣವೆನಿಸಿದೆ. 

ಜಲಕ್ಷಾಮದ ಸಮಸ್ಯೆ 

ಬೆಳಗಿನ ಜಾವ ಸೂರಿನ ಮೇಲೆ ಬೀಳುತ್ತಿದ್ದ ಮಳೆನೀರಿನ ಸದ್ದಿಗೆ ಎಚ್ಚರವಾಗುತ್ತಿದ್ದ ಹಾಗೂ ಮಳೆಯ ಸದ್ದನ್ನು ಆಲಿಸುತ್ತಾ ನಿದ್ರೆಗೆ ಜಾರುತ್ತಿದ್ದ ದಿನಗಳು ಇದೀಗ ಕೇವಲ ನೆನಪುಗಳಾಗಿವೆ. ಬಾವಿ, ಕೆರೆ, ತೊರೆ ಮತ್ತು ಸದಾ ತುಂಬಿರುತ್ತಿದ್ದ ಹಾಗೂ ಜಲಕ್ಷಾಮ ಎಂದರೇನೆಂದು ಅರಿತಿರದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯಲೂ ನೀರಿಲ್ಲದಿರುವುದು ಸಮಸ್ಯೆಯ ಗಂಭೀರತೆಯನ್ನು ಸಾರುತ್ತಿದೆ. ಪ್ರಸ್ತುತ ಜಾಗತಿಕ ತಾಪಮಾನದ ಹೆಚ್ಚಳ ಮತ್ತು ಈ ಬಾರಿ ಕಣ್ಮರೆಯಾಗಿರುವ ಮುಂಗಾರು ಪೂರ್ವ ಮಳೆಗಳ ಸಂಯುಕ್ತ ಪರಿಣಾಮದಿಂದಾಗಿ  ಪ್ರಾಕೃತಿಕ ಜಲಮೂಲಗಳಾದ ಬಾವಿ, ಕೆರೆ, ತೊರೆ ಮತ್ತು ನದಿಗಳು ಈಗಾಗಲೇ ಬತ್ತಿ ಬರಡಾಗಿವೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಯು ಪುನರಪಿ ಕಾಡದಂತೆ ಹಾಗೂ ಪಾತಾಳವನ್ನು ತಲುಪಿರುವ ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು, ಕೊಳವೆಬಾವಿಗಳಿಗೆ ಜಲ ಮರುಪೂರಣ ಮತ್ತು ಮಳೆನೀರಿನ ಕೊಯ್ಲನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕಾಗಿದೆ. ಜೊತೆಗೆ ನಾವಿಂದು ಅನಾವಶ್ಯಕ ಹಾಗೂ ಅತಿಯಾಗಿ ಪೋಲು ಮಾಡುತ್ತಿರುವ ಅಗಾಧ ಪ್ರಮಾಣದ ನೀರನ್ನು ಉಳಿಸುವ ನಿಟ್ಟಿನಲ್ಲಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕಿದೆ. 

ಜಗತ್ತಿನ ಜಲಸಂಪನ್ಮೂಲದ ಶೇ. ೪ ರಷ್ಟನ್ನು ಹೊಂದಿರುವ ಭಾರತವು ಕೆಲವೇ ವರ್ಷಗಳ ಹಿಂದೆ " ಜಲ ಸಮೃದ್ಧ " ದೇಶವಾಗಿತ್ತು. ಅಗಾಧ ಪ್ರಮಾಣದ ಜಲ ಸಂಪನ್ಮೂಲಗಳಿದ್ದರೂ, ೨೦೧೧ ರಲ್ಲಿ ನಮ್ಮ ದೇಶವು " ನೀರಿನ ಕೊರತೆಯ ಸಮಸ್ಯೆ " ಇರುವ ರಾಷ್ಟ್ರಗಳ ಯಾದಿಯಲ್ಲಿ ಸೇರ್ಪಡೆಗೊಂಡಿತ್ತು. ಇದಕ್ಕೆ ನಿರ್ದಿಷ್ಟ ಕಾರಣವೂ ಇದ್ದಿತು. 

ಬೇಡಿಕೆ - ಲಭ್ಯತೆ 

ಒಂದೆರಡು ವರ್ಷಗಳ ಹಿಂದೆ ಭಾರತದಲ್ಲಿ ನೀರಿನ ಬೇಡಿಕೆಯ ಪ್ರಮಾಣವು ೭೧೮ ಬಿಲಿಯನ್ ( ದಶಲಕ್ಷ ಕೋಟಿ ) ಕ್ಯುಬಿಕ್ ಮೀಟರ್ ಗಳಾಗಿದ್ದು, ೨೦೫೦ ರಲ್ಲಿ ಇದು ೮೩೩ ಬಿ. ಕ್ಯು. ಮೀಟರ್ ತಲುಪಲಿದೆ ಎಂದು ಊಹಿಸಲಾಗಿತ್ತು. ಇದರಲ್ಲಿ ಕೃಷಿ ಜಮೀನಿನ ನೀರಾವರಿಗಾಗಿ ಬಳಸಲ್ಪಡುತ್ತಿದ್ದ ನೀರಿನ ಪ್ರಮಾಣವು ೨೦೧೦ ರಲ್ಲಿ ೫೫೭ ಬಿ.ಕ್ಯು. ಮೀಟರ್ ಆಗಿದ್ದು, ೨೦೫೧ ರಲ್ಲಿ ಇದು ೮೦೭ ಬಿ.ಕ್ಯು. ಮೀಟರ್ ತಲುಪಲಿದೆ ಎನ್ನಲಾಗಿತ್ತು. ಇದೇ ಸಂದರ್ಭದಲ್ಲಿ ದೇಶದ ಜನತೆಯ ಗೃಹಬಳಕೆಯ ನೀರಿನ ಪ್ರಮಾಣವು ೨೦೧೦ ರಲ್ಲಿ ಕೇವಲ ೪೩ ಬಿ.ಕ್ಯು. ಮೀ. ಆಗಿದ್ದು, ೨೦೨೫ ರಲ್ಲಿ ೬೨ ಹಾಗೂ ೨೦೫೦ ರಲ್ಲಿ ೧೧೧ ಬಿ.ಕ್ಯು.ಮೀ ತಲುಪಲಿದೆ ಎಂದು ಅಂದಾಜಿಸಲಾಗಿತ್ತು. ಉದ್ದಿಮೆಗಳು ಬಳಸುತ್ತಿದ್ದ ನೀರಿನ ಪ್ರಮಾಣವು ೨೦೧೦ ರಲ್ಲಿ ಕೇವಲ ೩೭ ಬಿ.ಕ್ಯು.ಮೀ. ಆಗಿದ್ದು, ೨೦೨೫ ರಲ್ಲಿ ಇದು ೬೭ ಮತ್ತು ೨೦೫೦ ರಲ್ಲಿ ೮೧ ಬಿ. ಕ್ಯು. ಮೀ. ಆಗಲಿದೆ ಎಂದು ಊಹಿಸಲಾಗಿತ್ತು. ಅದೇ ರೀತಿಯಲ್ಲಿ ೨೦೧೦೧ ರಲ್ಲಿ ವಿದ್ಯುತ್ ಉತ್ಪಾದನೆಗಾಗಿ ೧೯ ಬಿ.ಕ್ಯು.ಮೀ. ಬಳಕೆಯಾಗಿದ್ದು, ೨೦೨೫ ರಲ್ಲಿ ಇದು ೩೦ ಮತ್ತು ೨೦೫೦ ರಲ್ಲಿ ೭೦ ಬಿ.ಕ್ಯು.ಮೀ. ಮೀರಲಿದೆ ಎಂದು ಅಂದಾಜಿಸಲಾಗಿದೆ. ಈ ರೀತಿಯಲ್ಲಿ ವಿವಿಧ ಉದ್ದೇಶಗಳಿಗಾಗಿ ನಮಗಿಂದು ಅಗಾಧ ಪ್ರಮಾಣದ ನೀರಿನ ಅವಶ್ಯಕತೆ ಇದ್ದರೂ, ದೇಶದ ಅನೇಕ ಭಾಗಗಳಲ್ಲಿ ಜಲಕ್ಷಾಮದ ಸಮಸ್ಯೆ ಇನ್ನಷ್ಟು ಹೆಚ್ಚುತ್ತಿದೆ. ಏಕೆಂದರೆ ನಮ್ಮಲ್ಲಿ ಸುರಿಯುವ ಮಳೆನೀರಿನ ಶೇ. ೬೫ ರಷ್ಟು ಪಾಲು ಸಮುದ್ರವನ್ನು ಸೇರುತ್ತಿದೆ. 

ಭಾರತೀಯರು ಒಂದು ವರ್ಷದಲ್ಲಿ ೨೧೦ ಬಿ.ಕ್ಯು.ಮೀ. ಗೂ ಅಧಿಕ ಪ್ರಮಾಣದ ಅಂತರ್ಜಲವನ್ನು ಬಳಸುತ್ತಿದ್ದು, ಇದು ಜಗತ್ತಿನಲ್ಲೇ ಅತ್ಯಧಿಕ ಎನ್ನಲಾಗಿದೆ. ನಮ್ಮ ದೇಶದಲ್ಲಿನ ಶೇ. ೬೦ ರಷ್ಟು ನೀರಾವರಿ ಜಮೀನಿಗೆ ಇದೇ ಅಂತರ್ಜಲವನ್ನು ಬಳಸಲಾಗುತ್ತಿದೆ. ತತ್ಪರಿಣಾಮವಾಗಿ ದೇಶದ ಶೇ. ೬೦ ಕ್ಕೂ ಅಧಿಕ ಜಿಲ್ಲೆಗಳಲ್ಲಿ ನೀರಿನ ಕೊರತೆ ಬಾಧಿಸುತ್ತಿದೆ. 

೨೦೧೦ ರಲ್ಲಿ ದೇಶದ ಜನಸಂಖ್ಯೆಯು ೧.೦೨೯ ಬಿಲಿಯನ್ ಆಗಿದ್ದು, ಅಂದಿನ ನೀರಿನ ಲಭ್ಯತೆಯ ಪ್ರಮಾಣವು ಒಂದುವರ್ಷದಲ್ಲಿ ತಲಾ ೧೮೧೬ ಕ್ಯು. ಮೀ. ಆಗಿತ್ತು. ೨೦೧೧ ರಲ್ಲಿ ಜನಸಂಖ್ಯೆಯು ೧.೨೧೦ ಬಿ. ಹಾಗೂ ನೀರಿನ ಲಭ್ಯತೆಯ ಪ್ರಮಾಣವು ತಲಾ ೧೫೪೫ ಆಗಿತ್ತು. ೨೦೨೫ ರಲ್ಲಿ ದೇಶದ ಜನಸಂಖ್ಯೆಯು ೧.೩೯೪ ಬಿ. ( ಅಂದಾಜು ) ಮತ್ತು ನೀರಿನ ಲಭ್ಯತೆ ೧೩೪೦ ಮತ್ತು ೨೦೫೦ ರಲ್ಲಿ ಜನಸಂಖ್ಯೆ ೧.೬೪೦ ಬಿ. ಹಾಗೂ ನೀರಿನ ಲಭ್ಯತೆಯು ೧೧೪೦ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಅರ್ಥಾತ್, ದೇಶದ ಜನಸಂಖ್ಯೆ ಹೆಚ್ಚಿದಂತೆಯೇ, ನೀರಿನ ಲಭ್ಯತೆಯ ಪ್ರಮಾಣವು ಕುಸಿಯಲಿದೆ. 

ಕಲುಷಿತ ನೀರು 

ದೇಶದಲ್ಲಿನ ಉದ್ದಿಮೆಗಳು ಬಳಸಿ ವಿಸರ್ಜಿಸುವ ಶೇ. ೯೦ ರಷ್ಟು ಕಲುಷಿತ ನೀರನ್ನು ಶುದ್ಧೀಕರಿಸಿ ನದಿ - ಸಮುದ್ರಗಳಿಗೆ ವಿಸರ್ಜಿಸುತ್ತಿವೆ. ಆದರೆ ಈ ಶುದ್ಧೀಕರಿಸಿದ ಕಲುಷಿತ ನೀರು ಪರಿಸರಸ್ನೇಹಿ ಮಾನದಂಡಗಳಿಗೆ ಅನುಗುಣವಾಗಿಲ್ಲ. ನಮ್ಮ ದೇಶದಲ್ಲಿ ಶೇ.೭೦ ರಷ್ಟು ಪ್ರಮಾಣದ ಜಲಪ್ರದೂಷಣೆಗೆ ನಮ್ಮ ನಗರ - ಮಹಾನಗರಗಳು ಉತ್ಪಾದಿಸುತ್ತಿರುವ ತ್ಯಾಜ್ಯಗಳೇ ಕಾರಣವೆನಿಸಿವೆ. ದೇಶದ ಶೇ. ೩೬ ರಷ್ಟು ಜನರು ವಾಸಿಸುವ ನಗರಗಳು ಬೃಹತ್ ಪ್ರಮಾಣದ ಕಲುಷಿತ ನೀರನ್ನು ಉತ್ಪಾದಿಸಿ ವಿಸರ್ಜಿಸುತ್ತಿವೆ. ಅವಶ್ಯಕ ಮೂಲಸೌಕರ್ಯಗಳ ಕೊರತೆಯಿಂದಾಗಿ ಸ್ಥಳೀಯ ಸಂಸ್ಥೆಗಳು ಕೇವಲ ಶೇ. ೩೧ ರಷ್ಟು ಕಲುಷಿತ ನೀರನ್ನು ಶುದ್ಧೀಕರಿಸುತ್ತಿವೆ. ಹಾಗೂ ಇನ್ನುಳಿದ ಶೇ. ೬೯ ರಷ್ಟು ಕಲುಷಿತ ನೀರನ್ನು ಚರಂಡಿಗಳಲ್ಲಿ ವಿಸರ್ಜಿಸುತ್ತಿವೆ. ಈ ಕಲುಷಿತ ನೀರನ್ನು ಶುದ್ಧೀಕರಿಸಿ ಅನ್ಯ ಉದ್ದೇಶಗಳಿಗಾಗಿ ಬಳಸಬಹುದಾಗಿದೆ. ಹಾಗೂ ಇದಕ್ಕಾಗಿ ವಿವಿಧ ಸಾಮರ್ಥ್ಯದ ಜಲಶುದ್ಧೀಕರಣ ಸ್ಥಾವರಗಳು ಲಭ್ಯವಿದೆ. ಗಣನೀಯ ಪ್ರಮಾಣದ ಕಲುಷಿತ ನೀರನ್ನು ಚರಂಡಿಗಳಿಗೆ ವಿಸರ್ಜಿಸುವ ಪ್ರತಿಯೊಂದು ಕಟ್ಟಡ, ಉದ್ದಿಮೆ ಇತ್ಯಾದಿಗಳು ಕಡ್ಡಾಯವಾಗಿ ಜಲಶುದ್ಧೀಕರಣ ಸ್ಥಾವರಗಳನ್ನು ಸ್ಥಾಪಿಸುವಂತೆ ಸರ್ಕಾರವು ಆದೇಶಿಸಿದಲ್ಲಿ, ಬೃಹತ್ ಪ್ರಮಾಣದ ನೀರಿನ ಉಳಿತಾಯವಾಗಲಿದೆ. 

ಪರಿಹಾರವೇನು?

ದೇಶದ ಪ್ರತಿಯೊಂದು ರಾಜ್ಯಗಳ ಪ್ರತಿಯೊಂದು ನಗರ - ಪಟ್ಟಣಗಳಲ್ಲಿರುವ ಪ್ರತಿಯೊಂದು ಕಟ್ಟಡಗಳಲ್ಲೂ ಮಳೆನೀರು ಕೊಯ್ಲನ್ನು ಕಡ್ಡಾಯವಾಗಿಸಬೇಕು. ಇದರಿಂದಾಗಿ ನಾವಿಂದು ಬಳಸದೇ ಇರುವ ಶೇ. ೬೫ ರಷ್ಟು ಮಳೆನೀರನ್ನು ಉಳಿಸಿ ಬಳಸಬಹುದಾಗಿದೆ. 

ಅಂತೆಯೇ ಕಲುಷಿತ ಜಲಮೂಲಗಳಲ್ಲಿನ ನೀರನ್ನು ಶುದ್ಧೀಕರಿಸಲು ಲಭ್ಯವಿರುವ ೧೩೦ ಕ್ಕೂ ಅಧಿಕ ವಿಧದ ಸಸ್ಯಗಳು ಮತ್ತು ಸೂಕ್ಷ್ಮಾಣುಜೀವಿಗಳನ್ನೂ ಬಳಸುವ ಮೂಲಕ, ಇಂತಹ ನೀರಿನ ಗುಣಮಟ್ಟಗಳನ್ನು ಹೆಚ್ಚಿಸಬೇಕು. ಜೊತೆಗೆ ಇಂತಹ ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಮತ್ತಷ್ಟು ಜನರು ಇವುಗಳನ್ನು ಬಳಸುವಂತಾಗಬೇಕು. 

ಅಂತಿಮವಾಗಿ ಅತ್ಯಧಿಕ ಪ್ರಮಾಣದ ಜಲಪ್ರದೂಷಣೆಗೆ ಕಾರಣವೆನಿಸುತ್ತಿರುವ ಬೃಹತ್ ಉದ್ದಿಮೆ - ಕೈಗಾರಿಕಾ ಘಟಕಗಳು ಹಾಗೂ ನಗರ - ಮಹಾನಗರಗಳು, ಈ ಸಮಸ್ಯೆಯನ್ನು ಸ್ವಯಂ ಪರಿಹರಿಸಬೇಕು ಎನ್ನುವ ಕಾನೂನನ್ನು ರೂಪಿಸಿ, ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಇವೆಲ್ಲವುಗಳೊಂದಿಗೆ ನಾವಿಂದು ಅತಿಯಾಗಿ ಬಳಸಿ ಪೋಲು ಮಾಡುತ್ತಿರುವ ಅಗಾಧ ಪ್ರಮಾಣದ ನೀರನ್ನು ಉಳಿಸಲು, ದೇಶದ ಪ್ರತಿಯೊಬ್ಬ ಪ್ರಜೆಯೂ ಧೃಢ ಸಂಕಲ್ಪ ಮಾಡಬೇಕು. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು   


No comments:

Post a Comment