Saturday, August 16, 2014

KARNAATAKADA SHAASAKARA ANAAROGYA.........


 

 ಕರ್ನಾಟಕದ ಶಾಸಕರ ಅನಾರೋಗ್ಯ ಹಾಗೂ ಉಚಿತ ಚಿಕಿತ್ಸಾ ಭಾಗ್ಯ !

ತಮ್ಮ ಪಕ್ಷದ ಮತ್ತು ತಮ್ಮ ವೈಯುಕ್ತಿಕ ಜನಪ್ರಿಯತೆಯನ್ನು ಹೆಚ್ಚಿಸುವ ಹಾಗೂ ತನ್ಮೂಲಕ ಅಮಾಯಕ ಜನರ ಮತಗಳನ್ನು ಗಳಿಸಿಕೊಳ್ಳುವ ಸಲುವಾಗಿ, ರಾಜಕಾರಣಿಗಳು ಅನೇಕ ಜನಪ್ರಿಯ ( ಉಚಿತ ) ಯೋಜನೆಗಳನ್ನು ಜಾರಿಗೊಳಿಸುತ್ತಾರೆ. ಅವಕಾಶ ಸಿಕ್ಕಿದಾಗಲೆಲ್ಲಾ " ತಾವು ಜಾರಿಗೊಳಿಸಿದ್ದ ಯೋಜನೆ" ಗಳ ಬಗ್ಗೆ ಪುಂಖಾನುಪುಂಖವಾಗಿ ಕೊರೆಯುವ ರಾಜಕಾರಣಿಗಳು,ಇಂತಹ ಯೋಜನೆಗಳಿಗಾಗಿ ಸರ್ಕಾರದ ಬೊಕ್ಕಸದಿಂದ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಾರೆಯೇ ಹೊರತು ತಮ್ಮ ಜೇಬಿನಿಂದಲ್ಲ. ಆದೇ ರೀತಿಯಲ್ಲಿ  ತಮ್ಮ ( ಅರ್ಥಾತ್ ಶಾಸಕರ ) ಸಲುವಾಗಿ ಸದ್ದುಗದ್ದಲವಿಲ್ಲದೇ ಇವರು ಪಡೆದುಕೊಳ್ಳುತ್ತಿರುವ ಅನೇಕ " ಉಚಿತ ಸೌಲಭ್ಯ" ಗಳ ಬಗ್ಗೆ ದೇಶದ ಸಾಮಾನ್ಯ ಪ್ರಜೆಗಳಿಗೂ ಸೂಕ್ತ ಮಾಹಿತಿಯ ಅರಿವಿರುವುದಿಲ್ಲ!. 

ಉಚಿತ ಚಿಕಿತ್ಸಾ ಭಾಗ್ಯ!

ನಮ್ಮ ಶಾಸಕರು ತಮ್ಮ ಸಲುವಾಗಿ ತಾವೇ ಮಂಜೂರು ಮಾಡಿಸಿದ್ದ ಅನೇಕ ಸೌಲಭ್ಯಗಳಲ್ಲಿ, ಉಚಿತ ಚಿಕಿತ್ಸಾ ಭಾಗ್ಯವೂ ಒಂದಾಗಿದೆ. ವಿಶೇಷವೆಂದರೆ ಇಂತಹ ಹಲವಾರು ಸೌಲಭ್ಯಗಳು ದೇಶದ ಪ್ರತಿಯೊಂದು ರಾಜ್ಯಗಳ ಶಾಸಕರು ಮತ್ತು ಸಂಸದರಿಗೂ ಲಭಿಸುತ್ತಿದೆ. ನಮ್ಮ ದೇಶದ ವಿವಿಧ ರಾಜ್ಯಗಳ ಶಾಸಕರು ಮತ್ತು ಸಂಸದರಲ್ಲಿ ಕೋಟ್ಯಾಧಿಪತಿಗಳೇ ಹೆಚ್ಚಾಗಿದ್ದು, ಚುನಾವಣೆಯ ಸಂದರ್ಭದಲ್ಲಿ ಇವರೆಲ್ಲರೂ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಾರೆ. ಆದರೆ ಒಮ್ಮೆ ಶಾಸಕ ಅಥವಾ ಸಂಸದರಾಗಿ ಚುನಾಯಿತರಾದಂತೆಯೇ, ತಮಗೆ ಲಭ್ಯವಿರುವ ಪ್ರತಿಯೊಂದು ಸೌಲಭ್ಯಗಳನ್ನು ನಿಸ್ಸಂಕೋಚವಾಗಿ ಬಳಸಿಕೊಳ್ಳುತ್ತಾರೆ!. 

ಸಚಿವರಿಗೆ ವಿದೇಶದಲ್ಲಿ ಚಿಕಿತ್ಸೆ 

ಇತ್ತೀಚಿಗೆ ಕರ್ನಾಟಕದ ವಸತಿ ಸಚಿವರು ತಮ್ಮ ಆರೋಗ್ಯದ ಸಮಸ್ಯೆಯ ಚಿಕಿತ್ಸೆಯ ಸಲುವಾಗಿ ಸಿಂಗಾಪುರಕ್ಕೆ ತಮ್ಮ ಪರಿವಾರದೊಂದಿಗೆ ತೆರಳಲು ಹಾಗೂ ಅಲ್ಲಿನ ಖ್ಯಾತ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಲು ಮತ್ತು ಮರಳಿಬರಲು ವ್ಯಯಿಸಿದ್ದ ೧.೧೬ ಕೋಟಿ ರೂ.ಗಳಲ್ಲದೇ, ಬೆಂಗಳೂರಿನ ಆಸ್ಪತ್ರೆಗೆ ಪಾವತಿಸಿದ್ದ ೫ ಲಕ್ಷ ರೂ. ಗಳನ್ನು ರಾಜ್ಯ ಸರ್ಕಾರ ಮರುಪಾವತಿಸಿದೆ. ಅಸ್ತಿತ್ವದಲ್ಲಿರುವ ನಿಯಮಗಳಂತೆ ಇವರಿಗೆ ಕೇವಲ ೫ ಲಕ್ಷ ರೂ. ಗಳನ್ನು ವೈದ್ಯಕೀಯ ವೆಚ್ಚಕ್ಕಾಗಿ ನೀಡಬಹುದಾಗಿದ್ದರೂ, ಮುಖ್ಯಮಂತ್ರಿಗಳು ಈ ನಿಯಮವನ್ನು ಉಲ್ಲಂಘಿಸಿ ೧.೨೧ ಕೋಟಿ ರೂ.ಗಳನ್ನು ಸಚಿವರಿಗೆ ಪಾವತಿಸಿರುವುದು ನಂಬಲಸಾಧ್ಯವೆನಿಸುತ್ತದೆ. 

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಮಾಜಿ ಮಂತ್ರಿಯೋಬ್ಬರಿಗೆ ಶ್ರವಣ ಸಾಧನವನ್ನು ಖರೀದಿಸಲು ವ್ಯಯಿಸಿದ್ದ ೫ ಲಕ್ಷ ರೂ.ಗಳನ್ನು ಮರುಪಾವತಿಸಲಾಗಿತ್ತು. ಈ ವಿಚಾರವು ಸಾಕಷ್ಟು ವಾದವಿವಾದಗಳಿಗೂ ಕಾರಣವೆನಿಸಿತ್ತು. ಅದೇ ರೀತಿಯಲ್ಲಿ ಇತ್ತೀಚಿಗೆ ವಿಧಾನ ಪರಿಷತ್ತಿನ ಸದಸ್ಯರೊಬ್ಬರು ತನ್ನ ಬಕ್ಕ ತಲೆಗೆ ಕೂದಲನ್ನು ಕಸಿಮಾಡಿಸಲು ವ್ಯಯಿಸಿದ್ದ ೧.೨೫ ಲಕ್ಷ ರೂ. ಗಳನ್ನು ಸರ್ಕಾರದಿಂದ ಮರುಪಾವತಿಯ ರೂಪದಲ್ಲಿ ಪಡೆದುಕೊಳ್ಳಲು ಅರ್ಜಿಸಲ್ಲಿಸಿದ ವಿಚಾರ ಮಾಧ್ಯಮಗಳ ಮೂಲಕ ಬಹಿರಂಗವಾದೊಡನೆ, ಈ ಬಗ್ಗೆ ಜನಸಾಮಾನ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಆತಂಕಗೊಂಡ ಈ ಸದಸ್ಯರು ತಾವು ತಮ್ಮನ್ನು ಕಾಡುತ್ತಿರುವ ಚರ್ಮವ್ಯಾಧಿಯ ಚಿಕಿತ್ಸೆಯ ವೆಚ್ಚದ ಮರುಪಾವತಿಗಾಗಿ ಅರ್ಜಿಯನ್ನು ಸಲ್ಲಿಸಿದ್ದೇ ಹೊರತು, ಕೂದಲು ಕಸಿಮಾಡಿಸಲು ಅಲ್ಲವೆನ್ನುವ ಹೇಳಿಕೆಯನ್ನು ನೀಡಿದ್ದರು. ಜೊತೆಗೆ ಇನ್ನು ಮುಂದೆ ಯಾವುದೇ ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ಸರ್ಕಾರದಿಂದ ಪಡೆಯುವುದಿಲ್ಲ ಎಂದು ಶಪಥ ಮಾಡಿದ್ದರು!. 

ಆದರೆ ಇದೀಗ ರಾಜ್ಯದ ವಸತಿ ಸಚಿವರಿಗೆ ಒಂದು ಕೋಟಿಗೂ ರೂ.ಗಳಿಗೂ ಅಧಿಕ ಮೊತ್ತವನ್ನು ಮರುಪಾವತಿಸಿರುವುದು ರಾಜ್ಯದ ಜನರ ಮನಸ್ಸಿನಲ್ಲಿ ಒಂದಿಷ್ಟು ಕುತೂಹಲ ಹಾಗೂ ಸಾಕಷ್ಟು ಅಸಮಾಧಾನವನ್ನು ಮೂಡಿಸಿದೆ. ವಿಶೇಷವೆಂದರೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು, ಇಂತಹ ಘಟನೆಗಳು ನಡೆದಿರುವುದು ಇದೇ ಮೊದಲಬಾರಿಗೆ ಅಲ್ಲ ಮತ್ತು ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದಿರುವುದು ನೂರಕ್ಕೆ ನೂರು ಸತ್ಯ. ಏಕೆಂದರೆ ರಾಜ್ಯದ ಪ್ರಜೆಗಳು ಪಾವತಿಸಿರುವ ತೆರಿಗೆಯ ಹಣದಲ್ಲಿ, ನಮ್ಮ ಶಾಸಕರಿಗೆ ಅನೇಕ ವರ್ಷಗಳಿಂದ ಕೋಟ್ಯಂತರ ರೂಪಾಯಿಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ರಾಜ್ಯ ಸರ್ಕಾರ ಪಾವತಿಸಿದೆ. ಇನ್ನು ಮುಂದೆಯೂ ಪಾವತಿಸಲಿದೆ. 

ಆದರೆ ರಾಜ್ಯದ ವಸತಿ ಸಚಿವರ ಅನಾರೋಗ್ಯದ ಪ್ರಕರಣ ತುಸು ಬಿನ್ನವಾಗಿದೆ. ಸಚಿವರು ಉಸಿರಾಟದ ಸಮಸ್ಯೆಯಿಂದ ಮೊದಲು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು.ಈ ಸಂದರ್ಭದಲ್ಲಿ, ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವಂತೆ ಅವರ ಸ್ನೇಹಿತ ರಜನೀಕಾಂತ್ ನೀಡಿದ್ದ ಸಲಹೆಯನ್ನು ಮನ್ನಿಸಿದ ಸಚಿವರನ್ನು ಏರ್ ಎಂಬುಲೆನ್ಸ್ ನಲ್ಲಿ ಅವರ ಪರಿವಾರದೊಂದಿಗೆ ಅಲ್ಲಿಗೆ ಕರೆದೊಯ್ಯಲಾಗಿತ್ತು. ಈ ಸಂದರ್ಭದಲ್ಲಿ ಅವರ ಚಿಕಿತ್ಸಾ ವೆಚ್ಚವನ್ನು ರಜನೀಕಾಂತ್ ಅವರೇ ಭರಿಸಲಿದ್ದಾರೆ ಎನ್ನುವ "ಗಾಳಿಸುದ್ದಿ" ಯೂ ಮಾಧ್ಯಮಗಳಲ್ಲಿ ಹರಡಿತ್ತು. ಇದರಿಂದ ಕೆರಳಿದ ಸಚಿವರು, ತನ್ನ ಚಿಕಿತ್ಸಾ ವೆಚ್ಚವನ್ನು ಭರಿಸುವ ಸಾಮರ್ಥ್ಯ ತನಗಿದೆ ಎಂದಿದ್ದರು. ಆದರೆ ಗುಣಮುಖರಾಗಿ ಸಿಂಗಪುರದಿಂದ ಮರಳಿದ ಬಳಿಕ ತನ್ನ ಪ್ರಯಾಣದ ಮತ್ತು ಚಿಕಿತ್ಸಾ ವೆಚ್ಚಗಳನ್ನು ಸರ್ಕಾರದ ಬೊಕ್ಕಸದಿಂದ ಪಡೆದುಕೊಂಡಿದ್ದರು!. 

ನಿಜ ಹೇಳಬೇಕಿದ್ದಲ್ಲಿ ರಾಜ್ಯದ ಪ್ರಜೆಗಳಿಗೆ ಸಮರ್ಪಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಆದರೆ ಜನಪ್ರತಿನಿಧಿಗಳಿಗೆ ಅವಶ್ಯಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಮತ್ತು ಕೆಲ ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ ವ್ಯಯಿಸಿದ್ದ ವೆಚ್ಚವನ್ನು ಮರುಪಾವತಿಸಲು, ಅಸ್ತಿತ್ವದಲ್ಲಿರುವ ನಿಯಮಗಳನ್ನೇ ಉಲ್ಲಂಘಿಸುತ್ತಿದೆ. 

ವೈದ್ಯಕೀಯ ಭತ್ಯೆ?

ಕರ್ನಾಟಕದ ಶಾಸಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸಾ ಭಾಗ್ಯ ಲಭ್ಯವಿದೆ. ಒಂದುಬಾರಿ ಶಾಸಕರಾಗಿ ಆಯ್ಕೆಯಾದಲ್ಲಿ ಇವರಿಗೆ ಮತ್ತು ಕುಟುಂಬದ ಸದಸ್ಯರಿಗೆ ಲಭಿಸುವ ಉಚಿತ ಚಿಕಿತ್ಸಾ ಭಾಗ್ಯವು, ಶಾಸಕರು ನಿವೃತ್ತರಾದ ಅಥವಾ ಮೃತಪಟ್ಟ ಬಳಿಕವೂ ಅವರ ಕುಟುಂಬದ ಸದಸ್ಯರಿಗೆ ದೊರೆಯುತ್ತದೆ. ನಿವೃತ್ತ ಶಾಸಕರಿಗೆ ಸರ್ಕಾರ ನೀಡುವ ಮಾಸಿಕ ಪಿಂಚಣಿಯೊಂದಿಗೆ, ಪ್ರತಿತಿಂಗಳಿನಲ್ಲೂ ವೈದ್ಯಕೀಯ ವೆಚ್ಚವೆಂದು ೪ ಸಾವಿರ ರೂಪಾಯಿಗಳನ್ನು ಮತ್ತು ಮೃತ ಶಾಸಕರ ಕುಟುಂಬದ ಸದಸ್ಯರೊಬ್ಬರಿಗೆ ನೀಡುವ ಕುಟುಂಬ ಪಿಂಚಣಿಯೊಂದಿಗೆ ವೈದ್ಯಕೀಯ ವೆಚ್ಚವೆಂದು ೨ ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ. ಈ ಸೌಲಭ್ಯವು ಯಾವುದೇ ರೀತಿಯ ಅನಾರೋಗ್ಯದಿಂದ ಪೀಡಿತರಾಗಿರದ ಶಾಸಕರು ಅಥವಾ ಅವರ ಕುಟುಂಬದ ಸದಸ್ಯರಿಗೂ ಅಯಾಚಿತವಾಗಿ ಲಭಿಸುತ್ತಿದೆ!. 

ನಿಯಮಗಳು ಎಂತಿವೆ?

ರಾಜ್ಯ ಸರ್ಕಾರದ ನಿಯಮಗಳಂತೆ ಅನಾರೋಗ್ಯ ಪೀಡಿತ ಶಾಸಕರು ನಮ್ಮ ರಾಜ್ಯದಲ್ಲಿನ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಅವಶ್ಯಕ ಚಿಕಿತ್ಸೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಅವಶ್ಯಕ ಚಿಕಿತ್ಸಾ ಸೌಲಭ್ಯಗಳು ನಮ್ಮ ದೇಶದಲ್ಲಿ ಲಭ್ಯವಿಲ್ಲದಲ್ಲಿ, ವಿದೇಶಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ. ಈ ಚಿಕಿತ್ಸಾ ವೆಚ್ಚವನ್ನು ಶಾಸಕರೇ ಪಾವತಿಸಿದಲ್ಲಿ, ಸೂಕ್ತ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಿ ಮರುಪಾವತಿಯ ರೂಪದಲ್ಲಿ ಪಡೆದುಕೊಳ್ಳಬಹುದಾಗಿದ್ದರೂ, ಇದರ ಮಿತಿಯು ಕೇವಲ ೫ ಲಕ್ಷ ರೂ.ಗಳಾಗಿವೆ. ಕರ್ನಾಟಕ ವಿಧಾನ ಮಂಡಲಗಳ ( ಸದಸ್ಯರ ವೈದ್ಯಕೀಯ ಸೌಲಭ್ಯ) ನಿಯಮಗಳು ೧೯೬೯  ಮತ್ತು ಕರ್ನಾಟಕ ವಿಧಾನ ಮಂಡಲಗಳ ( ನಿವೃತ್ತ ಶಾಸಕರ ವೈದ್ಯಕೀಯ ಸೌಲಭ್ಯ) ಗಳ ನಿಯಮಗಳು ೨೦೦೭ ಗಳಂತೆ, ರಾಜ್ಯದ ಹಾಲಿ ಮತ್ತು ಮಾಜಿ ಶಾಸಕರು ಮತ್ತು ಅವರ ಕುಟುಂಬದ ಅನ್ಯ ಸದಸ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಅಂತೆಯೇ ಸರ್ಕಾರ ಸೂಚಿಸಿದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಅಲಭ್ಯ ಔಷದಗಳನ್ನು ಹೊರಗೆ ಖರೀದಿಸಿದಲ್ಲಿ, ಈ ಮೊತ್ತವನ್ನು ಸರ್ಕಾರದಿಂದ ಮರುಪಾವತಿಯ ರೂಪದಲ್ಲಿ ಪಡೆಯಬಹುದಾಗಿದೆ. 

ಒಂದಿಷ್ಟು ಉದಾಹರಣೆಗಳು 

ಕರ್ನಾಟಕದ ಶಾಸಕರು ಮತ್ತು ಅವರ ಕುಟುಂಬದ ಸದಸ್ಯರು ಜನವರಿ ೨೦೦೭ ರಿಂದ ಅಕ್ಟೋಬರ್ ೨೦೦೯ ರ ಅವಧಿಯಲ್ಲಿ ಪಡೆದಿದ್ದ ಮೊತ್ತವು ೫.೨ ಕೋಟಿ ರೂ. ಗಳಾಗಿತ್ತು. ಸರ್ಕಾರವು ಇಷ್ಟೊಂದು ದೊಡ್ಡ ಮೊತ್ತವನ್ನು ಶಾಸಕರ ಚಿಕಿತ್ಸಾ ವೆಚ್ಚವನ್ನು ಮರುಪಾವತಿಸಲು ವ್ಯಯಿಸಿದ್ದರೂ, ಈ ಶಾಸಕರನ್ನು ಪೀಡಿಸಿದ್ದ ಕಾಯಿಲೆಯ ವಿವರಗಳ ಬಗ್ಗೆ ಸರ್ಕಾರದ ಬಳಿ ಸೂಕ್ತ ಮಾಹಿತಿಯೇ ಇಲ್ಲ. 

ಕರ್ನಾಟಕದ ಒಬ್ಬ ಶಾಸಕರು ೨೦೦೯ ರಲ್ಲಿ ಕೇವಲ ೧೦ ತಿಂಗಳುಗಳಲ್ಲಿ ೧೭.೬೮ ಲಕ್ಷ ರೂ.ಗಳನ್ನು ವೈದ್ಯಕೀಯ ವೆಚ್ಚದ ಮರುಪಾವತಿಯ ರೂಪದಲ್ಲಿ ಪಡೆದುಕೊಂಡಿದ್ದರು. ವಿಶೇಷವೆಂದರೆ ಇವರನ್ನು ಪೀಡಿಸಿದ್ದ ಆರೋಗ್ಯದ ಸಮಸ್ಯೆ ಯಾವುದೆಂದು ಸರ್ಕಾರಕ್ಕೆ ತಿಳಿದಿರಲಿಲ್ಲ!. ಇವರು ಫೆಬ್ರವರಿಯಲ್ಲಿ ೫,೮೩,೭೧೦, ಮಾರ್ಚ್ ನಲ್ಲಿ ೬೪,೧೫೫, ಎಪ್ರಿಲ್ ನಲ್ಲಿ ೨,೮೧,೮೯೫, ಜೂನ್ ನಲ್ಲಿ ೨,೭೪,೮೩೦, ಜುಲೈ ನಲ್ಲಿ ೧,೪೭,೮೭೬, ಆಗಸ್ಟ್ ನಲ್ಲಿ ೧,೪೧,೪೧೦, ಅಕ್ಟೋಬರ್ ನಲ್ಲಿ ೨,೭೫,೨೩೨ ರೂ ಗಳನ್ನು ತಮ್ಮ ಚಿಕಿತ್ಸೆಗಾಗಿ ವ್ಯಯಿಸಿರುವುದಾಗಿ ಮರುಪಾವತಿಯನ್ನು ಪಡೆದುಕೊಂಡಿದ್ದರು. ಇನ್ನು ನಾಲ್ಕಾರು ಲಕ್ಷ ರೂ.ಗಳನ್ನು ಪಡೆದಿರುವ ಶಾಸಕರ ಪಟ್ಟಿ ಸಾಕಷ್ಟು ಉದ್ದವಿದೆ. 

ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ಪಡೆದುಕೊಂಡ ರಾಜಕಾರಣಿಗಳಲ್ಲಿ ಮಾಜಿ ಶಾಸಕರ ಪಾಲೇ ಸಾಕಷ್ಟು ಅಧಿಕವಾಗಿದೆ. ಉದಾಹರಣೆಗೆ ೨೦೦೭- ೨೦೦೯ ರ ಅವಧಿಯಲ್ಲಿ ಹಾಲಿ ಮತ್ತು ಮಾಜಿ ಶಾಸಕರು ಪಡೆದುಕೊಂಡಿದ್ದ ಮೊತ್ತವು ೫,೧೯,೪೫,೩೬೬ ರೂಗಳಾಗಿದ್ದು, ಮಾಜಿ ಶಾಸಕರ ಪಾಲು ಇಂತಿದೆ. ೨೦೦೭- ೧,೦೧,೬೮,೪೪೧, ೨೦೦೮- ೧,೫೫,೧೩,೬೯೭, ೨೦೦೯- ೧,೫೦,೦೨,೫೭೦ ರೂ.ಗಳಾಗಿದೆ. ಇದೇ ಅವಧಿಯಲ್ಲಿ ಹಾಲಿ ಶಾಸಕರು ಪಡೆದಿದ್ದ ಮೊತ್ತವು ಹೀಗಿದೆ. ೨೦೦೭- ೫೩,೭೩,೭೮೦, ಹಾಗೂ ೯,೫೨,೭೦೯, ಮತ್ತು ೨೦೦೯- ೪೯,೩೪,೧೬೯ ರೂ.ಗಳಾಗಿತ್ತು. 

ಇಷ್ಟೆಲ್ಲಾ ಸೌಲಭ್ಯಗಳನ್ನು ಪಡೆಯುತ್ತಿರುವ ಶಾಸಕರು, ತಮ್ಮ ಹೊಣೆಗಾರಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮತ್ತು ನಾಡಿನ ಜನತೆಯ ಆರೋಗ್ಯದ ಬಗ್ಗೆ ಒಂದಿಷ್ಟು ಕಾಳಜಿಯನ್ನು ತೋರಬೇಕಿದೆ!.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 



Saturday, August 9, 2014

EBOLA VIRUS- DEADLY AND DANGEROUS







ಮಾರಕ ವ್ಯಾಧಿಯೊಂದರ ಮೂಲ : ಎಬೊಲ 

ಪ್ರಸ್ತುತ ಜಗತ್ತಿನ ಪ್ರತಿಯೊಂದು ರಾಷ್ಟ್ರಗಳ ಪ್ರಜೆಗಳಲ್ಲಿ  ಭಯಮಿಶ್ರಿತ ಕುತೂಹಲಕ್ಕೆ ಕಾರಣವೆನಿಸಿರುವ ವ್ಯಾಧಿಗಳಲ್ಲಿ ಎಬೊಲ ಅಗ್ರಸ್ಥಾನದಲ್ಲಿದೆ. ವೈರಸ್ ಗಳಿಂದ ಉದ್ಭವಿಸಿ ತ್ವರಿತಗತಿಯಲ್ಲಿ ಹರಡುತ್ತಾ, ಈಗಾಗಲೇ ಸುಮಾರು ಒಂದು ಸಾವಿರ ರೋಗಿಗಳನ್ನು ಬಲಿಪಡೆದಿರುವ ಈ ವಿಶಿಷ್ಠ ವ್ಯಾಧಿಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
---------------          -------------             -----------             --------------           ---------------

ವೈದ್ಯಕೀಯ ಸಂಶೋಧಕರು ಅತ್ಯಂತ ಅಪಾಯಕಾರಿ ಹಾಗೂ ಮಾರಕ ಎಂದು ಗುರುತಿಸಿರುವ ವೈರಸ್ ಗಳಲ್ಲಿ " ಎಬೊಲ " ವೈರಸ್ ಗಳೂ ಸೇರಿವೆ. ಈ ವೈರಸ್ ಗಳ ಐದು ತಳಿಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ ಮೂರು ತಳಿಗಳು ಅತ್ಯಂತ ಮಾರಕವೆಂದು ಪರಿಗಣಿಸಲ್ಪಟ್ಟಿವೆ. ಅತ್ಯಂತ ಪ್ರಬಲ ತಳಿಯೊಂದರ ಮಾರಕತೆಯ ಪ್ರಮಾಣವು ಶೇ.೯೦ ರಷ್ಟಿದೆ. ಇದಕ್ಕೂ ಮಿಗಿಲಾಗಿ ಈ ವೈರಸ್ ಗಳ ಹಾವಳಿಯನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ ಲಸಿಕೆಗಳು ಅಥವಾ ಖಚಿತವಾಗಿ ಗುಣಪಡಿಸಬಲ್ಲ ಔಷದಗಳನ್ನು ಇಂದಿನ ತನಕ ಸಂಶೋಧಿಸಿಲ್ಲ. ಹಾಗೂ ಇದೇ ಕಾರಣದಿಂದಾಗಿ ಇದರ ಸಾಂಕ್ರಾಮಿಕತೆ ಮತ್ತು ಮಾರಕತೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ಎಬೊಲದ ಮೂಲ 

ಎಬೊಲ ವೈರಸ್ ಕಾಯಿಲೆ ಅಥವಾ ಎಬೊಲ ರಕ್ತಸ್ರಾವಕ ಜ್ವರ ಎಂದು ಕರೆಯಲ್ಪಡುವ ಗಂಭೀರ ಹಾಗೂ ಮಾರಕ ಸಮಸ್ಯೆಗೆ ಕಾರಣವೆನಿಸಿರುವ ಎಬೊಲ ವೈರಸ್ ಗಳು, ೧೯೭೬ ರಲ್ಲಿ ಮೊತ್ತ ಮೊದಲಬಾರಿಗೆ ಕಾಂಗೊ ಮತ್ತು ಸೂಡಾನ್ ದೇಶಗಳಲ್ಲಿ ಏಕಕಾಲದಲ್ಲಿ ಉದ್ಭವಿಸಿ ಸಾಂಕ್ರಾಮಿಕವಾಗಿ ಹರಡಿದ್ದವು. ಕಾಂಗೊ ದೇಶದ ಎಬೊಲ ನದಿ ಪ್ರಾಂತ್ಯದಲ್ಲಿ ಇದು ಪ್ರತ್ಯಕ್ಷವಾಗಿದ್ದುದರಿಂದ, ಈ ವೈರಸ್ ಗಳನ್ನು ಎಬೊಲ ಎಂದು ಹೆಸರಿಸಲಾಗಿತ್ತು. 

೧೯೭೬ ರಿಂದ ೨೦೧೨ ಅವಧಿಯಲ್ಲಿ ೧೨ ಬಾರಿ ವಿವಿಧ ದೇಶಗಳಲ್ಲಿ ಪ್ರತ್ಯಕ್ಶವಾಗಿದ್ದ ಈ ವೈರಸ್ ಗಳು, ಕೇವಲ ೧೦೦೦ ಕ್ಕೂ ಕಡಿಮೆ ಜನರನ್ನು ಪೀಡಿಸಿದ್ದವು. ಆದರೆ ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಗಿನಿ ದೇಶದಲ್ಲಿ ಉದ್ಭವಿಸಿ, ತ್ವರಿತಗತಿಯಲ್ಲಿ ಲೈಬೀರಿಯ, ಸಿಯೆರಾ ಲಿಯೋನ್ ಮತ್ತು ನೈಜೀರಿಯ ದೇಶಗಳಲ್ಲಿ ಹರಡುತ್ತಾ, ಈಗಾಗಲೇ ಸರಿಸುಮಾರು ೧೦೦೦ ಜನರನ್ನು ಬಲಿಪಡೆದಿರುವ ಈ ವೈರಸ್ ಗಳ ಸಾಂಕ್ರಾಮಿಕತೆ, ತೀವ್ರತೆ ಮತ್ತು ಮಾರಕತೆಗಳು, ಕಳೆದ ನಾಲ್ಕು ದಶಕಗಳಲ್ಲೇ ಸರ್ವಾಧಿಕವೆನಿಸಿದೆ. ಇದೇ ಕಾರಣದಿಂದಾಗಿ ಇದೀಗ ವಿಶ್ವ ಆರೋಗ್ಯ ಸಂಸ್ಥೆಯು ಎಬೊಲ ವೈರಸ್ ಗಳ ಹಾವಳಿಯನ್ನು " ಅಂತಾರಾಷ್ಟ್ರೀಯ ಅರೋಗ್ಯ ತುರ್ತುಸ್ಥಿತಿ " ಎಂದು ಘೋಷಿಸಿದೆ. ಇಷ್ಟು ಮಾತ್ರವಲ್ಲ, ಜಗತ್ತಿನ ಪ್ರತಿಯೊಂದು ರಾಷ್ಟ್ರಗಳೂ, ಈ ವ್ಯಾಧಿಯ ಹರಡುವಿಕೆಯ ಸಂಭಾವ್ಯತೆಯ ಬಗ್ಗೆ ಕಟ್ಟೆಚ್ಚರವಹಿಸುವಂತೆ ಸೂಚಿಸಿದೆ. 

ಹರಡುವುದು ಹೇಗೆ?

ಸೋಂಕುಪೀಡಿತ ಕಾಡುಪ್ರಾಣಿಗಳ ರಕ್ತ ಹಾಗೂ ಶರೀರದ ದ್ರವಗಳ ಸಂಪರ್ಕದಿಂದ  ಮನುಷ್ಯರಿಗೆ ಹರಡುವ ಈ ವೈರಸ್ ಗಳು, ಬಳಿಕ ಮನುಷ್ಯರಿಂದ ಮನುಷ್ಯರಿಗೆ ಹರಡಬಲ್ಲದು. ಸೋಂಕುಪೀಡಿತ  ವ್ಯಕ್ತಿಗಳ ರಕ್ತ ಹಾಗೂ ಶರೀರದ ಇತರ ದ್ರವಗಳ ಸಂಪರ್ಕದಿಂದ ಇದು ಇತರರಿಗೆ ಹರಡುವುದೇ ಹೊರತು, ಶೀತ- ಕೆಮ್ಮುಗಳಂತೆ ಗಾಳಿಯ ಮೂಲಕ ಹರಡಲಾರದು. 

ಎಬೊಲ ಪೀಡಿತ ರೋಗಿಗಳ ರಕ್ತ, ಮಲ, ಮೂತ್ರ, ಜೊಲ್ಲು, ಬೆವರು ಹಾಗೂ ಇನ್ನಿತರ ದ್ರವಗಳ ನೇರ ಸಂಪರ್ಕದಿಂದ ಈ ವ್ಯಾಧಿಯು ಸುಲಭದಲ್ಲೇ ಹರಡುವುದು. ಇದಲ್ಲದೇ ರೋಗಿಗಳು ಬಳಸಿದ ವಸ್ತುಗಳನ್ನು ಇತರರು ಬಳಸುವುದರಿಂದ, ಸೋಂಕುಪೀಡಿತ ವ್ಯಕ್ತಿಗಳೊಂದಿಗೆ ಲೈಂಗಿಕ ಸಂಪರ್ಕದಿಂದ, ಈ ವ್ಯಾಧಿಯಿಂದ ಮೃತಪಟ್ಟ ರೋಗಿಗಳ ಮೃತಶರೀರವನ್ನು ಸಮರ್ಪಕ ಸುರಕ್ಷಾ ವಿಧಾನಗಳನ್ನು ಅನುಸರಿಸದೇ ಮುಟ್ಟುವುದು ಅಥವಾ ಹೊರುವುದರಿಂದಲೂ ಎಬೊಲ ಇತರರಿಗೆ ಹರಡುತ್ತದೆ. ಅಂತೆಯೇ ರೋಗಿ ಬಳಸಿದ ಬಟ್ಟೆಗಳು, ಅನ್ಯ ಪರಿಕರಗಳು ಮತ್ತು ರೋಗಿಯ ಸಲುವಾಗಿ ಬಳಸಿದ ವೈದ್ಯಕೀಯ ಉಪಕರಣಗಳನ್ನು ಇತರರು ಬಳಸಿದಲ್ಲಿ ಈ ವ್ಯಾಧಿ ಮತ್ತೊಬ್ಬರಿಗೆ ಹರಡುತ್ತದೆ. 

ಈ ಆಧುನಿಕ ಯುಗದಲ್ಲಿ ಸಹಸ್ರಾರು ಜನರು ವಿಮಾನಗಳ ಮೂಲಕ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಂಚರಿಸುವುದರಿಂದ, ಇಂತಹ ಸೋಂಕುಪೀಡಿತ ವ್ಯಕ್ತಿಗಳಿಂದ ಈ ವೈರಸ್ ಗಳು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸುಲಭದಲ್ಲೇ ಹರಡುತ್ತವೆ. 

ಪತ್ತೆಹಚ್ಚುವುದೆಂತು ?

ಶಂಕಿತ ಎಬೊಲ ವ್ಯಾಧಿಪೀಡಿತ ವ್ಯಕ್ತಿಯ ಶಾರೀರಿಕ ತಪಾಸಣೆ ಹಾಗೂ ವೈದ್ಯಕೀಯ ಪ್ರಯೋಗಾಲಯಗಳಲ್ಲಿ ನಿರ್ದಿಷ್ಟ ಪರೀಕ್ಷೆಗಳನ್ನು ನಡೆಸುವ ಮೂಲಕ ಎಬೊಲ ವೈರಸ್ ಕಾಯಿಲೆಯ ಇರುವಿಕೆಯನ್ನು ಪತ್ತೆಹಚ್ಚಬಹುದಾಗಿದೆ.

ರೋಗಲಕ್ಷಣಗಳು 

ಎಬೊಲ ವೈರಸ್ ಗಳು ಮನುಷ್ಯನ ಶರೀರದಲ್ಲಿ ಪ್ರವೇಶವನ್ನು ಗಳಿಸಿದ ಎರಡರಿಂದ ಇಪ್ಪತ್ತೊಂದು ದಿನಗಳಲ್ಲಿ ವ್ಯಾಧಿಯ ಲಕ್ಷಣಗಳು ಪ್ರಕಟಗೊಳ್ಳುತ್ತವೆ. ಆಕಸ್ಮಿಕವಾಗಿ ಉದ್ಭವಿಸುವ ಜ್ವರದೊಂದಿಗೆ ತೀವ್ರ ನಿಶ್ಶಕ್ತಿ, ಶರೀರದ ಅಸ್ಥಿಸಂಧಿಗಳು ಹಾಗೂ ಮಾಂಸಪೇಶಿಗಳಲ್ಲಿ ಅಸಹನೀಯ ನೋವು, ತಲೆನೋವು, ಹೊಟ್ಟೆನೋವು, ಗಂಟಲಲ್ಲಿ ಕೆರೆತ- ನೋವು,ಹಸಿವಿಲ್ಲದಿರುವುದೇ ಮುಂತಾದ ಫ್ಲೂ ಜ್ವರದಂತಹ ಲಕ್ಷಣಗಳು ಪ್ರತ್ಯಕ್ಷವಾಗುತ್ತವೆ. ಬಳಿಕ ಕೆಲರೋಗಿಗಳಲ್ಲಿ ವಾಕರಿಕೆ, ವಾಂತಿ ಹಾಗೂ ಭೇದಿಗಳು ಬಾಧಿಸುತ್ತವೆ. ತದನಂತರ ಶೇ. ೫೦ ರಷ್ಟು ರೋಗಿಗಳ ಚರ್ಮದ ಮೇಲೆ ದದ್ದುಗಳು ಮೂಡುವುದು, ಮೂತ್ರಪಿಂಡಗಳು ಹಾಗೂ ಯಕೃತ್ತಿನ ಕಾರ್ಯಕ್ಷಮತೆಯಲ್ಲಿ ವ್ಯತ್ಯಯಗಳು ತಲೆದೋರುತ್ತವೆ. ಈ ಹಂತದಲ್ಲಿ ಆಂತರಿಕ ಹಾಗೂ ಬಾಹ್ಯ ರಕ್ತಸ್ರಾವ ಮತ್ತು ತೀವ್ರ ನಿರ್ಜಲೀಕೃತ ಸ್ಥಿತಿಗಳಂತಹ ಗಂಭೀರ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. 
ಶೇ.೪೦ ರಿಂದ ೫೦ ರಷ್ಟು ರೋಗಿಗಳನ್ನು ಬಾಧಿಸುವ ಆಂತರಿಕ ಮತ್ತು ಬಾಹ್ಯ ರಕ್ತಸ್ರಾವಗಳಿಂದಾಗಿ ಇನ್ನಷ್ಟು ಸಮಸ್ಯೆಗಳು ಉದ್ಭವಿಸುತ್ತವೆ. ಇವುಗಳಲ್ಲಿ ರಕ್ತ ಹೆಪ್ಪುಗಟ್ಟದಿರುವುದು, ರಕ್ತವಾಂತಿ, ಮಲದೊಂದಿಗೆ ಹಾಗೂ ಕೆಮ್ಮಿದಾಗ ರಕ್ತ ಹೊರಬೀಳುವುದು ಮತ್ತು  ಚರ್ಮಕ್ಕೆ ತೂತು ಬಿದ್ದಲ್ಲಿ ( ಉದಾ- ಇಂಜೆಕ್ಷನ್ ನೀಡಿದ ಬಳಿಕ) ರಕ್ತಸ್ರಾವ ಸಂಭವಿಸಬಹುದು. ಇದಲ್ಲದೇ ಜೀರ್ಣಾಂಗಗಳಲ್ಲಿ, ಮೂಗು, ಒಸಡು  ಮತ್ತು ಯೋನಿಯಿಂದ ರಕ್ತಸ್ರಾವ ಸಂಭವಿಸಬಹುದು. ಈ ರೀತಿಯ ರಕ್ತಸ್ರಾವ ತೀವ್ರ ಸ್ವರೂಪದಲ್ಲಿ ಇರುವ ಸಾಧ್ಯತೆಗಳು ಕಡಿಮೆಯಿದ್ದರೂ, ಇದು ರೋಗಿಯ ಸ್ಥಿತಿ ವಿಷಮಿಸುತ್ತಿರುವುದನ್ನು ಸೂಚಿಸುತ್ತದೆ. ಅಂತೆಯೇ ತೀವ್ರ ರಕ್ತಸ್ರಾವವು ಬಹುತೇಕ ಸಂದರ್ಭಗಳಲ್ಲಿ ರೋಗಿಯ ಮರಣದೊಂದಿಗೆ ಪರ್ಯವಸಾನಗೊಳ್ಳುತ್ತದೆ. 
ತಡೆಗಟ್ಟುವುದು ಹೇಗೆ?

ಎಬೊಲ ವ್ಯಾಧಿಪೀಡಿತ ರೋಗಿಗಳನ್ನು ಸಂಪೂರ್ಣವಾಗಿ ಗುಣಮುಖರಾಗುವ ತನಕ ಇತರ ವ್ಯಕ್ತಿಗಳ ಸಂಪರ್ಕವಿರದಂತೆ ಪ್ರತ್ಯೇಕವಾಗಿರಿಸಿ ಚಿಕಿತ್ಸೆಯನ್ನು ನೀಡಬೇಕು. ಎಬೊಲ ವೈರಸ್ ಸೋಂಕಿನಿಂದ ಬಳಲುತ್ತಿರುವರೆಂದು ಸಂದೇಹಿಸಿದ ವ್ಯಕ್ತಿಗಳನ್ನು ಕೂಡಾ ಪ್ರತ್ಯೇಕವಾಗಿರಿಸಿ, ಅವಶ್ಯಕ ಪರೀಕ್ಷೆಗಳನ್ನು ನಡೆಸಿದ ಬಳಿಕ ವ್ಯಾಧಿಪೀಡಿತರಲ್ಲ ಎಂದು ಸಾಬೀತಾದ ಬಳಿಕವೇ ಬಿಡಬೇಕು. ರೋಗಿಗಳನ್ನು ಚಿಕಿತ್ಸಿಸುವ ಹಾಗೂ ಆರೈಕೆ ಮಾಡುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬಂದಿಗಳು, ಸೂಕ್ತ ಸುರಕ್ಷಾ ಕ್ರಮಗಳು ಹಾಗೂ ದಿರುಸುಗಳನ್ನು ಧರಿಸಬೇಕು. ರೋಗಿಗಳು ಬಳಸಿರುವ ಬಟ್ಟೆ ಮತ್ತಿತರ ಪರಿಕರಗಳನ್ನು ಅನ್ಯರು ಬಳಸಬಾರದು. ಮೃತಪಟ್ಟ ರೋಗಿಯ ದೇಹವನ್ನು ದಹಿಸಬೇಕು. ಇದಲ್ಲದೇ ಶಂಕಿತ ರೋಗಪೀಡಿತ ಪ್ರಾಣಿಗಳ ಸಂಪರ್ಕ ಹಾಗೂ ಇವುಗಳ ಮಾಂಸದ ಸೇವನೆಯನ್ನು ವರ್ಜಿಸಬೇಕು. 

ಎಬೊಲ ವ್ಯಾಧಿಪೀಡಿತ ಗಂಡಸರು ಸಂಪೂರ್ಣವಾಗಿ ಗುಣಮುಖರಾದ ಬಳಿಕ, ಸುಮಾರು ೫೦ ದಿನಗಳ ತನಕ ಇವರ ವೀರ್ಯದಲ್ಲಿ ವೈರಸ್ ಗಳು ಇರುವ ಸಾಧ್ಯತೆಗಳು ಇರುವುದರಿಂದ, ಕನಿಷ್ಠ ಎರಡು ತಿಂಗಳುಗಳ ಕಾಲ ಇವರೊಂದಿಗೆ ಲೈಂಗಿಕ ಸಂಪರ್ಕವನ್ನು ತಪ್ಪಿಸಬೇಕು. 

ಚಿಕಿತ್ಸೆ 

ಈಗಾಗಲೇ ಹೇಳಿರುವಂತೆ ಎಬೊಲ ವೈರಸ್ ವ್ಯಾಧಿಯನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷದಗಳನ್ನು ಇಂದಿನ ತನಕ ಸಂಶೋಧಿಸಿಲ್ಲ. ರೋಗಿಯಲ್ಲಿ ಕಂಡುಬರುವ ರೋಗಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ತೀವ್ರ ಅಸ್ವಸ್ಥರಾಗಿರುವ ಅಥವಾ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ವಿಶೇಷ ತೀವ್ರ ನಿಗಾ ಘಟಕಗಳಲ್ಲಿ ದಾಖಲಿಸಿ ಚಿಕಿತ್ಸೆಯನ್ನು ನೀಡಬೇಕಾಗುವುದು. 



 ಈ ಬಾರಿ ಉದ್ಭವಿಸಿದ್ದೆಲ್ಲಿ ?

ಇತ್ತೀಚಿನ ವರದಿಗಳಂತೆ ಗಿನಿ ದೇಶದ ಹಳ್ಳಿಯೊಂದರಲ್ಲಿ ಎರಡು ವರ್ಷ ವಯಸ್ಸಿನ ಬಾಲಕನೊಬ್ಬನು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದನು. ಬಾಲಕನು ಮೃತಪಟ್ಟು ವಾರ ಕಳೆಯುವಷ್ಟರಲ್ಲಿ ಆತನ ತಾಯಿಯೂ ಮೃತಪಟ್ಟಿದ್ದಳು. ತದನಂತರ ಆತನ ಮೂರು ವರ್ಷದ ಸೋದರಿ ಮತ್ತು ಆತನ ಅಜ್ಜಿ ನಿಧನರಾಗಿದ್ದರು. ಆದರೆ ಈ ನಾಲ್ವರ ಮರಣಕ್ಕೆ ಕಾರಣವೇನೆಂದು ಯಾರಿಗೂ ತಿಳಿದಿರಲೇ ಇಲ್ಲ. ಅಜ್ಜಿಯ ಶವಸಂಸ್ಕಾರದಲ್ಲಿ ಭಾಗವಹಿಸಿದ್ದ ಇಬ್ಬರು ಸಂಬಂಧಿಗಳು ಈ ನಿಗೂಢ ಕಾಯಿಲೆಯನ್ನು ತಮ್ಮ ಹಳ್ಳಿಗೆ ಕೊಂಡೊಯ್ದಿದ್ದರು. ಬಳಿಕ ಆರೋಗ್ಯ ಕಾರ್ಯಕರ್ತನೊಬ್ಬನು ಈ ವ್ಯಾಧಿಯನ್ನು ಮತ್ತೊಬ್ಬರಿಗೆ ಹರಡಿದಂತೆಯೇ ಮೃತಪಟ್ಟಿದ್ದನು. ಹಾಗೂ ಆತನಿಗೆ ಚಿಕಿತ್ಸೆಯನ್ನು ನೀಡಿದ್ದ ವೈದ್ಯರೂ ಇದಕ್ಕೆ ಬಲಿಯಾಗಿದ್ದರು. ಇವರಿಬ್ಬರೂ ಅದಾಗಲೇ ಈ ಕಾಯಿಲೆಯನ್ನು ತಮ್ಮ ಪರಿಚಿತರು ಮತ್ತು ಸಂಬಂಧಿಗಳಿಗೆ ಹರಡಿದ್ದರು. ಅಂತಿಮವಾಗಿ ಇದೇ ವರ್ಷದ ಮಾರ್ಚ್  ತಿಂಗಳಿನಲ್ಲಿ ಈ ಮಾರಕ ವ್ಯಾಧಿಯು ಎಬೊಲ ಎಂದು ಪತ್ತೆಹಚ್ಚುವಷ್ಟರಲ್ಲಿ , ಅನೇಕ ಅಮಾಯಕರು ಇದಕ್ಕೆ ಬಲಿಯಾಗಿದ್ದರು. ಜೊತೆಗೆ ಗಡಿಯ ಸಮೀಪದಲ್ಲಿನ ಲೈಬೀರಿಯ ಮತ್ತು ಸಿಯೆರಾ ಲಿಯೋನ್ ದೇಶಗಳಲ್ಲೂ ಅನೇಕ ಪ್ರಕರಣಗಳು ಉದ್ಭವಿಸಲಾರಂಭಿಸಿದ್ದವು. 

ನಾಲ್ವರು ಬಲಿಯಾಗಿದ್ದ  ಹಳ್ಳಿಯು ಗಿನಿ ದೇಶದ ಗಡಿಭಾಗದಲ್ಲಿದ್ದು, ಇದಕ್ಕೆ ಹೊಂದಿಕೊಂಡಂತೆ ಸಿಯೇರ ಲಿಯೋನ್ ಮತ್ತು ಲೈಬೀರಿಯಾ ದೇಶಗಳಿವೆ. ಈ ಹಿಂದುಳಿದ ಹಾಗೂ ಬಡ ದೇಶಗಳ ನಡುವಿನ ಗಡಿಭಾಗದ ರಸ್ತೆಗಳು ಹಿಂದಿಗಿಂತಲೂ ಉತ್ತಮ ಸ್ಥಿತಿಯಲ್ಲಿ ಇರುವುದರಿಂದ, ಪ್ರತಿನಿತ್ಯ ನೂರಾರು ಜನರು ಈ ಮೂರು ದೇಶಗಳ ನಡುವೆ ಸಂಚರಿಸುತ್ತಾರೆ. ಪ್ರಾಯಶಃ ಇದೇ ಕಾರಣದಿಂದಾಗಿ, ಗಿನಿಯ ಹಳ್ಳಿಯಲ್ಲಿ ಉದ್ಭವಿಸಿದ್ದ ಎಬೊಲ ವೈರಸ್ ಗಳು, ಸುಲಭದಲ್ಲೇ ಸಮೀಪದ ದೇಶಗಳಿಗೆ ಹರಡಿದ್ದವು. 

ಆದರೆ ಈ ಬಾರಿ ಈ ವ್ಯಾಧಿಗೆ ಮೊದಲು ಬಲಿಯಾದ ಬಾಲಕನಿಗೆ ಈ ವೈರಸ್ ಗಳ ಸೋಂಕು ಎಲ್ಲಿಂದ ಬಂದಿತ್ತ್ತು ಎನ್ನುವ ಮಾಹಿತಿ ಯಾರಿಗೂ ತಿಳಿದಿಲ್ಲ. ಇದಕ್ಕೂ ಮುನ್ನ ಸಂಭವಿಸಿದ್ದ ಎಬೊಲ ಸಾಂಕ್ರಾಮಿಕತೆಯಂತೆಯೇ, ಸೋಂಕು ಪೀಡಿತ ಕಾಡುಪ್ರಾಣಿಗಳಿಂದ ಇದು ಬಂದಿರಬೇಕು ಎಂದು ವೈದ್ಯಕೀಯ ವಿಜ್ಞಾನಿಗಳು ಊಹಿಸಿದ್ದಾರೆ. ಆಫ್ರಿಕನ್ ಜನರು ಮಾಂಸಕ್ಕಾಗಿ ಕೊಲ್ಲುವ  ಮಂಗ ಹಾಗೂ ಹಣ್ಣುಗಳನ್ನು ತಿನ್ನುವ ಬಾವಲಿಗಳನ್ನು ಸಂಹರಿಸುವಾಗ, ಇವುಗಳ ರಕ್ತದಲ್ಲಿರಬಹುದಾದ ವೈರಸ್ ಗಳು ಮನುಷ್ಯನ ಶರೀರದಲ್ಲಿ ಪ್ರವೇಶವನ್ನು ಗಳಿಸಿರಬೇಕು. ಈ ಮಾಂಸವನ್ನು ಬೇಯಿಸಿದಾಗ ವೈರಸ್ ಗಳು ನಾಶವಾಗುವುದಾದರೂ, ಇವುಗಳನ್ನು ಕಡಿಯುವ ವ್ಯಕ್ತಿಗಳಿಗೆ ಸೋಂಕು ಬಾಧಿಸುವ ಸಾಧ್ಯತೆಗಳಿವೆ. ಅದೇ ರೀತಿಯಲ್ಲಿ ಬಾವಲಿಗಳು ತಿಂದು ಹಾಕಿದ ಹಾಗೂ ಇವುಗಳ ಮಲಮೂತ್ರಗಳಿಂದ ಕಲುಷಿತ  ಹಣ್ಣುಗಳನ್ನು ಸೇವಿಸಿದ ವ್ಯಕ್ತಿಗಳಿಗೂ ಈ ಸೋಂಕು ಸುಲಭದಲ್ಲೇ ಬಾಧಿಸುವ ಸಾಧ್ಯತೆಗಳಿವೆ. 

ಪ್ರಸ್ತುತ ಈ ಬಾರಿಯ ಎಬೊಲ ಹಾವಳಿಯ ಮೂಲವನ್ನು ಪತ್ತೆಹಚ್ಚಿದ್ದರೂ, ಈಗಾಗಲೇ ಸಹಸ್ರಾರು ಜನರಿಗೆ ಮತ್ತು ಹಲವಾರು ದೇಶಗಳಿಗೆ ಹರಡಿರುವ ಈ ವ್ಯಾಧಿಯನ್ನು ನಿಯಂತ್ರಿಸಲು, ಹಲವಾರು ತಿಂಗಳುಗಳೇ ಬೇಕಾಗುವುದೆಂದು ತಜ್ಞ ವೈದ್ಯರು ಅಭಿಪ್ರಾಯಿಸಿದ್ದಾರೆ. 



ಪ್ರಸ್ತುತ ಪಶ್ಚಿಮ ಆಫ್ರಿಕಾದ ನಾಲ್ಕು ದೇಶಗಳಲ್ಲಿ ಪತ್ತೆಯಾಗಿರುವ ಎಬೊಲ ವೈರಸ್ ಗಳು, ನಮ್ಮ ದೇಶದ ಜನತೆಯನ್ನು ಕಾಡುವ ಸಾಧ್ಯತೆಗಳಿಲ್ಲ. ಆದರೆ ವ್ಯಾಧಿಪೀಡಿತ ದೇಶಗಳಿಗೆ ಭೇಟಿ ನೀಡಿ ನಮ್ಮ ದೇಶಕ್ಕೆ ಆಗಮಿಸುವ ವ್ಯಕ್ತಿಗಳಿಂದ ಇದು ಭಾರತವನ್ನು ಪ್ರವೇಶಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇದೇ ಕಾರಣದಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದೇಶಗಳಿಂದ ವಿಮಾನಗಳಲ್ಲಿ ಆಗಮಿಸುವ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲೇ ತಪಾಸಣೆಗೆ ಒಳಪಡಿಸಿ, ಫ್ಲೂ ಜ್ವರದಂತಹ ಲಕ್ಷಣಗಳಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿದೊಡನೆ ಪ್ರತ್ಯೇಕಿಸಿ, ಇನ್ನಷ್ಟು ಪರೀಕ್ಷೆಗಳಿಗೆ ಒಳಪಡಿಸುತ್ತಿವೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 







Wednesday, August 6, 2014

SOLIDWASTE MANAGEMENT - WHO IS RESPONSIBLE ?



 ಘನತ್ಯಾಜ್ಯ ಸಂಗ್ರಹ- ನಿರ್ವಹಣೆ : ಯಾರ ಹೊಣೆ ?

ನಮ್ಮ ದೇಶದ ಪ್ರತಿಯೊಂದು ರಾಜ್ಯಗಳ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ , ಕಣ್ಣು ಹಾಯಿಸಿದಲ್ಲೆಲ್ಲಾ ವೈವಿಧ್ಯಮಯ ತ್ಯಾಜ್ಯಗಳ ರಾಶಿಗಳು ಕಾಣಸಿಗುತ್ತವೆ. ಈ ಸಮಸ್ಯೆಯನ್ನು ಬಗೆಹರಿಸಲು ಸ್ಥಳೀಯ ಸಂಸ್ಥೆಗಳು ವಿಫಲವಾಗಿವೆ ಎಂದು ದೂರುವ ಜನರು, ತಮ್ಮ ವಸತಿ- ವಾಣಿಜ್ಯ ಕಟ್ಟಡಗಳಲ್ಲಿ ದಿನನಿತ್ಯ ಉತ್ಪನ್ನವಾಗುವ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಇವುಗಳನ್ನು ಸಂಗ್ರಹಿಸುವ ಕಾರ್ಯಕರ್ತರಿಗೆ ನೀಡಲು ಸಹಕರಿಸುತ್ತಿಲ್ಲ. ಇನ್ನು ಕೆಲವರಂತೂ ಮಾತೆತ್ತಿದರೆ ಸಿಂಗಾಪುರ ಮತ್ತು ಅಮೆರಿಕಗಳಲ್ಲಿನ ಸ್ವಚ್ಚತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೂ, ತಮ್ಮಲ್ಲಿ ಉತ್ಪನ್ನವಾಗಿರುವ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ನೀಡುವುದಿಲ್ಲ.

 ತ್ಯಾಜ್ಯಗಳು ಉತ್ಪನ್ನವಾಗುವ ಮೂಲಗಳಿಂದಲೇ ಸಂಗ್ರಹಿಸುವ ವ್ಯವಸ್ಥೆ ಜಾರಿಗೆ ಬಂದ ಬಳಿಕ, ಬಹುತೇಕ ನಗರ - ಪಟ್ಟಣಗಳಲ್ಲಿದ್ದ ಸಿಮೆಂಟ್ ನಿರ್ಮಿತ ತೆರೆದ ಕಸದ ತೊಟ್ಟಿಗಳನ್ನು ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಲಾಗಿತ್ತು. ಆದರೆ ಇದೇ ನ್ಯಾಯಾಲಯವು ಆದೇಶಿಸಿದ್ದಂತೆ ಪ್ರತಿಯೊಂದು ಹಳ್ಳಿ, ಪಟ್ಟಣ, ನಗರ ಮತ್ತು ಮಹಾನಗರಗಳಲ್ಲಿ ದೈನಂದಿನ ತ್ಯಾಜ್ಯಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಿ, ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡಬೇಕೆನ್ನುವ ಪ್ರಮುಖ ವಿಚಾರವನ್ನು ನಮ್ಮ ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲ. ಇದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ನಿಗದಿಸಿದ್ದ ಅವಧಿ ಮುಗಿದು ವರ್ಷಗಳೇ ಕಳೆದಿದ್ದರೂ, ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯು ತಲೆಕೆಡಿಸಿಕೊಂಡಿಲ್ಲ. 

ನಿರ್ವಹಣೆ- ವಿಲೇವಾರಿ 

ದೇಶದ ಪ್ರಥಮ ದರ್ಜೆಯ ನಗರಗಳಲ್ಲಿನ ಘನತ್ಯಾಜ್ಯ ನಿರ್ವಹಣೆಯ ಬಗ್ಗೆ ನೇಮಕಗೊಂಡಿದ್ದ ಸಮಿತಿಯೊಂದು, ೧೯೯೯ ರಲ್ಲಿ ಈ ಬಗ್ಗೆ ವರದಿಯೊಂದನ್ನು ಸರ್ವೋಚ್ಛ  ನ್ಯಾಯಾಲಯಕ್ಕೆ ಸಲ್ಲಿಸಿತ್ತು. ತತ್ಪರಿಣಾಮವಾಗಿ ಘನತ್ಯಾಜ್ಯ ನಿರ್ವಹಣೆಯ ಕಾರ್ಯಕ್ರಮದ ವಿಚಾರದಲ್ಲಿ ನೂತನ ಧೋರಣೆಯೂ ೨೦೦೦ ನೇ ಇಸವಿಯಲ್ಲಿ ಜಾರಿಗೆ ಬಂದಿತ್ತು. ಈ ಧೋರಣೆಯಂತೆ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು ಘನತ್ಯಾಜ್ಯ ನಿರ್ವಹಣೆಯ ಪರಿಪೂರ್ಣವಾದ ಯೋಜನೆಯೊಂದನ್ನು ರೂಪಿಸಿ, ತ್ಯಾಜ್ಯಗಳು ಉತ್ಪನ್ನವಾಗುವ ಮೂಲಗಳಿಂದ ಇವುಗಳನ್ನು ಪ್ರತ್ಯೇಕಿಸಿ ಸಂಗ್ರಹಿಸುವ, ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸುವ ಹಾಗೂ ಪುನರ್ ಆವರ್ತನಕ್ಕೆ ಉಪಯುಕ್ತವೆನಿಸುವ ತ್ಯಾಜ್ಯಗಳನ್ನು ಅದಕ್ಕಾಗಿಯೇ ಬಳಸುವ ವಿಚಾರಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗಿತ್ತು. ಆದರೆ ಈ ಧೋರಣೆಯನ್ನು ಕಾರ್ಯರೂಪಕ್ಕೆ ತರಲು ಬಹುತೇಕ ಸ್ಥಳೀಯ ಸಂಸ್ಥೆಗಳು ದಯನೀಯವಾಗಿ ವಿಫಲಗೊಂಡಿವೆ. 

ಮುನಿಸಿಪಲ್ ಘನತ್ಯಾಜ್ಯ ( ಆಡಳಿತ ಮತ್ತು ನಿರ್ವಹಣೆ) ನಿಯಮ ೧೯೯೯ ರಂತೆ ನಗರ ಪ್ರದೇಶಗಳಲ್ಲಿ ಮುಕ್ತವಾಗಿ ತ್ಯಾಜ್ಯಗಳನ್ನು ಸುರಿಯುವುದು ಅಪರಾಧವೆನಿಸುತ್ತದೆ. ಈ ಸಮಸ್ಯೆಯನ್ನು ತಡೆಗಟ್ಟಲು ಲ್ಯಾಂಡ್ ಫಿಲ್ ಗಳನ್ನು ನಿರ್ಮಿಸಲು ಸೂಕ್ತವಾದ ಸ್ಥಳಗಳನ್ನು ಗುರುತಿಸಿ, ಸುದೀರ್ಘಕಾಲ ಇವುಗಳನ್ನು ಬಳಸುವಂತೆ ಸಿದ್ಧಪಡಿಸಿ ತ್ಯಾಜ್ಯಗಳ ಸಂಸ್ಕರಣೆ ಮತ್ತು ವಿಲೆವಾರಿಗಳಿಗೆ ಅವಶ್ಯಕ ವ್ಯವಸ್ಥೆಗಳನ್ನು ಸ್ಥಳೀಯ ಸಂಸ್ಥೆಗಳು ಮಾಡಬೇಕಾಗುತ್ತದೆ. 

ವಿಶೇಷವೆಂದರೆ ಈ ವ್ಯವಸ್ಥೆ ಲಭ್ಯವಿರುವ ಅನೇಕ ನಗರ- ಪಟ್ಟಣಗಳಲ್ಲೂ, ರಸ್ತೆಗಳ ಬದಿಗಳು, ಚರಂಡಿಗಳು ಮತ್ತು ಖಾಲಿಜಾಗಗಳಲ್ಲಿ ಸ್ಥಳೀಯ ನಿವಾಸಿಗಳು ತ್ಯಾಜ್ಯಗಳನ್ನು ಸುರಿಯುವುದು ನಿರಂತರವಾಗಿ ನಡೆಯುತ್ತಿದೆ. ತ್ಯಾಜ್ಯ ಸಂಗ್ರಹ, ಸಾಗಾಟ, ಸಂಸ್ಕರಣೆ ಮತ್ತು ವಿಲೇವಾರಿ ವ್ಯವಸ್ಥೆಗಳಿಗಾಗಿ ಸ್ಥಳೀಯ ಸಂಸ್ಥೆಗಳು ವಿಧಿಸುವ ಶುಲ್ಕವನ್ನು ಉಳಿಸಲು ನಾಗರಿಕರು ಮೊರೆಹೋಗುವ ಈ ವಿಧಾನವು, ಸಮಗ್ರ ವ್ಯವಸ್ಥೆಯ ವೈಫಲ್ಯದೊಂದಿಗೆ ಸ್ಥಳೀಯ ನಿವಾಸಿಗಳ ಅನಾರೋಗ್ಯಕ್ಕೂ ಕಾರಣ ವೆನಿಸುತ್ತಿದೆ. 

ಉದಾಹರಣೆಗೆ ಪುತ್ತೂರಿನಲ್ಲಿ ಹಲವಾರು ವರ್ಷಗಳ ಹಿಂದೆಯೇ ಕುಡ್ಸೆಂಪ್ ಯೋಜನೆಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಮತ್ತು ತತ್ಸಂಬಂಧಿತ ಕಸದ ತೊಟ್ಟಿಗಳು ಮತ್ತು ವಾಹನಗಳಿಗಾಗಿ ಸುಮಾರು ಎರಡು ಕೋಟಿಗೂ ಅಧಿಕ ಹಣವನ್ನು ವ್ಯಯಿಸಲಾಗಿತ್ತು. ಆದರೆ ನಗರದಲ್ಲಿ ಸಂಗ್ರಹವಾಗುತ್ತಿದ್ದ ವೈವಿಧ್ಯಮಯ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ಸಂಸ್ಕರಿಸದೇ, ಇವೆಲ್ಲಾ ತ್ಯಾಜ್ಯಗಳನ್ನು ಲ್ಯಾಂಡ್ ಫಿಲ್ ಸೈಟ್ ನಲ್ಲಿ ಸುರಿಯಲಾಗುತ್ತಿತ್ತು!. ತತ್ಪರಿಣಾಮವಾಗಿ ಈ ಲ್ಯಾಂಡ್ ಫಿಲ್ ಸೈಟ್ ಈಗಾಗಲೇ ಅರ್ಧದಷ್ಟು ತುಂಬಿದ್ದು, ಇದು ಸಂಪೂರ್ಣವಾಗಿ ತುಂಬಿದಲ್ಲಿ, ಹೊಸದಾಗಿ ಮತ್ತೊಂದು ಸೈಟ್ ನಿರ್ಮಿಸಲು ಕೋಟ್ಯಂತರ ರೂಪಾಯಿಗಳು ವೆಚ್ಚವಾಗಲಿದೆ. ಇದರೊಂದಿಗೆ ನಗರದ ಹೊರವಲಯದಲ್ಲಿನ ಸಣ್ಣಪುಟ್ಟ ಗ್ರಾಮಗಳ ನಿವಾಸಿಗಳು, ತಮ್ಮ ಗ್ರಾಮದ ಸಮೀಪ ಇಂತಹ ಘಟಕಗಳನ್ನು ನಿರ್ಮಿಸಲು ವಿರೋಧ ವ್ಯಕ್ತಪಡಿಸುವುದು ತೊಡಕಾಗಿ ಪರಿಣಮಿಸಲಿದೆ. ಆದುದರಿಂದ ಸಂಗ್ರಹಿತ ತ್ಯಾಜ್ಯಗಳನ್ನು ಕ್ರಮಬದ್ಧವಾಗಿ ಪ್ರತ್ಯೇಕಿಸಿ, ಸಂಪೂರ್ಣವಾಗಿ ನಿರುಪಯುಕ್ತವೆನಿಸುವ ತ್ಯಾಜ್ಯಗಳನ್ನು ಮಾತ್ರ ಲ್ಯಾಂಡ್ ಫಿಲ್ ಸೈಟ್ ನಲ್ಲಿ ಹಾಕಿದಲ್ಲಿ, ಇದು ಸುದೀರ್ಘಕಾಲ ಬಾಳ್ವಿಕೆ ಬರಲಿದೆ. ಪ್ರಸ್ತುತ ಸ್ವಚ್ಚ ಪುತ್ತೂರು ಅಭಿಯಾನದ ಅಂಗವಾಗಿ ಸಂಗ್ರಹಿತ ತ್ಯಾಜ್ಯಗಳನ್ನು ಪ್ರತ್ಯೇಕಿಸುವ ಮೂಲಕ, ನಿರುಪಯುಕ್ತ ತ್ಯಾಜ್ಯಗಳನ್ನು ಮಾತ್ರ ಸೈಟ್ ನಲ್ಲಿ ಹಾಕಲಾಗುತ್ತಿದೆ. ಆದರೂ ಜನಸಾಮಾನ್ಯರ ಸಹಕಾರವಿಲ್ಲದ ಕಾರಣದಿಂದಾಗಿ ನಗರದ ಅನೇಕ ಪ್ರದೇಶಗಳಲ್ಲಿ ತ್ಯಾಜ್ಯಗಳ ರಾಶಿಗಳು ಕಾಣಸಿಗುತ್ತಿವೆ. 

ಬಗೆಹರಿಯದ ಸಮಸ್ಯೆ 

ನಗರದಾದ್ಯಂತ ಅಲ್ಲಲ್ಲಿ ಕಾಣಸಿಗುವ ತ್ಯಾಜ್ಯಗಳ ರಾಶಿಗಳ  ಬಗ್ಗೆ ವೃತ್ತ ಪತ್ರಿಕೆಗಳಲ್ಲಿ ಆಗಾಗ ಸಚಿತ್ರ ವರದಿಗಳು ಪ್ರಕಟವಾಗುತ್ತಲೇ ಇರುತ್ತವೆ. ಈ ಸಮಸ್ಯೆಯ ಬಗ್ಗೆ ಒಂದಿಷ್ಟು ಅಧ್ಯಯನ ನಡೆಸಿದಾಗ ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ. 

ಪುತ್ತೂರಿನ ವಿವಿಧ ಭಾಗಗಳಲ್ಲಿ ತ್ಯಾಜ್ಯಗಳನ್ನು ಹಾಕಲು ಸಿಮೆಂಟ್ ನಿರ್ಮಿತ ಹಾಗೂ ಕುಡ್ಸೆಂಪ್ ಯೋಜನೆಯಲ್ಲಿ ಲಭಿಸಿದ್ದ ಫೈಬರ್ ಕಸದ ತೊಟ್ಟಿಗಳನ್ನು ಇರಿಸಲಾಗಿತ್ತು. ದಿನನಿತ್ಯ ಪೌರಕಾರ್ಮಿಕರು ಇವುಗಳನ್ನು ತೆರವುಗೊಳಿಸುತ್ತಿದ್ದರು. ಆದರೆ ಕಸದ ತೊಟ್ಟಿರಹಿತ ನಿರ್ಮಲ ಗ್ರಾಮ ಯೋಜನೆ ಅನುಷ್ಠಾನಗೊಂಡಂತೆಯೇ, ಇವೆಲ್ಲಾ ಕಸದ ತೊಟ್ಟಿಗಳನ್ನು ತೆರೆವುಗೊಳಿಸಲಾಗಿತ್ತು. ಜೊತೆಗೆ ವಸತಿ- ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯಗಳನ್ನು ಸಂಗ್ರಹಿಸುವ ಕಾರ್ಯವೂ ಆರಂಭವಾಗಿತ್ತು. ಆದರೆ ಕಸದ ತೊಟ್ಟಿ ಕಣ್ಮರೆಯಾದರೂ, ಕಸದ ರಾಶಿಗಳು ಮಾತ್ರ ಕಣ್ಮರೆಯಾಗಲೇ ಇಲ್ಲ!.ಏಕೆಂದರೆ ತೊಟ್ಟಿಗಳನ್ನು ಇರಿಸಿದ್ದ ಜಾಗಗಳಲ್ಲಿ ಕದ್ದುಮುಚ್ಚಿ ಕಸವನ್ನು ಹಾಕುವ ಅಭ್ಯಾಸವನ್ನು ಅನೇಕರು ನಿಲ್ಲಿಸಿರಲಿಲ್ಲ. ಈ ಪ್ರವೃತ್ತಿ ಇಂದಿಗೂ ಅನಿಯಂತ್ರಿತವಾಗಿ ನಡೆಯುತ್ತಿದ್ದು, ಇದಕ್ಕೆ ಕಡಿವಾಣವನ್ನು ತೊಡಿಸದೆ ಇದ್ದಲ್ಲಿ ಪುತ್ತೂರಿನ ತ್ಯಾಜ್ಯ ನಿರ್ವಹಣೆಯ ಯೋಜನೆ ಯಶಸ್ವಿಯಾಗುವ ಸಾಧ್ಯತೆಗಳೇ ಇಲ್ಲ. 

ವಿಶೇಷವೆಂದರೆ ಕಸದ ತೊಟ್ಟಿಗಳಿದ್ದ ಜಾಗಗಳಲ್ಲಿ ಹಾಗೂ ರಸ್ತೆಯ ಬದಿಗಳಲ್ಲಿ ಜನರು ಸುರಿದಿದ್ದ ತ್ಯಾಜ್ಯಗಳನ್ನು ಪೌರಕಾರ್ಮಿಕರು ಆಗಾಗ ತೆರವುಗೊಳಿಸುತ್ತಾರೆ. ಆದರೆ ಮತ್ತೆ ಮರುದಿನ ಅದೇ ಜಾಗಗಳಲ್ಲಿ ಇನ್ನಷ್ಟು ತ್ಯಾಜ್ಯಗಳನ್ನು ಸ್ಥಳೀಯ ನಿವಾಸಿಗಳು ತಂದು ಸುರಿಯುತ್ತಾರೆ. ನಿಜ ಸ್ಥಿತಿ ಇಂತಿರುವಾಗ, ಈ ಸಮಸ್ಯೆಯನ್ನು ಬಗೆಹರಿಸುವುದಾದರೂ ಹೇಗೆ?. ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ!. 

ಕೊನೆಯ ಮಾತು 

ಪ್ರಸ್ತುತ ಭಾರತೀಯರು ಒಂದು ವರ್ಷದಲ್ಲಿ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವು ೧.೩ ಬಿಲಿಯನ್ ಟನ್ ಆಗಿದ್ದು, ಇದು ೨೦೨೫ ರಲ್ಲಿ ದುಪ್ಪಟ್ಟಾಗಲಿದೆ. ತ್ಯಾಜ್ಯಗಳ ಉತ್ಪಾದನೆಯಲ್ಲಿ ಜಗತ್ತಿನ ದೊಡ್ಡಣ್ಣ ಎನಿಸಿರುವ ಅಮೆರಿಕಕ್ಕೆ ಅಗ್ರಸ್ಥಾನ ಸಲ್ಲುತ್ತದೆ. ಏಕೆಂದರೆ ಅಲ್ಲಿ ದಿನನಿತ್ಯ ಉತ್ಪಾದನೆಯಾಗುತ್ತಿರುವ ತ್ಯಾಜ್ಯಗಳ ಪ್ರಮಾಣವು ೬,೨೧,೦೦೦ ಟನ್ ಗಳಾಗಿವೆ. ವಿಶೇಷವೆಂದರೆ ತ್ಯಾಜ್ಯಗಳ ಪುನರ್ ಆವರ್ತನದ ವಿಚಾರದಲ್ಲಿ ಜರ್ಮನಿ ಅಗ್ರಸ್ಥಾನದಲ್ಲಿದ್ದು, ಅಲ್ಲಿ ಉತ್ಪನ್ನವಾಗುವ ಶೇ.೯೫ ರಷ್ಟು ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸಲಾಗುತ್ತಿದೆ. ಇಷ್ಟು ಮಾತ್ರವಲ್ಲ, ಇನ್ನುಳಿದ ಶೇ.೫ ರಷ್ಟು ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸುವ ಪ್ರಯತ್ನಗಳು ಸಾಗುತ್ತಿವೆ!.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 


Friday, August 1, 2014

Mobile tower radiation : is it SAFE ?





ಮೊಬೈಲ್ ಟವರ್ ವಿಕಿರಣ : ನಿರಪಾಯಕಾರಿಯೇ ?

ಮನುಷ್ಯನು ತನ್ನ ಸುಖಸೌಕರ್ಯಗಳಿಗಾಗಿ ಆವಿಷ್ಕರಿಸಿರುವ ಉಪಕರಣಗಳಲ್ಲಿ ಸೆಲ್ಯುಲರ್ ದೂರವಾಣಿಯೂ ಒಂದಾಗಿದೆ. ಆದರೆ ಈ ಪುಟ್ಟ ದೂರವಾಣಿಗಳು ಮತ್ತು ಇವುಗಳ ಸಂಪರ್ಕಜಾಲದ ಗೋಪುರಗಳು, ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಈ ವಿಚಾರದ ಬಗ್ಗೆ ಸಾಕಷ್ಟು ವಾದ ವಿವಾದಗಳು ನಡೆದಿದ್ದು, ಸೆಲ್ಯುಲರ್ ದೂರವಾಣಿಗಳ ಮತ್ತು ಇವುಗಳ ಸೇವಾ ಸಂಸ್ಥೆಗಳ ತಯಾರಕರು ಇದನ್ನು ಅಲ್ಲಗಳೆಯುತ್ತಿದ್ದಲ್ಲಿ, ವೈದ್ಯಕೀಯ ವಿಜ್ಞಾನಿಗಳು ಇದು ನಿಜವೆಂದು ವಾದಿಸುತ್ತಾರೆ. ಪ್ರಸ್ತುತ ಹೈದರಾಬಾದ್ ನಲ್ಲಿ ಜುಲೈ ಅಂತ್ಯದಲ್ಲಿ ಜರಗಿದ್ದ ಕಾರ್ಯಾಗಾರವೊಂದರ ಸಂದರ್ಭದಲ್ಲಿ ನಡೆಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಸೆಲ್ಯುಲರ್ ಸೇವಾ ಸಂಸ್ಥೆಗಳ ಒಕ್ಕೂಟದ ಮಹಾ ನಿರ್ದೇಶಕರು ನೀಡಿದ್ದ ಹೇಳಿಕೆ ಇಲ್ಲಿದೆ. ಜೊತೆಗೆ ಇತರ ಕೆಲ ಮಾಹಿತಿಗಳೂ ಇವೆ.
-------------------          ----------           ----------           ---------          -----------              ------------------

ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಸಂಸ್ಥೆಯ ಮಹಾ ನಿರ್ದೇಶಕರು  ಹೇಳುವಂತೆ, ಸೆಲ್ಯುಲರ್ ಟವರ್ ಮತ್ತು ಸೆಲ್ ಫೋನ್ ಗಳಿಂದ ಹೊರಹೊಮ್ಮುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ಫೀಲ್ಡ್ ನಿಂದ ಯಾವುದೇ ರೀತಿಯ ಕ್ಯಾನ್ಸರ್ ವ್ಯಾಧಿ ಉದ್ಭವಿಸುವ ಸಾಧ್ಯತೆಗಳಿಲ್ಲ. ಹೈದರಾಬಾದ್ ನಲ್ಲಿ ನಡೆಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ವಿವರಗಳನ್ನು ನೀಡಿದ ನಿರ್ದೇಶಕರು ಹಾಗೂ ಖ್ಯಾತ ಕ್ಯಾನ್ಸರ್ ತಜ್ಞರು, ಜನರು ಈ ಬಗ್ಗೆ ಭಯಭೀತರಾಗಬೇಕಿಲ್ಲ ಎಂದು ಹೇಳಿದ್ದರು. 

ಈ ಪತ್ರಿಕಾ ಗೋಷ್ಠಿಯಲ್ಲಿ ಅನೇಕ ಅಧ್ಯಯನಗಳ ವರದಿಗಳು ಮತ್ತು ಹಲವಾರು ಕ್ಯಾನ್ಸರ್ ತಜ್ಞರೊಂದಿಗೆ ಸಜ್ಜಾಗಿದ್ದ ಮಹಾನಿರ್ದೇಶಕರು, ಸೆಲ್ ಫೋನ್ ಗಳ ವಿಕಿರಣದಿಂದ ಕ್ಯಾನ್ಸರ್ ಉದ್ಭವಿಸಲಾರದು ಎಂದು ಪ್ರತಿಪಾದಿಸಿದ್ದರು. ಮೊಬೈಲ್ ಸಂಪರ್ಕಜಾಲ ಮತ್ತು ಸಾರ್ವಜನಿಕ ಆರೋಗ್ಯದ ಬಗ್ಗೆ ಏರ್ಪಡಿಸಿದ್ದ ಕಾರ್ಯಾಗಾರದ ಸಂದರ್ಭದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಇವರು, ಪಶು,ಪಕ್ಷಿ ಹಾಗೂ ಸಸ್ಯ  ಸಂಕುಲಗಳ ಮೇಲೆ ಎಲೆಕ್ಟ್ರೋ ಮ್ಯಾಗ್ನೆಟಿಕ್ ಫೀಲ್ಡ್ ಗಳ ಪರಿಣಾಮಗಳ ಬಗ್ಗೆ ಅಧ್ಯಯನವನ್ನು ಡಿಪಾರ್ಟ್ಮೆಂಟ್ ಆಫ್ ಸಯನ್ಸ್ ಎಂಡ್ ಟೆಕ್ನಾಲಜಿ ಮತ್ತು ಮನುಷ್ಯರ ಮೇಲೆ ಬೀರಬಲ್ಲ ಪರಿಣಾಮಗಳ ಬಗ್ಗೆ ಟಾಟಾ ಮೆಮೋರಿಯಲ್ ಆಸ್ಪತ್ರೆ ನಡೆಸಿರುವುದಾಗಿ ಹೇಳಿದ್ದರು.

ನಿರಪಾಯಕಾರಿ ಎನ್ನುವ ವರದಿ 

ಈ ಅಧ್ಯಯನದ ವರದಿಯು ಮೊಬೈಲ್ ಟವರ್ ಗಳು ಹೊರಸೂಸುವ ವಿಕಿರಣಗಳು ಮನುಷ್ಯರು, ಪಶುಪಕ್ಷಿಗಳು ಮತ್ತು ಸಸ್ಯಸಂಕುಲಗಳ ಮೇಲೆ ಯಾವುದೇ ರೀತಿಯ ದುಷ್ಪರಿಣಾಮವನ್ನು ಬೀರುವುದಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ, ಆದರೆ ಸೆಲ್ ಫೋನ್ ಹ್ಯಾಂಡ್ ಸೆಟ್ ಗಳ ದುಷ್ಪರಿಣಾಮಗಳನ್ನು ಅಲ್ಲಗಳೆಯುವಂತಿಲ್ಲ ಎಂದೂ ಹೇಳಿದ್ದರು. ಗೋಷ್ಠಿಯಲ್ಲಿ ಉಪಸ್ಥಿತರಿದ್ದ ತಜ್ಞರ ಹೇಳಿಕೆಯಂತೆ, ಕೇಂದ್ರ ಸರ್ಕಾರವು ಮೊಬೈಲ್ ತಯಾರಕರಿಗೆ ಕೆಲವೊಂದು ಮಾನದಂಡಗಳನ್ನು ನಿಗದಿಸಿದ್ದು, ಇವುಗಳು ಹೊರಸೂಸುವ ವಿಕಿರಣದ ಪ್ರಮಾಣವನ್ನು ಕನಿಷ್ಠ ಮಟ್ಟದಲ್ಲಿ ಇರಿಸಲಾಗುತ್ತಿದೆ. ಹೈದರಾಬಾದ್ ನಲ್ಲಿರುವ ೪೮೦೦ ಟವರ್ ಗಳ ಬಗ್ಗೆ ನಡೆಸಿದ ಅಧ್ಯಯನದಂತೆ, ಇವೆಲ್ಲ ಟವರ್ ಗಳು ನಿಗದಿತ ಮಾನದಂಡಗಳಿಗೆ ಅನುಗುಣವಾಗಿವೆ ಎಂದು ತಿಳಿದುಬಂದಿದೆ. ಭಾರತದಲ್ಲಿ ಸುಮಾರು ೮೦೦ ದಶಲಕ್ಷ ಮೊಬೈಲ್ ಬಳಕೆದಾರರಿದ್ದು, ಮೊಬೈಲ್ ಟವರ್ ಗಳಿಂದಾಗಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ ಎನ್ನುವುದನ್ನು ಒಂದೇ ಒಂದು ಅಧ್ಯಯನದ ವರದಿಯೂ ಸಾಬೀತುಪಡಿಸಿಲ್ಲವೆಂದರು. ಅದೇ ರೀತಿಯಲ್ಲಿ ಗುಬ್ಬಿ ಮತ್ತು ಜೇನುನೊಣಗಳ ಸಂಖ್ಯೆ ನಶಿಸುತ್ತಿರಲು ರೈತಾಪಿ ಜನರು ಅತಿಯಾಗಿ ಬಳಸುತ್ತಿರುವ ಕೀಟನಾಶಕಗಳು ಕಾರಣವೇ ಹೊರತು ಟವರ್ ಗಳಲ್ಲ ಎಂದು ಹೇಳಿದ್ದರು. 

ಖ್ಯಾತ ಕ್ಯಾನ್ಸರ್ ತಜ್ಞರೊಬ್ಬರು ಈ ವಿಚಾರವನ್ನು ಸಾಬೀತುಪಡಿಸಲು ಒಂದು ವಿಶಿಷ್ಠ ಹಾಗೂ ಗೌಪ್ಯ ಅಧ್ಯಯನವನ್ನು ನಡೆಸಿದ್ದು, ಇದರ ಅಂಗವಾಗಿ ನಿಗದಿತ ಪ್ರದೇಶವೊಂದರಲ್ಲಿದ್ದ ಮೊಬೈಲ್ ಟವರ್ ಕಾರ್ಯಾಚರಿಸದೇ ಇರುವ ವಿಚಾರವನ್ನು ಜನರಿಂದ ಮುಚ್ಚಿಟ್ಟು, ಇದರ ಹಾನಿಕಾರಕ ಪರಿಣಾಮಗಳ ಬಗ್ಗೆ ವಿಚಾರಿಸಿದಾಗ ಇದರ ಆಸುಪಾಸಿನಲ್ಲಿ ವಾಸ್ತವ್ಯವಿದ್ದ ಜನರು ಕ್ಯಾನ್ಸರ್ ನ ಲಕ್ಷಣಗಳು ತಮ್ಮಲ್ಲಿ ಕಂಡುಬರುತ್ತಿವೆ ಎಂದು ದೂರಿರುವುದಾಗಿ ತಿಳಿಸಿದರು. ಅರ್ಥಾತ್, ಟವರ್ ಗಳ ಸಮೀಪ ವಾಸ್ತವ್ಯವಿರುವ ಜನರು ವಿನಾಕಾರಣ ಇವುಗಳ ದುಷ್ಪರಿಣಾಮಗಳ ಬಗ್ಗೆ ದೂರುತ್ತಾರೆ ಎನ್ನುವುದೇ ಈ ತಜ್ಞರ ಅಭಿಮತವಾಗಿತ್ತು.

ಅನ್ಯ ವರದಿಗಳು ಏನೆನ್ನುತ್ತವೆ?

 ನಿಜ ಹೇಳಬೇಕಿದ್ದಲ್ಲಿ ಸೆಲ್ಯುಲರ್ ಟವರ್ ಗಳು ಮತ್ತು ದೂರವಾಣಿಗಳು ಹೊರಸೂಸುವ ವಿಕಿರಣದ ದೀರ್ಘಕಾಲೀನ ದುಷ್ಪರಿಣಾಮಗಳ ಬಗ್ಗೆ ನೂರಾರು ಅಧ್ಯಯನಗಳನ್ನು ವಿವಿಧ ದೇಶಗಳು ನಡೆಸಿದ್ದು, ಬಹುತೇಕ ವರದಿಗಳಲ್ಲಿ ಜನರ ಆರೋಗ್ಯದ ಮೇಲೆ ಬೀರಬಲ್ಲ ದುಷ್ಪರಿಣಾಮಗಳು ಮತ್ತು ತತ್ಪರಿಣಾಮವಾಗಿ ಉದ್ಭವಿಸಬಲ್ಲ ಗಂಭೀರ- ಮಾರಕ ವ್ಯಾಧಿಗಳ ಉಲ್ಲೇಖವಿದೆ. 

ಭಾರತದಲ್ಲಿ ಅತಿಹೆಚ್ಚು ಜನರು ಮೊಬೈಲ್ ದೂರವಾಣಿಗಳನ್ನು ಹೊಂದಿದ್ದು, ಸೆಲ್ಯುಲರ್ ಸೇವಾ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿಗಳ ಆದಾಯ ದೊರೆಯುತ್ತಿದೆ. ಹಾಗೂ ಇದೇ ಕಾರಣದಿಂದಾಗಿ ಸೆಲ್ಯುಲರ್ ಟವರ್ ಗಳು ಹೊರಸೂಸುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ಫೀಲ್ಡ್ ಗಳಿಂದ ಮನುಷ್ಯನ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮಗಳು ಸಂಭವಿಸುವ ಸಾಧ್ಯತೆಗಳಿಲ್ಲವೆಂದು ಸೇವಾ ಸಂಸ್ಥೆಗಳು ವಾದಿಸುತ್ತವೆ. ಆದರೆ ಈ ಬಗ್ಗೆ ನಡೆಸಿರುವ ಅನೇಕ ಸಂಶೋಧನೆ- ಅಧ್ಯಯನಗಳ ವರದಿಗಳಂತೆ, ಇದು ಮನುಷ್ಯರು, ಪಶುಪಕ್ಷಿಗಳು ಮತ್ತು ಸಸ್ಯ ಸಂಕುಲಗಳ ಮೇಲೂ ದುಷ್ಪರಿಣಾಮವನ್ನು ಬೀರಬಲ್ಲದು ಎನ್ನುವ ಮಾಹಿತಿ ಲಭ್ಯವಿದೆ. 

 ಮೊಬೈಲ್ ದೂರವಾಣಿಗಳು ಮತ್ತು ಇವುಗಳ ಸಂಪರ್ಕ ಗೋಪುರಗಳು ನಿರಂತರವಾಗಿ ಹೊರಸೂಸುವ ವಿದ್ಯುತ್ ಆಯಸ್ಕಾಂತೀಯ ಅಲೆಗಳು ಮನುಷ್ಯರ ಮತ್ತು ಪಶುಪಕ್ಷಿಗಳಲ್ಲಿ ಗಂಭೀರ ಹಾಗೂ ಮಾರಕ ವ್ಯಾಧಿಗಳು ಮತ್ತು ಮರಣಕ್ಕೂ ಕಾರಣವೆನಿಸುತ್ತಿವೆ. ವಿಶ್ವದ ಅನೇಕ ರಾಷ್ಟ್ರಗಳ ವಿಜ್ಞಾನಿಗಳು ನಡೆಸಿರುವ ಹಲವಾರು ಅಧ್ಯಯನಗಳಿಂದ ಈ ಕಹಿ ಸತ್ಯವು ನಿಜವೆಂದು ಸಾಬೀತಾಗಿದೆ. ಅದೇ ರೀತಿಯಲ್ಲಿ ಸೆಲ್ಯುಲರ್ ದೂರವಾಣಿಗಳ ಅತಿಬಳಕೆಯಿಂದ ಉದ್ಭವಿಸುವ ಆರೋಗ್ಯದ ಸಮಸ್ಯೆಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕವಾದ ಚರ್ಚೆ ನಡೆಯುತ್ತಿದೆ. 

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಪರಿಸರ ಮಂತ್ರಾಲಯವು ಈ ಬಗ್ಗೆ ಪ್ರಕಟಿತ ವರದಿಗಳನ್ನು ಪರಿಶೀಲಿಸಲು ತಜ್ಞರ ಸಮಿತಿಯೊಂದನ್ನು ೨೦೧೦ ರಲ್ಲಿ ರಚಿಸಿತ್ತು. ಪಂಜಾಬ್ ವಿಶ್ವ ವಿದ್ಯಾಲಯವು ಅಂದು ಪ್ರಕಟಿಸಿದ್ದ ವರದಿಯೊಂದು ಈ ತಜ್ಞರ ಸಮಿತಿಯ ನೇಮಕಕ್ಕೆ ಕಾರಣವೆನಿಸಿತ್ತು. ಗುಬ್ಬಚ್ಚಿ ಹಾಗೂ ಇತರ ಕೆಲ ಪಕ್ಷಿಗಳು ಮತ್ತು ಜೇನುನೊಣಗಳಂತಹ ಕೀಟಗಳ ಸಂತತಿ ನಶಿಸುತ್ತಿರಲು ಮೊಬೈಲ್ ಟವರ್ ಗಳು ಹೊರಸೂಸುವ ವಿದ್ಯುತ್ ಆಯಸ್ಕಾಂತೀಯ ಅಲೆಗಳೇ ಕಾರಣವೆಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. 

ಸಮಸ್ಯೆಯ ಹಿನ್ನೆಲೆ 

ಸೆಲ್ಯುಲರ್ ಟವರ್ ಗಳು ಮತ್ತು ದೂರವಾಣಿಗಳು ಹೊರಸೂಸುವ ವಿದ್ಯುತ್ ಆಯಸ್ಕಾಂತೀಯ ಅಲೆಗಳು ಮನುಷ್ಯರ ಮೆದುಳು, ನರಮಂಡಲ, ಹೃದಯ, ಶ್ವಾಸಕೋಶಗಳು ಮತ್ತು ಕಣ್ಣುಗಳಿಗೆ ಸಂಬಂಧಿಸಿದ ಗಂಭೀರ ಆರೋಗ್ಯದ ಸಮಸ್ಯೆಗಳೊಂದಿಗೆ, ಕೆಲ ವಿಧದ ಮಾರಕ ಕ್ಯಾನ್ಸರ್ ಗಳಿಗೂ ಕಾರಣವೆನಿಸಬಲ್ಲದೆಂದು ಅನೇಕ ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಿದೆ. 

ಜರ್ಮನಿಯಲ್ಲಿ ೧೦ ವರ್ಷಗಳ ಕಾಲ ನಡೆಸಿದ್ದ ಅಧ್ಯಯನದ ವರದಿಯಂತೆ, ವಿದ್ಯುತ್ ಆಯಸ್ಕಾಂತೀಯ ಅಲೆಗಳಿಗೆ ಸುದೀರ್ಘಕಾಲ ಗುರಿಯಾಗುವ ವ್ಯಕ್ತಿಗಳಿಗೆ ವಿವಿಧ ರೀತಿಯ ಕ್ಯಾನ್ಸರ್ ಬಾಧಿಸುವ ಸಾಧ್ಯತೆಗಳು ಮೂರು ಪಟ್ಟು ಹೆಚ್ಚುತ್ತವೆ ಎಂದು ತಿಳಿದುಬಂದಿದೆ. ಸುಮಾರು ೧೦೦೦ ಕ್ಕೂ ಅಧಿಕ ಕ್ಯಾನ್ಸರ್ ಪೀಡಿತ ರೋಗಿಗಳ ದಾಖಲೆಗಳನ್ನು ಪರಿಶೀಲಿಸಿದ್ದ ಸಂಶೋಧಕರ ಅಭಿಪ್ರಾಯದಂತೆ, ಮೊಬೈಲ್ ಗೋಪುರಗಳ ೪೦೦ ಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ವ್ಯಕ್ತಿಗಳಿಗೆ ವಿವಿಧ ರೀತಿಯ ಕ್ಯಾನ್ಸರ್ ಗಳು ಬಾಧಿಸುವ ಸಾಧ್ಯತೆಗಳು ೧೦೦ ಪಟ್ಟು ಹೆಚ್ಚುತ್ತದೆ. 

ಟವರ್ ಗಳ ವ್ಯಾಪ್ತಿಯಲ್ಲಿ ಹರಡುವ ವಿದ್ಯುತ್ ಆಯಸ್ಕಾಂತೀಯ ಅಲೆಗಳ ವಿಕಿರಣ ಶಕ್ತಿಯ ಪ್ರಮಾಣವು, ಪ್ರತಿ ಚದರ ಮೀಟರ್ ಗೆ ೭೨೬೦ ಮೈಕ್ರೋವಾಟ್ಸ್ ಆಗಿರುತ್ತದೆ. ತತ್ಪರಿಣಾಮವಾಗಿ ಉದ್ಭವಿಸಬಲ್ಲ ಕ್ಯಾನ್ಸರ್ ಗಳಲ್ಲಿ ಸ್ತನಗಳ ಕ್ಯಾನ್ಸರ್ ಅಗ್ರಸ್ಥಾನದಲ್ಲಿದೆ. ಅನಂತರದ ಸ್ಥಾನಗಳು ಅನುಕ್ರಮವಾಗಿ ಶುಕ್ಲಗ್ರಂಥಿ, ಮೇದೋಜೀರಕ ಗ್ರಂಥಿ, ಕರುಳು, ಚರ್ಮ, ಶ್ವಾಸಕೋಶಗಳು ಮತ್ತು ರಕ್ತದ ಕ್ಯಾನ್ಸರ್ ಗಳಿಗೆ ಸಲ್ಲುತ್ತದೆ. ಇಷ್ಟು ಮಾತ್ರವಲ್ಲ, ವಿಶ್ವ ಆರೋಗ್ಯ ಸಂಸ್ಥೆಯೂ ಈ ವಿಕಿರಣದ ಹಾನಿಕಾರಕ ಪರಿಣಾಮಗಳ ಬಗ್ಗೆ ವಿಶ್ವದ ಪ್ರತಿಯೊಂದು ರಾಷ್ಟ್ರಗಳಿಗೆ ಕೆಲ ವರ್ಷಗಳ ಹಿಂದೆಯೇ ಎಚ್ಚರಿಕೆಯನ್ನು ನೀಡಿತ್ತು. 

ಅದೃಶ್ಯ ವಿದ್ಯುತ್ ಆಯಸ್ಕಾಂತೀಯ ಅಲೆಗಳ ವಿಕಿರಣದ ಮಾರಕ ಪರಿಣಾಮಗಳ ಬಗ್ಗೆ ಅನೇಕ ದೇಶಗಳಲ್ಲಿ ಪ್ರತಿಭಟನೆಗಳು ನಡೆದಿದ್ದು, ಜನವಸತಿ ಪ್ರದೇಶಗಳಲ್ಲಿ ಟವರ್ ಗಳ ಸ್ಥಾಪನೆಯ ವಿರುದ್ಧ ಅಮೆರಿಕದ ಪ್ರಜೆಗಳು ನ್ಯಾಯಾಲಯಗಳಲ್ಲಿ ಹೂಡಿದ್ದ ದಾವೆಗಳ ಸಂಖ್ಯೆ ೧೦೦೦ ಗಡಿಯನ್ನು ಮೀರಿತ್ತು.

ಭಾರತದಲ್ಲೂ ಮೊಬೈಲ್ ಟವರ್ ಗಳನ್ನು ಜನವಸತಿ ಪ್ರದೇಶ, ವಿದ್ಯಾ ಸಂಸ್ಥೆಗಳು ಹಾಗೂ ಆಸ್ಪತ್ರೆಗಳ ಸಮೀಪದಲ್ಲಿ ಸ್ಥಾಪಿಸಬಾರದೆನ್ನುವ ನಿಯಮವಿದೆ. ಆದರೆ ಈ ನಿಯಮವನ್ನು ಬಹುತೇಕ ಸೆಲ್ಯುಲರ್ ಸೇವಾ ಸಂಸ್ಥೆಗಳು ರಾಜಾರೋಷವಾಗಿ ಉಲ್ಲಂಘಿಸಿವೆ. ನಿರ್ಬಂಧಿತ ಪ್ರದೇಶಗಳಲ್ಲಿ ಟವರ್ ಗಳು ತಲೆ ಎತ್ತುತ್ತಿದ್ದರೂ, ಸ್ಥಳೀಯ ಸಂಸ್ಥೆಗಳು ಮಾತ್ರ ಇದನ್ನು ಕಂಡೂ ಕಾಣದಂತೆ ವರ್ತಿಸುತ್ತಿವೆ. ಇವೆಲ್ಲಕ್ಕೂ ಮಿಗಿಲಾಗಿ ಸೆಲ್ಯುಲರ್ ದೂರವಾಣಿಗಳ ಮಾರಾಟ ಮತ್ತು ಬಳಕೆಗಳಿಗೆ ಅನುಗುಣವಾಗಿ, ನೂತನ ಟವರ್ ಗಳ ನಿರ್ಮಾಣವೂ ಅಡೆತಡೆಗಳಿಲ್ಲದೇ ಸಾಗುತ್ತಿದೆ. 

ವಿಶೇಷವೆಂದರೆ ಇವೆಲ್ಲಾ ವಿಚಾರಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವಿಚಾರಗಳ ಅರಿವಿದ್ದರೂ, ಸೆಲ್ಯುಲರ್ ದೂರವಾಣಿಗಳ ಬಳಕೆಯೂ ದಿನೇದಿನೇ ಹೆಚ್ಚುತ್ತಿದೆ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 




Thursday, July 31, 2014

HEART ATTACK



  ಹೃದಯಾಘಾತಕ್ಕಿಲ್ಲ ಪಕ್ಷಪಾತ !

ಬಡವ- ಬಲ್ಲಿದ, ಸ್ತ್ರೀ- ಪುರುಷ, ಹದಿಹರೆಯದ- ಇಳಿವಯಸ್ಸಿನವರೆನ್ನುವ ಪಕ್ಷಪಾತ ತೋರದೇ ಪೀಡಿ ಸಬಲ್ಲ ಹಾಗೂ ಯಾವುದೇ ಪೂರ್ವಸೂಚನೆಯನ್ನು ನೀಡದೇ ಬರಸಿಡಿಲಿನಂತೆ ಬಂದೆರಗಬಲ್ಲ " ಹೃದಯಾಘಾತ " ದ ಬಗ್ಗೆ ನೀವು ತಿಳಿದಿರಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ.
-------------               -------------              --------------                --------------               -----

ಇಳಿವಯಸ್ಸಿನ ವಾಮನರಾಯರಿಗೆ ಕಳೆದ ಆರೇಳು ತಿಂಗಳಿನಿಂದ ಒಂದಿಷ್ಟು ಶಾರೀರಿಕ ಶ್ರಮದ ಕೆಲಸವನ್ನು ಮಾಡಿದೊಡನೆ ಸಣ್ಣಗೆ ಎದೆನೋವು ಆರಂಭವಾಗುತ್ತಿತ್ತು. ಆಶ್ಚರ್ಯವೆಂದರೆ ಒಂದೆರಡು ವಾಯುಮಾತ್ರೆ ನುಂಗಿ ವಿಶ್ರಾಂತಿ ಪಡೆದೊಡನೆ ನೋವು ಮಾಯವಾಗುತ್ತಿತ್ತು. 

ಆದರೆ ಅಷ್ಟಮಿಯಂದು ಎಂದಿನಂತೆ ಬೆಳಗಿನ ಜಾವ ಎದ್ದ ರಾಯರು ಬಹಿರ್ದೆಶೆಗೆ ತೆರಳಿದಾಗ ಎದೆನೋವು ಪ್ರತ್ಯಕ್ಷವಾಗಿತ್ತು. ಎಂದಿಗಿಂತಲೂ ತುಸು ತೀವ್ರವಾದ ಎದೆನೋವಿನೊಂದಿಗೆ ಈ ಬಾರಿ ಅತಿಅಯಾಸ, ವಾಕರಿಕೆ ಹಾಗೂ ಉಸಿರುಕಟ್ಟಿದ ಅನುಭವವಾಗಿತ್ತು. ಪ್ರಯಾಸದಿಂದ ಮುಖಮಾರ್ಜನ ಮುಗಿಸಿ ಬಂದ ರಾಯರ ಮೈಯ್ಯಿಂದ, ಧಾರಾಕಾರವಾಗಿ ಬೆವರು ಹರಿಯಲು ಆರಂಭಿಸಿತ್ತು. ಏಕೋ ಇಂದು ವಾಯುಬಾಧೆ ತೀವ್ರವಾಗಿದೆ ಎಂದು ಭ್ರಮಿಸಿದ ರಾಯರು, ವಾಯುಮಾತ್ರೆ ನುಂಗಿ ಹಾಸಿಗೆಯಲ್ಲಿ ಮಲಗಿದರು. 

ಏಳು ಗಂಟೆಯಾದರೂ ಏಳದಿದ್ದ ಪತಿಯ ಬಗ್ಗೆ ಚಿಂತಿತರಾದ ಪಾರ್ವತಮ್ಮನು ರಾಯರನ್ನು ಎಬ್ಬಿಸಲು ಬಂದಾಗ ರಾಯರ ದೇಹ ತಣ್ಣಗಾಗಿತ್ತು. ಗಾಬರಿಯಿಂದ ಸಮೀಪದ ವೈದ್ಯರನ್ನು ಕರೆಸಿ ಪರೀಕ್ಷಿಸಿದ ಬಳಿಕ, ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವರೆಂದು ತಿಳಿದುಬಂತು. 
ಅನೇಕ ವಿದ್ಯಾವಂತರು ಇಂದಿಗೂ ರಾಯರಲ್ಲಿ ಕಂಡುಬಂದಂತಹ ಲಕ್ಷಣಗಳನ್ನು " ಗ್ಯಾಸ್ ಟ್ರಬಲ್ " ಎಂದು ನಂಬಿ, ವಾಯುಮಾತ್ರೆ, ಜೀರಿಗೆಯ ಕಷಾಯ ಇತ್ಯಾದಿಗಳನ್ನು ಸೇವಿಸುವುದು ಸುಳ್ಳೇನಲ್ಲ. ವಾಸ್ತವವಾಗಿ ಇಂತಹ ರೋಗಿಗಳನ್ನು ತುರ್ತಾಗಿ ಸುಸಜ್ಜಿತ ಆಸ್ಪತ್ರೆಗೆ ದಾಖಲಿಸಿ ಕ್ಷಿಪ್ರಗತಿಯಲ್ಲಿ ಚಿಕಿತ್ಸೆ ನೀಡುವುದರಿಂದ, ರೋಗಿಯ ಪ್ರಾಣ ಉಳಿಯುವ ಸಾಧ್ಯತೆಗಳು ಹೆಚ್ಚುತ್ತವೆ. 

ಮಾರಕವೆನಿಸಬಲ್ಲ ಸಮಸ್ಯೆ 
ಗತಶತಮಾನದ ಆದಿಯಲ್ಲಿ ಅಪರೂಪದಲ್ಲಿ ಹಾಗೂ ಹೆಚ್ಚಾಗಿ ಶ್ರೀಮಂತರಲ್ಲಿ ಪತ್ತೆಯಾಗುತ್ತಿದ್ದ ಹೃದಯಾಘಾತವು, ನೂತನ ಸಹಸ್ರಮಾನದ ಆದಿಯಲ್ಲಿ ಎಲ್ಲಾ ವರ್ಗದ ಜನರಲ್ಲೂ ವ್ಯಾಪಕವಾಗಿ ಕಂಡುಬರುತ್ತಿದೆ. ಉದಾಹರಣೆಗೆ ದಿನಪತ್ರಿಕೆಗಳಲ್ಲಿ ನೀವು ಓದಿರಬಹುದಾದ " ಆಟದ ಮೈದಾನದಲ್ಲಿ ಕುಸಿದು ಶಾಲಾಬಾಲಕನ ಮೃತ್ಯು", ೩೮ ರ ಹರೆಯದ ತರುಣ ಬಸ್ಸಿನಲ್ಲಿ ಕುಳಿತಲ್ಲೇ ಮೃತಪಟ್ಟ ಹಾಗೂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿ ಹಠಾತ್ತಾಗಿ ಸಾವನ್ನಪ್ಪಿದ ಘಟನೆಗಳಲ್ಲಿ, ಸಾಮಾನ್ಯವಾಗಿ ತೀವ್ರ ಹೃದಯಾಘಾತವೇ ಕಾರಣವಾಗಿರುತ್ತದೆ. ಕೆಲ ವರ್ಷಗಳ ಹಿಂದೆ ಅಮೆರಿಕದ ಈಜು ಚಾಂಪಿಯನ್ ಬಾಲಕಿಯೊಬ್ಬಳು ಈಜುಕೊಳದಲ್ಲಿ ಮುಳುಗಿ ಮೃತಪಟ್ಟಿದ್ದಳು. ಸಂದೇಹಾಸ್ಪದ ಮತ್ತು ಅಕಾಲಿಕ ಮರಣದ ಕಾರಣವನ್ನರಿಯಲು ಶವಪರೀಕ್ಷೆ ನಡೆಸಿದ ಬಳಿಕ, ತೀವ್ರ ಹೃದಯಾಘಾತವೇ ಆಕೆಯ ಮರಣಕ್ಕೆ ಕಾರಣವೆಂದು ತಿಳಿದುಬಂದಿತ್ತು. ಹದಿಹರೆಯದಲ್ಲಿ ಮತ್ತು ತಾರುಣ್ಯದಲ್ಲಿ, ಯಾವುದೇ ರೀತಿಯ ದುಶ್ಚಟಗಳಿಲ್ಲದ ಆರೋಗ್ಯವಂತರನ್ನೂ ಬಲಿತೆಗೆದುಕೊಳ್ಳುವ ಈ ಗಂಭೀರ - ಮಾರಕ ಸಮಸ್ಯೆಗೆ ಅನುವಂಶೀಯತೆ ಮತ್ತು ಅಪರೂಪದಲ್ಲಿ ಇತರ ಕೆಲ ಕಾರಣಗಳಿರುವುದುಂಟು. 

ಹೃದಯಾಘಾತ ಎಂದರೇನು?

ಸುಧೃಢವಾದ ಮಾಂಸಪೇಶಿಗಳಿಂದ ನಿರ್ಮಿತವಾದ, ದಿನವೊಂದರಲ್ಲಿ ಲಕ್ಷಕ್ಕೂ ಹೆಚ್ಚುಬಾರಿ ಮಿಡಿಯುವ, ನಿಮ್ಮ ಹಿಡಿಗಾತ್ರದ " ಹೃದಯ " ಎನ್ನುವ ಅದ್ಭುತ ಯಂತ್ರವು, ಹಗಲಿರುಳು ನಿರಂತರವಾಗಿ ಕಾರ್ಯಾಚರಿಸುತ್ತದೆ. ಇತರ ಯಾವುದೇ ಯಂತ್ರದಂತೆಯೇ ನಿಮ್ಮ ಹೃದಯದ ಕಾರ್ಯಾಚರಣೆಗೂ "ಶುದ್ಧ ರಕ್ತ " ಎನ್ನುವ ಇಂಧನದ ಅವಶ್ಯಕತೆಯಿದೆ. ಸಮಗ್ರ ಶರೀರದ ವಿವಿಧ ಅಂಗಾಂಗಗಳಿಗೆ ರಕ್ತವನ್ನು ಪೂರೈಸುವ ಹೃದಯದಲ್ಲಿ ಸಾಕಷ್ಟು ಪ್ರಮಾಣದ ರಕ್ತವಿದ್ದರೂ, ನಿಮ್ಮ ಹೃದಯಕ್ಕೆ ಇದರಿಂದ ಕಿಂಚಿತ್ ಪ್ರಯೋಜನವೂ ಇಲ್ಲವೆಂದಲ್ಲಿ ನಿಮಗೂ ಆಶ್ಚರ್ಯವೆನಿಸೀತು. ಮನುಷ್ಯನ ಹೃದಯಕ್ಕೆ ಶುದ್ಧ ರಕ್ತವನ್ನು ಪೂರೈಸುವ ಮಹತ್ತರವಾದ ಜವಾಬ್ದಾರಿಯನ್ನು " ಕೊರೋನರಿ ಆರ್ಟರಿ " ಎಂದು ಕರೆಯಲ್ಪಡುವ ರಕ್ತನಾಳಗಳು ನಿರ್ವಹಿಸುತ್ತವೆ. 

ಮಾನವನ ಶರೀರದ ಇತರ ಯಾವುದೇ ರಕ್ತನಾಳಗಳಂತೆಯೇ, ಈ ಕೊರೋನರಿ ರಕ್ತನಾಳಗಳ ಒಳಮೈಯ್ಯಲ್ಲಿ ಕೊಬ್ಬಿನ ಅಂಶ ಹಾಗೂ ಕೊಲೆಸ್ಟರಾಲ್ ಗಳ ಸಂಗ್ರಹದಿಂದಾಗಿ ಉದ್ಭವಿಸಬಲ್ಲ ಅಡಚಣೆಯಿಂದ ಹಾಗೂ ವಯಸ್ಸಾದಂತೆಯೇ ಅಥವಾ ಇತರ ಕಾರಣಗಳಿಂದ ರಕ್ತನಾಳಗಳು ಪೆಡಸಾದಾಗ, ಹೃದಯಕ್ಕೆ ಪೂರೈಕೆಯಾಗುವ ರಕ್ತದ ಪ್ರಮಾಣವು ಕುಂಠಿತಗೊಳ್ಳುತ್ತದೆ. ತತ್ಪರಿಣಾಮವಾಗಿ ಕಿಂಚಿತ್ ಶಾರೀರಿಕ ಶ್ರಮದ ಕೆಲಸ ಮಾಡಿದೊಡನೆ " ಎಂಜೈನಾ " ಎಂದು ಕರೆಯಲ್ಪಡುವ ಎದೆನೋವು ಪ್ರಾರಂಭವಾಗುವುದು. ಎಂಜೈನಾದ ಅವಧಿ ಮತ್ತು ತೀವ್ರತೆಯು ಕೊರೋನರಿ ರಕ್ತನಾಳಗಳಲ್ಲಿನ ಅಡಚಣೆಯ ಮತ್ತು ಶಾರೀರಿಕ ಶ್ರಮದ ತೀವ್ರತೆಯ ಪ್ರಮಾಣಕ್ಕೆ ಅನುಗುಣವಾಗಿ ಹೆಚ್ಚು ಅಥವಾ ಕಡಿಮೆಯಾಗುವುದು. ಅಂತೆಯೇ ರೋಗಿ ವಿರಮಿಸುತ್ತಿರುವಾಗ ಹೃದಯಕ್ಕೆ ಹೆಚ್ಚಿನ ರಕ್ತದ ಪೂರೈಕೆಯ ಅವಶ್ಯಕತೆ ಇಲ್ಲದಿರುವುದರಿಂದ, ಸಾಮಾನ್ಯವಾಗಿ ಎಂಜೈನಾ ಪೀಡಿಸುವುದಿಲ್ಲ. 

ಹೆಪ್ಪುಗಟ್ಟಿದ ರಕ್ತದ ತುಣುಕು ಅಥವಾ ಕೊಬ್ಬಿನಿಂದಾಗಿ ಯಾವುದೇ ಒಂದು ಕೊರೋನರಿ ರಕ್ತನಾಳದಲ್ಲಿ ಸಂಪೂರ್ಣ ಅಡಚಣೆ ಉದ್ಭವಿಸಿದಾಗ, ಹೃದಯದ ಒಂದು ಭಾಗಕ್ಕೆ ರಕ್ತದ ಪೂರೈಕೆಯೂ ಸ್ಥಗಿತಗೊಳ್ಳುತ್ತದೆ. ಇಂತಹ ಅಡಚಣೆಯ ಅವಧಿ ೨೦ ನಿಮಿಷಗಳನ್ನು ಮೀರಿದಲ್ಲಿ, ಆ ಭಾಗದ ಮಾಂಸಪೇಶಿಗಳು ಮೃತಪಡುತ್ತವೆ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು " ಮಯೋಕಾರ್ಡಿಯಲ್ ಇನ್ಫಾರ್ಕ್ಶನ್ " ಎನ್ನುತ್ತಾರೆ. ಜನಸಾಮಾನ್ಯರು ಮಾತ್ರ ಇದನ್ನು ಹಾರ್ಟ್ ಅಟಾಕ್ ಎಂದೇ ಕರೆಯುವುದು ವಾಡಿಕೆಯಾಗಿದೆ. 

ಹೃದಯಾಘಾತದ ಪ್ರಕ್ರಿಯೆಗಳಿಗೆ ನಿಖರವಾಗಿ ಹಾಗೂ ನಿರ್ದಿಷ್ಟವಾಗಿ ಕಾರಣೀಭೂತವೆನಿಸುವ ಅಂಶಗಳನ್ನು ಅರಿತುಕೊಳ್ಳಲು ಇಂದಿಗೂ ಸಂಶೋಧನೆಗಳು ನಡೆಯುತ್ತಿವೆ. 

ಹೃದಯಾಘಾತದ ಲಕ್ಷಣಗಳು 

ಎದೆಯ ಮಧ್ಯಭಾಗದಲ್ಲಿ ತೀವ್ರ ನೋವು, ಕುತ್ತಿಗೆ,ಹೆಗಲು ಹಾಗೂ ಕೈಗಳಿಗೆ ನೋವು ಹರಿದಾಡಿದಂತಹ ಅನುಭವ, ಉಸಿರಾಡಲು ಕಷ್ಟವೆನಿಸುವುದು, ತಲೆತಿರುಗಿದಂತಾಗುದು, ಕಣ್ಣು ಕತ್ತಲಾವರಿಸಿದಂತಾಗುವುದು, ತೀವ್ರ ಎದೆಬಡಿತ, ಅಸಹಜ ಆಯಾಸ, ಅತಿಯಾಗಿ ಬೆವರುವುದು, ವಾಕರಿಕೆ ಅಥವಾ ವಾಂತಿ ಮತ್ತು ಹೊಟ್ಟೆ ತೊಳಸಿದಂತಾಗುವುದೇ ಮುಂತಾದ ಲಕ್ಷಣಗಳು ಸಾಮಾನ್ಯವಾಗಿ ಹೃದಯಾಘಾತ ಸಂಭವಿಸಿದಾಗ ಕಂಡುಬರುತ್ತವೆ. ಆದರೆ ಅಪರೂಪದಲ್ಲಿ ಮಧುಮೇಹ ಪೀಡಿತರಲ್ಲಿ ಎದೆನೋವು ಕಾಣಿಸಿಕೊಳ್ಳದೇ ಹೃದಯಾಘಾತ ಸಂಭವಿಸುವುದುಂಟು. ಇದನ್ನು ಸೈಲೆಂಟ್ ಅಟಾಕ್ ಎನ್ನುವರು. 

ಕಾರಣವೆನಿಸಬಲ್ಲ ಅಂಶಗಳು 

ಸುಖ ವೈಭೋಗದ ಜೀವನಶೈಲಿ, ನಿಷ್ಕ್ರಿಯತೆ, ಕೊಬ್ಬು ಇತ್ಯಾದಿಗಳಿಂದ ಸಮೃದ್ಧವಾದ ಹಾಗೂ ಅತಿಆಹಾರ ಸೇವನೆ, ಧೂಮ- ಮದ್ಯಪಾನ, ಅಧಿಕ ರಕ್ತದೊತ್ತಡ, ಅಧಿಕತೂಕ, ಅತಿಬೊಜ್ಜು, ಮಧುಮೇಹ, ತೀವ್ರ ರಕ್ತಹೀನತೆ, ತೀವ್ರ ಮಾನಸಿಕ ಒತ್ತಡ- ಖಿನ್ನತೆ,ರಕ್ತದಲ್ಲಿ ಅತಿಯಾಗಿರುವ ಕೊಲೆಸ್ಟರಾಲ್- ಟ್ರೈಗ್ಲಿಸರೈಡ್ ಗಳು, ತೀವ್ರ ಭಯ-ಸಂತೋಷ ಅಥವಾ ದುಃಖ, ಅನುವಂಶೀಯತೆ ಮತ್ತು ಕೆಲವೊಂದು ವೈದ್ಯಕೀಯ ಕಾರಣಗಳು ಹಾಗೂ ಸನ್ನಿವೇಶಗಳು ಹೃದಯಾಘಾತಕ್ಕೆ ಕಾರಣವೆನಿಸುವ ಸಾಧ್ಯತೆಗಳಿವೆ. 

ಹೃದಯಾಘಾತವಾದಾಗ ಏನುಮಾಡಬೇಕು?

ಯಾವುದೇ ವ್ಯಕ್ತಿಗೆ ಹೃದಯಾಘಾತವಾಗಿದೆ ಎನ್ನುವ ಸಂದೇಹ ಮೂಡಿದಲ್ಲಿ ರೋಗಿಗೆ ಶಾರೀರಿಕ ಶ್ರಮವಾಗದಂತೆ ಮುನ್ನೆಚ್ಚರಿಕೆ ವಹಿಸಿ, ಆತನನ್ನು ಕ್ಷಿಪ್ರಗತಿಯಲ್ಲಿ ಸುಸಜ್ಜಿತ ಆಸ್ಪತ್ರೆಗೆ ದಾಖಲಿಸಿ ತುರ್ತುಚಿಕಿತ್ಸೆ ನೀಡಬೇಕು. ಹ್ರುದ್ರೋಗವಿರುವ ಅಥವಾ ಹಿಂದೊಮ್ಮೆ ಹೃದಯಾಘಾತಕ್ಕೆ ಈಡಾಗಿದ್ದ ವ್ಯಕ್ತಿಗಳಿಗೆ, ಅವರ ವೈದ್ಯರು ಇಂತಹ ಸ್ಥಿತಿಯಲ್ಲಿ ಬಳಸುವಂತೆ ಸೂಚಿಸಿದ್ದ ಗುಳಿಗೆಯನ್ನು ನಾಲಗೆಯ ಕೆಳಗೆ ಇರಿಸುವುದು ಪ್ರಾಣರಕ್ಷಕವೆನಿಸಬಲ್ಲದು. ಹಿಂದೆ ಹೃದ್ರೋಗದ ಸಮಸ್ಯೆ ಇದ್ದಿಲ್ಲದ ವ್ಯಕ್ತಿಗಳಿಗೆ ಒಂದು " ಆಸ್ಪಿರಿನ್ " ಮಾತ್ರೆಯನ್ನು ಇಂತಹ ಸಂದರ್ಭದಲ್ಲಿ ನೀಡಬಹುದು. ಆದರೆ ವೃಥಾ ಕಾಲಹರಣ ಮಾಡುವುದು ರೋಗಿಯ ಜೀವರಕ್ಷಣೆಯ ದೃಷ್ಟಿಯಿಂದ ಹಿತಕರವಲ್ಲ. 



ಚಿಕಿತ್ಸೆ: ಎಂತು- ಏನು ?

ಹೃದಯಾಘಾತಕ್ಕೆ ಈಡಾದ ವ್ಯಕ್ತಿಯನ್ನು ಹೃದ್ರೋಗ ಚಿಕಿತ್ಸಾ ಸೌಲಭ್ಯವಿರುವ ಸುಸಜ್ಜಿತ ಆಸ್ಪತ್ರೆಯಲ್ಲಿ ದಾಖಲಿಸುವುದು ಹಿತಕರ. ಚಿಕಿತ್ಸೆಯ ಮೂಲ ಉದ್ದೇಶವೇ ರೋಗಿಯನ್ನು ಪೀಡಿಸುತ್ತಿರುವ ತೀವ್ರ ಎದೆನೋವನ್ನು ಶಮನಗೊಳಿಸುವ, ಶಾಕ್ ಮತ್ತು ಹೃದಯ ವೈಫಾಲ್ಯಗಳನ್ನು ಸರಿಪಡಿಸುವ ಮತ್ತು ಹೃದಯದ ಕಾರ್ಯಾಚರಣೆಯ ಒತ್ತಡವನ್ನು ಕಡಿಮೆ ಮಾಡುವುದೇ ಆಗಿದೆ. ಇದರೊಂದಿಗೆ ಕೊರೋನರಿ ರಕ್ತನಾಳಗಳಲ್ಲಿನ ಅಡಚಣೆಗಳನ್ನು ನಿವಾರಿಸಿ, ಹೃದಯಕ್ಕೆ ಸಮರ್ಪಕವಾಗಿ ರಕ್ತದ ಸರಬರಾಜಾಗುವಂತೆ ತುರ್ತು ಚಿಕಿತ್ಸೆ ನೀಡಬೇಕಾಗುವುದು. ಹೃದಯಾಘಾತಕ್ಕೆ ಈಡಾದ ಕೆಲ ರೋಗಿಗಳಲ್ಲಿ ಈ ಸಂದರ್ಬ್ಜದಲ್ಲಿ ಉದ್ಭವಿಸಬಲ್ಲ ಕೆಲವೊಂದು ಗಂಭೀರ - ಮಾರಕ ಸಮಸ್ಯೆಗಳಿಂದ ಆತನನ್ನು ರಕ್ಷಿಸಲು ವೈದ್ಯಕೀಯ ಸಿಬಂದಿ ಸಜ್ಜಾಗಿರಬೇಕಾಗುವುದು. ಹೃದಯಾಘಾತದ ತೀವ್ರತೆ, ರೋಗಿಯ ವಯಸ್ಸು, ಆತನಲ್ಲಿರಬಹುದಾದ ಅನ್ಯ ಕಾಯಿಲೆಗಳು ಹಾಗೂ ವೈದ್ಯಕೀಯ ಚಿಕಿತ್ಸೆಯನ್ನು ಆರಂಭಿಸಲು ತಗಲಿದ ಅವಧಿಗಳನ್ನು ಹೊಂದಿಕೊಂಡು ಚಿಕಿತ್ಸೆಯ ಫಲಿತಾಂಶದ ಗತಿ ಬದಲಾಗುವ ಸಾಧ್ಯತೆಗಳಿವೆ. 

ಆಸ್ಪತ್ರೆಗೆ ಕರೆತಂದ ರೋಗಿಯ ನಾಡಿ - ಹೃದಯ ಬಡಿತ, ರಕ್ತದೊತ್ತಡ ಹಾಗೂ ಇ.ಸಿ.ಜಿ ಮತ್ತಿತರ ಪರೀಕ್ಷೆಗಳನ್ನು ನಡೆಸುವ ಮೂಲಕ ಹೃದಯಾಘಾತ ಆಗಿರುವುದನ್ನು ಖಚಿತಪಡಿಸಿಕೊಂಡ ವೈದ್ಯರು, ರೋಗಿಯನ್ನು ಇಂಟೆನ್ಸಿವ್ ಕೊರೋನರಿ ಕೇರ್ ಯೂನಿಟ್ ಅಥವಾ ಇಂಟೆನ್ಸಿವ್ ಕೇರ್ ಯೂನಿಟ್ ನಲ್ಲಿ ದಾಖಲಿಸಿ ಚಿಕಿತ್ಸೆಯನ್ನು ಆರಂಭಿಸುವರು. ರೋಗಿಯ ಸ್ಥಿತಿಗತಿಗಳಿಗೆ ಅನುಗುಣವಾಗಿ ಶ್ವಾಸೋಚ್ಛ್ವಾಸ ಸುಲಭವಾಗುವಂತೆ ಆಮ್ಲಜನಕ ಹಾಗೂ ತೀವ್ರ ಎದೆನೋವು ಮತ್ತು ಇತರ ಸಮಸ್ಯೆಗಳಿಗೆ ಸೂಕ್ತ ಔಷದೋಪಚಾರಗಳನ್ನು ನೀಡುವರು. ಸಾಮಾನ್ಯವಾಗಿ ಕೊರೋನರಿ ರಕ್ತನಾಳಗಳಲ್ಲಿ ಹೆಪ್ಪುಗಟ್ಟಿದ ರಕ್ತದಿಂದ ಉದ್ಭವಿಸಿದ ಅಡಚಣೆಯೇ ಹೃದಯಾಘಾತಕ್ಕೆ ಕಾರಣವಾಗಿರುವುದರಿಂದ, ಇದರ ನಿವಾರಣೆಗೆ ಕ್ಷಿಪ್ರ ಚಿಕಿತ್ಸೆ ಅತ್ಯವಶ್ಯಕ ಎನಿಸುವುದು. ಹೆಪ್ಪುಗಟ್ಟಿದ ರಕ್ತವನ್ನು ಮತ್ತೆ ತೆಳ್ಳಗಾಗಿಸಬಲ್ಲ ಔಷದಗಳನ್ನು ಹೃದಯಾಘಾತವಾದ ೬ ರಿಂದ ೧೨ ಗಂಟೆಗಳ ಒಳಗಾಗಿ ನೀಡಬೇಕಾಗುವುದು. 

ಆಕಸ್ಮಿಕವಾಗಿ ತಲೆದೋರುವ ಹೃದಯ ಸಂಬಂಧಿ ಅನ್ಯ ಸಮಸ್ಯೆಗಳನ್ನು ಅರಿತುಕೊಳ್ಳಲು, ಹೃದಯ ಬಡಿತದ ಗತಿ- ಲಯಗಳನ್ನು ನಿರಂತರವಾಗಿ ತೋರಿಸಬಲ್ಲ ಕಾರ್ಡಿಯಾಕ್ ಮಾನಿಟರ್ ಣ ಅಳವಡಿಕೆ ಅತ್ಯವಶ್ಯಕವೂ ಹೌದು. ಕಾರ್ಡಿಯಾಕ್ ಅರಿಥ್ಮಿಯಾಸ್ ಎನ್ನುವ ಹೃದಯದ ಗತಿ- ಲಯಗಳಲ್ಲಿ  ಕಾಣಿಸಿಕೊಳ್ಳುವ ವೈಪರೀತ್ಯಗಳಿಂದಾಗಿ ಹೃದಯದ ವೈಫಲ್ಯ ಹಾಗೂ ರಕ್ತದೊತ್ತಡ ಕುಸಿಯುವ ಸಂಭವವಿದ್ದು, ಇದನ್ನು ತುರ್ತುಚಿಕಿತ್ಸೆ ನೀಡಿ ಸರಿಪಡಿಸದೆ ಇದ್ದಲ್ಲಿ ಪ್ರಾಣಾಂತಿಕವೆನಿಸಬಲ್ಲದು. 

ಹೃದಯ ರೋಗಗಳನ್ನು ಚಿಕಿತ್ಸಿಸುವ ಸೌಲಭ್ಯಗಳಿರುವ ಆಸ್ಪತ್ರೆಗಳಲ್ಲಿ ಹೃದಯಾಘಾತಕ್ಕೆ ಒಳಗಾದ ರೋಗಿಗಳಿಗೆ ತುರ್ತು ಚಿಕಿತ್ಸೆಯ ಅಂಗವಾಗಿ ಎಂಜಿಯೋ ಗ್ರಾಂ ಪರೀಕ್ಷೆಯನ್ನು ನಡೆಸಿ, ಕೊರೋನರಿ ರಕ್ತನಾಳಗಳಲ್ಲಿನ ಅಡಚಣೆಯ ಪ್ರಮಾಣವನ್ನು ಅರಿತುಕೊಳ್ಳಬಹುದಾಗಿದೆ. ಈ ಅಡಚಣೆಯನ್ನು ಎಂಜಿಯೋ ಪ್ಲಾಸ್ಟಿಯ ಮೂಲಕ ನಿವಾರಿಸುವ ಹಾಗೂ ಅವಶ್ಯಕತೆಯಿದ್ದಲ್ಲಿ " ಸ್ಟೆಂಟ್ " ಅಳವಡಿಸುವ ಚಿಕಿತ್ಸೆಯನ್ನು ತಕ್ಷಣ ನೀಡಬಹುದಾಗಿದೆ. ಇದರಿಂದಾಗಿ ಹೃದಯಕ್ಕೆ ಸರಾಗವಾಗಿ ರಕ್ತದ ಪೂರೈಕೆಯು ಸಾಧ್ಯವಾಗುವುದು. ಆದರೆ ಈ ಚಿಕಿತ್ಸೆಯನು ಹೃದಯಾಘಾತವಾದ ೬ ಗಂಟೆಗಳ ಒಳಗೆ ನಡೆಸಬೇಕಾಗುತ್ತದೆ. ತೀವ್ರ ಸ್ವರೂಪದ ಅದಚನೆಗಲಿರುವ ರೋಗಿಗಳಿಗೆ " ಬೈಪಾಸ್ " ಶಸ್ತ್ರಚಿಕಿತ್ಸೆ ಅನಿವಾರ್ಯವೆನಿಸುತ್ತದೆ. 

ಕೊರೋನರಿ ರಕ್ತನಾಳಗಲ್ಲಿ ಹೆಪ್ಪುಗಟ್ಟಿದ ರಕ್ತವನ್ನು ಕರಗಿಸಲು ನೀಡುವ ಔಷದಗಳಿಗಿಂತ ಈ ಚಿಕಿತ್ಸೆ ಪರಿಣಾಮಕಾರಿ ಎನಿಸುವುದಾದರೂ, ಇದರಲ್ಲೂ ಕೆಲ ಅನಪೇಕ್ಷಿತ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಆದರೆ ರೋಗಿಯ ಪ್ರಾಣರಕ್ಷಣೆಯ ದೃಷ್ಟಿಯಿಂದ ಇದರ ಸಾಧಕ- ಬಾಧಕಗಳನ್ನು ತುಲನೆ ಮಾಡಿದಾಗ ಸಾಧಕಗಳೇ ಮೇಲೆನಿಸುವುದು ಸತ್ಯ. 

ಸಾಮಾನ್ಯವಾಗಿ ಹೃದಯಕ್ಕೆ ಸಂಭವಿಸಿದ ಆಘಾತವು ೪ ರಿಂದ ೬ ವಾರಗಳ ಅವಧಿಯಲ್ಲಿ " ದುರಸ್ತಿ " ಯಾಗುವುದು. ಈ ಅವಧಿಯಲ್ಲಿ ರೋಗಿಗೆ ಸಂಪೂರ್ಣ ವಿಶ್ರಾಂತಿಯನ್ನು ನೀಡಲೇಬೇಕು. ಗಂಭೀರ ಸಮಸ್ಯೆಗಳಿರದ ಹಾಗೂ ಲಘು ಹ್ರುದಯಾಘಾತವಾಗಿರುವ ವ್ಯಕ್ತಿಗಳು ಕೆಲವೇ ದಿನಗಳಲ್ಲಿ ಎದ್ದು ಕುಳಿತುಕೊಳ್ಳುವುದು ಹಾಗೂ ವಾರ ಕಳೆದೊಡನೆ ನಡೆದಾಡಬಹುದಾಗಿದೆ. ಅಂತೆಯೇ ತೃಪ್ತಿಕರ ಫಲಿತಾಂಶ ಕಂಡುಬಂದ ರೋಗಿಗಳು ಹತ್ತು ದಿನಗಳು ಕಳೆದೊಡನೆ ಮನೆಗೆ ಮರಳಬಹುದಾಗಿದೆ. ಆರು ವಾರಗಳ ಬಳಿಕ ಮತ್ತೆ ವೈದ್ಯಕೀಯ ಪರೀಕ್ಷೆಗಳ ಫಲಿತಾಂಶಗಳನ್ನು ಹೊಂದಿಕೊಂಡು, ರೋಗಿಯು ತನ್ನ ದೈನಂದಿನ ಕೆಲಸಕಾರ್ಯಗಳನ್ನು ನಿಧಾನವಾಗಿ ಆರಂಭಿಸಬಹುದು. 

ನಕಲಿ ವೈದ್ಯರ ಬಗ್ಗೆ ಎಚ್ಚರವಿರಲಿ 

ಮಾನವ ಶರೀರದ ಅಂಗ ರಚನೆ, ಶಾರೀರಿಕ ಕ್ರಿಯೆಗಳು, ವಿವಿಧ ರೀತಿಯ ರೋಗ ಪತ್ತೆಹಚ್ಚುವ ವಿಧಾನಗಳು- ಪರೀಕ್ಷೆಗಳು, ಸಹಸ್ರಾರು ವಿಧದ ವ್ಯಾಧಿಗಳು ಮತ್ತು ಇವುಗಳ ಚಿಕಿತ್ಸೆಗಳ ಬಗ್ಗೆ ಪ್ರಾಥಮಿಕ ಮಾಹಿತಿಯನ್ನೇ ತಿಳಿದಿರದ " ಪದವಿಹೀನ " ನಕಲಿ ವೈದ್ಯರು, ಅನೇಕ ಅಮಾಯಕರನ್ನು ಮರುಳುಮಾಡಿ ಹೃದ್ರೋಗಗಳಿಗೂಚಿಕಿತ್ಸೆ ನೀಡುವುದುಂಟು. 

ತನ್ನಲ್ಲಿ ಬಂದಿರುವ ರೋಗಿಯ ಅಜ್ಞಾನ ಹಾಗೂ ಆತನ ಹಣದ ಥೈಲಿಯನ್ನು ಹೊಂದಿಕೊಂಡು, ಸಹಸ್ರಾರು ರೂಪಾಯಿಗಳನ್ನು ದೋಚುವ ಇಂತಹ ವಂಚಕ ಶಿಖಾಮಣಿಗಳಿಂದಾಗಿ ಬಹಳಷ್ಟು ರೋಗಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವುದು ಸತ್ಯ. ಅತ್ಯಂತ ಗಂಭೀರ ಸಮಸ್ಯೆಗಳಿರುವ ರೋಗಿಗಳಿಗೂ ತಾನು ನೀಡುವ ಚಿಕಿತ್ಸೆಯಿಂದ ಕೆಲವಾರಗಳಲ್ಲೇ ಅದ್ಭುತ ಪರಿಣಾಮ ದೊರೆಯುವುದೆಂದು ಹೇಳಿ, ಬಳಿಕ ರೋಗಿ ಅದಾಗಲೇ ಸೇವಿಸುತ್ತಿದ್ದ ಔಷದಗಳ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಹೇಳುವುದು ಅಪರೂಪವೇನಲ್ಲ. ಈತನ ಔಷದಗಳನ್ನು ಸೇವಿಸುತ್ತಾ, ತಜ್ಞ ವೈದ್ಯರು ನೀಡಿದ್ದ ಔಷದಗಳ ಸೇವನೆಯನ್ನು ನಿಲ್ಲಿಸಿದ ಅನೇಕ ಅಮಾಯಕರು, ಕೆಲವೇ ದಿನಗಳಲ್ಲಿ ಉಸಿರಾಡುವುದನ್ನೇ ನಿಲ್ಲಿಸಿದ ಘಟನೆಗಳು ಸಾಕಷ್ಟಿವೆ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ.೧೫-೦೧-೨೦೦೪ ರ ಸಂಚಿಕೆಯ ಬಳಕೆದಾರ: ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 




Monday, July 28, 2014

AKRAMA - SAKRAMA AND CORRUPTION




 ಅಕ್ರಮ ಎಸಗಿದವರು ನಿರಾಳ : ಕಾನೂನು ಪರಿಪಾಲಿಸಿದವರಿಗೆ ಕಿರುಕುಳ !

ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಸತಿ, ವಾಣಿಜ್ಯ ಅಥವಾ ಅನ್ಯ ಉದ್ದೇಶಕ್ಕಾಗಿ ನೂತನ ಕಟ್ಟಡಗಳನ್ನು ನಿರ್ಮಿಸುವಾಗ, ರಸ್ತೆಯಿಂದ ಇಂತಿಷ್ಟು ಅಂತರವನ್ನು ಇರಿಸಿಕೊಳ್ಳಲೇಬೇಕೆನ್ನುವ ನಿಯಮವನ್ನು ಪರಿಪಾಲಿಸಬೇಕಾಗುತ್ತದೆ. ಈ ಅಂತರವು ನಗರದ ಪ್ರಧಾನರಸ್ತೆ, ಉಪರಸ್ತೆ ಮತ್ತು ಒಳರಸ್ತೆಗಳಿಗೆ ಅನುಗುಣವಾಗಿ ಒಂದಿಷ್ಟು ವ್ಯತ್ಯಯವಾಗುತ್ತದೆ. ಇದಲ್ಲದೇ ವಸತಿ ಸಮುಚ್ಚಯಗಳು, ಬಹುಮಹಡಿ ಕಟ್ಟಡಗಳು ಮತ್ತು ಹಲವಾರು ವಾಣಿಜ್ಯ ಮಳಿಗೆಗಳಿರುವ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವಾಗ, ಈ ಕಟ್ಟಡಗಳಲ್ಲಿರುವ ಅಂತಸ್ತುಗಳ ಸಂಖ್ಯೆ, ವಸತಿಗಳ ಸಂಖ್ಯೆ ಅಥವಾ ವಾಣಿಜ್ಯ ಮಳಿಗೆಗಳ ಸಂಖ್ಯೆಗಳಿಗೆ ಅನುಗುಣವಾಗಿ ಇಲ್ಲಿನ ನಿವಾಸಿಗಳ ಮತ್ತು ಇಲ್ಲಿಗೆ ಭೇಟಿ ನೀಡಬಹುದಾದ ಗ್ರಾಹಕರ ವಾಹನಗಳ ಸಂಖ್ಯೆಗಳ ಆಧಾರದ ಮೇಲೆ ವಾಹನಗಳ ನಿಲುಗಡೆಗೆ ಸ್ಥಳಾವಕಾಶವನ್ನು ಒದಗಿಸಲೇಬೇಕಾವುದು. ಕಟ್ಟಡದ ನಕ್ಷೆಯಲ್ಲಿ ಈ ಪ್ರಮುಖ ಅಂಶಗಳು ಇಲ್ಲದೆ ಇದ್ದಲ್ಲಿ, ನೂತನ ಕಟ್ಟಡದ ನಿರ್ಮಾಣಕ್ಕೆ ಪರವಾನಿಗೆಯನ್ನು ನಿರಾಕರಿಸಲಾಗುವುದು. ಇದು ರಾಜ್ಯ ಸರ್ಕಾರ ರೂಪಿಸಿರುವ ಹಾಗೂ ಕಾಲಕಾಲಕ್ಕೆ ತಕ್ಕಂತೆ ಪರಿಷ್ಕರಿಸಲ್ಪಡುವ ನಿಯಮವಾಗಿದ್ದು, ಬಹುತೇಕ ಅಧಿಕಾರಿಗಳು ಇದನ್ನು ಕಟ್ಟುನಿಟ್ಟಾಗಿ ಪರಿಪಾಲಿಸುತ್ತಾರೆ. ಅಂತೆಯೇ ಅಧಿಕತಮ ಜನರೂ ಈ ನೀತಿನಿಯಮಗಳನ್ನು ತಪ್ಪದೇ ಪರಿಪಾಲಿಸುತ್ತಾರೆ. 

ಆದರೆ ಇತ್ತೀಚಿನ ಕೆಲವರ್ಷಗಳಿಂದ ಇಂತಹ ನೀತಿನಿಯಮಗಳನ್ನು ಪರಿಪಾಲಿಸುವ ವ್ಯಕ್ತಿಗಳಿಗೆ ಕಿರುಕುಳ ನೀಡುವ ಮತ್ತು ಇವುಗಳನ್ನು ಉಲ್ಲಂಘಿಸುವ ವ್ಯಕ್ತಿಗಳಿಗೆ " ರಾಜ ಮರ್ಯಾದೆ" ಯನ್ನು ನೀಡುವ ಪರಿಪಾಠ ಆರಂಭವಾಗಿದ್ದು, ಇದಕ್ಕೆ ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು ಮತ್ತು  ರಾಜಕೀಯ ಪಕ್ಷಗಳ ಪ್ರಭಾವಶಾಲಿ ಕಾರ್ಯಕರ್ತರೂ ಕಾರಣವೆನಿಸಿದ್ದಾರೆ. ಇದರೊಂದಿಗೆ ನಿಗದಿತ ಕಾನೂನುಗಳನ್ನು ಪರಿಪಾಲಿಸಿದರೂ ಕಿರುಕುಳ ನೀಡುವ ಅಧಿಕಾರಿಗಳ ಕೆಟ್ಟ ಹವ್ಯಾಸದಿಂದ ನೊಂದ ಕೆಲ ಜನರು, ಅನ್ಯಮಾರ್ಗವಿಲ್ಲದೇ ತತ್ಸಂಬಂಧಿತ ಅಧಿಕಾರಿಗಳಿಗೆ ಕಪ್ಪ- ಕಾಣಿಕೆಗಳನ್ನು ಸಲ್ಲಿಸುವ ಮೂಲಕ ತಮ್ಮ ಕಟ್ಟಡದ ನಿರ್ಮಾಣಕ್ಕೆ ಪರವಾನಿಗೆಯನ್ನು ಪಡೆದುಕೊಳ್ಳುತ್ತಾರೆ. ಈ ರೀತಿಯಲ್ಲಿ ಸರ್ಕಾರವೇ ರೂಪಿಸಿರುವ ನೀತಿನಿಯಮಗಳನ್ನು ಉಲ್ಲಂಘಿಸುವುದರಿಂದ, ಅಧಿಕತಮ ನಗರ- ಪಟ್ಟಣಗಳ ರಸ್ತೆಗಳು ವಿಸ್ತರಿತಗೊಳ್ಳದೇ ಯಥಾಸ್ಥಿತಿಯಲ್ಲಿ ಉಳಿದುಕೊಳ್ಳುತ್ತವೆ. ತತ್ಪರಿಣಾಮವಾಗಿ ಆಯಾ ನಗರ- ಪಟ್ಟಣಗಳಲ್ಲಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಲಭಿಸದ ಕಾರಣದಿಂದಾಗಿ ವಾಹನಗಳು ರಸ್ತೆಯ ಅಂಚಿನಲ್ಲೇ ತಂಗುತ್ತವೆ. ಹಾಗೂ ಇದೇ ಕಾರಣದಿಂದಾಗಿ ಸ್ಥಳೀಯ ರಸ್ತೆಗಳಲ್ಲಿ ಜನ- ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುವುದರಿಂದ, ದಿನನಿತ್ಯ ಟ್ರಾಫಿಕ್ ಜಾಮ್ ಉದ್ಭವಿಸುತ್ತದೆ. ದ.ಕ ಜಿಲ್ಲೆಯ ಪುತ್ತೂರು ನಗರವೂ ಈ ಸಮಸ್ಯೆಗೆ ಅಪವಾದವೆನಿಸಿಲ್ಲ. 

ಅಕ್ರಮ ಕಟ್ಟಡಗಳು 

ಪುತ್ತೂರಿನ ಪ್ರಧಾನ ರಸ್ತೆಯೂ ಸೇರಿದಂತೆ, ನಗರದ ವಿವಿಧಭಾಗಗಳಲ್ಲಿರುವ ಅನೇಕ ರಸ್ತೆಗಳ ಅಂಚಿನಲ್ಲೇ ನೂತನ ಕಟ್ಟಡಗಳನ್ನು ನಿರ್ಮಿಸಿರುವುದನ್ನು ನೀವೂ ಗಮನಿಸಿರಲೇಬೇಕು. ಅದೇ ರೀತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿದ್ದ ಅನೇಕ ಬಹುಮಹಡಿ ವಾಣಿಜ್ಯ ಸಂಕೀರ್ಣ ಮತ್ತು ಅನ್ಯ ಕಟ್ಟಡಗಳ ನೆಲ ಅಂತಸ್ತಿನಲ್ಲಿ ವಾಹನಗಳ ಪಾರ್ಕಿಂಗ್ ಎಂದು ನಕ್ಷೆಯಲ್ಲಿ ತೋರಿಸಿ, ಬಳಿಕ ವಾಣಿಜ್ಯ ಮಳಿಗೆಗಳನ್ನು ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳ ಸಂಖ್ಯೆಯೂ ಕಡಿಮೆಯೇನಿಲ್ಲ. ವಿಶೇಷವೆಂದರೆ ಇಂತಹ ಕಟ್ಟಡಗಳ ಮಾಲೀಕರು ಇದೀಗ ಮತ್ತೊಮ್ಮೆ ಕಾನೂನು ಬಾಹಿರವಾಗಿ ತಮ್ಮ ಬಹುಮಹಡಿ ಕಟ್ಟಡಗಳ ಮೇಲೆ ಮತ್ತೊಂದು ಅಂತಸ್ತನ್ನು ನಿರ್ಮಿಸಲು ಪುರಸಭೆಯ ಅಧಿಕಾರಿಗಳು ಅನುಮತಿಯನ್ನು ನೀಡಿರುವುದಾದರೂ ಹೇಗೆ?, ಎನ್ನುವ ಸಂದೇಹ ನಿಮ್ಮನ್ನೂ ಕಾಡುತ್ತಿರಬಹುದು.ಈ ಬಗ್ಗೆ ವಿಚಾರಿಸಿದಾಗ, ಕಟ್ಟಡದ ಮಾಲಕರಿಗೆ ನೋಟೀಸ್ ಜಾರಿಮಾಡಲಾಗಿದೆ ಎನ್ನುವ ಉತ್ತರ ದೊರೆಯುತ್ತದೆ. ಆದರೆ ಇಂದಿನ ತನಕ ಇಂತಹ ಅಕ್ರಮ ಕಟ್ಟಡಗಳನ್ನು ಕೆಡವಿದ ಒಂದೇ ಒಂದು ಉದಾಹರಣೆ ಪುತ್ತೂರಿನಲ್ಲಿ ನಡೆದಿಲ್ಲ.ಅಂತೆಯೇ ಬಹುಮಹಡಿ ಕಟ್ಟಡಗಳ ನೆಲ ಅಂತಸ್ತಿನಲ್ಲಿ ವಾಹನಗಳ ಪಾರ್ಕಿಂಗ್ ಎಂದು ನಕ್ಷೆಯಲ್ಲಿ ನಮೂದಿಸಿ, ಬಳಿಕ ಅಕ್ರಮವಾಗಿ ನಿರ್ಮಿಸಿದ್ದ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಿ ಪಾರ್ಕಿಂಗ್ ಸ್ಥಳಾವಕಾಶವನ್ನು ಕಲ್ಪಿಸಿರುವ ಒಂದೇ ಒಂದು ಉದಾಹರಣೆಯೂ ಕಾಣಸಿಕ್ಕಿಲ್ಲ. ಇದನ್ನು  ಒಂದು ಕಣ್ಣಿಗೆ ಬೆಣ್ಣೆ ಎನ್ನುವುದಾದಲ್ಲಿ, ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವ ಪ್ರವರ ಇಂತಿದೆ. 

ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡವನ್ನು ನಿರ್ಮಿಸುವ ಮುನ್ನ ಅವಶ್ಯಕ ದಾಖಲೆಗಳು ಮತ್ತು ಕಟ್ಟಡದ ನಕ್ಷೆ ಇತ್ಯಾದಿಗಳನ್ನು ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿ, ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ತದನಂತರ ಈ ದಾಖಲೆಗಳು, ನಕ್ಷೆಗಳು ಮತ್ತು ಪುಡಾ ನೀಡಿದ ಅನುಮತಿ ಪತ್ರಗಳನ್ನು ಪುರಸಭೆಗೆ ನೀಡಿ, ನಿಗದಿತ ಅಭಿವೃದ್ಧಿ ಶುಲ್ಕ ಹಾಗೂ ಅನ್ನಿತರ ಶುಲ್ಕಗಳನ್ನು ಪಾವತಿಸಿ ಕಟ್ಟಡ ನಿರ್ಮಾಣ ಪರವಾನಿಗೆಯನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಕೆಲ ಪ್ರಕರಣಗಳಲ್ಲಿ ಕಟ್ಟಡದ ನಕ್ಷೆಯಲ್ಲಿರುವ ಸೆಟ್ ಬ್ಯಾಕ್, ವಾಹನಗಳ ಪಾರ್ಕಿಂಗ್ ಇತ್ಯಾದಿಗಳು ನಿಯಮದಂತೆ ಇವೆ ಎಂದು ಪುಡಾ ಅಧಿಕಾರಿಗಳು ಅನುಮೋದಿಸಿ ಅನುಮತಿಯನ್ನು ನೀಡಿದ್ದರೂ, ಪಾದಚಾರಿಗಳು ನಡೆದಾಡಲು ಇರುವಂತಹ ಕಾಲುದಾರಿಯನ್ನು ಪಾರ್ಕಿಂಗ್ ಪ್ರದೇಶವೆಂದು ತೋರಿಸಿರುವುದಾಗಿ ನೆಪವನ್ನು ಒಡ್ಡುವ ಮೂಲಕ, ಅರ್ಜಿದಾರರನ್ನು ಅನಾವಶ್ಯಕವಾಗಿ ಸತಾಯಿಸಿ ಕಿರುಕುಳವನ್ನು ನೀಡುತ್ತಿರುವ ಪ್ರಕರಣಗಳು  ಇತ್ತೀಚೆಗೆ ನಡೆದಿದೆ. ಪ್ರಾಯಶಃ ಇದೇ ರೀತಿಯಲ್ಲಿ ಇಲ್ಲಸಲ್ಲದ ನೆಪವನ್ನು ಮುಂದೊಡ್ಡಿ, ಕಾನೂನಿನಂತೆ ಕಟ್ಟಡಗಳನ್ನು ನಿರ್ಮಿಸಲು ಅರ್ಜಿಸಲ್ಲಿಸಿದ ಪ್ರಾಮಾಣಿಕ ಜನರಿಗೆ ತೊಂದರೆ ನೀಡುವ ಘಟನೆಗಳ ಸಂಖ್ಯೆಯೂ ಹೆಚ್ಚುತ್ತಿರುವ ಸಾಧ್ಯತೆಗಳೂ ಇವೆ. ಜನಸಾಮಾನ್ಯರು ದೂರುವಂತೆ ಇಂತಹ ಕೆಲಸಕಾರ್ಯಗಳನ್ನು ಕ್ಷಿಪ್ರಗತಿಯಲ್ಲಿ ಮಾಡಿಸಿ ಕೊಡುವ ಮಧ್ಯವರ್ತಿಗಳ ಮೂಲಕ ವ್ಯವಹಾರವನ್ನು ನಡೆಸಿದಲ್ಲಿ, ರಾಜಕೀಯ ಪ್ರಭಾವವನ್ನು ಬಳಸಿದಲ್ಲಿ ಅಥವಾ ಅನಧಿಕೃತವಾಗಿ ಕಪ್ಪ-ಕಾಣಿಕೆಗಳನ್ನು ಸಲ್ಲಿಸಿದಲ್ಲಿ, ಯಾವುದೇ ರೀತಿಯ ಅಡೆತಡೆಗಳಿಲ್ಲದೇ ಪರವಾನಿಗೆಯನ್ನು ಪಡೆದುಕೊಳ್ಳಬಹುದಾಗಿದೆ!. 

ಕಾನೂನುಗಳನ್ನು ರೂಪಿಸಿವುದೇಕೆ?

ನಮ್ಮ ದೇಶದ ಜನತೆ ನೆಮ್ಮದಿಯಿಂದ ಜೀವಿಸಲು ಅನುಕೂಲವಾಗುವಂತೆ ಅನೇಕ ಕಾನೂನುಗಳನ್ನು ರೂಪಿಸಲಾಗಿದೆ. ಆದರೆ ಇವೆಲ್ಲಾ ಕಾನೂನುಗಳನ್ನು ಅನುಷ್ಠಾನಗೊಳಿಸಲು ಬೇಕಾದ ಇಚ್ಚಾಶಕ್ತಿ ನಮ್ಮನ್ನಾಳುವವರಲ್ಲಿ ಇಲ್ಲದಾಗಿದೆ. ಇದರೊಂದಿಗೆ ಭ್ರಷ್ಟಾಚಾರದ ಕಬಂಧಬಾಹುಗಳು ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಕವಾಗಿ ಹರಡಿದ್ದು, ಕಾನೂನುಗಳನ್ನು ಉಲ್ಲಂಘಿಸುವ ವ್ಯಕ್ತಿಗಳಿಗೆ ಶ್ರೀರಕ್ಷೆಯಾಗಿ ಪರಿಣಮಿಸಿದೆ. 

ಇಷ್ಟು ಮಾತ್ರವಲ್ಲ, ಸರ್ಕಾರವೇ ಅನೇಕ ಸಂದರ್ಭಗಳಲ್ಲಿ " ಅಕ್ರಮ " ಗಳನ್ನು " ಸಕ್ರಮ " ಗೊಳಿಸುವ ಕಾಯಿದೆಗಳನ್ನು ರೂಪಿಸಿ ಜಾರಿಗೊಳಿಸುವ ಮೂಲಕ, ನಿರಂತರವಾಗಿ ನಡೆಯುತ್ತಿರುವ ಅಕ್ರಮಗಳಿಗೆ ಪರೋಕ್ಷವಾಗಿ ಬೆಂಬಲವನ್ನು ನೀಡುತ್ತಿದೆ. ತತ್ಪರಿಣಾಮವಾಗಿ ದೇಶದ ಪ್ರಾಮಾಣಿಕ ಪ್ರಜೆಗಳು ಅಯಾಚಿತ ಸಮಸ್ಯೆಗಳಿಗೆ ಒಳಗಾಗುವಂತಹ ಸನ್ನಿವೇಶಗಳು ಸೃಷ್ಠಿಸಲ್ಪಡುತ್ತಿವೆ. ವಿಶೇಷವೆಂದರೆ ಸರ್ಕಾರಕ್ಕೆ ಈ ವಿಚಾರದ ಅರಿವಿದ್ದರೂ, ಅಧಿಕಾರದ ಗದ್ದುಗೆಯನ್ನು ಏರಿರುವ ರಾಜಕೀಯ ಪಕ್ಷಗಳ ನೇತಾರರು, ತಮ್ಮ " ಮತ ನಿಧಿ " ಗಳನ್ನು ಕಾಯ್ದುಕೊಳ್ಳಲು ಹಾಗೂ ಇನ್ನಷ್ಟು ವೃದ್ಧಿಸುವ ಸಲುವಾಗಿ ಇವೆಲ್ಲವನ್ನೂ ಕಂಡೂ ಕಾಣದಂತೆ ವರ್ತಿಸುತ್ತಾರೆ!. 

ಕೊನೆಯ ಮಾತು 

ಅಣ್ಣಾ ಹಜಾರೆಯವರ " ಭ್ರಷ್ಟಾಚಾರದ ವಿರುದ್ಧ ಹೋರಾಟ " ಕ್ಕೆ ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಬೆಂಬಲವನ್ನು ನೀಡಿದ್ದ ದೇಶದ ಯುವಜನತೆ ಮತ್ತು ಮಧ್ಯಮ ವರ್ಗದ ಜನರು, ತಮ್ಮದೇ ಊರಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಈ ರೀತಿಯ ಶೋಷಣೆಗಳ ವಿರುದ್ಧ ಹೋರಾಡಲು ಸಿದ್ಧರಿರುವುದಿಲ್ಲ. ಆದರೆ ಇಂತಹ ಘಟನೆಗಳು ಸಂಭವಿಸಿದಾಗ, ಇವುಗಳ ವಿರುದ್ಧ ಹೋರಾಡುತ್ತಿರುವ ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರನ್ನು ಸಂಪರ್ಕಿಸಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸುತ್ತಾರೆ. ಸಂಘಟನೆಗಳ ಕಾರ್ಯಕರ್ತರು ಈ ಬಗ್ಗೆ ಲಿಖಿತ ದೂರನ್ನು ನೀಡುವಂತೆ ಸೂಚಿಸಿದೊಡನೆ, ಅದೃಶ್ಯರಾಗುವ ದೂರುದಾರರು ಮತ್ತೆಂದೂ ಈ ಕಾರ್ಯಕರ್ತರನ್ನು ಸಂಪರ್ಕಿಸುವುದೇ ಇಲ್ಲ!.ಇದನ್ನು ಗಮನಿಸಿದಾಗ  ಆಂಗ್ಲ ಭಾಷೆಯಲ್ಲಿ ಹೇಳುವಂತೆ " ಮತ್ತೊಬ್ಬರ ಹೆಗಲಿನ ಮೇಲೆ ಬಂದೂಕನ್ನು ಇರಿಸಿ ಗುಂಡು ಹಾರಿಸುವ ಪ್ರವೃತ್ತಿ " ಯು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ ಎನ್ನುವುದರಲ್ಲಿ ಮಾತ್ರ ಸಂದೇಹವಿಲ್ಲ. 

ನಿಜ ಹೇಳಬೇಕಿದ್ದಲ್ಲಿ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಂಘಟಿತ ಹೋರಾಟವನ್ನು ನಡೆಸಲು ಸಿದ್ಧರಿರುವ ಜನರಿಗೆ ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರು ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲಗಳನ್ನು ನೀಡಲು ಸಿದ್ಧರಿರುತ್ತಾರೆ. ಆದರೆ ಈ ಸಂದರ್ಭದಲ್ಲಿ ಸಂಬಂಧಿತ ಅಧಿಕಾರಿಗಳಿಗೆ ತಮ್ಮ ಬಗ್ಗೆ ಅವಶ್ಯಕ ಮಾಹಿತಿಗಳು ತಿಳಿಯುವ ಸಾಧ್ಯತೆಗಳಿರುವುದರಿಂದ, ಇನ್ನಷ್ಟು ಕಿರುಕುಳಕ್ಕೆ ಒಳಗಾಗಬಹುದೆನ್ನುವ ಭೀತಿಯಿಂದ ಸಂತ್ರಸ್ತರು ದೂರು ನೀಡಲು ಹಿಂಜರಿಯುತ್ತಾರೆ. ಅರ್ಥಾತ್ "ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? " ಎನ್ನುವಂತಹ ಈ ಸಮಸ್ಯೆಯನ್ನು ಪರಿಹರಿಸುವವರು ಯಾರು?, ಎನ್ನುವ ಪ್ರಶ್ನೆಗೆ ಉತ್ತರ ದೊರೆಯುವ ಸಾಧ್ಯತೆಗಳೇ ಇಲ್ಲ. 


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 



  

Tuesday, July 22, 2014

FAKE DOCTORS !





 ನಕಲಿ ವೈದ್ಯರಿದ್ದಾರೆ ಜೋಕೆ !

ನಾಳೆ ವಿಶ್ವ ವೈದ್ಯರ ದಿನಾಚರಣೆ. ಜನರು ತಮ್ಮ ಆರೋಗ್ಯದ ರಕ್ಷಣೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ವೈದ್ಯ ಸಮುದಾಯಕ್ಕೆ ಕೃತಜ್ಞತೆಗಳನ್ನು ಸಲ್ಲಿಸುವ ದಿನ. ಈ ಸಂದರ್ಭದಲ್ಲಿ ಯಾವುದೇ ವೈದ್ಯಕೀಯ ಅರ್ಹತೆಗಳೇ ಇಲ್ಲದಿದ್ದರೂ, ತಜ್ಞ ವೈದ್ಯರಂತೆ ಸೋಗು ಹಾಕಿ, ಜನಸಾಮಾನ್ಯರನ್ನು ವಂಚಿಸಿ ಸುಲಿಗೆ ಮಾಡುವ ನಕಲಿ ವೈದ್ಯರ ಬಗ್ಗೆ ಅರಿವನ್ನು ಉಂಟುಮಾಡುವ ಪ್ರಯತ್ನವೇ ಈ ಲೇಖನ. 
-----------           ------------           ------------         ------------

ಶಾಶ್ವತ ಪರಿಹಾರವೇ ಇಲ್ಲದ ಅನೇಕ ವ್ಯಾಧಿಗಳನ್ನು ಗುಣಪಡಿಸುವ ಆಶ್ವಾಸನೆಗಳಿರುವ ಹಲವಾರು ಜಾಹೀರಾತುಗಳನ್ನು ನೀವು ಕಂಡಿರಲೇಬೇಕು. ದಾಂಪತ್ಯ ಸಮಸ್ಯೆಗಳಿಗೆ ಯಶಸ್ವೀ ಚಿಕಿತ್ಸೆ, ಮಧುಮೇಹ ರೋಗಿಗಳಿಗೆ ಇನ್ನು ನಿಶ್ಚಿಂತೆ, ಆಸ್ತಮಾ ಗುಣವಾಗುವುದು ಹಾಗೂ ಬೈಪಾಸ್ ಸರ್ಜರಿ ತಡೆಗಟ್ಟಿರಿ ಎನ್ನುವ ಆಕರ್ಷಕ ತಲೆಬರಹಗಳ ಆಹೀರಾತುಗಳು, ದುರ್ಬಲ ಮನಸ್ಸಿನ ವ್ಯಕ್ತಿಗಳನ್ನು ಆಯಸ್ಕಾಂತದಂತೆ ಆಕರ್ಷಿಸುತ್ತವೆ. 

ಪದವಿ ಹೀನ ವೈದ್ಯರು 

ಮಾಧ್ಯಮಗಳಲ್ಲಿ ಪ್ರಕಟವಾಗುವ ಇಂತಹ ಜಾಹೀರಾತುಗಳಲ್ಲಿ ನಮೂದಿಸಿರುವ ವೈದ್ಯರ ಹೆಸರಿನ ಹಿಂದೆ "ಡಾ " ಎನ್ನುವ ಪದ ಇದ್ದರೂ, ಇವರ ಹೆಸರಿನ ಮುಂದೆ ನಮೂದಿಸಲೇ ಬೇಕಾದ ಪದವಿ ಹಾಗೂ ಸ್ನಾತಕೋತ್ತರ ಪದವಿಗಳು ಮತ್ತು ನೋಂದಣಿ ಸಂಖ್ಯೆಯನ್ನು ನೀವೆಂದಾದರೂ ಕಂಡಿದ್ದೀರಾ?. ಅಸಲಿ ಪದವಿಯನ್ನೇ ಗಳಿಸಿರದ ಈ ನಕಲಿ ವೈದ್ಯರು, ವೈದ್ಯಕೀಯ ಮಂಡಳಿಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಸಾಧ್ಯವಿಲ್ಲ. ಇದೇ ಕಾರಣದಿಂದಾಗಿ ಇವರ ಹೆಸರಿನ ಮುಂದೆ ಪದವಿಗಳಾಗಲೀ, ನೋಂದಣಿ ಸಂಖ್ಯೆಯಾಗಲೀ ಇರುವುದಿಲ್ಲ. 

ತಾವು ಚಿಕಿತ್ಸೆ ನೀಡುವ ವ್ಯಾಧಿಗಳಿಗೆ ಅನುಗುಣವಾಗಿ ಲೈಂಗಿಕ ತಜ್ಞ, ಆಸ್ತಮಾ ತಜ್ಞ ಎಂದು ಸ್ವಯಂ ಘೋಷಿಸಿಕೊಳ್ಳುವ ಖದೀಮರು, ನಿಜಕ್ಕೂ ವೈದ್ಯಕೀಯ ಪದವೀಧರರೇ ಆಲ್ಲ. ಆದರೂ ಇಂತಹ ನಕಲಿ ವೈದ್ಯರು ತಮ್ಮ ಹೆಸರಿನ ಮುಂದೆ ಆರ್. ಎಂ. ಪಿ ಅಥವಾ ಗವರ್ಮೆಂಟ್ ರೆಜಿಸ್ಟರ್ಡ್ ಎಂದು ತಪ್ಪದೆ ನಮೂದಿಸುತ್ತಾರೆ. ನಿಜ ಹೇಳಬೇಕಿದ್ದಲ್ಲಿ ಆರ್.ಎಂ.ಪಿ ಎಂದರೆ ರೆಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟಿಶನರ್ ಅರ್ಥಾತ್, ತನ್ನ ವೃತ್ತಿಯನ್ನು ನಡೆಸಲು ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಸಿರುವ ಪದವೀಧರ ವೈದ್ಯ!. 

ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ರಾಜಾರೋಷವಾಗಿ ತಮ್ಮ ಧಂದೆಯನ್ನು ನಡೆಸುವ ಈ ಮಂದಿ, ಕೇಂದ್ರ ಸರ್ಕಾರದ ಗದ್ದುಗೆಯಿರುವ ದೆಹಲಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವುದು ಸತ್ಯ. ಅದೇ ರೀತಿಯಲ್ಲಿ ಯಾವುದೇ ಪ್ರಾಥಮಿಕ ಅರ್ಹತೆಗಳಿಲ್ಲದ ವ್ಯಕ್ತಿಗಳಿಗೂ ( ನಕಲಿ ) ವೈದ್ಯಕೀಯ ಪದವಿಗಳನ್ನು ನೀಡುವ ನಕಲಿ ವಿಶ್ವವಿದ್ಯಾಲಯಗಳು ನಮ್ಮ ದೇಶದಲ್ಲಿ ಸಾಕಷ್ಟಿವೆ. ಇಂತಹ ವಿಶ್ವವಿದ್ಯಾಲಯಗಳು ನೀಡುವ ಕೇವಲ ಒಂದು ಪುಟದ "ಪದವಿ ಪ್ರಮಾಣ ಪತ್ರ " ದಲ್ಲಿ ಹಲವಾರು ಪದವಿಗಳನ್ನು ನಮೂದಿಸುವ ಭಂಡತನ ಮಾತ್ರ, ಭಾರತದ ಯಾವುದೇ ಅಸಲಿ ವಿಶ್ವವಿದ್ಯಾಲಯಗಳಿಗೆ ಇಲ್ಲ!. 

ಜನಸಾಮಾನ್ಯರ ಅಜ್ನಾನವನ್ನೇ ಬಂಡವಾಳವನ್ನಾಗಿಸಿ ತಮ್ಮ ಧಂದೆಯನ್ನು ನಡೆಸುವ ನಕಲಿ ವೈದ್ಯರು, ಸಾಮಾನ್ಯವಾಗಿ ಆಯ್ದುಕೊಳ್ಳುವುದು ಶಾಶ್ವತ ಪರಿಹಾರವೇ ಇಲ್ಲದ ವ್ಯಾಧಿಗಳನ್ನೇ ಎನ್ನುವುದು ಗಮನಾರ್ಹ. 

ಬಹುತೇಕ ವಿದ್ಯಾವಂತರಿಗೆ ತಿಳಿದಿರುವಂತೆ ಮಧುಮೇಹ (ಡಯಾಬೆಟೆಸ್) , ಅಧಿಕ ರಕ್ತದ ಒತ್ತಡ, ಆಸ್ತಮಾ, ಕೆಲ ವಿಧದ ಕ್ಯಾನ್ಸರ್ ಹಾಗೂ ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ವೈದ್ಯಕೀಯ ಸಂಶೋಧಕರು ಇಂದಿನ ತನಕ ಪತ್ತೆಹಚ್ಚಿಲ್ಲ. ಆದರೂ ನಕಲಿ ವೈದ್ಯರು ಇಂತಹ ಕಾಯಿಲೆಗಳನ್ನು ನಿಶ್ಚಿತವಾಗಿ ಗುಣಪಡಿಸುವ " ಆಶ್ವಾಸನೆ" ಯನ್ನು ನೀಡುತ್ತಾರೆ. 

ಉದಾಹರಣೆಗೆ ನಮ್ಮ ಶರೀರದಲ್ಲಿರುವ ಮೇದೋಜೀರಕ ಗ್ರಂಥಿಯು ಸ್ವಾಭಾವಿಕವಾಗಿ ಸ್ರವಿಸುವ "ಇನ್ಸುಲಿನ್" ಚೋದನಿಯ ಪ್ರಮಾಣವು ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ನಶಿಸಿದಾಗ ಮಧುಮೇಹ ವ್ಯಾಧಿ ಉದ್ಭವಿಸುವುದು. ಈ ರೀತಿಯಲ್ಲಿ ಕುಂಠಿತವಾಗಿರುವ ಅಥವಾ ಸಂಪೂರ್ಣವಾಗಿ ನಶಿಸಿರುವ ಇನ್ಸುಲಿನ್ ನ ಉತ್ಪಾದನೆಯನ್ನು ಮತ್ತೆ ಪುನಶ್ಚೇತನಗೊಳಿಸಬಲ್ಲ ಔಷದಗಳೇ ಇಲ್ಲ. ಹಾಗೂ ಇದೇ ಕಾರಣದಿಂದಾಗಿ ಮಧುಮೇಹ ವ್ಯಾಧಿಗೆ ಶಾಶ್ವತ ಪರಿಹಾರವೇ ಇಲ್ಲ. 

ಆದರೆ ನಕಲಿ ವೈದ್ಯರು ಮಾತ್ರ ಈ ವ್ಯಾಧಿಯನ್ನು ಖಚಿತವಾಗಿ ಗುಣಪಡಿಸುವುದಾಗಿ ಭರವಸೆಯನ್ನು ನೀಡುತ್ತಾರೆ. ಇಂತಹ ಚಿಕಿತ್ಸೆಯನ್ನು ನೀಡುವ ನಕಲಿ ವೈದ್ಯನೊಬ್ಬ ಹೇಳುವಂತೆ ಆತನ ಚಿಕಿತ್ಸೆಯನ್ನು ಪ್ರಾರಂಭಿಸಿದಂತೆಯೇ, ನೀವು ಈಗಾಗಲೇ ಸೇವಿಸುತ್ತಿರುವ ಮಾತ್ರೆಗಳು ಅಥವಾ ಚುಚ್ಚಿಸಿಕೊಳ್ಳುತ್ತಿರುವ ಇನ್ಸುಲಿನ್ ನ ಪ್ರಮಾಣವನ್ನು ಕಡಿಮೆ ಮಾಡುತ್ತಾ ಬಂದು, ಅಂತಿಮವಾಗಿ ಇವುಗಳನ್ನು ಸಂಪೂರ್ಣವಾಗಿ ನಿಲ್ಲಿಸಬಹುದಾಗಿದೆ. ಆದರೆ ಇಂತಹ ಪ್ರಯೋಗಗಳನ್ನು ನೀವು ಪ್ರಯತ್ನಿಸಿದಲ್ಲಿ, ಅಂತಿಮವಾಗಿ ನೀವು ಉಸಿರಾಡುವುದನ್ನೇ ನಿಲ್ಲಿಸುವ ಸಾಧ್ಯತೆಗಳಿವೆ!. 

ಕೆಲವರ್ಷಗಳ ಹಿಂದೆ " ಬೈಪಾಸ್ ಸರ್ಜರಿ ತಡೆಗಟ್ಟಿರಿ " ಎನ್ನುವ ಜಾಹೀರಾತಿನಲ್ಲಿ ಎಂಜಿಯೋಗ್ರಫಿ, ಎಂಜಿಯೋಪ್ಲಾಸ್ಟಿ, ಸ್ಟೆಂಟ್ ಮತ್ತು ಬೈಪಾಸ್ ಸರ್ಜರಿಗಳನ್ನು ತಡೆಗಟ್ಟಲು ಮತ್ತು ನಿಮ್ಮ ಹೃದಯದಲ್ಲಿರುವ ಅಡೆತಡೆಗಳನ್ನು ನಿವಾರಿಸಲು ಡಾ. ........ ಇವರ ಚಿಕಿತ್ಸೆಯನ್ನು ಪಡೆಯಿರಿ ಎಂದು ಪ್ರಕಟಿಸಲಾಗುತ್ತಿತ್ತು. ಜೊತೆಗೆ ಚಿಕಿತ್ಸೆಗೆ ಮುನ್ನ ಮತ್ತು ಅನಂತರ ಎನ್ನುವ ತಲೆಬರಹದೊಂದಿಗೆ ಎರಡು ಹೃದಯಗಳ ಚಿತ್ರವನ್ನೂ ಪ್ರಕಟಿಸಲಾಗುತ್ತಿತ್ತು. ಮೊದಲ ಚಿತ್ರದಲ್ಲಿ (ಚಿಕಿತ್ಸೆಗೆ ಮುನ್ನ) ಹೃದಯದ ಗಾತ್ರ ತುಸು ದೊಡ್ಡದಾಗಿದ್ದು, ಎರಡನೆಯ ಚಿತ್ರದಲ್ಲಿ (ಚಿಕಿತ್ಸೆಯ ಬಳಿಕ) ಹೃದಯದ ಗಾತ್ರ ಒಂದಿಷ್ಟು ಚಿಕ್ಕದಾಗಿರುತ್ತಿತ್ತು. ಈ ಜಾಹೀರಾತನ್ನು ನೀಡಿದ್ದ ನಕಲಿ ವೈದ್ಯನಿಗೆ ಹೃದ್ರೋಗಗಳ ಪ್ರಾಥಮಿಕ ಜ್ಞಾನವೇ ಇಲ್ಲದಿರುವುದನ್ನು ಈ ಚಿತ್ರಗಳೇ ಸ್ಪಷ್ಟಪಡಿಸುತ್ತಿದ್ದವು. ಜೊತೆಗೆ ಎಂಜಿಯೋಗ್ರಾಂ ಪರೀಕ್ಷೆಯನ್ನು ರಕ್ತನಾಳಗಲ್ಲಿನ ಅಡಚಣೆ ಅಥವಾ ಇತರ ಸಮಸ್ಯೆಗಳನ್ನು ಪತ್ತೆಹಚ್ಚುವ ಸಲುವಾಗಿ ನಡೆಸುವುದಾಗಿದ್ದು, ಇದನ್ನು "ತಡೆಗಟ್ಟುವ" ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅದೇ  ರೀತಿಯಲ್ಲಿ ಹೃದಯಕ್ಕೆ ರಕ್ತವನ್ನು ಸರಬರಾಜು ಮಾಡುವ ಕೊರೋನರಿ ರಕ್ತನಾಳಗಳಲ್ಲಿನ ಅಡಚನೆಯಿಂದಾಗಿ ಹೃದಯದ ಗಾತ್ರ ಹಿಗ್ಗುವುದಿಲ್ಲ. ಅಂತೆಯೇ ಈ ಸಮಸ್ಯೆಯ ನಿವಾರಣೆಯ ಬಳಿಕ ಹೃದಯದ ಗಾತ್ರವು ಕುಗ್ಗುವುದೂ ಇಲ್ಲ!. ಆದರೆ ಶಸ್ತ್ರಚಿಕಿತ್ಸೆಯ ಭಯವಿರುವ ಮತ್ತು ಬೈಪಾಸ್ ಸರ್ಜರಿ ಅಥವಾ ಎಂಜಿಯೋಪ್ಲಾಸ್ಟಿ ಚಿಕಿತ್ಸೆಯ ವೆಚ್ಚಗಳನ್ನು ಭರಿಸಲಾರದ ವಿದ್ಯಾವಂತರೂ, ಇಂತಹ ನಕಲಿ ವೈದ್ಯರ ಬಲೆಗೆ ಸುಲಭದಲ್ಲೇ ಬೀಳುತ್ತಾರೆ. 

ಇನ್ನು ಆಸ್ತಮಾ ಗುಣವಾಗದು ಎನ್ನುವುದನ್ನೇ ಒಪ್ಪದ ಸ್ವಯಂಘೋಷಿತ ಆಸ್ತಮಾ ತಜ್ಞನು ಒಂದೆರಡು ದಶಕಗಳ ಹಿಂದೆ ಸ್ವಯಂಸೇವಾ ಸಂಘಟನೆಗಳ ನೆರವಿನಿಂದ ರಾಜ್ಯಾದ್ಯಂತ ಅನೇಕ ನಗರಗಳಲ್ಲಿ  ನೂರಾರು ಚಿಕಿತ್ಸಾ ಶಿಬಿರಗಳನ್ನು ನಡೆಸಿದ್ದನು. ಅನೇಕ ವರ್ಷಗಳ ಹಿಂದೆ ಹೈಸ್ಕೂಲ್ ನಲ್ಲೇ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದ್ದ ಈ ತಜ್ಞನು, ಅಲ್ಪಾವಧಿಯಲ್ಲೇ ಆಸ್ತಮಾ ತಜ್ಞನಾಗಿ ಪ್ರಖ್ಯಾತನಾಗಿದ್ದನು!. ವಿಶೇಷವೆಂದರೆ ಈತನ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿದ್ದ ಸ್ವಯಂಸೇವಾ ಸಂಘಟನೆಯಲ್ಲಿ ಸುಪ್ರಸಿದ್ಧ ವೈದ್ಯರೂ ಸದಸ್ಯರಾಗಿದ್ದರೂ, ಯಾರೊಬ್ಬರೂ ಈತನ ವಿದ್ಯಾರ್ಹತೆಗಳನ್ನು ಅರಿಯುವ ಪ್ರಯತ್ನವನ್ನೇ ಮಾಡದಿದ್ದುದು ಮಾತ್ರ ನಂಬಲು ಅಸಾಧ್ಯವೆನಿಸಿತ್ತು. 

ಅಮಾಯಕ ಜನರ ಅಜ್ಞಾನವನ್ನು ದುರುಪಯೋಗಪಡಿಸಿ ಮಾನವ ಶರೀರದ ಸ್ವಾಭಾವಿಕ ಕ್ರಿಯೆಗಳನ್ನೇ ಗಂಭೀರ ಸಮಸ್ಯೆಗಳೆಂದು ಚಿತ್ರಿಸಿ, ಸಹಸ್ರಾರು ರೂಪಾಯಿಗಳನ್ನು ದೋಚುವ ನಕಲಿ " ಲೈಂಗಿಕ ತಜ್ಞರು" ನಮ್ಮ ದೇಶದಲ್ಲಿ ಸಹಸ್ರಾರು ಸಂಖ್ಯೆಯಲ್ಲಿದ್ದಾರೆ. ಹದಿಹರೆಯದಲ್ಲಿ ಸಹಜವೆನಿಸುವ ಹಸ್ತಮೈಥುನದಂತಹ ಹವ್ಯಾಸದಿಂದ ನಿಮ್ಮ ದಾಂಪತ್ಯ ಜೀವನವೇ ವಿಫಲವಾಗುವುದೆಂದು ಹೆದರಿಸುವ ನಕಲಿ ಲೈಂಗಿಕ ತಜ್ಞರು, ೧೦ ರಿಂದ ೨೦ ಸಾವಿರ ರೂ. ಗಳನ್ನು ವಸೂಲು ಮಾಡಿ ನೀಡುವ ಔಷದಗಳು ನಿಶ್ಚಿತವಾಗಿಯೂ ಅಸಲಿಯಲ್ಲ!. 

ಪ್ರಾಯಶಃ ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣವನ್ನು ಕಡ್ಡಾಯವಾಗಿ ಜಾರಿಗೊಳಿಸದೇ ಇರುವುದು, ವಿದ್ಯಾವಂತರೂ ಲೈಂಗಿಕ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚಿಸಲು ನಾಚುವುದು, ಯುವಜನರಿಗೆ ಈ ಬಗ್ಗೆ ಇರುವ ತಪ್ಪುಕಲ್ಪನೆಗಳು ಅಥವಾ ಅಜ್ಞಾನಗಳೇ ಇಂತಹ ನಕಲಿ ವೈದ್ಯರ ಧಂಧೆಗೆ ಪ್ರೋತ್ಸಾಹವನ್ನು ನೀಡುತ್ತದೆ.ಜಗತ್ಪ್ರಸಿದ್ಧ "ಕಾಮಸೂತ್ರ" ದ ಲೇಖಕನಾದ ವಾತ್ಸಾಯನನ ತವರಾದ ಭಾರತದಲ್ಲಿ, ಅದರಲ್ಲೂ ಈ ವೈಜ್ಞಾನಿಕ ಯುಗದಲ್ಲೂ ಇಂತಹ ಸಮಸ್ಯೆಗಳಿರುವುದು ನಂಬಲು ಅಸಾಧ್ಯವೆನಿಸುತ್ತದೆ. 

ಇವೆಲ್ಲಕ್ಕೂ ಮಿಗಿಲಾಗಿ ಸಂತಾನಹೀನ ದಂಪತಿಗಳಿಗೆ ಸಂತಾನ ಭಾಗ್ಯವನ್ನು ಕರುಣಿಸುವುದಾಗಿ ಭರವಸೆ ನೀಡುವ ನಕಲಿ "ಸಂತತಿ ತಜ್ಞ" ರು, ಈ ದಂಪತಿಗಳನ್ನು ಯಾವುದೇ ರೀತಿಯ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸದೇ ಹಾಗೂ ಯಾರಲ್ಲಿ ದೋಷವಿದೆ ಎಂದು ಪತ್ತೆಹಚ್ಚದೆ ಚಿಕಿತ್ಸೆಯನ್ನು ನೀಡುವುದರಲ್ಲಿ ಸಿದ್ಧಹಸ್ತರು. ಇನ್ನು ಕೆಲವರಂತೂ ಕೇವಲ ಹೆಂಗಸರನ್ನು ಮಾತ್ರ ತಪಾಸಣೆಗೆ ಒಳಪಡಿಸುವ ನಾಟಕವನ್ನು ಆಡುವುದರಲ್ಲಿ ನಿಸ್ಸೀಮರು!. 

ಅದೇನೇ ಇರಲಿ, ನಿಮ್ಮ ನಂಬಿಗಸ್ಥ ಕುಟುಂಬ ವೈದ್ಯರು ಅಥವಾ ನಿಮ್ಮದೇ ಊರಿನ ತಜ್ಞವೈದ್ಯರು ಶಾಶ್ವತವಾಗಿ ಗುಣಪಡಿಸಲಾಗದ ಕಾಯಿಲೆಗಳನ್ನು, ನಕಲಿ ವೈದ್ಯರು ಗುಣಪಡಿಸುವುದು ಅಸಾಧ್ಯವೆಂದು ಅರಿತಿರಿ. ಕೇವಲ ನಾಲ್ಕಾರು ರೂಪಾಯಿ ಬೆಲೆಬಾಳುವ ಔಷದವನ್ನು ದಿನದಲ್ಲಿ ಒಂದು ಅಥವಾ ಎರಡುಬಾರಿ ಸೇವಿಸಿ, ಆಹಾರ ಸೇವನೆಯಲ್ಲಿ ಒಂದಿಷ್ಟು ಪಥ್ಯ ಮತ್ತು ದಿನನಿತ್ಯ ವ್ಯಾಯಾಮ, ಕ್ರೀಡೆ ಅಥವಾ  ನಡಿಗೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ, ನಿಮ್ಮನ್ನು ಬಾಧಿಸುತ್ತಿರುವ ಮಧುಮೇಹ, ಅಧಿಕ ರಕ್ತದ ಒತ್ತಡ, ಅಧಿಕ ತೂಕ, ಅತಿ ಬೊಜ್ಜು ಇತ್ಯಾದಿ ಆರೋಗ್ಯದ ಸಮಸ್ಯೆಗಳನ್ನು ನಿಯಂತ್ರಣದಲ್ಲಿ ಇರಿಸುವುದು ಸುಲಭಸಾಧ್ಯ. ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ಚಿಕಿತ್ಸಾ ವಿಧಾನಗಳನ್ನು ಕೈಬಿಟ್ಟು, ನಕಲಿ ವೈದ್ಯರ ಚಿಕಿತ್ಸೆಯನ್ನು ಪ್ರಯೋಗಿಸದಿರಿ.

ವೈದ್ಯಕೀಯ ಕ್ಷೇತ್ರದಲ್ಲಿ ಶಾಶ್ವತ ಪರಿಹಾರವಿಲ್ಲದ ವ್ಯಾಧಿಗಳನ್ನು ನಿಶ್ಚಿತವಾಗಿ ಮತ್ತು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಸಂಶೋಧಿಸಿದವರಿಗೆ " ನೊಬೆಲ್ ಪ್ರಶಸ್ತಿ" ಕಟ್ಟಿಟ್ಟ ಬುತ್ತಿ. ಆದರೆ ನಮ್ಮ ದೇಶದ ನಕಲಿ ವೈದ್ಯರು ಕೋಟ್ಯಂತರ ಡಾಲರ್ ಬಹುಮಾನದೊಂದಿಗೆ, ವಿಶ್ವವಿಖ್ಯಾತರಾಗುವ ಇಂತಹ ಸುವರ್ಣಾವಕಾಶವನ್ನು ಸದುಪಯೋಗಪಡಿಸುತ್ತಿಲ್ಲವೇಕೆ?, ಎನ್ನುವ ಬಗ್ಗೆ ಒಂದಿಷ್ಟು ಚಿಂತನ ಮಂಥನ ಮಾಡಿ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಡಿ. ೩೦-೦೬-೨೦೦೯ ರ ಉದಯವಾಣಿ ಪತ್ರಿಕೆಯ ಅಂಕಣದಲ್ಲಿ ವೈದ್ಯರ ದಿನಾಚರಣೆಯ ಸಲುವಾಗಿ ಪ್ರಕಟಿತ ಲೇಖನ.