Friday, July 4, 2014

NON COMMUNICABLE DISEASES






 

 ಪರಸ್ಪರ  ಹರಡದ ಗಂಭೀರ ಕಾಯಿಲೆಗಳು 

ನಮ್ಮನ್ನು ಪೀಡಿಸುವ ಸಹಸ್ರಾರು ಕಾಯಿಲೆಗಳಲ್ಲಿ ಕಾಯಿಲೆಗಳಲ್ಲಿ, ಪರಸ್ಪರ ಒಬ್ಬರಿಂದ ಮತ್ತೊಬ್ಬರಿಗೆ ಹರಡದ ಹಲವಾರು ಕಾಯಿಲೆಗಳೂ ಸೇರಿವೆ. ಆದರೆ ಅನೇಕ ವಿದ್ಯಾವಂತರೂ ನಂಬಿರುವಂತೆ ಸಾಂಕ್ರಾಮಿಕವಾಗಿ ಹರಡಬಲ್ಲ ಅನೇಕ ಕಾಯಿಲೆಗಳಂತೆಯೇ, ಪರಸ್ಪರ ಹರಡದ ಕಾಯಿಲೆಗಳೂ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಜಾಗತಿಕ ಮಟ್ಟದಲ್ಲಿ ಇಂತಹ ಕಾಯಿಲೆಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆಯು ನಿಜಕ್ಕೂ ಗಾಬರಿ ಹುಟ್ಟಿಸುವಂತಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಮನುಷ್ಯನನ್ನು ಬಾಧಿಸುವ ವೈವಿಧ್ಯಮಯ ವ್ಯಾಧಿಗಳಿಗೆ ಅನೇಕ ಕಾರಣಗಳಿವೆ. ಇವುಗಳಲ್ಲಿ ಅನುವಂಶಿಕತೆ, ಜನ್ಮದತ್ತ ಕಾಯಿಲೆಗಳು, ಸೂಕ್ಷ್ಮಾಣು ಜೀವಿಗಳ ಸೋಂಕು,ನಾವು ಸೇವಿಸುವ ನೀರು,ಗಾಳಿ ಹಾಗೂ ಆಹಾರ, ಮಾನಸಿಕ ಒತ್ತಡ, ಪ್ರದೂಷಿತ ಪರಿಸರ ಮತ್ತು ದುಶ್ಚಟಗಳು ಪ್ರಮುಖವಾಗಿವೆ. ಆದರೆ ಇತ್ತೀಚಿನ ಕೆಲ ವರ್ಷಗಳಿಂದ " ಒಬ್ಬರಿಂದ ಮತ್ತೊಬ್ಬರಿಗೆ ಹರಡದ ಕಾಯಿಲೆ" ಗಳ ಪ್ರಮಾಣ ದಿನೇದಿನೇ ಹೆಚ್ಚುತ್ತಿದೆ. ಅರ್ಥಾತ್, ಭಾರತೀಯರು ಅನುಸರಿಸುತ್ತಿರುವ ಪಾಶ್ಚಾತ್ಯ ಹಾಗೂ ಅಧುನಿಕ ಜೀವನಶೈಲಿಗಳ ಪರಿಣಾಮವಾಗಿ, ಒಬ್ಬರಿಂದ ಮತ್ತೊಬ್ಬರಿಗೆ ಹರಡದ ಗಂಭೀರ ಮತ್ತು ಮಾರಕ ಕಾಯಿಲೆಗಳ ಪ್ರಮಾಣ ಅನಿಯಂತ್ರಿತವಾಗಿ ವೃದ್ಧಿಸುತ್ತಿದೆ.  ಜೊತೆಗೆ ಕೆಲ ದಶಕಗಳ ಹಿಂದೆ ಮಧ್ಯ ವಯಸ್ಸು ಮೀರಿದ ಬಳಿಕ ಪ್ರತ್ಯಕ್ಷವಾಗುತ್ತಿದ್ದ ಇಂತಹ ಕಾಯಿಲೆಗಳು, ಇದೀಗ ಎಳೆಯ ವಯಸ್ಸಿನ ಮಕ್ಕಳು ಮತ್ತು ಯುವಜನರನ್ನು ಕಾಡಲಾರಂಭಿಸಿವೆ. ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿ ಪರಿಣಮಿಸಿರುವ ಈ ಸಮಸ್ಯೆಯನ್ನು ಕೇವಲ ಔಷದ ಸೇವನೆಯ ಮೂಲಕ ಗುಣಪಡಿಸಲು ಅಸಾಧ್ಯವೆನಿಸುತ್ತಿದೆ. 

ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯದಂತೆ ಆಸ್ತಮಾ,ವಿವಿಧ ರೀತಿಯ ಕ್ಯಾನ್ಸರ್, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ದೀರ್ಘಕಾಲೀನ ಶ್ವಾಸಾಂಗಗಳ ಅಡಚಣೆಯ ಕಾಯಿಲೆ, ಜನ್ಮದತ್ತ ಆರೋಗ್ಯದ ಸಮಸ್ಯೆಗಳು, ಮಧುಮೇಹ, ಜೀರ್ಣಾಂಗಗಳ ಕಾಯಿಲೆಗಳು ( ಜಠರದ ಹುಣ್ಣು ಇತ್ಯಾದಿ), ಮಾತ್ರ- ಪ್ರಜನನಾಂಗಗಳ ವ್ಯಾಧಿಗಳು(ಉದಾ- ಪ್ರಾಸ್ಟೇಟ್ ಮತ್ತು ಮೂತ್ರಪಿಂಡಗಳ ಕಾಯಿಲೆಗಳು), ನಾರಾ ಮಾನಸಿಕ ಸಮಸ್ಯೆಗಳು ( ಉದಾ-ಮಾನಸಿಕವ್ಯಾಧಿಗಳು, ಅಪಸ್ಮಾರ, ಅಲ್ಜೀಮರ್ಸ್ ಇತ್ಯಾದಿ), ಚರ್ಮರೋಗಗಳು, ಮಾಂಸಪೇಶಿ- ಎಲುಬುಗಳ ಕಾಯಿಲೆಗಳು (ಉದಾ-ಆರ್ಥ್ರೈಟಿಸ್ ), ಕಣ್ಣಿಗೆ ಸಂಬಂಧಿಸಿದ ವ್ಯಾಧಿಗಳು ( ಉದಾ-ಗ್ಲಕೋಮ) ಸಾಂಕ್ರಾಮಿಕವಾಗಿ ಹರಡದ ಕಾಯಿಲೆಗಳ ಪಟ್ಟಿಯಲ್ಲಿ ಸೇರಿವೆ. 

ಸಮಸ್ಯೆಗೆ ಕಾರಣವೇನು?

ಪಾಶ್ಚಾತ್ಯರ ಜೀವನಶೈಲಿಯಿಂದ ಪ್ರಭಾವಿತರಾಗಿರುವ ಗಣನೀಯ ಪ್ರಮಾಣದ ಭಾರತೀಯರು, ಸುಖಲೋಲುಪತೆಗೆ ಶರಣಾಗಿರುವುದು ಆರೋಗ್ಯದ ದೃಷ್ಟಿಯಿಂದ ಹಿತಕರವಲ್ಲ ಎನ್ನುವುದರಲ್ಲಿ ಸಂದೇಹವಿಲ್ಲ. ಆರಾಮದಾಯಕ ಜೀವನಕ್ಕಾಗಿ ನಾವಿಂದು ಆವಿಷ್ಕರಿಸಿರುವ ಅನೇಕ ಸೌಕರ್ಯಗಳು ಮತ್ತು ಯಂತ್ರಗಳಿಂದಾಗಿ, ನಮ್ಮ ಶಾರೀರಿಕ ಕ್ಷಮತೆಯ ಮಟ್ಟದೊಂದಿಗೆ, ರೋಗನಿರೋಧಕ ಶಕ್ತಿಯೂ ಪಾತಾಳಕ್ಕೆ ಕುಸಿದಿದೆ. ತತ್ ಪರಿಣಾಮವಾಗಿ ಈ ವರ್ಗಕ್ಕೆ ಸೇರಿದ ಅನೇಕ ಕಾಯಿಲೆಗಳು ಅಧಿಕತಮ ಜನರನ್ನು ಬಾಧಿಸುತ್ತಿವೆ. ಇದರೊಂದಿಗೆ ಇಂತಹ ಕೆಲವು ಕಾಯಿಲೆಗಳು ಅನುವಂಶಿಕವಾಗಿ ಮುಂದಿನ ಪೀಳಿಗೆಯಲ್ಲಿ ಕಾಣಿಸಿಕೊಂಡಲ್ಲಿ, ಮತ್ತೆ ಕೆಲವು ಕಾಯಿಲೆಗಳು ನಮ್ಮ ಸುತ್ತಮುತ್ತಲ ಪರಿಸರ, ನಾವು ಸೇವಿಸುವ ಕಲುಷಿತ ಗಾಳಿ ಹಾಗೂ ನೀರು ಮತ್ತು ಕೀಟನಾಶಕಗಳಿಂದ ಸಮೃದ್ಧವಾಗಿರುವ ಆಹಾರ, ಪೋಷಕಾಂಶಗಳೇ ಇಲ್ಲದ ನಿರುಪಯುಕ್ತ ಆಹಾರ (ಜಂಕ್ ಫುಡ್) ಗಳ ಸೇವನೆ, ಆರಾಮದಾಯಕ ಹಾಗೂ ನಿಷ್ಕ್ರಿಯ ಜೀವನ ಶೈಲಿ, ಅತಿಯಾದ ಧೂಮಪಾನ-ಮದ್ಯಪಾನ ಹಾಗೂ ಮಾದಕ ದ್ರವ್ಯಗಳ ಸೇವನೆ, ತೀವ್ರ ಮಾನಸಿಕ ಒತ್ತಡವೇ ಮುಂತಾದ ಕಾರಣಗಳಿಂದ ಸಾಂಕ್ರಾಮಿಕವಾಗಿ ಹರಡದ ವ್ಯಾಧಿಗಳು ಉದ್ಭವಿಸುವ ಸಾಧ್ಯತೆಗಳಿವೆ. 

ಅಪಾಯಕಾರಿ ಅಂಶಗಳು 

ಶಾರೀರಿಕ ನಿಷ್ಕ್ರಿಯತೆ, ತಂಬಾಕಿನ ಬಳಕೆ, ಅಧಿಕ ತೂಕ- ಅತಿ ಬೊಜ್ಜು, ಅಧಿಕ ರಕ್ತದ ಒತ್ತಡ, ರಕ್ತದಲ್ಲಿ ಕೊಲೆಸ್ಟರಾಲ್ ಮತ್ತು ಸಕ್ಕರೆಯ (ಗ್ಲುಕೋಸ್) ಅಂಶಗಳು ಅಧಿಕವಾಗಿರುವುದು, ಇಂತಹ ವ್ಯಾಧಿಪೀಡಿತರ ಮರಣಕ್ಕೆ ಕಾರಣವೆನಿಸುವ ಅಪಾಯಕಾರಿ ಅಂಶಗಳಾಗಿವೆ. ಸಾಂಕ್ರಾಮಿಕವಾಗಿ ಹರಡದ ಕಾಯಿಲೆಗಳ ಮಾರಕತೆಯ ಅಂಕಿ ಅಂಶಗಳು ಈ ಕೆಳಗಿನಂತಿವೆ.  

ಜಾಗತಿಕ ಮಟ್ಟದಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹರಡದ ಕಾಯಿಲೆಗಳಿಗೆ ಶೇ.೬೩ ರಷ್ಟು ಮಂದಿ ಈಡಾಗುತ್ತಿದ್ದಾರೆ. ಅಂತೆಯೇ ವರ್ಷದಲ್ಲಿ ೩೬ ದಶಲಕ್ಷ ಜನರು ಇಂತಹ ವ್ಯಾಧಿಗಳಿಗೆ ಬಲಿಯಾಗುತ್ತಿದ್ದಾರೆ. ಇದಕ್ಕೂ ಮಿಗಿಲಾಗಿ ಸುಮಾರು ೯ ದಶಲಕ್ಷ ಜನರು ೬೦ ವರ್ಷ ವಯಸ್ಸಿಗೆ ಮುನ್ನವೇ ಅಕಾಲಿಕ ಮರಣಕ್ಕೆ ಈಡಾಗುತ್ತಿದ್ದಾರೆ. 

ಈ ಸಮಸ್ಯೆಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಜೆಗಳೇ ಹೆಚ್ಚಾಗಿ ಈಡಾಗುತ್ತಿದ್ದು, ೬೦ ವರ್ಷ ವಯಸ್ಸಿಗೆ ಮುನ್ನವೇ ಮೃತಪಡುತ್ತಿರುವ  ಜನರು ಮಧ್ಯಮ ಮತ್ತು ಅಲ್ಪ ಆದಾಯದ ದೇಶಗಳ ಪ್ರಜೆಗಳೇ ಆಗಿದ್ದಾರೆ. ಈ ಗಂಭೀರ ಸಮಸ್ಯೆಯನ್ನು ತಡೆಗಟ್ಟದೇ ಇದ್ದಲ್ಲಿ, ೨೦೩೦ ನೆ ಇಸವಿಯಲ್ಲಿ ೫೩ ದಶಲಕ್ಷ ಜನರು ಇದಕ್ಕೆ ಬಲಿಯಾಗಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಿಸಿದೆ. ಇಷ್ಟು ಮಾತ್ರವಲ್ಲ, ಇದರಿಂದಾಗಿ ದೇಶದ ಪ್ರಜೆಗಳು ಮಾತ್ರವಲ್ಲ. ದೇಶದ ಆರ್ಥಿಕತೆಯ ಮೇಲೂ ಇದು ಪರಿಣಾಮ ಬೀರಲಿದೆ. ೨೦೦೫ ರಿಂದ  ೨೦೧೫ ರ ಅವಧಿಯಲ್ಲಿ ಹೆಚ್ಚಲಿರುವ ಈ ಸಮಸ್ಯೆಯಿಂದಾಗಿ,ನಮ್ಮ ದೇಶದ ಬೊಕ್ಕಸಕ್ಕೆ ೨೩೬ ಬಿಲಿಯನ್ ಡಾಲರ್ ನಷ್ಟು ನಷ್ಟಕ್ಕೆ ಕಾರಣವೆನಿಸಲಿದೆ ಎಂದು ವಿಶ್ವ ಆರೋಗ್ಯಸಂಸ್ಥೆ ಹೇಳಿದೆ. 

ಪರಿಹಾರವೇನು?

ಸಾಮಾನ್ಯವಾಗಿ ನಮ್ಮನ್ನು ಪೀಡಿಸುವ ಇತರ ಕಾಯಿಲೆಗಳ ಚಿಕಿತ್ಸೆಗಿಂತ ಸಾಂಕ್ರಾಮಿಕವಾಗಿ ಹರಡದ ಹಾಗೂ ಸುದೀರ್ಘಕಾಲ ಬಾಧಿಸುವ ವ್ಯಾಧಿಗಳ ಚಿಕಿತ್ಸಾ ವೆಚ್ಚವು ಸಾಕಷ್ಟು ಅಧಿಕವಾಗಿರುತ್ತದೆ. ಸರಕಾರವು ಈ ಸಮಸ್ಯೆಯನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇದ್ದಲ್ಲಿ, ಈ ವ್ಯಾಧಿಗಳು ಮತ್ತು ತತ್ಸಂಬಂಧಿತ ಮರಣದ ಪ್ರಮಾಣಗಳು ಇನ್ನಷ್ಟು ಹೆಚ್ಚಲಿವೆ. ಕೇಂದ್ರ ಸರಕಾರವು ಇದೇ ಉದ್ದೇಶದಿಂದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ, ರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಮಧುಮೇಹ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಪಕ್ಷವಾತ ಹಾಗೂ ಕ್ಯಾನ್ಸರ್ ವ್ಯಾಧಿಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮಗಳನ್ನು ಅನುಷ್ಠಾನಿಸಿದೆ. ಆದರೂ ಸಮಗ್ರ ಕಾರ್ಯಕ್ರಮವನ್ನು ಹದ್ದಿನ ಕಣ್ಣಿನಿಂದ ವೀಕ್ಷಿಸಿ, ಅವಶ್ಯಕ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವೆನಿಸುತ್ತದೆ. ಜೊತೆಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕಾದ ಅವಶ್ಯಕತೆಯೂ ಇದೆ. ಜೊತೆಗೆ ಇಂತಹ ವ್ಯಾಧಿಗಳನ್ನು ತ್ವರಿತಗತಿಯಲ್ಲಿ ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಇವೆಲ್ಲಕ್ಕೂ ಮಿಗಿಲಾಗಿ ಜನಸಾಮಾನ್ಯರಿಗೆ ಈ ಸಮಸ್ಯೆಯ ಬಗ್ಗೆ ವಿಶದವಾದ ಮಾಹಿತಿಗಳನ್ನು ನೀಡುವ ಮೂಲಕ ಇದನ್ನು ಸಮರ್ಪಕವಾಗಿ ನಿಯಂತ್ರಿಸಬಹುದಾಗಿದೆ. 

ದೇಶದ ಪ್ರಜೆಗಳ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುವ ಮತ್ತು ದೇಶದ ಬೊಕ್ಕಸಕ್ಕೆ ಕನ್ನವನ್ನು ಕೊರೆಯಬಲ್ಲ ಈ ಗಂಭೀರ ಹಾಗೂ ಮಾರಕ ಸಮಸ್ಯೆಯನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ವಿಚಾರದಲ್ಲಿ ಜನಸಾಮಾನ್ಯರು ಸರಕಾರದೊಂದಿಗೆ ಕೈಜೋಡಿಸಬೇಕಾಗಿದೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 




Thursday, July 3, 2014

Disposable blankets for railway travellers!





 ತ್ಯಾಜ್ಯಗಳ ಉತ್ಪಾದನೆಯನ್ನು ಹೆಚ್ಚಿಸಲಿರುವ ರೈಲ್ವೇ ಇಲಾಖೆ !

ಭವ್ಯ ಭಾರತದ ಪ್ರತಿಯೊಂದು ರಾಜ್ಯಗಳ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು, ತಮ್ಮ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಉತ್ಪನ್ನವಾಗುತ್ತಿರುವ ವೈವಿಧ್ಯಮಯ ತ್ಯಾಜ್ಯಗಳನ್ನು ಸಂಗ್ರಹಿಸಿ, ವೈಜ್ನಾನಿಕ ವಿಧಾನಗಳಿಂದ ವಿಲೇವಾರಿ ಮಾಡಲು ಹೆಣಗಾಡುತ್ತಿವೆ. ಆದರೆ ಸ್ಥಳೀಯ ಜನರ ಅಸಹಕಾರ, ನಿರ್ಲಕ್ಷ್ಯ ಮತ್ತು ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗಳಿಗೆ ಬೇಕಾಗುವ ಅವಶ್ಯಕ ಸಂಖ್ಯೆಯ ವಾಹನಗಳು, ಸಿಬಂದಿ ಮತ್ತು ತ್ಯಾಜ್ಯ ವಿಲೇವಾರಿ ಘಟಕಗಳ ಅಭಾವದಿಂದಾಗಿ ಸೋತುಹೋಗಿವೆ. ಈ ಸಮಸ್ಯೆಯನ್ನು ಸಮರ್ಥವಾಗಿ ಪರಿಹರಿಸಲು ತ್ಯಾಜ್ಯಗಳ ಉತ್ಪಾದನೆಯನ್ನು ತಕ್ಷಣದಿಂದಲೇ ಕಡಿಮೆ ಮಾಡಬೇಕಾದ ಅನಿವಾರ್ಯತೆಯೂ ಇದೆ. ಏಕೆಂದರೆ ತ್ಯಾಜ್ಯಗಳ ಉತ್ಪಾದನೆ ಹೆಚ್ಚಿದಷ್ಟು, ಇವುಗಳ ಸಂಗ್ರಹ ಮತ್ತು ವಿಲೆವಾರಿಗಳು ಇನ್ನಷ್ಟು ಜಟಿಲವಾಗುತ್ತವೆ. ಆದರೆ ಭಾರತೀಯ ರೈಲ್ವೇ ಇಲಾಖೆಯು ಇದಕ್ಕೆ ತದ್ವಿರುದ್ಧವಾಗಿ, ತ್ಯಾಜ್ಯಗಳ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸುವ ಯೋಜನೆಯೊಂದನ್ನು ಸದ್ಯೋಭವಿಷ್ಯದಲ್ಲಿ ಜಾರಿಗೊಳಿಸಲು ನಿರ್ಧರಿಸಿದೆ!. 

ಬಳಸಿ ಎಸೆಯುವ ಹಾಸಿಗೆ!

ಇದೇ ತಿಂಗಳಿನ ಮೊದಲ ವಾರದಲ್ಲಿ ರೈಲ್ವೇ ಇಲಾಖೆಯ ಅಧಿಕಾರಿಯೊಬ್ಬರು ನೀಡಿದ್ದ ಹೇಳಿಕೆಯಂತೆ, ಈಗ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ನೀಡುತ್ತಿರುವ ಹೊದಿಕೆಗಳು ಶುಚಿಯಾಗಿಲ್ಲ ಎಂದು ವ್ಯಾಪಕವಾದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಪಾಲಿಯೆಸ್ಟರ್ ನಿರ್ಮಿತ ಹೊದಿಕೆಗಳನ್ನು ನೀಡಲು ಚಿಂತನೆ ನಡೆದಿದೆ. ಇದೇ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿದ್ದ ವರದಿಯ ತಲೆಬರಹದಲ್ಲಿ " ಹೊದಿಕೆ" ಎನ್ನುವ ಪದವನ್ನು ಬಳಸಲಾಗಿದ್ದರೂ, ವರದಿಯಲ್ಲಿ ಬಳಸಿ ಎಸೆಯುವ ಹಾಸಿಗೆಯನ್ನು ನೀಡಲಾಗುವುದು ಎಂದು ನಮೂದಿಸಲಾಗಿತ್ತು. ದೂರಪ್ರಯಾಣದ ರೈಲುಗಳಲ್ಲಿ ಸ್ಲೀಪರ್ ಕೋಚ್ ಬಳಸುವ ಪ್ರಯಾಣಿಕರಿಗಾಗಿ ನೀಡಲಿರುವ ಬಳಸಿ ಎಸೆಯುವ ಹೊದಿಕೆ ಅಥವಾ ಹಾಸಿಗೆಗಳು, ರೈಲುಗಳಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳ ಪ್ರಮಾಣವನ್ನು ಇನ್ನಷ್ಟು ಹೆಚ್ಚಲು ಕಾರಣವೆನಿಸಲಿದೆ. ಜೊತೆಗೆ ಈ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ವ್ಯವಸ್ಥೆಗಾಗಿ, ಇಲಾಖೆಯು ಇನ್ನಷ್ಟು ಹಣವನ್ನು ವ್ಯಯಿಸಬೇಕಾಗುತ್ತದೆ. ಬೆಂಗಳೂರು- ದೆಹಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬಳಸಿ ಎಸೆಯುವ ಹೊದಿಕೆಗಳನ್ನು ಪ್ರಾಯೋಗಿಕವಾಗಿ ಒದಗಿಸಲಿರುವ ಇಲಾಖೆಯು, ಮುಂದೆ ಇತರ ರೈಲುಗಳಲ್ಲೂ ಇದನ್ನು ಅನುಷ್ಠಾನಿಸುವ ಸೂಚನೆಯನ್ನು ನೀಡಿದೆ.  ಈ ಬಾರಿಯ ರೈಲ್ವೇ ಬಜೆಟ್ ನಲ್ಲಿ ಈ ಪ್ರಸ್ಥಾವನೆಯು ಘೋಷಣೆಯಾಗಲಿದೆ. 

ಸ್ವಚ್ಚತೆಯ ಕಾಳಜಿ 

ನಿಜ ಹೇಳಬೇಕಿದ್ದಲ್ಲಿ ಪ್ರಯಾಣಿಕರಿಗೆ ಒದಗಿಸುತ್ತಿರುವ ಹೊದಿಕೆಗಳು ಸ್ವಚ್ಚವಾಗಿಲ್ಲ ಎನ್ನುವ ದೂರುಗಳ ಆಧಾರದ ಮೇಲೆ ಇಂತಹ  ಕ್ರಮ ಕೈಗೊಳ್ಳಲು ನಿರ್ಧರಿಸಿರುವ ಇಲಾಖೆಯು, ಅಧಿಕತಮ ರೈಲು ಬೋಗಿಗಳಲ್ಲಿ ಸದಾ ತುಂಬಿರುವ ಕಸ ಮತ್ತಿತರ ತ್ಯಾಜ್ಯಗಳು,ಆಗಾಗ  ಸ್ವಚ್ಛಗೊಳಿಸದ ಕಾರಣದಿಂದಾಗಿ ಹೊಲಸಾಗಿ ದುರ್ವಾಸನೆಯನ್ನು ಬೀರುವ ಶೌಚಾಲಯಗಳು ಮತ್ತು ರೈಲು ಬೋಗಿಗಳಲ್ಲಿರುವ ಪುಟ್ಟ ಕಸದ ಡಬ್ಬಿಗಳನ್ನು ತೆರವು- ಸ್ವಚ್ಚಗೊಳಿಸುವ ವಿಚಾರದ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇರಲು ಕಾರಣವೇನೆಂದು ನಮಗೂ ತಿಳಿದಿಲ್ಲ. ಇಲಾಖೆ ನಿಗದಿಸಿದ ಪ್ರಯಾಣ ದರವನ್ನು ಪಾವತಿಸಿ ಪಯಣಿಸುವ ಜನರ ಪ್ರತಿಯೊಂದು ದೂರನ್ನು ಪರಿಹರಿಸಬೇಕಾದ ಹೊಣೆಗಾರಿಕೆ ಇಲಾಖೆಯ ಅಧಿಕಾರಿಗಳ ಮೇಲಿದೆ. ಇದಕ್ಕೆ ವ್ಯತಿರಿಕ್ತವಾಗಿ ಸ್ಲೀಪರ್ ಕೋಚ್ ಗಳಲ್ಲಿ ಪಯಣಿಸುವ ಪ್ರಯಾಣಿಕರ ದೂರುಗಳನ್ನು ಮಾತ್ರ ಗಂಭೀರವಾಗಿ ಪರಿಗಣಿಸಿ, ಇದನ್ನು ಪರಿಹರಿಸುವ ಸಲುವಾಗಿ ಇನ್ನಷ್ಟು ತ್ಯಾಜ್ಯಗಳನ್ನು ಉತ್ಪಾದಿಸುವುದು ನಿಜಕ್ಕೂ ಸಮರ್ಥನೀಯವಲ್ಲ.ಈಗಾಗಲೇ ದೂರ ಪ್ರಯಾಣ ಮಾಡುವ ರೈಲು ಪ್ರಯಾಣಿಕರು ತಮ್ಮೊಂದಿಗೆ ಕೊಂಡೊಯ್ಯುವ ಖಾದ್ಯಪೇಯಗಳನ್ನು ಆಸ್ವಾದಿಸಿದ ಬಳಿಕ, ಬಳಸಿ ಎಸೆಯುವ ಪ್ಲಾಸ್ಟಿಕ್ ತಟ್ಟೆ,ಲೋಟ, ಚಮಚ, ಕೈಚೀಲ ಮತ್ತು ಬಾಟಲಿ ಮತ್ತಿತರ ತ್ಯಾಜ್ಯಗಳಿಂದಾಗಿ ರೈಲು ಹಳಿಗಳ ಇಕ್ಕೆಲಗಳಲ್ಲೂ ಇವುಗಳ ರಾಶಿಗಳು ರಾರಾಜಿಸುತ್ತಿವೆ. ರೈಲು ಬೋಗಿಗಳಲ್ಲಿನ ತ್ಯಾಜ್ಯಗಳನ್ನೇ ತೆರವುಗೊಳಿಸದ ಇಲಾಖೆಯು, ಹಳಿಗಳ ಇಕ್ಕೆಲಗಳಲ್ಲಿ ಎಸೆದಿರುವ ತ್ಯಾಜ್ಯಗಳನ್ನು ತೆರವುಗೊಳಿಸುವ ಸಾಧ್ಯತೆಗಳೇ ಇಲ್ಲ. ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವೆನಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆ ಮಾಡುವ ಹೊರತಾಗಿ, ಇದೀಗ ರೈಲ್ವೇ ಇಲಾಖೆಯು ಸ್ಲೀಪರ್ ಕೋಚ್ ಬಳಸುವ ಪ್ರಯಾಣಿಕರಿಗೆ ಬಳಸಿ ಎಸೆಯುವ ಹಾಸಿಗೆ ಅಥವಾ ಹೊದಿಕೆಗಳನ್ನು ನೀಡಲಿರುವುದು ಎಷ್ಟು ಸಮಂಜಸ ಎನ್ನುವ ನಿರ್ಧಾರವನ್ನು  ಪರಾಮರ್ಶೆ ಮಾಡಬೇಕಾಗಿದೆ. ನಮ್ಮ ರಾಜ್ಯದವರೇ ಆಗಿರುವ ರೈಲ್ವೇ ಸಚಿವರು ಇಂತಹ ಯೋಜನೆಗಳ ಸಾಧಕ- ಬಾಧಕಗಳನ್ನು ಅರಿತುಕೊಳ್ಳದೇ ಅನುಷ್ಠಾನಿಸುವುದು ನಿಶ್ಚಿತವಾಗಿಯೂ ಹಿತಕರವಲ್ಲ ಎನ್ನುವುದು ನಮ್ಮ ಅನಿಸಿಕೆ. 

ಕೊನೆಯ ಮಾತು 

ನಮ್ಮ ದೇಶದ ಉದ್ದಗಲಕ್ಕೂ ದಿನನಿತ್ಯ ನೂರಾರು ದೂರ ಪ್ರಯಾಣದ ರೈಲುಗಳು ಸಂಚರಿಸುತ್ತಿದ್ದು, ಸಹಸ್ರಾರು ಪ್ರಯಾಣಿಕರು ಸ್ಲೀಪರ್ ಕೋಚ್ ಬಳಸುತ್ತಿದ್ದಾರೆ. ಇವರೆಲ್ಲರೂ ಬಳಸಿ ಎಸೆಯುವ ಹೊದಿಕೆಗಳನ್ನು ( ರಾಶಿಯನ್ನು) ಸಂಗ್ರಹಿಸಿ, ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸಾಗಿಸಿ ವಿಲೇವಾರಿ ಮಾಡುವ ವ್ಯವಸ್ಥೆಯು ರೈಲ್ವೇ ಇಲಾಖೆಯ ಬಳಿ ಇಲ್ಲವೆನ್ನುವುದು ಸಚಿವರಿಗೂ ತಿಳಿದಿರಲೇಬೇಕು. ಆದುದರಿಂದ ಇನ್ನಷ್ಟು ಸಮಸ್ಯೆಗಳಿಗೆ ಕಾರಣವೆನಿಸಬಲ್ಲ ಈ ನಿರ್ಧಾರವನ್ನು ರದ್ದುಪಡಿಸಿ, ರೈಲು ಬೋಗಿಗಳ ಮತ್ತು ಅವುಗಳಲ್ಲಿನ ಶೌಚಾಲಯಗಳ ಸ್ವಚ್ಚತೆಯತ್ತ ಗಮನಹರಿಸುವುದು ಉಪಯುಕ್ತವೆನಿಸೀತು!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 


Tuesday, July 1, 2014

ROAD ACCIDENTS AND PREVENTION





 

 ರಸ್ತೆ ಅಪಘಾತಗಳನ್ನು ತಡೆಗಟ್ಟುವತ್ತ ಗಮನಹರಿಸಿ 

ಅಭಿವೃದ್ಧಿಪಥದಲ್ಲಿ ದಾಪುಗಾಲು ಹಾಕುತ್ತಿರುವ ನಮ್ಮ ದೇಶದಲ್ಲಿ ಅಸಂಖ್ಯ ಪ್ರಜೆಗಳ ಅಕಾಲಿಕ ಮರಣಕ್ಕೆ ಕಾರಣಗಳೂ ಹಲವಾರು. ಅದರಲ್ಲೂ ಗಂಭೀರ ಹಾಗೂ ಮಾರಕ ಆರೋಗ್ಯದ ಸಮಸ್ಯೆಗಳು ಸಹಸ್ರಾರು ಜನರ ಮರಣಕ್ಕೆ ಕಾರಣವೆನಿಸುತ್ತಿವೆ. ಅದರಲ್ಲೂ ಸಾಂಕ್ರಾಮಿಕವಾಗಿ ಹರಡುವ ಮತ್ತು ಹರಡದ ಅನೇಕ ವಿಧದ ಕಾಯಿಲೆಗಳಿಗೆ ಅನೇಕ ಜನರು ಬಲಿಯಾಗುತ್ತಿದ್ದಾರೆ. ಅದೇ ರೀತಿಯಲ್ಲಿ ನಮ್ಮ ದೇಶದಲ್ಲಿ ಪ್ರತಿನಿತ್ಯ ಸಂಭವಿಸುತ್ತಿರುವ ರಸ್ತೆ ಅಪಘಾತಗಳಿಂದಾಗಿಯೂ ಸಹಸ್ರಾರು ಜನರು ಅಸುನೀಗುವುದರೊಂದಿಗೆ, ಮತ್ತಷ್ಟು ಜನರು ಶಾಶ್ವತ ಅಂಗವೈಕಲ್ಯಕ್ಕೆ ಈಡಾಗುತ್ತಿದ್ದಾರೆ. ಆದರೆ ಅತ್ಯಂತ ಗಂಭೀರವೆಂದು ಪರಿಗಣಿಸಬಹುದಾದ ಈ ಸಮಸ್ಯೆಯನ್ನು ದೇಶದ "ಆರೋಗ್ಯ ಕಾರ್ಯಸೂಚಿ" ಯಲ್ಲಿ ನಮೂದಿಸದೇ ಇರುವುದು ಮಾತ್ರ ನಂಬಲು ಅಸಾಧ್ಯವೆನಿಸುತ್ತದೆ. 

ಇತ್ತೀಚಿಗೆ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದ ಗೋಪಿನಾಥ ಮುಂಡೆಯವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂದರ್ಭದಲ್ಲಿ ಈ ವಿಚಾರದ ಬಗ್ಗೆ ಒಂದಿಷ್ಟು ಚರ್ಚೆ ನಡೆದಿದ್ದರೂ, ಅವರು ಹಿರಿಯ ರಾಜಕಾರಣಿ ಮತ್ತು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದುದೇ ಇದಕ್ಕೆ ಕಾರಣವೆನಿಸಿತ್ತು. ಅಪರೂಪದಲ್ಲಿ ಇಂತಹ ಘಟನೆಗಳ ಬಗ್ಗೆ ಮಾಧ್ಯಮಗಳು ಗಮನ ಸೆಳೆದರೂ, ಸರ್ಕಾರದ ಮಟ್ಟದಲ್ಲಿ ರಸ್ತೆ ಅಪಘಾತಗಳು ಮತ್ತು ಇವುಗಳಿಗೆ ಬಲಿಯಾಗುತ್ತಿರುವವರ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದಲ್ಲಿ ತಪ್ಪೆನಿಸಲಾರದು. 

ಗಂಭೀರ ಸಮಸ್ಯೆ 

ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಮಟ್ಟದ " ಆರೋಗ್ಯ ಕಾರ್ಯಸೂಚಿ"ಯಲ್ಲಿ ರಸ್ತೆ ಅಪಘಾತಗಳಿಗೆ ಆಗ್ರ ಸ್ಥಾನವನ್ನು ನೀಡಿದೆ. ಸಂಸ್ಥೆಯು ಹೇಳುವಂತೆ ವಿಶ್ವಾದ್ಯಂತ ಸಂಭವಿಸುತ್ತಿರುವ ರಸ್ತೆ ಅಪಘಾತಗಳು, ೧೫ ರಿಂದ ೨೯ ವರ್ಷ ವಯಸ್ಸಿನ ಯುವಜನರ ಮರಣಕ್ಕೆ ಕಾರಣವೆನಿಸುತ್ತಿದೆ. ವಿಶೇಷವೆಂದರೆ ಈ ಸಮಸ್ಯೆಯು ಅತ್ಯಲ್ಪ ಅಥವಾ ಮಧ್ಯಮ ಆದಾಯವಿರುವ ಮತ್ತು ಅಲ್ಪ ಪ್ರಮಾಣದ ವಾಹನಗಳು ಇರುವ ದೇಶಗಳಲ್ಲೇ ಸಂಭವಿಸುತ್ತಿದ್ದು, ಇದರ ಪ್ರಮಾಣವು ಶೇ.೯೦ ರಷ್ಟಿದೆ!. ಅರ್ಥಾತ್, ನಾವಿಂದು ಸುರಕ್ಷಿತ ಹಾಗೂ ನಿರಾತಂಕವಾಗಿ ವಾಹನಗಳನ್ನು ಚಲಾಯಿಸಬಲ್ಲ ಸಮರ್ಪಕ ರಸ್ತೆಗಳು ಮತ್ತು ಕಾನೂನುಗಳು ಇಲ್ಲದಿದ್ದರೂ, ವಾಹನಗಳನ್ನು ಚಲಾಯಿಸುತ್ತಿರುವುದೇ ಇದಕ್ಕೆ ಮೂಲ ಕಾರಣವೆನಿಸಿದೆ. ಹಾಗೂ ಈ ವಿಲಕ್ಷಣ ಸಮಸ್ಯೆಗೆ ಬಲಿಯಾಗುತ್ತಿರುವವರಲ್ಲಿ ಶೇ.೫೦ ರಷ್ಟು ಮಂದಿ ಪಾದಚಾರಿಗಳು, ದ್ವಿಚಕ್ರ ವಾಹನ ಚಾಲಕರು ಮತ್ತು ಸೈಕಲ್ ಸವಾರರೇ ಆಗಿದ್ದಾರೆ!. 

ನಮ್ಮ ದೇಶದ ರಸ್ತೆಗಳಲ್ಲಂತೂ ಪಾದಚಾರಿಗಳು ನಿರಾತಂಕವಾಗಿ ನಡೆದಾಡುವ ಹಾಗೂ ಸೈಕಲ್ ಸವಾರರು ನಿರ್ಭೀತಿಯಿಂದ ಸವಾರಿ ಮಾಡುವ ಸಾಧ್ಯತೆಗಳೇ ಇಲ್ಲ. ಏಕೆಂದರೆ ನಾವಿಂದು ನಿರ್ಮಿಸುತ್ತಿರುವ ನೂತನ ರಸ್ತೆಗಳು ಇದಕ್ಕೆ ಆಸ್ಪದವನ್ನೇ ನೀಡುವುದಿಲ್ಲ. ಅದೇ ರೀತಿಯಲ್ಲಿ ಪಾದಚಾರಿಗಳು, ಅದರಲ್ಲೂ ಪುಟ್ಟ ಮಕ್ಕಳು, ಮಹಿಳೆಯರು ಮತ್ತು ವಯೋವೃದ್ಧರು, ಯಾವುದೇ ರಸ್ತೆಗಳನ್ನು ಸುರಕ್ಷಿತವಾಗಿ ದಾಟಲು ಆಗುತ್ತಿಲ್ಲ. ನಮ್ಮ ರಸ್ತೆಗಳ ಸ್ಥಿತಿಗತಿಗಳು ಮತ್ತು ಅತಿಯಾದ ವಾಹನ ದಟ್ಟಣೆಗಳೊಂದಿಗೆ, ವಾಹನ ಚಾಲಕರು ಪಾದಚಾರಿಗಳನ್ನು ಉಪೇಕ್ಷಿಸುತ್ತಿರುವುದು ಈ ಸಮಸ್ಯೆಗೆ ಕಾರಣವೆನಿಸಿದೆ. 

ಪರಿಹಾರವೇನು?

ನಮ್ಮ ದೇಶದಲ್ಲಿ ವರ್ಷಂಪ್ರತಿ ನಿಯಮಿತವಾಗಿ " ವಾಹನಗಳ ಗಣತಿ" ಯನ್ನು ನಡೆಸಲಾಗುತ್ತಿದ್ದರೂ, ಇವುಗಳ ವರದಿಯನ್ನು ಆಧರಿಸಿ, ವಾಹನಗಳ ಸಂಖ್ಯೆ ಮತ್ತು ತೂಕಗಳಿಗೆ ಅನುಗುಣವಾಗಿ ಸೂಕ್ತ ಧಾರಣಾ ಸಾಮರ್ಥ್ಯವಿರುವ ರಸ್ತೆಗಳನ್ನು ನಿರ್ಮಿಸುವ ಅಥವಾ ಅಸ್ತಿತ್ವದಲ್ಲಿರುವ ರಸ್ತೆಗಳನ್ನು ಪುನರ್ ನವೀಕರಿಸುವತ್ತ ಕೇಂದ್ರ-ರಾಜ್ಯ ಸರಕಾರಗಳು ಗಮನಹರಿಸಬೇಕು.ಜೊತೆಗೆ ಪ್ರತಿಯೊಂದು ರಸ್ತೆಗಳನ್ನು ವರ್ಷಂಪ್ರತಿ ಸಮರ್ಪಕವಾಗಿ ಸುಸ್ಥಿತಿಯಲ್ಲಿ ಇರುವಂತೆ ನಿರ್ವಹಿಸಬೇಕು. ಅಂತೆಯೇ ಯಾವುದೇ ವಾಹನ ಅಪಘಾತದಲ್ಲಿ ಸಾಕಷ್ಟು ಜನರು ಬಲಿಯಾದ ಸಂದರ್ಭದಲ್ಲಿ,  ಈ ಅಪಘಾತದ ಕಾರಣವನ್ನು ಪತ್ತೆಹಚ್ಚುವ ಮೂಲಕ ಇದರ ಪುನರಾವರ್ತನೆ ಆಗದಂತೆ ಅವಶ್ಯಕ ಕ್ರಮಗಳನ್ನು  ಕೈಗೊಳ್ಳಬೇಕು. ಜೊತೆಗೆ ರಸ್ತೆ ಅಪಘಾತಗ ಸಂಖ್ಯೆಯನ್ನು ನಿಯಂತ್ರಿಸಬಲ್ಲ ಮತ್ತು ಇವುಗಳಿಗೆ ಬಲಿಯಾಗುತ್ತಿರುವ ಅಮಾಯಕರ ಸಂಖ್ಯೆಯನ್ನು ಕಡಿಮೆಮಾಡಬಲ್ಲ ಇನ್ನಿತರ ಕಟ್ಟುನಿಟ್ಟಿನ ಕ್ರಮಗಳನ್ನು ಕೇಂದ್ರ- ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸಬೇಕು. 

ಇದಲ್ಲದೇ ದೇಶದ ವಿವಿಧ ರಾಜ್ಯಗಳಲ್ಲಿನ ಪ್ರತಿಯೊಂದು ನಗರ- ಪಟ್ಟಣಗಳಲ್ಲಿನ ರಸ್ತೆಗಳ ಇಕ್ಕೆಲಗಳಲ್ಲಿ ಸೈಕಲ್ ಸವಾರರಿಗೆ ಮತ್ತು ಪಾದಚಾರಿಗಳಿಗೆ ಪ್ರತ್ಯೇಕವಾದ " ಹಕ್ಕಿನ ಹಾದಿ " ಯನ್ನು ನಿರ್ಮಿಸುವತ್ತ ತತ್ಸಂಬಂಧಿತ ಇಲಾಖೆಗಳು ಗಮನಹರಿಸಬೇಕಾಗಿದೆ. ಅದೇ ರೀತಿಯಲ್ಲಿ ಮೋಟಾರು ವಾಹನಗಳಿಗೆ ವೇಗದ ಮಿತಿಯನ್ನು ನಿಗದಿಸಿ, ಇದನ್ನು ಹಾಗೂ ಅನ್ಯ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಚಾಲಕರಿಗೆ ದೊಡ್ಡ ಮೊತ್ತದ ದಂಡವನ್ನು ವಿಧಿಸಬೇಕು. ಅತಿವೇಗದ, ನಿರ್ಲಕ್ಷ್ಯದ ಮತ್ತು ಮದ್ಯಸೇವಿಸಿ ವಾಹನಗಳನ್ನು ಚಲಾಯಿಸಿ ಅಪಘಾತವೆಸಗಿದ ಚಾಲಕರ ವಾಹನ ಚಾಲನಾ ಪರವಾನಿಗೆಯನ್ನೇ ರದ್ದುಪಡಿಸುವ ಮತ್ತು ದೊಡ್ಡ ಮೊತ್ತದ ದಂಡವನ್ನು ವಿಧಿಸುವಂತೆ, ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿಯನ್ನು ಮಾಡಬೇಕು. ಚಾಲಕರ ತಪ್ಪಿನಿಂದಾಗಿ ಪ್ರಾಣವನ್ನೇ ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಅಪಘಾತಕ್ಕೆ ಕಾರಣವೆನಿಸಿದ ಚಾಲಕರೇ ನೀಡಬೇಕೆನ್ನುವ ಕಾನೂನನ್ನು ಜಾರಿಗೊಳಿಸಬೇಕು. ಈ ರೀತಿಯ ಉಪಕ್ರಮಗಳನ್ನು ಕೈಗೊಂಡಲ್ಲಿ ನಮ್ಮ ದೇಶದಲ್ಲಿ ರಸ್ತೆ ಅಪಘಾತಗಳ ಮತ್ತು ಇವುಗಳಿಗೆ ಬಲಿಯಾಗುವವರ ಸಂಖ್ಯೆಗಳು ತಕ್ಕ ಮಟ್ಟಿಗೆ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ. ಆದರೆ ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವ ಇಚ್ಛಾಶಕ್ತಿ ನಮ್ಮನ್ನಾಳುವವರಲ್ಲಿ ಇದೆಯೇ ಎನ್ನುವುದೇ " ಮಿಲಯನ್ ಡಾಲರ್ 'ಪ್ರಶ್ನೆಯಾಗಿದೆ!.

ಡಾ,ಸಿ.ನಿತ್ಯಾನಂದ ಪೈ,ಪುತ್ತೂರು   






Sunday, June 29, 2014

DOCTORS DAY- SPECIAL





 ಆರೋಗ್ಯ ರಕ್ಷಣೆ : ವೈದ್ಯರ ಹೊಣೆ 

ಸಹಸ್ರಾರು ವರ್ಷಗಳಿಂದ ಸಮಾಜದ ಸ್ವಾಸ್ಥ್ಯ ಸಂರಕ್ಷಣೆಯ ಮಹತ್ತರವಾದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ ವೈದ್ಯರನ್ನು ಕೃತಜ್ಞತೆಯಿಂದ ಸ್ಮರಿಸುತ್ತಿದ್ದ ನಮ್ಮ ಪೂರ್ವಜರು, " ವೈದ್ಯೋ ನಾರಾಯಣೋ ಹರಿ" ಎನ್ನುವ ಮಾತುಗಳನ್ನು ಅಕ್ಷರಶಃ ಪರಿಪಾಲಿಸುತ್ತಿದ್ದರು. ಅರ್ಥಾತ್ ವೈದ್ಯರನ್ನು ಪೂಜ್ಯ ಭಾವನೆಯಿಂದ ಗೌರವಿಸುತ್ತಿದ್ದರು. ಬಡವ ಬಲ್ಲಿದನೆಂಬ ಭೇದವಿಲ್ಲದೇ, ಅನ್ಯಥಾ ಶರಣಂ ನಾಸ್ತಿ ಎಂದು ತಮ್ಮಲ್ಲಿ ಚಿಕಿತ್ಸೆಗಾಗಿ ಬರುವ ಪ್ರತಿಯೊಬ್ಬ ರೋಗಿಯ ಕಾಯಿಲೆಯನ್ನು ನಿಖರವಾಗಿ ಪತ್ತೆಹಚ್ಚಿ, ಅತ್ಯುತ್ತಮ ಚಿಕಿತ್ಸೆಯನ್ನು ನೀಡಿ ಸಾಂತ್ವನಿಸುವ ವೈದ್ಯರಿಗೆ ಇಂದಿಗೂ ನಮ್ಮ ಸಮಾಜದಲ್ಲಿ ವಿಶೇಷವಾದ ಸ್ಥಾನಮಾನಗಳಿವೆ. 

ಜನಸಾಮಾನ್ಯರ ಆರೋಗ್ಯದ ರಕ್ಷಣೆ ಮತ್ತು ವ್ಯಾಧಿಪೀಡಿತರ ಚಿಕಿತ್ಸೆಗಾಗಿ ಹಗಲಿರುಳು ಶ್ರಮಿಸುವ ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಧ್ಯಯನ ಮತ್ತು ಸಂಶೋಧನೆಗಳ ಫಲವಾಗಿ, ನಮ್ಮ ಆರೋಗ್ಯದ ಗುಣಮಟ್ಟಗಳು ಹೆಚ್ಚಿವೆ. ಜೊತೆಗೆ ಭಾರತೀಯರ ಸರಾಸರಿ ಆಯುಷ್ಯದ ಪ್ರಮಾಣವೂ ನಿಸ್ಸಂದೇಹವಾಗಿ ವೃದ್ಧಿಸುತ್ತಿದೆ. 

ಮನುಕುಲವನ್ನು ಕಾಡುವ ಅಸಂಖ್ಯ ವ್ಯಾಧಿಗಳಿಗೆ ನೂರಾರು ಕಾರಣಗಳಿದ್ದು, ಇವುಗಳಲ್ಲಿ ಅನುವಂಶಿಕತೆ, ರೋಗಕಾರಕ ಸೂಕ್ಷ್ಮಾಣು ಜೀವಿಗಳು, ಜನ್ಮದತ್ತ ತೊಂದರೆಗಳು ಹಾಗೂ ವೈಕಲ್ಯಗಳು, ನಮ್ಮ ಸುತ್ತಮುತ್ತಲ ಪರಿಸರ, ನಾವು ಸೇವಿಸುವ ಗಾಳಿ, ನೀರು ಮತ್ತು ಆಹಾರಗಳ ಗುಣಮಟ್ಟ, ಮಾನಸಿಕ ಒತ್ತಡಗಳು ಮತ್ತು ದುಶ್ಚಟಗಳು ಪ್ರಮುಖವಾಗಿವೆ. 

ಅದೇ ರೀತಿಯಲ್ಲಿ ಅಧಿಕತಮ ವ್ಯಾಧಿಗಳನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಹಾಗೂ ಶಾಶ್ವತ ಪರಿಹಾರವಿಲ್ಲದ ಕಾಯಿಲೆಗಳನ್ನು ಸಮರ್ಪಕವಾಗಿ ನಿಯಂತ್ರಣದಲ್ಲಿ ಇರಿಸಬಲ್ಲ ಔಷದಗಳು ಲಭ್ಯವಿದೆ. ಆದರೆ ಕೆಲವೊಂದು ಕಾಯಿಲೆಗಳನ್ನು ಚಿಕಿತ್ಸಿಸಬಲ್ಲ, ನಿಯಂತ್ರಿಸಬಲ್ಲ ಹಾಗೂ ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳೇ ಲಭ್ಯವಿಲ್ಲ ಎನ್ನುವುದು ನಿಮಗೂ ತಿಳಿದಿರಬೇಕು. ಆದರೂ ಇಂತಹ ಕಾಯಿಲೆಗಳನ್ನು ತಡೆಗಟ್ಟಬಲ್ಲ ಲಸಿಕೆಗಳು ಮತ್ತು ಗುಣಪಡಿಸಬಲ್ಲ ಔಷದಗಳನ್ನು ಸಂಶೋಧಿಸುವ ಪ್ರಯತ್ನ ನಡೆಯುತ್ತಲೇ ಇದೆ. 

ಆದರೆ ಸೂಕ್ತ ಲಸಿಕೆ ಅಥವಾ ಔಷದಗಳು ಲಭ್ಯವಿಲ್ಲದ ವ್ಯಾಧಿಗಳಿಂದ ಪೀಡಿತ ರೋಗಿಗಳಿಗೆ ಧೈರ್ಯ ತುಂಬಿ, ಅವರ ನೋವನ್ನು ಕಡಿಮೆಮಾಡುವ ಹಾಗೂ ಬದುಕನ್ನು ಒಂದಿಷ್ಟು ಸಹನೀಯವನ್ನಾಗಿಸುವ ಪ್ರಯತ್ನವನ್ನು ವೈದ್ಯರು ಸದಾ ಮಾಡುತ್ತಾರೆ. ಅಹರ್ನಿಶಿ ತಮ್ಮ ರೋಗಿಗಳ ಹಿತರಕ್ಷಣೆಗಾಗಿ ದುಡಿಯುವ ವೈದ್ಯರು, ಅನೇಕ ಸಂದರ್ಭಗಳಲ್ಲಿ ತಮ್ಮ ಆರೋಗ್ಯವನ್ನೇ ನಿರ್ಲಕ್ಷಿಸಿದ ಉದಾಹರಣೆಗಳೂ ಸಾಕಷ್ಟಿವೆ. 

ವಿಶ್ವಾಸವೇ ಸಂಜೀವಿನಿ 

ವೈದ್ಯರು ಮತ್ತು ರೋಗಿಗಳ ನಡುವಿನ ಅವಿನಾಭಾವ ಸಂಬಂಧವು " ವಿಶ್ವಾಸ " ಎನ್ನುವ ಭದ್ರವಾದ ತಳಹದಿಯ ಮೇಲೆ ಸ್ಥಿರವಾಗಿ ನಿಂತಿರುತ್ತದೆ. ಬಹುತೇಕ ಸಂದರ್ಭಗಳಲ್ಲಿ ಈ ಅಚಲ ವಿಶ್ವಾಸವೇ ರೋಗಿಯ ಕಾಯಿಲೆಯನ್ನು ಗುಣಪಡಿಸುವಲ್ಲಿ ಯಾವುದೇ ಚಿಕಿತ್ಸೆಗಿಂತಲೂ ಅಧಿಕ ಪರಿಣಾಮವನ್ನು ಬೀರುತ್ತದೆ. ಜನಸಾಮಾನ್ಯರು "ವೈದ್ಯರ ಕೈಗುಣ " ಎನ್ನುವುದು ನಿಜಕ್ಕೂ ರೋಗಿಗೆ ವೈದ್ಯರ ಮೇಲಿರುವ ವಿಶ್ವಾಸವೇ ಹೊರತು ಬೇರೇನೂ ಅಲ್ಲ!. ಈ ರೀತಿಯ ವಿಶ್ವಾಸವನ್ನು ಗಳಿಸಲು ಹಲವಾರು ವರ್ಷಗಳೇ ಬೇಕಾಗುವುದಾದರೂ, ಇದನ್ನು ಕಳೆದುಕೊಳ್ಳಲು ಅತ್ಯಲ್ಪ ಸಮಯ ಸಾಕಾಗುತ್ತದೆ. 

ಚಿಕಿತ್ಸೆ ಎಂತು, ಏನು?

ಸಾಮಾನ್ಯವಾಗಿ ತಮ್ಮಲ್ಲಿ ಚಿಕಿತ್ಸೆಗಾಗಿ ಬರುವ ಅನಾರೋಗ್ಯ ಪೀಡಿತರನ್ನು ಕೂಲಂಕುಶವಾಗಿ ಪರೀಕ್ಷಿಸಿ, ಅವರನ್ನು ಬಾಧಿಸುತ್ತಿರುವ ವ್ಯಾಧಿಯನ್ನು ನಿಖರವಾಗಿ ಪತ್ತೆಹಚ್ಚಬೇಕಾದ ಹೊಣೆಗಾರಿಕೆ ವೈದ್ಯರ ಮೇಲಿದೆ. ಬಳಿಕ ಅತ್ಯಲ್ಪ ವೆಚ್ಚದಲ್ಲಿ ಹಾಗೂ ಅತ್ಯಂತ ಕಡಿಮೆ ಅವಧಿಯಲ್ಲಿ ಇದನ್ನು ಗುಣಪಡಿಸಲು ಅತ್ಯವಶ್ಯಕ ಎನಿಸುವಷ್ಟೇ ಔಷದಗಳನ್ನು ನೀಡಬೇಕಾಗುತ್ತದೆ. ಈ ಅಲಿಖಿತ ನಿಯಮವನ್ನು ಪರಿಪಾಲಿಸುವುದು ಪ್ರತಿಯೊಬ್ಬ ವೈದ್ಯರ ವೃತ್ತಿಧರ್ಮವೂ ಆಗಿದೆ. 

ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಕಾರಣಾಂತರಗಳಿಂದ ಹಳಸುತ್ತಿರುವ ರೋಗಿ ಮತ್ತು ವೈದ್ಯರ ಸಂಬಂಧಗಳಿಂದಾಗಿ, ಮಾನವೀಯ ಮೌಲ್ಯಗಳೇ ಕಣ್ಮರೆಯಾಗುತ್ತಿವೆ. ಪ್ರಾಯಶಃ ಇದೇ ಕಾರಣದಿಂದಾಗಿ ಕ್ಷುಲ್ಲಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೂ ಅನಾವಶ್ಯಕ ಪರೀಕ್ಷೆಗಳನ್ನು ನಡೆಸುವ ಹಾಗೂ ಅವಶ್ಯಕತೆ ಇಲ್ಲದಿದ್ದರೂ ಪ್ರಬಲ ಔಷದಗಳನ್ನು ನೀಡುವ ಪ್ರವೃತ್ತಿ ಹೆಚ್ಚುತ್ತಿದೆ. ಅಂತೆಯೇ ಅತ್ಯಂತ ಅನಿವಾರ್ಯವೆನಿಸುವ ನಿರ್ದಿಷ್ಟ ಪರೀಕ್ಷೆಯೊಂದನ್ನು ಮಾಡಿಸಲೇ ಬೇಕೆಂದ ಅಥವಾ ಸಂದರ್ಭೋಚಿತವಾಗಿ ಅನ್ಯಮಾರ್ಗವಿಲ್ಲದೇ ದುಬಾರಿ ಔಷದಗಳನ್ನು ನೀಡಿರುವ ವೈದ್ಯರನ್ನು ಸಂದೇಹದ ದೃಷ್ಟಿಯಿಂದ ನೋಡುವ ರೋಗಿಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದೆ. ತತ್ಪರಿಣಾಮವಾಗಿ ರೋಗಿ ಮತ್ತು ವೈದ್ಯರ ನಡುವಿನ ಸಂಬಂಧಗಳಲ್ಲಿ ಒಡಕುಗಳು ಮೂಡುತ್ತಿವೆ. ವೈದ್ಯಕೀಯ ಶಿಕ್ಷಣ ಮತ್ತು ವೃತ್ತಿಗಳ ವಾಣಿಜ್ಯೀಕರಣಗಳೂ ಈ ಸಮಸ್ಯೆಗೆ ಪರೋಕ್ಷವಾಗಿ ಕಾರಣವೆನಿಸಿವೆ. ಇವೆಲ್ಲಾ ಕಾರಣಗಳಿಂದಾಗಿ ರೋಗಿಗಳು ಮತ್ತು ವೈದ್ಯರ ನಡುವೆ ಪರಸ್ಪರ ಪ್ರೀತಿ,ವಿಶ್ವಾಸಗಳ ಬದಲಾಗಿ ಸಂದೇಹ ಮತ್ತು ಅವಿಶ್ವಾಸಗಳು ಕಂಡುಬರುತ್ತಿವೆ. ಈ ಅನಪೇಕ್ಷಿತ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿದಲ್ಲಿ, " ವೈದ್ಯರ ದಿನ " ದ ಆಚರಣೆಯು ಇನ್ನಷ್ಟು ಅರ್ಥಪೂರ್ಣವೆನಿಸಲಿದೆ!. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 



DOCTORS DAY




  ಜುಲೈ ೧, ರಾಷ್ಟ್ರೀಯ ವೈದ್ಯರ ದಿನ - ವೈದ್ಯ ಬಾಂಧವರಿಗೆ ನಮನಗಳನ್ನು ಸಲ್ಲಿಸುವ ದಿನ 

ಬಡವ ಬಲ್ಲಿದರೆನ್ನುವ ಭೇದಭಾವವಿಲ್ಲದೇ, ಹಗಲು- ಇರುಳುಗಳೆನ್ನುವ ಮತ್ತು ಹೊತ್ತುಗೊತ್ತಿನ ಪರಿವೆಯಿಲ್ಲದೇ, ಸದಾ ನಿಮ್ಮ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುವ ವೈದ್ಯರಿಗೆ ನೀವು ಕೃತಜ್ಞತೆಗಳನ್ನು ಸಮರ್ಪಿಸುವ ದಿನವೇ " ರಾಷ್ಟ್ರೀಯ ವೈದ್ಯರ ದಿನ". ನಿಮ್ಮನ್ನು ಪೀಡಿಸುವ ಸಣ್ಣಪುಟ್ಟ ಅಥವಾ ಗಂಭೀರ ಆರೋಗ್ಯದ ಸಮಸ್ಯೆಗಳನ್ನು ನಿಖರವಾಗಿ ಪತ್ತೆಹಚ್ಚಿ, ಸೂಕ್ತ ಔಷದಗಳನ್ನು ನೀಡುವುದರೊಂದಿಗೆ ನಿಮ್ಮನ್ನು ಸಾಂತ್ವನಿಸಿ ಧೈರ್ಯ ತುಂಬುವ, ನಿಮ್ಮ ಚಿರಪರಿಚಿತ ವೈದ್ಯರಿಗೆ ನಮನಗಳನ್ನು ಸಲ್ಲಿಸಲು ವೈದ್ಯರ ದಿನ ಅತ್ಯಂತ ಪ್ರಶಸ್ತವಾಗಿದೆ. ವಿಶ್ವದ ಅಧಿಕತಮ ರಾಷ್ಟ್ರಗಳಲ್ಲಿ ವೈದ್ಯರ ದಿನದಂದು ಆಯೋಜಿಸುವ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ, ವೈದ್ಯರ ಸೇವೆಯನ್ನು ಸ್ಮರಿಸಿ ಕೃತಜ್ಞತೆಗಳನ್ನು ಸಲ್ಲಿಸಲಾಗುತ್ತದೆ. 

ಹಿನ್ನೆಲೆ 

ಜಾಗತಿಕ ಮಟ್ಟದಲ್ಲಿ ಮೊತ್ತ ಮೊದಲಬಾರಿಗೆ "ವೈದ್ಯರ ದಿನ " ವನ್ನು ಮಾರ್ಚ್ ೩೦, ೧೯೩೩ ರಲ್ಲಿ ಆಚರಿಸಲಾಗಿತ್ತು. ಖ್ಯಾತ ವೈದ್ಯ ಚಾರ್ಲ್ಸ್.ಬಿ.ಆಲ್ಮಂಡ್ ಇವರ ಪತ್ನಿ ಇ.ಬಿ.ಆಲ್ಮಂಡ್ ಇವರು, ವೈದ್ಯರನ್ನು ಗೌರವಿಸುವ ಸಲುವಾಗಿ ವರ್ಷದಲ್ಲಿ ಕನಿಷ್ಠ ಒಂದು ದಿನವನ್ನು ಮೀಸಲಿಡಬೇಕು ಎಂದು ನಿರ್ಧರಿಸಿದಂತೆ ಇದನ್ನು ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ ವೈದ್ಯರಿಗೆ ಶುಭಾಶಯ ಪತ್ರಗಳನ್ನು ಕಳುಹಿಸುವ ಅಥವಾ ಹೇಳುವ ಮತ್ತು ವಿಧಿವಶರಾಗಿರುವ ಖ್ಯಾತ ವೈದ್ಯರ ಸಮಾಧಿಗಳ ಮೇಲೆ ಪುಷ್ಪಗುಚ್ಛಗಳನ್ನು ಇರಿಸುವ ಮೂಲಕ ಗೌರವಿಸಲಾಗುತ್ತಿತ್ತು. 

ತದನಂತರ ಅಮೇರಿಕ ದೇಶದ ಜನಪ್ರತಿನಿಧಿಗಳು ೧೯೫೮ ರ ಮಾರ್ಚ್ ೩೦ ರಂದು ವೈದ್ಯರ ದಿನವನ್ನು ಆಚರಿಸುವ ನಿರ್ಣಯವೊಂದನ್ನು ಅಂಗೀಕರಿಸಿದ್ದರು. ಜಾರ್ಜ್ ಬುಶ್ ಅಮೇರಿಕ ದೇಶದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ, ವರ್ಷಂಪ್ರತಿ ಮಾರ್ಚ್ ೩೦ ರಂದು ವೈದ್ಯರ ದಿನವನ್ನಾಗಿ ಆಚರಿಸುವ ವಿಧೇಯಕಕ್ಕೆ ಅಕ್ಟೋಬರ್ ೩೦, ೧೯೯೦ ರಂದು ಸಹಿ ಹಾಕಿದ್ದು, ೧೯೯೧ ರಿಂದ ಇದು ಜಾರಿಗೊಂಡಿತ್ತು. 

ನಿಜ ಹೇಳಬೇಕಿದ್ದಲ್ಲಿ ಮಾರ್ಚ್ ೩೦ ರಂದು ವೈದ್ಯರ ದಿನವನ್ನು ಆಚರಿಸಲು ನಿರ್ದಿಷ್ಟ ಕಾರಣವೊಂದು ಇಂತಿದೆ. ಡಾ.ಕ್ರಾಫರ್ಡ್ ಲಾಂಗ್ ಎನ್ನುವ ವೈದ್ಯರು ೧೮೪೨ ರ ಮಾರ್ಚ್ ೩೦ ರಂದು ಮೊತ್ತ ಮೊದಲಬಾರಿಗೆ ಈಥರ್ ಎನ್ನುವ ಅರಿವಳಿಕೆ ಔಷದವೊಂದನ್ನು ಬಳಸಿ,ರೋಗಿಯೊಬ್ಬನ ಕುತ್ತಿಗೆಯ ಭಾಗದಲ್ಲಿದ್ದ ಗಡ್ದೆಯೊಂದನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದಿದ್ದರು. ಈ ಸಂದರ್ಭದಲ್ಲಿ ತನಗೆ ಕಿಂಚಿತ್ ಕೂಡಾ ನೋವಿನ ಅನುಭವ ಆಗಿರಲಿಲ್ಲವೆಂದು ರೋಗಿಯು ಹೇಳಿದ್ದನು. ನೋವಿಲ್ಲದೆ ಶಸ್ತ್ರಚಿಕಿತ್ಸೆಯನ್ನು ಮಾಡಬಹುದಾದ ವಿಧಾನ ಹಾಗೂ ಔಷದವನ್ನು ಕಂಡುಹಿಡಿದು ಬಳಸಿದ್ದ ಈ ದಿನವನ್ನು, ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ವೈದ್ಯರ ದಿನವನ್ನಾಗಿ ಇಂದಿಗೂ ಆಚರಿಸಲಾಗುತ್ತಿದೆ. 

ಡಾ.ಬಿ.ಸಿ.ರಾಯ್ ಜನ್ಮ ದಿನ 

ಭಾರತದಲ್ಲಿ ೧೯೯೧ ರಿಂದ ಜುಲೈ ೧ ರಂದು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಹಾನ್ ಮೇಧಾವಿ, ಅಪ್ರತಿಮ ವೈದ್ಯ, ಸ್ವಾತಂತ್ರ್ಯ ಹೋರಾಟಗಾರ, ಚತುರ ರಾಜಕಾರಣಿ, ಶಿಕ್ಷಣ ತಜ್ಞ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯೂ ಆಗಿದ್ದ ಡಾ.ಬಿದಾನ್ ಚಂದ್ರ ರಾಯ್, ಇವರ ಜನ್ಮ ದಿನವನ್ನು ನಮ್ಮ ದೇಶದಲ್ಲಿ "ರಾಷ್ಟ್ರೀಯ ವೈದ್ಯರ ದಿನ " ವನ್ನಾಗಿ ಆಚರಿಸುವ ಮೂಲಕ ಈ ಧೀಮಂತ ವ್ಯಕ್ತಿಗೆ ಮತ್ತು ವೈದ್ಯ ಸಮುದಾಯಕ್ಕೆ ಗೌರವ ಮತ್ತು ಕೃತಜ್ಞತೆಗಳನ್ನು ಸಲ್ಲಿಸಲಾಗುತ್ತದೆ. 

ಬಿಹಾರದ ಪಾಟ್ನಾದಲ್ಲಿ ೧೮೮೨ ರ ಜುಲೈ ೧ ರಂದು ಜನಿಸಿದ್ದ ಡಾ.ರಾಯ್, ಕೊಲ್ಕತ್ತಾದಲ್ಲಿ ವೈದ್ಯಕೀಯ ಶಿಕ್ಷಣವನ್ನು ಮುಗಿಸಿದ ಬಳಿಕ ಲಂಡನ್ ನಲ್ಲಿ ಸ್ನಾತಕೋತ್ತರ ಪದವಿಗಳನ್ನು ಗಳಿಸಿದ್ದರು. ಬಳಿಕ ೧೯೧೧ ರಲ್ಲಿ ಭಾರತಕ್ಕೆ ಮರಳಿ, ಕೊಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಲು ಆರಂಭಿಸಿದ್ದರು. 

ಮಹಾತ್ಮಾ ಗಾಂಧಿಯವರ ನೇತ್ರತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಸಂಗ್ರಾಮದಿಂದ ಪ್ರಭಾವಿತರಾಗಿ ಇದರಲ್ಲಿ ಪಾಲ್ಗೊಂಡ ಡಾ.ರಾಯ್,ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ೧೪ ವರ್ಷಗಳ ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆಸಲ್ಲಿಸಿದ್ದರು. ಅನೇಕ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳನ್ನು ಆರಂಭಿಸಿದ್ದ ಡಾ.ಬಿ.ಸಿ.ರಾಯ್, ಕೇವಲ ವೈದ್ಯಕೀಯ ಕ್ಷೇತ್ರದಲ್ಲಿ ಮಾತ್ರವಲ್ಲ,ರಾಜಕೀಯ ಕ್ಷೇತ್ರದಲ್ಲೂ ಅಸಾಧಾರಣ ಸಾಧನೆಗಳನ್ನು ಮಾಡಿದ್ದರು. ಇವರ ಅನನ್ಯ ಸಾಧನೆಗಳನ್ನು ಗುರುತಿಸಿದ ಭಾರತ ಸರ್ಕಾರವು ಇವರಿಗೆ "ಭಾರತ ರತ್ನ " ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಸುದೀರ್ಘಕಾಲ ಜನಸೇವೆ ಮಾಡಿದ್ದ ಡಾ.ರಾಯ್, ೧೯೬೨ ರ ಜುಲೈ ೧ ರಂದು ಅರ್ಥಾತ ತಮ್ಮ ಜನ್ಮದಿನದಂದೇ ವಿಧಿವಶರಾಗಿದ್ದರು. ಇವರ ಸ್ಮರಣಾರ್ಥ ವೈದ್ಯಕೀಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಯನ್ನು ಸಲ್ಲಿಸಿದ - ಸಾಧನೆಯನ್ನು ಮಾಡಿದ ವೈದ್ಯರಿಗೆ ೧೯೭೬ ರಿಂದ, ರಾಷ್ಟ್ರೀಯ ವೈದ್ಯರ ದಿನದಂದು ಡಾ.ಬಿ.ಸಿ.ರಾಯ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು  


Thursday, June 26, 2014

Street dogs and rabies





 ಬೀದಿನಾಯಿಗಳ ಕಾಟ : ಜನರಿಗೆ ಪ್ರಾಣಸಂಕಟ 

ನಮ್ಮ ರಾಜ್ಯದಲ್ಲಿ ಬೀದಿನಾಯಿಗಳ ಮಾರಕ ದಾಳಿಗೆ ಹಲವಾರು ಮಕ್ಕಳು ಬಲಿಯಾದ ಘಟನೆಗಳನ್ನು ಬಹುತೇಕ ಜನರು ಈಗಾಗಲೇ ಮರೆತುಬಿಟ್ಟಿದ್ದಾರೆ. ಸ್ಥಳೀಯ ಸಂಸ್ಥೆಗಳು ವರ್ಷಂಪ್ರತಿ ನಡೆಸುತ್ತಿದ್ದ "ಶ್ವಾನ ಸಂಹಾರ " ವನ್ನು ನಿಲ್ಲಿಸಿದ ಬಳಿಕ, ಬೀದಿನಾಯಿಗಳ ಸಂತತಿ ಅನಿಯಂತ್ರಿತವಾಗಿ ವೃದ್ಧಿಸಿರುವುದೇ ಇದಕ್ಕೆ ಕಾರಣವೆಂದು ಜನಸಾಮಾನ್ಯರು ದೂರುತ್ತಾರೆ. ಆದರೆ ತಾವು ಸಾಕಿದ ಹೆಣ್ಣು ನಾಯಿಯು ಮರಿ ಹಾಕಿದ ಬಳಿಕ, ಇವುಗಳಲ್ಲಿನ ಹೆಣ್ಣು ಮರಿಗಳನ್ನು ಬೀದಿಪಾಲು ಮಾಡುವ ಹಾಗೂ ಬೀದಿನಾಯಿಗಳಿಗೆ ತಮ್ಮಲ್ಲಿ ಉಳಿದಿರುವ ಆಹಾರವನ್ನು ನೀಡಿ ಸಲಹುವ ನಾಗರಿಕರೂ, ಈ ಸಮಸ್ಯೆಗೆ ನೇರವಾಗಿ ಹೊಣೆಗಾರರು ಎಂದಲ್ಲಿ ತಪ್ಪೆನಿಸಲಾರದು. ಅಂತೆಯೇ, ತಾವು ಸಾಕಿದ ಹೆಣ್ಣು ನಾಯಿಗೆ ಪಶುವೈದ್ಯರ ಸಲಹೆಯನ್ನು ಪಡೆದು ಸಂತತಿ ನಿಯಂತ್ರಣಕ್ಕೆ ಉಪಯುಕ್ತವೆನಿಸುವ ಮಾತ್ರೆಗಳನ್ನು ನೀಡದ ಜನರ ಬೇಜವಾಬ್ದಾರಿಯೂ, ಬೀದಿನಾಯಿಗಳ ಸಂತತಿ ಹೆಚ್ಚುತ್ತಿರಲು ಮತ್ತೊಂದು ಪ್ರಮುಖ ಕಾರಣವೆನಿಸಿದೆ. 

ಅದೇನೇ ಇರಲಿ, ಭಾರತದಲ್ಲಿ ಸುಮಾರು ೨೫ ರಿಂದ ೩೦ ಲಕ್ಷ ಬೀದಿನಾಯಿಗಳು ಇವೆ ಎಂದು ಅಂದಾಜು ಮಾಡಲಾಗಿದ್ದು, ವರ್ಷಂಪ್ರತಿ ಸುಮಾರು ೩೦ ರಿಂದ ೫ ಲಕ್ಷಕ್ಕೂ ಅಧಿಕ ಜನರು "ನಾಯಿಕಡಿತ " ಕ್ಕೆ ಒಳಗಾಗುತ್ತಾರೆ. ಅದೇ ರೀತಿಯಲ್ಲಿ ವಿಶ್ವಾದ್ಯಂತ " ಹುಚ್ಚುನಾಯಿ" ಗಳ ಕಡಿತದಿಂದಾಗಿ ಉದ್ಭವಿಸುವ ಮಾರಕ "ರೇಬೀಸ್" ಕಾಯಿಲೆಗೆ ಬಲಿಯಾಗುತ್ತಿರುವ ಶೇ.೫೦ ರಷ್ಟು ಜನರು ಭಾರತೀಯರೇ ಆಗಿದ್ದಾರೆ ಎನ್ನುವ ವಿಚಾರ ಪ್ರಾಯಶಃ ನಿಮಗೂ ತಿಳಿದಿರಲಾರದು. ಏಕೆಂದರೆ ಪುಟ್ಟ ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದರೂ, ಹುಚ್ಚುನಾಯಿ ಕಡಿತದಿಂದ ಮೃತಪಟ್ಟವರ ಬಗ್ಗೆ ಮಾಧ್ಯಮಗಳಲ್ಲಿ ಅವಶ್ಯಕ ಅಂಕಿಅಂಶಗಳು ಪ್ರಕಟವಾಗುವುದಿಲ್ಲ. 

ಪರಿಹಾರ ಕಾಣದ ಸಮಸ್ಯೆ 

ಹಲವಾರು ವರ್ಷಗಳ ಹಿಂದೆ ಪ್ರಾಣಿದಯಾ ಸಂಘಗಳ ತೀವ್ರ ಪ್ರತಿಭಟನೆಯಿಂದಾಗಿ ದೇಶಾದ್ಯಂತ ಸ್ಥಳೀಯ ಸಂಸ್ಥೆಗಳು ಕನಿಷ್ಠ ವರ್ಷದಲ್ಲಿ ಒಂದುಬಾರಿ ನಡೆಸುತ್ತಿದ್ದ ಬೀದಿನಾಯಿಗಳ ಸಾಮೂಹಿಕ ಸಂಹಾರ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿತ್ತು. ಬೀದಿನಾಯಿಗಳ ಸಂತತಿ ಅನಿಯಂತ್ರಿತವಾಗಿ ಹೆಚ್ಚಲು ಇದೊಂದು ಪ್ರಮುಖ ಕಾರಣವೆನಿಸಿತ್ತು. 

ಬೀದಿನಾಯಿಗಳ ಸಂಖ್ಯೆಯೊಂದಿಗೆ ರೇಬೀಸ್ ಕಾಯಿಲೆಯನ್ನು ನಿಯಂತ್ರಿಸಬಲ್ಲ ಯೋಜನೆಗಳನ್ನು ಸರ್ಕಾರ- ಸ್ಥಳೀಯ ಸಂಸ್ಥೆಗಳು ಅನುಷ್ಠಾನಿಸುವುದು ಸುಲಭಸಾಧ್ಯವೇನಲ್ಲ. ಜೊತೆಗೆ ನಾಗರಿಕರ ಪರಿಪೂರ್ಣ ಸಹಕಾರವಿಲ್ಲದೇ ಇಂತಹ ಯೋಜನೆಗಳು ಯಶಸ್ವಿಯಾಗುವ ಸಾಧ್ಯತೆಗಳೂ ಇಲ್ಲ. 

ನಿಜ ಹೇಳಬೇಕಿದ್ದಲ್ಲಿ ಬೀದಿನಾಯಿಗಳ ಸಂತತಿ ನಿಯಂತ್ರಣದ ಕಾರ್ಯಕ್ರಮದ ಅನುಷ್ಠಾನವು ದುಬಾರಿ ಹಾಗೂ ಕಷ್ಟಸಾಧ್ಯವಾಗಿದೆ. ಬೀದಿನಾಯಿಗಳಿಗೆ ಪ್ರತಿವರ್ಷ ರೇಬೀಸ್ ನಿರೋಧಕ ಚುಚ್ಚುಮದ್ದನ್ನು ನೀಡುವುದು ಅಸಾಧ್ಯವೂ ಹೌದು. ಇದೇ ಕಾರಣದಿಂದಾಗಿ ರೇಬೀಸ್ ವ್ಯಾಧಿಯನ್ನು ತದೆಗತ್ತುವುದೂ ಕಷ್ಟಸಾಧ್ಯ. ಇದರೊಂದಿಗೆ ಅನೇಕ ಜನರು ತಾವು ಸಾಕಿರುವ ನಾಯಿಗಳಿಗೆ ಈ ಚುಚ್ಚುಮದ್ದನ್ನು ಕೊಡಿಸದೇ ಇರುವುದು ಕೂಡಾ ಈ ವ್ಯಾಧಿಯ ಹರಡುವಿಕೆಗೆ ಕಾರಣವೆನಿಸುತ್ತಿದೆ. ಈ ಕಾಯಿಲೆಗೆ ಅಸಂಖ್ಯ ಜನರು ಬಲಿಯಾಗುತ್ತಿರಲು, ಜನಸಾಮಾನ್ಯರ ಅಜ್ನಾನದೊಂದಿಗೆ ರೇಬೀಸ್ ಪ್ರತಿರೋಧಕ ಲಸಿಕೆಯ ದುಬಾರಿ ಬೆಲೆಯೂ ಕಾರಣವೆನಿಸಿದೆ. 


 ನಿಜ ಹೇಳಬೇಕಿದ್ದಲ್ಲಿ ಯಾವುದೇ ನಾಯಿ ಕಚ್ಚಿದರೂ ರೇಬೀಸ್ ನಿರೋಧಕ ಚುಚ್ಚುಮದ್ದನ್ನು ಪಡೆದುಕೊಳ್ಳುವುದು ನಿಶ್ಚಿತವಾಗಿಯೂ ಜೀವರಕ್ಷಕ ಎನಿಸುವುದು. ಕಾರಣಾಂತರಗಳಿಂದ ಚುಚ್ಚುಮದ್ದನ್ನು ಪಡೆಯದೇ ರೇಬೀಸ್ ವ್ಯಾಧಿ ಉದ್ಭವಿಸಿದಲ್ಲಿ, ರೋಗಿಯು ಬದುಕಿ ಉಳಿಯುವ ಸಾಧ್ಯತೆಗಳೇ ಇರುವುದಿಲ್ಲ. ಏಕೆಂದರೆ ರೇಬೀಸ್ ಕಾಯಿಲೆ ಉದ್ಭವಿಸಿದ ಬಳಿಕ, ಇದನ್ನು ಗುಣಪಡಿಸಬಲ್ಲ ಔಷದಗಳೇ ಲಭ್ಯವಿಲ್ಲ. ಆದರೂ ಈ ಕಾಯಿಲೆಯನ್ನು ಗುಣಪಡಿಸುವುದಾಗಿ ಹೇಳುವ ಹಾಗೂ ಗಿಡಮೂಲಿಕೆಗಳಿಂದ ತಯಾರಿಸಿದ "ಹಳ್ಳಿ ಮದ್ದು" ಪ್ರಯೋಗಿಸಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟವರ ಸಂಖ್ಯೆಯೂ ಕಡಿಮೆಯೇನಿಲ್ಲ!. ಇದೇ ಕಾರಣದಿಂದಾಗಿ ಮಾರಕ ರೇಬೀಸ್ ವ್ಯಾಧಿಯನ್ನು ತಡೆಗಟ್ಟಲು " ರೇಬೀಸ್ ನಿರೋಧಕ ವ್ಯಾಕ್ಸೀನ್" ಚುಚ್ಚುಮದ್ದನ್ನು ಹೊರತುಪಡಿಸಿ, ಅನ್ಯ ಚಿಕಿತ್ಸೆಗಳನ್ನು ಪ್ರಯೋಗಿಸುವುದು ನಿಶ್ಚಿತವಾಗಿಯೂ ರೋಗಿಯ ಮರಣಕ್ಕೆ ಕಾರಣವೆನಿಸಬಲ್ಲದು. 

ಮಾರಕ ರೇಬೀಸ್ 

ಸಾಮಾನ್ಯವಾಗಿ ಹುಚ್ಚು ನಾಯಿ ( ಹಾಗೂ ಇತರ ಕೆಲ ಪ್ರಾಣಿಗಳ ) ಕಡಿತದಿಂದ ಉದ್ಭವಿಸುವ ಭಯಾನಕ ಹಾಗೂ ಮಾರಕ ರೇಬೀಸ್ ಕಾಯಿಲೆಯನ್ನು ಕ್ರಿ.ಪೂ. ೩೦೦ ರಲ್ಲೇ ಅರಿಸ್ಟಾಟಲ್ ಗುರುತಿಸಿದ್ದರು. ಅಂತೆಯೇ ರೇಬೀಸ್ ನಿರೋಧಕ ಚುಚ್ಚುಮದ್ದನ್ನು ಲೂಯಿ ಪ್ಯಾಶ್ಚರ್ ೧೮೮೫ ರಲ್ಲಿ ಮೊದಲ ಬಾರಿಗೆ ಆಲ್ಬರ್ಟ್ ಮೈಸ್ಟರ್ ಎನ್ನುವ ವ್ಯಕ್ತಿಯ ಮೇಲೆ ಪ್ರಯೋಗಿಸಿದ್ದರು. ಈ ಚುಚ್ಚುಮದ್ದಿನ ಪರಿಣಾಮವಾಗಿ ರೇಬೀಸ್ ಕಾಯಿಲೆಯಿಂದ ಪಾರಾಗಿದ್ದ ಆಲ್ಬರ್ಟ್, ೧೯೪೦ ರ ತನಕ ಪ್ಯಾಸ್ಚರ್ ಇನ್ಸ್ಟಿಟ್ಯೂಟ್ ನ ಉದ್ಯೋಗಿಯಾಗಿದ್ದರು. 

ಸಾಮಾನ್ಯವಾಗಿ ಹುಚ್ಚುನಾಯಿ ಕಚ್ಚಿದ ಬಳಿಕ ರೇಬೀಸ್ ವ್ಯಾಧಿಯ ಲಕ್ಷಣಗಳು ಪ್ರತ್ಯಕ್ಷವಾಗಲು ಕೆಲವಾರು ದಿನಗಳಿಂದ ಹಿಡಿದು ಹಲವಾರು ತಿಂಗಳುಗಳೇ ತಗಲಬಹುದು. ಆದರೆ ಕಚ್ಚಿದ ನಾಯಿಯು ನಿಶ್ಚಿತವಾಗಿಯೂ ರೇಬೀಸ್ ಪೀಡಿತವಾಗಿದ್ದಲ್ಲಿ, ೭ ರಿಂದ ೧೦ ದಿನಗಳಲ್ಲಿ ನಿಸ್ಸಂದೇಹವಾಗಿಯೂ ಸಾಯುವುದು. 

ವ್ಯಾಧಿಪೀಡಿತ ನಾಯಿಯ ಜೊಲ್ಲಿನ ಮೂಲಕ ಹರಡುವ ವೈರಸ್ ಗಳು, ಕಡಿತಕ್ಕೆ ಒಳಗಾದ ಮನುಷ್ಯ ಅಥವಾ ಪ್ರಾಣಿಯ ಮೆದುಳು ಮತ್ತು ನರಮಂಡಲಗಳಿಗೆ ತೀವ್ರ ಸ್ವರೂಪದ ಹಾನಿಯನ್ನು ಉಂಟುಮಾಡುತ್ತವೆ. ಸೋಂಕು ಪೀಡಿತ ವ್ಯಕ್ತಿಗೆ ಪ್ರಾರಂಭಿಕ ಹಂತದಲ್ಲಿ ಜ್ವರ ಹಾಗೂ ಮೈಕೈ ನೋವುಗಳಂತಹ ಲಕ್ಷಣಗಳು ಕಂಡುಬರುತ್ತವೆ. ಮುಂದಿನ ಹಂತದಲ್ಲಿ ತೀವ್ರ ಜ್ವರ, ಮಾನಸಿಕ ಗೊಂದಲ ಹಾಗೂ ನಾಯಿ ಕಚ್ಚಿದ ಭಾಗದಲ್ಲಿ ನೋವು ಮತ್ತು ಚುಚ್ಚಿದಂತಹ ಸಂವೇದನೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ. 

ರೇಬೀಸ್ ರೋಗ ಲಕ್ಷಣಗಳು ಹುಚ್ಚುನಾಯಿ ಕಡಿತಕ್ಕೆ ಒಳಗಾದ ೧ ರಿಂದ ೮ ವಾರಗಳಲ್ಲಿ ತಲೆದೋರುತ್ತವೆ. ರೇಬೀಸ್ ವ್ಯಾಧಿಯನ್ನು ತಡೆಗಟ್ಟಬಲ್ಲ ವ್ಯಾಕ್ಸೀನ್ ಗಳನ್ನು ಹುಚ್ಚುನಾಯಿ ಕಚ್ಚಿದ ಕೂಡಲೇ ಪಡೆದುಕೊಳ್ಳದೇ ಇದ್ದಲ್ಲಿ, ರೇಬೀಸ್ ಉದ್ಭವಿಸಿ ಉಲ್ಬಣಿಸುವುದರಿಂದ ರೋಗಿಯು ದಾರುಣವಾಗಿ ಮೃತಪಡುವುದರಲ್ಲಿ ಸಂದೇಹವಿಲ್ಲ. ಶಾಲಾ ವಿದ್ಯಾರ್ಥಿಗಳಿಗೂ ತಿಳಿದಿರುವ ಈ ವಿಚಾರದ ಬಗ್ಗೆ ಸಾಕಷ್ಟು ಜನರ ಮನದಲ್ಲಿ ಅನೇಕ ರೀತಿಯ ತಪ್ಪು ಕಲ್ಪನೆಗಳಿವೆ. 

ರೇಬೀಸ್ ರೋಗ ಉಲ್ಬಣಿಸಿದ ಸಂದರ್ಭದಲ್ಲಿ ರೋಗಪೀಡಿತ ವ್ಯಕ್ತಿಯಲ್ಲಿ "ಹೈಡ್ರೋಫೋಬಿಯಾ " ಅರ್ಥಾತ್ ನೀರಿನ ಭಯ ದೊಂದಿಗೆ ಇನ್ನಿತರ ರೋಗ ಲಕ್ಷಣಗಳು ಪ್ರಕಟಗೊಳ್ಳುತ್ತವೆ. ಹಾಗೂ ವ್ಯಾಧಿ ಉದ್ಭವಿಸಿದ ಕೆಲವೇ ದಿನಗಳಲ್ಲಿ ರೋಗಿ ಮೃತಪಡುತ್ತಾನೆ. 


ರೇಬಿಸ್ ನಿಂದ ರಕ್ಷಣೆ 

ರೇಬಿಸ್ ಕಾಯಿಲೆಯಿಂದ ಮನುಷ್ಯನನ್ನು ರಕ್ಷಿಸಬಲ್ಲ ಲಸಿಕೆಗಳು ನಮ್ಮ ದೇಶದಲ್ಲಿ ಲಭ್ಯವಿದೆ. ಯಾವುದೇ ನಾಯಿ ಕಚ್ಚಿದ ಅಥವಾ ಪರಚಿದ ಸಂದರ್ಭದಲ್ಲಿ ಉಂಟಾದ ಗಾಯವನ್ನು ಸಾಬೂನು ಮತ್ತು ಅಯೋಡಿನ್ ಯುಕ್ತ ಕ್ರಿಮಿನಾಶಕ ದ್ರಾವನದಿಂದ ತೊಳೆದು ಶುಚಿಗೊಳಿಸಬೇಕು. ಬಳಿಕ ವೈದ್ಯರನ್ನು ಸಂದರ್ಶಿಸಿ, ಒಂದು ಟೆಟನಸ್ ಟಾಕ್ಸಾಯ್ದ್ ಇಂಜೆಕ್ಷನ್, ಒಂದು ಇಮ್ಮ್ಯುನೋಗ್ಲೋಬ್ಯುಲಿನ್ ಮತ್ತು ರೇಬಿಸ್ ಪ್ರತಿರೋಧಕ ಇಂಜೆಕ್ಷನ್ ಗಳನ್ನು ಆದಷ್ಟು ಶೀಘ್ರ ಪಡೆದುಕೊಳ್ಳಬೇಕು. ನಿಗದಿತ ದಿನಗಳಲ್ಲಿ ಮೂರು ರೇಬಿಸ್ ಪ್ರತಿರೋಧಕ ಇಂಜೆಕ್ಷನ್ ಪಡೆದುಕೊಂಡ ಬಳಿಕವೂ ಕಚ್ಚಿದ ನಾಯಿ ಬದುಕಿ ಉಳಿದಲ್ಲಿ ಚಿಕಿತ್ಸೆಯನ್ನು ನಿಲ್ಲಿಸಬಹುದು. ಆದರೆ ಬೀದಿನಾಯಿಗಳು ಕಚ್ಚಿದಲ್ಲಿ ಐದು ಚುಚ್ಚುಮದ್ದುಗಳನ್ನು ಪಡೆದುಕೊಳ್ಳುವುದು ಸುರಕ್ಷಿತ ಹಾಗೂ ಜೀವರಕ್ಷಕವೆನಿಸುವುದು. 

ರೇಬಿಸ್ ನಿಂದ ರಕ್ಷಣೆಯನ್ನು ಪಡೆದುಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಮೂರು ರೇಬಿಸ್ ಇಂಜೆಕ್ಷನ್ ಪಡೆದಿರುವವರು, ಆಕಸ್ಮಿಕವಾಗಿ ನಾಯಿಕಡಿತಕ್ಕೆ ಈಡಾದಲ್ಲಿ ಇಮ್ಮ್ಯುನೋಗ್ಲೋಬ್ಯುಲಿನ್ ಇಂಜೆಕ್ಷನ್ ಪಡೆಯಬೇಕಿಲ್ಲ. ಜೊತೆಗೆ ಐದು ರೇಬಿಸ್ ಪ್ರತಿರೋಧಕ ಇಂಜೆಕ್ಷನ್ ಗಳಿಗೆ ಬದಲಾಗಿ, ಕೇವಲ ಎರಡು ಇಂಜೆಕ್ಷನ್ ಗಳನ್ನು ಪಡೆದುಕೊಂಡರೆ ಸಾಕಾಗುತ್ತದೆ. 

ಇವೆಲ್ಲಕ್ಕೂ ಮಿಗಿಲಾಗಿ ತಾವು ಸಾಕಿದ ನಾಯಿಗಳಿಗೆ ವರ್ಷಂಪ್ರತಿ ತಪ್ಪದೇ ರೇಬಿಸ್ ನಿರೋಧಕ ಇಂಜೆಕ್ಷನ್ ಕೊಡಿಸಿದಲ್ಲಿ, ಈ ವ್ಯಾಧಿಯ ಹಾವಳಿಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸಬಹುದಾಗಿದೆ. ಇದರೊಂದಿಗೆ ಮನೆಮಂದಿಯೆಲ್ಲರೂ ಈ ವ್ಯಾಧಿಯಿಂದ ರಕ್ಷಣೆಯನ್ನು ಪಡೆಯಲು ಮೂರು ರೇಬಿಸ್ ಪ್ರತಿರೋಧಕ ಇಂಜೆಕ್ಷನ್ ಗಳನ್ನು ಪಡೆದುಕೊಳ್ಳುವುದು ಅತ್ಯಂತ ಪರಿಣಾಮಕಾರಿ ಉಪಕ್ರಮವೆನಿಸುವುದು. 

ಕೆಲ ದಶಕಗಳ ಹಿಂದೆ ನಮ್ಮ ದೇಶದಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿದ್ದ, ರೋಗಿಗಳ ಹೊಕ್ಕುಳಿನ ಸುತ್ತಲೂ ಚುಚ್ಚಲಾಗುತ್ತಿದ್ದೆ " ಸೆಂಪಲ್ ವ್ಯಾಕ್ಸೀನ್" ಅನ್ನು ಕೆಲ ವರ್ಷಗಳ ಹಿಂದೆ ನಿಷೇಧಿಸಲಾಯಿತು. ಏಕೆಂದರೆ ಈ ಲಸಿಕೆಯ ಅಡ್ಡ ಹಾಗೂ ದುಷ್ಪರಿಣಾಮಗಳಿಂದಾಗಿ ಮತ್ತು ತೀವ್ರ ಸ್ವರೂಪದ ಪ್ರತಿಕ್ರಿಯೆಗಳಿಂದಾಗಿ ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದರು. ಇದೇ ಕಾರಣದಿಂದಾಗಿ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಹೂಡಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ಪರಿಣಾಮವಾಗಿ, ಈ ವ್ಯಾಕ್ಸೀನ್ ನ ಬಳಕೆಯನ್ನೇ ನಿಷೇಧಿಸಲಾಗಿತ್ತು. 

ಇದೀಗ ಬಳಕೆಯಲ್ಲಿರುವ " ಸೆಲ್ ಕಲ್ಚರ್ ವ್ಯಾಕ್ಸೀನ್" ಸುರಕ್ಷಿತವೆನಿಸಿದ್ದರೂ, ತುಸು ದುಬಾರಿಯಾಗಿರುವುದರಿಂದ ಬಡವರಿಗೆ ಹೊರೆಯಾಗಿ ಪರಿಣಮಿಸುತ್ತಿದೆ. ಆದರೆ ಇದನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿರುವ ವ್ಯಾಕ್ಸೀನ್ ಚರ್ಮದ ಪದರಕ್ಕೆ ಚುಚ್ಚಬಹುದಾಗಿದ್ದು, ಇದರ ಪ್ರಮಾಣವೂ ಅತ್ಯಂತ ಕಡಿಮೆಯಾಗಿದೆ. ತತ್ಪರಿಣಾಮವಾಗಿ ಒಂದು ವ್ಯಾಕ್ಸೀನ್ ನನ್ನು ಹಲವಾರು ರೋಗಿಗಳಿಗೆ ನೀಡಬಹುದಾಗಿದೆ. 

ಕೊನೆಯ ಮಾತು 

ನೀವು ಸಾಕಿರುವ ಹೆಣ್ಣು ನಾಯಿಗೆ ವರ್ಷಂಪ್ರತಿ ರೇಬಿಸ್ ನಿರೋಧಕ ಚುಚ್ಚುಮದ್ದನ್ನು ತಪ್ಪದೇ ಕೊಡಿಸಿ. ಜೊತೆಗೆ ಪಶುವೈದ್ಯರ ಸಲಹೆಯನ್ನು ಪಡೆದು ಗರ್ಭ ನಿರೋಧಕ ಮಾತ್ರೆಗಳನ್ನು ನೀಡುವ ಮೂಲಕ, ಅನಾವಶ್ಯಕ ಗರ್ಭಧಾರಣೆಯನ್ನು ತಡೆಗಟ್ಟಿ. ಇಂತಹ ಉಪಕ್ರಮಗಳಿಂದ ರೇಬಿಸ್ ವ್ಯಾಧಿಯನ್ನು ಮತ್ತು ಬೀದಿನಾಯಿಗಳ ಸಂಖ್ಯೆಯನ್ನು ನಿಶ್ಚಿತವಾಗಿಯೂ ತಡೆಗಟ್ಟಬಹುದಾಗಿದೆ. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೮-೧೧-೨೦೦೭ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ. 


Saturday, June 21, 2014

IODINE DEFICIENCY




 ಹಸುಗೂಸುಗಳನ್ನು ಬಾಧಿಸುವ ಅಯೋಡಿನ್ ಕೊರತೆ 

ತಾಯಿಯ ಎದೆಹಾಲು ಹಸುಗೂಸುಗಳ ಆರೋಗ್ಯದ ದೃಷ್ಟಿಯಿಂದ ಅಮೃತದಂತೆ ಪರಿಣಮಿಸುತ್ತದೆ ಎನ್ನುವುದು ನಿಮಗೂ ತಿಳಿದಿರಲೇಬೇಕು. ಆದರೆ ತಾಯಿಯ ಹಾಲಿನಲ್ಲಿ ಇರಬಹುದಾದ ರಾಸಾಯನಿಕವೊಂದು, ಪುಟ್ಟ ಕಂದನ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದು ಎನ್ನುವ ವಿಚಾರ ನಿಮಗೂ ತಿಳಿದಿರಲಾರದು. ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. 

ಹಲವಾರು ವರ್ಷಗಳ ಹಿಂದೆ ಜನಸಾಮಾನ್ಯರು ಬಳಸುತ್ತಿದ್ದ ಸಾಮಾನ್ಯ ಅಡುಗೆ ಉಪ್ಪಿನ ಬದಲಾಗಿ,ಅಯೋಡಿನ್ ಮಿಶ್ರಿತ ಉಪ್ಪನ್ನೇ ಕಡ್ಡಾಯವಾಗಿ ಮಾರಾಟ ಮಾಡುವಂತೆ ಸರ್ಕಾರ ಆದೇಶಿಸಿತ್ತು. ತತ್ಪರಿಣಾಮವಾಗಿ ಮಾರುಕಟ್ಟೆಯನ್ನು ಪ್ರವೇಶಿಸಿದ್ದ " ಅಯೋಡಿನ್ ಯುಕ್ತ ಉಪ್ಪು " ಶ್ರೀಸಾಮಾನ್ಯನ ಪಾಲಿಗೆ ದುಬಾರಿಯಾಗಿ ಪರಿಣಮಿಸಿತ್ತು!. 

ಅಯೋಡಿನ್ ಕೊರತೆ 

ಕಾರಣಾಂತರಗಳಿಂದ ಮನುಷ್ಯನ ಶರೀರದಲ್ಲಿ ಅಯೋಡಿನ್ ಕೊರತೆ ಉಂಟಾದಲ್ಲಿ ಉದ್ಭವಿಸಬಲ್ಲ ಆರೋಗ್ಯದ ಸಮಸ್ಯೆಗಳನ್ನು ತಡೆಗಟ್ಟುವ ಸಲುವಾಗಿ, ಕೇಂದ್ರ ಸರ್ಕಾರವು ಈ ನಿರ್ಧಾರವು ನಿಜಕ್ಕೂ ಅಪೇಕ್ಷಿತ ಪರಿಣಾಮವನ್ನು ತೋರಿದೆಯೇ ಎನ್ನುವ ಬಗ್ಗೆ ಯಾವುದೇ ಸಮೀಕ್ಷೆ- ಅಧ್ಯಯನಗಳನ್ನು ನಡೆಸಿಲ್ಲ. ಇದೇ ಕಾರಣದಿಂದಾಗಿ ಅಯೋಡಿನ್ ಯುಕ್ತ ಉಪ್ಪನ್ನೇ ಮಾರಾಟ ಮಾಡುವ ಪದ್ದತಿಯು ನಮ್ಮ ದೇಶದಲ್ಲಿ ಇಂದಿಗೂ ಮುಂದುವರೆದಿದೆ. 

ಆದರೆ ಪುಟ್ಟ ಕಂದಮ್ಮಗಳಲ್ಲಿ ಅಪರೂಪದಲ್ಲಿ ಕಾಣಿಸಬಲ್ಲ ಅಯೋಡಿನ್ ಕೊರತೆಗೆ ನಿರ್ದಿಷ್ಟ ಕಾರಣವೊಂದು ಇಂತಿದೆ. ಪರ್ ಕ್ಲೋರೇಟ್ ಎನ್ನುವ ಪ್ರದೂಷಕ ದ್ರವ್ಯವೇ ಈ ಸಮಸ್ಯೆಯ ಮೂಲವೆನಿಸಿದೆ. 

ಸಾಮಾನ್ಯವಾಗಿ ಹಸುಳೆಗೆ ಅತ್ಯವಶ್ಯಕ ಎನಿಸುವಷ್ಟು ಪ್ರಮಾಣದ ಅಯೋಡಿನ್ ತಾಯಿಯ ಹಾಲಿನಿಂದಲೇ ಲಭಿಸುತ್ತದೆ. ಆದರೂ ಅನೇಕ ಹಸುಗೂಸುಗಳಲ್ಲಿ ಅಯೋಡಿನ್ ಕೊರತೆಯುಂಟಾಗಲು ಎರಡು ಪ್ರಮುಖ ಕಾರಣಗಳಿವೆ. ಇವುಗಳಲ್ಲಿ ಮಗುವಿಗೆ ಮೊಲೆಹಾಲನ್ನು ಉಣಿಸುವ ತಾಯಂದಿರಲ್ಲಿ ಪೌಷ್ಠಿಕ ಅಂಶಗಳ ನ್ಯೂನತೆ ಮತ್ತು ಅಯೋಡಿನ್ ನ ಕೊರತೆ ಇರುವುದು ಅಥವಾ ತಾಯಿಯ ಹಾಲಿನಲ್ಲಿ ಇರುವ ಅಯೋಡಿನ್ ನ ಅಂಶವನ್ನು ಹೀರಿಕೊಳ್ಳಲು, ಹಸುಳೆಯ ಜೀರ್ಣಾಂಗಗಳು ವಿಫಲವಾಗುವುದೇ ಈ ಸಮಸ್ಯೆಯ ಮೂಲ ಕಾರಣಗಳಾಗಿವೆ. ಇವುಗಳಲ್ಲಿ ಎರಡನೆಯ ಕಾರಣವು "ಪರ್ ಕ್ಲೋರೇಟ್ ಅನ್ನುವ ರಾಸಾಯನಿಕದ ಪ್ರದೂಷಕ ಪರಿಣಾಮದಿಂದ ಸಂಭವಿಸುತ್ತದೆ. 

ಪರ್ ಕ್ಲೋರೇಟ್ ಎನ್ನುವ ಅಪಾಯಕಾರಿ ರಾಸಾಯನಿಕವನ್ನು ಪಟಾಕಿ,ಸಿಡಿಮದ್ದು, ಸ್ಪೋಟಕಗಳ ತಯಾರಿಕೆ ಮತ್ತು ರಾಕೆಟ್ ಗಳ ಇಂಧನವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಅನೇಕ ವರ್ಷಗಳಿಂದ ಈ ರಾಸಾಯನಿಕವನ್ನು ಅತಿಯಾಗಿ ಬಳಸಿರುವುದರಿಂದಾಗಿ, ನಾವು ಸೇವಿಸುತ್ತಿರುವ ನೀರು ಮತ್ತು ಆಹಾರ ಪದಾರ್ಥಗಳಲ್ಲಿ ಇದರ ಅಂಶ ಬೆರೆತಿರುವುದು ಪತ್ತೆಯಾಗುತ್ತಿದೆ. 

ಈ ರಾಸಾಯನಿಕದ ಪ್ರದೂಷಣೆಗೆ ಈಡಾಗಿರುವ ಮಾತೆಯರ ಶಿಶುಗಳು, ತಾಯಿಯ ಎದೆಹಾಲಿನಲ್ಲಿರುವ ಅಯೋಡಿನ್ ಅಂಶವನ್ನು ಹೀರಿಕೊಳ್ಳುವ ಸಾಮರ್ಥ್ಯದ ಬಗ್ಗೆ ವೈದ್ಯಕೀಯ ಅಧ್ಯಯನವನ್ನು ನಡೆಸಲಾಗಿತ್ತು. ಇದರ ಅಂಗವಾಗಿ ೧೩ ಬಾಣಂತಿಯರ ಎದೆಹಾಲಿನ ಮಾದರಿಗಳನ್ನು ಸಂಗ್ರಹಿಸಿ, ಇವುಗಲ್ಲಿರುವ ಅಯೋಡಿನ್ ಮತ್ತು ಪರ್ ಕ್ಲೋರೇಟ್ ಗಳ ಪ್ರಮಾಣವನ್ನು ಅಳೆಯಲಾಗಿತ್ತು. ಈ ಮಾದರಿಗಳಲ್ಲಿ ೧೨ ಮಾತೆಯರ ಎದೆಹಾಲಿನಲ್ಲಿ ಪರ್ ಕ್ಲೋರೇಟ್ ನ ಪ್ರಮಾಣವು ಅತ್ಯಧಿಕವಾಗಿದ್ದುದರಿಂದ, ೧೨ ಹಸುಳೆಗಳು ಅವಶ್ಯಕ ಪ್ರಮಾಣದ ಅಯೋಡಿನ್ ಹೀರಿಕೊಳ್ಳಲು ವಿಫಲವಾಗಿದ್ದವು. 

 ಅವಶ್ಯಕತೆ ಎಷ್ಟು ?

ವಾಷಿಂಗ್ಟನ್ ಡಿಸಿ ಯಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಮೆಡಿಸಿನ್ ಸಂಸ್ಥೆಯ ತಜ್ಞರ ಅಭಿಪ್ರಾಯದಂತೆ, ನವಜಾತ ಶಿಶುಗಳಿಗೆ ೬ ತಿಂಗಳು ತುಂಬುವ ತನಕ ಪ್ರತಿನಿತ್ಯ ೧೧೦ ಮೈಕ್ರೋ ಗ್ರಾಂ ಅಯೋಡಿನ್ ನ ಅವಶ್ಯಕತೆ ಇರುತ್ತದೆ. ಆದರೆ ತಾಯಿಯ ಹಾಲಿನಲ್ಲಿರುವ ಪರ್ ಕ್ಲೋರೇಟ್ ನ ದುಷ್ಪರಿಣಾಮದಿಂದಾಗಿ ಅನೇಕ  ಶಿಶುಗಳಿಗೆ ಕೇವಲ ೧೦ ರಿಂದ ೧೨ ಮೈಕ್ರೋ ಗ್ರಾಂ ಗಳಷ್ಟು ಅಯೋಡಿನ್ ಲಭಿಸುತ್ತಿದೆ. 

ಇದಲ್ಲದೇ ತಾಯಿಯ ಶರೀರದಲ್ಲಿರುವ ಅಯೋಡಿನ್ ನ ಶೇ. ೨೨ ರಷ್ಟು ಅಂಶವು ಎದೆಹಾಲಿನಲ್ಲೇ ಇರುವುದಾದರೂ, ಆಕೆಯ ಶರೀರದಲ್ಲಿರುವ ಪರ್ ಕ್ಲೋರೇಟ್ ನ ಶೇ. ೫೦ ರಷ್ಟು ಅಂಶವು ಎದೆಹಾಲನ್ನು ಸೇರುತ್ತದೆ. ತತ್ಪರಿಣಾಮವಾಗಿ ಈ ಹಸುಳೆಗಳ ತೂಕಕ್ಕೆ ಅನುಗುಣವಾಗಿ ೦.೨ ರಿಂದ ೦.೩ ಮೈಕ್ರೋ ಗ್ರಾಂ ನಷ್ಟು ಪರ್ ಕ್ಲೋರೇಟ್ ಪ್ರತಿನಿತ್ಯ ಇವುಗಳ ಉದರವನ್ನು ಸೇರುತ್ತದೆ!. 

ಅಯೋಡಿನ್ ನ ಕೊರತೆಯಿಂದಾಗಿ ಮನುಷ್ಯನ ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆಯಲ್ಲಿ ವ್ಯತ್ಯಯವಾಗುತ್ತದೆ. ಈ ಗ್ರಂಥಿಯು ಸ್ರವಿಸುವ ಥೈರಾಕ್ಸಿನ್ ಎನ್ನುವ ಹಾರ್ಮೋನ್ ಶಿಶುಗಳ ನರಮಂಡಲದ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ಈ ಹಾರ್ಮೋನ್ ನ ಕೊರತೆಯಿಂದಾಗಿ ಶಿಶುಗಳ ಮಾನಸಿಕ ಬೆಳವಣಿಗೆ ಕುಂಠಿತಗೊಳ್ಳುವುದು, ಮೆದುಳಿಗೆ ಹಾನಿಯಾಗುವುದು ಮತ್ತು ಶಾರೀರಿಕ ಬೆಳವಣಿಗೆಯಲ್ಲಿ ವ್ಯತ್ಯಯಗಳು ಸಂಭವಿಸುವ ಸಾಧ್ಯತೆಗಳಿವೆ. ಇದರೊಂದಿಗೆ ಇಂತಹ ಶಿಶುಗಳು ಬದುಕಿ ಉಳಿಯುವ ಸಾಧ್ಯತೆಗಳೂ ಕಡಿಮೆಯಾಗುತ್ತವೆ. ಈ ಸಮಸ್ಯೆಯನ್ನು ನಿಯಂತ್ರಿಸುವ ಸಲುವಾಗಿಯೇ, ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳಲ್ಲಿ ಅಯೋಡಿನ್ ಯುಕ್ತ ಉಪ್ಪಿನ ಮಾರಾಟವನ್ನು ಕಡ್ಡಾಯಗೊಳಿಸಲಾಗಿದೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ೦೨-೦೨-೨೦೧೧ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ.